ಸುಗತ ಬರೆಯುತ್ತಾರೆ: ಗಾಂಧಿ ಮತ್ತು ಗಲ್ಲುಶಿಕ್ಷೆ

ಸುಗತ ಶ್ರೀನಿವಾಸರಾಜು

ಕೃಪೆ: ವಿಜಯ ಕರ್ನಾಟಕ

ಕೆಲವು ದಿನಗಳ ಹಿಂದೆ ಹೆಗ್ಗೋಡಿನಲ್ಲಿ ನೂತನವಾಗಿ ಅರಂಭಗೊಂಡ ‘ಶ್ರಮಜೀವಿ ಆಶ್ರಮ’ಕ್ಕೆ ಹೊರಟಿದ್ದೆ. ಗಾಂಧಿಯ ತತ್ವ್ತಾದರ್ಶಗಳನ್ನು, ಜೀವನಶೈಲಿಯನ್ನು ಗ್ರಾಮೀಣ ನೇಕಾರ ಹೆಣ್ಣುಮಕ್ಕಳಿಗೆ ತಿಳಿಸಿ ಹೇಳುವ ಕನಸಿನೊಂದಿಗೆ ಪ್ರಾರಂಭಗೊಂಡಿ ರುವ ಶಾಲೆ ಇದು. ವಾರ್ಧಾದಲ್ಲಿರುವ ‘ಸೇವಾಗ್ರಾಮ’ ಇದಕ್ಕೆ ಮಾದರಿ. ಹೆಗ್ಗೋಡಿಗೆ ಕರೆದೊಯ್ಯುತ್ತಿದ್ದ ಸ್ಲೀಪರ್ ಬಸ್ಸಿನಲ್ಲಿ, ಅಂಗಾತ ಮಲಗಿ, ಬಸ್ಸಿನ ಛಾವಣಿಯ ಮೇಲೆ ಬಿಡಿಸಿದ್ದ, ಒಂದರೊಳಗೊಂದು ಹೊರಳುವ ಗೆರೆಗಳ ರಂಗೋಲಿಯನ್ನು ದಿಟ್ಟಿಸುತ್ತ ನಾನು ಮರುದಿನ ಪ್ರಸ್ತಾಪಿಸಬೇಕೆಂದಿದ್ದ ವಿಚಾರಗಳ ಬಗ್ಗೆ ಮನಸ್ಸಿನಲ್ಲಿಯೇ ತರ್ಕಿಸಲು, ಟಿಪ್ಪಣಿ ಮಾಡಿಕೊಳ್ಳಲು ಶುರುಮಾಡಿದೆ.
ಈ ದೇಶದ ಪ್ರತಿದಿನದ ಬದುಕಿನಲ್ಲಿ ಗಾಂಧಿ ಎಷ್ಟೊಂದು ಬಾರಿ ಸುಳಿದು ಹೋಗುತ್ತಾರೆ ಎಂಬುದು ನನಗೆ ಮೊದಲು ಅಚ್ಚರಿಯನ್ನುಂಟುಮಾಡಿತು. ಕಳೆದ ಒಂದೆರಡು ವರ್ಷ ಗಳಲ್ಲೇ ನೋಡಿ: ಅಣ್ಣಾ ಹಜಾರೆ ಮತ್ತು ಲೋಕಪಾಲದ ವಿಚಾರಕ್ಕಾಗಿಯೋ; ಮೋದಿ ಮತ್ತು ಗುಜರಾತಿನ ವಿಚಾರಕ್ಕಾಗಿಯೋ; ಹಸಿವು ಮತ್ತು ಆಹಾರ ಭದ್ರತೆಯ ವಿಷಯ ಕ್ಕಾಗಿಯೋ; ಗ್ರಾಮೀಣ ಉದ್ಯೋಗ ಖಾತ್ರಿ ವಿಚಾರಕ್ಕಾಗಿಯೋ; ದಿಲ್ಲಿಯ ಅತ್ಯಾಚಾರದ ಹಿನ್ನೆಲೆಯಲ್ಲಿ ಅಹಿಂಸಾತ್ಮಕ ಹೋರಾಟದ ಕಾರಣಕ್ಕಾಗಿಯೋ, ನಾವು ಒಂದಲ್ಲ ಒಂದು ಕಾರಣಕ್ಕಾಗಿ ಗಾಂಧಿಯನ್ನು ನೆನೆಯುತ್ತಲೇ ಇದ್ದೇವೆ. ಅವರ ತತ್ತ್ವಗಳ ಪ್ರಸ್ತುತತೆಯನ್ನು ಚರ್ಚಿಸುತ್ತಲೇ ಇದ್ದೇವೆ. ಗಾಂಧಿ ಸತ್ತು ದಶಕಗಳು ಕಳೆದರೂ ಅವರ ಮಾತಿಗೆ ಇಂದಿನ ನಮ್ಮ ಮಾತನ್ನು ಒರೆಗೆ ಹಚ್ಚಿ ನೋಡುತ್ತಿದ್ದೇವೆ. ಗಾಂಧಿಯನ್ನು ವೈಯಕ್ತಿಕವಾಗಿ ದ್ವೇಷಿಸುತ್ತ, ರಾಜಕೀಯವಾಗಿ ವಿರೋಧಿಸುತ್ತಿದ್ದವರಿಗೂ ಕೂಡ ಇಂದು ಗಾಂಧಿಯ ಮುಖವಾಡವನ್ನು ಧರಿಸುವ ಅನಿವಾರ್ಯತೆ ಇದೆ. ಒಂದು ದೇಶದ ಸಮಷ್ಟಿ ಪ್ರಜ್ಞೆಯನ್ನು ಹೊಕ್ಕು, ಆತ್ಮಸಾಕ್ಷಿ ಯಾಗಿ ಕಾಯುವುದು ಎಂದರೆ ಇದೇ ಇರಬೇಕು. ಕೆಲವು ಚಿಂತಕರು, ದಾರ್ಶನಿಕರು, ಬರಹಗಾರರು ನಮ್ಮ ಮೈ-ಮನಗಳ ಸುಳಿಯಲ್ಲಿ ಹೀಗೆ ಸೇರಿಕೊಂಡಿರುತ್ತಾರೆ.

ಈ ಹೊತ್ತು ನಮ್ಮ ಪ್ರಜ್ಞೆಯ ಮೇಲ್ಪದರದಲ್ಲಿ ಸುಳಿದಾಡುತ್ತಿರುವ ವಿಚಾರ ಗಲ್ಲುಶಿಕ್ಷೆಯ ಕುರಿತಾದ್ದು. ಗಾಂಧಿಯ ನಾಡಿನಲ್ಲಿ ನಾವು ಗಲ್ಲುಶಿಕ್ಷೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು? ಅಹಿಂಸೆ, ಅಸಹಕಾರ ಮತ್ತು ಸತ್ಯಾಗ್ರಹದ ತತ್ತ್ವಗಳ ಹಿನ್ನೆಲೆಯಲ್ಲಿ, ದ್ವೇಷದ ಮತ್ತು ಪ್ರತೀಕಾರದ ಸಂವಾದವನ್ನು ಅರಿಯುವುದು ಹೇಗೆ? ಗಾಂಧಿ ಇದ್ದಿದ್ದರೆ ಇದಕ್ಕೆ ಹೇಗೆ ಪ್ರತಿಸ್ಪಂದಿಸುತ್ತಿದ್ದರು? ಇಂತಹ ಅನೇಕ ಪ್ರಶ್ನೆಗಳು ನಮಗೆ ಎದುರಾಗದಿರವು. ಗಾಂಧಿಯ ಜೀವಿತಾ ವಧಿ ಯಲ್ಲಿ ಸಂಭವಿಸಿದ ಒಂದು ಗಲ್ಲುಶಿಕ್ಷೆಗೆ ಅವರು ಪ್ರತಿಕ್ರಿಯಿಸಿದ ರೀತಿ; ಆ ಚಾರಿತ್ರಿಕ ಸಂದರ್ಭದಲ್ಲಿ ಅವರು ಸಿಕ್ಕಿಹಾಕಿಕೊಂಡ ವಿವಾದದ ಸುಳಿ ಹಾಗೂ ಎದುರಿಸಿದ ಆರೋಪ, ನಮ್ಮ ಅನೇಕ ಪ್ರಶ್ನೆಗಳಿಗೆ ಭಾಗಶಃ ಉತ್ತರವನ್ನು ಅಥವಾ ಉತ್ತರದ ಸುಳಿವನ್ನು ನೀಡಬಹುದು. ಈ ದಿಕ್ಕಿನಲ್ಲಿ ಹೆಚ್ಚಿನ ಗೊಂದಲವಾದರೂ ಅದು ಉತ್ತರ ಕಂಡುಕೊಳ್ಳುವ ಹಾದಿಯಲ್ಲಿ ಆಗುವ ಹೈರಾಣ ಅಷ್ಟೆ ಎಂದು ತಿಳಿಯಬೇಕು.
ಅದು 1931 ರ ಫೆಬ್ರವರಿ ತಿಂಗಳು. ದಿಲ್ಲಿಯಲ್ಲಿ ಚಳಿ ಕೊಂಚ ತಗ್ಗಲು ಪ್ರಾರಂಭಿಸಿತ್ತು. ಗಾಂಧಿ ಮತ್ತು ಅಂದಿನ ವೈಸ್‌ರಾಯ್ ಲಾರ್ಡ್ ಇರ್ವಿನ್ ನಡುವೆ ಮಹತ್ವದ ಮಾತುಕತೆ ಏರ್ಪಟ್ಟಿತ್ತು. ಭಾರತದಾದ್ಯಂತ ನಡೆಯುತ್ತಿದ್ದ ಅಸಹಕಾರ ಚಳವಳಿಯನ್ನು ಅಂತ್ಯಗೊಳಿಸು ವು ದಕ್ಕೆ ಗಾಂಧಿ ಇರ್ವಿನ್ ಮುಂದೆ ಆರು ಷರತ್ತುಗಳನ್ನು ಇರಿಸಿದ್ದರು. ಅವುಗಳ ಪೈಕಿ ಬ್ರಿಟಿಷ್ ಪೊಲೀಸರ ದೌರ್ಜನ್ಯದ ವಿರುದ್ಧ ತನಿಖೆ; ಉಪ್ಪನ್ನು ತಯಾರಿಸುವ ಹಾಗೂ ವಿದೇಶಿ ಬಟ್ಟೆ ಅಂಗಡಿಗಳ ವಿರುದ್ಧ ಧರಣಿ ಕೂರುವ ಸ್ವಾತಂತ್ರ್ಯ ಮತ್ತು 90,000ಕ್ಕೂ ಹೆಚ್ಚು ರಾಜಕೀಯ ಬಂದಿಗಳ ಬಿಡುಗಡೆಯ ವಿಚಾರಗಳು ಸೇರಿದ್ದವು. ಗಾಂಧಿ ಇರ್ವಿನ್‌ರನ್ನು ಎಂಟು ಬಾರಿ ಭೇಟಿ ಮಾಡಿ, ಒಟ್ಟು 24 ಗಂಟೆಗಳ ಸಂಧಾನ ನಡೆಸಿದ್ದರು. ಗಾಂಧಿ ಮತ್ತು ಇರ್ವಿನ್‌ರ ಈ ಸಂಧಾನ ಮಾತುಕತೆ ಯುರೋಪಿ ನಾದ್ಯಂತ ಕುತೂಹಲವನ್ನು ಮೂಡಿಸಿತ್ತು. ಈ ಮಾತುಕತೆಯ ಸಂದರ್ಭದಲ್ಲಿಯೇ ಅಂದಿನ ಬ್ರಿಟನ್‌ನ ಟೋರಿ ಪಕ್ಷದ ನಾಯಕ ಮತ್ತು ಭಾವಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಗಾಂಧಿಯನ್ನು ‘ಅರೆನಗ್ನ ಫಕೀರ’ ಎಂದು ಹೀಯಾಳಿಸಿದ್ದು.

ಇದೇ ಸಮಯದಲ್ಲಿ ಲಾಹೋರಿನಲ್ಲಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಗಲ್ಲುಶಿಕ್ಷೆಯ ಕ್ಷಣಗಣನೆ ಪ್ರಾರಂಭವಾಗಿತ್ತು. ಗಾಂಧಿ ಈ ಕ್ರಾಂತಿಕಾರಿಗಳ ಗಲ್ಲುಶಿಕ್ಷೆಯನ್ನು ಮಾಫಿ ಮಾಡುವ ವಿಚಾರವನ್ನು ಇರ್ವಿನ್ ಮುಂದೆ ಪ್ರಸ್ತಾಪಿಸಿದ್ದರೂ ಇರ್ವಿನ್ ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಆದರೆ, ಗಾಂಧಿಯ ಮೇಲೆ, ಪ್ರಮುಖ ವಾಗಿ ಎಡಪಂಥೀಯ ಚರಿತ್ರೆಗಾರರ ಆರೋಪ ಇರುವುದು ಅವರು ಇರ್ವಿನ್‌ರ ಬಳಿ ಈ ಮಾಫಿ ವಿಚಾರವನ್ನು ಸಾಕಷ್ಟು ಬಲವಾಗಿ ಪ್ರತಿಪಾದಿಸಲಿಲ್ಲ ಮತ್ತು ಸಂಧಾನದ ಔಪ ಚಾರಿಕ ಪಟ್ಟಿಯಲ್ಲಿ ಈ ವಿಚಾರವನ್ನು ಇರಿಸಿರಲಿಲ್ಲ ಎಂಬುದು. ಗಾಂಧಿ ಮತ್ತು ಇರ್ವಿನ್‌ರ ನಡುವೆ ಸ್ನೇಹ ಮತ್ತು ಗೌರವಾದರಗಳಿದ್ದವು, ಹಾಗಾಗಿ ಅವರು ಒಮ್ಮನಸ್ಸಿನಿಂದ ಒತ್ತಾಯಿ ಸಿದ್ದರೆ ಆ ಮೂವರು ಕ್ರಾಂತಿಕಾರಿಗಳು ಬದುಕುಳಿಯುತ್ತಿದ್ದರು ಎಂಬುದು ಎಡಪಂಥೀ ಯರ ವಾದ. ಈ ಮಾತನ್ನು ನಾವು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಆದರೆ, ಈ ಆರೋಪವನ್ನು ಗಾಂಧಿ ಭೇದಿಸಿದ ರೀತಿ ಮತ್ತು ತಾವು ನಂಬಿದ ಅಹಿಂಸೆಯ ತತ್ತ್ವವನ್ನು ಬಿಟ್ಟುಕೊಡದೆ ತಂತಿಯ ಮೇಲೆ ನಡೆದ ನಡಿಗೆಯನ್ನು ಗಮನಿಸುವುದು ಮುಖ್ಯ.
1931ರ ಮಾರ್ಚ್ ತಿಂಗಳ 15ರಂದು, ಕಾಂಗ್ರೆಸ್ ಮತ್ತು ಬ್ರಿಟಿಷ್ ಸರಕಾರದ ನಡುವೆ, ಗಾಂಧಿ ಮತ್ತು ಇರ್ವಿನ್‌ರ ಮೂಲಕ ಒಪ್ಪಂದ ಏರ್ಪಟ್ಟ ಮೇಲೆ, ಗಾಂಧಿ ದಿಲ್ಲಿಯಲ್ಲಿ ಸುಮಾರು 50,000 ಜನರು ಸೇರಿದ್ದ ಒಂದು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇದ್ದಕ್ಕಿದ್ದ ಹಾಗೆ ಸಭೆಯಲ್ಲಿ ಒಂದು ಎಡಪಂಥೀಯ ಕರಪತ್ರವನ್ನು ಎಸೆಯಲಾಗುತ್ತದೆ. ಆ ಕರಪತ್ರವನ್ನು ಕೈಗೆತ್ತಿಕೊಂಡ ಗಾಂಧಿ ಅದರಲ್ಲಿ ಭಗತ್ ಸಿಂಗ್ ಪ್ರಸ್ತಾಪ ಇರುವುದನ್ನು ಕಂಡು ಹೀಗೆ ಹೇಳುತ್ತಾರೆ (ಇದನ್ನು ಡಿ.ಜಿ. ತೆಂಡುಲ್ಕರ್ ತಮ್ಮ ಎಂಟು ಸಂಪುಟಗಳ ‘ಮಹಾತ್ಮ’ ಕೃತಿಯಲ್ಲಿ ಅತ್ಯಂತ ವಿಸ್ತೃತವಾಗಿ ಪ್ರಸ್ತಾಪಿಸುತ್ತಾರೆ.): ”ಬಹುಶಃ ನೀವುಗಳು ವೈಸ್‌ರಾಯ್ ಜತೆಯಲ್ಲಿ ಸಂಧಾವನ ನಡೆಸಿದ್ದರೆ ನನಗಿಂತಲೂ ಹೆಚ್ಚಿನ ರಿಯಾಯಿತಿ ಯನ್ನು ಪಡೆಯುತ್ತಿದ್ದೀರೋ ಏನೋ… ಈ ಸಂಧಾನ ನಾನು ಒಬ್ಬ ವ್ಯಕ್ತಿಯಾಗಿ ನಡೆಸುತ್ತಿರಲಿಲ್ಲ. ಕಾಂಗ್ರೆಸ್ಸಿನ ಪ್ರತಿನಿಧಿಯಾಗಿ ಭಾಗವಹಿಸಿದ್ದೆ… ಈ ಸಂಧಾನದ ಸಂದರ್ಭ ದಲ್ಲಿ ನಾವು ನ್ಯಾಯದ ಎಲ್ಲೆಯನ್ನು ಮೀರುವಂತಿರಲಿಲ್ಲ ಮತ್ತು ನಮಗೆ ನಾವೇ ಮಾಡಿಕೊಂಡ ಸತ್ಯ ಮತ್ತು ಅಹಿಂಸೆಯ ಶಪಥವನ್ನು ತೊರೆಯುವಂತಿರಲಿಲ್ಲ.”
ಅದೇ ಸಭೆಯಲ್ಲಿ ಮುಂದುವರಿದು ಗಾಂಧಿ ಹೇಳುತ್ತಾರೆ: ”ನೀವು ಹಿಂಸೆಯ ಮಾರ್ಗದಲ್ಲಿ ನಡೆದವರ ಬಿಡುಗಡೆಯನ್ನು ಪಡೆಯಬೇಕು ಎಂಬ ಪ್ರಸ್ತಾಪವನ್ನು ಇರಿಸಿದ್ದೀರಿ. ನೀವು ಹೀಗೆ ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ನಂಬಿರುವ ಅಹಿಂಸೆಯ ತತ್ತ್ವದಡಿಯಲ್ಲಿ ಕಳ್ಳಕಾಕರಿಗೆ, ಡಕಾಯಿತರಿಗೆ ಮತ್ತು ಕೊಲೆಗಡುಕರಿಗೂ ನಾನು ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹೇಳುವುದಿಲ್ಲ. ಹಾಗಿರುವಾಗ ನಾನು ಭಗತ್ ಸಿಂಗ್ ತರಹದ ವೀರ ಯೋಧರನ್ನು ಗಲ್ಲಿಗೇರಿಸಬೇಕು, ಕ್ಷಮಿಸಬಾರದು ಎಂದು ಹೇಳುವುದು ಸಾಧ್ಯವೇ?… ನೀವು ಹಿಂಸೆಯ ಮಾರ್ಗದಲ್ಲಿ ನಡೆದರೆ, ಅದರಲ್ಲಿ ವಿಶ್ವಾಸ ವಿರಿಸಿ ದರೆ ಒಬ್ಬ ಭಗತ್ ಸಿಂಗ್‌ನನ್ನು ಉಳಿಸುವುದಿರಲಿ, ನೂರಾರು ಭಗತ್ ಸಿಂಗ್‌ರನ್ನು ಬಲಿಕೊಡಬೇಕಾಗುತ್ತದೆ,” ಎಂದು ಎಚ್ಚರಿಸುತ್ತಾರೆ. ಅತ್ಯಂತ ಇಕ್ಕಟ್ಟಿನ, ಭಾವನಾತ್ಮಕವಾಗಿ ಉದ್ರೇಕಕಾರಿ ಪರಿಸ್ಥಿತಿಯಲ್ಲೂ ವಿಚಲಿತ ಗೊಳ್ಳದೆ ತಣ್ಣಗೆ ತಮ್ಮ ವಾದವನ್ನು ಮಂಡಿಸುತ್ತಾರೆ. ಭಗತ್ ಸಿಂಗ್‌ನ ಹಿಂಸೆಯ ಮಾರ್ಗ ದಲ್ಲಿ ಅವರಿಗೆ ಕಿಂಚಿತ್ತೂ ನಂಬಿಕೆ ಇರಲಿಲ್ಲ. ಆದರೆ, ಅದೇ ಹಿಂಸೆಯ ಅಸ್ತ್ರವನ್ನು ಆತನ ವಿರುದ್ಧ ಬಳಸಬೇಕು ಎಂದು ಅವರು ಪ್ರತಿಪಾದಿಸುವುದಿಲ್ಲ. ನಮ್ಮ ಕಾಲದಲ್ಲಿ ತಾನು ಗಾಂಧಿವಾದಿ ಎಂದು ಹೇಳಿಕೊಂಡು, ಭ್ರಷ್ಟರಿಗೆ ಗಲ್ಲಾಗಬೇಕು ಎಂದು ಹುಯ್ಯಲಿ ಡುವ ಅಣ್ಣಾ ಹಜಾರೆಗೂ, ಗಾಂಧಿಯ ನೈತಿಕ ಔನ್ನತ್ಯಕ್ಕೂ ಇರುವ ಅಂತರವನ್ನು ನಾವು ಅಳೆಯಲು ಪ್ರಯತ್ನಿಸುವುದೂ ವ್ಯರ್ಥ.
ದಿಲ್ಲಿಯ ಈ ಸಭೆ ನಡೆದ ನಾಲ್ಕು ದಿನದ ನಂತರ, ಅಂದರೆ 1931ರ ಮಾರ್ಚ್ 19ರಂದು, ಗಾಂಧಿ ಇರ್ವಿನ್ ಅವರನ್ನು ಭೇಟಿ ಮಾಡಿ ಮತ್ತೆ ರಾಜಕೀಯ ಬಂದಿಗಳ ಬಿಡುಗಡೆಯ ವಿಚಾರ ಪ್ರಸ್ತಾಪಿಸಿ, ಭಗತ್ ಸಿಂಗ್ ಗಲ್ಲುಶಿಕ್ಷೆಯನ್ನು ಕೈಬಿಡಬೇಕು ಎಂದು ಒತ್ತಾಯಿಸುತ್ತಾರೆ. ಇದನ್ನು ಇರ್ವಿನ್ ತಮ್ಮ ನಂತರದ ಭಾಷಣವೊಂದರಲ್ಲಿ ಹೀಗೆ ನೆನೆಯುತ್ತಾರೆ: ”ಗಾಂಧಿಯವರು ಅತ್ಯಂತ ಕಳಕಳಿಯಿಂದ ನನ್ನ ಮುಂದೆ ಇಟ್ಟ ಪ್ರಸ್ತಾಪವನ್ನು ಕೇಳಿ ನನಗೆ ಮಹದಾಶ್ಚರ್ಯವಾಯಿತು. ಅಹಿಂಸೆಯ ಸಂತನೊಬ್ಬ ತನ್ನ ವಿರುದ್ಧ ದಿಕ್ಕಿನಲ್ಲಿ ನಿಂತ ಹಿಂಸೆಯ ಭಕ್ತನ ಪ್ರಾಣಭಿಕ್ಷೆಯನ್ನು ಕೇಳುತ್ತಿದ್ದುದು ನನಗೆ ಅತ್ಯಂತ ವಿಚಿತ್ರವೆನಿಸಿತು.”
ಗಾಂಧಿ ಮತ್ತು ಇರ್ವಿನ್‌ರ ನಡುವೆ ಭಗತ್ ಸಿಂಗ್‌ನ ವಿಚಾರ ಇಲ್ಲಿಗೇ ನಿಲ್ಲುವುದಿಲ್ಲ. 1931ರ ಮಾರ್ಚ್ 23ನೇ ತಾರೀಖು ಇರ್ವಿನ್‌ಗೆ ಪತ್ರ ಬರೆದು, ”ನೀನೊಬ್ಬ ಅತ್ಯುತ್ತಮ ಕ್ರಿಶ್ಚಿಯನ್. ದಯೆಯ ಪಾಠ ನಿನಗೆ ನನಗಿಂತಲೂ ಚೆನ್ನಾಗಿ ತಿಳಿದಿದೆ,” ಎಂದು ಗಾಂಧಿ ಹೇಳುತ್ತಾರೆ. ಇರ್ವಿನ್ ಜಗ್ಗುವುದಿಲ್ಲ. ಅಂದೇ ರಾತ್ರಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುವನ್ನು ಲಾಹೋರಿನ ಜೈಲಿನಲ್ಲಿ ಗಲ್ಲಿಗೇರಿಸುತ್ತಾರೆ. ”ಭಾರತ ಮತ್ತು ಬ್ರಿಟಿಷ್ ಸರಕಾರದ ನಡುವೆ ಈಗ ಭಗತ್ ಸಿಂಗರ ರಕ್ತ ಹರಿಯುತ್ತಿದೆ,” ಎಂದು ಜವಾಹರ್‌ಲಾಲ್ ನೆಹರು ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ಗಾಂಧಿ, ಭಗತ್ ಸಿಂಗ್ ವಿಚಾರದಲ್ಲಿ ತಮಗಾದದ್ದು ಹಿನ್ನಡೆ ಎಂದು ಭಾವಿಸದೆ ಅಥವಾ ತಮ್ಮ ವಿಚಾರಧಾರೆಗೆ ಒಗ್ಗದ ವ್ಯಕ್ತಿಯ ಬಗ್ಗೆ ತಾವು ವಕಾಲತ್ತು ವಹಿಸಬಾರದು ಎಂದು ಅಂದುಕೊಳ್ಳದೆ ಕಾಂಗ್ರೆಸಿಗರಿಗೆ ಅಹಿಂಸೆಯ ಧ್ಯೇಯದ ಬಗ್ಗೆ ಮತ್ತೊಮ್ಮೆ ಜ್ಞಾಪಿಸುತ್ತಾರೆ: ”ನಾವು ಕೋಪಕ್ಕೆ ತುತ್ತಾಗಿ, ಹತಾಶರಾಗಿ, ನಮ್ಮ ನಿಜಮಾರ್ಗವನ್ನು ಮರೆಯಬಾರದು. ಭಗತ್ ಸಿಂಗ್ ಮತ್ತು ಅವರ ಸ್ನೇಹಿತರ ಗಲ್ಲು ಶಿಕ್ಷೆ ಮಾಫಿ ಮಾಡಬೇಕು ಎಂಬುದು ನಮ್ಮ ಮೂಲ ಒಪ್ಪಂದದ ಭಾಗವಾಗಿರಲಿಲ್ಲ. ಆದ್ದರಿಂದ ಸರಕಾರ ಒಪ್ಪಂದವನ್ನು ಮುರಿದಿದೆ ಎಂದು ನಾವು ಆರೋಪಿಸಲು ಸಾಧ್ಯವಿಲ್ಲ. ಬ್ರಿಟಿಷ್ ಸರಕಾರ ಗೂಂಡಾ ವರ್ತನೆಯನ್ನು ಮೆರೆದಿದೆ ಎಂದಷ್ಟೆ ಹೇಳಬಹುದು. ಸರಕಾರದ ಈ ಘೋರ ತಪ್ಪು ನಮಗೆ ಸ್ವಾತಂತ್ರ್ಯವನ್ನು ಗಳಿಸಲು ಹೆಚ್ಚಿನ ಶಕ್ತಿಯನ್ನು, ಸ್ಪೂರ್ತಿಯನ್ನು ನೀಡಿದೆ,” ಎಂದು ತಮ್ಮ ಮಾತು ಮುಗಿಸುತ್ತಾರೆ.
ಇದಿಷ್ಟು ಗಾಂಧಿ ಬದುಕಿದ್ದಾಗ ಒಂದು ಗಲ್ಲುಶಿಕ್ಷೆಯ ಸುತ್ತ ನಡೆದ ಚರ್ಚೆ. ಗಾಂಧಿಯ ಸಾವಿನ ನಂತರ ನಡೆದ ಗಲ್ಲು ಶಿಕ್ಷೆಯ ಚರ್ಚೆ ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯ ಕುರಿತಾಗಿತ್ತು. ಗೋಡ್ಸೆಗೆ ಗಲ್ಲು ಶಿಕ್ಷೆ ಗಾಂಧಿಯ ಅಹಿಂಸೆಯ ತತ್ತ್ವಗಳಿಗೆ ವಿರುದ್ಧ ಎಂಬ ಚರ್ಚೆ ಭಾರತದಲ್ಲಿ ನಡೆಯುವುದಕ್ಕಿಂತ ಹೆಚ್ಚಾಗಿ ಯುರೋಪಿನಲ್ಲಿ ನಡೆಯಿತು. ಅಹಿಂಸೆಯ ಮಾರ್ಗ ತುಳಿಯುವ ‘ಚರ್ಚಿನ ಸ್ನೇಹಿತರು’ ಎಂದು ಗುರುತಿಸಿ ಕೊಳ್ಳುವ ‘ಕ್ವೇಕರ್ಸ್’ ಪಂಗಡ, ಗೋಡ್ಸೆಗೆ ಗಾಂಧಿಯ ತತ್ತ್ವದ ದಯೆ ಸಿಗಬೇಕು, ಗಲ್ಲಾಗಬಾರದು ಎಂದು ಹೇಳುತ್ತದೆ. ಗಾಂಧಿ ತಮ್ಮ ಹಂತಕನಿಗೆ ಮರಣದಂಡನೆ ವಿಧಿಸುವು ದನ್ನು ಒಪ್ಪುತ್ತಿರಲಿಲ್ಲ ಎಂದು ವಾದಿಸುತ್ತದೆ. ಆ ಸಂಸ್ಥೆಯ ರೆಜಿನಾಲ್ಡ್ ರೆನಾಲ್ಡ್ಸ್ ಮತ್ತು ರಿಚರ್ಡ್ ಗ್ರೆಗ್ ಭಾರತಕ್ಕೆ ಬಂದು ಈ ವಾದವನ್ನು ಮಂಡಿಸುತ್ತಾರೆ. ನೊಬೆಲ್ ಪಾರಿತೋ ಷಕ ಪಡೆದಿದ್ದ ಅಮೆರಿಕನ್ ಬರಹಗಾರ್ತಿ ಪರ್ಲ್ ಬಕ್ ಕೂಡ ಇದೇ ವಾದ ಮಂಡಿಸು ತ್ತಾರೆ. ಆದರೆ, ದ್ವೇಷ ಮತ್ತು ಪ್ರತೀಕಾರದ ಗದ್ದಲದಲ್ಲಿ ಇದು ಮುಳುಗಿಹೋಗುತ್ತದೆ.

‍ಲೇಖಕರು G

February 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

11 ಪ್ರತಿಕ್ರಿಯೆಗಳು

  1. Anil

    ಅಹಿ೦ಸೆ ನಮ್ಮೆಲ್ಲರಲ್ಲೂ ಸುಪ್ತವಾಗಿ ಅಡಗಿರುವ ಅ೦ಶ
    ಗಾ೦ಧಿ ಅದನ್ನು ಸತತವಾಗಿ ಅವಲೋಕಿಸಿ, ಉದ್ದೀಪಿಸಿ ಮತ್ತೊಬ್ಬರಿಗೂ ಅದನ್ನು ಮನಗಾಣಿಸಿದ ಮಹಾನ್ ಚೇತನ.
    ಶ್ರೀನಿವಾಸರ ಲೇಖನ ಇ೦ದಿನ ವಿದ್ಯಮಾನಗಳಿಗೆ ಬಹಳ ಪ್ರಸ್ತುತವಾಗಿದೆ.

    ಪ್ರತಿಕ್ರಿಯೆ
  2. Dr Geetha R Shenoy

    ತಮ್ಮ ಪ್ರತಿಯೊಂದು ನಡೆ, ನುಡಿಯಲ್ಲಿ ಸಮತೂಕವನ್ನು ಕಾಯ್ದುಕೊಳ್ಳುತ್ತಾ ಸಾಮುದಾಯಿಕ ಪ್ರಜ್ಞೆಯಲ್ಲಿ ನಡೆದ ಗಾಂಧೀಜಿಯವರು ಯಾವ ವಿಚಾರಕ್ಕೆ ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸಬೇಕು, ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಜಾಣ್ಮೆ ಮತ್ತು ಕೌಶಲ್ಯ ಹೊಂದಿದ್ದ ವ್ಯಕ್ತಿತ್ವದವರು. ಅವರು ಯಾವುದೇ ಬಿಕ್ಕಟ್ಟಿನ ಸಂದರ್ಭದಲ್ಲಿ ಬೇರೆಯವರು ಹೇಳಿದ್ದನ್ನು ಕೇಳಿ ನಡೆದುಕೊಳ್ಳುವುದಕ್ಕಿಂತ ತನ್ನ ಸ್ವಂತ ಅಭಿಪ್ರಾಯಗಳಿಗೆ ಆದ್ಯತೆ ನೀಡಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದವರು. ಇದಕ್ಕೆ ಒಂದು ಉದಾಹರಣೆ ಭಗತ್‍ಸಿಂಗನ ಗಲ್ಲುಶಿಕ್ಷೆಯ ಪ್ರಸಂಗ. ಗಾಂಧೀಜಿಯವರಿಗೆ ಸಂಬಂಧಿಸಿದ ಇಂತಹ ಅನೇಕ ಉದಾಹರಣೆಗಳು ನಮಗೆ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಕಾಣಲು ಸಿಗುತ್ತವೆ. ಗಾಂಧಿ ಹುಟ್ಟಿ ನಡೆದಾಡಿದ ನಾಡಿನಲ್ಲಿ ಇನ್ನೊಬ್ಬ ಗಾಂಧಿಯನ್ನು ಸೃಷ್ಟಿಸುವ ಹುಂಬತನವನ್ನು ನಡೆಸುವ ನಾವು ಅವರ ತತ್ತ್ವಾದರ್ಶಗಳು ಸಮಕಾಲೀನ ಸಂದರ್ಭಗಳಿಗೆ ಹೇಗೆ ಪ್ರಸ್ತುತವಾಗಬಲ್ಲವು ಎಂಬುದಕ್ಕೆ ಕುರುಡಾಗಿದ್ದೇವೆ. ಈ ನಿಟ್ಟಿನಲ್ಲಿ ಸುಗತ ಅವರ ಪ್ರತಿಕ್ರಿಯೆ ನನಗೆ ನಿಜವಾಗಿಯೂ ಸಂತೋಷವನ್ನು ಉಂಟು ಮಾಡಿದೆ. – ಗೀತಾ ಶೆಣೈ

    ಪ್ರತಿಕ್ರಿಯೆ
  3. pravara

    ಈಗಿನ ಜನ ಗಾಂಧಿಯನ್ನು ಭಾರತ ಪರಮ ಶತ್ರು ಎಂಬಂತೆ ಬಿಂಬಿಸಿಕೊಂಡು ಓಡಾಡುತಿದ್ದಾರೆ, ಸ್ವಾತಂತ್ರ್ಯದ ಸಮಯದಲ್ಲಿ ಎಲ್ಲವನ್ನೂ ತೂಗಿಸಿಕೊಂಡು ಸಂಭಾಳಿಸಿಕೊಂಡು ಶಾಂತಿಯುತವಾಗಿ ಹೋರಾಡಿದ ಆತ ನಿಜ ಮಹಾತ್ಮನೇ ಸರಿ…. ಹಾಗೆ ಭಗತ್ ಸಿಂಗ್ ರ ಗಲ್ಲಿಗೆ ಸಂಬಂದಿಸಿದಂತೆ ನಮ್ಮೊಳಗಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಲೇಖನ ನೀಡುತ್ತದೆ….. ಮತ್ತೆ ಗಾಂಧಿಯನ್ನು ನಮ್ಮೊಳಗೆ ಚಿಗುರಿಸುತ್ತದೆ… ಒಂದೊಳ್ಳೆ ಲೇಖನ ಓದಿಸಿದ್ದಕ್ಕೆ ಧನ್ಯವಾದಗಳು ಸರ್
    -ಪ್ರವರ

    ಪ್ರತಿಕ್ರಿಯೆ
  4. savitri

    ಸರ್ ನಿಮ್ಮ ಲೇಖನದ ಆಶಯ ಚೆನ್ನಾಗಿಯೇ ಇದೆ. ಆದರೆ ನಾವು ಮುಖ್ಯವಾಗಿ , ೬-೭ ದಶಕಗಳ ಹಿಂದಿನ ಸಂದರ್ಭಗಳು ಮತ್ತು ಈಗಿನ ಸಂದರ್ಭಗಳಿಗೆ ಇರುವ ವ್ಯತ್ಯಾಸಗಳನ್ನು ಗಮನಿಸಬೇಕಾದ ಅಗತ್ಯವಿದೆ. ಗಾಂಧೀಜಿ ಇಡೀ ದೇಶದ ಜನತೆ ಸ್ವಾತಂತ್ರ‍್ಯದ ಸಲುವಾಗಿ ಬೃಹತ್ ಪ್ರಮಾಣದಲ್ಲಿ ಸಾಯಬಾರದು, ದೇಶ ಬರಡಾಗಬಾರದು, ಅನಾಥರು-ಅಂಗವಿಕಲರಿಂದ ತುಂಬಿ ಹೋಗಬಾರದು… ಇತ್ಯಾದಿ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅಹಿಂಸೆಯನ್ನು ಛಲ ಬಿಡದೇ ಪಾಲಿಸಿದರೊ ಏನೋ ಅಂತ ನನಗೆ ಅನ್ನಿಸುತ್ತಿದೆ.
    ಇಂದಿನ ಗಲ್ಲು ಶಿಕ್ಷೆಗಳು ನಡೆಯುತ್ತಿರುವುದು ಯಾವ ಯಾವೆಲ್ಲ ಕೃತ್ಗಯಗಳಿಗೆ ಎಂಬುದು ಎಲ್ಲರಿಗೂ ಸುವೇದ್ಯ. ಪ್ರಸ್ತುತ ಇಂತಹ ಪ್ರಕರಣಗಳ ಚುಕ್ಕಾಣಿ ಹಿಡಿದವರನ್ನು ಮತ್ತು ಅಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಗಾಂಧೀ ತತ್ವದ ಪ್ರಕಾರ ಕ್ಷಮಿಸುವುದಾದರೆ ಅಂತಹ ಕೃತ್ಯಗಳು ಕಡಿಮೆಯಾಗುತ್ತವೆಯೇ? ನಡೆಯದಿರುತ್ತವೆಯೇ? ಗಲ್ಲಿಗೇರಿಸುವುದರಿಂದ ಅಂತಹ ಕೃತ್ಯಗಳನ್ನು ಸಂಪೂರ್ಣ ತಡೆಗಟ್ಟಲಾಗುತ್ತದೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ. ಆದರೆ ಸಂಪೂಣ ತಡೆಗಟ್ಟಲಾಗದಿದ್ದರೂ ಕನಿಷ್ಠ ಪಕ್ಷ ತಪ್ಪು/ಅಪರಾಧ ಮಾಡುವವರ ಪ್ರಮಾಣ ಗಲ್ಲಿನ ಭಯದಿಂದಲಾದರೂ ಕಡಿಮೆಯಾಗಬಹುದಲ್ಲವೇ? ನಿರಪರಾಧಿಗಳನ್ನು ಕೊಲ್ಲುವ, ನಿರಪರಾಧಿಗಳ ಮೇಲೆ ಅತ್ಯಾಚಾರವೆಸಗುವ ದ್ರೋಹಿಗಳನ್ನು ಕ್ಷಮಿಸುವುದೇ? ಎಷ್ಟೋ ಕುಟುಂಬಗಳ ಮಕ್ಕಳನ್ನು ಅನಾಥರನ್ನಾಗಿಸಿದ, ಎಷ್ಟೋ ಹೆಂಗಳೆಯರ ಮಾನ-ಪ್ರಾಣ ಹರಣ ಮಾಡಿದ, ಎಷ್ಟೋ ಹೆಂಗಳೆಯರ ಮಾಂಗಲ್ಯ ಭಾಗ್ಯ ಕಸಿದಕೊಂಡ ದುರಾತ್ಮರನ್ನು ಮಹಾತ್ಮರ ತತ್ವದಡಿ ಮನ್ನಿಸುವುದು ಸರಿಯೇ?
    ಎಲ್ಲ ಕಾಲಕ್ಕೂ ನಮ್ಮ ಯಾವುದೇ ಹಿರಿಯರು ಪಾಲಿಸಿದ, ಆಚರಿಸಿದ ತತ್ವ-ಮೌಲ್ಯಗಳು ನೂರಕ್ಕೆ ನೂರು ಅನ್ವಯವಾಗುವುದಿಲ್ಲ. ಈ ಮಾತನ್ನು ಗಾಂಧೀಜಿ ತತ್ವಗಳಿಗೂ ಅನ್ವಯಿಸಬಹುದು. ಎನ್ನಿಸುವಷ್ಟರ ಮಟ್ಟಿಗೆ ಅಹಿಂಸೆಯ ಮಾರ್ಗ ಒಳ್ಳೆಯದು. ಆದರೆ ಕೇಡಿಗಳಿಗೆ ಕೇಡೇ ಗತಿಯಾಗಬೇಕು. ಅಂದರೆ ಮಾತ್ರ ಪ್ರಸ್ತುತ ವ್ಯವಸ್ಥೆಯಲ್ಲಿ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಿದೆ.

    ಪ್ರತಿಕ್ರಿಯೆ
  5. ಪಂಡಿತಾರಾಧ್ಯ ಮೈಸೂರು

    ಗಲ್ಲು ಶಿಕ್ಷೆಯ ಬಗ್ಗೆ ಗಾಂಧೀವಾದಿಯಾಗಿ ಮಾತನಾಡಿದ ಹಜಾರೆ ಆಭಿಪ್ರಾಯ ಹಜಾರೆಯವರನ್ನು ಗಾಂಧಿಯಾಗಿ ಸಮೀಕರಿಸಿ ನೋಡುವುದರ ವಿಸಂಗತಿಯನ್ನು ಸೂಚಿಸುತ್ತದೆ. ಆಪರಾಧಗಳನ್ನು ತಡೆಯುವ ಎಚ್ಚರವಾಗಿ ಗರಿಷ್ಠ ಗಲ್ಲು ಶಿಕ್ಷೆ ಇರಬೇಕಾದುದರ ಅಗತ್ಯವಿರುವುದನ್ನು ಹಗುರಗೊಳಿಸಬಾರದು. ಕೊಲೆ, ಆತ್ಯಾಚಾರಗಳಿಗೆ ಬಲಿಯಾದವರ ಹತ್ತಿರದವರೂ ಆಪರಾಧಿಗಳಿಗೆ ಕ್ಷಮೆಯನ್ನೇ ನೀಡಬಹುದು. ಅದರೆ ನ್ಯಾಯಪಾಲನೆಯೇ ಆದನ್ನು ಪ್ರತಿಪಾದಿಸುವುದು ಆಪರಾಧಿಗಳಿಗೆ ಬಲಿಯಾದವರಿಗೆ ನ್ಯಾಯವನ್ನು ನಿರಾಕರಿಸಿದಂತೆ.

    ಪ್ರತಿಕ್ರಿಯೆ
  6. ಉದಯಕುಮಾರ್ ಹಬ್ಬು

    ಯಾವುದೇ ತತ್ವಬದ್ಧತೆಗಾಗಿ ಹೋರಾಟ ಸೋಲುವುದು ರಾಜಾಧಿಕಾರದ ದಬ್ಬಾಳಿಕೆ ಎದುರು. ಆದರೆ ಗಾಂಧಿ ಓರ್ವ ನೈತಿಕ, ತಾತ್ವಿಕ ನಾಯಕನಾಗಿ ಮುತ್ಸದ್ದಿತನದಿಂದಲೇ ಭಗತ್ ಸಿಂಗನ ವಿಷಯದಲ್ಲಿ ವ್ಯವಹರಿಸಿದ್ದಾರೆ. ಅಹಿಂಸೆ ಮತ್ತು ಸತ್ಯಾಗ್ರಹ ಗಾಂಧೀಜಿಯವರ ತತ್ವಗಳಾಗಿ, ಅವುಗಳನ್ನು ಎಂದೂ ಬಿಡದ ತಾತ್ವಿಕರಾಗಿ ಬದ್ಧರಾಗಿ ನಡೆದರು ಎನ್ನುವದರ ಬಗ್ಗೆ ಸಂಶಯ ಬೇಡ. ಲೇಖಕರು ಹೇಳಿದಂತೆ ತಂತಿಯ ಮೇಲೆ ನಡೆದ ಸಾಹಸ ಮಾಡಿದ್ದಾರೆ. ಮನುಷ್ಯ ಅತ್ಯಂತ ಅಮೂಲ್ಯವಾದ ಸಂಪತ್ತು. ಕೊಲೆಗಡುಕರಿಗೂ ಗಲ್ಲು ಶಿಕ್ಷೆಯನ್ನು ಗಲ್ಲು ಬಯಸದ ಗಾಂಧೀಜಿಯವಋ ಬಹುಶಃ ಕಸಬ್ ನಿಗೂ ಕ್ಷಮಾದಾನ ಕೊಡಬೇಕೆಂದು ಕೇಳುತ್ತಿದ್ದರೋ ಹೇಗೆ? ಇವೆಲ್ಲ ಉಹಾಪೋಹಗಳು ಅಲ್ಲ. ಖಂಡಿತವಾಗಿ ಕಸಬ್ ನಿಗೆ ಕ್ಷಮಾದಾನ ಕೊಡಿಸುವಲ್ಲಿ ಗಾಂಧೀಜಿಯವರು ಪ್ರಧಾನಪತ್ರ ವಹಿಸುತ್ತಿದ್ದರು. ಉದಯಕುಮಾರ ಹಬ್ಬು, ಕಿನ್ನಿಗೋಳಿ ದ ಕ

    ಪ್ರತಿಕ್ರಿಯೆ
  7. ಎಚ್. ಸುಂದರ ರಾವ್

    ಗಾಂಧೀಜಿ ಮನುಷ್ಯರಿಗೆ ಗಲ್ಲು ಶಿಕ್ಷೆ ಕೊಡುವುದನ್ನು ಮಾತ್ರ ಅಲ್ಲ – ಬಹುಶಃ – ಪ್ರಾಣಿಹತ್ಯೆಯನ್ನೂ ವಿರೋಧಿಸುತ್ತಿದ್ದರು. ಮನುಷ್ಯರಿಗಾದರೋ, ಅವರು ಮಾಡಿದ ಅಪರಾಧಕ್ಕೆ ಮರಣದಂಡನೆ; ಪ್ರಾಣಿಗಳು ಪ್ರಾಣಿಗಳಾಗಿ ಹುಟ್ಟಿದ್ದು ಬಿಟ್ಟರೆ ಬೇರೆ ಯಾವ ತಪ್ಪೂ ಮಾಡುವುದಿಲ್ಲ. ಆದರೂ ಅವುಗಳಿಗೆ ದಿನದಿನವೂ ಮರಣದಂಡನೆ!
    “ತಾನು ಸಾಯಬೇಕು, ಸ್ವರ್ಗ ಕಾಣಬೇಕು” ಎನ್ನುತ್ತದೆ ಗಾದೆ. “ನನ್ನ ಎರಡು ವರ್ಷದ ಹೆಣ್ಣು ಮಗುವಿನ ಮೇಲೆ ಯಾರಾದರೂ ಅತ್ಯಾಚಾರ ಮಾಡಿ ಕೊಂದು ಹಾಕಿದರೆ, ಮದುವೆ ನಿಶ್ಚಯವಾದ ನನ್ನ ಮಗಳ ಮುಖಕ್ಕೆ ಯಾರಾದರೂ ಆಸಿಡ್ ಚೆಲ್ಲಿದರೆ ನನ್ನ ಪ್ರತಿಕ್ರಿಯೆ ಏನಾಗಿರುತ್ತದೆ” ಎಂದು ಒಬ್ಬೊಬ್ಬನೂ/ಳೂ ಯೋಚಿಸಿ, ಗಲ್ಲು ಶಿಕ್ಷೆ ಬೇಕೋ ಬೇಡವೋ ಎಂಬುದರ ಬಗ್ಗೆ ನಿರ್ಣಯ ಕೊಡಬೇಕೋ ಏನೋ.
    -ಎಚ್. ಸುಂದರ ರಾವ್

    ಪ್ರತಿಕ್ರಿಯೆ
  8. Adithya

    ಒಂದು ಜೀವಿಯ ಆಹಾರ ಮತ್ತೊಂದು ಜೀವಿಯೇ ವಿನಃ ಕಲ್ಲು-ಮಣ್ಣು ಜೀರ್ಣಿಸಿ ಕೊಳ್ಳಲು ನಾವು ಅತೀಸೂಕ್ಷ್ಮ ಜೀವಿಗಳಲ್ಲ. ಸಸ್ಯಜೀವಿಗಳಿಗೆ ಬಾಯಿಲ್ಲ ಕೆಂಪು ರಕ್ತವಿಲ್ಲ ಹಾಗಾಗಿ ನಮಗೆ ಜೀವಹಾನಿ ಅರಿವಿಗೆ ಬರುವುದಿಲ್ಲ, ಪಾಪ ಪ್ರಜ್ಞೆ ಕಾಡುವುದಿಲ್ಲ.

    ಪ್ರತಿಕ್ರಿಯೆ
    • ಪಂಡಿತಾರಾಧ್ಯ ಮೈಸೂರು

      ಆದು ಪ್ರಾಣಿ ಜಗತ್ತಿನ ನಿಯಮ. ಎಷ್ಟೇ ದುರ್ಬಲವಾದರೂ ಬಲಶಾಲಿಯೊಂದಿಗೆ ಪ್ರಾಣಭಯವಿಲ್ಲದೆ ಬದುಕುವುದು ಸಾಧ್ಯವಾಗಬೇಕು ಎನ್ನುವುದು ಮನುಷ್ಯನೇ ಮಾಡಿಕೊಂಡ ಧರ್ಮ. ಇನ್ನೊಂದು ಜೀವಕ್ಕೆ ಹಾನಿಮಾಡಿದರೆ ತನ್ನ ಜೀವಕ್ಕೇ ಅಪಾಯವಿದೆ ಎಂಬ ಎಚ್ಚರಿಕೆಯ ಅರಿವೇ ಈ ಮನುಷ್ಯಧರ್ಮದ ಅಧಾರ.

      ಪ್ರತಿಕ್ರಿಯೆ
  9. Adithya

    ಖಂಡಿತವಾಗಿಯೂ ಇತಿ ಮಿತಿ ನಿಯಮಗಳಿಲ್ಲದಿದ್ದರೆ ಈ ಲೋಕ ಹೀಗಿರುತಿರಲಿಲ್ಲ. ಹಸಿದಾಗ ಮಾತ್ರ ತಿನ್ನುವ ಪ್ರಾಣಿ ಪಕ್ಷಿಗಳಿಗೆ ಇತಿಮಿತಿಯ ಅರಿವಿದೆ ಆದರೆ ಜೈವಿಕ ಬದಲಾವಣೆಯಲ್ಲಿ ಮನುಷ್ಯ ತನ್ನ ಸಹಜ ಇತಿಮಿತಯನ್ನು ಮರೆತಂತೆ ನಟಿಸುತ್ತಿದ್ದಾನೆ. ಆವಾಗಲೇ ವ್ಯವಸ್ಥೆಯ ಮೌಲ್ಯ ತಿಳಿಯುವುದು.
    ಯಾರೋ ಇನ್ಯಾರದೋ ಮೇಲೆ ಮಾಡಿದ ಕ್ರೌರ್ಯವನ್ನು ಮತ್ತಿನ್ಯಾರೋ ಕ್ಷಮಿಸಬೇಕೆಂದು ಇಚ್ಚಿಸುವುದು ಅರ್ಥಹೀನ. ಎಷ್ಟು ಮಕ್ಕಳನ್ನು ಹಡೆಯಬೇಕೆಂದು ತಿಳಿಯದ, ಹುಟ್ಟಿದ ಮಕ್ಕಳಿಗೆ ಅನ್ನ ಹಾಕುವ ಶಕ್ತಿಯೇ ಇಲ್ಲದ ಸಮಾಜ ಅತ್ಯಂತ ಹೀನ ಹಾಗು ಭೀಭತ್ಸ ಕೃತ್ಯವೆಸಗಿದವರಿಗೆ ಕ್ಷಮಾಪಣೆ ಭಯಸುವುದು Utopian ವಾದ.
    ಮಹಾತ್ಮ ಗಾಂಧಿಗೂ ಭಗತ್ ಸಿಂಗ್ನ ಕುಣಿಕೆ ತಪ್ಪಿಸುವ ಅವಕಾಶವಿತ್ತು.
    ಮರಣ ಧoಡನೆಯನ್ನು ನಿಷೇಧಿಸಿರುವ ಯು ಕೆ ಗೆ Colonial ಯುಗದ ಪಾಪ ಪ್ರಜ್ಞೆ.

    ಪ್ರತಿಕ್ರಿಯೆ
  10. Anonymous

    there was a time in my life when strange eyes followed me at all times. invisible ears listened to every word I uttered.I could not simply dismiss this as the daily throb of this beast that lies under the city – the monster that I helped make.
    …. AGNI SREEDHAR
    (introduction lines from the book
    MY DAYS IN THE UNDERWORLD
    rise of the banglore mafia)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: