ಸಿ ಎಚ್ ಭಾಗ್ಯ ಅನುವಾದಿತ ಕವಿತೆ – ಮನುಷ್ಯನ ವಾಸನೆ…

ಮೂಲ : ತಂಗ್ಜಾಮ್ ಇಬೋಪಿಶಕ್

ಕನ್ನಡಕ್ಕೆ : ಸಿ ಎಚ್ ಭಾಗ್ಯ

ಮನುಷ್ಯ ನ ವಾಸನೆ ಹೇಗಿರುತ್ತದೆ?
ಗಾಳಿಯು,
ನದಿ,ಮರಗಳು,ಹಕ್ಕಿಯ ಪುಕ್ಕ ಅಥವಾ ಹಳೇ ಸುದ್ದಿಪತ್ರಿಕೆಗಳನ್ನು ಕೇಳುತ್ತದೆ.
ಮನುಷ್ಯನ ವಾಸನೆಯು
ಗುಂಪು ನೆರೆದಿರುವಲ್ಲಿ
ಹೂದೋಟದಲ್ಲಿ ಹೂಗಳ ವಾಸನೆಯಂತೆ ಸುತ್ತಿಸುಳಿಯುತ್ತದೆಯೇ?

ಅವನ ಚಹಾಬಟ್ಟಲ ಅಂಚಿನಲ್ಲಿ
ಇರುವೆಗಳ ಸಾಲು ನಿಧಾನವಾಗಿ ಕವಾಯತು ಮಾಡುತ್ತದೆ,
ಬಹು ನಿ..ಧಾ..ನವಾಗಿ
ಸಕ್ಕರೆ ವಾಸನೆ ಹಿಡಿದು.
ಬಹಳ ಮಕ್ಕಳಿರುವ ಮನೆಯಲ್ಲಿ
ಗಂಡಸಿನ ಕ್ರೋಧದ ಉಸಿರು
ಚಂಡಮಾರುತದಂತೆ ಅಬ್ಬರಿಸುತ್ತದೆ.

ಮನುಷ್ಯನ ವಾಸನೆ ಹೇಗಿರುತ್ತದೆ?
ಮೋಡಕವಿದ ಆಗಸದ ಮಾರುತದಲ್ಲಿ
ಅಥವಾ, ಕಪಾಟಿನ ಒಳಗೆ
ಕವಿಯು ಯಾವ ಒಗಟನ್ನು ಅಡಗಿಸಿಟ್ಟಿದ್ದಾನೆ?

ದೂರದ ಧಬಧಬೆಯ ಅಬ್ಬರದೆಡೆಗೆ
ಬೆಳ್ಳಕ್ಕಿಗಳ ಹಿಂಡು ಹಾರಿತು
ಇಲ್ಲೇ,ಹತ್ತಿರದಲ್ಲೇ ಸದ್ದಿಲ್ಲದೆ,
ಚೆರ್ರಿ ಮರಗಳಿಂದ ತರಗೆಲೆಗಳು ಬಿದ್ದವು.
ಸಂಜೆಯ ಮಬ್ಬುಗತ್ತಲು
ಓಣಿಯ ಅಂಗಳದಲ್ಲಿ ಕಪ್ಪು ಬಟ್ಟೆಯನ್ನು ಹರಡತೊಡಗಿತು
ಸೂರಿನ ನೆರಳಿನಲ್ಲಿ.
ಅವಳು ನನಗೆ ಹೇಳಿದಳು:
‘ ನಾನು ಖಂಡಿತಾ ಒಂದು ದಿನ ಬರುತ್ತೇನೆ
ನಿನ್ನ ದುಃಖದ ಕತೆಗೆ ಕಿವಿಗೊಡುತ್ತೇನೆ’.
ಹಲವು ದಿನಗಳು, ವರ್ಷಗಳಾದವು;
ಒಮ್ಮೆಯೂ ಬರಲೇ ಇಲ್ಲ ನನ್ನ
ದೂರಾದ ಪ್ರೇಮಿ.

ಮನುಷ್ಯನ ವಾಸನೆಯು ಯಾವ ರೀತಿಯದು?
ಮಂತ್ರಿಗಳ ಬಂಗಲೆಗಳೊಳಗೆ ಅಥವಾ
ಬಜ಼ಾರಿನಲ್ಲಿ,ಜನರ ಗದ್ದಲದ ಅಲೆ ಅಪ್ಪಳಿಸುತ್ತದೆ,ವ್ಯಾಪಾರ,ವಹಿವಾಟು,
ಲಾಭ ,ನಷ್ಟದ ಲೆಕ್ಕದಲ್ಲಿ.
ದೂರದ ಪರ್ವತದ ತಪ್ಪಲಿನಲ್ಲಿ
ಧರ್ಮಛತ್ರದ ಬಳಿ
ಹೂಗಳು ಅರಳಿರುವುದೊಂದಿಗೇ ಅದರ
ವಸ್ತ್ರಗಳು ಕಳಚಿವೆ.
ತಮ್ಮ ಪಾವಿತ್ರ್ಯ ಕಳೆದುಕೊಳ್ಳಲು ಸಿದ್ಧರಿರುವ ಎಷ್ಟು ಕನ್ಯೆಯರು ಅಲ್ಲಿರಬಹುದು?
ಮನುಷ್ಯನ ವಾಸನೆಯು ಎಲ್ಲಿರುತ್ತದೆ?
ಅದು ಪದಗಳಲ್ಲಿರುವುದೆ? ಭಾಷೆಯಲ್ಲಿ,
ಅಥವಾ ನೋಟದಲ್ಲಿ? ಮುಖದಲ್ಲಿ?

ರಾತ್ರಿಯಾಗುತ್ತಿದ್ದಂತೆ ಎಲ್ಲರೂ ಮನೆಯೆಡೆಗೆ ಧಾವಿಸುತ್ತಾರೆ.
ಛಾವಣಿಯಲ್ಲಿ ಕಟ್ಟಿರುವ ಜೇಡನ ಬಲೆಯಲ್ಲಿ ಸಿಕ್ಕಿಕೊಂಡಿರುವ ಈ ಕೂದಲಮುಡಿ ಯಾರದು?
ಇಲ್ಲಿ ಯಾವ ವಿಧಿಯನ್ನುನಡೆಸಲಾಗಿದೆ?
ಸೂರ್ಯ ಮೇಲೇರುತ್ತಿದ್ದಂತೆ,
ಹುಲ್ಲಿನ ಮೇಲಿರುವ ಇಬ್ಬನಿ ಮಾಯವಾಗುತ್ತದೆ.
ಇಲ್ಲಿ ನೋಡಿ,ಬಲಗೈಯೇ ಇರದ
ಈ ಮನುಷ್ಯನನ್ನು
ಎಡಗೈಯಿಂದ ಹೆಕ್ಕಿಕೊಂಡು ತೋಳದ ಹಾಗೆ ತಿನ್ನುತ್ತಿದ್ದಾನೆ.
ಎಷ್ಟು ದಿನಗಳಿಂದ ಅವನು ಹಸಿದು ಕಂಗೆಟ್ಟಿರಬಹುದು?

ಮನುಷ್ಯನ ವಾಸನೆಯು ಎಲ್ಲಿಂದ ಬರುತ್ತಿದೆ?
ಮಹಿಳೆಯೊಬ್ಬಳು
ಮೀನಿನ ಅಂಗಡಿಯಂತೆ ತನ್ನ ಮುಂದೆ
ಗೋಣಿಚೀಲವನ್ನು ಹರಡಿಕೊಂಡು
ಪುಟ್ಟಮಕ್ಕಳ ದೇಹಗಳನ್ನು ಮಾರುತ್ತಿದ್ದಾಳೆ
ಗುಂಡೇಟಿನ ಗಾಯದಿಂದ ಸತ್ತಿರುವ ಮಕ್ಕಳ ದೇಹಗಳು,
ಅದರ ಮೇಲೆ ನೀರು ಚುಮುಕಿಸಿ ಉಜ್ಜುತ್ತಿದ್ದಾಳೆ.
ಅವಳು ಬಹಳ ನಿರ್ಲಕ್ಷ್ಯದಿಂದ ನಗುತ್ತಾ
ಹೇಳುತ್ತಿದ್ದಾಳೆ!
‘ ಇವು ಯಾರ ಮಕ್ಕಳೂ ಅಲ್ಲ,
ನನ್ನದೇ ಮಕ್ಕಳು’.
ಹೇಳು ಗೆಳೆಯಾ
ಮನುಷ್ಯನ ವಾಸನೆ ಎಲ್ಲಿರುತ್ತದೆ?

ಖಂಡವನ್ನು ತುಂಡುಮಾಡಿ ಮಾರುವವ
ಬಹಳ ಗರ್ವದಿಂದ ಹೇಳುತ್ತಾನೆ:
‘ ನನಗೆ ರಕ್ತವನ್ನು ನೋಡಿದರೆ ಕಣ್ಣುಮಂಜಾಗುತ್ತಿತ್ತು’.

‍ಲೇಖಕರು Admin

July 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. prathibha nandakumar

    ಭಾಗ್ಯ ..ಕವನ ಮತ್ತು ಅನುವಾದ ಎರಡೂ ಸಿಕ್ಕಾಪಟ್ಟೆ ಚೆನ್ನಾಗಿದೆ

    ಪ್ರತಿಕ್ರಿಯೆ
  2. prathibha nandakumar

    ಭಾಗ್ಯ ಅವರೇ, ನೀವು ತಂಗ್ಜಾಮ್ ಐಬೋಪಿಶಾಕ್ ಅವರ ಕವನ ಅನುವಾದಿಸಿದ್ದು ನೋಡಿ ಸಂತೋಷವಾಯಿತು. ಮಣಿಪುರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಅವರ ಕವನಗಳನ್ನು ಅನುವಾದ ಮಾಡಿರುವ ಇಂಗ್ಲಿಷ್ ಕವಿ ರಾಬಿನ್ ಎಸ್ ನಾಂಗ್ನೊಮ್ ಕೂಡಾ ನನಗೆ ಇಷ್ಟದ ಆತ್ಮೀಯ ಕವಿ ಗೆಳೆಯ. ತಂಗ್ಜಾಮ್ ನ ಇನ್ನೊಂದು ಕವನ ನಾನು ಅನುವಾದಿಸಿದ್ದೇನೆ ನೋಡಿ. – ಪ್ರತಿಭಾ ನಂದಕುಮಾರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: