ಸಂಜೆ ಗಾಳಿ
ಚಂದ್ರು ಎಂ ಹುಣಸೂರು
ಟೆರೇಸಿನ ಮೇಲೆ
ಗಾಳಿಯ ಮಾತನ್ನು ಆಯಬಲ್ಲವರು
ಸಂಜೆ
ಕಾಲು ನೋವು ಬರುವಷ್ಟು ಹೊತ್ತು
ನಿಲ್ಲಬಾರದು
ನಿಂತ ಮೇಲೆ
ಸಂಜೆ ಗಾಳಿಯಲ್ಲಿ ತೇಲಿಬಂದ
ನಾಲ್ಕೇ ನಾಲ್ಕು ಮಾತುಗಳಿಗೆಲ್ಲ
ಸುಖಾಸುಮ್ಮನೆ ಬಸಿರಾಗುವ ತಾಪತ್ರಯ
ಆ ಗಾಳಿ ಆಡದೆ ಉಳಿದ
ನಮ್ಮದೇ ಮಾತುಗಳನ್ನು
ಹೇಳಲು ಹವಣಿಸುತ್ತದೆ
ಕೇಳಿಸಿಕೊಂಡು
‘ಯಾರ ಬಳಿಯೂ ಹೇಳಬಾರದು’
ಎಂಬ ಷರತ್ತು ಹೇರುವ
ಮಾತುಗಳನ್ನು
ಕೇಳಿಸಿಕೊಳ್ಳದಿರುವುದೇ
ನನ್ನ ಪ್ರಕಾರ ಒಳ್ಳೆಯದು
ಒಂದೊಂದೆ ಪದ ತೇಲಿ ಬರುವಾಗ
ಭಯವಾಗುತ್ತದೆ
ಈಗಷ್ಟೆ ನಿನ್ನನ್ನು ಅಪರಿಚಿತನಂತೆ
ಬೀಳ್ಕೊಟ್ಟು
ಫೋಟೊ ಫ್ರೇಮಿನೊಳಗಿನ
ಖಾಯಂ ನಗುವನ್ನು ಬಿಸಾಕಿ
ಒಬ್ಬಂಟಿಯಾಗಿ ಹೆಜ್ಜೆ ಹಾಕುವಾಗ
ಹುಟ್ಟಿಕೊಂಡಿದ್ದ ಮಾತುಗಳವು
ನಿನಗೆ ಕ್ಷಣದಲ್ಲಿ ಅರ್ಥವಾಗಿ ಬಿಡುವ
ಆದರೂ ನೀನು ಅದರ ಬಗ್ಗೆ
ಮಾತನಾಡಲು ಇಷ್ಟಪಡದ
ಬೇವರಸೀ ಮಾತುಗಳವು
ನಾನು ಆ ಮಾತುಗಳಿಗೆಲ್ಲಿ
ಕದ್ದು ಬಸಿರಾಗುವೆನೋ
ಈ ವಾಟರ್, ಕರೆಂಟ್ ಬಿಲ್ಲುಗಳ
ಮಾಯಾ ಕೊಳದಂತ ಸಂಪುಗಳ
ಸಲೀಸು ಡಾಂಬಾರು ರಸ್ತೆಯ ಬ್ಯಾರಿಕೇಡುಗಳ

ಕೊಂಕು ನೋಟಗಳಿಗೆ
ಪ್ರತ್ಯುತ್ತರವಾಗಿ
ಅವುಗಳಿಗೆಲ್ಲ ಕಾಣುವಂತೆ
ಬಸಿರು ಮಾಡಿದವನ ಕೈ ಕೈ ಹಿಡಿದು
ಭುಜಕ್ಕೆ ತಲೆಯಾನಿಸಿ ನಡೆದು
ಪತೀವ್ರತೆ ಸಾಬೀತು ಮಾಡಬೇಕೇನೋ
ನೀನು ಒಮ್ಮೆ ಟೆರೇಸಿನ ಮೇಲೆ
ನನ್ನೊಡನೆ ನಡೆದು ಬರುತ್ತೀಯ
ಆಗ ಅಲ್ಲಿಗೆ ಆ ಬೇವರಸಿ ಮಾತುಗಳೂ ಬರುತ್ತವೆ
ನಿನ್ನ ಆತ್ಮಸಾಕ್ಷಿಗೆ ಆ ಮಾತುಗಳನ್ನು ಆಲಿಸುವ ಆಸಕ್ತಿಯಿಲ್ಲ
ಅದು ಈಗಷ್ಟೇ ನಿದಿರೆ ಹೋಗಿರುವ ಮಗುವಿನೆದುರು ಗಿಲಕಿ
ಅಲುಗಾಡಿಸಿದಂತೆ ಅನ್ನುವುದು ನನಗೇನೊ ಗೊತ್ತು, ಗಾಳಿಗಲ್ಲ
ಕಣ್ಣಲ್ಲಿ ಧೂಳು ಬಿದ್ದ
ನಾಟಕವಾಡಿ
ಗಾಳಿಯ ಮಾತುಗಳಿಂದ ಬಚಾವ್ ಆಗುತ್ತೀಯ
ಎಂದಿನಂತೆ
ಗಾಳಿ ಮಾತುಗಳಿಗೆ
ನಾನು
ಮತ್ತೆ ಬಸಿರಾಗುತ್ತೇನೆ
ನನಗೀಗ ಉಪಾಯ ಹೊಳೆದಿದೆ
ಟೆರೇಸಿನ ಮೇಲೆ ತೇಲಿ ಬರುವ
ಮಾತುಗಳನ್ನು ಯಥಾವತ್ತಾಗಿ ಬರೆದು
ಕವಿ ಎನಿಸಿಕೊಂಡು ಅದೇ ಆ ನೀಳ ರಸ್ತೆಯ ಬ್ಯಾರಿಕೇಡುಗಳಿಗೆಲ್ಲ
ಬಸಿರು ಮಾಡಿದವನ
ಭುಜಕ್ಕೆ ವಾಲಿ
ಕೈಕೈ ಹಿಡಿದು ನಾಟಕವಾಡುವ
ಸೋಗಲಾಡಿ ತನದಿಂದ ಮುಕ್ತಿ ಹೊಂದುತ್ತೇನೆ






‘ ಮಾತುಗಳಗೆ ನಾನು ಮತ್ತೆ ಬಸಿರಾಗುತ್ತೇನೆ’ ಸುಂದರ ಅಭಿವ್ಯಕ್ತಿಯ ಸಾಲು, ಕವನ ತುಂಬಾ ಇಷ್ಟವಾಯಿತು