ಶ್ರೀನಿವಾಸ ಪ್ರಭು ಅಂಕಣ- ಗೊತ್ತಿಲ್ಲದಂತೆ ದಾನಶೂರ ಕರ್ಣನಾಗಿಬಿಟ್ಟಿದ್ದೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

5

ಸಹಪಾಠಿಗಳು, ಜೊತೆಯಲ್ಲಿ ಆಡುತ್ತಿದ್ದ ಹುಡುಗರು ತುಂಬಾ ಛೇಡಿಸುತ್ತಿದ್ದರು, ಗೇಲಿ ಮಾಡುತ್ತಿದ್ದರು ಎಂದೆನಲ್ಲಾ, ಇದು ಒಂದು ರೀತಿಯ ಅಂತರ್ಮುಖತೆಗೆ ನನ್ನನ್ನು ಬಾಲ್ಯದಲ್ಲೇ ದೂಡಿಬಿಟ್ಟಿತ್ತು. ಕೀಳರಿಮೆಯಂತಹ ಒಂದು ವಿಚಿತ್ರ ಭಾವ, ವಿಪರೀತ ಸಂಕೋಚ-ನಾಚಿಕೆ-ಜರಿಕೆಗಳು ನನ್ನನ್ನು ಆವರಿಸಿಕೊಂಡು ಬಿಟ್ಟಿದ್ದವು. ಆಟವಾಡಲು ಹೋಗುವುದು, ಸ್ನೇಹಿತರು ಛೇಡಿಸಿದೊಡನೆ ಮುಸಿಮುಸಿ ಅಳುತ್ತಾ ಮನೆಗೆ ಓಡುವುದು, ಏಕಾಂಗಿಯಾಗಿ ನನ್ನದೇ ಆಟ-ಕನಸುಗಳ ಲೋಕದಲ್ಲಿ ಸ್ವಗತಗಳೊಂದಿಗೆ ವಿಹರಿಸುವುದು ಮಾಮೂಲಾಗಿ ಹೋಗಿತ್ತು.

ಚಿಕ್ಕಜ್ಜ-ಅಜ್ಜಿಯರ ಮುಂದೆ ನನ್ನ ದುಗುಡ-ತಲ್ಲಣಗಳನ್ನು ಹೇಳಿಕೊಳ್ಳುವುದಾದರೂ ಹೇಗೆ? ಅದಕ್ಕೂ ಹಾಳು ಸಂಕೋಚದ ಅಡ್ಡಿ! ಆ ದಿನಗಳಲ್ಲಿ ನನ್ನ ಜೊತೆಗಿದ್ದ ಒಬ್ಬನೇ ಒಬ್ಬ ಅಂತರಂಗದ ಪರಮಾಪ್ತ ಮಿತ್ರನೆಂದರೆ ನಾಗೇಶ. ನಾಗೇಶ ನನ್ನ ಜೊತೆಗಿದ್ದಾನೆಂದರೆ ನನಗೆ ಆನೆಬಲ ಬಂದು ಬಿಡುತ್ತಿತ್ತು. ನನ್ನನ್ನು ಯಾರಾದರೂ ಛೇಡಿಸಿದರೆ, ಗೋಳು ಹುಯ್ದುಕೊಂಡರೆ ನಾಗೇಶನಿಗೆ ಸ್ವಲ್ಪವೂ ಸಹಿಸುತ್ತಿರಲಿಲ್ಲ. ತುಸು ಮುಂಗೋಪಿಯೂ ಆದ ಕಾರಣ ಎಷ್ಟೋ ಹುಡುಗರಿಗೆ ಹಿಡಿದು ಬಾರಿಸಿದ್ದೂ ಉಂಟು!

ಕೊಣನೂರಿನಲ್ಲಿ ಆ ಕಾಲಕ್ಕೆ ಬಹಳ ಹೆಸರುವಾಸಿಯಾಗಿದ್ದ ಹೋಟಲ್ ಅಂದರೆ ಅಪ್ಪಯ್ಯನ ಹೋಟಲ್. ಈ ಅಪ್ಪಯ್ಯನವರ (ನಿಜ ನಾಮಧೇಯ ಶ್ರೀನಿವಾಸ ಮೂರ್ತಿ) ಸುಪುತ್ರನೇ ನನ್ನ ಆಪ್ತಮಿತ್ರ ನಾಗೇಶ. ಹೋಟಲ್ ಕೆಲಸಗಳಲ್ಲಿ ತಂದೆಗೆ ನೆರವಾಗುತ್ತಿದ್ದುದರಿಂದ ನಾಗೇಶನಿಗೆ ಹೆಚ್ಚು ಬಿಡುವು ಸಿಗುತ್ತಿರಲಿಲ್ಲ. ಹಾಗಾಗಿ ಎಷ್ಟೋ ಸಂದರ್ಭಗಳಲ್ಲಿ ನನಗೆ ಅವನ ರಕ್ಷಾಕವಚ ಒದಗದೆ ನಾನು ಪರಿತಪಿಸುತ್ತಿದ್ದೆ.

ಅಪ್ಪಯ್ಯನವರ ಹೋಟಲ್ ನಲ್ಲಿ ಅವರು ಮಾಡಿಕೊಡುತ್ತಿದ್ದ ಮೃದುವಾದ ತೂತು ತೂತು ಖಾಲಿದೋಸೆ-ಚಟ್ನಿ ಹಾಗೂ ಮಲ್ಲಿಗೆ ಹೂವಿನಷ್ಟು ಮೃದುವಾದ ಇಡ್ಲಿ ಗಳನ್ನು ಸವಿಯಲು ಸುತ್ತಮುತ್ತಲ ಹಳ್ಳಿಗಳಿಂದ ಜನ ಬಂದು ಮುಕುರುತ್ತಿದ್ದರು. ಅಪ್ಪಯ್ಯನವರು ಕಾಫಿ ಬೆರೆಸಿಕೊಡುತ್ತಿದ್ದ ವೈಖರಿಯೇ ಒಂದು ಸೊಗಸಾದ ದೃಶ್ಯ ಎನ್ನಬೇಕು! ಒಂದು-ಒಂದೂವರೆ ಮೀಟರ್ ಅಂತರದಿಂದ ಒಂದು ಲೋಟದಿಂದ ಇನ್ನೊಂದು ಲೋಟಕ್ಕೆ ತುಸುವೂ ತುಳುಕದಂತೆ ಸರ್ ಸರ್ ಎಂದು ವರ್ಗಾಯಿಸುತ್ತಾ ಬುರುಬುರು ನೊರೆಗಟ್ಟಿಸಿ ಕೊಡುತ್ತಿದ್ದ ಕಾಫಿಗೆ ಅಲ್ಲಿಯ ಮಂದಿ ಮಾರುಹೋಗಿದ್ದರು.

ನಾಗೇಶನ ಆಪ್ತ ಮಿತ್ರನಾದ್ದರಿಂದ ಅಲ್ಲಿಗೆ ಹೋದಾಗಲೆಲ್ಲಾ ನನಗೂ ಬಿಸಿಬಿಸಿ ದೋಸೆ ಹಾಕಿಕೊಡುತ್ತಿದ್ದರು. ನನಗೆ ಚಿಕ್ಕಂದಿನಿಂದಲೂ ಹಸುಗಳು ಹಾಗೂ ನಾಯಿಗಳೆಂದರೆ ತುಂಬಾ ಪ್ರೀತಿ. ನನ್ನ ಏಕಾಂತದ ಬಹಳಷ್ಟು ಸಮಯವನ್ನು ಹಸುಗಳ ಕೊಟ್ಟಿಗೆಯಲ್ಲೇ ಕಳೆಯುತ್ತಿದ್ದೆ. ಹಸುಗಳಿಗೆ ಹುಲ್ಲು ಹಾಕುವ ಕಟ್ಟೆಯಲ್ಲಿ ಕುಳಿತು ಅವುಗಳ ಗಂಗೆದೊಗಲನ್ನು ನೇವರಿಸುತ್ತಾ, ಅವುಗಳ ಒರಟುನಾಲಗೆಯಿಂದ ಮುಖ-ಕೈಗಳನ್ನು ನೆಕ್ಕಿಸಿಕೊಳ್ಳುತ್ತಾ ಸುಖಿಸುತ್ತಿದ್ದೆ. ನನ್ನ ದುಗುಡ-ದುಮ್ಮಾನ-ಸಂಕಟಗಳನ್ನೆಲ್ಲಾ ಅವುಗಳ ಮುಂದೆ ತೋಡಿಕೊಂಡು ಹಗುರಾಗುತ್ತಿದ್ದೆ.

ಕೊಣನೂರಿನಲ್ಲಿ ಗುರುವಾರ ಸಂತೆ.ಸುತ್ತಮುತ್ತಲ ಹಳ್ಳಿಗಳಿಂದ ರೈತರು ತರಕಾರಿ-ಹಣ್ಣು-ದಿನಸಿಗಳನ್ನೆಲ್ಲಾ ತಂದು ಸಂತೆಮಾಳದಲ್ಲಿ ಒಟ್ಟುಹಾಕಿಕೊಂಡು ಮಾರುತ್ತಿದ್ದರು. ಆಗಾಗ್ಗೆ ಅಲ್ಲಿ ನಡೆಯುತ್ತಿದ್ದ ಕಣ್ಕಟ್ಟು ಪ್ರದರ್ಶನಗಳು ಬಹು ಜನಪ್ರಿಯವಾಗಿದ್ದವು. ಹುಡುಗನೊಬ್ಬನನ್ನು ಕೂರಿಸಿ, ಅವನ ಮೇಲೆ ಒಂದು ಮಂಕರಿ ಕವುಚಿ, ಡಾಂಡೂಂ ಎಂದು ಒಂದಷ್ಟು ಮಂತ್ರಗಳನ್ನು ಹೇಳಿ ಹುಡುಗನನ್ನು ಮಾಯ ಮಾಡುತ್ತಿದ್ದುದು, ಹುಡುಗನನ್ನು ಒಂದಷ್ಟು ಕಂಬಳಿ-ಬಟ್ಟೆಗಳ ಮೇಲೆ ಮಲಗಿಸಿ ಮತ್ತಷ್ಟು ಮಂತ್ರಗಳನ್ನು ಹೇಳಿ 8-10 ಅಡಿಗಳಷ್ಟು ಮೇಲೇರಿಸಿ ಗಾಳಿಯಲ್ಲಿ ತೇಲಿಸುತ್ತಿದ್ದುದು-ಅದೂ ಹಾಡಹಗಲಿನಲ್ಲಿ-ನೆನೆಸಿಕೊಂಡರೆ ಈಗಲೂ ಬೆರಗು ಹುಟ್ಟಿಸುವ ಸಂಗತಿಗಳು.

ಈ ಸಂತೆಯ ಮಾಳದಲ್ಲಿ ಗುರುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಒಂದಷ್ಟು ಹಸುಗಳು ಹುಲ್ಲು ಮೇಯಲು ಬರುತ್ತಿದ್ದವು. ಸಂಜೆ ಶಾಲೆ ಮುಗಿಯುತ್ತಿದ್ದಂತೆ ನಾನು ಮತ್ತು ನಾಗೇಶ ಸಂತೆಮಾಳಕ್ಕೆ ದೌಡಾಯಿಸುತ್ತಿದ್ದೆವು.ಅಲ್ಲಿ ಬರುತ್ತಿದ್ದ ಹಸುಗಳಿಗೆಲ್ಲಾ ನಮ್ಮಿಂದ ಮರು ನಾಮಕರಣ: ಗಂಗೆ, ತುಂಗೆ, ಭಾಗೀರಥಿ, ‘ಇದು ನಮ್ಮ ಕುಜ’, ‘ಅದು ನಿಮ್ಮ ಕುಜ’ (ಅದೇಕೆ ಈ ವಿಶಿಷ್ಟ ಹೆಸರುಗಳಿಟ್ಟಿದ್ದೆವೋ ಕಾಣೆ!)… ಹೆಸರು ಹಿಡಿದು ಕೂಗಿದರೆ ಅವು ಅಂಬಾ ಎಂದು ಕೂಗಿಕೊಂಡು ಬಳಿಗೆ ಬಂದು ಕೊರಳನ್ನು ಮುಂದೆ ಚಾಚುತ್ತಿದ್ದವು-ತುರಿಸಿರಿ ಎಂದು! ಸಂತೆಮಾಳದಲ್ಲಿ ಇದ್ದ ಮರಗಳಲ್ಲಿ ಒಂದು ರೀತಿಯ ಉದ್ದನೆಯ ಕಪ್ಪುಕಾಯಿಗಳು ಬಿಡುತ್ತಿದ್ದವು.

ಹಸುಗಳಿಗೆ ಆ ಕಾಯಿಗಳೆಂದರೆ ತುಂಬಾ ಇಷ್ಟ. ನಾವು ಮರದಿಂದ ಆ ಕಾಯಿಗಳನ್ನು ಕಿತ್ತು ಹಸುಗಳಿಗೆ ತಿನ್ನಿಸುತ್ತಿದ್ದೆವು. ಕೊಣನೂರಿನಿಂದ ಸೋಮವಾರಪೇಟೆಗೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ಧಂಡಿಯಾಗಿ ಅತ್ತಿಯ ಮರಗಳಿದ್ದವು. ನಾವು ಆ ಮರಗಳಿಂದ ಅತ್ತಿಹಣ್ಣುಗಳನ್ನು ಕೆಡವಿ ಅಲ್ಲೇ ರಸ್ತೆಯ ಮೇಲೆ ಒಟ್ಟು ಹಾಕಿಕೊಂಡು ಕೋಲಿನಿಂದ ಬಡಿದು ಬಡಿದು ಮುದ್ದೆ ಮಾಡಿ ಹಸುಗಳಿಗೆ ವಿಶೇಷ ತಿನಿಸಾಗಿ ತಿನ್ನಿಸುತ್ತಿದ್ದೆವು.

ಒಂದು ಸಂಜೆ ಸಂತೆಮಾಳದಲ್ಲಿ ನಾವು ಯಥಾಪ್ರಕಾರ ಹಸುಗಳಿಗೆ ಕಾಯಿ-ಹಣ್ಣು ತಿನ್ನಿಸುವ ನಮ್ಮ ಪವಿತ್ರ ಕಾರ್ಯದಲ್ಲಿ ತೊಡಗಿದ್ದೆವು. ಪೇಟೆಯ ರಂಗಪ್ಪಶೆಟ್ಟರು ಆ ಮಾರ್ಗವಾಗಿ ಹೋಗುತ್ತಿದ್ದವರು ಒಂದು ಕ್ಷಣ ನಿಂತು ನಮ್ಮನ್ನೂ ನಾವು ಮಾಡುತ್ತಿದ್ದ ಕೆಲಸವನ್ನೂ ಗಮನಿಸಿದರು. ನಂತರ ಬಳಿಗೆ ಬಂದವರೇ ಜೋರಾಗಿ ನಮ್ಮ ಕಿವಿ ಹಿಂಡಿ ಇಬ್ಬರಿಗೂ ಬೆನ್ನಮೇಲೆ ಎರಡೆರಡು ಗುದ್ದು ಹಾಕಿದರು! ಅಯ್ಯೋ ದೇವಾ!! ಗೋಮಾತೆಯ ಸೇವೆಯನ್ನು ಅಷ್ಟು ಪ್ರೀತಿಯಿಂದ ಮಾಡುತ್ತಿದ್ದರೆ ಇಂಥಾ ಶಿಕ್ಷೆಯೇ! ಈ ಲೋಕದಲ್ಲಿ ನ್ಯಾಯ ಅನ್ನುವುದೇ ಇಲ್ಲವೇ! ‘ಯಾಕೆ ಶೆಟ್ಟರೇ, ನಮಗ್ಯಾಕೆ ಹೊಡೀತಿದೀರಿ?’ ಎಂದು ಅರೆಸಿಟ್ಟು-ಅರೆ ಸಂಕಟದಿಂದ ಕಿರುಲಿದೆವು. ‘ಅಯ್ಯೋ ದಡ್ಡ ಮುಂಡೇವಾ.. ನಿಮಗ್ಯಾರ್ರೋ ಹಸುಗಳಿಗೆ ಈ ಹಾಳು ಮೂಳು ಎಲ್ಲಾ ತಿನ್ನಿಸಿ ಅಂತ ಹೇಳಿದ್ದು? ನಾಕೈದು ದಿವಸದಿಂದ ಒಂದೇ ಸಮ ಉಚ್ಚಿಕೊಂತಿವೆ.

ಡಾಕ್ಟ್ರ ಹತ್ರ ಔಷಧಿ ಹಾಕಿಸಿದರೂ ನಿಂತಿಲ್ಲ.. ಈ ಕಾಯಿಕಸ ತಿಂದೇ ಅವುಗಳ ಹೊಟ್ಟೆ ಸಡಿಲ ಆಗಿರಬೇಕು. ನಮ್ಮ ದನಗಳಿಗೆ ನಾವು ಹುಲ್ಲು ಹಿಂಡಿ ಎಲ್ಲಾ ಬೇಕಾದಷ್ಟು ಹಾಕ್ತೀವಿ.. ನೀವು ಇವೆಲ್ಲಾ ತಿನ್ನಿಸೋದು ಏನೂ ಬೇಡ’ ಎಂದು ಬೈದು ಬುದ್ಧಿ ಹೇಳಿ ಹೋದರು. ತುಂಬಾ ಪೆಚ್ಚೆನಿಸಿತು ನಮ್ಮಿಬ್ಬರಿಗೂ. ಅಂದಿನಿಂದ ಹಸುಗಳಿಗೆ ಉಪಚರಿಸಿ ತಿನ್ನಿಸುವುದು ನಿಂತು ಹೋದರೂ ದಿನಾ ಸಂಜೆ ಸಂತೆಮಾಳಕ್ಕೆ ಹೋಗಿ ಅವುಗಳನ್ನು ಮುದ್ದಿಸುವುದನ್ನು ಮಾತ್ರ ನಾವು ಬಿಡಲಿಲ್ಲ.

ಚಿಕ್ಕಜ್ಜನ ಮನೆಯಲ್ಲಿ ಒಂದೆರಡು ಎಮ್ಮೆಗಳನ್ನು ಕಟ್ಟಿದ್ದರು. ಹಸುಗಳಷ್ಟು ಅವು ನನ್ನನ್ನು ಸೆಳೆಯದಿದ್ದರೂ ‘ಪಾಪ’ ಎಂದು ಮರುಕದಿಂದ ನಾನು ಅವನ್ನೂ ಮುದ್ದಿಸುತ್ತಿದ್ದೆ. ಹಜಾರಕ್ಕೆ ಹೊಂದಿಕೊಂಡಂತೆಯೇ ಸ್ವಲ್ಪ ಕೆಳಭಾಗದಲ್ಲಿ ಕೊಟ್ಟಿಗೆಯಿತ್ತು. ಒಂದು ರಾತ್ರಿ ಒಂದು ಎಮ್ಮೆ ಅದು ಹೇಗೋ ಗೂಟದಿಂದ ಬಿಡಿಸಿಕೊಂಡು ಮನೆಯೊಳಗೆ ಬಂದು ಹಜಾರದಲ್ಲಿ ಮಲಗಿದ್ದ ನನ್ನ ಎಡಪಾದವನ್ನು ಮೆಟ್ಟಿಯೇಬಿಟ್ಟಿತು! ಸಧ್ಯ! ಮತ್ತೊಂದು ಹೆಜ್ಜೆ ಮುಂದೆ ಬಂದು ನನ್ನ ಹೊಟ್ಟೆಯ ಮೇಲೆ ಪಾದವೂರಿದ್ದಿದ್ದರೆ ಆ ಎಮ್ಮೆ ಭಾರಕ್ಕೆ ಅಂದೇ ನಾನು ಭೂತಕಾಲಕ್ಕೆ ಸೇರಿಬಿಡುತ್ತಿದ್ದೆನೇನೋ! ನೋವಿನಿಂದ ಬೊಬ್ಬೆ ಹೊಡೆಯುತ್ತಿದ್ದ ನನ್ನನ್ನು ಚಿಕ್ಕಜ್ಜ ನಸುಕಿನಲ್ಲೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರನ್ನು ಕರೆಸಿದರು.

ತಪಾಸಣೆ ಮಾಡಿದ ವೈದ್ಯರು ಪೆಟ್ಟು ಆಳವಾಗಿ ಆಗಿರುವುದರಿಂದ ನಾಲ್ಕಾರು ಹೊಲಿಗೆ ಹಾಕಬೇಕಾಗುತ್ತದೆ ಎಂದರು. ಹೊಲಿಗೆ ಎನ್ನುತ್ತಿದ್ದಂತೆ ನನ್ನ ರೋದನ ತಾರಕಕ್ಕೇರಿಬಿಟ್ಟಿತು. ಹೃದಯ ವಿದ್ರಾವಕವಾಗಿ ಚೀರುತ್ತಿದ್ದ ನನ್ನ ಗಮನವನ್ನು ಬೇರೆಡೆ ಸೆಳೆಯಲು ಒಬ್ಬ ವೈದ್ಯರು, ‘ಇಲ್ನೋಡು ಮರಿ.. ಇಲ್ನೋಡು’ ಎಂದು ತಾವು ಸೇದುತ್ತಿದ್ದ ಸಿಗರೇಟಿನ ಹೊಗೆಯಿಂದ ಸುರುಳಿಗಳನ್ನು ಮಾಡಿ ಉಫ್ ಎಂದು ತೇಲಿಬಿಡುತ್ತಿದ್ದುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ಆಗೆಲ್ಲಾ ಸಿಗರೇಟ್ ಸೇವನೆ ಆಧುನಿಕತೆಯ ಸಂಕೇತವೇ ಆಗಿತ್ತು ಹೊರತು ನಿಷಿದ್ಧ ವಸ್ತುವಾಗಿರಲಿಲ್ಲ! ನನ್ನ ಚೀತ್ಕಾರಗಳ ನಡುವೆಯೇ ಕಷ್ಟಪಟ್ಟು ಹೊಲಿಗೆ ಹಾಕಿದ ವೈದ್ಯರು ಒಂದಿಷ್ಟು ಔಷಧಿ–ಗುಳಿಗೆ ಕೊಟ್ಟು ‘ಮೂರುದಿನ ಶಾಲೆಗೆ ಕಳಿಸಬೇಡಿ’ ಎಂದರು. ಆಹಾ! ಆ ಪರಮನೋವಿನಲ್ಲೂ ಒಂದು ಆನಂದದ ಎಳೆ! ಮೂರು ದಿನ ಶಾಲೆ ಇಲ್ಲ! ಅಂದು ಎಮ್ಮೆ ತುಳಿದು ಆದ ಗಾಯದ ಗುರುತು ಈಗಲೂ ನನ್ನ ಎಡಪಾದದ ಮೇಲೆ ರಾರಾಜಿಸುತ್ತಿದೆ.

ಒಂದು ದಿನ ರಾತ್ರಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ಬರುವ ವೇಳೆಗೆ ಚಿಕ್ಕಜ್ಜ ವ್ಯಗ್ರರಾಗಿ ಉಯ್ಯಾಲೆಯ ಮೇಲೆ ಕೂತಿದ್ದರು. ‘ಏನೋ ಕಾದಿದೆ’ ಎಂದು ಅಳುಕುತ್ತಲೇ ಒಳಬಂದೆ. ‘ಬಾಪ್ಪಾ, ಬಾ ದಾನಶೂರಕರ್ಣ! ಬಾ’ ಎನ್ನುತ್ತಾ ಎದ್ದುಬಂದು ಜೋರಾಗಿ ಕಿವಿ ಹಿಂಡಿ, ‘ನೀನೇನು ಮೈಸೂರು ಮಹಾರಾಜರ ಮೊಮ್ಮಗ ಅಂತ ತಿಳಕೊಂಡು ಬಿಟ್ಟಿದೀಯೇನೋ? ನಾವೂ ಏನೂ ಶ್ರೀಮಂತರಲ್ಲ. ನಾವೂನೂ ಬಡವರೇನೇ. ತಿಳಕೋ. ಸಿಕ್ಕಿಸಿಕ್ಕಿದ್ದನ್ನೆಲ್ಲಾ ಕಂಡಕಂಡವರಿಗೆಲ್ಲಾ ನೀಗಿ ಬಂದುಬಿಟ್ರೆ ನನ್ನ ಕೈಲಿ ಸಂಭಾಳಿಸೋಕಾಗಲ್ಲ’ ಎಂದು ಒಂದೇ ಸಮ ರೇಗತೊಡಗಿದರು.

ಚಿಕ್ಕಜ್ಜಿಯದೂ ನಡುನಡುವೆ ಬೈಗುಳದ ಮಂತ್ರಾಕ್ಷತೆ. ತುಸುಹೊತ್ತಿನ ಮೇಲೆ ವಿಷಯ ಸ್ಪಷ್ಟವಾಯಿತು: ಹಿಂದಿನ ದಿನವಷ್ಟೇ ಚಿಕ್ಕಜ್ಜ ನನಗೆ ಹೊಸ ನೋಟ್ ಬುಕ್ ಹಾಗೂ ಪೆನ್ಸಿಲ್ ಕೊಡಿಸಿದ್ದರು. ನಾನು ನನ್ನ ಶಾಲೆಯ ಸಹಪಾಠಿಯೊಬ್ಬನಿಗೆ, ‘ಲೇ..ನೀನು ಬಡವಾ ಕಣೋ.. ತೊಗೋ.. ಈ ಪುಸ್ತಕ ಪೆನ್ಸಿಲ್ ನೀನಿಟ್ಟುಕೋ.. ನಾನು ಹೊಸಾದು ಕೊಡಿಸ್ಕೋತೀನಿ’ ಎಂದು ಎಲ್ಲವನ್ನೂ ದಾನವಾಗಿ ಕೊಟ್ಟುಬಂದಿದ್ದೆ. ಪರಮ ಮಿತ್ರದ್ರೋಹಿಯೊಬ್ಬ ಈ ವಿಷಯವನ್ನು ಕೊಂಚವೂ ತಡಮಾಡದೆ ನನ್ನ ಚಿಕ್ಕಜ್ಜನಿಗೆ ಮುಟ್ಟಿಸಿಯೇ ಬಿಟ್ಟಿದ್ದ.

ಬಸವಾಪಟ್ಟಣದಲ್ಲೂ ಹೀಗೇ ಮಾಡುತ್ತಿದ್ದೆನಂತೆ. ಅಂಗಡಿಯಲ್ಲಿ ಗಲ್ಲಾಪೆಟ್ಟಿಗೆಯಲ್ಲಿದ್ದ ಚಿಲ್ಲರೆ ನಾಣ್ಯಗಳನ್ನು ಗುಟ್ಟಾಗಿ ಜೇಬಿನಲ್ಲಿ ತುಂಬಿಕೊಂಡು ಬಂದು ಅಂಗಡಿಯಲ್ಲೇ ಕೆಲಸಕ್ಕಿದ್ದ ಯಮಜ ಎಂಬ ಹುಡುಗನಿಗೆ ದಾನವಾಗಿ ನೀಡುತ್ತಿದ್ದೆನಂತೆ. ‘ಇವನು ಹೀಗೇ ಮಾಡಿಕೊಂಡಿದ್ರೆ ಮನೇನೆಲ್ಲಾ ಗುಡಿಸಿ ಗುಂಡಾಂತರ ಮಾಡಿಬಿಡ್ತಾನಷ್ಟೇ’ ಎಂದು ಅಜ್ಜಿಯೂ ಲೊಚಗುಟ್ಟಿದರು. ಒಟ್ಟಿನಲ್ಲಿ ಹೊಸ ಬಿರುದೊಂದು ಅದಾಗಲೇ ಉಬ್ಬಿನಿಂತಿದ್ದ ನನ್ನ ಪ್ರಶಸ್ತಿಗಳ ಮಾಲೆಗೆ ಸೇರಿಕೊಂಡಿತು: ‘ದಾನಶೂರ ಕರ್ಣ’!!

ಒಂದು ರಾತ್ರಿ ಊಟ ಮುಗಿಸಿ ಮಲಗುವ ಸಿದ್ಧತೆ ನಡೆಸಿದ್ದೆವು. ಅಷ್ಟರಲ್ಲಿ ಯಾರೋ ಧಬಧಬ ಬಾಗಿಲು ಬಡಿದರು. ಈ ಹೊತ್ತಲ್ಲಿ ಯಾರು ಬಂದರಪ್ಪಾ ಎಂದುಕೊಳ್ಳುತ್ತಾ ಚಿಕ್ಕಜ್ಜ ಹೋಗಿ ಬಾಗಿಲು ತೆರೆದರು. ಹೊರಗಡೆ ಒಬ್ಬ ವ್ಯಕ್ತಿ ಗಡಗಡ ನಡುಗುತ್ತಾ ನಿಂತಿದ್ದಾರೆ.. ಓಡಿಬಂದಿದ್ದಕ್ಕೋ ಏನೋ ಧಸಧಸ ಏದುಸಿರು ಬಿಡುತ್ತಿದ್ದಾರೆ… ಮುಖ ಮೈ ಎಲ್ಲಾ ಬೆವರಿನಿಂದ ತೋಯ್ದು ಹೊಗಿದೆ! ‘ಇದೇನೋ ಸೋಮಣ್ಣಾ ಈ ಅವೇಳೇಲಿ ಬಂದಿದೀಯಾ? ಬಾ.. ಒಳಗೆ ಬಾ ಎನ್ನುತ್ತಾ ಚಿಕ್ಕಜ್ಜ ಅವರನ್ನು ಒಳ ಕರೆತಂದರು. ಬಂದವರೇ ಆ ವ್ಯಕ್ತಿ ಒಂದು ಚೊಂಬು ನೀರನ್ನು ಗಟಗಟ ಕುಡಿದು, ‘ಶಾಮಣ್ಣಾ, ಪುನರ್ಜನ್ಮ ಆಯ್ತು ಇವತ್ತು ನಂಗೆ… ನಾನು ಉಳೀತೀನಿ ಅಂತ ದೇವ್ರಾಣೆ ಅಂದುಕೊಂಡಿರಲಿಲ್ಲ…’ ಎಂದೇನೇನೋ ಬಡಬಡಿಸುತ್ತಿದ್ದರು. ಇದ್ಯಾಕೆ ಈ ಮಾವಯ್ಯ ಒಳ್ಳೇ ದೆವ್ವ ಕಂಡೋರ ಹಾಗೆ ಆಡ್ತಿದಾರೆ ಎಂದು ನಾನು ಯೋಚಿಸುತ್ತಿದ್ದೆ.

ತುಸು ಹೊತ್ತಾದ ಮೇಲೆ ನಾನು ಯೋಚಿಸಿದ್ದೇ ಸರಿ ಎನ್ನುವುದು ಸಿದ್ಧವಾಯಿತು! ಸ್ವಲ್ಪ ಸುಧಾರಿಸಿಕೊಂಡ ಮೇಲೆ ಆ ಮಾವಯ್ಯ ಹೇಳಿದ ಪ್ರಸಂಗದ ಸಾರಾಂಶ ಇಷ್ಟು: ಸೋಮಣ್ಣ ಮಾವಯ್ಯ ತುರ್ತುಕೆಲಸದ ಮೇಲೆ ತಮ್ಮ ಹಳ್ಳಿಯಿಂದ ಕೊಣನೂರಿಗೆ ಹೊರಟಿದ್ದಾರೆ. ಇದ್ದ ಕೊನೆಯ ಬಸ್ಸು ಬಾರದ ಕಾರಣಕ್ಕೆ ನಡೆದೇ ಹೊರಟುಬಿಟ್ಟಿದ್ದಾರೆ. ಮಾರ್ಗದ ನಡುವೆ ಸ್ವಲ್ಪ ದೂರ ಕಾಡುದಾರಿ. ಎಷ್ಟೇ ಬೇಗ ನಡೆದರೂ ಕಾಡುದಾರಿ ತಲುಪುವ ವೇಳೆಗೆ ಕತ್ತಲಾಗಿ ಬಿಟ್ಟಿದೆ.

ಈ ಮಾರ್ಗದ ನಡುವೆ ಇದ್ದ ಒಂದು ಪಾಳುಗುಡಿಯ ಕುರಿತು ಸಾಕಷ್ಟು ಕಥೆಗಳು ಅದಾಗಲೇ ಪ್ರಚುರದಲ್ಲಿದ್ದವು. ಮೊದಲೇ ಅಳ್ಳೆದೆಯ ಸೋಮಣ್ಣನವರಿಗೆ ಕೈಕಾಲು ನಡುಕ ಶುರುವಾಗಿಯೇ ಬಿಟ್ಟಿತು! ಅದೇ ವೇಳೆಗೆ ಯಾರೋ ‘ಏನು ಸೋಮಣ್ಣಾ, ಎತ್ಲಾಗೆ ಹೊರಟೆ ಇಷ್ಟು ಹೊತ್ತಲ್ಲಿ’ ಎಂದು ಕೂಗಿದಂತಾಯಿತು! ನಡುಗುತ್ತಲೇ ಹೊರಳಿ ನೋಡಿದರೆ ಕಾಡಿನ ಕಡುಗತ್ತಲಲ್ಲಿ ಅನತಿ ದೂರದಲ್ಲಿ ಒಂದು ಬಿಳಿಯ ಆಕೃತಿ! ಮನುಷ್ಯಾಕಾರವಂತೂ ಅಲ್ಲವೇ ಅಲ್ಲ! ಜಂಘಾಬಲವೇ ಉಡುಗಿ ಹೋದಂತಾಗಿ ಜೋರಾಗಿ ಗಾಯತ್ರಿಮಂತ್ರವನ್ನು ಹೇಳುತ್ತಾ ಓಡತೊಡಗಿದ ಸೋಮಣ್ಣ ಮತ್ತೆ ನಿಂತಿದ್ದು ಚಿಕ್ಕಜ್ಜನ ಮನೆಯ ಮುಂದೆಯೇ! ಸೋಮಣ್ಣ ಕಥೆ ನಿಲ್ಲಿಸಿದ ಮೇಲೆ ತುಸು ಹೊತ್ತು ಯಾರೂ ಮಾತಾಡಲಿಲ್ಲ. ಆಮೇಲೆ ಅವರವರೇ ಸಮಾಧಾನ ಮಾಡಿಕೊಂಡು ಸಮರಾತ್ರಿಯವರೆಗೆ ದೆವ್ವ ಭೂತಗಳ ಬಗ್ಗೆ ತಮತಮಗೆ ಗೊತ್ತಿರುವ ಕಥೆಗಳನ್ನೆಲ್ಲಾ ರೋಚಕವಾಗಿ ಹೇಳಿದ್ದೇ ಹೇಳಿದ್ದು.

ರಾತ್ರಿ ಹಜಾರದಲ್ಲಿ ನನ್ನ ಪಕ್ಕವೇ ಮಲಗಿದ ಸೋಮಣ್ಣ ಬೆಳತನಕವೂ ಏನೇನೋ ಕನವರಿಸುತ್ತಲೇ ಇದ್ದರು. ಆಗಾಗ್ಗೆ ನನ್ನ ಮೇಲೆ ಧಬಾರೆಂದು ಅವರ ಕೈ ಬೀಳುತ್ತಿತ್ತು. ಹೊರಳಾಡಿಕೊಂಡೇ ರಾತ್ರಿ ಕಳೆಯಿತು. ಮರುದಿನ ಬೆಳಿಗ್ಗೆ ಚಿಕ್ಕಜ್ಜಿ ಅಜ್ಜನ ಹತ್ತಿರ ಗೊಣಗುತ್ತಿದ್ದರು: ‘ರಾತ್ರಿ ಹೊತ್ತು ಮಗು ಮುಂದೆ ದೆವ್ವ ಭೂತ ಅಂತೆಲ್ಲಾ ಮಾತಾಡಬೇಡಿ..ಭಯಪಟ್ಟುಕೊಂಡು ಹಾಸಿಗೆ ಎಲ್ಲಾ ಒದ್ದೆ ಮಾಡಿಕೊಂಡಿದಾನೆ.’ ಈ ಮಾತು ಕೇಳಿಸಿಕೊಂಡ ನನಗೆ ಆಶ್ಚರ್ಯವಾಯಿತು. ವಾಸ್ತವವಾಗಿ ನಾನು ಹಾಗೇನೂ ಮಾಡಿಕೊಂಡಿರಲಿಲ್ಲ. ತಿರುಗಿ ನೋಡಿದರೆ ಸೋಮಣ್ಣ ತಲೆತಗ್ಗಿಸಿಕೊಂಡು ಬಚ್ಚಲ ಕಡೆಗೆ ಹೋಗುತ್ತಿದ್ದರು… ತಿಂಡಿ ತಿಂದುಕೊಂಡು ಸೋಮಣ್ಣ ಚಿಕ್ಕಜ್ಜನನ್ನೂ ಕರೆದುಕೊಂಡು ಕೆಲಸದ ಮೇಲೆ ಹೊರಟುಹೋದರು. ಸ್ವಲ್ಪ ಹೊತ್ತಾದ ಮೇಲೆ ಅಡುಗೆ ಮಾಡಿಟ್ಟ ಚಿಕ್ಕಜ್ಜಿ ‘ಸಾವಿತ್ರಮ್ಮನ ಮನೇಗೆ ಹೋಗಿ ಒಂದಾಟ ಪಗಡೆ ಆಡಿಕೊಂಡು ಬರ್ತೀನಿ, ಎಲ್ಲೂ ಹೋಗಬೇಡ’ ಎಂದು ನನಗೆ ಹೇಳಿ ಹೊರಟರು.

ಸ್ವಲ್ಪ ಹೊತ್ತಿಗೇ ಇದ್ದಕ್ಕಿದ್ದ ಹಾಗೆ ಭಾರೀ ಮೋಡ ಕವಿದು ಮಳೆ ಬರುವಂತಾಯಿತು. ಸಾಲದೆಂಬಂತೆ ಗುಡುಗು ಸಿಡಿಲುಗಳ ಆರ್ಭಟ ಬೇರೆ. ಮೊದಲೇ ದೆವ್ವದ ಕಥೆ ಕೇಳಿ ಹೈರಾಣಾಗಿ ಹೋಗಿದ್ದ ನಾನು ಗುಡುಗಿನ ಪ್ರಚಂಡ ಶಬ್ದಕ್ಕೆ ಅಕ್ಷರಶಃ ನಡುಗಿಯೇ ಹೋದೆ. ಆ ಪಾಟಿ ಗುಡುಗುತ್ತಿದ್ದರೆ ಅದರರ್ಥ ಯಮಧರ್ಮರಾಯ ಕೋಣನ ಮೇಲೆ ಕುಳಿತು ಭೂಲೋಕಕ್ಕೆ ಹೊರಟಿದ್ದಾನೆ; ದಾರಿಯಲ್ಲಿ ಸಿಕ್ಕವರನ್ನೆಲ್ಲಾ ಹಗ್ಗಕ್ಕೆ ಕಟ್ಟಿಕೊಂಡು ನರಕಕ್ಕೆ ಎಳೆದೊಯ್ಯುತ್ತಾನೆ-ಎಂಬುದು ಆಗಿನ ನಮ್ಮ ನಂಬುಗೆ. ಯಮನಿಂದ ತಪ್ಪಿಸಿಕೊಳ್ಳಲು ಇರುವುದೊಂದೇ ಮಾರ್ಗ: ಅವನಿಗೆ ಕಾಣದಂತೆ ಮುಚ್ಚಿಟ್ಟುಕೊಳ್ಳುವುದು! ಸೀದಾ ಮನೆಯ ಒಳಗೋಡಿ ಹಜಾರದ ಒಂದು ಮೂಲೆಯಲ್ಲಿದ್ದ ದೊಡ್ಡ ಚಾಪೆಯನ್ನು ನನ್ನ ಸುತ್ತ ಸುರುಳಿ ಸುತ್ತಿಕೊಂಡು ಅವಿತುಕೊಂಡುಬಿಟ್ಟೆ.

ನಡುನಡುವೆ ಯಮಧರ್ಮರಾಯ ಬಂದನಾ ಎಂದು ಮೆಲ್ಲನೆ ತಲೆಯೆತ್ತಿ ಚಾಪೆಯ ಮೇಲ್ಭಾಗದಿಂದ ನೋಡುತ್ತಿದ್ದೆ! ಈ ಪ್ರಸಂಗವನ್ನು ಯಾಕೆ ಇಷ್ಟು ವಿವರವಾಗಿ ಬರೆದೆನೆಂದರೆ ಇತ್ತೀಚೆಗೆ ಪ್ರಸಿದ್ಧ ಕನ್ನಡ ನಾಟಕಕಾರ ಸಂಸರ ಬದುಕನ್ನು ಕುರಿತು ನಾನು ಹಾಗೂ ಜಿ. ಮೂರ್ತಿಯವರು ಸೇರಿ ಒಂದು ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದೆವು. ಅದರಲ್ಲಿ ನಾನೇ ಸಂಸರ ಭೂಮಿಕೆಯನ್ನು ನಿರ್ವಹಿಸಿದ್ದೆ. (ಈ ಚಿತ್ರದ ಬಗ್ಗೆ ಮುಂದೆ ವಿಶದವಾಗಿ ಬರೆಯುತ್ತೇನೆ.)

ಆ ಚಿತ್ರದ ಪ್ರಾರಂಭದಲ್ಲಿಯೇ ಪೋಲೀಸರಿಗೆ ಹೆದರಿ ಅವರಿಂದ ತಪ್ಪಿಸಿಕೊಳ್ಳಲು ಓಡಿಬರುವ ಸಂಸರು ತಮ್ಮ ಕೋಣೆಯನ್ನು ಸೇರಿಕೊಂಡು ಬಾಗಿಲು ಮುಚ್ಚಿ ಮೂಲೆಯಲ್ಲಿದ್ದ ಚಾಪೆಯನ್ನು ತೆಗೆದು ತಮ್ಮ ಸುತ್ತ ಸುರುಳಿ ಸುತ್ತಿಕೊಂಡು ಅಡಗಿ ಕೂರುತ್ತಾರೆ! ನಡುನಡುವೆ ಮೆಲ್ಲಗೆ ಚಾಪೆಯ ಮೇಲ್ಭಾಗದಿಂದ ಯಾರಾದರೂ ಬಂದಿರುವರೇ ಎಂದು ಹಣಕಿ ನೋಡುತ್ತಾರೆ! ಹೀಗೆ ಬಾಲ್ಯದ ನೆನಪುಗಳ ಹಳವಂಡದಿಂದ ಧುತ್ತೆಂದು ಜಿಗಿದ ಚಿತ್ರವೊಂದು ಸಂಸರ ಭಯ-ದುಗುಡಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಚಿತ್ರಿಕೆಯೊಂದಕ್ಕೆ ಪ್ರೇರಕ ಸಾಮಗ್ರಿಯಾಯಿತು!!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

June 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shivalingaiah

    ಓಡನಾಡಿಯಾಗಿ ಕಂಡದ್ದು ಯಾವುದೇ ಜಾತಿಯ ಮೋಹವಿಲ್ಲ ಹೃದಯ ವಿಶಾಲತೇ ಅಹಂ ಇಲ್ಲದ ಮನಸ್ಸು

    ಪ್ರತಿಕ್ರಿಯೆ
  2. K.M.kodandarama setty

    ನಿನ್ನ ಅಭಿವ್ಯಕ್ತಿ ಕುತೂಹಲಕಾರಿಯಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: