ಬೆಂಗಳೂರಿನಲ್ಲಿ ಪಾದಚಾರಿಣಿಯಾದ ಬಗೆ…

ಪ್ರನುಷಾ ಕುಲಕರ್ಣಿ

ನಾನು ಬೆಂಗಳೂರಿಗೆ ಬಂದು ಕೆಲವು ತಿಂಗಳುಗಳಾಗಿವೆ. ಬಂದು ಕೆಲವೇ ದಿನಗಳಲ್ಲಿ ಬಹುತೇಕ ಪ್ರತಿದಿನ ಸಂಜೆ ಹೊತ್ತಲ್ಲಿ ಇಲ್ಲಿ ಮಳೆಯಾಗುತ್ತಿದೆ. ಇದು ಕಾರಿನಲ್ಲಿ ಓಡಾಡುವರಿಗೆ ಮತ್ತು ಚಿಕ್ಕ ಮಕ್ಕಳಿಗೆ ಸಂತಸದ ವಿಷಯವೇನೋ. ಕಾರಿನಲ್ಲಿ ಓಡಾಡುವರಿಗೂ ಟ್ರಾಫಿಕ್ ನ ಚಿಂತೆ ಇದೆ ಬಿಡಿ. ಆದರೆ, ಪಾದಚಾರಿಗಳಿಗೆ, ಬಸ್ಸುಗಳಲ್ಲಿ ಓಡಾಡುವರಿಗೆ ಆಗೋ ಸಮಸ್ಯೆಗಳು ಬೇರೆ ಮಟ್ಟಕ್ಕಿವೆ. 

ಹೆಣಗಳು:

ಯಾರ ಹೆಣಗಳು? ಪುಣ್ಯಕ್ಕೆ ಮನುಷ್ಯರದ್ದಲ್ಲ. ಕೇವಲ ೧ ಚದರ ಕಿ.ಮೀ.  ವ್ಯಾಪ್ತಿಯಲ್ಲಿ ನಾನು ಕನಿಷ್ಠ ನಾಲ್ಕು ಪ್ರಾಣಿ-ಪಕ್ಷಿಗಳ ಹೆಣಗಳನ್ನು ನೋಡಿದ್ದೇನೆ. ಮನೆಯ ಸುತ್ತಮುತ್ತಲೂ ಗಾಳಿ ಸಂಚಾರ ಮಾಡ ಬಯಸುವ ನನಗೆ ಕಾಲುದಾರಿ ಅಂದರೆ ಪಂಚ ಪ್ರಾಣ. ಆದರೆ, ಭಾರತದ ಬಹುತೇಕ ಕಾಲುದಾರಿಗಳಲ್ಲಿ ಕಾರುಗಳು, ಬೈಕುಗಳು, ಸೈಕಲ್ಗಳು, ನಿಂತಿರುತ್ತವೆ. ಕೆಲವು ಸಾಹಸ ವೀರರು ದ್ವಿಚಕ್ರ ವಾಹನಗಳನ್ನು ಕ್ಯಾರೇ ಅನ್ನದೆ ಕಾಲುದಾರಿಗಳ ಮೇಲೆ ಸಲೀಸಾಗಿ ಚಲಿಸುತ್ತಾರೆ. ಪಾದಚಾರಿಗಳು ಲೆಕ್ಕಕ್ಕೆ ಬಾರದ ಮನುಷ್ಯರು ಎನ್ನುವ ಹಾಗೆ. 

ಹೆಣಗಳ ವಿಷಯಕ್ಕೆ ಮರಳಿ ಬರೋಣ. ಒಂದು ಪಕ್ಷಿ, ಎರಡು ಬೆಕ್ಕುಗಳು, ಮತ್ತು ಒಂದು ಗುರುತಿಸಲಾರದಂತೆ ಹತ್ತಿಕ್ಕಿಹೋದ ಪ್ರಾಣಿ – ಸತ್ತು ಬಿದ್ದಿದ್ದವು ಕಾಲುದಾರಿಯ ಮೇಲೆ. ಒಂದರ ದೇಹದಿಂದಂತೂ ಅದರ ಸುರುಳಿಯಾಕಾರದ ಕರಳು ಹೊರಗೆ ಬಂದು ಬಿದ್ದಿತ್ತು! ಈ ಎಲ್ಲ ಸತ್ತ ದೇಹಗಳಿಂದ ದುರ್ಗಂಧ ಬರುತ್ತಿತ್ತು. ಆದರೆ ಯಾರೂ ಇವುಗಳ ಬಗ್ಗೆ ಕಳವಳ ತೋರಿಸಲಿಲ್ಲ. ನಾನೂ ಕೂಡ ನಾನು ಹೋಗುತ್ತಿದ್ದ ಕೆಲಸದಡಿ ಗಮನ ಹಾಯಿಸಿದೆ. ಆ ಕೆಟ್ಟ ವಾಸನೆಯನ್ನು ಮುಸುಕಿಹಾಕಲು. 

ನಾವು ಮನುಷ್ಯರು ವಿವೇಕಿಗಳು ಎಂದು ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಹಾಗು ನ್ಯಾಯಶಾಸ್ತ್ರದಲ್ಲಿ ನಂಬಿಕೆ ಇದೆ. ರಸ್ತೆಯ ಮೇಲೆ ಬಿದ್ದ ಈ ಹೆಣಗಳನ್ನು ನೋಡಿ ಪ್ರಶ್ನೆ ಏಳುವುದು – ನಾವು ನಿಜವಾಗಿಯೂ ವಿವೇಕಿಗಳೇ?

 ಹಾವು ಬಂತು ಹಾವು 

 ಮನೆಯ ಹತ್ತಿರದ ಕಾಲುದಾರಿ ನನಗೆ ವಿಚಿತ್ರವೆನಿಸುತ್ತದೆ. ಆಯಾತಾಕಾರದ ಸಿಮೆಂಟಿನ ಫಲಕಗಳನ್ನು ಒಂದಾದಮೇಲೊಂದು ಇಟ್ಟು, ಅವುಗಳನ್ನು ಜೋಡಿಸಿ, ಕಾಲುದಾರಿಯನ್ನು ಮಾಡಿದ್ದಾರೆ. ಈ ಫಲಕಗಳ ಕೆಳಗಿರುವುದು ಒಳಚರಂಡಿ. ರಸ್ತೆಯ ಮೇಲಿನ ನೀರು ಈ ಒಳಚರಂಡಿಗೆ ಹಾದುಹೋಗಲು ಅಲ್ಲಲ್ಲಿ ರಂಧ್ರಗಳನ್ನು ಮಾಡಲಾಗಿವೆ. ಇದೆಲ್ಲ ಸೈದ್ಧಾಂತಿಕವಾಗಿ ಪಾದಚಾರಿಗಳ, ನಾಗರಿಕರ ಸುಖ ಜೀವನಕ್ಕೆ ಎಂದು. ಆದರೆ ಈ ವ್ಯವಸ್ಥೆಯ ಸತ್ಯ ಹೀಗಿದೆ ನೋಡಿ.

ಒಳಚರಂಡಿಗಳಲ್ಲಿ ಕೊಳಚೆ ನೀರು ಹರಿಯಲ್ಲ.  ಆ ಸಿಮೆಂಟಿನ ಫಲಕಗಳು  ಸ್ಥಿರವಾಗಿಲ್ಲ. ಅವುಗಳ ಮೇಲೆ ನಡೆಯಬೇಕಾದರೆ ಅಲುಗಾಡುತ್ತವೆ. ಮಳೆ ಬಂದರಂತೂ ಎಲ್ಲಿ ಈ ಫಲಕಗಳು ಮುರಿದು ನಾವು ಬಡಪಾಯಿ ಪಾದಚಾರಿಗಳು ಒಳಚರಂಡಿಯ ಪಾಲು ಆಗುತ್ತೇವೋ ಎಂಬ ಭಯ. ಇಷ್ಟೇ ಅಲ್ಲ, ಹಲವೆಡೆ ಫಲಕಗಳು ಮುರಿದು ಬಿದ್ದಿವೆ, ಫಲಕಗಳ ನಡುವೆ ಅಂತರಗಳಿವೆ. ಕತ್ತಲಲ್ಲಿ ನೋಡದೆ ಇವುಗಳ ಮೇಲೆ ಕಾಲಿಟ್ಟರೆ ದೇವರೇ ಗತಿ. ಈ ಎಲ್ಲ ಆತಂಕಗಳನ್ನು ಹೊತ್ತು ನಾನು ಹೀಗೆ ಒಂದು ಸಂಜೆ ಕಾಲುದಾರಿಯ ಮೇಲೆ ನಡೆಯುತ್ತಿದ್ದೆ.

ಹಾಗೆ ಹೋಗುವಾಗ, ನಡುವೆ ಇದ್ದ ಅಂತರದಲ್ಲಿ ಒಂದು ಹಗ್ಗದಾಕಾರದ ಜೀವಿ ಚಲಿಸಿದಂತಾಯಿತು. ಅದರ ಚರ್ಮ ಹೊಳೆಯುತ್ತಿತ್ತು. ಒಂದು ಕ್ಷಣ ನನಗೆ ಅದು ಏನು ಅಂತ ಗೊತ್ತಾಗದಿದ್ದ ಕಾರಣ, ನಾನು ಅಲ್ಲಿ ನಿಂತು ಅದನ್ನು ನೋಡತೊಡಗಿದೆ. ತಕ್ಷಣ ಅದು ಅದರ ಹೆಡೆಯೆತ್ತಿ ನನ್ನ ಕಡೆ ನೋಡಿತು. 

ಹಾವು! ನಾನು ಭಯದಿಂದ ಥಟ್ಟನೆ ರಸ್ತೆಯ ಮೇಲೆ ಜಿಗಿದೆ! ನನ್ನ ಪುಣ್ಯ ಯಾವ ಗಾಡಿಯೂ ಕಾಲುದಾರಿಯ ಬಳಿ ಆವಾಗ ಇರಲಿಲ್ಲ! ನನ್ನ ಹೃದಯ ಈ ಸಮಯದಲ್ಲಿ ಮಿತಿ ಮೀರಿದ ವೇಗದಲ್ಲಿ ಬಡಿಯುತ್ತಿತ್ತು. ನಾನು ಈಗ ತಾನೇ, ಹಾಡ ಹಗಲಿನಲ್ಲಿ, ಕಾಲುದಾರಿಯಲ್ಲಿ ಕಂಡದ್ದು ಒಂದು ದೊಡ್ಡ ಹಾವು ಎಂದು ನನಗೆ ಅರಿವಾದಾಗ ನೂರಾರು ಪ್ರಶ್ನೆಗಳು ನನ್ನ ಮನಕ್ಕಿಳಿದವು. 

ಆ ಕಾಲುದಾರಿಯನ್ನು ದಿನವಿಡೀ ನೂರಾರು ಜನ ಉಪಯೋಗಿಸುತ್ತಾರೆ. ಅವರಲ್ಲಿ ಎಷ್ಟು ಜನ ಅದರ ಕೆಳಗೆ ಕಾಯುತ್ತಿರುವ ಅಪಾಯವನ್ನು ಮನಗಂಡಿದ್ದಾರೆ? ಎಷ್ಟು ಜನ ಈ ಹಾವನ್ನು ನೋಡಿದ್ದಾರೆ? ಒಟ್ಟಾರೆ ಎಷ್ಟು ಹಾವುಗಳು ಈ ಕಾಲುದಾರಿಯಡಿಯಲ್ಲಿ ಮನೆ ಮಾಡಿವೆ? ರಾತ್ರಿ ವೇಳೆ ಯಾರಿಗಾದರೂ ಅವು ಕಚ್ಚಿದರೆ? ಜನರ ಜೀವಕ್ಕೆ ಯಾರು ಹೊಣೆ? ಸರ್ಕಾರ ಜನರ ವೈದ್ಯಕೀಯ ವೆಚ್ಚಕ್ಕೆ ಸರಿಯಾದ ಪರಿಹಾರ ಕೊಡುವುದೇ? ಅಥವಾ ಇದು ಜನರ ನಿರ್ಲಕ್ಷ್ಯದಿಂದ ಆಗಿದೆ ಎಂದು ಹಾರಿ ಹೊಡಿಯುವುದೇ?

ನನ್ನ ಬೆವರನ್ನು ಒರೆಸಿಕೊಂಡು ನಾನು ರಸ್ತೆಯ ಆ ಬದಿಯಲ್ಲಿ ನಡೆಯ ತೊಡಗಿದೆ. ಇನ್ನು ಮೇಲೆ ಯಾವತ್ತೂ ಆ ಕಾಲುದಾರಿಯ ಮೇಲೆ ನಡೆಯಲ್ಲ ಎಂದು ಪಣವಿತ್ತೇ. ಅಷ್ಟರಲ್ಲಿ ಕಂಡದ್ದು, ಕಾರುಗಳು, ಬೈಕುಗಳು, “ಯುಲು”ಗಳು.

ಉಚಿತ ಪಾರ್ಕಿಂಗ್ ಜಾಗಗಳು ನಮ್ಮ ಕಾಲುದಾರಿ:

ನಮ್ಮ ದೇಶದ ಹಲವಾರು ಕಾಲುದಾರಿಗಳು ದೊಡ್ಡ-ದೊಡ್ಡ ಕಾರುಗಳಿಗೆ ಉಚಿತ ಪಾರ್ಕಿಂಗ್ ಜಾಗಗಳಾಗಿ ಬದಲಾಗಿವೆ. ಪಾದಚಾರಿಗಳು ಹಾವು, ಹೆಣ ಎನ್ನದೆ, ವಾಹನಗಳ ಸಮಸ್ಯೆಯನ್ನೂ ಎದುರಿಸಬೇಕು. ಒಂದು ಕಡೆ ಹಾವು, ಇನ್ನೊಂದು ಬದಿ ಕಾರು, ಮಧ್ಯೆ ಭರ್ರನೆ ವೇಗವಾಗಿ ಚಲಿಸವ ಲಾರಿಗಳು, ಬಸ್ಸುಗಳು, ಆಟೋಗಳು, ಮತ್ತು ಇನ್ನು ಹೆಚ್ಚು ಕಾರುಗಳು! 

ಪಾದಚಾರಿಗಳಿಗೆ ಇನ್ನು ಹಕ್ಕಿಗಳಂತೆ ಹಾರಿ ಹೋಗುವುದೊಂದೇ ದಾರಿ! ನಮ್ಮ ರಸ್ತೆಗಳು ಬರೀ ವಾಹನಗಳಿಗೆ ಮಾತ್ರ ರಚಿಸಲಾಗಿವೆ. ಕಾಲುಗಳಿಂದ ನಡೆಯೋರಿಗೆ ಅಲ್ಲಿ ಜಾಗ ಇಲ್ಲ. ಅಲ್ಲೊಂದು ಇಲ್ಲೊಂದು ಕೆರೇನೋ, ಉದ್ಯಾನವನವೋ, ಕಾಣುತ್ತವೆ. ಆದರೆ ಅವುಗಳ ತನಕ ಹೋಗೋದು ಮಾತ್ರ ವಾಹನಗಳಲ್ಲಿ  ಎಂಬ ಭಾವನೆ ಬರುತ್ತದೆ!

“ಲಿಫ್ಟ್ ನಾಟ್ ವರ್ಕಿಂಗ್”:

ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ಬೆಂಗಳೂರಿನಲ್ಲಿ ಹಲವೆಡೆ ಸ್ಕೈ ವಾಕ್ ಗಳನ್ನ ಮಾಡಿದ್ದಾರೆ. ಹದಿ-ಹರೆಯದವರು, ಆರೋಗ್ಯಕರ ನಾಗರಿಕರು, ಇವುಗಳಲ್ಲಿರುವ ಮೆಟ್ಟಿಲುಗಳನ್ನು ಹತ್ತಿ ರಸ್ತೆ ದಾಟಬಹುದು. ಅಂಗವಿಕಲರು, ಹಿರಿಯ ನಾಗರಿಕರು, ಗರ್ಭಿಣಿ ಹೆಂಗಸರಿಗೆ ಸಹಾಯವಾಗಲು ಈ ಸ್ಕೈ ವಾಕ್ ಗಳಲ್ಲಿ ಲಿಫ್ಟ್ ಗಳ ಸೌಕರ್ಯವಿದೆ. ಆದರೆ ಬಹಳಷ್ಟು ಸಲ ಈ ಲಿಫ್ಟ್ ಕೆಟ್ಟು ಹೋದ ಪರಿಸ್ಥಿತಿ ನಾನು ನೋಡಿದ್ದೇನೆ. ಈ ಸಂದರ್ಭಗಳಲ್ಲಿ, ಅಶಕ್ತ ನಾಗರಿಕರು ಆಟೋ ಮಾಡಿಕೊಂಡು ರಸ್ತೆ ದಾಟುವುದು ಒಂದೇ ಗತಿ! ಅಂದರೆ, ದುಡ್ಡಿದ್ದವರಿಗೆ ಮಾತ್ರ ನಮ್ಮ ರಸ್ತೆಗಳು ಎಂದು ಒಪ್ಪಿಕೊಳ್ಳಬೇಕಾಗುತ್ತದೆ. 

ನಮ್ಮಂಥ ಪಾದಚಾರಿಗಳು, ಹಾವು ಕಚ್ಚಿ ಅಥವಾ ಗಾಡಿ ತಲುಕಿ ಗಾಯಗೊಳ್ಳುವುದು ಸಹಜ ಶಕ್ಯ. 

ಬೀದಿ ಬದಿ ವ್ಯಾಪಾರಿಗಳು:

ಹಲವು ಕಾಲುದಾರಿಗಳ ಮೇಲೆ ತಳ್ಳುವ ಗಾಡಿಗಳ ಮೇಲೆ ರುಚಿಕರ ಪಾನಿ ಪುರಿ, ಮೊಮೊ, ಮತ್ತು ಇನ್ನು ಹಲವು ಲಘು ತಿಂಡಿಗಳನ್ನು ಮಾರುವ ದೃಶ್ಯ ಸಾಮಾನ್ಯ. ದಾರಿಹೋಕರು ತಮ್ಮ ಜೀವ ಕೈಯಲ್ಲಿಟ್ಟುಕೊಂಡು ಕಾಲುದಾರಿಗಳಲ್ಲಿ ನಡೆದಾಡುತ್ತಿದ್ದರೆ, ಅವರನ್ನು ಕೈ ಮಾಡಿ ಈ ಅನಾರೋಗ್ಯಕರ ತಿಂಡಿಗಳು ಕರೆಯುತ್ತವೆ. ಇವುಗಳ ಸುತ್ತ ಗುಂಪು ಕಟ್ಟಿಕೊಂಡು ನಿಂತ ಜನರು, ಹಾಗು ಆ ಕುರುಕಲು ತಿಂಡಿಗಳ ಸುವಾಸನೆಯ ಸೆಳೆತ ಮೀರಿ, ಗಟ್ಟಿ ಮನಸ್ಸು ಮಾಡಿ, ಅಲ್ಲಿಂದ ನುಸುಳಿ-ನುಗ್ಗಿ ನಮ್ಮ ಕೆಲಸದತ್ತ ಗಮನಿಸುವುದು ಸಾಧಾರಣ ಮಾತಲ್ಲ. ಇನ್ನು ಆ ತಿಂಡಿಗಳ ಕೂಗಿಗೆ ಮನಸೋತು, ನಡೆದಾಗಲೆಲ್ಲ ಅವುಗಳನ್ನು ತಿನ್ನುತ್ತಾ ಹೋದರೆ, ನಮ್ಮ ಆರೋಗ್ಯ ನಾಯಿ ಪಾಡು! ಅಂದರೆ, ವಾಹನಗಳಲ್ಲಿ ಓಡಾಡಿದರೂ ಬೊಜ್ಜಿನ ಅಪಾಯ, ಮತ್ತು ರಸ್ತೆಗಳಲ್ಲಿ ಓಡಾಡಿದರೂ, ನಮ್ಮ ಇಂದ್ರಿಯಗಳ ಮೇಲೆ ನಿಯಂತ್ರಣವಿಲ್ಲದಿದ್ದರೆ, ಅದೇ ಅಪಾಯ ಕಾಯ್ದಿದೆ!  

ಬೂಟಾಟಿಕೆ:

ಒಂದು ಕಡೆ ನಾವು ಜಾಗತಿಕ ತಾಪಮಾನ ಏರುವಿಕೆಯನ್ನು ನಿಲ್ಲಿಸಲು “ಸಸ್ಟೈನಬಲ್ ಜೀವನ” ಎಂಬ ಮಂತ್ರವನ್ನು ಜಪಿಸುತ್ತಿದ್ದೇವೆ. ಇದರಡಿ, ಸೈಕಲ್ಗಳ ಬಳಕೆ, ನಡೆಯುವುದು, ಪ್ಲಾಸ್ಟಿಕ್-ರಹಿತ ಜೀವನ, ಪೌಷ್ಟಿಕ ಸಾವಯವ ಆಹಾರದ ಸೇವನೆ, ಇತ್ಯಾದಿ ಆಚಾರಗಳನ್ನು ರೂಢಿ ಮಾಡಿಕೊಳ್ಳಬೇಕು ಎಂದು ಜಗವಿಡೀ ಸಾರುತ್ತಿದ್ದೇವೆ. ಆದರೆ ತಳಮಟ್ಟದ ಕಟು ಸತ್ಯ ಬೇರೇನೇ ಇದೆ. ನಮ್ಮ ಶಹರಗಳಲ್ಲಿ ಸಮರ್ಥನೀಯ ಮೂಲಸೌಕರ್ಯಗಳು ಇಲ್ಲವೇ ಇಲ್ಲ. ಇನ್ನೂ ಪಳೆಯುಳಿಕೆಯ ಇಂಧನ ಬಳಸುವ ಗಾಡಿಗಳಿಗೆ ನಮ್ಮ ರಸ್ತೆಗಳು ಪ್ರಾಮುಖ್ಯತೆ ನೀಡುತ್ತವೆ. ಸೈಕಲ್ ಓಡಿಸಲು ಮಾಡಲಾದ ಪ್ರತ್ಯೇಕ ಲೇನ್ ಮೇಲೆ ದ್ವಿಚಕ್ರ ವಾಹನಗಳು ಅಡ್ಡಾದಿಡ್ಡಿ ಓಡಾಡುತ್ತವೆ. ಟ್ರಾಫಿಕ್ ಪೊಲೀಸರು ಇದನ್ನು ನೋಡಿಯೂ ನೋಡದೆ ನಿಲ್ಲುತ್ತಾರೆ. ಎಲ್ಲೆಡೆ ಲಘು ತಿನಿಸುಗಳ ವ್ಯಾಪಾರ ಭರದಿಂದ ಸಾಗುತ್ತಿದೆ.

ನಾವು ನಿಜವಾಗಿಯೂ ವಿವೇಕಿಗಳೇ?

‍ಲೇಖಕರು Admin

July 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: