ಸುಂದರ ಗುಲಾಬಿಗೇಕೆ ಅಷ್ಟೊಂದು ಮುಳ್ಳುಗಳು??!..

ಶ್ರೀದೇವಿ ಹುಕ್ಕೇರಿ

ಸೌಂದರ್ಯ ಎನ್ನುವುದರ ಜೊತೆಗಿನ ಇತರ ಪಯಣಿಗರೆಂದರೆ ನೋವು, ಹಿಂಸೆ, ಕಷ್ಟ, ಅವಮಾನಗಳು. ಹಿಂದಿನಿಂದ ಇಂದಿನ ತಲೆಮಾರಿನವರೆಗೆ ಎಲ್ಲರೂ ಕಂಡುಕೊಂಡ ಸತ್ಯ ಸಂಗತಿ ಇದು. ಮನಸ್ಸನ್ನು ಅರಳಿಸುವ ನಗುವ ಸುಂದರ ಗುಲಾಬಿ ಹೂವಿನ ಹಿಂದೆ ರಕ್ತ ಹರಿಸಿ ಚುಚ್ಚಿ ನೋಯಿಸುವ ಮುಳ್ಳುಗಳು. ಇದು ಆ ಪ್ರಕೃತಿಯ ವಿಚಿತ್ರ ಸೃಷ್ಟಿ ಅಲ್ವಾ??..  ಹೌದು ಸ್ನೇಹಿತರೆ, ವಿಚಿತ್ರದಂತೆ ಕಂಡರೂ ಇದರ ಹಿಂದೆ ಒಂದು ಅದ್ಭುತವಾದ ಜೀವನ ಪಾಠವೇ ಅಡಗಿದೆ. ಯಾವುದು ಬಹುಬೇಗನೆ ಮನಸ್ಸನ್ನು ಆಕರ್ಷಿಸುತದೆಯೋ, ತನ್ನತ್ತ ಸೆಳೆದುಕೊಳ್ಳುತದೆಯೋ ಆ ವಿಷಯ ಅಥವಾ ವಸ್ತುವಿನ ಹಿಂದೆ ಅಪಾಯ ಕಟ್ಟಿಟ್ಟ ಬುತ್ತಿ.     

ಇದು ವಿಷಯವಸ್ತುವಿನ ಒಂದು ಮುಖವಾದರೆ, ಇನ್ನೊಂದು ಮುಖ ಸೌಂದರ್ಯ ರಕ್ಷಣೆಗೆ ಮುಳ್ಳುಗಳು ಅನಿವಾರ್ಯ ಮತ್ತು ಅಗತ್ಯ ಕೂಡ. ಏಕೆಂದರೆ ಸುಂದರವಾಗಿರುವುದನ್ನು ಆಸೆಪಡುವವರು ಸಾಕಷ್ಟು ಜನ ಮತ್ತು ಆಸೆ ಪಟ್ಟಿದ್ದನ್ನು ಮುಟ್ಟಿ ಗಾಯಗೊಳಿಸುವವರು ಸಿಕ್ಕಾಪಟ್ಟೆ ಜನ. ಹೀಗಿರುವಾಗ ಮುಟ್ಟಿ ನೋಯಿಸುವ ಅವರನ್ನೇ ಚುಚ್ಚಿ ನೋಯಿಸಲ್ಲಿಕ್ಕೆ ಮುಳ್ಳುಗಳು ಬೇಕೆ ಬೇಕು ತಾನೇ??!.

ನಮ್ಮ ಕಾಲೇಜಿನ ಸಹಪಾಠಿಯೊಬ್ಬಳ ಉದಾಹರಣೆಯನ್ನು ತಮ್ಮೆದುರು ಹಂಚಿಕೊಳ್ಳಲು ಇಚ್ಚಿಸುತ್ತೇನೆ. ಆಕೆಯದು ನಿಜಕ್ಕೂ ಅಪ್ಪಟ ಸೌಂದರ್ಯ, ಹಳ್ಳಿಯ ವಾತಾವರಣದಲ್ಲಿ, ಬಡತನದ ಬೇಗೆಯಲ್ಲಿ ನೊಂದು ಬೆಂದು ಅರಳಿನಿಂತ ಗುಲಾಬಿ ಹೂ ಅವಳು. ಹಳ್ಳಿಯ  ಹೈಸ್ಕೂಲ್ ವಿದ್ಯಾಭ್ಯಾಸದ ನಂತರ ಪಕ್ಕದೂರಿನ ಕಾಲೇಜಿಗೆ ತನ್ನ ಗೆಳತಿಯರ ಜೊತೆ ದಿನಾಲು ಬಂದು ಹೋಗುತ್ತಿದ್ದ ಆಕೆಯ ಸಿಗ್ದ ಸೌಂದರ್ಯ ಎಂಥವರನ್ನೂ ಬೆರಗು ಮಾಡುವಂತಹದ್ದು. ಪಾದರಸದಂತೆ ಚೂಟಿಯಾಗಿದ್ದ ಆಕೆಯ ಬದುಕಿನಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಯಿತು.

ಆಕೆಯ ಸುಂದರ ಮುಖಕ್ಕೆ ಮನಸೋತ ಶ್ರೀಮಂತ ಯುವಕನೊಬ್ಬ ಆಕೆಯನ್ನ ಬೆನ್ನು ಬಿದ್ದು ಕಾಡಿಸುವುದು ಅಷ್ಟೇ ಅಲ್ಲದೆ, ಆಕೆ ಒಪ್ಪದಿದ್ದಾಗ ಬಲವಂತವಾಗಿ ಆಕೆಯ ಜೀವನವನ್ನೇ ಹಾಳು ಮಾಡಿಬಿಟ್ಟ. ಅಂದಿನಿಂದ ಸಮಾಜದಲ್ಲಿ ಮುಖ ಎತ್ತಿ ತಿರುಗದ ಪರಿಸ್ಥಿತಿಯಲ್ಲಿರುವ ಆಕೆಯನ್ನು ಕಂಡರೆ ಕರುಳು ಹಿಂಡಿದಂತಾಗುತ್ತದೆ. ಸುಂದರತೆಯನ್ನು ರಕ್ಷಿಸುವ ಮುಳ್ಳುಗಳೇಕೆ ಆಕೆಯ ರಕ್ಷಣೆಗೆ ಸಹಾಯಕವಾಗಲಿಲ್ಲಾ ಎಂಬ ಪ್ರಶ್ನೆಗೆ  ಈಗಲೂ ನನಗೆ ಉತ್ತರ ಸಿಕ್ಕಿಲ್ಲ. ಸೌಂದರ್ಯ ಕೆಡಿಸುವ ಕೈಗಳು ಮುಳ್ಳು ಗಳಿಗಿಂತಲೂ ಬಲಿಷ್ಠವೇ!?..

ಇಂತಹ ಸಾವಿರಾರು ಉದಾಹರಣೆಗಳು ದಿನಾಲು ನನ್ನ ಕಣ್ಮುಂದೆ ಜರುಗುತ್ತಲೇ ಇರುತ್ತವೆ. ಇದಕ್ಕೆ ಮುಖ್ಯ ಕಾರಣ ಇಂದಿನ ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಯಾವುದು ತಪ್ಪು, ಯಾವುದು ಸರಿ, ತಾವು ತೆಗೆದುಕೊಂಡ ನಿರ್ಧಾರದಿಂದ ಯಾರ ಮನಸ್ಸಿಗೆ ಎಷ್ಟು ತೊಂದರೆ ಆಗುತ್ತದೆ ಎಂಬುದರ ಪರಿಕಲ್ಪನೆ ಇಲ್ಲದೆ ಇರುವುದು. ಒಂದು ಕ್ಷಣದ ಆಕರ್ಷಣೆಗೆ ಮನಸೋತು ಬಲತ್ಕಾರವಾಗಿ ಹೆಣ್ಣಿನ ಹೂ ಮನವನ್ನು ಘಾಸಿಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಹೇಳಿ?. ಒಮ್ಮೊಮ್ಮೆ ರಕ್ಷಣೆಯ ಆ ಬಲಿಷ್ಠ ಅಮೂಲ್ಯ ಮುಳ್ಳುಗಳನ್ನು ದಾಟಿ ಪೈಶಾಚಿಕ ಕೈಗಳು ತಮ್ಮ ನೀಚತನವನ್ನು ಪ್ರದರ್ಶಿಸುತ್ತವೆ. ಇಂತಹ ಸಮಯದಲ್ಲಿ ಹೂ ತನ್ನ ಮುಗ್ಧತೆ ಮತ್ತು ಕೋಮಲತೆಯ ಚಿಪ್ಪಿನಿಂದ ಹೊರಬಂದು ತನ್ನನ್ನು ತಾನು ಕಾಪಾಡಿಕೊಳ್ಳಲು ಅಗತ್ಯ ರಕ್ಷಣಾ ಕವಚವನ್ನು, ತಂತ್ರಗಳನ್ನು ಮೈಗೂಡಿಸಿಕೊಳ್ಳಬೇಕಾದದ್ದು ಅತಿ ಅಗತ್ಯವಾಗಿದೆ.

ಜೀವನ ಅಂದ್ರೆ ಕೇವಲ ಹೂವಿನ ಹಾಸಿಗೆಯ ಪಯಣವಲ್ಲ. ಪ್ರತಿದಿನ, ಪ್ರತಿಕ್ಷಣ ಹಲವು ತೆರನಾದ ಸಮಸ್ಯೆ ಸವಾಲುಗಳು ಬಾಯ್ತೆರೆದು ನುಂಗಲು ಹೊಂಚುಹಾಕಿ ಕಾದಿರುತ್ತವೆ. ಆದರೆ ದುರದೃಷ್ಟವಶಾತ್ ಅಪಾಯಕ್ಕಿಂತ ಪೂರ್ವದಲ್ಲಿ ಅದರ ಸುಳಿವು ನಮಗೆ ಆಗದೆ ಇರುವುದು. ಎಲ್ಲರೂ ನಮ್ಮವರೇ, ನಮಗೆ ಏನು ಮತ್ತು ಯಾಕೆ ಹಾನಿ ಮಾಡುತ್ತಾರೆ ಎಂಬ ನಿರ್ಲಕ್ಷ್ಯತನದ ನಂಬಿಕೆಯು ಸುಂದರ ಬದುಕಿನ ಅಂತ್ಯಕ್ಕೆ ಕಾರಣವಾಗಬಹುದು.

ಯಾರೋ ಒಬ್ಬರು ನಮ್ಮ ಬಗ್ಗೆ ವಿಶೇಷವಾದ ಕಾಳಜಿ, ಮುತುವರ್ಜಿ ತೋರಿಸುತ್ತಿದ್ದಾರೆ ಅಂತಾದರೆ ಅದರ ಹಿಂದಿನ ಮನದುದ್ದೇಶವನ್ನು ನಾವು ಅರ್ಥೈಸಿಕೊಳ್ಳಲೆಬೇಕು. ಒಳ್ಳೆಯ ಮನಸ್ಸಿನಿಂದ ನಮ್ಮ ಶ್ರೇಯಸ್ಸಿಗೆ ಶ್ರಮಿಸುವ ಮನಸ್ಸು ಸಿಗುವುದು ತುಂಬಾ ದುರ್ಲಭ. ನಗುನಗುತ್ತಾ ಅರಳಿ ಪರಿಮಳದ ಸೌರಭ ಸೂಸುವುದು ಹೂವಿನ ಸಹಜಗುಣ ವಾಗಿರೋದರಿಂದ ಅದರ ಅರಿವಿಗೆ ಬರದ ಹಾಗೆ ದುರುಪಯೋಗದ ಕೈಚಳಕ ನಡೆದೇ ಹೋಗುತ್ತದೆ. ಸಹಜ ನಗುವನ್ನು, ಕೋಮಲ ವರ್ತನೆಯನ್ನು ಅಪಾರ್ಥ ಮಾಡಿಕೊಂಡು ವ್ಯಕ್ತಿತ್ವಕ್ಕೆ ಮಸಿಬಳಿಯುವ ಪ್ರಯತ್ನಗಳಿಗೆ ಏನು ಕಡಿಮೆ ಇಲ್ಲ.

ಹಾಗಂತ ಪ್ರತಿಯೊಬ್ಬರೂ ಕೆಟ್ಟವರು ಮೋಸಮಾಡುವವರು ಅನ್ನೋದು ನನ್ನ ಮಾತಿನ ಅರ್ಥ ಅಲ್ಲ. ಎಷ್ಟೋ ಜನರ ಸಾಧನೆಯ ಹಿಂದೆ ಹೆಗಲಿಗೆ ಹೆಗಲು ಕೊಟ್ಟು ಪ್ರೋತ್ಸಾಹಿಸುವ, ಮುನ್ನಡೆಸುವ ಸಹಾಯ ಹಸ್ತಗಳು ಅದೃಷ್ಟವಂತರ ಪಾಲಿಗೆ ಇದ್ದೇ ಇರುತ್ತವೆ. ಆದರೆ ಪ್ರಮಾಣದಲ್ಲಿ ಹೋಲಿಸಿದರೆ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.   

ಅದೇನೇ ಇರಲಿ ಪ್ರತಿ ಪ್ರತಿಭೆಗೆ ಅರಳುವ ಮನಸ್ಸಿದೆ. ಬೆಳೆಯುವ ಛಲ ಇದೆ. ನನ್ನ ಸುತ್ತ ಪರಿಮಳದ ಸೌರಭ ಸೂಸುವ ಎಲ್ಲಾ ಅವಕಾಶ ಅರ್ಹತೆಗಳು ಇವೆ. ಅವುಗಳನ್ನು ನಾಶ ಮಾಡುವ ಹಕ್ಕು ಯಾರಿಗೂ ಇರಬಾರದು. ಗುಲಾಬಿ ರಕ್ಷಣೆಗೆ ನೈಸರ್ಗಿಕ ಮುಳ್ಳುಗಳು ಇರುವಂತೆ ಸಾಧನೆಯ ಪ್ರತಿಭೆಗಳಿಗೆ ದೃಢಸಂಕಲ್ಪ, ಸವಾಲು ಸ್ವೀಕರಿಸುವ ಆಂತರಿಕ ಮನೋಸ್ಥೈರ್ಯ, ಖಂಡಿತವಾಗಿ ಇರಲೇಬೇಕು.  ಪರಿಹಾರವೇ ಇಲ್ಲದ ಸವಾಲನ್ನು ಖಂಡಿತ ಆ ದೇವರು ಸೃಷ್ಟಿಸಲಾರ. ಅಂದ ಮೇಲೆ ತಾತ್ಕಾಲಿಕ ಅವಮಾನ, ಮೋಸಗಳಿಗೆ ಮನನೊಂದು ಜೀವನದ ತಪ್ಪು ನಿರ್ಧಾರಗಳಿಗೆ ಬಲಿಯಾಗುವುದು ಎಷ್ಟು ಸರಿ ಹೇಳಿ??

ಯುವ ಮನಗಳೇ, ಕೊನೆಯದಾಗಿ ಒಂದು ಮಾತು. ಯಾರಲ್ಲಿ ನಿಜವಾಗಿ ಗುರುತಿಸಿಕೊಳ್ಳುವ ಪ್ರತಿಭೆ ಇರುತ್ತದೆಯೋ, ಮನಸ್ಸನ್ನು ಆಕರ್ಷಿಸುವ ಬಾಹ್ಯ ಹಾಗೂ ಆಂತರಿಕ ವ್ಯಕ್ತಿತ್ವ ಇರುತ್ತದೆಯೋ ಅಂತಹವರು ಮಾನಸಿಕವಾಗಿ, ದೈಹಿಕವಾಗಿ ತಮಗೆ ತಾವೇ ಗಟ್ಟಿಗೊಳ್ಳದೆ ಬೇರೆ ದಾರಿಯೇ ಇಲ್ಲ. ಬೇರುಗಳು ಆಳಕ್ಕೆ ಇಳಿದಷ್ಟು ವ್ಯಕ್ತಿತ್ವದ ಮರ ಎತ್ತರಕ್ಕೇರಲು ಸಾಧ್ಯ. ಗುಲಾಬಿ ಮನಸ್ಸಿನ ಮುಗ್ಧ ಹೂಗಳೇ, ನಿಮ್ಮ ರಕ್ಷಣೆಯ ರಕ್ಷಾಕವಚ ಗಳನ್ನು  ಗಟ್ಟಿಗೊಳಿಸಿಕೊಳ್ಳುವ ಕಲೆಯನ್ನು ನೀವು ಇಂದೆ  ಕಲಿತುಕೊಳ್ಳಿ. ನಿಮ್ಮ ಪ್ರಯತ್ನಕ್ಕೆ ಸದಾ ಜಯವಾಗಲಿ…

‍ಲೇಖಕರು Avadhi

May 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: