ಸಿ ಎಸ್ ಭೀಮರಾಯ ಓದಿದ ‘ವೀರಕೇಸರಿ ಅಮಟೂರ ಬಾಳಪ್ಪ’

ಸಿ ಎಸ್ ಭೀಮರಾಯ

ಸಿ.ಎಸ್.ಭೀಮರಾಯ(ಸಿಎಸ್ಬಿ) ನಾಡಿನ ಹೊಸ ತಲೆಮಾರಿನ ಪ್ರತಿಭಾನ್ವಿತ ಕವಿ ಮತ್ತು ವಿಮರ್ಶಕ. ಕಲಬುರ್ಗಿಯವರಾದ ಸಿಎಸ್ಬಿ ಕಳೆದ ಹದಿಮೂರು ವರ್ಷಗಳಿಂದ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿ ಪರಿಣತಿ ಪಡೆದ ಸಿ.ಎಸ್.ಭೀಮರಾಯ ಈವರೆಗೆ ಕನ್ನಡದಲ್ಲಿ ಏಳು ಮತ್ತು ಆಂಗ್ಲ ಭಾಷೆಯಲ್ಲಿ ಐದು ಕೃತಿಗಳನ್ನು ಪ್ರಕಟಿಸಿದ್ದಾರೆ.

ಅರವತ್ತಕ್ಕೂ ಹೆಚ್ಚು ವಿಮರ್ಶಾ ಲೇಖನಗಳು ಮತ್ತು ಇಪ್ಪತ್ತಕ್ಕೂ ಹೆಚ್ಚು ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಳೆದ ಹದಿನೈದು ವರ್ಷಗಳಿಂದ ವೈಚಾರಿಕತೆ, ಸಮಾನತೆ ಮತ್ತು ಮಾನವೀಯತೆಗಳನ್ನು ತನ್ನ ಬರವಣಿಗೆಯ ಮೂಲ ಧ್ಯೇಯವನ್ನಾಗಿಟ್ಟುಕೊಂಡು ಬರೆಯುತ್ತಿದ್ದಾರೆ.

ಡಾ. ಬಾಳಾಸಾಹೇಬ ಲೋಕಾಪುರ ನವ್ಯೋತ್ತರ ಕನ್ನಡ ಸಾಹಿತ್ಯದ ಅತ್ಯಂತ ಪ್ರಮುಖ ಲೇಖಕರಲ್ಲಿ ಒಬ್ಬರು. ಕಥೆ ಮತ್ತು ಕಾದಂಬರಿ ಎರಡು ಪ್ರಕಾರಗಳಲ್ಲಿ ಅವರು ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಲೋಕಾಪುರ ಕಥನಕ್ಕೆ ಕನ್ನಡ ಕಥಾಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವಿದೆ.

ಡಾ. ಬಾಳಾಸಾಹೇಬ ಲೋಕಾಪುರರ ‘ವೀರಕೇಸರಿ ಅಮಟೂರ ಬಾಳಪ್ಪ’ ಐತಿಹಾಸಿಕ ಕಾದಂಬರಿ. ಚಾರಿತ್ರಿಕ ಘಟನೆಗಳನ್ನು ಆಧರಿಸಿ ಕಲ್ಪನೆಯನ್ನು ಹರಿಬಿಟ್ಟ ಒಂದು ಕಾಮನಬಿಲ್ಲು. ಅಮಟೂರ ಬಾಳಪ್ಪನ ಬದುಕನ್ನು ಕೇಂದ್ರವಾಗಿಸಿಕೊಂಡು ಕಿತ್ತೂರು ಸಂಸ್ಥಾನದ ಆಡಳಿತ ವ್ಯವಸ್ಥೆಯನ್ನು ಕಲಾತ್ಮಕವಾಗಿ ಇಲ್ಲಿ ಕಟ್ಟಿಕೊಡಲಾಗಿದೆ. ಐತಿಹಾಸಿಕ ಘಟನೆಗಳನ್ನು ಕ್ರಮ ಕ್ರಮವಾಗಿ ಹಾಗೂ ವಿವರಣಾತ್ಮಕವಾಗಿ ಕಟ್ಟಿಕೊಡುವ ಈ ಕಾದಂಬರಿಯ ಕಥನ ಕ್ರಮ ಆಕರ್ಷಕವಾಗಿದೆ.

ಬಾಳಾಸಾಹೇಬ ಲೋಕಾಪುರ ಮೂಲಭೂತವಾಗಿ ಒಂದು ಮನುಷ್ಯ ಪ್ರಪಂಚವನ್ನು ಒಂದು ನಿರ್ದಿಷ್ಟ ಕಾಲ-ದೇಶಗಳ ಸಂದರ್ಭಗಳಲ್ಲಿ ದಟ್ಟವಾಗಿ ಚಿತ್ರಿಸುವ ಪ್ರತಿಭಾನ್ವಿತ ಲೇಖಕ. ‘ವೀರಕೇಸರಿ ಅಮಟೂರ ಬಾಳಪ್ಪ’ ಕಾದಂಬರಿಯಲ್ಲಿ ಲೋಕಾಪುರ ಇತಿಹಾಸ ಮತ್ತು ಸಂಶೋಧನೆಗಳ ಬೆನ್ನುಹತ್ತಿ ಹೋಗಿದ್ದಾರೆ. ‘ವೀರಕೇಸರಿ ಅಮಟೂರ ಬಾಳಪ್ಪ’ನ ಹಿನ್ನೆಲೆಯಲ್ಲಿ, ಲೋಕಾಪುರರ ದೀರ್ಘಕಾಲೀನ ಸಂಶೋಧನೆಯ ಕಥೆಯೇ ಇದೆ. ಆದರೆ ಕಾದಂಬರಿ ಈ ಸಂಶೋಧನೆಗಳ ಒಣ ರಗಳೆಯಾಗಿಲ್ಲ. ಅದು ಮೂಲಭೂತವಾಗಿ ಒಂದು ಕಾದಂಬರಿಯಾಗಿದೆ.

ಈ ಕಾದಂಬರಿಯನ್ನು ಕೇವಲ ಒಂದು ಆಕರ್ಷಕ ಕಥೆಯಾಗಿಯೂ ಬೇಸರವಿಲ್ಲದೆ ಓದಬಹುದಾಗಿದೆ. ಈ ಕಾದಂಬರಿಯು ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದ ಕಾಲಮಾನದಲ್ಲಿ ನಡೆಯುವ ಕಥಾನಕ. ವೀರ ಯೋಧ ಅಮಟೂರ ಬಾಳಪ್ಪ ಎಂಬ ಪಾತ್ರದ ಸುತ್ತ ಹೆಣೆಯಲಾಗಿರುವ ಈ ಕೃತಿ ಅಮಟೂರ ಬಾಳಪ್ಪನ ವೈಯಕ್ತಿಕ ಜೀವನದ ಹಲವು ಮಜಲುಗಳನ್ನು ಚಿತ್ರಿಸುವಂತೆ ಆ ಕಾಲದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಕಥೆಗೆ ಪೂರಕವಾಗುವಂತೆ ಓದುಗರ ಮುಂದಿಡುತ್ತದೆ. ಅಮಟೂರ ಬಾಳಪ್ಪನ ಪಾತ್ರವು ಕನ್ನಡದ ಐತಿಹಾಸಿಕ ಕಾದಂಬರಿ ಪರಂಪರೆಯಲ್ಲಿಯೇ ಒಂದು ಅನನ್ಯ ಮತ್ತು ವಿಶಿಷ್ಟ ಸೃಷ್ಟಿ.

ಈ ಕಾದಂಬರಿಯಲ್ಲಿ ಅಮಟೂರ ಬಾಳಪ್ಪನನ್ನು ತೀರ ಹೊಸದಾಗಿ ಅರ್ಥಮಾಡಿಕೊಳ್ಳುವ, ಆ ಮೂಲಕ ಹೊಸದೇ ಆದ ವ್ಯಾಖ್ಯಾನವೊಂದನ್ನು ಕಂಡುಕೊಳ್ಳುವ ಯಶಸ್ವೀ ಪ್ರಯತ್ನವಾಗಿದೆ. ಇತಿಹಾಸದಲ್ಲಿ ಕಳೆದು ಹೋದ ಒಂದು ಪುಟ ಅಮಟೂರ ಬಾಳಪ್ಪ. ಇತಿಹಾಸದ ಪುಟಗಳಲ್ಲಿ ಅಮಟೂರ ಬಾಳಪ್ಪ ಎಲ್ಲಿಯೂ ದಾಖಲಾಗಿಲ್ಲ. ಕಿತ್ತೂರ ಯುದ್ಧದ ಪ್ರಮುಖ ಪಾತ್ರದಾರಿಯಾಗಿದ್ದ ಅಮಟೂರ ಬಾಳಪ್ಪ ಜನರ ವಿಸ್ಮೃತಿಗೆ ಮತ್ತು ಇತಿಹಾಸಕಾರರ ಅವಜ್ಞೆಗೆ ಬಲಿಯಾಗಿ ಅಜ್ಞಾತವಾಗಿ ಹೂತು ಹೋದವನು. ಕಿತ್ತೂರು-ಬ್ರಿಟಿಷ್ ಯುದ್ಧ ನಡೆದು ಎರಡು ನೂರು ವರ್ಷಗಳು ಕಳೆದಿವೆ.

ಸಾವಿರಾರು ವರ್ಷಗಳ ಹಿಂದಿನ ಯುದ್ಧಗಳನ್ನು ನೆನಪಿಡುವ ನಾವು ನಮ್ಮ ನಾಡಿನಲ್ಲೇ ಎರಡು ನೂರು ವರ್ಷಗಳ ಹಿಂದೆ ನಡೆದ ಇತಿಹಾಸವನ್ನು ಕತ್ತಲೆಗೆ ಹಾಕಿಬಿಟ್ಟಿದ್ದು ವಿಚಿತ್ರ ಸಂಗತಿ. ಇತಿಹಾಸದಲ್ಲಿ ಮರೆತು ಹೋದ ಅಮಟೂರ ಬಾಳಪ್ಪನ ಕಥೆಯನ್ನು ಹುಡುಕಿ ತೆಗೆದು ಬಾಳಪ್ಪನಿಗೆ ಪುನರ್‌ಜನ್ಮ ಕೊಟ್ಟವರು ಕಾದಂಬರಿಕಾರ ಲೋಕಾಪುರ. ಕಿತ್ತೂರ ಸಂಸ್ಥಾನದ ಒಂದು ಭಾಗವಾಗಿರುವ ಅಮಟೂರ ಬಾಳಪ್ಪನ ಕುರಿತು ಬಹಳ ಜನರಿಗೆ ತಿಳಿದಿಲ್ಲ. ಅಮಟೂರ ಬಾಳಪ್ಪನ ಬಗ್ಗೆ ಚಾರಿತ್ರಿಕವಾಗಿ ಮತ್ತು ಸಾಹಿತ್ಯಿಕವಾಗಿ ಹೆಚ್ಚಿನ ದಾಖಲೆಗಳು ನಮಗೆ ಲಭ್ಯವಿಲ್ಲ.

ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರ ಕುರಿತು ಈವರೆಗೆ ಹಲವಾರು ಕಥೆ, ಕಾದಂಬರಿ ಮತ್ತು ಸಿನಿಮಾಗಳು ಬಂದಿವೆ. ಆದರೆ ಸಂಗೊಳ್ಳಿ ರಾಯಣ್ಣನಷ್ಟೆ ಪರಾಕ್ರಮಿಯಾಗಿದ್ದ ಅಮಟೂರ ಬಾಳಪ್ಪನ ಜೀವನ ಸಾಧನೆಗಳ ಕುರಿತು ಸಂಶೋಧನೆ ಮಾಡದಿರುವುದು ವಿಚಿತ್ರ ಸಂಗತಿ. ಈ ನಾಡಿನ ವೀರ ಯೋಧನ ನೆನಪು ಜನಮಾನಸದಿಂದ ಮಾಸಿ ಹೋಗಬಾರದೆಂಬ ತೀವ್ರ ಕಾಳಜಿಯಿಂದ ಲೋಕಾಪುರ ಈ ಕಾದಂಬರಿಯನ್ನು ರಚಿಸಿದ್ದು ಕಂಡುಬರುತ್ತದೆ. ಲೇಖಕರ ವಿಚಾರ ಮತ್ತು ಕಲ್ಪನೆ ಅದ್ಭುತವಾಗಿವೆ.

ಗತಕಾಲದ ಚರಿತ್ರೆಯ ಜೊತೆಗೆ ಅಂದಿನ ಸಮಗ್ರ ಬದುಕಿನ ವಿವರಗಳನ್ನು ದಾಖಲಿಸಿಕೊಡಬೇಕಾದ ಐತಿಹಾಸಿಕ ಕಾದಂಬರಿ ರಚಿಸುವುದು ಲೇಖಕನ ಸಾಮರ್ಥ್ಯಕ್ಕೆ ಒಂದು ನಿಕಷವೆ. ಇತಿಹಾಸದ ಘಟನೆಗಳು ಕೇವಲ ದಾಖಲೆಯಾಗದೆ, ಅದೇ ಕಾಲಕ್ಕೆ ಆ ಐತಿಹಾಸಿಕ ದಾಖಲೆಗಳನ್ನು ಬಿಡದ ಹಾಗೆ ಕಾದಂಬರಿಯ ಸೌಧ ಕಟ್ಟುವುದು ಕಲೆಗಾರನ ಕೌಶಲವನ್ನು ಬಯಸುವಂಥದು. ಇದು ನಿಜಕ್ಕೂ ಪರಿಶ್ರಮ ಹಾಗೂ ತಾಳ್ಮೆಯ ಕೆಲಸ. ಸಾಮಾಜಿಕ ಕಾದಂಬರಿಗಿAತ ಐತಿಹಾಸಿಕ ಕಾದಂಬರಿ ರಚಿಸುವುದು ಹೆಚ್ಚಿನ ಜವಾಬ್ದಾರಿಯುತ ಕಾರ್ಯವಾಗಿದೆ. ಐತಿಹಾಸಿಕ ಸತ್ಯದ ಆವರಣದಲ್ಲಿಯೇ ಲೇಖಕನ ಕಲ್ಪನೆ ಕೆಲಸ ಮಾಡಬೇಕಾಗುತ್ತದೆ.

ಭಾರತದಲ್ಲಿ ಸಂಪೂರ್ಣ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪಿಸುವ ಉತ್ಕಟ ಮಹತ್ವಾಕಾಂಕ್ಷೆ ಹೊಂದಿದ್ದ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದವರೆಂದರೆ ಈ ನಾಡಿನ ದೇಶೀಯ ಸಂಸ್ಥಾನಿಕರು. ಬ್ರಿಟಿಷರನ್ನು ಈ ದೇಶದಿಂದ ಓಡಿಸುವುದೇ ಅವರ ಗುರಿಯಾಗಿತ್ತು. ಬ್ರಿಟಿಷರ ದೈತ್ಯಶಕ್ತಿಗೆದುರಾಗಿ ನಿಂತು ತಮ್ಮ ಪರಾಕ್ರಮವನ್ನು ಮೆರೆದು ಹುತಾತ್ಮರಾಗಿರುವ ಆ ವೀರರು ನಮ್ಮ ಐತಿಹಾಸಿಕ ಪರಂಪರೆಯಲ್ಲಿ ಶಾಶ್ವತವಾಗಿದ್ದಾರೆ. ಆ ಸಂಸ್ಥಾನಿಕ ಅರಸರಲ್ಲಿದ್ದ ಸಾಮಾನ್ಯ ಸೈನಿಕರು ತೋರಿದ ಪರಾಕ್ರಮ ಅಪ್ರತಿಮವಾದುದು.

ಕನ್ನಡ ನಾಡಿನಾದ್ಯಂತ ಇಂಥ ವೀರರ ಹೆಸರುಗಳು ಜನಜನಿತವಾಗಿವೆ. ಇಂಥವರಲ್ಲಿ ಉತ್ತರ ಕರ್ನಾಟಕದಲ್ಲಿ ಮುಖ್ಯವಾಗಿ ಹೆಸರಿಸಬಹುದಾದವರೆಂದರೆ ಕಿತ್ತೂರು ಮತ್ತು ನರಗುಂದದ ಸಂಸ್ಥಾನಿಕರು ಹಾಗೂ ಅವರ ವೀರ ಯೋಧರು. ಬಾಳಾಸಾಹೇಬ ಲೋಕಾಪುರರ ಈ ಕಾದಂಬರಿ ಕಿತ್ತೂರು ಸಂಸ್ಥಾನಿಕರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಮತ್ತು ದಂಗೆಗಳ ಮೇಲೆಯೇ ವಿಶೇಷವಾದ ಬೆಳಕು ಚೆಲ್ಲುತ್ತದೆ.

ಕಿತ್ತೂರು ಸಂಸ್ಥಾನದಲ್ಲಿ ನಡೆದ ಐತಿಹಾಸಿಕ ಹೋರಾಟವನ್ನು ಚಿತ್ರಿಸುವ ಲೋಕಾಪುರರ ಕಾದಂಬರಿ ‘ವೀರಕೇಸರಿ ಅಮಟೂರ ಬಾಳಪ್ಪ’. ಈ ಹೋರಾಟದ ನೇತೃತ್ವ ವಹಿಸಿದ ನಾಯಕ ರಾಜಮನೆತನದವನಲ್ಲ; ರಾಜಮನೆತನಕ್ಕೆ ನಿಷ್ಠನಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣತೆತ್ತ ವೀರ ಯೋಧ ಅಮಟೂರ ಬಾಳಪ್ಪ. ಕಿತ್ತೂರಿಗೆ ಜೀವಕೊಡುವ ಜೀವಂತ ಹುಲಿ ಬಾಳಪ್ಪ. ಸ್ವಾಭಿಮಾನ, ಸ್ವದೇಶಾಭಿಮಾನ ಮತ್ತು ಸ್ವಾತಂತ್ರ್ಯ ದಾಹಗಳು ಅವನಲ್ಲಿ ಸದಾ ಜಾಗೃತವಾಗಿದ್ದವು. ಬಾಳಪ್ಪ ಸಾಮಾನ್ಯ ಸೈನಿಕ. ಆದರೆ, ವೀರತನ, ಹೋರಾಟ ಮತ್ತು ಸ್ವಾಮಿನಿಷ್ಠೆಗಳಲ್ಲಿ ಬಾಳಪ್ಪ ಅಪ್ರತಿಮ.

ರಾಣಿ ಚೆನ್ನಮ್ಮನ ಸ್ವಂತ ಮಗನಂತಿದ್ದ ಬಾಳಪ್ಪನ ಅಪ್ರತಿಮ ಗುಣಗಳ ಬಗ್ಗೆ ಲೋಕಾಪುರರಿಗೆ ವಿಶೇಷ ಒಲವು. ಆದ್ದರಿಂದ ಅವರು ಐತಿಹಾಸಿಕವಾದ ಇತರ ಪಾತ್ರಗಳಿಗಿಂತಲೂ ಈ ಪಾತ್ರವನ್ನು ಸ್ವಲ್ಪ ಎತ್ತರ ಮಟ್ಟದಲ್ಲಿಯೇ ನಿಲ್ಲಿಸಿ ತೋರಿಸಿದ್ದಾರೆ. ಇಲ್ಲಿನ ಮತ್ತೆರಡು ಬಹುಮುಖ್ಯ ಪಾತ್ರಗಳು ಬಿಚ್ಚುಗತ್ತಿ ಚೆನ್ನಬಸಪ್ಪ ಮತ್ತು ಸಂಗೊಳ್ಳಿ ರಾಯಣ್ಣನದು. ಕಾದಂಬರಿಯುದ್ದಕ್ಕೂ ‘ಸಾಕ್ಷಿ’ ವ್ಯಕ್ತಿಗಳಾಗಿ ಇವರಿದ್ದಾರೆ. ಇದರಲ್ಲಿ ಒಂದು ಪ್ರಣಯ ಕಥೆಯನ್ನು ಹೆಣೆಯುತ್ತಾರೆ ಲೋಕಾಪುರ. ಅದು ಬಾಳಪ್ಪ ಮತ್ತು ಸಿಂಗಾರಿಯ ನಡುವೆ.

ಸಿಂಗಾರಿ ಬಾಳಪ್ಪನನ್ನು ಪ್ರೀತಿಸುತ್ತಾಳೆ. ಕಿತ್ತೂರಿನ ನಿಷ್ಠಾವಂತ ವೀರ ಯೋಧನಾದ ಬಾಳಪ್ಪನ ನೈಜ ವ್ಯಕ್ತಿತ್ವವನ್ನು ಅದ್ಭುತವಾಗಿ ಚಿತ್ರಿಸಿರುವ ಲೇಖಕರು ಅವನ ತಂದೆ ರುದ್ರಪ್ಪ, ತಾಯಿ ಬಸಮ್ಮ ಮತ್ತು ಪ್ರಿಯತಮೆ ಸಿಂಗಾರಿಯರ ಕುರಿತು ಹೆಚ್ಚು ವಿವರಣೆಯನ್ನು ನೀಡಿರುವುದಿಲ್ಲ. ಈ ಮೂರು ಪಾತ್ರಗಳು ಕಾದಂಬರಿಯ ಆರಂಭದಲ್ಲಿ ಪ್ರಧಾನವಾಗಿ ಕಾಣಿಸಿಕೊಂಡು ಅನಂತರ ಹಿಂದೆ ಸರಿಯುತ್ತ ಹೋಗುತ್ತವೆ. ಇದು ಈ ಕಾದಂಬರಿಯ ಒಂದು ಸಣ್ಣ ಮಿತಿಯಾಗಿ ಕಾಣುತ್ತದೆ.

ದೇಶದ್ರೋಹಿಗಳಾದ ಗೋವಿಂದರಾವ ಮತ್ತು ಮಲ್ಲಪ್ಪಶೆಟ್ಟಿ ತಮ್ಮ ಹುನ್ನಾರ ಮತ್ತು ಸ್ವಾರ್ಥಪರತೆಯಿಂದ ಓದುಗರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇವರು ಕಿತ್ತೂರ ಸಂಸ್ಥಾನದ ವಿರುದ್ಧವಾಗಿಯೇ ಕೆಲಸ ಮಾಡುತ್ತಾರೆ. ಚೆನ್ನಾಗಿ ಆಡಳಿತ ನಡೆಸುತ್ತಿದ್ದ ಕಿತ್ತೂರ ಸಂಸ್ಥಾನ ಇಂಥವರ ಮೋಸತನದಿಂದಲೇ ಅವನತಿಯತ್ತ ಸಾಗುತ್ತದೆ.

‘ವೀರಕೇಸರಿ ಅಮಟೂರ ಬಾಳಪ್ಪ’ ಪಾತ್ರಪ್ರಧಾನ ಕಾದಂಬರಿ. ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತದಲ್ಲಿ ಆಳುತ್ತಿದ್ದ ಬ್ರಿಟಿಷರಿಗೂ ಭಾರತಿಯರಿಗೂ ಇದ್ದ ಸಂಬಂಧದ ಹಿನ್ನೆಲೆಯಲ್ಲಿ ಕಥನ ಕ್ರಿಯೆ ಸಾಗುತ್ತದೆ. ಕ್ರಿಯೆಯ ಕಾಲ ರಾಣಿ ಚೆನ್ನಮ್ಮನ ರಾಜ್ಯಭಾರದ ಕಾಲ. ಲೇಖಕರು ತಾವು ಆರಿಸಿಕೊಂಡ ಯುಗದ ಬದುಕನ್ನು ಸಮೃದ್ಧವಾದ ವಿವರಗಳೊಂದಿಗೆ ಪುನರ್‌ಸೃಷ್ಟಿಸುತ್ತಾರೆ. ಅಮಟೂರ ಬಾಳಪ್ಪನ ವ್ಯಕ್ತಿತ್ವ ಮತ್ತು ಹೋರಾಟಗಳನ್ನು ಎತ್ತಿ ತೋರಿಸುವುದರಲ್ಲೇ ಲೇಖಕರ ಮುಖ್ಯ ಉದ್ದೇಶವಾಗಿದ್ದರೂ, ಐತಿಹಾಸಿಕವಾದ ಯಾವ ಪಾತ್ರಗಳಿಗೂ ಅನ್ಯಾಯವಾಗದ ಹಾಗೆ ಲೇಖಕರು ಎಚ್ಚರವಹಿಸಿದ್ದಾರೆ.

ಸಣ್ಣ ಸಣ್ಣ ಪಾತ್ರಗಳು ಕೂಡ ಕಣ್ಣು ಕೋರೈಸುವಂತೆ ಚಿತ್ರಿತವಾಗಿರುವುದೇ ಇದಕ್ಕೆ ಸಾಕ್ಷಿ. ಚೆನ್ನಮ್ಮರಾಣಿ, ಮಲ್ಲಸರ್ಜ, ವೆಂಕೋಬರಾಯ, ರಾಯಣ್ಣ, ಬಿಚ್ಚುಗತ್ತಿ ಚೆನ್ನಬಸಪ್ಪ, ಸರ್ದಾರ ಗುರುಸಿದ್ದಪ್ಪ, ಶಿವಲಿಂಗರುದ್ರಸರ್ಜರಂತೆ ಕಾದಂಬರಿಯ ಉಳಿದ ಪಾತ್ರಗಳೂ ಸ್ಫುಟವಾಗಿ ಮೂಡಿಬಂದಿವೆ. ನೀಲಕಂಠ ತಾತ, ಸ್ವಾಮಿ ವಿದ್ಯಾಧರ ಭೂಪತಿ, ರುದ್ರಮ್ಮ, ರಾಣಿ ವೀರಮ್ಮ, ವಕೀಲ ರಾಚಪ್ಪ, ಲಿಂಗಪ್ಪ ತಿಮ್ಮಾಪೂರ, ಮಲ್ಲಪ್ಪ ಕೋಟಿ- ಮೊದಲಾದ ಪಾತ್ರಗಳು ತಮ್ಮ ವ್ಯಕ್ತಿ ವಿಶೇಷಗಳಿಂದ ಗಮನ ಸೆಳೆಯುತ್ತವೆ. ಆ ಕಾಲದ ರಾಜಕೀಯ ಇವರ ಜೀವನವನ್ನೆಲ್ಲ ವ್ಯಾಪಿಸಿಬಿಟ್ಟಿದೆ.

ಐತಿಹಾಸಿಕವಾದ ಎಲ್ಲ ಪಾತ್ರಗಳನ್ನು ಲೋಕಾಪರರು ಯಾವ ವೈಭವೀಕರಣವಿಲ್ಲದೇ ಅತ್ಯಂತ ಸಹಜವಾದ ನೆಲೆಯಲ್ಲಿ ಚಿತ್ರಿಸಿರುವುದರಿಂದ ಈ ಪಾತ್ರಗಳೆಲ್ಲ ಜೀವಂತ ವ್ಯಕ್ತಿಗಳಂತೆ ಕಾಣುತ್ತವೆ. ಆದ್ದರಿಂದ ಅವು ಓದುಗನೊಂದಿಗೆ ನೇರ ಸಂಪರ್ಕ ಪಡೆಯುತ್ತವೆ. ಈ ಕಾದಂಬರಿಯ ಪಾತ್ರ ಚಿತ್ರಣದಲ್ಲಿ ಲೋಕಾಪುರರ ನಿರ್ಲಿಪ್ತ ಮನೋಭಾವ ಕೆಲಸ ಮಾಡಿರುವುದು ಎದ್ದು ಕಾಣುತ್ತದೆ. ಕಾದಂಬರಿಯಲ್ಲಿ ವರ್ತಮಾನ ಕಾಲದಲ್ಲಿ ನಡೆಯುವ ಸಂಗತಿಗಳ ನಿರೂಪಣೆಯೊಡನೆ ಹಿಂದಿನ ನೆನಪುಗಳನ್ನು ಹೆಣೆದಿದೆ. ನೆನಪುಗಳಲ್ಲಿ ವ್ಯವಸ್ಥೆಯಿದೆ, ಸುಸಂಬದ್ಧತೆ ಇದೆ, ಒಮ್ಮೆ ವರ್ತಮಾನ ಕಾಲದಲ್ಲಿ, ಒಮ್ಮೆ ಭೂತಕಾಲದಲ್ಲಿ ದಾಖಲೆಯಾಗುತ್ತದೆ.

ಘಟನೆಗಳು ನಡೆದ ಕಾಲಕ್ರಮಕ್ಕೆ ಅನುಗುಣವಾಗಿ ನಿರೂಪಣೆ ಇದೆ. ಕುತೂಹಲಕಾರಿ ಸನ್ನಿವೇಶಗಳು ಈ ಕಾದಂಬರಿಯ ಕ್ರಿಯೆಯನ್ನು ಏಕಮುಖವಾಗಿ ಮತ್ತು ತೀವ್ರವಾಗಿ ಸಾಗಿಸಿವೆ. ರಹಸ್ಯಮಯ ವಾತಾವರಣದಿಂದ ಆರಂಭವಾಗುವ ಕಾದಂಬರಿ ಕ್ರಮೇಣ ಆ ರಹಸ್ಯವನ್ನು ಭೇದಿಸುತ್ತ, ಅಂದಿನ ಹೋರಾಟದ ಅದ್ಭುತವಾದ ಮತ್ತು ರೋಮಾಂಚನಕಾರಿಯಾದ ಆವರಣವನ್ನು ತೆರೆಯುತ್ತ, ಹಲವಾರು ರಸಗಳ ವಿಭಾವಕ್ಕೆ ಕಾರಣವಾಗುತ್ತ ಸಾಗಿ ಕೊನೆಗೆ ಹೃದಯವನ್ನೇ ಬಿರಿಸುವಂಥ ಸನ್ನಿವೇಶದೊಂದಿಗೆ ಅಂತ್ಯವಾಗುತ್ತದೆ.

ಬಾಳಪ್ಪ ಶಬ್ದವೇದಿ ವಿದ್ಯೆ ಕಲಿಯುವುದು, ನದಿ ಪ್ರವಾಹದ ವಿರುದ್ಧ ಈಜುವುದು, ಜಲಸ್ಥಂಭನ ಯೋಗ ಮಾಡುವುದು, ಹಾವಿನೊಂದಿಗೆ ನಿರ್ಭೀತವಾಗಿ ಸರಸವಾಡುವುದು, ಹುಲಿಯನ್ನು ಕೊಲ್ಲುವುದು, ಬಿಚ್ಚುಗತ್ತಿ ಚೆನ್ನಬಸಪ್ಪ ಮೊಸಳೆಯನ್ನು ಕೊಲ್ಲುವುದು,ಕಿತ್ತೂರ ನಾಡ ಉತ್ಸವ,ಟಿಪ್ಪು ಸುಲ್ತಾನನ ಸೈನ್ಯ ಕಿತ್ತೂರಿಗೆ ಮುತ್ತಿಗೆ ಹಾಕುವುದು, ಮಲ್ಲಸರ್ಜ ದೊರೆಯನ್ನು ಮರಾಠಾ ಪೇಶ್ವೆ ಮೋಸದಿಂದ ಬಂಧಿಸುವುದು, ಚೆನ್ನಮ್ಮನ ಬಂಧನ, ಥ್ಯಾಕರೆ ಕಿತ್ತೂರನ್ನು ವಶಪಡಿಸಿಕೊಳ್ಳುವುದು, ಬಾಳಪ್ಪ ಮಾರುವೇಶದಲ್ಲಿ ಕುಳಿತು ಥ್ಯಾಕರೆ ಮೇಲೆ ಗುಂಡು ಹಾರಿಸುವುದು-ಮೊದಲಾದ ರೋಚಕ ಸನ್ನಿವೇಶಗಳು ನಡುನಡುವೆ ವಸ್ತುವಿನ ನಿರ್ವಹಣೆಗೆ ಪೂರಕವಾಗಿ ಆ ಕಾಲದ ಸಾಮಾಜಿಕ, ರಾಜಕೀಯ ಜೀವನ, ಯುದ್ಧತಂತ್ರ, ವೀರ ಜೀವನ, ಧಾರ್ಮಿಕ ವಿವರ, ಭೌಗೋಳಿಕ ವಿವರ, ಜೀವನ ಮೌಲ್ಯಗಳ ಬಗ್ಗೆ ಸಾಂದರ್ಭಿಕವಾಗಿ ವಿವರಿಸಲಾಗಿದೆ. ಚೆನ್ನಮ್ಮನ ವ್ಯಕ್ತಿತ್ವದ ಪ್ರಖರತೆಗೆ ಪೂರಕವಾಗಿ ಬರುವ ಮಲ್ಲಸರ್ಜ ದೊರೆಯ ವ್ಯಕ್ತಿತ್ವ ಮತ್ತು ಚೆನ್ನಮ್ಮನ ಆಡಳಿತ ಕುಶಲತೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಲೇಖಕರ ಪಕ್ವ ಮನಸ್ಸು ಕಥನವನ್ನು ನಿರ್ವಹಿಸಿರುವ ರೀತಿಯಲ್ಲಿ ಕೃತಕವೆನ್ನಿಸುವುದಿಲ್ಲ.

ದೇಶೀಯ ಸಂಸ್ಥಾನಿಕರಿಗೆ ನ್ಯಾಯ ದೊರಕಿಸುವ ಬಯಕೆಯಲ್ಲಿ ಲೋಕಾಪುರ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಮುಖ್ಯವಾದ ಸಮಸ್ಯೆಗಳನ್ನೇ ಎತ್ತುವುದಿಲ್ಲ. ಲೋಕಾಪುರರ ವಸ್ತು ಮನುಷ್ಯ-ಮನುಷ್ಯ ಸಂಬಂಧ, ಈ ಸಂಬಂಧದ ಜಟಿಲತೆ ಮತ್ತು ಸೂಕ್ಷ್ಮತೆ; ಸಾಮ್ರಾಜ್ಯಶಾಹಿ ಅವರ ವಸ್ತುವಲ್ಲ ಎಂದು ಸಮಾಧಾನ ಹೇಳುವುದುಂಟು. ಆದರೆ ದಾಸ್ಯದಲ್ಲಿದ್ದ ಭಾರತದಲ್ಲಿ ಕಿತ್ತೂರು-ಪೇಶ್ವೆಯರ ಸಂಬಂಧ, ಬ್ರಿಟಿಷರೊಡನೆ ಇವರಿಬ್ಬರ ಸಂಬಂಧ ಇವನ್ನು ಸಾಮ್ರಾಜ್ಯಶಾಹಿಯ ಚೌಕಟ್ಟಿನಿಂದ ಹೊರಗಡೆಯೇ ಸಂಪೂರ್ಣವಾಗಿ ನೋಡುವುದು ಸಾಧ್ಯವಾಗುವುದಿಲ್ಲ; ಇದನ್ನು ಕಾದಂಬರಿಯಿಂದ ಹೊರಗಡೆಯೇ ಇಡಲು ಲೋಕಾಪುರರಿಗೂ ಸಾಧ್ಯವಾಗಿಲ್ಲ.

ಈ ಕಾದಂಬರಿಯ ಭಾಷೆ ಕೂಡ ಆಕರ್ಷಕವಾಗಿದೆ. ಕಾದಂಬರಿಯ ಕ್ರಿಯಾಪ್ರವಾಹಕ್ಕೆ ತಕ್ಕಂತೆ ಅದು ತನ್ನ ಓಟವನ್ನು ಬದಲಿಸಿಕೊಳ್ಳುತ್ತ ಹೋಗುತ್ತದೆ. ಸಾಂಕೇತಿಕತೆಯನ್ನು ಲೋಕಾಪುರ ಈ ಕಾದಂಬರಿಯಲ್ಲಿ ಶಕ್ತಿಯುತವಾಗಿ ಬಳಸಿಕೊಂಡಿದ್ದಾರೆ; ಪಾತ್ರಗಳ ಸ್ವಭಾವದ ಸತ್ಯವನ್ನು ಅಥವಾ ಸ್ಥಿತಿಯನ್ನು ಸೂಚಿಸಲು ಬಳಸಿದ್ದಾರೆ.

ಕಾದಂಬರಿಯಲ್ಲಿ ಕೆಲವು ಕಡೆ ಮುದ್ರಣ ದೋಷಗಳಿವೆ. ಕಿತ್ತೂರಿನ ವೀರಕಲಿಗಳ ದೇಶನಿಷ್ಠೆ, ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಗಳನ್ನು ಒಟ್ಟಿಗೆ ಹಿಡಿದುಕೊಡುವ, ಹೊಸ ನಿರೂಪಣೆಯ ಈ ಕಾದಂಬರಿ ಓದುಗನನ್ನು ಬಹುಕಾಲ ಕಾಡುವ ಕೃತಿ. ಐತಿಹಾಸಿಕ ಆವರಣವನ್ನು ವಸ್ತುನಿಷ್ಠವಾದ ಅಭಿವ್ಯಕ್ತಿಯ ಮೂಲಕ ಕಲಾತ್ಮಕವಾಗಿಯೂ ಮತ್ತು ಗಂಭೀರವಾಗಿಯೂ ಚಿತ್ರಿಸುವ ಬಾಳಾಸಾಹೇಬ ಲೋಕಾಪುರರ ‘ವೀರಕೇಸರಿ ಅಮಟೂರ ಬಾಳಪ್ಪ’ ಕಾದಂಬರಿ ಕನ್ನಡದ ಐತಿಹಾಸಿಕ ಕಾದಂಬರಿಗಳ ಸಾಲಿನಲ್ಲಿ ಒಂದು ಮಹತ್ವದ ಸ್ಥಾನ ಪಡೆಯುತ್ತದೆ.

‍ಲೇಖಕರು Admin

September 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Nagaraj HUDED

    ಓದುವ ಆಸಕ್ತಿಯಿದೆ.
    ವೀರಕೇಸರಿ ಅಮಟೂರು ಬಾಳಪ್ಪ ಕೃತಿ ದೊರೆಯುವ ವಿಳಾಸ ತಿಳಿಸಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: