ಜೋಗಿ ಬರೆಯುತ್ತಾರೆ: ಆಕ್ಟಿಂಗ್ ಪತ್ರಕರ್ತ ವಿಜಯಸಾರಥಿ ನೆನಪು

ಒಬ್ಬೊಬ್ಬ ಪತ್ರಕರ್ತ ತೀರಿಕೊಂಡಂತೆ ಸಿನಿಮಾ ಪತ್ರಿಕೋದ್ಯಮ ಬಡವಾಗುತ್ತಾ ಹೋಗುತ್ತದೆ.
ಹತ್ತಾರು ವರುಷಗಳ ಹಿಂದೆ ನನ್ನ ಮನಸ್ಸು ಓಡುತ್ತದೆ. ನಾವೆಲ್ಲ ಧರ್ಮಸಿಂಗ್ ಅವರ ಊರಿಗೆ ಯಾವುದೋ ಸಿನಿಮಾದ ಶೂಟಿಂಗ್ ನೋಡುವುದಕ್ಕೆ ಹೊರಟಿದ್ದೆವು. ಕೆಟ್ಟ ಬಸ್ಸು, ಹದಿನೈದು ಗಂಟೆಗಳ ಪ್ರಯಾಣ, ದಾರಿಯಲ್ಲೆಲ್ಲೂ ಹೊಟೆಲಾಗಲೀ, ಡಾಬಾ ಆಗಲಿ ಕಾಣಿಸುತ್ತಿರಲಿಲ್ಲ. ಮುಸ್ಸಂಜೆ ಹೊತ್ತಿಗೆ ಊಟ ಮುಗಿಸಿ ಹೊರಟವರಿಗೆ ಜಲಬಾಧೆ ಶುರುವಾಗಿತ್ತು. ದಾರಿಯಲ್ಲಿ ನೀರಿನ ಸುಳಿವೂ ಇಲ್ಲದ ಕಪ್ಪುಮಣ್ಣು. ಗಾರುಗಾರಾದ ನೆಲ. ಎಲ್ಲರಿಗೂ ಪ್ರಾಣಾಂತಿಕ ಪರಿಸ್ಥಿತಿ.
ಕೊನೆಗೆ ಏನಾದರಾಗಲಿ ಎಂದುಕೊಂಡು ಕಂಡ ಮನೆಯ ಮುಂದೆ ಬಸ್ಸು ನಿಲ್ಲಿಸಿದೆವು. ಎಲ್ಲರೂ ಮನೆಯತ್ತ ನುಗ್ಗಿದೆವು. ಅವರನ್ನು ಕಾಡಿ ಬೇಡಿಯಾದರೂ ನಮ್ಮ ಕಷ್ಟ ಪರಿಹರಿಸಿಕೊಳ್ಳುವ ಆಸೆ. ಅವರು ನಮ್ಮನ್ನು ನೋಡುತ್ತಿದ್ದಂತೆ ಖಡಾಖಂಡಿತವಾಗಿ ನಿರಾಕರಿಸಿದರು. ನಮ್ಮ ಸಂಖ್ಯೆ ಮತ್ತು ಆತುರ ನೋಡಿ ಅವರಿಗೆ ಗಾಬರಿ ಆಗಿರಬೇಕು. ನಾವು ನಿರಾಶರಾಗಿ ಮರಳುವ ಹೊತ್ತಿಗೆ ಅವರು ಬಂದರು. ಅವರನ್ನು ನೋಡುತ್ತಿದ್ದಂತೆ ಆ ಮನೆಯವರ ಮುಖ ಭಾವವೇ ಬದಲಾಯಿತು. ಆದರದಿಂದ ಅವರನ್ನು ಒಳಗೆ ಕರೆಸಿಕೊಂಡರು. ನಂತರ ನಮಗೂ ಕಷ್ಟಪರಿಹಾರದ ಜೊತೆ ತಿಂಡಿ ಕಾಫಿಯೂ ಸಿಕ್ಕಿತು.

ಚಿತ್ರ ಕೃಪೆ : ವಿನಾಯಕರಾಮ ಕಲಗಾರು

ಅವರು ಆರ್ ಜಿ ವಿಜಯಸಾರಥಿ. ಆ ಮನೆಯವರು ಅವರ ಅಭಿಮಾನಿ. ಒಂದಷ್ಟು ಸಿನಿಮಾಗಳಲ್ಲಿ, ಸೀರಿಯಲ್ಲುಗಳಲ್ಲಿ ಅವರನ್ನು ನೋಡುತ್ತಿದ್ದವರು. ಅವರ ದಯೆಯಿಂದ ಆವತ್ತು ನಾವು ಪ್ರಾಣಾಪಾಯದಿಂದ ಪಾರಾಗಿದ್ದೆವು.
ವಿಜಯಸಾರಥಿ ತಮಾಷೆಯ ವ್ಯಕ್ತಿ. ನಾನು ಬರೀ ಪತ್ರಕರ್ತ ಅಲ್ಲಾರಿ, ನಾನೊಬ್ಬ ನಟ ಅಂತ ಅವರು ಹೇಳುತ್ತಿದ್ದರೆ, ಎ ಎಸ್ ಮೂರ್ತಿ ಅದು ಅರ್ಧ ಸತ್ಯ, ಅರ್ಧ ಸುಳ್ಳು ಕಣ್ರೀ, ಪತ್ರಕರ್ತ ಅಲ್ಲ ಅನ್ನೋದು ಸತ್ಯ, ನಟ ಅನ್ನೋದು ಸುಳ್ಳು ಅಂತ ಕಿಚಾಯಿಸುತ್ತಿದ್ದರು. ಅವರಿಬ್ಬರ ಜಗಳ ಜಗದ್ವಿಖ್ಯಾತವಾಗಿತ್ತು. ಆ ಜಗಳದ ನಡುವೆಯೇ ಅವರ ಮಧ್ಯೆ ಅನನ್ಯವಾದ ಪ್ರೀತಿ ಕೂಡ ಇದ್ದಂತಿತ್ತು. ಎಷ್ಟೋ ಸಾರಿ ಇಬ್ಬರೂ ಗಂಟೆಗಟ್ಟಲೆ ಮಾತಾಡುತ್ತಿದ್ದದ್ದೂ ಉಂಟು.
ಸಿನಿಮಾ, ರಾಜಕೀಯ, ಆರ್ಥಿಕತೆ, ಸಾಹಿತ್ಯ- ಹೀಗೆ ಎಲ್ಲದರ ಕುರಿತೂ ಬರೆಯುತ್ತಿದ್ದವರು ಸಾರಥಿ. ಅವರಿಗೆ ಕನ್ನಡದ್ದೊಂದೇ ಅಲ್ಲದೇ, ಪರಭಾಷೆಯ ನಟನಟಿಯರ ಪರಿಚಯವೂ ಇತ್ತು. ಒಂದು ಕಾಲದಲ್ಲಿ ಪರಭಾಷಾ ನಟಿಯರು ಕನ್ನಡಕ್ಕೆ ಬರುವುದು ದೊಡ್ಡ ಸುದ್ದಿಯಾಗಿತ್ತು. ಆ ದಿನಗಳಲ್ಲಿ ವಿಜಯ ಸಾರಥಿ ಅವರ ವಿವರ ಸಂಗ್ರಹಿಸಿ, ಅವರ ವಿವಾದಗಳನ್ನೆಲ್ಲ ಪತ್ತೆ ಹಚ್ಚಿ ಪತ್ರಿಕಾಗೋಷ್ಠಿಯಲ್ಲಿ ಅವರನ್ನು ಕಂಗೆಡಿಸುತ್ತಿದ್ದರು. ಹಾಗೆ ಅವರು ಕಂಗಾಲು ಮಾಡಿದ ಒಬ್ಬ ನಾಯಕಿ ಎಂದರೆ ಮೀರಾ ಜಾಸ್ಮಿನ್. ಆಕೆಗೆ ಹಿನ್ನೆಲೆಯೆಲ್ಲ ಜಾಲಾಡಿ, ಆಕೆ ಆತ್ಮಹತ್ಯೆಗೆ ಯತ್ನಿಸಿದ್ದನ್ನೆಲ್ಲ ಪತ್ತೆ ಹಚ್ಚಿ ಅವರು ಸೆನ್ಸೇಷನಲ್ ಸುದ್ದಿ ಮಾಡಿದ್ದರು.
ವಿಜಯಸಾರಥಿ ಸೊಗಸಾಗಿ ಇಂಗ್ಲಿಷ್ ಮಾತಾಡುತ್ತಿದ್ದರು. ಇಂಗ್ಲಿಷಿನಲ್ಲಿ ಸೊಗಸಾಗಿ ಬರೆಯುತ್ತಿದ್ದರು. ಕೊಂಚ ನಾಜೂಕಾಗಿ ಕನ್ನಡದ ಪತ್ರಿಕೆಗಳಿಗೆ ಬರೆದು, ತಮ್ಮ ಸಿಟ್ಟನ್ನು ಇಂಗ್ಲಿಷ್ ಪತ್ರಿಕೆ ಮತ್ತು ವೆಬ್ ಸೈಟುಗಳಿಗೆ ಬರೆಯುವ ವಿಮರ್ಶೆಯಲ್ಲಿ ತೋರಿಸಿಕೊಳ್ಳುತ್ತಿದ್ದರು. ಸಿನಿಮಾ ಹೊಗಳಿದ್ದೀರಲ್ಲ ಅಂತ ಕೇಳಿದರೆ, ಅಲ್ಲಿ ಬರೆದಿದ್ದೇನೆ ನೋಡ್ರೀ ಅಂತ ಯಾವುದೋ ವೆಬ್ ಸೈಟಿನ ವಿಳಾಸ ಕೊಡುತ್ತಿದ್ದರು.
ವಿಜಯಸಾರಥಿ ಮತ್ತು ವಿಷ್ಣುವರ್ಧನ್ ಸಹಪಾಠಿಗಳಾಗಿದ್ದವರು. ಹೀಗಾಗಿ ವಿಷ್ಣು ಚಿತ್ರಗಳಲ್ಲಿ ಅವರಿಗೊಂದು ಪಾತ್ರ ಸಿಗುತ್ತಿತ್ತು. ಪತ್ರಿಕಾಗೋಷ್ಠಿಯಲ್ಲೂ ಅವರು ವಿಷ್ಣುವರನ್ನು ಏಕವಚನದಲ್ಲೇ ಮಾತಾಡಿಸುತ್ತಿದ್ದರು. ಕೆಲವೊಮ್ಮೆ ಇಬ್ಬರೂ ಜಗಳ ಆಡುತ್ತಿದ್ದರು. ಜಗಳ ಆಡಿ ಗೆಲ್ಲುತ್ತಿದ್ದವರು ವಿಷ್ಣುವರ್ಧನ್ ಆದರೂ, ನಾನು ಬಿಟ್ಟು ಕೊಟ್ಟೆ ಎಂಬ ಭಾವದಲ್ಲಿ ವಿಜಯಸಾರಥಿ ಕೂತಿರುತ್ತಿದ್ದರು.
ಪರವೂರುಗಳಿಗೆ ಪ್ರವಾಸ ಹೊರಡುತ್ತಿದ್ದ ದಿನಗಳಲ್ಲಿ ವಿಜಯಸಾರಥಿ ಸಾಂಗತ್ಯ ಸಂತೋಷ ಕೊಡುತ್ತಿತ್ತು. ದೇವಾನಂದ್ ಭಕ್ತರೂ ಅಭಿಮಾನಿಯೂ ಆಗಿದ್ದ ವಿಜಯಸಾರಥಿ, ಸೊಗಸಾಗಿ ನರ್ತಿಸುತ್ತಿದ್ದರು. ಅವರ ಹಾವಭಾವಗಳು ಸೊಗಸಾಗಿದ್ದವು. ಅವರಿಗೆ ನಟನೆ ಸಿದ್ಧಿಸಿತ್ತು ಎನ್ನುವುದು ಉತ್ಪ್ರೇಕ್ಷೆಯಾಗಿದ್ದರೂ, ತಮ್ಮ ನಿಲುವಿನಿಂದ ನಗೆ ಹೊರಡಿಸುವುದಕ್ಕೆ ಅವರು ಸಮರ್ಥರಾಗಿದ್ದರು.
ಚಿತ್ರರಂಗದ ಒಳವಿವರಗಳನ್ನು ಬಲ್ಲವರಾಗಿದ್ದ ವಿಜಯಸಾರಥಿ, ಚಿತ್ರದ ಖರ್ಚುವೆಚ್ಚ, ಗಳಿಕೆ ಇವೆಲ್ಲದರ ಕರಾರುವಾಕ್ಕು ಲೆಕ್ಕ ಇಟ್ಟಿರುತ್ತಿದ್ದರು. ಆದರೆ ಆ ಮಾಹಿತಿಯನ್ನು ಯಾವತ್ತೂ ದುರ್ಬಳಕೆ ಮಾಡಿಕೊಳ್ಳುತ್ತಿರಲಿಲ್ಲ. ಅಭಿನಯಿಸುವ ಹಂಬಲ ಮತ್ತು ಇದ್ದದ್ದನ್ನು ಇದ್ದ ಹಾಗೆ ವರದಿ ಮಾಡುವ ಬಯಕೆ ಇಟ್ಟುಕೊಂಡಿದ್ದ ವಿಜಯಸಾರಥಿಗೆ ಅವೆರಡೂ ಸುಲಭವಾಗಿ ದಕ್ಕಲಿಲ್ಲ ಎಂದೇ ಹೇಳಬೇಕು.
ಹೊಸ ಪತ್ರಕರ್ತರಿಗೆ ಬೆಂಬಲ, ಸ್ಪೂರ್ತಿ, ಸಲಹೆ ನೀಡುತ್ತಿದ್ದ ವಿಜಯಸಾರಥಿ ಅವರನ್ನು ಚಿತ್ರರಂಗ ಕಳಕೊಂಡಿದೆ. ಚಿತ್ರೋದ್ಯಮಕ್ಕೆ ಚರಿತ್ರೆಯಲ್ಲಿ ನಂಬಿಕೆ ಇಲ್ಲದೇ ಇರುವುದರಿಂದ, ಅವರ ಅಗಲಿಕೆಯನ್ನು ವರ್ತಮಾನದ ಚಿತ್ರೋದ್ಯಮ ಗಂಭೀರವಾಗಿ ಪರಿಗಣಿಸದೇ ಇರಬಹುದು. ಆದರೆ ಸಿನಿಮಾ ಪತ್ರಿಕೋದ್ಯಮದ ಮಾತು ಬಂದಾಗ ವಿಜಯಸಾರಥಿಯವರ ಪ್ರಸ್ತಾಪ ಬರದೇ ಇರುವುದಕ್ಕೆ ಸಾಧ್ಯವಿಲ್ಲ.
ಅವರ ಟೀಕೆ, ಟಿಪ್ಪಣಿ, ನಟನೆ, ನೃತ್ಯ, ಮಾತಿನ ಚಾಟಿಯೇಟು, ಶ್ರದ್ಧೆ ಮತ್ತು ಚಾಂಚಲ್ಯ ಅವರ ಮಿತ್ರರೆಲ್ಲರಿಗೂ ಸದಾ ನೆನಪಿರುವಂಥದ್ದು. ಅವರನ್ನು Acting Journalist ಎಂದು ತಮಾಷೆಯಾಗಿ ಕರೆಯುತ್ತಿದ್ದದ್ದು ಕೂಡ.
 

‍ಲೇಖಕರು G

February 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Gopaal Wajapeyi

    ವಿಜಯಸಾರಥಿ ಸುಮಾರು ಮೂವತ್ತೈದು ವರ್ಷಗಳ ಹಿಂದೆಯೇ ಕ್ರೀಡಾ ಲೇಖನಗಳ ಮೂಲಕ ನನಗೆ ಪರಿಚಯವಾಗಿದ್ದವರು. ಒಂದೆರಡು ಸಲ ಅವರನ್ನು ಕಂಡದ್ದಿದೆ, ಕಂಡು ಮಾತಾಡಿದ್ದಿದೆ. ನಗುನಗುತ್ತ, ಹಾಸ್ಯಚಟಾಕಿಗಳನ್ನು ಹಾರಿಸುತ್ತ, ಹರಟುತ್ತಿದ್ದರು.

    ಪ್ರತಿಕ್ರಿಯೆ
  2. ಕರ್ಕಿ ಕೃಷ್ಣಮೂರ್ತಿ

    ಇಂಗ್ಲೀಷ್ ಪತ್ರಿಕೆಗಳಲ್ಲಿ ಬರುವ ಕನ್ನಡ ಚಿತ್ರ ವಿಮರ್ಶೆ ಬರೆಯುವವರು ಯಾರು, ಹಾಗೂ ಅವರು ಕನ್ನಡದವರಾ ಅಲ್ಲವಾ ಎಂಬುದನ್ನು ಸದಾ ಗಮನಿಸುತ್ತಿರುವ ನನಗೆ ವಿಜಯಸಾರಥಿ ಪರಿಚಿತ. ಅವರು rediff.com ನಲ್ಲಿ ಖಾಯಮ್ ಬರೆಯುತ್ತಿದ್ದರು. ಅವರ ಅಗಲುವಿಕೆಗೆ ವಿಷಾದವಿದೆ. ಸಕಾಲದಲ್ಲಿ ಜೋಗಿಯಿಂದ ಈ ನುಡಿನಮನ ಬಂದಿದ್ದು ಸೂಕ್ತ

    ಪ್ರತಿಕ್ರಿಯೆ
  3. Vasuki

    He was a regular near Shantisagar, Basaveshwaranagar. He made sure you could not ignore his presence. Very jovial fellow!

    ಪ್ರತಿಕ್ರಿಯೆ
  4. mandya ramesh

    jogi, nijavaada shraddanjali….adu devanand alla? shmmi kapoor! ondu edee raatri avana bagge maatdiddru!

    ಪ್ರತಿಕ್ರಿಯೆ
  5. ಅರಕಲಗೂಡು ಜಯಕುಮಾರ್

    @ಜೋಗಿ ಸರ್,
    “ಒಬ್ಬೊಬ್ಬ ಪತ್ರಕರ್ತ ತೀರಿಕೊಂಡಂತೆ ಸಿನಿಮಾ ಪತ್ರಿಕೋದ್ಯಮ ಬಡವಾಗುತ್ತಾ ಹೋಗುತ್ತದೆ…” ಈ ವಾಕ್ಯದಲ್ಲಿ ಅಡಕವಾದ ಅರ್ಥ ಸುದ್ದಿಲೋಕದ ಪ್ರಸಕ್ತ ವಿದ್ಯಮಾನಗಳಿಗೆ ಕನ್ನಡಿ ಹಿಡಿದಂತಿದೆ… ಎಷ್ಟೋ ಮಂದಿಗೆ ಈ ವಾಕ್ಯತೆ ತೀವ್ರತೆ ಮತ್ತು ಗಂಭೀರತೆ ಅರ್ಥವಾಗಿರಲಿಕ್ಕಿಲ್ಲ! ವಿಜಯ ಸಾರಥಿ ಕುರಿತು ಕ್ಲುಪ್ತವಾದ ದಾಟಿಯಲ್ಲಿ ಮನಮುಟ್ಟುವಂತೆ ಬರೆದಿದ್ದೀರಿ. ಅವಧಿಯಲ್ಲಿ ಮಾತ್ರ ಇಂತಹದ್ದನ್ನು ಕಾಣಲು ಸಾಧ್ಯವೇನೋ… ಜೋಗಿ ಮತ್ತು ಅವಧಿ ಇಬ್ಬರಿಗೂ ಧನ್ಯವಾದ for good read n thought.

    ಪ್ರತಿಕ್ರಿಯೆ
  6. jogi

    @Mandya Ramesh.
    Yes sir. It was Shammi kapoor. Even he liked Devanand a lot. He used to speak a lot about hindi and other language films too.
    And
    Thanks to all.

    ಪ್ರತಿಕ್ರಿಯೆ
  7. bharathi

    namma maneya hatra iddu eshtond sala eduraagthidvi .. aadre avra vishya thilidaddu nimma lekhana odida melene …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: