ಸುಗತ ಬರೆಯುತ್ತಾರೆ: ಜಿ ಎಸ್ ಶಿವರುದ್ರಪ್ಪನವರು ನಮ್ಮ ಕೊನೆಯ ರಾಷ್ಟ್ರಕವಿ?

ಸುಗತ ಶ್ರೀನಿವಾಸರಾಜು

ಕಳೆದೆರಡು ವಾರಗಳಿಂದ ಎರಡು ಪ್ರಶ್ನೆಗಳು ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿವೆ. ಮೊದಲನೆಯ ಪ್ರಶ್ನೆ, ನಮ್ಮ ರಾಷ್ಟ್ರಕವಿ ಎನಿಸಿಕೊಂಡಿದ್ದ ಜಿ ಎಸ್ ಶಿವರುದ್ರಪ್ಪನವರು ತೀರಿಕೊಂಡ ಹಿನ್ನೆಲೆ ಯಲ್ಲಿ ಹುಟ್ಟಿದ್ದು; ಎರಡನೆಯ ಪ್ರಶ್ನೆ, ರಾಷ್ಟ್ರ ಪ್ರಶಸ್ತಿ ಪಡೆದ ಸಿನಿಮಾವೊಂದು ರಾಜಕೀಯ ಪಕ್ಷವೊಂದರ ಪ್ರಚಾರದ (propaganda) ಸಲಕರಣೆಯಾದುದರ ಸುತ್ತ ಬೆಳೆದದ್ದು. ಈ ಎರಡನೇ ಪ್ರಶ್ನೆಯನ್ನು ಚರ್ಚಿಸಲು ಇಲ್ಲಿ ಸ್ಥಳಾವಕಾಶ ಇಲ್ಲದಿರುವು ದರಿಂದ ಮುಂದೆಂದಾದರೂ ಕೈಗೆತ್ತಿಕೊಳ್ಳಬಹುದು.
ಮೊದಲನೆಯ ಪ್ರಶ್ನೆಯನ್ನು ಮೊದಲು ಅನ್ವೇಷಿಸೋಣ. ಹಿರಿಯರಾದ ಜಿಎಸ್‌ಎಸ್ ನಮ್ಮ ಕುಟುಂಬಕ್ಕೆ ಹತ್ತಿರದವರಾಗಿ ದ್ದರು. ಅವರು ಪ್ರೀತಿಯಿಂದ ಸಂಪಾದಿಸಿದ ಕಟ್ಟಕಡೆಯ ಪುಸ್ತಕ ನನ್ನ ತಂದೆಯವರನ್ನು ಕುರಿತಾಗಿತ್ತು. ಬಹಳ ಹಿಂದೆ ನಾನು ಅವರ ಕೆಲವು ಕವಿತೆಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದೆ ಮತ್ತು ಬಹಳ ಗಂಭೀರ ಸ್ವಭಾವದ ಅವರೊಂದಿಗೆ ಅವರ ಮೊಮ್ಮಗನ ವಾರಿಗೆಯವನಾದ ನನಗೆ ಮಾತಿನ ಸಲುಗೆ ಇತ್ತು. ಅವರು ರಾಷ್ಟ್ರಕವಿಗಳಾದ ಸಂದರ್ಭ ದಲ್ಲಿ ಅವರನ್ನು ಕಾಣಲು ನಮ್ಮ ತಂದೆಯವರೊಂದಿಗೆ ಹೋಗಿದ್ದೆ. ನಾನು ಅವರನ್ನು ಅಭಿನಂದಿಸಿ, ”ಬಹುಶಃ ನೀವೇ ಕನ್ನಡದ ಕಟ್ಟಕಡೆಯ ರಾಷ್ಟ್ರಕವಿ,” ಎಂದೆ. ”ಹಾಗೆಂದರೆ?,” ಎನ್ನುವ ರೀತಿ ಯಲ್ಲಿ ಅವರು ನನ್ನನ್ನು ನೋಡಿದರು. ಹೆಚ್ಚು ವಿಶ್ಲೇಷಣೆಗೆ ತೊಡಗದೆ, ”ಕಾಲ ಬದಲಾಗಿದೆ, ಇನ್ನಷ್ಟು ಬದಲಾಗುತ್ತದೆ. ಆಗ ಈ ಬಿರುದಿಗಿರುವ ಅರ್ಥಗಳು ಬದಲಾಗಬಹುದು,” ಎಂದು ಹೇಳಿ ಮೌನವಾದೆ. ಯುವಕನೊಬ್ಬನ ಬಿರುಸಿನ ಮಾತಿಗೆ ವಾತ್ಸಲ್ಯದ ನಗೆ ಬೀರಿ ಸುಮ್ಮನಾದರು. ಅವರಿಗೆ ತಮ್ಮ ಹೊಸ ಬಿರುದಿನ ಬಗ್ಗೆ ಯಾವುದೇ ಭ್ರಮೆ ಇದ್ದ ಹಾಗೆ ಕಾಣಲಿಲ್ಲ.

ಈಗ ಅವರು ಇಲ್ಲವಾಗಿರುವ ಸಂದರ್ಭದಲ್ಲಿ ನಾನು ಅಂದು ಆಡಿದ ಮಾತನ್ನು ಕುರಿತಂತೆ ಚಿಂತಿಸಿದೆ. ‘ರಾಷ್ಟ್ರಕವಿ’ (poet laureate) ಎಂಬ ಬಿರುದನ್ನು ನಮ್ಮ ಸಾಹಿತ್ಯ, ಸಂಸ್ಕತಿ ಮತ್ತು ಪ್ರಜಾ ಪ್ರಭುತ್ವದ ಹಿನ್ನೆಲೆಯಲ್ಲಿ ಹೇಗೆ ಗ್ರಹಿಸಬೇಕು? ಈ ಬಿರುದಿಗಿರುವ ಚಾರಿತ್ರಿಕ ಹಿನ್ನೆಲೆ ಮತ್ತು ಸಹವಾಸ ಎಂತಹದ್ದು ಮತ್ತು ಅದು ನಮ್ಮ ಆಧುನಿಕ ಬದುಕಿಗೆ ಸೂಕ್ತವೇ? ಈ ಪರಂಪರೆಯನ್ನು ಮುಂದು ವರಿಸುವ ಅಗತ್ಯವಿದೆಯೇ? ಈ ಬಿರುದಿಗಾಗಿ ಮುಂದೆ ನಮ್ಮ ಸರಕಾರ ಯಾರನ್ನಾದರೂ ಆಯ್ಕೆ ಮಾಡಿದರೆ ಅವರಿಂದ ನಾವು ಏನನ್ನು ಆಪೇಕ್ಷಿಸಬೇಕು ಮತ್ತು ಆ ಆಪೇಕ್ಷೆಗೆ ಇರಬಹುದಾದ ರಾಜಕೀಯ ಆಯಾಮಗಳೇನು? ಈ ತರಹದ ಬಿರುದುಗಳು ಒಬ್ಬ ಬರಹಗಾರನಿಗೆ ಪೂರಕವೇ ಅಥವಾ ಮಾರಕವೇ?
ನಮ್ಮ ಸಾಂಸ್ಕತಿಕ ಚರಿತ್ರೆಯಲ್ಲಿ ‘ರಾಷ್ಟ್ರಕವಿ’ ಎಂಬ ಬಿರುದು ಅಥವಾ ಗೌರವ ಸ್ಥಾನದ ಹಿನ್ನೆಲೆ ಹುಡುಕುತ್ತಾ ಹೋದರೆ ಅದು ನಮ್ಮನ್ನು ರಾಜ-ಮಹಾರಾಜರ, ಸುಲ್ತಾನರ ಆಸ್ಥಾನಗಳಿಗೆ ಕರೆದೊಯ್ಯು ತ್ತದೆ ಮತ್ತು ಅಲ್ಲಿನ ಛಂದೋಬದ್ಧ ಪರಾಕು ಕಾವ್ಯ ಹಾಗೂ ವರ್ಗೀಕರಣಗಳನ್ನು ನಮ್ಮ ಮುಂದೆ ಪ್ರತ್ಯಕ್ಷಗೊಳಿಸುತ್ತದೆ. ನಮ್ಮ ಪೌರಾಣಿಕ ಸಿನಿಮಾಗಳು ಈ ರೀತಿಯ ಪ್ರತ್ಯಕ್ಷ ದರ್ಶನಕ್ಕೆ ಆಕಾರ ಕೊಟ್ಟು, ಬಣ್ಣ ತೊಡಿಸುತ್ತವೆ. ಇಂದು ಈ ಆಸ್ಥಾನಗಳು ಇಲ್ಲ, ಬದಲಿಗೆ ಜನಬೆಂಬಲಿತ ಸರಕಾರಗಳಿವೆ. ರಾಜಾಶ್ರಯ ಇಲ್ಲ, ಜನಾಶ್ರಯ ಇದೆ. ಜನಬೆಂಬಲದ ಮುಖ್ಯ ಆಶಯ ವರ್ಗೀಕರಣ ವನ್ನು ತೊಡೆದು ಹಾಕಿ, ಸಮಾನತೆಯನ್ನು ಸ್ಥಾಪಿಸುವುದು. ಸಮಾನತೆಯನ್ನು ಸ್ಥಾಪಿಸು ವುದು ಎಂದರೆ ಸ್ವಾತಂತ್ರ್ಯವನ್ನು ಉಸುರುವುದು. ಈ ‘ಸ್ವಾತಂತ್ರ್ಯ’ ಎಂಬುದು ಪ್ರತಿಯೊಬ್ಬ ಲೇಖಕನ ಬುನಾದಿ. ಅದರ ಹರಣ ಮಾಡುವುದು ಎಂದರೆ ಒಬ್ಬ ಲೇಖಕನನ್ನು ಕೊಲೆ ಮಾಡುವುದು ಎಂದೇ ಅರ್ಥ.
ಪಾಶ್ಚಾತ್ಯರಲ್ಲಿ ಈ poet laureate ಅಥವಾ ರಾಷ್ಟ್ರಕವಿ ಎಂಬುದು ಗ್ರೀಕ್ ಪುರಾಣಗಳೊಂದಿಗೆ ತಳುಕು ಹಾಕಿಕೊಂಡಿರುವ ಸಂಸ್ಥೆ. ಈ ಗ್ರೀಕ್ ಪರಂಪರೆಯನ್ನು ಹೆಕ್ಕಿ, ಅದಕ್ಕೆ ರಾಜಾಶ್ರಯವಿತ್ತು, 17ನೇ ಶತಮಾನದಲ್ಲಿ ದೊಡ್ಡ ಸಾಂಸ್ಥಿಕ ಸ್ವರೂಪ ಕೊಟ್ಟದ್ದು ಇಂಗ್ಲೆಂಡಿನ ನಮ್ಮ ವಸಾಹತುಶಾಹಿ ದೊರೆಗಳು. ಈ ಬಿರುದು 17ನೇ ಶತಮಾನದ ಮುನ್ನವೂ ಚಾಲ್ತಿಯಲ್ಲಿತ್ತು. ಆದರೆ, ಅದು ವಸಾಹತು ವೈಭವವನ್ನು ಪಡೆದುಕೊಂಡಿದ್ದು ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ. ಕಳೆದ ಇನ್ನೂರು ವರ್ಷಗಳಿಂದೀಚೆಗೆ ಈ ಸ್ಥಾನ ಅಥವಾ ಬಿರುದನ್ನು ಪ್ರಧಾನಮಂತ್ರಿಗಳ ಶಿಫಾರಸ್ಸಿನ ಮೇಲೆ ಇಂಗ್ಲೆಂಡಿನ ರಾಜವಂಶಸ್ಥರು ಅನುಮೋದಿಸುತ್ತಾರೆ. ಈ ಬಿರುದು ಪಡೆದವರ ಮುಖ್ಯ ಕೆಲಸಗಳಲ್ಲಿ ಒಂದು, ರಾಜವಂಶಸ್ಥರನ್ನು ಒಳ ಗೊಂಡ ದೊಡ್ಡ ಚಾರಿತ್ರಿಕ ಸಂದರ್ಭಗಳಲ್ಲಿ ಕವಿತೆ ರಚಿಸುವುದು ಮತ್ತು ಜನರ ಮನಸ್ಸಿನಲ್ಲಿ ಆ ಸಂದರ್ಭವನ್ನು ಸ್ಮರಣಯೋಗ್ಯ ಮಾಡುವುದು. ಈ ಬಿರುದು ಹೊತ್ತವರು ಅರಮನೆಯಿಂದ ಸಂಬಳ ಪಡೆಯುವುದಲ್ಲದೆ, ವರ್ಷಕ್ಕೊಮ್ಮೆ ಒಂದು ಬಾಟಲ್ ವಿಶಿಷ್ಟವಾದ ಮಾಗಿದ ವೈನ್ ಕೂಡ ಪಡೆಯುತ್ತಾರೆ. ಈ ವಸಾಹತು ಪರಂಪರೆ ಯನ್ನು ಅಮೆರಿಕ ಮತ್ತು ಇತರೆ ದೇಶಗಳು ಸ್ವಲ್ಪ ಬದಲಾವಣೆ ಯೊಂದಿಗೆ ಅನುಸರಿಸಿವೆ. ಆದರೆ, ಅದು ಇಂಗ್ಲೆಂಡಿನಲ್ಲಿ ಪಡೆದ ಸಾಂಸ್ಥಿಕ ಸ್ವರೂಪ ಮತ್ತು ರಾಜಾಶ್ರಯ ಬೇರೆಲ್ಲೂ ಪಡೆದಿಲ್ಲ. ಇಂಗ್ಲೆಂಡಿನಲ್ಲಿ ಈ ಬಿರುದನ್ನು ರಾಣಿಯ ಮುಂದೆ ಮಂಡಿಯೂರಿ ಪಡೆಯಬೇಕು. ಮೊದಲು ಆಜೀವಪರ್ಯಂತ ಇದ್ದ ಈ ಪದವಿ ಈಗ ಹತ್ತು ವರ್ಷಗಳಿಗೆ ಮೊಟಕುಗೊಂಡಿದೆ.
ಇಂಗ್ಲೆಂಡಿನ ಚರಿತ್ರೆಯಲ್ಲಿ ಈ ಸಂಸ್ಥೆ ಘರ್ಷಣೆ ಸೃಷ್ಟಿಸದೇ ಇಲ್ಲ. ಹಲವು ಬಾರಿ ಕವಿಗಳು ಇದನ್ನು ನಿರಾಕರಿಸಿದ್ದು ಇದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಅವರನ್ನು ತೆಗೆದು ಹಾಕಿದ್ದೂ ಇದೆ. ಪ್ರಸಿದ್ಧ ಕವಿ ಜಾನ್ ಡ್ರೈಡನ್ ಪದಚ್ಯುತಗೊಂಡವರಲ್ಲಿ ಒಬ್ಬ. ಡ್ರೈಡನ್‌ನನ್ನು 1660ನೇ ಇಸವಿಯಲ್ಲಿ ಎರಡನೇ ಚಾರ್ಲ್ಸ್ ‘ರಾಷ್ಟ್ರಕವಿ’ ಎಂದು ಘೋಷಿಸಿದ. ಅವನ ರಾಜಕೀಯ ಸಂಕಷ್ಟದ ಕಾಲದಲ್ಲಿ ಜನರ ನಡುವೆ ತನ್ನ ವಕಾಲತ್ತು ವಹಿಸಲೆಂದು ಆತನನ್ನು ನೇಮಿಸುತ್ತಾನೆ. ಆದರೆ, ಚಾರ್ಲ್ಸ್‌ನ ಉತ್ತರಾಧಿಕಾರಿ ಮೂರನೆಯ ವಿಲಿಯಂ ಪ್ರಾಟೆಸ್ಟಂಟ್ ದೊರೆಯಾದ್ದರಿಂದ, ಕ್ಯಾಥೊಲಿಕ್ ಪಂಗಡಕ್ಕೆ ಸೇರಿದ ಡ್ರೈಡನ್ ಅವನ ಮುಂದೆ ಮಂಡಿಯೂರಲು, ಮತ್ತೊಂದು ಮತದ ವನ ಮುಂದೆ ಶರಣಾಗಲು ನಿರಾಕರಿಸುತ್ತಾನೆ. ಈ ಬಣ ರಾಜ ಕೀ ಯದ ಪರಿಣಾಮ ಅವನನ್ನು ‘ರಾಷ್ಟ್ರಕವಿ’ ಪದವಿಯಿಂದ ಕೆಳಗಿಳಿಸಲಾಗುತ್ತದೆ. ಕವಿಗಳು ಆಯ್ಕೆ ಆಗಬೇಕಾದರೆ ಅವರ ಪರಿಶ್ರಮ ಮಾತ್ರವಲ್ಲ, ಅರಮನೆಯ ಅನುಕೂಲಕ್ಕೂ ಸರಿಹೊಂದು ವಂತಿರಬೇಕು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಈ ಆಯ್ಕೆಗೆ ಸಂಬಂಧಪಟ್ಟ ಹಲವಾರು ವಿವಾದಗಳು ಚರಿತ್ರೆಯ ಪುಟಗಳಲ್ಲಿ ದಾಖಲಾಗಿವೆ.
ಪ್ರಸಿದ್ಧ ಕವಿ ವರ್ಡ್ಸ್‌ವರ್ತ್ 1843ರಲ್ಲಿ ರಾಷ್ಟ್ರಕವಿಯಾಗಿ ಆಯ್ಕೆ ಯಾದಾಗ ಬಿರುದು, ಪದವಿಯನ್ನು ಒಪ್ಪಿಕೊಳ್ಳಲು ನಿರಾಕರಿಸು ತ್ತಾನೆ. ಪರಾಕು ಪದ್ಯಗಳನ್ನು, ವಿಶೇಷ ಸಂದರ್ಭಗಳಿ ಗಾಗಿಯೇ ಕಾವ್ಯ ಹೊಸೆಯುವ ಕೆಲಸವನ್ನು ತಾನು ಮಾಡಲಾರೆ ಎಂದು ಹೇಳುತ್ತಾನೆ. ಅಂದಿನ ಇಂಗ್ಲೆಂಡಿನ ಪ್ರಧಾನಮಂತ್ರಿ ರಾಬರ್ಟ್ ಪೀಲ್ ”ನಿಮ್ಮಿಂದ ನಾವು ಅದನ್ನು ಬಯಸುವುದಿಲ್ಲ,” ಎಂದು ಆಶ್ವಾಸನೆ ಇತ್ತ ಮೇಲೆ ವರ್ಡ್ಸ್‌ವರ್ತ್ ‘ರಾಷ್ಟ್ರಕವಿ’ ಎಂದು ಕರೆಸಿಕೊಳ್ಳಲು ಒಪ್ಪುತ್ತಾನೆ. ಈ ಪದವಿಯಿಂದ ತನ್ನ ಬರವಣಿಗೆಯ ಸ್ವಾತಂತ್ರ್ಯಹರಣವಾಗಿ ಅದು ಕೃತಕವಾಗುವುದರ ಬಗ್ಗೆ ವರ್ಡ್ಸ್‌ವರ್ತ್ ಬಹಳ ಗಾಬರಿಗೊಂಡಿದ್ದ.
ಈಗಲೂ ವಿಶೇಷ ರಾಜ ಸಂದರ್ಭ ದಲ್ಲಿ ಇಂಗ್ಲೆಂಡಿನಲ್ಲಿ ರಾಷ್ಟ್ರಕವಿ ಕಾವ್ಯ ರಚಿಸುವ ಕೆಲಸ ನಿಲ್ಲಿಸಿಲ್ಲ. ಈ ಹಿಂದಿನ ರಾಷ್ಟ್ರಕವಿ ಆಂಡ್ರ್ಯೂ ಮೋಶನ್ ರಾಜ ಮಾತೆಯ ನೂರನೇ ಹುಟ್ಟುಹಬ್ಬಕ್ಕೆ ಕವಿತೆ ರಚಿಸಿದ; 2002ರಲ್ಲಿ ಮಹಾರಾಣಿಯ ಪದಗ್ರಹಣದ ಸುವರ್ಣ ಮಹೋತ್ಸ ವದ ಸಂದರ್ಭ ಮತ್ತು 2006ರಲ್ಲಿ ಆಕೆಯ ಎಂಬತ್ತನೆಯ ಹುಟ್ಟು ಹಬ್ಬಕ್ಕೆ ವಿಶೇಷ ಕವಿತೆಗಳನ್ನು ಪ್ರಸ್ತುತಪಡಿಸಿದ. ನಮ್ಮ
ಪ್ರಜಾ ಪ್ರಭುತ್ವದಲ್ಲಿ ನಾವು ಸೋನಿಯಾ ಗಾಂಧಿಗೋ, ನರೇಂದ್ರ ಮೋದಿಗೋ ವಿಶೇಷ ‘ಉಘೇ ಉಘೇ’ ಕವಿತೆ ರಚಿಸುವವರನ್ನು ಹೇಗೆ ಗ್ರಹಿಸುತ್ತೇವೆ ಎಂದು ಎಲ್ಲರಿಗೂ ತಿಳಿದಿದೆ. ಇಂತಹ ಚರಿತ್ರೆ, ಇಕ್ಕಟ್ಟುಗಳನ್ನು ಒಳಗೊಂಡ ಸಂಸ್ಥೆಯನ್ನು ನಾವು ನಮ್ಮ ದೇಶದಲ್ಲಿ ಮುಂದುವರಿಸುವ ಅಗತ್ಯ ವಿದೆಯೇ ಎಂದು ನಾವು ಪ್ರಾಮಾಣಿಕವಾಗಿ ಕೇಳಿಕೊಳ್ಳಬೇಕು.
ನಾವು ಈ ಪದವಿಯನ್ನು ಬರೀ ವಸಾಹತುಶಾಹಿ ಚರಿತ್ರೆಯ ಕಾರಣಕ್ಕಾಗಿ ಮಾತ್ರ ನಿರಾಕರಿಸಬೇಕು ಎಂದು ಹೇಳಿದರೆ ಅದು ಪೂರ್ವಾಗ್ರಹದಿಂದ ಕೂಡಿದ ಹೇಳಿಕೆಯಾಗುತ್ತದೆ. ಆದ್ದರಿಂದ ಈ ನಿರಾಕರಣೆಗೆ ನಾವು ಕಟ್ಟುವ ವಾದಗಳನ್ನು ಬರಹಗಾರನ ಸ್ವಾತಂತ್ರ್ಯದ ಸುತ್ತ ಬೆಳೆಸಬೇಕಾಗುತ್ತದೆ. ನಮ್ಮ ಸಂದರ್ಭದಲ್ಲಿ ಪರಾಕು ಕವಿತೆ ಬರೆಯಬೇಕಾದ ಒತ್ತಡ ಇರುವುದಿಲ್ಲ ನಿಜ. ಆದರೆ, ಹಲವು ರಾಜಕೀಯ ಸಂದರ್ಭಗಳು ನಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸ ಬಹುದು; ನಮ್ಮ ಆಲೋಚನೆ ಮತ್ತು ಅದರ ನಿರ್ಭೀತ ಅಭಿವ್ಯಕ್ತಿಗೆ ಅಡ್ಡಿ ಮಾಡಿ, ಮುಲಾಜಿಗೆ, ಮುಜುಗರಕ್ಕೆ ಸಿಲುಕಿಸಬಹುದು. ಕವಿತೆ ಮತ್ತು ಯಾವುದೇ ಸೃಜನಾತ್ಮಕ, ಕ್ರಿಯಾಶೀಲ ಬರವಣಿಗೆಯ ಆಂತರ್ಯದಲ್ಲಿ ಇರುವುದು ಬಂಡಾಯ. ನಮಗೆ ಜಗತ್ತಿನೊಂದಿಗೆ ಜಗಳವಿಲ್ಲದಿದ್ದರೆ, ನಮ್ಮದೇ ಆದ ಲೋಕದೃಷ್ಟಿ ಇಲ್ಲದಿದ್ದರೆ ನಾವು ಬರೆಯುವ ಅಗತ್ಯವಾದರೂ ಎಲ್ಲಿದೆ? ಇಲ್ಲಿ ‘ಬಂಡಾಯ’ ಎಂಬ ಪದವನ್ನು ದೊಡ್ಡ ತತ್ತ್ವಸಿದ್ಧಾಂತಗಳ ಹಿನ್ನೆಲೆಯಿಂದ ಮಾತ್ರ ನಾವು ಗ್ರಹಿಸಬೇಕಾಗಿಲ್ಲ. ನಮ್ಮ ಪ್ರತಿದಿನದ ಬದುಕಿನ ಖಾಸಗಿ ಬಂಡಾಯ ಗಳೂ ಬರವಣಿಗೆಯನ್ನು ಪೋಷಿಸುತ್ತಿರುತ್ತವೆ. ವಿಚಿತ್ರವೆಂದರೆ, ಇಂದಿನ ಕಾಲದಲ್ಲಿ ಸರಳವಾಗಿ, ಪ್ರಾಮಾಣಿಕವಾಗಿ ಬದುಕುವುದನ್ನೂ ನಾವು ‘ಬಂಡಾಯ’ ಎಂದು ಪರಿಗಣಿಸುತ್ತೇವೆ.
ನನ್ನ ನೆಚ್ಚಿನ ಬರಹಗಾರ ಹೆಮಿಂಗ್‌ವೇನ ಆಯ್ದ ಪತ್ರಗಳ ಪುಸ್ತಕವನ್ನು ಆಗಾಗ ಕೈಗೆತ್ತಿಕೊಳ್ಳುತ್ತೇನೆ. ಅದರಲ್ಲಿ ಅವನು ಐವಾನ್ ಕಶ್‌ಕಿನ್ (Ivan Kashkin) ಎಂಬ ಯುವ ಬರಹಗಾರನಿಗೆ ಹೀಗೆ ಬರೆಯುತ್ತಾನೆ: “You write like a patriot and that is your blind spot. I have seen a lot of patriots and they all died just like anybody else. If it hurt bad enough and once they were dead their patriotism was good for legends; it was bad for their prose and made them write bad poetry.”
ಮತ್ತೊಂದೆಡೆ, ಫ್ರೆಂಚ್ ಲೇಖಕ ರೋಲಾ ಬಾರ್ತ್ (Roland Barthes) ಪರಂಪರೆಯ ಭಾರ ಹೊತ್ತು ಘನ ಉದ್ದೇಶದಿಂದ ಬರೆಯುವ ಬರಹಗಾರ (author) ಹಾಗೂ ಅದರಿಂದ ಬಿಡುಗಡೆ ಪಡೆದ ಲೇಖಕನ (writer) ನಡುವೆ ವ್ಯತ್ಯಾಸದ ದಪ್ಪ ಗೆರೆ ಎಳೆದು ಹೀಗೆ ಹೇಳುತ್ತಾನೆ: “The author is a salaried priest, he is the half-respectable, half-ridiculous guardian of the sanctuary of the great French language, a kind of national treasure, a sacred merchandise, produced, taught, consumed, and exported in the context of a sublime economy of values.”
ನಮ್ಮಲ್ಲಿ ಇದ್ದ ರಾಷ್ಟ್ರಕವಿಗಳಾರೂ (ಗೋವಿಂದ ಪೈ, ಕುವೆಂಪು, ಜಿಎಸ್‌ಎಸ್) ಪೇಚಿಗೆ ಸಿಕ್ಕಿಹಾಕಿಕೊಳ್ಳಲಿಲ್ಲ, ಹೇಳಬೇಕಾದುದನ್ನು ಹೇಳದೇ ಉಳಿಯಲಿಲ್ಲ. ಅವರೆಲ್ಲರೂ ‘ಹಾಡುಹಕ್ಕಿಗೆ ಬೇಕೇ ಬಿರುದು ಸನ್ಮಾನ’ ಎಂದು ಹಾಡಿ ನಿರ್ಗಮಿಸಿದವರು. ಆದರೆ ಮುಂದೆ ಹಾಗಾ ಗುವ ಯಾವ ಖಾತ್ರಿ ಇಲ್ಲ. ಹಾಗಾಗಿ ಜಿಎಸ್‌ಎಸ್ ನಮ್ಮ ಕೊನೆಯ ರಾಷ್ಟ್ರಕವಿ.

ವಿಜಯ ಕರ್ನಾಟಕದಲ್ಲಿ ಪ್ರಕಟಿತ

 

‍ಲೇಖಕರು G

January 6, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

7 ಪ್ರತಿಕ್ರಿಯೆಗಳು

  1. ಡಾ.ಪ್ರಕಾಶ ಗ.ಖಾಡೆ

    “ನಮ್ಮಲ್ಲಿ ಇದ್ದ ರಾಷ್ಟ್ರಕವಿಗಳಾರೂ (ಗೋವಿಂದ ಪೈ, ಕುವೆಂಪು, ಜಿಎಸ್‌ಎಸ್) ಪೇಚಿಗೆ ಸಿಕ್ಕಿಹಾಕಿಕೊಳ್ಳಲಿಲ್ಲ, ಹೇಳಬೇಕಾದುದನ್ನು ಹೇಳದೇ ಉಳಿಯಲಿಲ್ಲ. ಅವರೆಲ್ಲರೂ ‘ಹಾಡುಹಕ್ಕಿಗೆ ಬೇಕೇ ಬಿರುದು ಸನ್ಮಾನ’ ಎಂದು ಹಾಡಿ ನಿರ್ಗಮಿಸಿದವರು. ಆದರೆ ಮುಂದೆ ಹಾಗಾಗುವ ಯಾವ ಖಾತ್ರಿ ಇಲ್ಲ. ಹಾಗಾಗಿ ಜಿಎಸ್‌ಎಸ್ ನಮ್ಮ ಕೊನೆಯ ರಾಷ್ಟ್ರಕವಿ.”
    ಸರಿಯಾಗಿಯೇ ಹೇಳಿದ್ದೀರಿ.ಲಾಬಿ ಲೋಭಿಗಳ ಈ ಕಾಲದಲ್ಲಿ ಕುಲಪತಿ ಹುದ್ದೆಗಳೂ ಸೇರಿದಂತೆ ಎಲ್ಲ ಪ್ರತಿಷ್ಟಿತ ಪ್ರಶಸ್ತಿ,ಬಿರುದು ಬಾವಲಿಗಳು ಯಾರ್ಯಾರಿಗೋ ಸಿಕ್ಕು ಕುಲಗೆಟ್ಟು ಹೋಗುತ್ತಿವೆ,ಗೌರವ ಡಾಕ್ಟರೇಟ,ನಾಡೋಜ,ರಾಷ್ಟ್ರಕವಿ ಬಿರುದು ಇವೆಲ್ಲವನ್ನೂ ಕೊಡುವುದು ಒಂದು ಹತ್ತು ವರ್ಷಗಳ ಕಾಲ ನಿಲ್ಲಿಸುವುದು ಒಳಿತು.

    ಪ್ರತಿಕ್ರಿಯೆ
  2. ಶ್ರೀ

    ಜಿ.ಎಸ್.ಎಸ್. ಅವರನ್ನೇ ರಾಷ್ತ್ರ ಕವಿ ಅಂತ ಒಪ್ಪಿಕೊಳ್ಳದವರಿದ್ದಾರೆ.ಸಕಾಱರ ರಾಷ್ತ್ರ ಕವಿ ಅಂದರೆ ಅನಕೊಳ್ಳಲಿ ನಾನು ಅನ್ನಲ್ಲ ಅನ್ನುತ್ತಾರೆ.ಜನಮತಕ್ಕೆ ಪ್ರಜಾಪ್ರಭುತ್ವದಲ್ಲಿ ಬೆಲೆ ಇದೇಯೇ?

    ಪ್ರತಿಕ್ರಿಯೆ
  3. Anil Talikoti

    ಮಾಧ್ಯಮಗಳು ಈಗ ಸಾಗುತ್ತಿರುವ ಗತಿ ನೋಡಿದರೆ ನಿಮ್ಮ ಮಾತು ಸತ್ಯವೆಂದು ಅರಿವಾಗುತ್ತದೆ -‘ಆದರೆ ಮುಂದೆ ಹಾಗಾಗುವ ಯಾವ ಖಾತ್ರಿ ಇಲ್ಲ’ — ತುಂಬಾ ಒಳ್ಳೆಯ ಬರಹವಿದು
    -ಅನಿಲ

    ಪ್ರತಿಕ್ರಿಯೆ
  4. ಟಿ.ಕೆ.ಗಂಗಾಧರ ಪತ್ತಾರ.

    “ರಾಷ್ಟ್ರಕವಿ”-ವಿಷಯವನ್ನು ವಿವಾದದ ಸ್ತರದಲ್ಲಿ ವಿಶ್ಲೇಷಿಸಿದ್ದು ಸಮಕಾಲೀನ ಸಾಹಿತ್ಯ ಸಂದರ್ಭದ ಬಹುದೊಡ್ಡ ವಿಪರ್ಯಾಸ. ಏನೇ ವಿವರಗಳನ್ನು ಉಲ್ಲೇಖಿಸಿದ್ದರೂ ಸುಗತ ಶ್ರೀನಿವಾಸರಾಜು ಜಿ.ಎಸ್.ಎಸ್. ಕೊನೆಯ ರಾಷ್ಟ್ರಕವಿ ಎಂದದ್ದು ಎಲ್ಲರೂ ಒಪ್ಪಲೇಬೇಕಾದ ತೀರ್ಮಾನವೇನಲ್ಲ. ಅವರ ಯಾವುದೇ ಅನಿಸಿಕೆ-ಅಭಿಪ್ರಾಯಗಳು ಅವರವೇ ಮಾತ್ರ. ಜಿ.ಎಸ್.ಎಸ್.ಕೊನೆಯ ರಾಷ್ಟ್ರಕವಿಯೆಂದರೆ ಅವರಷ್ಟು ಸಮರ್ಥರು ಬೇರೇ ಯಾರೂ ಇಲ್ಲವೆನ್ನಲಾದೀತೇ?. ಕೆ.ಎಸ್.ನಿಸಾರ್ ಅಹ್ಮದ್, ಚೆನ್ನವೀರ ಕಣವಿ ಇನ್ನೂ ಅನೇಕರು ಸುಗತ ಶ್ರೀನಿವಾಸರಾಜುರವರಿಗೆ ಕವಿಗಳಾಗಿ ಗೋಚರಿಸುತ್ತಿಲ್ಲವೇ?. ಅವರದು ಪೂರ್ವಾಗ್ರಹವಲ್ಲವೇ?. ರಾಷ್ಟ್ರಕವಿಗೆ ಹೆಸರು ಸೂಚಿಸಲು ನೇಮಿಸಿದ ಆಯ್ಕೆ ಸಮಿತಿಯ ಕರ್ತವ್ಯ ಹೆಸರು ಸೂಚಿಸುವುದು ಮಾತ್ರ ಆಗಿರಬೇಕಿತ್ತಲ್ಲವೇ? ಆದರೆ ಕೋಚೆಯವರಿಗೆ ರಾಷ್ಟ್ರಕವಿ ಪದವಿ ನೀಡಬೇಕೇ ಬೇಡವೇ ಎಂದು ಏಕಪಕ್ಷೀಯವಾಗಿ ನಿರ್ಧರಿಸುವ ಸ್ವಾತಂತ್ರ್ಯ ಇತ್ತೇ? ಯಾವುದೇ ದೃಷ್ಟಿಕೋನದಿಂದ ವಿವೇಚಿಸಿದರೂ ಮುಂದಿನ ರಾಷ್ಟ್ರಕವಿಯಾಗಲು ಸರ್ವ ವಿಧದಲ್ಲೂ ಅರ್ಹ ತೆರಾದವರು ಜಿ.ಎಸ್.ಎಸ್.ರವರ ನಿಕಟವರ್ತಿ, ಜಿ.ಎಸ್.ಎಸ್.ರವರಂತೆಯೇ ಸಮನ್ವಯ ಕವಿಯೆಂದೇ ಖ್ಯಾತರಾದ ನಾಡೋಜ ಚೆನ್ನವೀರ ಕಣವಿ. ಕೋಚೆಯವರ ಏಕಮುಖ ನಿರ್ಧಾರವನ್ನು ಅವಲೋಕಿಸಿದರೆ ಉತ್ತರ ಕರ್ನಾಟಕದವರ ಹೆಸರನ್ನು ರಾಷ್ಟ್ರಕವಿ ಪದವಿಗೆ ಸೂಚಿಸುವುದು ಬೇಡವಾಗಿತ್ತೇ ಎಂಬ ಗುಮಾನಿ ಬರುವುದು ಸಹಜ. ಸ್ವತಃ ಉತ್ತರ ಕರ್ನಾಟಕದವರಾದರೂ ಬಹು ಹಿಂದೆಯೇ ಬೆಂಗಳೂರಿಗ ರಾದ ಕೋಚೆ ಇಂತಹ ನಿರ್ಧಾರಕ್ಕೇಕೆ ಬಂದರೋ?. ಸರ್ಕಾರಕ್ಕೂ ಅವರ ನಿರ್ಧಾರವನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ಅದೇನಿತ್ತೋ?. ಇದರ ಮರುಪರಿಶೀಲನೆ ಅತ್ಯಾವಶ್ಯಕವೆನಿಸುವುದಿಲ್ಲವೇ?
    “ಹೂವು ಹೊರಳುವುವು ಸೂರ್ಯನ ಕಡೆಗೆ/ನಮ್ಮ ದಾರಿ ಬರಿ ಚಂದ್ರನವರೆಗೆ” ಎಂದು ಮಾನವ ಪ್ರಯತ್ನದ ಸೀಮಿತತೆಯನ್ನು ಧ್ವನಿಸಿದ ಚೆನ್ನವೀರ ಕಣವಿ-ಬೇಂದ್ರೆ, ಕುವೆಂಪು ಮೊದಲಾದವರು-ಹೊಸದಾಗಿ ಕಾವ್ಯರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕನ್ನಡ ಕಾವ್ಯ ನವೋದಯದ ನಡುಹಗಲಲ್ಲಿ ಪದಾರ್ಪಣೆ ಮಾಡಿದರೂ ಯಾವ ಪ್ರಭಾವ-ಪಂಥಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ ಸಮನ್ವಯಕವಿಯಾಗಿ ರೂಪುಗೊಂಡವರು. ತಮ್ಮ ಅನುಪಮ ಕಾವ್ಯ ಪ್ರತಿಭೆಯ ಕೃತಿರತ್ನಗಳಿಂದ ಕನ್ನಡ ಸಾರಸ್ವತವನ್ನು ಶ್ರೀಮಂತಗೊಳಿಸಿದ ಧೀಮಂತ ಕವಿ ಚೆನ್ನವೀರ ಕಣವಿ. ಕ(ಣ)ವಿ ಜೀವನದ ಶುಭೋದಯದ ನಾಂದಿಯಾಗಿ ಹೊಮ್ಮಿಬಂದ “ಕಾವ್ಯಾಕ್ಷಿ”(1949), “ಭಾವಜೀವಿ”(1950)ಕವನ ಸಂಗ್ರಹಗಳಲ್ಲಿ ನವೋದಯ ರಮ್ಯಕಾವ್ಯ ಮನೋಧರ್ಮ, ಆದರ್ಶ ಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳನ್ನು, 1953ರಲ್ಲಿ ಕಾವ್ಯನಭಕ್ಕೇರಿಸಿದ “ಆಕಾಶಬುಟ್ಟಿ” 3ನೇ ಸಂಗ್ರಹದಲ್ಲಿ ವಿಸ್ತಾರಗೊಳ್ಳುವ ಆಸಕ್ತಿಗಳನ್ನು, ಸಮಾಜದ ಅಂಕು-ಡೊಂಕು, ಲೋಪ-ದೋಷಗಳನ್ನು, ವ್ಯಗ್ರತೆಯಿಂದ ಟೀಕೆಗೆ ಗುರಿಮಾಡುವ ವ್ಯಂಗ್ಯ-ವಿಡಂಬನಾತ್ಮಕ ಧಾಟಿಯ ಮೊನಚು ಶೈಲಿಯ ಕ(ಣ)ವಿಯವರು, ನಿರಂಜನ, ಬಸವರಾಜ ಕಟ್ಟೀಮನಿ, ಸು.ರಂ.ಯಕ್ಕುಂಡಿಯಂಥವರ ಸ್ನೇಹದಿಂದ ಪ್ರಗತಿಶೀಲ ಸಾಹಿತ್ಯ ಚಳುವಳಿಯಲ್ಲಿ ತೊಡಗಿಸಿಕೊಂಡವರು “ಆಕಾಶಬುಟ್ಟಿ” ಸಂಗ್ರಹದ ಪ್ರತಿಮಾನಿಷ್ಠತೆಯ “ಪ್ರಜಾಪ್ರಭುತ್ವ”-ಶೀರ್ಷಿಕೆಯ ಕವನ ಅವರ ಮುಂದಣ ಕಾವ್ಯಮಾರ್ಗದ ಮುನ್ಸೂಚನೆಯೆಂಬಂತೆ ಮೂಡಿಬಂದಿದೆ. 1954ರಲ್ಲಿ ಅಡಿಗರ “ಚಂಡೆ ಮದ್ದಳೆ” ಮೂಲಕ ಅಧಿಕೃತವಾಗಿ ಉದ್ಘಾಟಿತ ನವ್ಯಮಾರ್ಗದೊಂದಿಗಿನ ಸಂಬಂಧ ಅನ್ಯೋನ್ಯವಾದುದಾಗಿರಲಿಲ್ಲ ವಾದರೂ ಆ ಕಾವ್ಯಪ್ರವಾಹದಲ್ಲಿ ಕೊಚ್ಚಿಹೋಗದಷ್ಟು ಗಟ್ಟಿತನವನ್ನು ಜಿ.ಎಸ್.ಶಿವರುದ್ರಪ್ಪ, ಕೆ.ಎಸ್.ನರಸಿಂಹಸ್ವಾಮಿಯವರಂತೆಯೇ ಸ್ವಂತಿಕೆಯಿಂದ ಸಿದ್ಧಿಸಿಕೊಂಡವರು-ಕ(ಣ)ವಿಯವರು. ವಿಶೇಷವಾಗಿ ರಮ್ಯ ಮನೋಧರ್ಮದಿಂದ ಹೊಸಕಾವ್ಯ ಸಂದರ್ಭದೊಂದಿಗೆ ಬೇರೊಂದು ಬಗೆಯಲ್ಲಿ ಸಂಘರ್ಷಕ್ಕೆ ತೊಡಗಿದ್ದರಿಂದಲೇ ಅಡಿಗರ ಅನುಯಾಯಿಗಳಿಗಿಂತಲೂ ಭಿನ್ನವಾದ ಕಾವ್ಯ ಸೃಷ್ಟಿಸಲು ಸಾಧ್ಯವಾದದ್ದೇ ಚೆನ್ನವೀರ ಕಣವಿಯವರ ಕಾವ್ಯ ಜೀವನದ ಬಹುಮುಖ್ಯ ಅಧ್ಯಾಯ. ಬದುಕಿನ ಕಹಿಯನ್ನು ಸಾಮಾಜಿಕ ಮತ್ತು ವೈಯಕ್ತಿಕ ನೆಲೆಯಲ್ಲಿ ವ್ಯಕ್ತಪಡಿಸುತ್ತಲೇ ಸ್ನೇಹ-ಪ್ರೀತಿ-ವಾತ್ಸಲ್ಯ-ಸಹನಶೀಲತೆಯ ಮಾನವೀಯ ಮೌಲ್ಯಗಳನ್ನಾಶ್ರಯಿಸಿ ಸಹ್ಯವಾಗಿಸುವುದು ಸಾಧ್ಯವೆಂಬುದು ಕಣವಿಯವರ ನಿಲುವು. ದಾಂಪತ್ಯ-ಮಕ್ಕಳು-ನಿಸರ್ಗ-ಪ್ರಾಣಿ-ಪಕ್ಷಿಗಳನ್ನು ಕುರಿತು ಅಡಿಗರಿಗಿಂತಲೂ ಭಿನ್ನವಾಗಿ ಅಭಿವ್ಯಕ್ತಿಸಿದ ಕಣವಿಯವರನ್ನು “ನವ್ಯ ಕಾವ್ಯದಿಂದಾಗಿ ರೂಪುಗೊಂಡ ಮುಕ್ತ ಛಂದಸ್ಸು, ವಾಸ್ತವಮುಖತೆ, ಸಾಮಾಜಿಕ ಎಚ್ಚರ, ವ್ಯಂಗ್ಯ-ವಿಡಂಬನೆಗಳನ್ನು ಕಣವಿಯವರ ಕವಿತೆ ಹಿಡಿದುಕೊಂಡಿತಾದರೂ ತಮ್ಮ ವ್ಯಕ್ತಿತ್ವದ ಮೂಲದ್ರವ್ಯಗಳಾದ ಆದರ್ಶ, ನಿಸರ್ಗಪ್ರಿಯತೆ, ಅನುಭಾವಿಕ ದೃಷ್ಟಿ, ಮಾನವೀಯ ಮೌಲ್ಯ ಪ್ರಜ್ಞೆ ಇತ್ಯಾದಿಗಳನ್ನು ಕಣವಿಯವರು ಬಿಟ್ಟುಕೊಡಲಿಲ್ಲ.”-ಎಂದು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಕಣವಿ ಕಾವ್ಯದ ಪ್ರಧಾನಾಂಶಗಳನ್ನು ಗುರುತಿಸಿದ್ದಾರೆ.
    “ಹಗಲು ಸತತೋದ್ಯೋಗಿ/ಇರುಳು ಕಿಂದರಿ ಜೋಗಿ/ನಿದ್ದೆ ಎಲ್ಲೋ ಯಕ್ಷಲೋಕ ಸಂಚಾರಿ//ಇವನೆಳೆಯ ಕಂಗಳಲಿ/ ಹೊಳೆವ ತಿಂಗಳ ಬೆಳಕು/ದಿವದ ದಾರಿಯೊಳೆಮಗೆ ದೀಪಧಾರಿ//…”,
    “ಮಾಡಿ ಉಂಡಿದ್ದೇವೆ ನಮನಮಗೆ ಸೇರಿದ ಅಡಿಗೆ/ಇರಬಹುದು ಇದರಲ್ಲಿ ಕೆಲಭಾಗ ಜೀವನ ಸತ್ವ ಕಡಿಮೆ//…”,
    “ಇದ್ದ ಶಕ್ತಿಯಲ್ಲಿ ತುಸುದೂರ ನಡೆದಿದ್ದೇವೆ/ರೂಢಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ/ ಮುಖ್ಯ ಬೇಕಾದದ್ದು ಜೀವಂತ ಗತಿ, ಹೊಸನೆತ್ತರಿನ ಕೊಡುಗೆ//”
    -ಎಂಬ “ಸಾಹಿತ್ಯ ಚಿಂತನ”ದೊಂದಿಗೆ “ಕಾವ್ಯಾನುಸಂಧಾನ” ನಡೆಸಿ ಜನರ “ಜೀವಧ್ವನಿ”ಯನ್ನು ಕವನಿಸಿದ ಚೆನ್ನವೀರ ಕಣವಿಯವರು ರಾಷ್ಟ್ರಕವಿ ಪದವಿಗೆ ಯೋಗ್ಯರಲ್ಲವೇ?. ರಾಜಕೀಯ ಪ್ರಭಾವ, ಜಾತಿ ಪ್ರಭಾವ, ವಶೀಲಿಗಳನ್ನು ಬದಿಗಿಟ್ಟು ಅವಲೋಕಿಸಿದರೆ-ಈ ಚಿಂತನಶೀಲ, ಸೃಜನಶೀಲ, ಸ್ನೇಹಶೀಲ, ಮಮತೆ-ಸೌಜನ್ಯತೆಗಳೇ ಮೂರ್ತಿವೆತ್ತಂತಿರುವ “ಸದುವಿನಯದ ತುಂಬಿದ ಕೊಡ” ತುಂಬು ಜೀವನದ ತೊಂಬತ್ತಕ್ಕೆ ಕಾಲಿಡಲಿರುವ ಅನುಭಾವಿ ಕವಿ ಚೆನ್ನವೀರ ಕಣವಿ ಕರ್ನಾಟಕದ ನಾಲ್ಕನೆಯ ರಾಷ್ಟ್ರಕವಿಯಾಗಲು ಅರ್ಹರಲ್ಲವೇ?

    ಪ್ರತಿಕ್ರಿಯೆ
  5. ಟಿ.ಕೆ.ಗಂಗಾಧರ ಪತ್ತಾರ.

    ರಾಷ್ಟ್ರಕವಿಯಾಗಲು ಸರ್ವ ವಿಧದಲ್ಲೂ “ಅರ್ಹ ತೆರಾದವರು”-ಎಂಬುದನ್ನು ದಯವಿಟ್ಟು “ಅರ್ಹರಾದವರು” ಎಂದು ಓದಿಕೊಳ್ಳಬೇಕಾಗಿ ನಮ್ರ ವಿನಂತಿ. ಇದಿ ಕ್ಲಿಕ್ ಮಾಡಿದ ಬೆರಳಿನ ಪ್ರಮಾದ.

    ಪ್ರತಿಕ್ರಿಯೆ
  6. ಟಿ.ಕೆ.ಗಂಗಾಧರ ಪತ್ತಾರ.

    “ಇದಿ ಕ್ಲಿಕ್ ಮಾಡಿದ ಬೆರಳಿನ ಪ್ರಮಾದ”. ನೋಡಿ ಮತ್ತೆ ಇಲ್ಲೂ ಬೆರಳಿನ ಪ್ರಮಾದ “ಇದು” ಎನ್ನುವುದು “ಇದಿ”ಎಂದಾಗಿಬಿಟ್ಟಿದೆ. ಈ ಬೆರಳಿನ ಅಚಾತುರ್ಯಕ್ಕೆ ಕ್ಷಮೆ ಕೋರುವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: