ಸುಗತ ಬರೆಯುತ್ತಾರೆ: ಭೌತಿಕ ಗಡಿಗಳು ಮತ್ತು ಭಾಷಾವಾರು ರಾಜ್ಯಗಳು

ಸುಗತ ಶ್ರೀನಿವಾಸರಾಜು

ಆಂಧ್ರಪ್ರದೇಶದಿಂದ ತೆಲಂಗಾಣವನ್ನು ವಿಭಜಿಸಬೇಕು ಎಂಬ ತೀರ್ಮಾನಕ್ಕೆ ಬಂದಾಗಿದೆ. ತೆಲುಗು ಮಾತನಾಡುವ ಸಮುದಾಯ ಅಥವಾ ಪ್ರಾಂತ್ಯ ಈಗ ಎರಡು ಹೋಳಾಗಿದೆ ಎಂದು ಅನೇಕರು ಈ ವಿಭಜನೆಯನ್ನು ವಿಶ್ಲೇಷಿಸಿದ್ದಾರೆ. ಎರಡು ಹೋಳು ಮಾತ್ರವಲ್ಲ, ಮತ್ತೊಂದು ಹೋಳು ಆಗುವ ಸಾಧ್ಯತೆ ಇದೆ ಎಂಬುದು ಇನ್ನೂ ಕೆಲವರ ಅಭಿಪ್ರಾಯ. ಈ ವಿಭಜನೆಗೆ ಅಂಗೀಕಾರ ಸಿಕ್ಕಿದ ಮಾರನೆಯ ದಿನ, ನಿಮ್ಮ ಪತ್ರಿಕೆಯ ಮುಖಪುಟದ ಮುಖ್ಯ ತಲೆಬರಹವನ್ನು ನೀವು ಗಮನಿಸಿರಬಹುದು. ಅದು ‘ತೆಲುಗು ತಲ್ಲಿಕಿ ತೆಲಂಗಾಣ’ ಎಂದಿತ್ತು. ಅಂದರೆ ‘ತೆಲುಗು ತಾಯಿಗೆ ಈಗ ಮತ್ತೊಂದು ಕೂಸು’ ಎಂಬ ಅರ್ಥ ಹೊರಡಿಸುವಂತಿತ್ತು ಆ ತಲೆಬರಹ.
ಭಾಷಾವಾರು ಪ್ರಾಂತ್ಯವಾಗಿದ್ದ ಆಂಧ್ರಪ್ರದೇಶದ ವಿಭಜನೆ ನಮ್ಮ ಮುಂದೆ ಒಂದು ದೊಡ್ಡ ಪ್ರಶ್ನೆಯನ್ನು ನಿಲ್ಲಿಸಿದೆ ಮತ್ತು ಅದು ಭಾಷಾವಾರು ಪ್ರಾಂತ್ಯಗಳ ಅಸ್ತಿತ್ವಕ್ಕೆ ಸಂಬಂಧಪಟ್ಟ ಪ್ರಶ್ನೆಯಾಗಿದೆ. ಸ್ವಾತಂತ್ರ್ಯೋತ್ತರದ ಹೊಸತರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಾಗಬೇಕು ಎಂಬ ನೆಹರೂ ಅವರ ನಿರ್ಧಾರಕ್ಕೆ ಇಂಬು ಕೊಟ್ಟಿದ್ದೇ ಆಂಧ್ರಪ್ರದೇಶ. ಭಾಷಾವಾರು ಮರುವಿಂಗಡಣೆಯ ಪ್ರಸ್ತಾಪ ಹಠಾತ್ತನೆ ಆಗಷ್ಟೆ ಕಣ್ಣುಬಿಡುತ್ತಿದ್ದ ದೇಶದ ಮುಂದೆ ಬರಲು ಕಾರಣ, ಪೊಟ್ಟಿ ಶ್ರೀರಾಮುಲು ಅವರ ನಿಧನ. ಅವರು 1952ರಲ್ಲಿ ಆಂಧ್ರ ರಾಜ್ಯ ರಚನೆಯಾಗಬೇಕು ಎಂದು ಆಮರಣಾಂತ ಉಪವಾಸ ಮಾಡಿ ಅಸುನೀಗಿದ್ದರು. ಈ ಸಾವು ಬರೀ ಆಂಧ್ರದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಭಾಷಾವಾರು ರಾಜ್ಯಗಳ ಪರವಾಗಿ ಒಂದು ಭಾವನಾತ್ಮಕ ಅಲೆಯನ್ನು ಸಷ್ಟಿ ಮಾಡಿತ್ತು. ಭಾಷೆಯೊಂದಕ್ಕೆ ಚಾರಿತ್ರಿಕ, ಸಾಂಸ್ಕತಿಕ ಹಾಗೂ ಅಸ್ಮಿತೆಯ ದೊಡ್ಡ ಆಯಾಮಗಳಿದ್ದರೂ, ಅದು ತೀವ್ರವಾಗಿ ಪ್ರಕಟಗೊಳ್ಳುವುದು ಭಾವನೆಯಾಗಿ. ಈ ಭಾವನೆ ರಸ್ತೆಗಿಳಿದಾಗ ಅದು ರಾಜಕೀಯ ತಲ್ಲಣ ಉಂಟುಮಾಡದೆ ಇರದು. ಆಗ ಆದದ್ದೂ ಅದೇ. ಹಾಗಾಗಿ ನೆಹರೂ ಅವರ ಸರಕಾರ ದೇಶದ ಮೊದಲ ಪುನರ್ವಿಂಗಡಣಾ ಸಮಿತಿಯನ್ನು ತುರ್ತಾಗಿ ರಚಿಸಬೇಕಾಯಿತು. ಆಗ ದೇಶದ ಮುಂದೆ ಇತರ ಬಹಳ ದೊಡ್ಡ ಹಾಗೂ ಕಠಿಣ ಸಮಸ್ಯೆಗಳಿದ್ದರೂ ಭಾಷಾ ಭಾವನೆಗಳಿಗೆ ಮೊದಲು ಮಣೆ ಹಾಕಬೇಕಾಯಿತು.

ಈ ಬೆಳವಣಿಗೆಯಿಂದ ನೆಹರು ಬಹಳ ಆತಂಕಗೊಂಡಿದ್ದರು ಎಂಬುದಕ್ಕೆ ಅವರ ಈ ಮಾತು ಸಾಕ್ಷಿ: ”ಕೆಲವು ವಿಚಾರಗಳಿಗೆ ನಾವು ಮೊದಲು ಆದ್ಯತೆ ಕೊಡಬೇಕು. ದೇಶದ ಏಕತೆ ಮತ್ತು ಅಖಂಡತೆ ಈಗ ನಮಗೆ ದೊಡ್ಡ ಸವಾಲಾಗಿರಬೇಕಾದಾಗ, ರಾಜ್ಯಗಳ ಪುನರ್ವಿಂಗಡಣೆಯತ್ತ ನಮ್ಮ ಚಿತ್ತ ಹರಿಸುವುದು ಅಷ್ಟು ಸರಿ ಕಾಣುತ್ತಿಲ್ಲ.” ಆದರೆ ಈ ಆತಂಕದ ನುಡಿಗಳಿಗೆ ಪ್ರತಿಯಾಗಿ ಅಂಬೆಡ್ಕರ್ ಅವರು, ನಾವು ಈ ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಿಕೊಳ್ಳಬೇಕಾದರೆ, ‘ಒಂದು ರಾಜ್ಯಕ್ಕೆ ಒಂದು ಭಾಷೆ’ಯಂತೆ (‘ಒಂದು ದೇಶ, ಒಂದು ಭಾಷೆ, ಒಂದು ಧರ್ಮ’ ಎಂಬ ಬಲಪಂಥೀಯರ ಕೂಗಿಗೆ ಸಂಪೂರ್ಣ ವ್ಯತಿರಿಕ್ತವಾದ ನಿಲುವು) ರಾಜ್ಯಗಳನ್ನು ಪುನಾ ರಚಿಸಬೇಕು ಎಂದು ವಾದಿಸಿದರು. ಸ್ವಾತಂತ್ರ್ಯಪೂರ್ವದಲ್ಲಿ ಗಾಂಧಿ, ನೆಹರೂ ಸೇರಿದಂತೆ ಕಾಂಗ್ರೆಸ್ ಪಕ್ಷ ಭಾಷಾವಾರು ರಾಜ್ಯಗಳ ಪರವಾದ ಬದ್ಧತೆಯನ್ನು ಮೆರೆದಿತ್ತು. ಆದರೆ 1947ರ ನಂತರ ದೇಶದ ಇಬ್ಭಾಗ, ವ್ಯಾಪಕ ಕೋಮು ಹಿಂಸೆ ಮತ್ತು ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ನೆಹರೂ ಅವರು ರಾಜ್ಯಗಳ ಪುನಾರಚನೆಯ ಬಗ್ಗೆ ಆತಂಕಪಟ್ಟಿದ್ದರೆ ಅದು ಅರ್ಥವಾಗುವಂತಹ ವಿಚಾರ. ಇರುವ ಸಮಸ್ಯೆಗಳ ನಡುವೆ ಮತ್ತೊಂದನ್ನು ಮೈಮೇಲೆ ಹಾಕಿಕೊಳ್ಳುವುದು ಬೇಡ ಎಂಬುದು ಅವರ ತರ್ಕವಾಗಿದ್ದಿರಬೇಕು. ಆದರೆ ಅಂಬೇಡ್ಕರ್ ಅವರಿಗೆ ಆ ಘಳಿಗೆಯ ಒತ್ತಡದಿಂದ ಹೊರಬಂದು ಮಾತನಾಡುವುದು ಸಾಧ್ಯವಾಗಿತ್ತು.
ಇಷ್ಟೆಲ್ಲ ತಿಕ್ಕಾಟ, ಚರ್ಚೆ, ಹೋರಾಟ, ತ್ಯಾಗದ ನಡುವೆ ಅರಳಿದ ಭಾಷಾವಾರು ರಾಜ್ಯಗಳ ಭವಿಷ್ಯ, ತೆಲಂಗಾಣದ ವಿಭಜನೆಯಿಂದಾಗಿ ಬಹಳ ಭಿನ್ನವಾದ, ನಾವು ಐವತ್ತಾರು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೊಸ ರಾಜ್ಯಗಳ ಬೇಡಿಕೆ ಇಟ್ಟಿರುವ ಸಮುದಾಯಗಳು (ಈಗ ಕೇಂದ್ರ ಸರಕಾರದ ಮುಂದೆ ಇರುವ ಎಲ್ಲ ಪ್ರಸ್ತಾಪಗಳನ್ನು ಒಪ್ಪಿಕೊಂಡರೆ ಭಾರತ ಸರಿಸುಮಾರು 50 ರಾಜ್ಯಗಳ ದೇಶವಾಗುತ್ತದೆ) ಭಾಷೆಯನ್ನು ಹೊರತುಪಡಿಸಿ, ಆರ್ಥಿಕ ಮತ್ತು ಆಡಳಿತಾತ್ಮಕ ವಿಚಾರಗಳನ್ನು; ಭಿನ್ನ ಸಾಂಸ್ಕತಿಕ ಮತ್ತು ಜನಾಂಗೀಯ ಅಸ್ಮಿತೆಗಳನ್ನು ಮುಂದುಮಾಡಿ ಹೊಸ ರಾಜ್ಯಗಳ ಬೇಡಿಕೆ ಇಟ್ಟಿವೆ. ಉತ್ತರ ಪ್ರದೇಶವನ್ನು ನಾಲ್ಕು ಭಾಗವಾಗಿ ವಿಂಗಡಿಸಬೇಕು ಎಂಬುದರ ಹಿಂದೆ ಇರುವುದು ಕೂಡ ಇದೇ ತರ್ಕ. ಈ ತರ್ಕ ಅಸ್ಸಾಂ, ತಮಿಳುನಾಡು, ಕರ್ನಾಟಕ, ಗುಜರಾತ್‌ಗಳಲ್ಲಿ ಎದ್ದಿರುವ ಬೇಡಿಕೆಗಳಿಗೂ ಅನ್ವಯಿಸುತ್ತದೆ. ರಾಜ್ಯಗಳ ಸಮಸ್ಯೆಯನ್ನು ಬರೀ ಆಡಳಿತಾತ್ಮಕ ದಷ್ಟಿಕೋನದಿಂದ ನೋಡುವ ಕೆಲವು ತಜ್ಞರು ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಗಳನ್ನು ವಿಭಜಿಸಬೇಕು ಎಂದು ಹೇಳುತ್ತಾರೆ. ಅವರ ಪ್ರಕಾರ, 2040-50ರ ಹೊತ್ತಿಗೆ ಭಾರತದ ಜನಸಂಖ್ಯೆ 1.6 ಬಿಲಿಯನ್ ತಲುಪಿರುತ್ತದೆ. ಆಗ ನಾವು ಒಂದು ರಾಜ್ಯದ ಜನಸಂಖ್ಯೆಯನ್ನು 25 ಮಿಲಿಯನ್‌ಗೆ ಸೀಮಿತಗೊಳಿಸಿ 60 ರಾಜ್ಯಗಳನ್ನು, 1,500 ಜಿಲ್ಲೆಗಳನ್ನು ಹುಟ್ಟುಹಾಕಿದರೆ ಭಾರತದ ಆಡಳಿತ ಸುಗಮವಾಗಿ ಸಾಗುತ್ತದೆ.

ಭಾಷಾವಾರು ರಾಜ್ಯಗಳು ಸೋತಿವೆ ಎಂದು ನಾವು ಸಾರಾಸಗಟಾಗಿ ಹೇಳುವುದರ ಬದಲು, ಅವುಗಳಲ್ಲಿ ಎದ್ದಿರುವ ಅಸಮಾಧಾನಗಳನ್ನು ವಿಶ್ಲೇಷಿಸುವುದು ಬಹಳ ಮುಖ್ಯ. ಈ ಅಸಮಾಧಾನಗಳು ಇವೆ ಎಂದು ಒಪ್ಪಿದರೆ ಮಾತ್ರ ಆ ವಿಶ್ಲೇಷಣೆ ಸಾಧ್ಯವಾಗುತ್ತದೆ. ಅವುಗಳನ್ನು ಹತ್ತಿಕ್ಕಿದರೆ, ಬೇರೆಯದೇ ಆದ ಒಂದು ವಾಸ್ತವ ಕಾಲಕ್ರಮೇಣ ಸಷ್ಟಿಯಾಗುತ್ತದೆ. ಈಗ ಇರುವ ಭಾಷಾವಾರು ರಾಜ್ಯಗಳಲ್ಲಿ ಭಾಷಾ ವೈವಿಧ್ಯತೆ ಅಷ್ಟೇ ಅಲ್ಲದೆ, ಭಾಷಾ ಶೈಲಿಗಳ ವೈವಿಧ್ಯತೆಯೂ ಇದೆ. ‘ಒಂದು ರಾಜ್ಯ, ಒಂದು ಭಾಷೆ’ಯ ಘೋಷಣೆಯ ನಡುವೆ ನಾವು ಈ ಬಹುತ್ವದ ನೆಲೆಗಟ್ಟನ್ನು ಮರೆಮಾಚುವಂತಿಲ್ಲ. ಹಾಗೆ ಮರೆಮಾಚಿದ್ದರಿಂದಲೇ ಭಾಷಾ ಅಸಮಾನತೆ, ಆಡಳಿತಾತ್ಮಕ ಮತ್ತು ಅಭಿವದ್ಧಿ ಅಸಮಾನತೆಗಳು ಈ ರಾಜ್ಯಗಳಲ್ಲಿ ತಲೆದೋರಿವೆ. ಕರ್ನಾಟಕ ಕೂಡ ಈ ಅಸಮಾನತೆಗೆ ಹೊರತಾಗಿ ಉಳಿದಿಲ್ಲ. ರಾಜ್ಯದ ಒಂದು ಭಾಗ ಮತ್ತೊಂದು ಭಾಗದ ಮೇಲೆ, ಒಂದು ಭಾಷಾ ಶೈಲಿ ಮತ್ತೊಂದು ಭಾಷಾ ಶೈಲಿಯ ಮೇಲೆ, ಅರಿತೋ, ಅರಿಯದೆಯೋ ಯಜಮಾನಿಕೆ ಸಾಧಿಸಲು ಹೊರಟಾಗ, ಅದರ ದೀರ್ಘಕಾಲೀನ ಪರಿಣಾಮಗಳು ಬೇರೆಯೇ ಆಗಿರುತ್ತವೆ. ಭಾವನಾತ್ಮಕವಾಗಿ ಹುಟ್ಟಿಕೊಂಡ ರಾಜ್ಯಗಳಲ್ಲಿ ಕಾನೂನಿನ ತಿದ್ದುಪಡಿಯ ಮೂಲಕ ಸರಿಪಡಿಸಬಹುದಾದ ಆಸಮಾನತೆ ಕೊಂಚ ದೂರ ಮಾತ್ರ ಹಾದಿ ಸವೆಸಬಹುದು. ಅದು ಒಂದು ಹುಣ್ಣಿಗೆ ಹಾಕುವ ತೇಪೆ ಇದ್ದ ಹಾಗೆ, ಮೂಲವ್ಯಾಧಿಯಾಗಿ ಕಾಡುವ ಯಜಮಾನಿಕೆಗೆ ಮದ್ದಲ್ಲ. ಭಾಷಾವಾರು ಪ್ರದೇಶಗಳು ಈ ರೀತಿಯ ಸಂಕಷ್ಟಕ್ಕೆ ಕಳೆದ ಹಲವು ದಶಕಗಳಿಂದ ಸಿಕ್ಕಿಹಾಕಿಕೊಂಡಂತೆ ಕಾಣುತ್ತದೆ. ಹಾಗಾಗಿಯೇ ನಮ್ಮ ಮುಂದೆ ಪ್ರತ್ಯೇಕ ಬೋಡೋ ಲ್ಯಾಂಡ್, ಗೋರ್ಖ ಲ್ಯಾಂಡ್, ಕೊಂಗುನಾಡು, ವಿದರ್ಭ, ಅವಧ್, ಪೂರ್ವಾಂಚಲ, ಹರಿತ್ ಪ್ರದೇಶ, ಬುಂದೇಲ್‌ಖಂಡ್, ಸೌರಾಷ್ಟ್ರ, ಹೈದರಾಬಾದ್ ಕರ್ನಾಟಕ, ಕೊಡಗು, ತುಳುನಾಡು, ಇತ್ಯಾದಿಗಳ ಕೂಗು ಆಗಿಂದಾಗೇ ಕೇಳಿಬರುತ್ತದೆ. ಅವುಗಳಿಗೆ ಬೆಂಬಲದ ವಿಸ್ತಾರ ಎಷ್ಟೇ ಇರಲಿ, ಕೂಗು ನಿಲ್ಲುವ ಸೂಚನೆಗಳಂತೂ ಇಲ್ಲ.
ಭಾಷಾವಾರು ಪ್ರದೇಶಗಳು ಸಂಕಷ್ಟಕ್ಕೆ ಬೀಳಲು ಮತ್ತೊಂದು ದೊಡ್ಡ ಕಾರಣ, ಜನರ ನಡುವೆ ಹೆಚ್ಚಾಗಿರುವ ವಲಸೆ ಪ್ರಕ್ರಿಯೆ. ಮನುಷ್ಯ ಕಳೆದ ಎಷ್ಟೋ ಶತಮಾನಗಳು ಓಡಾಡದಷ್ಟನ್ನು ಕಳೆದ ಒಂದೆರಡು ದಶಕಗಳಲ್ಲಿ ಓಡಾಡಿದ್ದಾನೆ. ಓಡಾಟದ ಸಾಧನಗಳು ಸಲೀಸಾಗಿರುವ ಜೊತೆಗೆ ವಲಸೆ ಹೋಗುವುದರಿಂದ ಆತನಿಗೆ ಸಿಗುವ ಅವಕಾಶಗಳೂ ಹೆಚ್ಚಿವೆ. ಜಾಗತೀಕರಣ ಈ ಎಲ್ಲವನ್ನೂ ಸುಗಮಗೊಳಿಸಿದೆ ಮತ್ತು ನಮ್ಮ ಅನೇಕ ಸಿದ್ಧ ಸಾಂಸ್ಕತಿಕ ಮತ್ತು ಸಾಮಾಜಿಕ ಮಾದರಿಗಳನ್ನು ಪಲ್ಲಟಗೊಳಿಸಿದೆ. ಇದರ ನಡುವೆ, ಭಾಷಾ ಸಮುದಾಯಗಳು ತಮ್ಮ ಕುರಿತ ತಮ್ಮದೇ ಪರಿಕಲ್ಪನೆಗಳನ್ನು ಬದಲು ಮಾಡಿಕೊಳ್ಳುತ್ತಾ ಬಂದಿವೆ. ಭಾಷಾ ಸಮುದಾಯವೊಂದಕ್ಕೆ ಈಗ ರಾಜ್ಯದ ಗಡಿಯೆಂಬುದು ಅಷ್ಟು ಪ್ರಮುಖ ಕಲ್ಪನೆಯಾಗಿ ಉಳಿದಿಲ್ಲ. ಗಡಿಗಳಾಚೆ ತಮ್ಮ ಸಂಬಂಧಗಳನ್ನು ಉಳಿಸಿಕೊಳ್ಳುವ ಹೊಸ ಪರಿಪಾಠಗಳನ್ನು ಅವು ಬೆಳೆಸಿಕೊಂಡಿವೆ.
ಜಾಗತೀಕರಣ ಮತ್ತು ವಲಸೆ ಪ್ರಕ್ರಿಯೆಯ ಜೊತೆಜೊತೆಗೆ ಬಹುಮತದಿಂದ ಕೂಡಿದ ತಳಸಮುದಾಯಗಳು ಆರ್ಥಿಕ ಶಕ್ತಿ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಎಟುಕಿಸಿಕೊಡುವಂತೆ ತೋರುತ್ತಿರುವ ಭಾಷೆಗಳತ್ತ (ಇಂಗ್ಲಿಷ್ ಎಂದು ಓದಿಕೊಳ್ಳಬಹುದು) ಮುಖ ಮಾಡಿವೆ. ಒಂದು ಅಧ್ಯಯನದ ಪ್ರಕಾರ, ಇನ್ನೆರಡು ದಶಕಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಜರ್ಮನ್ ಮತ್ತು ರಷ್ಯನ್ ಮಾತನಾಡುವವರ ಸಂಖ್ಯೆಗಿಂತ ಹೆಚ್ಚಿರುತ್ತದೆ. ಆದರೆ, ಇಲ್ಲಿರುವುದು ಸಂಖ್ಯೆಯ ಪ್ರಶ್ನೆಯಲ್ಲ, ಆರ್ಥಿಕ ಪ್ರಾಬಲ್ಯದ ಪ್ರಶ್ನೆ. ಕನ್ನಡಕ್ಕೆ ಆ ರೀತಿಯ ಆರ್ಥಿಕ ಶಕ್ತಿ ಮೈಗೂಡುವ ಸಾಧ್ಯತೆ ಸದ್ಯಕ್ಕೆ ಕಾಣುತ್ತಿಲ್ಲ. ಆರ್ಥಿಕ ಕೇಂದ್ರಗಳಾದ ಭಾಷಾವಾರು ರಾಜ್ಯಗಳ ರಾಜಧಾನಿಗಳು ರಾಜ್ಯದ ಭಾಷೆಯಿಂದ ಮೊದಲು ಮುಕ್ತಿಯನ್ನು ಪಡೆಯುತ್ತಿವೆ. ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ ನಗರಗಳ ಪರಿಸ್ಥಿತಿ ಬಹಳ ಬೇರೆಯಾಗಿಯೇನೂ ಉಳಿದಿಲ್ಲ. ದೊಡ್ಡ ನಗರಗಳ ಕಥೆ ಇದಾದರೆ, ಚಿಕ್ಕ ಪಟ್ಟಣಗಳು ಮತ್ತು ಹಳ್ಳಿಗಳು ಬೇರೆಯದೇ ಆದ ವರ್ತುಲದಲ್ಲಿ ಸಿಕ್ಕಿಹಾಕಿಕೊಂಡಿವೆ.
ಕೊನೆಯದಾಗಿ, ನಾವು ಭಾಷಾವಾರು ಪ್ರದೇಶಗಳು ಅಥವಾ ರಾಜ್ಯಗಳ ಪರಿಕಲ್ಪನೆಯನ್ನು ಶತಶತಮಾನಗಳ ಸಹಜ ಸಂಘರ್ಷದ ಏರ್ಪಡುವಿಕೆ ಎಂದು ತಿಳಿದಿರಲು ಸಾಧ್ಯ. ಆದರೆ, ಭಾರತದಲ್ಲಿ ಆಧುನಿಕ ಭಾಷಾವಾರು ರಾಜ್ಯದ ಪರಿಕಲ್ಪನೆ (Linguistic State) ಹುಟ್ಟಿದ್ದು ಮತ್ತು ಅದರೊಂದಿಗೆ ಭಾವನೆಯನ್ನು (emotion) ಮೇಳೈಸಿದ್ದು 19ನೇ ಶತಮಾನದ ಅಂತ್ಯದಲ್ಲಿ, ಎಂದು ಲಿಸಾ ಮಿಶೆಲ್ ಎಂಬ ಅಮೆರಿಕದ ವಿಶ್ವವಿದ್ಯಾಲಯವೊಂದರ ಸಂಶೋಧಕಿ ತನ್ನ ‘Language, Emotion and Politics in South India’ ಎಂಬ ಪುಸ್ತಕದಲ್ಲಿ ಬಹಳ ಚೆನ್ನಾಗಿ ಗುರುತಿಸಿದ್ದಾರೆ. ಅಂದರೆ,
ನಾವು ಈಗ ತಿಳಿದಂತೆ ಇರುವ ಭಾಷಾವಾರು ರಾಜ್ಯಗಳ ಚರಿತ್ರೆ ಕೇವಲ ನೂರು ಚಿಲ್ಲರೆ ವರುಷಗಳದ್ದು ಮಾತ್ರ. ಸರಿಸುಮಾರು ಅದರ 60ನೇ ವಯಸ್ಸಿನಲ್ಲಿ ಅದು ಪ್ರವರ್ಧಮಾನವನ್ನು ಕಂಡಿತು. ಆನಂತರ ಈ ವಿಚಾರ ಅನೇಕ ಇಕ್ಕಟ್ಟುಗಳನ್ನು ಎದುರಿಸುತ್ತಾ ಬಂದಿದೆ.
ವಿಜಯ ಕರ್ನಾಟಕದಲ್ಲಿ ಪ್ರಕಟಿತ

‍ಲೇಖಕರು G

August 12, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. m.c.ningappa hutti gold mains

    iegiruva rajjagalunella thundarisutha mathondu rajjavannu srustisutha hodare iegiruva deshada akhandathege dauke aguvadillave? karnatkavanne nodi hydrabad karnatak,mubai karnataka hale mysore, kodagu prathek rajja iege vingadistha hodare akhand karnataka huliyodadaru hege?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: