ಮೇಘನಾ ಸುಧೀಂದ್ರ ಅಂಕಣ: ಸೂಪರ್ ಮಾರ್ಕೆಟ್ಟಿನಲ್ಲಿ ಚಾಕ್ಲೇಟು.. ಚೀಸು

ಹುಡುಗಿ ಈ ಫೆಮಿನಿಸಮ್, ಜಾರ್ಡಿ ದಿನ ಎಂದು ಅದೂ ಇದೂ ಮಾಡಿಕೊಂಡು ಇಂಡಿಯನ್ ಹುಡುಗರ ಮನೆಯಲ್ಲಿ ತಿಂದುಕೊಂಡು ಸುಮಾರು ದಿವಸ ಇರುವಾಗ ಮನೆಯಲ್ಲಿ ತನ್ನ ದಿನಸಿ ಸಾಮಾನು ಖಾಲಿಯಾಗಿದೆ ಎಂದು ನೆನಪಾಯಿತು.

ಬೆಂಗಳೂರಲ್ಲಿ ಒಂದು ಕಡಲೇ ಬೇಳೆಯನ್ನೂ ತರದ ಇವಳು ತಿಂಗಳಿಗೆ ಸರಿಯಾಗಿ ದಿನಸಿ ತರಬೇಕಿತ್ತು. ಸ್ವಲ್ಪವೂ ಕಡಿಮೆಯಾಗದೇ ಜಾಸ್ತಿ ದುಡ್ಡು ಖರ್ಚು ಮಾಡದೇ ತರುವ ಹೊಣೆ ಅವಳದಾಗಿತ್ತು. ೮ ವರ್ಷಕ್ಕೆ ನನ್ನ ಮಗ ದಂಟು ಎನ್ನುವ ಗಾದೆಯ ಹಾಗೆ ೨೫ ವರ್ಷಕ್ಕೆ ಗ್ರೋಸರಿ ತಂದು ಮನೆ ಸಾಗಿಸುವುದು ಭಗೀರಥ ಗಂಗೆಯನ್ನ ಭೂಮಿಗೆ ಇಳಿಸುವುದಕ್ಕಿಂತ ಕಷ್ಟದ ಕೆಲಸ ಎಂದು ಗೊತ್ತಾಯಿತು. ಅಲ್ಲಿನ ಸೂಪರ್ ಮಾರ್ಕೆಟ್ಟಿನಲ್ಲಿ ಒಂದು ದೊಡ್ಡ ಸೈಡು ಚಾಕ್ಲೇಟು ಮತ್ತು ಚೀಸ್ ಇದ್ದದ್ದು ಹುಡುಗಿಗೆ ಸಿಕ್ಕಾಪಟ್ಟೆ ಖುಷಿ ಕೊಡುತ್ತಿತ್ತು.

ಅಲ್ಲಿ ಮಾತ್ರ ಅಲೀಸ್ ಇನ್ ವಂಡರ್ ಲ್ಯಾಂಡಿನ ಹಾಗೆ ತನ್ನ ಇಷ್ಟವಾದ ಎಲ್ಲಾ ಚೀಸು, ಚಾಕ್ಲೇಟುಗಳನ್ನ ಕಾರ್ಟಿಗೆ ಹಾಕಿಕೊಂಡು ಆಮೇಲೆ “ಅಯ್ಯೋ ಇದಕ್ಕೆಲ್ಲಾ ದುಡ್ಡಿಲ್ಲ” ಎಂದು ವಾಪಸ್ಸು ಹಾಕುವಾಗ ಅವಳ ಕಣ್ಣಿನಲ್ಲಿ ನಿಜವಾಗಿಯೂ ಗೊತ್ತಾಗುತ್ತಿತ್ತು. ಅರ್ಧ ಚೈನೀಸ್ ಅಂಗಡಿಯಲ್ಲಿ, ಇನ್ನರ್ಧ ಇಂಡಿಯನ್ ಸ್ಟೋರ್ಸಿನಲ್ಲಿ ಸಾಮಾನು ತಂದು ಹೇಗೋ ಸರಿದೂಗಿಸುತ್ತಿದ್ದಳು. ಒಮ್ಮೆ ದೊಡ್ಡ ಶೋ ಕೇಸಿನಲ್ಲಿ ಗೌಡಾ ಚೀಸ್ ನ ನೋಡಿ ಸಿಕ್ಕಾಪಟ್ಟೆ ಖುಷಿಯಾದಳು ಹುಡುಗಿ. ಈ ಗೌಡಾ ಚೀಸನ್ನ ನಾಲ್ಕೈದು ಬಾರಿ ನೋಡಿ ಜಗತ್ತಲ್ಲಿ ಚಿನ್ನದ ನಿಧಿ ಸಿಕ್ಕಿರೋ ಹಾಗೆ ಆಡುತ್ತಿದ್ದ ಹುಡುಗಿಯನ್ನ ಅಲ್ಲಿನ ಮರ್ಕಾಟ್ ನವರು ವಿಚಿತ್ರವಾಗಿ ನೋಡುತ್ತಿದ್ದರು. ಅವರಿಗೆ ಚೀಸ್ ಅನ್ನೋದು ನೆಸೆಸಿಟಿ ಹುಡುಗಿಯಂತಹ ಎಕ್ಸ್ಪಾಟಿಗೆ ಲಕ್ಶುರಿ ಹೀಗೆ ಗೌಡಾ ಚೀಸ್ ಅನ್ನೂ ಬಿಲ್ ಮಾಡಿಸಲು ಹೋದಾಗ, “ನಿನ್ನ ಹತ್ತಿರ ಅಷ್ಟು ದುಡ್ಡಿದೆಯಾ” ಎಂದು ಬಹಳ ನೇರವಾಗಿ ಕೇಳಿದ ಕ್ಯಾಶಿಯರನ್ನ ಗುರಾಯಿಸಿಯೇ “ಇನ್ನೂ ನಾಲ್ಕು ಕೊಡು” ಎಂದು ಜೋರಾಗಿ ಹೇಳಿ ಬಿಲ್ ಮಾಡಿಸಿಕೊಂಡು ಬಂದಳು ಹುಡುಗಿ.

ತನ್ನ ಈಗೋಗೆ ಎಷ್ಟೋ ಯುರೋ ಖರ್ಚು ಮಾಡಿ ಇನ್ನು ಬಸ್ಸಿನಲ್ಲಿ ಹೋದರೆ ದುಡ್ಡು ಖರ್ಚಾಗತ್ತೆ ಎಂಬ ಟಿಪಿಕಲ್ ಇಂಡಿಯನ್ ಮೆಂಟಾಲಿಟಿಯಲ್ಲಿ ನಡೆದೇ ಮನೆಗೆ ಭಾರವಾದ ಕವರುಗಳನ್ನು ಹಿಡಿದುಕೊಂಡು ನಡೆಯುತ್ತಿದ್ದ ಹುಡುಗಿ ಸಗ್ರಾದಾ ಫಾಮಿಲಿಯಾ ಚರ್ಚಿನ ಮುಂದೆ ಹೋಗುತ್ತಿದ್ದಳು. “ಇದು ಮುಗಿಯದ ಕಥೆ” ಎಂದು ನಕ್ಕು ಇವರ ಕಥೆಯೋ ಇಷ್ಟೇ ಎಂದು ಅಂದುಕೊಂಡೇ ಹೋದಳು. ಈ ಆಂಟೋನಿ ಗೌದಿ ಸತ್ತು ಸ್ವರ್ಗ ಸೇರಿ ಮತ್ತೊಮ್ಮೆ ಹುಟ್ಟಿ ಬಂದು ಸತ್ತು ಮತ್ತೆ ಹುಟ್ಟಿಬಂದರೂ ಈ ಚರ್ಚು ಮುಗಿಯುವುದಿಲ್ಲ ಎಂದು ಮನಸಿನಲ್ಲಿಯೇ ಅಂದುಕೊಂಡಳು.

ಅಂದಹಾಗೆ ಗೊತ್ತಿಲ್ಲದವರಿಗೆ ಅಂಟೋನಿ ಗೌದಿ ಬಾರ್ಸಾದ ಸುಮಾರು ದೊಡ್ಡ ದೊಡ್ಡ ಜಾಗಗಳ ವಿನ್ಯಾಸಗಾರ ಜೊತೆಗೆ ಬಾರ್ಸಾವನ್ನ ಅಂದಗಾಣಿಸುವುದಕ್ಕೆ ವಿಪರೀತ ಶ್ರಮ ಪಟ್ಟ ಆಸ್ಥಾನ ಕಲಾವಿದ. ಈ ಸಾಗ್ರಾದ ಫೆಮಿಲಿಯಾ (ಸೇಕ್ರೆಡ್ ಫ್ಯಾಮಿಲಿ) ಚರ್ಚ್ ೧೮೮೨ರಿಂದ ಕಟ್ಟಲು ಶುರು ಮಾಡಿದ್ದ ಗೌದಿ, ಈಗಲೂ ಅದನ್ನು ಕಟ್ಟುತಲೇ ಇದ್ದಾರೆ. ಅಂಥದೇನಿದೆ ಎಂದು ಒಳಗೆ ಹೋದರೆ ಕೆಲವು ವಿಸ್ಮಯಗಳು, ಕೆಲವು ಪೇಲವ ಸಂಗತಿಗಳು ಕಣ್ಣಿಗೆ ಕಾಣುತ್ತದೆ. ಆದರೆ ಬಾರ್ಸಾದ ಹೆಚ್ಚು ಬಡ್ಜೆಟ್ ಪ್ರತಿ ವರ್ಷ ಈ ಚರ್ಚನ್ನು ಕಟ್ಟುವುದಕ್ಕೆ ಹೋಗುತ್ತದೆ ಎಂದರೆ ಸುಳ್ಳಲ್ಲ. ಇದೊಂಥರ ಇಲ್ಲಿನ ದೈವಭಕ್ತರು ತಿರುಪತಿ ತಿಮ್ಮಪ್ಪನ ಮದುವೆಯ ಸಾಲ ತೀರಿಸಿದಹಾಗೆ. ಅದೂ ಮುಗಿಯಲ್ಲ ಇಲ್ಲಿನ ಗೌದಿಯೂ ಮುಗಿಯಲ್ಲ ಎಂದು ಅಜ್ಜಿಗೆ ಕರೆಮಾಡಿ ಬಾರ್ಸಾದ ತಿರುಪತಿಯ ವಿವರಣೆ ಕೊಡಲು ಹೋದಳು. ಅಷ್ಟರಲ್ಲೇ ಯಾರೋ ಒಬ್ಬ ಹುಡುಗಿಯ ಕೈಯಿಂದ ಫೋನ್ ಕದಿಯಲು ಹೊರಟ. ಕಿವಿಗೆ ಇಟ್ಟುಕೊಂಡು ಮಾತಾಡುತ್ತಿದ್ದ ಫೋನನ್ನ ಕಿತ್ತುಕೊಳ್ಳಲು ಬಂದವನ್ನನ್ನ ಕೆಲವು ಜನ ಹಿಡಿದು ಫೋನ್ ವಾಪಸ್ಸು ಕೊಡಿಸಿದರು. “ಈ ಜನನಿಬಿಡ ಪ್ರದೇಶದಲ್ಲಿ ಹೀಗೆ ಫೋನಲ್ಲಿ ಮಾತಾಡಿಕೊಂಡು ಹೋಗಬಾರದು” ಎಂಬ ಎಚ್ಚರಿಕೆಯನ್ನೂ ಕೊಟ್ಟರು. ದೇವರ ಮುಂದೆಯೇ ಈ ಕಳ್ಳರ ಪ್ರಲಾಪ ನೋಡಿ ನಸುನಕ್ಕು ಯಾವುದೋ ದೇವಸ್ಥಾನದ ಮುಂದೆ ಸರಗಳ್ಳರಿದ್ದಾರೆ ಎಚ್ಚರಿಕೆ ಎಂದು ಹಾಕಿದ ಬೋಡನ್ನ ನೆನಸಿಕೊಂಡು ನಕ್ಕು ಮನೆಗೆ ಹೋಗುತ್ತಿದ್ದಳು.

ಇದೆಲ್ಲ ಆದ ಮೇಲೆ ಕ್ಲೈಮಾಕ್ಸಿನಲ್ಲಿ ಬರುವ ಪೊಲಿಸರ ಹಾಗೆ ಇಂಡಿಯನ್ ಹುಡುಗರು ಬಂದು, “ಏನೂ ಆಗಿಲ್ಲ ತಾನೆ” ಎಂದು ಅವರೂ ಟ್ರಾಲಿಯಲ್ಲಿ ಗ್ರಾಸರಿ ತೆಗೆದುಕೊಂಡು ಬರುವುದನ್ನ ಕಂಡು,”ಒಟ್ಟಿಗೆ ಹೋಗಬಹುದಿತ್ತಾ, ಸುಮ್ನೆ ಇಂಡಿಯನ್ ಸ್ಟೋರ್ಸಿನಲ್ಲಿ ದುಡ್ಡು ದಂಡವಾಯಿತು” ಎಂದು ಹುಡುಗಿ ಹೇಳುವಾಗ, ಕುಶಾಗ್ರನ ಕೈಯಲ್ಲಿ ಒಂದು ಪುಸ್ತಕ ಕಂಡಿತ್ತು. “ಏನ್ ಮಾರಾಯ ನೀನು ಪುಸ್ತಕ ಎಲ್ಲಾ ಓದೋಕೆ ಶುರು ಮಾಡಿದೀಯಾ, ಅದೂ ಆಂಟೋನ್ ಗೌದಿದೂ” ಎಂದು ಎಲ್ಲರೂ ನಕ್ಕು , “ಈ ನಾನ್ಸೆನ್ಸ್ ಬ್ಯಾಗ್ ಗಳನ್ನ ಮನೆಯಲ್ಲಿ ಹಾಕಿ ಎಲ್ಲಾದರೂ ಹೋಗೋಣ ಬೋರ್” ಎಂದು ಹುಡುಗಿ ಅಂದಾಕ್ಷಣ ಮನಸ್ವಿ “ನಂದೇ ಪ್ಲಾನ್” ಎಂದು ಹೇಳಿ ಎಲ್ಲರೂ ಅವರವರ ಮನೆಯ ಹಾದಿ ಹಿಡಿದರು.

ಈ ಬೆಂಗಳೂರಿನಲ್ಲಿ “ಎಲ್ಲಿ ಹೋಗೋದು” ಎಂಬ ಪ್ರಶ್ನೆ ಬಂದಾಗ ಹೇಗಾಗುತ್ತದೋ ಹಾಗೇಯೇ ಬಾರ್ಸಾಲೂ ಎಲ್ಲಿ ಹೋಗೋಣ ಎಂದು ಯೋಚನೆ ಮಾಡಿದಾಗ ಕೆಲವೇ ಕೆಲವು ಜಾಗಗಳಿಗೆ ಬಿಟ್ಟಿಯಾಗಿ ಹೋಗಬಹುದು ಎಂದು ಯೋಚನೆ ಮಾಡುವ ಹಾಗಾಗುತ್ತದೆ, ಲಾಲ್ ಭಾಗಿಗೆ ೫ ರುಪಾಯಿ ಪ್ರವೇಶ ಶುಲ್ಕ ಎಂದರೆ ಉರಿದುಕೊಳ್ಳುವ ಜನರಲ್ಲಿ ಈ ಐವರು ಇದ್ದರಾದರಿಂದ ಬಿಟ್ಟಿ ಜಾಗಗಳಿಗೇ ಹೋಗಲು ನಿರ್ಧರಿಸಿದರು. ಪಾರ್ಕ್ ಗ್ವೆಲಿಗೆ ಹೋಗೋಣ ಎಂದು ನಿರ್ಧಾರ ಮಾಡಿ ಮೆಟ್ರೋ ಹತ್ತಿದ್ದರು. “ಲೋ ಅದೇನೋ ಕಬ್ಬನ್ ಪಾರ್ಕಿನ ಥರಹ ಇದ್ದರೆ ಏನು ಮಾಡೋದು, ಅಂಥದೇನಿದೆ” ಎಂದು ಬೈದುಕೊಂಡೇ ಸಿಡ್ ಮತ್ತು ವಿಭೋರ್ ಬೇರೆಲ್ಲಾದರೂ ಹೋಗಬಹುದಾಗಿತ್ತು ಎನ್ನುತ್ತಿದ್ದರು. ಅಷ್ಟರಲ್ಲಿ ಗೌದಿ ಗೌದಿ ಎನ್ನುತ್ತಿದ್ದ ಮಂದಿಗೆ ಇವನ್ಯಾರು ಕೆಂಪೇಗೌಡನಾ ಎಂದೇ ಮೆಟ್ರೋ ಇಳಿದು ಪಾರ್ಕಿನ ಒಳಗೆ ಹೋದರು. ಬ್ಲೂ ಮೊಸಾಕಿನಿಂದ ತುಂಬಿದ ಕಲಾಕೃತಿಗಳು ಅರ್ಥವಾಗದಿರೋ ಆಕಾರಗಳನ್ನ ಕಂಡು ಈ ಐವರು ಅಜಂತಾ ಎಲ್ಲೋರಾದ ಬಗ್ಗೆ ಮಾತಾಡಲು ಶುರು ಮಾಡಿದರು. ಹುಡುಗಿ ಮಾತ್ರ, “ನಾನು ಅದನ್ನ ನೋಡಿಲ್ಲ” ಎಂದಾಕ್ಷಣ ಹುಡುಗರ ಕಾಟ ಶುರುವಾಯಿತು. ನಾವು ಭಾರತಕ್ಕೆ ಹೋದಮೇಲೆ ಅದನ್ನೆಲ್ಲಾ ನೋಡಲೇಬೇಕು ನೀನು ಎಂದು.

“ಅಲ್ಲಾ ನಂಗೊಂದು ಡೌಟು ಇಷ್ಟೆಲ್ಲಾ ಸ್ವಾತಂತ್ರ್ಯ, ಬೆಂಕಿ ಎಂದೆಲ್ಲಾ ಈ ದೇಶ ಸುಡುತ್ತಿದ್ದಾಗ ಅದು ಹೇಗೆ ಈ ಮನುಷ್ಯ ಇಷ್ಟೆಲ್ಲಾ ಒಳ್ಳೆ ಕಲಾಕೃತಿಗಳನ್ನ ಮಾಡುತ್ತಿದ್ದ, ಅದಕ್ಕೆಲ್ಲಾ ದುಡ್ಡೆಲ್ಲಿ ಸರಬರಾಜು ಆಗುತ್ತಿತ್ತು, ಪ್ರಾಯಶಃ ಅವನು ಸ್ಪಾನಿಷ್ ಸರ್ಕಾರವನ್ನ ಬೆಂಬಲಿಸುತ್ತಿದ್ದ” ಎಂದು ಹೇಳಿದಾಕ್ಷಣವೇ ಹುಡುಗರು ಕಿವಿ ಮುಚ್ಚಿಕೊಂಡು , “ಕುಯ್ಯಕ್ಕೆ ಶುರು ಮಾಡಬೇಡ, ಹಳೇ ಗರ್ಲ್ಫ್ರೆಂಡ್ ಕಥಯಾಗುತ್ತದೆ ಇದು” ಎಂದು ಬೈದು ಆ ಕಡೆ ಹೋದರು. ಆದರೂ ಈ ಗೌದಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾರ ಕಡೆ ಇದ್ದ ಎಂದು ತಿಳಿದುಕೊಳ್ಳುವ ಕುತೂಹಲ ಹುಡುಗಿಗಿತ್ತು.

ಪಾರ್ಕಿನಲ್ಲಿ ಒಂದು ಕಡೆ ಒಂದು ನಾಲ್ಕೈದು ಜನ ನಿಂತುಕೊಂಡು ಪಾಂಪ್ಲೆಟ್ ಹಂಚುತ್ತಿದ್ದರು. ಈ ಪಾರ್ಕನ್ನ ಮುಚ್ಚಿ ಎಂದು. “ಯಾಕೆ” ಎಂದು ಕೇಳಿದಾಕ್ಷಣ ಅದರಲ್ಲಿದ್ದ ಒಬ್ಬ ಹುಡುಗ “ಗೌದಿ ಬಹಳ ದೊಡ್ಡ ದಗಾಕೋರ ಅವನು ನಮ್ಮ ಹೋರಾಟಕ್ಕೆ ಬೆಂಬಲವನ್ನೇ ನೀಡಲ್ಲಿಲ್ಲ, ಅವನಿಗೆ ಕತಲಾನ್ ಬೇಕಿತ್ತು, ಅವನ ಭಾಷೆಯನ್ನ ಮಾತಾಡುವ ಹಕ್ಕು ಬೇಕಿತ್ತು ಆದರೆ ಸ್ಪಾನಿಷ್ ಪಾರುಪತ್ಯವೇ ಸಾಕಾಗಿತ್ತು, ಅವನಿಗೆ ಎಷ್ಟೆಲ್ಲಾ ದುಡ್ಡು ಕೊಟ್ಟು ನಮ್ಮ ಊರನ್ನ ಸುಂದರವಾಗಿಸುವುದಕ್ಕೆ ಅನುವು ಮಾಡಿಕೊಟ್ಟರೆ ನಮ್ಮ ಹೋರಾಟಕ್ಕೆ ಬೆಂಬಲ ಕೊಡಲ್ಲಿಲ್ಲ” ಎಂದು ವೀರಾವೇಷದಿಂದ ಒಬ್ಬ ಹುಡುಗ ಮಾತಾಡುತ್ತಿದ್ದ.

ಆಗಿನ ಕಾಲದ ಹೋರಾಟಕ್ಕೂ ಈಗಿನ ಕಾಲದವರು ನಮಗೆ ಬೆಂಬಲ ಕೊಡಲ್ಲಿಲ್ಲ ಎಂಬುದು ಹುಡುಗಿಗೆ ಬಹಳ ಹಾಸ್ಯಾಸ್ಪದವಾಗಿ ಕಾಣಿಸಿತ್ತು. ಆಗಿನ ಕಾಲದ ಹೋರಾಟದಲ್ಲಿ ಕತಲನ್ನರಿಗೆ ಸರಿಯಾದ ಹಕ್ಕೂ ಸಹ ಇರಲ್ಲಿಲ್ಲ, ಅಥವಾ ಅದು ಅವರನ್ನ ತುಳಿಯುವ ಹುನ್ನಾರಕ್ಕೇ ಬಂದಿತ್ತು ಹಾಗಿದ್ದು ಕೆಲವರು ಸಾಹುಕಾರರು ಸೇರಿಕೊಂಡು ೧೭ ಹೆಕ್ಟೇರಿನ ಪ್ರದೇಶವನ್ನ ತೆಗೆದುಕೊಂಡು ೬೦ ಬಂಗಲೆಗಳನ್ನ ಕಟ್ಟಿಸುವ ದೊಡ್ಡ ಪ್ಲಾನ್ ಮಾಡಿಕೊಂಡಿದ್ದ ಗೌಡಿ, ಆದರೆ ಕಟ್ಟೋಕಾಗಿದ್ದು ಬರೀ ೩ ಮಾತ್ರ. ಕ್ಲಾಸೆಟ್ ಹೋರಾಟಗಾರ ಅದು ಇದು ಎಂದು ಬಾಯಿಗೆ ಬಂದ ಹಾಗೆ ಮಾತಾಡಿ ಗಲಾಟೆ ರಾಡಿ ಎಬ್ಬಿಸುತ್ತಿದ್ದರು ಹುಡುಗರು, ಹೀಗಿದ್ದಾಗ ಅಲ್ಲೇ ಫೌಂಟೆನಿನೆ ಮೇಲೆ ಗೌಡಿ ವಿನ್ಯಾಸ ಮಾಡಿದ ಮೊಸಾಯಿಕ್ ಕತಲಾನ್ ಧ್ವಜ, ಸಂತ ಜಾರ್ದಿಯ ಪ್ರತಿಮೆ ನಗುತ್ತಿತ್ತು…

‍ಲೇಖಕರು avadhi

June 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: