ಸಿ ಎಸ್ ಭೀಮರಾಯರ ಓದಿದ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’

ಸಿ ಎಸ್ ಭೀಮರಾಯರ

ಎಸ್. ದಿವಾಕರ್ ನವೋತ್ತರ ಕನ್ನಡದ ಸಂವೇದನೆಯನ್ನು ವಿಸ್ತಾರಗೊಳಿಸಿದ ಪ್ರಮುಖ ಕವಿ, ಕಥೆಗಾರ, ಅಂಕಣಕಾರ, ಅನುವಾದಕ ಮತ್ತು ವಿಮರ್ಶಕರು. ಅವರದು ದೈತ್ಯ ಪ್ರತಿಭೆ. ದಿವಾಕರ್ ಅವರ ಸಮಗ್ರ ಕನ್ನಡ-ಇಂಗ್ಲಿಷ್ ಸಾಹಿತ್ಯ ಸೃಷ್ಟಿಯಲ್ಲಿ ಅಡಗಿರುವ ಅನುಭವದ ವ್ಯಾಪ್ತಿ ಆಶ್ಚರ್ಯಗೊಳಿಸುವಂಥದ್ದು. ಅವರಲ್ಲಿ ಅನನ್ಯ ಪಾಂಡಿತ್ಯವಿದೆ, ಜೀವನದ ಸವಾಲುಗಳನ್ನು ಎದುರಿಸಿದ ಸಮರ್ಥ ಚಾತುರ್ಯವಿದೆ. ಅದ್ವಿತೀಯವಾದ ಕಥನ ಕೌಶಲವಿದೆ.

ಪ್ರಸ್ತುತ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಎಸ್. ದಿವಾಕರ್ ಅವರ ದ್ವಿತೀಯ ಕವನಸಂಕಲನ. ಇದರಲ್ಲಿ ಮೂವತ್ತಾರು ಕವಿತೆಗಳಿವೆ. ಮನುಷ್ಯ ನೈಸರ್ಗಿಕ ಪರಿಸರ, ಕಾಲದ ಪ್ರವಾಹ ಮತ್ತು ಮನುಷ್ಯನ ಪ್ರತ್ಯೇಕ ಅಸ್ತಿತ್ವದ ಸಮಸ್ಯೆ, ನೋವು, ನಿರಾಸೆ, ದುಃಖ, ಏಕಾಕಿತನ, ಭಯೋತ್ಪಾದನೆ-ಇತ್ಯಾದಿಗಳೆಲ್ಲ ಎಸ್. ದಿವಾಕರ್ ಅವರ ಕವಿತೆಗಳ ವಸ್ತುಗಳು. ಇಲ್ಲಿರುವ ಒಂದೊಂದು ಕವಿತೆಯೂ ಆಶಯದ ದೃಷ್ಟಿಯಿಂದ ವಿಶಿಷ್ಟ ಕವಿತೆಗಳು.

ಆಧುನಿಕ ಬದುಕಿನ ಪ್ರತಿಮೆಗಳನ್ನು ತುಂಬಿಕೊಂಡ ಹಲವು ಕವಿತೆಗಳು ಇಲ್ಲಿವೆ. ಇದು ಹಲವು ಪ್ರಭಾವಗಳಿಗೆ ತೆರೆದ ಕವಿಮನಸ್ಸು ಅನೇಕ ಪ್ರಯೋಗಗಳನ್ನು ಮಾಡುವ ಸಂಕಲನ. ಛಂದಸ್ಸಿನಲ್ಲಂತೂ ಎದ್ದು ತೋರುವ ವೈವಿಧ್ಯ. ದಿವಾಕರ್ ಅವರ ಕಾವ್ಯ ತನ್ನ ಆವರಣದ ಪ್ರಭಾವಗಳಿಗೆ, ಹೊಸ ರೀತಿಗಳಿಗೆ ಸ್ಪಂದಿಸುತ್ತ ಸಾಗಿ ಬಂದಿರುವುದನ್ನು ಸಾರುವ ಕವನಸಂಕಲನವಿದು. ನಮ್ಮ ಇಡೀ ಆಧುನಿಕ ಕನ್ನಡ ಕಾವ್ಯ ಇಂಗ್ಲಿಷ್ ಸಾಹಿತ್ಯದಿಂದ ಅನೇಕ ಪರಿಗಳಲ್ಲಿ ಪ್ರಭಾವಗೊಂಡಿದೆ.

ದಿವಾಕರ್ ಅವರ ಕಾವ್ಯದಲ್ಲಿ ಸಹಜವಾಗಿಯೇ ಆಂಗ್ಲ ಕವಿಗಳು ಸುಳಿದಾಡಿದ್ದಾರೆ. ಎಸ್. ದಿವಾಕರ್ ಅವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ ಕವಿಗಳೆಂದರೆ ಲೋರ್ಕ, ಹಿಮೆನೆಜ್, ಅಪೊಲಿನೇರ್, ಸಾನಾ ಜಾ ಪಾರ್ಸ್, ಆಮಿ ಸೀಶರ್, ಸೆಸೇರ್ ವಹೇಯೊ, ಗಾಬ್ರಿಯಲಾ ಮಿಸ್ರೇಲ್, ಮಿರಸ್ಲಾವ್ ಹೋಲುಬ್. ಎಸ್. ದಿವಾಕರ್ ಅವರ ಕಾವ್ಯಕ್ಕಿಂತ ಅವರ ವ್ಯಕ್ತಿತ್ವ ಬಹು ದೊಡ್ಡದು. ಕಳೆದ ಕೆಲವು ವರ್ಷಗಳಲ್ಲಿ ಅವರ ವಿಸ್ತಾರವಾದ ಓದು, ಸ್ನೇಹ, ನಯ, ಅಂತಃಕರಣಗಳು ನನ್ನ ಬದುಕಿನ ಖುಷಿಯನ್ನು ಹೆಚ್ಚಿಸಿವೆ. ಎಸ್. ದಿವಾಕರ್ ಅವರ ಮೊದಲ ಕವನಸಂಕಲನ ‘ಆತ್ಮಚರಿತ್ರೆಯ ಕೊನೆಯ ಪುಟ’ ೧೯೯೮ರಲ್ಲಿ ಪ್ರಕಟವಾಗಿದೆ. ‘ಆತ್ಮಚರಿತ್ರೆಯ ಕೊನೆಯ ಪುಟ’ ಕವನಸಂಕಲನವನ್ನು ಪ್ರಕಟಿಸಿದ ಇಪ್ಪತ್ತೊಂದು ವರ್ಷಗಳ ನಂತರ ಈಗ ದಿವಾಕರ್ ಅವರ ದ್ವಿತೀಯ ಕವನಸಂಕಲನ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಪ್ರಕಟವಾಗಿದೆ.

ಈ ಸಂಕಲನದ ಕವಿತೆಗಳಲ್ಲಿ ಕಾವ್ಯದ ಸಾಧನ ಸಂಪತ್ತುಗಳು-ಪರಿಕರಗಳು ಆದ ಪ್ರತಿಮೆ, ಸಂಕೇತ, ರೂಪಕಗಳು, ಜೀವಪರವಾದ ಧ್ವನಿ ವಿಶೇಷಗಳು ಹೇರಳವಾಗಿ ನಮಗೆ ಸಿಗುತ್ತವೆ. ಚರಿತ್ರೆ, ಸೂರ್ಯ, ಭೂಮಿ, ಆಕಾಶಸತ್ತ್ವಗಳು, ಮನುಷ್ಯ ಸಂಬಂಧಗಳು, ಸಾಮಾಜಿಕ ಕಾಳಜಿಗಳು, ಪ್ರತಿಮೆ-ಪ್ರತೀಕಗಳು ಮೆರವಣ ಗೋಪಾದಿಯಲ್ಲಿ ಬರುತ್ತವೆ. ಇದರಲ್ಲಿ ಹೊಸತನ ನಮಗೆ ಎದ್ದು ಕಾಣುವುದು ಲಯವಿನ್ಯಾಸದಲ್ಲಿ ಹಾಗೂ ಭಾಷೆಯನ್ನು ಸೃಜನಾತ್ಮಕವಾಗಿ ದುಡಿಸಿಕೊಳ್ಳುವ ಪರಿಯಲ್ಲಿ. ಭಾಷೆ ವಿವರ-ವರ್ಣನೆಗಳಲ್ಲಿ ಸೊಕ್ಕದೆ ಮಾತು ಸ್ಫಟಿಕವಾಗುವ ಈ ಪರಿ ಕಾವ್ಯದ ಮುಖ್ಯ ಲಕ್ಷಣವಾಗಿದೆ. ಈ ಮಾತಿಗೆ ಮಾದರಿಯಾಗಿ ಸಂಕಲನದ ಕೆಲವು ಕವಿತೆಗಳನ್ನು ನೋಡಬಹುದು.

ಪುಸ್ತಕವನ್ನು ಪರಿಚಯಿಸುವ ಈ ಕವಿಯ ರೀತಿ ಕೂಡ ಅಪರೂಪವಾದದ್ದು. ಪುಸ್ತಕಗಳು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳ ಕುರಿತು ಮಾತನಾಡುತ್ತವೆ. ವಿಶ್ವದ, ಮನುಷ್ಯರ ಕಥೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಯಸುತ್ತವೆ ಎನ್ನುವುದಕ್ಕೆ ಸಂಕಲನದ ಮೊದಲ ಕವಿತೆ ‘ಪುಸ್ತಕ’ ಗಮನಿಸಿ;
ಬೆಳೆಯತ್ತೆ ಪುಸ್ತಕ ಇನ್ನೂ ದಪ್ಪ ದಪ್ಪಕ್ಕೆ
ಅದರೊಳಗದೆಷ್ಟೋ ಕಪಾಟು
ಕಪಾಟುಗಳ ತುಂಬ ಊರು ದೇಶ ಕಾಲ ಸಮಸ್ತ
ಪುಸ್ತಕಗಳೇ ಮೊದಲು ಇದ್ದವಲ್ಲ ಒಳಗೆ ||
(ಪುಸ್ತಕ)
ಹೀಗೆ ಓದುಗರನ್ನು ಪಸ್ತಕಜಗತ್ತಿಗೆ ಕರೆಯುವ ಇಲ್ಲಿನ ರೀತಿ ಆಪ್ತವಾದುದು ಮತ್ತು ವಿಶಿಷ್ಟವಾದುದು. ಪುಸ್ತಕಗಳೆಂದರೆ ಕತ್ತಲೆಯಲ್ಲಿಯ ಹೊಸ ಬೆಳಕು. ನಾವು ಪುಸ್ತಕಗಳನ್ನು ಓದಬೇಕಾಗಿದೆ, ಓದುತ್ತ ಓದುತ್ತ ಹೊಸ ಹೊಸ ಹಾದಿಗಳನ್ನು ನಿರ್ಮಿಸಬೇಕಾಗಿದೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಪುಸ್ತಕಗಳ ಮಹತ್ವ ಕಡಿಮೆಯಾಗುತ್ತಿದೆ. ಇದು ನಿರಂತರವಾಗಿ ಮುಂದುವರಿದರೆ ಒಂದೊಮ್ಮೆ ಸಂಪೂರ್ಣವಾಗಿ ಮಾಯವಾಗಬಹುದು.

ವ್ಯವಸ್ಥೆಯ ಶಾಮೀಲುಗಳು, ಅಧಿಕಾರಶಾಹಿಯ ಇಬ್ಬಂದಿತನಗಳು, ಖಂಡನ-ಮಂಡನಗಳು ಪ್ರಭಾವಶಾಲಿಯಾಗಿ ಜಾತಿ, ಮತ ಮತ್ತು ಧರ್ಮಗಳ ವಿಕೃತ ರೂಪಗಳನ್ನು ‘ಎಲ್ಲಿ ಹೋಯಿತು ರುಂಡ?’ ಕವಿತೆ ಅನಾವರಣಗೊಳಿಸುವುದರಲ್ಲಿ ಯಶಸ್ವಿಯಾಗಿದೆ.

ಮುಸ್ಸಂಜೆಯ ಕೆಂಪಿನಲ್ಲಿ ಬಿಕೋ ಎನ್ನುವ ಬೀದಿಯಲ್ಲಿ

ನಿಂತಿದೆಯೊಂದು ಮುಂಡ
ಪ್ಯಾಂಟು ಷರ್ಟು ತೊಟ್ಟುಕೊಂಡು
ಗೋಡೆಗೊರಗಿಕೊಂಡು
ಎಲ್ಲಿ ಹೋಯಿತು ಅದರ ರುಂಡ…..? ||
(ಎಲ್ಲಿ ಹೋಯಿತು ರುಂಡ ?)
ವರ್ತಮಾನದ ಕ್ರೂರ ವ್ಯವಸ್ಥೆಗೆ ಈ ಕವಿತೆ ಕನ್ನಡಿ ಹಿಡಿಯುತ್ತದೆ. ಕವಿ ‘ಎಲ್ಲಿ ಹೋಯಿತು ಅದರ ರುಂಡ?’ ಎಂದು ಪ್ರಶ್ನಿಸುತ್ತಲೇ ಸಮಾಜದ ದುಃಸ್ಥಿತಿಯ ದೃಶ್ಯವನ್ನು ಕಣ್ಣಗೆ ಕಟ್ಟುತ್ತಾನೆ. ಇಂದು ಮನುಷ್ಯ ಮನುಷ್ಯನಾಗಿ ಉಳಿದಿಲ್ಲ. ಸಮಾಜದಲ್ಲಿ ಪ್ರೀತಿ, ದಯೆ, ಸ್ನೇಹ, ನ್ಯಾಯ, ಸತ್ಯ, ಸೌಹಾರ್ದತೆಗಳು ಕಣ್ಮರೆಯಾಗಿವೆ.

ನಮ್ಮ ದೇಶ ಬಡವರ ಬೀಡು; ನೆಲೆ ಇಲ್ಲದವರ ಪಾಡು ಒಂದಲ್ಲ, ಎರಡಲ್ಲ ಸಾವಿರಾರು! ಬೆಳೆಯುತ್ತಿವೆ ಬಡವರ ಬವಣೆಗಳು. ಬಡವರ ಬದುಕು ಹೇಗೋ ಸಾಗಿದೆ. ಈ ನಡುವೆ ಏಳಿಗಿಂತ ಬೀಳು, ಸುಖಕ್ಕಿಂತ ದುಃಖ, ಹಾಡಿಗಿಂತ ಪಾಡು ಇವು ನಿತ್ಯದ ಬದುಕಾಗಿ ದೇಶದ ಉದ್ದಗಲ ಒಂದೆಡೆ ಗಗನಚುಂಬಿ ಮಹಲುಗಳ ಮೆರೆತ, ಹಲವೆಡೆ ಜೋಪಡಿಗಳ ಜೀವನದ ಹೋರಾಟ ಢಾಳಾಗಿ ಕಣ್ಣಗೆ ರಾಚಿ ಶ್ರೀಸಾಮಾನ್ಯನ ಬಗ್ಗೆ ಚಿಂತನ-ಮಂಥನ ಮಾಡುವ ಹಾಗೆ ಪ್ರೇರಣೆ ನೀಡುವ ಅದ್ಭುತ ಕವಿತೆ ‘ಬಂಗಲೆಯೂ ಜೋಪಡಿಯೂ’.

ಜೋಪಡಿಯಿರುತ್ತೆ ಬೋಳುಮರದ ಕೆಳಗೆ
ಸುತ್ತ ಸಾಕಷ್ಟು ಕಡ್ಡಿಕಸ ಕೋಳಿ ಕೆದಕುವುದಕ್ಕೆ; ಗೋಮೂತ್ರ
ಸೆಗಣ ಬಯಲು-ಕೊಟ್ಟಿಗೆಯಲ್ಲಿ. ತಿರುಗಾಡಿಕೊಂಡಿರುತ್ತೆ
ಕಂತ್ರೀ ನಾಯಿ ಫ್ರೀಯಾಗಿ ||
(ಬಂಗಲೆಯೂ ಜೋಪಡಿಯೂ)

ಹುಲ್ಲು ತಡಿಕೆ, ಜೋಪಡಿಗಳಲ್ಲಿ ಹುಟ್ಟಿ, ಬೆವರನ್ನೇ ನಂಬಿ ಬದುಕುವ ಬಡವರು ಶ್ರೀಮಂತರಿಂದ ಅನಂತ ಕಾಲದಿಂದಲೂ ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ. ಆದ್ದರಿಂದ ಸರರ್ಕಾರ ಬಡವರಿಗೆ ಸಹಾಯ ಮಾಡುವುದು ಸೂಕ್ತ. ಎಷ್ಟು ದಿನ ಬಡವರ ಜೋಪಡಿ ಜೀವನ? ಇನ್ನೆಷ್ಟು ದಿನ ಬಡವರ ಕೊಂಪೆ ವಾಸ? ಈ ಆಧುನಿಕ ಯುಗದಲ್ಲೂ ಬಹಳಷ್ಟು ಜನ ದಾರಿದ್ರ್ಯದಲ್ಲೇ ಉಳಿದರೆ ಆಳುವ ಸರ್ಕಾರಕ್ಕೆ ನಾಚಿಕೆ ಆಗಬೇಕು. ಕ್ರೂರ ಬಡತನದ ಕರಾಳ ದವಡೆಯಲ್ಲಿ ಸಿಲುಕಿ ನರಳುವ ನಿರಾಶ್ರಿತರಿಗೆ, ಕೊಂಪೆ ವಾಸಿಗಳಿಗೆ ತಲೆಯ ಮೋಲೊಂದು ಸೂರು ಬೇಕಾಗುತ್ತದೆ. ಆ ದಿಸೆಯಲ್ಲಿ ಸರ್ಕಾರ ಕ್ರಿಯಾತ್ಮಕವಾಗಲಿ.

ಮಾತುಗಳಿಂದಲೇ ಹತ್ತುತ್ತದೆ ಬೆಂಕಿ, ಮಾತುಗಳೇ ಸಾಧಿಸಿವೆ ಜಗತ್ತಿನಾದ್ಯಂತ ಕ್ರಾಂತಿ. ಮನೆ, ಮಠ, ಊರು, ಕೇರಿ ಮತ್ತು ದೇಶಗಳು ಭಸ್ಮವಾಗುತ್ತವೆ ಮಾತುಗಳಿಂದ. ಮಾತುಗಳೇ ಮತ್ತೆ ಹುಟ್ಟಿಸುತ್ತವೆ ಹೊಸ ಹೊಸ ಸಂಬಂಧಗಳನ್ನು. ಮಾತುಗಳೇ ಜನರನ್ನು ಬೇರ್ಪಡಿಸುತ್ತವೆ, ಮಾತುಗಳೇ ಮನುಷ್ಯ ಮನುಷ್ಯರ ನಡುವೆ ಸೇತುವೆಗಳನ್ನು ಕಟ್ಟುತ್ತವೆ.

ಮಾತಿಗೆ ಮಾತು ಸಡ್ಡುಹೊಡೆದದ್ದೆ ಆ ಕೊಠಡಿ
ಹೊತ್ತಿ ಉರಿಯಿತು. ಎರಡು ನೆರಳಿನ ಜಗಳ ಕೊನೆಗೂ
ಮುಗಿಯಿತು ಕರುಳು ಹಿಂಡುವ ಮೌನದಲ್ಲಿ ||
(ಆಶ್ಚರ್ಯವಾಗುವುದಿಲ್ಲ)
ಎನ್ನುವ ತೀಕ್ಷ್ಣವಾದ ಮಾತುಗಳಿವೆ. ಈ ಕವಿತೆಯ ಮತ್ತೊಂದು ಪ್ರಮುಖ ವಿಚಾರಧಾರೆ ಭೂತ ಮತ್ತು ವರ್ತಮಾನದ ಸಂಬಂಧ. ಬದಲಾಗುವ ಕಾಲಗಳಲ್ಲಿ ನಿರಂತರವಾಗಿ ಹರಿಯುವ ಜೀವಧಾರೆ. ಮನುಷ್ಯನ ಮೌಲ್ಯ ಬದುಕಿನ ಸ್ಥಿರತೆಯು ಕಾಲಕ್ರಮೇಣ ಕಳೆದು ಹೋಗುತ್ತಿರುವ ಸ್ವರೂಪವನ್ನು ಕುರಿತು ಈ ಕವಿತೆ ಗಾಢವಾಗಿ ಚಿಂತಿಸುತ್ತದೆ.

ಕಾಲಘಟ್ಟದ ಸ್ಥಿತ್ಯಂತರವನ್ನು ಸೂಕ್ಷ್ಮವಾಗಿಯೂ, ಆಧುನಿಕ ರೂಪಕಗಳ ಮೂಲಕ ದಿವಾಕರ್ ಅವರು ‘ನಿನ್ನೆಯ ಕತೆ’ ಕವಿತೆಯಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ದೇವರ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಮತಾಂಧರ ಮುಖಕ್ಕೆ ಕನ್ನಡಿ ಹಿಡಿಯುವಂತೆ ಈ ಕವಿತೆ ವಸ್ತು ರೂಪುಗೊಂಡಿದೆ.
ಲೂಸಿ ಬಂದೇನವಾಜ್ ದರ್ಗಾಕ್ಕೆ ಹರಕೆ ಹೊತ್ತುಕೊಂಡಳು
ನರಸಿಂಗರಾಯ ಯೇಸುವಿಗೊಂದು ಮೋಂಬತ್ತಿ ಹೊತ್ತಿಸಿದ
ಜೇಮ್ಸ್ ದಯಾನಂದ ಗಣಪತಿಗೆರಡು ತುಪ್ಪದ ದೀಪ ಹಚ್ಚಿದ
ಮೂವರೂ ನೋಡಬಾರದ್ದನ್ನು ನೋಡಿಬಿಟ್ಟವರಂತೆ
ಮುಚ್ಚಿಕೊಂಡರು ಕಣ್ಣು ||
(ನಿನ್ನೆಯ ಕತೆ)
ಆಧುನಿಕ ಮನುಷ್ಯ ಜಾತಿ, ಮತ, ವರ್ಗ, ವರ್ಣ ಮತ್ತು ಧರ್ಮಗಳ ಸಂಕೋಲೆಗಳಲ್ಲಿ ಸಿಕ್ಕಿಕೊಂಡು ಬದುಕುತ್ತಿದ್ದಾನೆ. ಆದರೆ ಇಂತಹ ಸಂಕಟದಿಂದ ಬಿಡುಗಡೆಯಾಗುವುದು ಅಗತ್ಯವಿದೆ.

ಈ ಸಂಕಲನದ ಮತ್ತೊಂದು ಯಶಸ್ವಿ ಕವಿತೆಗಳಲ್ಲೊಂದು ‘ಭಯೋತ್ಪಾದಕ’ ಒಂದು ಭಯಾನಕ ಚಿತ್ರವನ್ನು ನಮ್ಮ ಮುಂದಿಡುತ್ತದೆ. ಭಯೋತ್ಪಾದನೆ ಇಡೀ ಜಗತ್ತಿನ ಸುಖ, ಶಾಂತಿ, ನೆಮ್ಮದಿಗಳನ್ನು ಹಾಳುಗೆಡವಿದೆ. ಬಡತನ, ನಿರುದ್ಯೋಗ ಮತ್ತು ಭ್ರಷ್ಟಾಚಾರಗಳಿಂದ ತತ್ತರಿಸಿರುವ ಜಗತ್ತಿನ ಜನತೆ ಭಯೋತ್ಪಾದನೆಯನ್ನು ಎದುರಿಸಬೇಕಾಗಿರುವುದು ದೊಡ್ಡ ದುರಂತವಾಗಿದೆ.

ಬಾರಿನೊಳಗಿರುವ ಬಾಂಬು ಸ್ಫೋಟಗೊಳ್ಳುತ್ತೆ ಮಧ್ಯಾಹ್ನ
ಒಂದೂ ಇಪ್ಪತ್ತಕ್ಕೆ.
ಈಗ ಒಂದೂ ಹದಿನಾರಷ್ಟೇ.
ಇನ್ನೂ ಸಮಯವುಂಟು ಕೆಲವರು ಒಳಕ್ಕೆ ಹೋಗುವುದಕ್ಕೆ
ಕೆಲವರು ಹೊರ ಬರುವುದಕ್ಕೆ ||
(ಭಯೋತ್ಪಾದಕ)

ಭಯೋತ್ಪಾದನೆ ಜ್ವಲಂತ ಸಮಸ್ಯೆಯಾಗಿ ಜಗತ್ತನ್ನು ತಲ್ಲಣಗೊಳಿಸುತ್ತಿದೆ. ಅದು ಇಡೀ ಜಗತ್ತಿನ ಶಾಂತಿಯನ್ನು ನಾಶಮಾಡಿದೆ; ಮನುಕುಲದ ಸಂತೋಷವನ್ನು ಕಸಿದುಕೊಂಡಿದೆ. ಜಗತ್ತು ಈಗ ಆತಂಕದಲ್ಲಿ ಹೆಜ್ಜೆ ಹಾಕುತ್ತಿದೆ. ಧಾರ್ಮಿಕ ಮೂಲಭೂತವಾದ ಭಯೋತ್ಪದನೆ ಮತ್ತು ಮತಾಂಧತೆಗಳ ವಿಕಾರಗಳ ಮುಖಗಳು ಮತ್ತೆ ಮತ್ತೆ ತಲೆ ಎತ್ತುತ್ತಿರುವ ಇಂದಿನ ದಿನಗಳಲ್ಲಿ ಈ ಕವಿತೆಯ ಪ್ರಸ್ತುತೆಯನ್ನೂ ಯಾರೂ ಅಲ್ಲಗಳೆಯಲಾಗದು. ಈ ನೆಲದ ರಣಗುಡುವ ಭಯ, ಆತಂಕ, ತಲ್ಲಣಗಳು ತುಂಬಿದ ಕ್ಷಣ ಕ್ಷಣಗಳಲ್ಲಿ ಸತ್ಯ, ಶಾಂತಿ, ಅಹಿಂಸೆ, ಪ್ರಾಮಾಣ ಕತೆ, ಮಾನವೀಯತೆಗಳು ಕಣ್ಮರೆಯಾಗುತ್ತಿವೆ.

ಮನುಷ್ಯ ಯುದ್ಧಂತಹ ಆತ್ಮಘಾತುಕ ಕೃತ್ಯದಲ್ಲಿ ತೊಡಗಿದಾಗ ಸರ್ವನಾಶವಲ್ಲದೆ ಮತ್ತೇನು ಸಾಧ್ಯ ಎಂದು ಮಾರ್ಮಿಕವಾಗಿ ‘ಅಂತ್ಯ ಮತ್ತು ಆದಿ’ ಕವಿತೆ ಯುದ್ಧಲಾಲಸಿಗಳ ಮುಖವಾಡವನ್ನು ತೆರೆದಿಡುತ್ತದೆ. ಯುದ್ದವನ್ನು ಯೋಧರು ಮತ್ತು ಸಾಮಾನ್ಯ ಜನರ ದೃಷ್ಟಿಯಿಂದ ನೋಡುವ ಕವಿತೆ ‘ಅಂತ್ಯ ಮತ್ತು ಆದಿ’. ಈ ಕವಿತೆ ಯುದ್ಧೋತ್ತರ ಜಗತ್ತಿನ ಆರ್ತತೆಯ ಪ್ರತೀಕವಾಗಿದೆ.

ಪ್ರತಿಯೊಂದು ಯುದ್ಧ ನಡೆದ ಮೇಲೂ
ಶುದ್ಧೀಕರಿಸಬೇಕು ಯಾರಾದರೂ
ಚೆಲ್ಲಾಪಿಲ್ಲಿಯಾದದ್ದು ತನಗೆ ತಾನೇ
ಓರಣಗೊಳ್ಳುವುದಿಲ್ಲ ಎಷ್ಟೆಂದರೂ ||
(ಅಂತ್ಯ ಮತ್ತು ಆದಿ)

ಹೀಗೆ ವರ್ತಮಾನದ ಆಯಾಮ ತಾನೇ ತಾನಾಗಿ ಕೂಡಿಕೊಳ್ಳುತ್ತದೆ. ವಸ್ತುವಿನಷ್ಟೇ ಅಲ್ಲದೆ ಕಾವ್ಯದಲ್ಲೂ ಎಸ್. ದಿವಾಕರ್ ಭಿನ್ನವಾಗಿ ನಿಲ್ಲುತ್ತಾರೆ. ಅವರು ಕಾವ್ಯ ಹೆಣೆಯುವ ಕ್ರಿಯೆಯಲ್ಲಿ ಸಂಪೂರ್ಣವಾಗಿ ಚಿಂತನಶೀಲರಾಗಿದ್ದಾರೆ; ಅಭಿವ್ಯಕ್ತಿ ಸಂಪನ್ನರಾಗಿದ್ದಾರೆ, ರೂಪಕ ಸಾಮ್ರಾಜ್ಯದತ್ತ ಹೆಜ್ಜೆ ಹಾಕಿದ್ದಾರೆ.

ರೂಪಕಗಳಲ್ಲಿ ಕಾವ್ಯ ಕಟ್ಟುವ ಸೃಜನಶೀಲ ಪ್ರತಿಭೆ ಎಸ್. ದಿವಾಕರ್ ಅವರಲ್ಲಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ‘ಜಿರಾಫೆ’ ಕವಿತೆ. ಅವರು ಕಾವ್ಯದ ರೂಪಕ ಶಕ್ತಿ, ಚಿತ್ರಕ ಶಕ್ತಿ, ಪ್ರತಿಮಾ ಶಕ್ತಿ, ಪ್ರಾಸ ಮತ್ತು ಲಯಗಾರಿಕೆಗಳನ್ನು ಸಮರ್ಥವಾಗಿ ಈ ಸಂಕಲನದಲ್ಲಿ ಬಳಸಿದ್ದಾರೆ. ಕಾವ್ಯ ಬರೆಯುವ ಕಸುಬುಗಾರಿಕೆಯಲ್ಲಿ, ಭಾಷೆಯನ್ನು ಸೃಜನಶೀಲವಾಗಿ ಬಳಸುವ ಕವಿ ಪ್ರತಿಭೆಯೇ ಕಾವ್ಯದ ಯಶಸ್ಸಿನ ಬಂಡವಾಳ. ಇಂಥ ಭಾಷಾಸಿದ್ಧಿ ಮತ್ತು ಪ್ರತಿಭಾ ಕೌಶಲಗಳಿಂದ ಮಾತ್ರ ಕಾವ್ಯವನ್ನು ವರ್ತಮಾನಕ್ಕೆ ಸಂವಾದಿಯಾಗಿಸುವುದು, ರೂಪಕವಾಗಿಸುವುದು, ಸಾದೃಶ್ಯವಾಗಿಸುವುದು ಸಾಧ್ಯ.

ಎಸ್. ದಿವಾಕರ್ ಅವರಿಗೆ ಇದು ಸಿದ್ಧಿಸಿದೆ ಎನ್ನುವುದಕ್ಕೆ ಅವರ ಈ ಕವನಸಂಕಲನದಲ್ಲಿ ಅನೇಕ ನಿದರ್ಶನಗಳು ಓದುಗರಿಗೆ ಸಿಗುತ್ತವೆ. ಅವರ ಭಾಷೆಯ ಪ್ರತಿಮೆಗಳು ಎಲ್ಲ ಹೊಸದಾಗಿ ಕಂಡು ಉತ್ಸಾಹವನ್ನು ಮೂಡಿಸಿವೆ. ದಿವಾಕರ್ ಅವರ ಕಾವ್ಯಭಾಷೆ ಗ್ರಾಂಥಿಕವಾದುದು. ಈ ಸಂಕಲನದ ಯಾವ ಕವಿತೆಯನ್ನೂ ಅತ್ಯುತ್ತಮ ಕವಿತೆ ಎನ್ನುವುದು ಅಸಾಧ್ಯವಾದರೂ ಒಂದು ಅರ್ಥಪೂರ್ಣವಾದ ಕಾವ್ಯವ್ಯಕ್ತಿತ್ವವಾಗಿ, ಸಂವೇದನೆಯಾಗಿ ಎಸ್. ದಿವಾಕರ್ ಅವರು ಬೆಳೆದಿದ್ದಾರೆ ಎಂಬುದಕ್ಕೆ ಅನೇಕ ಚಿಹ್ನೆಗಳು ಈ ಸಂಕಲನದಲ್ಲಿ ಸಿಗುತ್ತವೆ. ಆಕ್ರೋಶ, ಅಬ್ಬರಗಳಿಲ್ಲದ ಮೆಲುದನಿಯ ಅಭಿವ್ಯಕ್ತಿಯಲ್ಲಿ ಎಸ್. ದಿವಾಕರ್ ಅವರು ಬಳಸುವ ಭಾಷೆ ಓದುಗರ ಅಂತಃಕರಣ ಮುಟ್ಟುವಷ್ಟು ಪರಿಣಾಮಕಾರಿಯಾಗಿದೆ.

ಈ ಸಂಕಲನದ ‘ಎಲ್ಲಿ ಹೋಯಿತು ರುಂಡ?’, ‘ಬಂಗಲೆಯೂ ಜೋಪಡಿಯೂ’, ‘ಮಂಗದೇಶ’, ‘ಶೋಕಿಸುವ ಸಂಕಟ’, ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’, ‘ಸಿಡಿಲು ಬಡಿದರೆ’, ‘ಅರೆಸ್ಟ್ ವಾರೆಂಟು’, ‘ಭಯೋತ್ಪಾದಕ’ -ಮುಂತಾದವು ಓದುಗನನ್ನು ಮತ್ತೆ ಮತ್ತೆ ಬಗೆಯಲು ಪ್ರಚೋದಿಸುವ ಸಂಕೀರ್ಣ ರಚನೆಗಳು. ಈ ಸಂಕಲನದಲ್ಲಿ ಎಸ್. ದಿವಾಕರ್ ಅವರು ತಮ್ಮ ಚಿಂತನಾ ಪ್ರಧಾನವಾದ ಧಾಟಿಯಲ್ಲಿಯೇ ಕವಿತೆ ಕಟ್ಟುತ್ತಾ ಹೋಗಿದ್ದಾರೆ. ಭಾಷಿಕವಾಗಿ ಇಲ್ಲಿನ ಕವಿತೆಗಳು ನವ್ಯ ಕಾವ್ಯಕ್ಕೆ ಹತ್ತಿರವಾಗಿವೆ.

ಈ ಸಂಕಲನದ ಕವಿತೆಗಳು ವಸ್ತು, ನಿರ್ವಹಣ ವಿಧಾನ, ಶೈಲಿ, ಬಂದ, ರಚನೆ, ಪ್ರತಿಮಾ ವಿಧಾನಗಳ ಮುಖಾಂತರ ಹೊಸ ಬಗೆಯವುಗಳಾಗಿವೆ. ನಾನು ಓದಿದ ಇತ್ತೀಚಿನ ದಿನಗಳಲ್ಲಿ ಗಟ್ಟಿ ಕೃತಿ ಇದು. ಕವಿಯ ದಿಟ್ಟತನ ಮೆಚ್ಚಬೇಕು. ಇಲ್ಲಿನ ಕೃಷಿಯನ್ನು ಯಾರೂ ಮೆಚ್ಚಬೇಕು. ಅದು ಎಲ್ಲೆಡೆ ತೀವ್ರವಾಗಿ ಹಬ್ಬಿಕೊಳ್ಳುವುದನ್ನು ನೋಡಿ ಸಂತೋಷಗೊಳ್ಳಬೇಕು. ಹಾಗಿದೆ ಇಲ್ಲಿನ ಪದಗಳ ಹೆಣ ಗೆ. ಬಹಳ ವಿಶಿಷ್ಟವಾಗಿ ಬರೆಯುವ ಸ್ವಂತಿಕೆ ಈ ಕವಿಗೆ ಇರುವುದರಿಂದಲೇ ಇಲ್ಲಿನ ಕವಿತೆಗಳು ಓದುಗರನ್ನು ಬಹುಕಾಲ ಆಕರ್ಷಿಸುತ್ತವೆ.

ಜಾಗತಿಕ ಸಾಹಿತ್ಯದ ಆಳವಾದ ಅಧ್ಯಯನದಿಂದ ದೀಪ್ತವಾದ ಅವರ ಕಾವ್ಯ ಭಾಷೆಗೊಂದು ಹದವಿದೆ, ಅಭಿಜಾತ ಶೈಲಿಯ ತೀವ್ರ ಸಂಸ್ಪರ್ಶವಿದೆ. ಅವರ ಕಾವ್ಯ ಓದುವ ಸಹೃದಯನಿಗೆ ಪದ್ಯ ಪದ್ಯಕ್ಕೂ ರಸಾನಂದ ದೊರಕುತ್ತದೆ. ನೋಡುತ್ತಲೇ ಕೈಗೆ ತೆಗೆದುಕೊಳ್ಳಬೇಕು ಎನ್ನಿಸುವಂತೆ, ಈ ಪುಸ್ತಕ ನನ್ನ ಕಪಾಟಿನಲ್ಲಿರಬೇಕು ಎನ್ನಿಸುವಂತೆ ಪ್ರಕಾಶಕರು ಕೃತಿಯನ್ನು ಸಿದ್ಧಪಡಿಸಿದ್ದಾರೆ. ಈ ಕೃತಿಯಲ್ಲಿ ಚಿತ್ರಗಳು ಸಮೃದ್ಧವಾಗಿವೆ. ಆಕರ್ಷಕ ರಟ್ಟು, ಒಳ್ಳೆಯ ಕಾಗದ, ಅಂದವಾದ ತಪ್ಪಿಲ್ಲದ ಮುದ್ರಣ ಇವೆಲ್ಲ ಪ್ರಕಾಶಕರ ಶ್ರದ್ಧೆಯ ಫಲ. ಎಸ್. ದಿವಾಕರ್ ಅವರ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಸಂಕಲನದ ಕವಿತೆಗಳು ಕನ್ನಡದ ಕಾವ್ಯಪ್ರಿಯರಿಗೆ ಹೊಸ ಓದನ್ನು ನೀಡುತ್ತವೆ.

‍ಲೇಖಕರು Admin

June 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: