'ಸಿರಿ' ಮತ್ತು 'ಅಲ್ಲಮ' ಹೆಸರಿನಲ್ಲಿ..

‘ಸಿರಿ’ ಮತ್ತು ‘ಅಲ್ಲಮ’ ಹೆಸರಿನಲ್ಲಿ ಶ್ರೀದೇವಿ ಕೆರೆಮನೆ ಹಾಗೂ ಗಿರೀಶ್ ಜಕಾಪುರೆ ಅವರು ಕಾವ್ಯ ಸಂವಾದ ನಡೆಸುತ್ತಿರುವುದು ಎಲ್ಲರಿಗೂ ಗೊತ್ತು.
ಆ ಸಂವಾದ ಪಿಸುಮಾತುಗಳನ್ನೊಳಗೊಂಡ ಕೃತಿ ನಿನ್ನ ದನಿಗೆ ನನ್ನ ದನಿಯು ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ.
ಅದರ ಸ್ಯಾಂಪಲ್ ಇಲ್ಲಿದೆ-
ಶ್ರೀದೇವಿ ಕೆರೆಮನೆ 
ಗಿರೀಶ್ ಜಕಾಪುರೆ 
ಅಲ್ಲಮ
ಅಳು ಬರದಿದ್ದರೂ ಅತ್ತಂತೆ ಮಾಡುವುದು ಚಟವಾಗಿದೆ ನಿನಗೆ
ದಾಹ ಇರದಿದ್ದರೂ ಶರಾಬು ಬೇಡುವುದು ಚಟವಾಗಿದೆ ನಿನಗೆ
ನಿನಗೆ ಚೂರು ನೋವಾದರೂ ನಾನು ಓಡಿ ಬರುವೆನೆಂದು ಅರಿತು
ಬೇಕೆಂದೇ ಕಾಲು ಉಳುಕಿಸಿ ಬೀಳುವುದು ಚಟವಾಗಿದೆ ನಿನಗೆ
ಹಗಲು ಇರುಳೂ ಮದ್ಯಾಹ್ನವೂ ಕಾಣುವೆ ನೀನು ಕೇರಿಯ ತಿರುವಲಿ
ಸಮಯಾಸಮಯ ನನ್ನ ಓಣಿಯಲಿ ಅಲೆವುದು ಚಟವಾಗಿದೆ ನಿನಗೆ
ಅಲೆ ಹುಟ್ಟುವಾಗ ಹುಟ್ಟುವ ಕೋಲಾಹಲ ನಿನಗೇನು ಗೊತ್ತು ಸಖಿ
ಶಾಂತ ಪ್ರಶಾಂತ ನೀರಿಗೆ ಹರಳು ಎಸೆವುದು ಚಟವಾಗಿದೆ ನಿನಗೆ
ನೀನು ಏನೇ ಹೇಳಿದರೂ ಕಣ್ಮುಚ್ಚಿ ನಂಬುವೆನೆ ಎಂದರಿತು
ಸುಳ್ಳ ಮೇಲೆ ಪುನಃ ಸುಳ್ಳನೇ ಹೇಳುವುದು ಚಟವಾಗಿದೆ ನಿನಗೆ
ಆತಂಕವನು ಧರ್ಮಕೆ ತಳಕು ಹಾಕುವುದು ಸರಿಯಲ್ಲ ‘ಅಲ್ಲಮ’
ಹಿಂಸೆಗೆ ಹಸಿರು ಕೇಸರಿ ಬಣ್ಣ ನೀಡುವುದು ಚಟವಾಗಿದೆ ನಿನಗೆ
ಸಿರಿ

ಎದೆ ಬಡಿತವನೇರಿಸುವುದು ಚಟವಾಗಿಬಿಟ್ಟಿದೆ ನಿನಗೆ
ಗಲ್ಲಕೆ ಮುತ್ತಿಟ್ಟು ನಗುವುದು ಚಟವಾಗಿಬಿಟ್ಟಿದೆ ನಿನಗೆ
ಚಹ ಕೆರಳಿಸುವುದೆಂದು ಕುಡಿವುದು ಬಿಟ್ಟರೇನು ಉಪಯೋಗ
ನಶೆಯ ಕಣ್ಣಿಂದ ಕೆಣಕುವುದು ಚಟವಾಗಿ ಬಿಟ್ಟಿದೆ ನಿನಗೆ
ಆಗಲಾರದು ಮಾತೊಂದೆ ನನ್ನ ನಿನ್ನ ನಡುವಿನ ಸೇತುವೆ
ಮೌನದಲಿ ಸಂವಾದಿಸುವುದು ಚಟವಾಗಿ ಬಿಟ್ಟಿದೆ ನಿನಗೆ
ಸಂಜೆಯಾಗುತ್ತಲೆ ಮದಿರಾಲಯ ಕೈ ಬೀಸಿ ಕರೆಯುವುದು
ದಿ£ರಾತ್ರಿ ನಶೆ ಏರಿಸುವುದು ಚಟವಾಗಿ ಬಿಟ್ಟಿದೆ ನಿನಗೆ
ಕಡಲಲಿ ನೂರು ಅಲೆಗಳೆದ್ದರು ಕಾಲಿಗೆ ಮುತ್ತಿಡುವುದಿಲ್ಲ
ಅಲೆಗಳ ಸುಳಿಯಲಿ ಮುಳುಗುವುದು ಚಟವಾಗಿ ಬಿಟ್ಟಿದೆ ನಿನಗೆ
ಸಿರಿ ಕನಸುಗಳನು ಬೀದಿ ಬದಿಯಲ್ಲಿ ಮಾರಲಾಗುವುದಿಲ್ಲ
ಕನಸಿಗೂ ಕನ್ನ ಹಾಕುವುದು ಚಟವಾಗಿಬಿಟ್ಟಿದೆ ನಿನಗೆ
ಅಲ್ಲಮ

ಮಧುರ ಮದಿರಿಗೆ ಅಧರ ಮಧು ಬೆರೆಸಿದಂತೆ ನನ್ನ ದನಿಗೆ ನಿನ್ನ ದನಿಯು
ನೆಲದ ಕುಸುಮಕೆ ಮುಗಿಲ ಘಮ ಸುರಿಸಿದಂತೆ ನನ್ನ ದನಿಗೆ ನಿನ್ನ ದನಿಯು
ಜಗದ ರೀತಿ ರಿವಾಜು ಮುರಿದು ಒಲವಿಗಾಗಿ ಎಲ್ಲೆ ಮೀರಿಗೆ, ಅಪ್ಪಿದೆ
ಕಡಲು ತಾನೇ ಹರಿದು ನದಿ ಸೇರಿದಂತೆ ನನ್ನ ದನಿಗೆ ನಿನ್ನ ದನಿಯು
ತಿಳಿಯದಾಗಿದೆ ಈಗ ಯಾವ ಬಿಂಬ ನನ್ನದು ಯಾವ ಬಿಂಬ ನಿನ್ನದು
ನನ್ನ ದೇಹ ನಿನ್ನ ರೂಪ ಧರಿಸಿದಂತೆ ನನ್ನ ದನಿಗೆ ನಿನ್ನ ದನಿಯು
ಜೀವದಲ್ಲಿ ಬೆರೆತೆ ನೀನು ಒಲವಾಗಿ, ಉಸಿರಾಗಿ, ಉಸಿರ ಸಿರಿಯಾಗಿ
ದೇಹ ಆತ್ಮದ ಜೊತೆಜೊತೆಗೆ ಸಂಚರಿಸಿದAತೆ ನನ್ನ ದನಿಗೆ ನಿನ್ನ ದನಿಯು
ನೀನು ಮುಟ್ಟಿದ ಶಿಲೆಗಳಿಂದ ಹೊಮ್ಮುತಿದೆ ಸುರಸಂಗೀತ ಝರಿಯಾಗಿ
ಬರೀ ಸ್ಪರ್ಶದಿಂದ ಗಾಯ ಭರಿಸಿದಂತೆ ನನ್ನ ದನಿಗೆ ನಿನ್ನ ದನಿಯು
ಯಾವ ಪ್ರಹರದಲೂ ಮರೆತಿಲ್ಲ ಮಾಯೆ ‘ಅಲ್ಲಮ’ ಒಬ್ಬರನೊಬ್ಬರು
ಬೇಟವು ಬೇಟೆಗಾರನ ಸ್ಮರಿಸಿದಂತೆ ನನ್ನ ದನಿಗೆ ನಿನ್ನ ದನಿಯು
ಸಿರಿ

ಜಗದ ಜೀವನಾಡಿಯಲ್ಲಿ ಅಮೃತದ ಕಳಶ ಜೊತೆಯಾದಂತೆ ನನ್ನಗೆ ನಿನ್ನ ದನಿಯು
ಜೀವ ಕರುಣೆಯ ಪೊರೆವ ಜಗನ್ಮಾತೆಯ ಸುದೀರ್ಘ ಉಸಿರಂತೆ ನನ್ನ ದನಿಗೆ ನಿನ್ನ ದನಿಯು
ಸೆರಗಿನ ಮರೆಯಿಂದ ಇಣುಕಿದ ಕೂಸಿನ ಹವಳದ ತುಟಿಯ ಕಟವಾಯಿಯಲ್ಲಿದೆ ನೊರೆವಾಲು
ಹಾಲುಗಲ್ಲದ ಮುಗ್ಧ ಮುಖದ ಮಗುವಿನ ಕಿಲಕಿಲ ನಗುವಂತೆ ನನ್ನ ದನಿಗೆ ನಿನ್ನ ದನಿಯು
ಕನಸುಗಳೇ ಇರದ ಬರಡು ಎದೆಯೊಳಗೆ ಮೊಳೆತಿದೆ ನಿನ್ನ ನೆನಪಿನ ಗರಿಕೆ ಹುಲ್ಲಿನ ಚಿಗುರು
ಶರದೃತುವಿಗೆ ಆವರಿಸಿ ಮೈ ನಡುಗಿಸುವ ತಂಗಾಳಿಯAತೆ ನನ್ನ ದನಿಗೆ ನನ್ನ ದನಿಯು
ಮಥುರೆಯೊಂದಿಗೆ ತೊರೆದು ಹೋದ ಕೃಷ್ಣನಿಗಾಗಿ ಜೀವಮಾನವಿಡಿ ಕಾತರಿಸಿದಳು ರಾಧೆ
ನವಿಲುಗರಿಯ ಸಾವಿರ ಎಳೆಗಳ ನವಿರಾದ ಸ್ಪರ್ಶದಂತೆ ನನ್ನ ದನಿಗೆ ನಿನ್ನ ದನಿಯು
ಕಾತರಿಸುತಿದೆ ನಿದ್ದೆಯಿರದ ಕಮಲ ಸೂರ್ಯನಿಗೆ, ನೈದಿಲೆಯ ನೆತ್ತಿಗೀಗ ವಿರಹದ ಉರಿ
ನಸುಕಿನ ಸೂರ್ಯನ ಎಳಸು ಕಿರಣಕೆ ನಾಚುವ ಇಬ್ಬನಿಯಂತೆ ನನ್ನ ದನಿಗೆ ನಿನ್ನ ದನಿಯು
ಸಿರಿ, ಆಗದಿರುವುದಕೆ ಮರುಗುವ ಬದಲು ಪಾಲಿಗೆ ಬಂದಿದ್ದನ್ನು ಸಂತಸದಲಿ ಒಪ್ಪಿಕೊ
ಒಮ್ಮೆಯೂ ಸೇರದ ಎಂದಿಗೂ ಅಗಲದ ರೈಲು ಹಳಿಯಂತೆ ನನ್ನ ದನಿಗೆ ನಿನ್ನ ದನಿಯು
ಅಲ್ಲಮ

ನದಿ ಸಾಗರ ಸೇರುವಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ಭೂಮಿ ಬಾನು ಕೂಡುವಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ಇಡೀ ಮುಗಿಲ ತಾರೆಗಳೆಲ್ಲ ಬಂದಿಳಿಯುತ್ತವೆ ನಿನ್ನ ಮಾಳಿಗೆಯ ಮೇಲೆ
ಬೆಳ್ಳಿ ಚುಕ್ಕಿ ಮೂಡುವಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ಸಾಲುಮರದ ನೆರಳಲಿ ಕೈಹಿಡಿದು ನಡೆವಾಸೆ ಆಸೆಯಾಗೇ ಉಳಿಯಿತು
ಕಲ್ಲು ಹೂವು ಅರಳುವಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ನನ್ನ ಲೋಟದಿಂದ ನೀನು ಒಂದು ಗುಟುಕಾದರೂ ಹೀರಬೇಕು ಈ ಸಲ
ಮಧು ಮಧುವನು ಮುತ್ತುವಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ತುಟಿಸವರಿದಾಗೆಲ್ಲ ನಾಲಿಗೆಗೆ ತಗಲುತ್ತದೆ ನಿನ್ನ ತುಟಿಯ ಜೋನಿಬೆಲ್ಲ
ತುಟಿಗೆ ಜೇನು ಮೆತ್ತುವಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ನೀನು ಬೊಗಸೆಗೆ ಸುರಿದ ಬೀಜ ಅಂಗಳದಲಿ ಸೂರಾಡಿದ್ದೇನೆ ‘ಅಲ್ಲಮ’
ಮೊಳಕೆ ಒಡೆದು ಚಿಗುರುವಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ಸಿರಿ

ಎದೆ ಸುಡುವ ಮನದ ನೋವಿನಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ಬದುಕನು ಮುಗಿಸುವ ಸಾವಿನಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ಮನಸ್ಸು ಸತ್ತರೂ ಅದು ಬದುಕಿನ ಕೊನೆಯಲ್ಲವೆನ್ನುತ್ತಾರೆ ತಿಳಿದವರು ಸಖ
ಜೊತೆಗಿಡುವ ಪ್ರತಿ ಹೆಜ್ಜೆಯಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ಎದೆ ಕೊರೆಯುವಂತೆ ಪ್ರೀತಿಸದೆ ಜಗ ತೊರೆಯುವ ಮಾತು ಮತ್ತೆ ಮತ್ತೆ ಹೇಳದಿರು
ಸಾವಿನಂತ ವಿರಹದುರಿಯಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ನಡೆದ ಹಾದಿಗಿಂತ ನಡೆವ ಹಾದಿಯೇ ಕಂಗಳಿಗೆ ಕಾಣಿಸದಷ್ಟು ದೂರವಿದೆ
ಕೊನೆಯಿರದ ಕೊನೆಯ ಹಾದಿಯಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ಎಂದಿಗೂ ಮುಗಿಯದ ನಿರಂತರ ಗತಿಯ ಸಾವನ್ನು ನಿಲ್ಲಿಸುವ ಗೋಡೆ ಎಲ್ಲಿದೆ
ಕೊನೆಯುಸಿರು ತಡೆವ ನಿಲ್ದಾಣದಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ಸಿರಿ ನೀನು ಜೊತೆ ಜೊತೆಗಿರದಿದ್ದರೆ ಸಾವು ಬದುಕಿಗಿಲ್ಲ ಒಂದಿಷ್ಟೂ ಅಂತರ
ಉಸಿರು ಉಸಿರಾದ ಉಸಿರಿನಲ್ಲಿ ಮತ್ತೆ ನಾನು ನೀನು ಮುಖಾಮುಖಿಯಾಗಬೇಕು
ಅಲ್ಲಮ

ಇಷ್ಟದಂತೆ ಬಳಸಿಕೊ, ನಾನು ನಿನ್ನ ಅಧೀನ
ಉಳಿಸಿಕೊ ಸಖಿ ಬೆಳೆಸಿಕೊ, ನಾನು ನಿನ್ನ ಅಧೀನ
ಇನ್ನೇನು ನೀಡಲಿ ಸಮರ್ಪಣೆಗೆ ಪ್ರಮಾಣ
ಆತ್ಮ ದೇಹ ವಹಿಸಿಕೊ, ನಾನು ನಿನ್ನ ಅಧೀನ
ನೀ ನುಡಿಸಿದರೆ ನುಡಿವೆ ನೀ ನಡೆಸಿದರೆ ನಡೆವೆ
ನಡೆಸಿಕೊ ಸಖಿ ನುಡಿಸಿಕೊ, ನಾನು ನಿನ್ನ ಅಧೀನ
ದಾಹ ಅತಿಯಾದರೆ ಹೀರು ಕೆಂದುಟಿಯ ಜೇನು
ಬಿಗಿದಪ್ಪಿಕೊ ತಬ್ಬಿಕೊ, ನಾನು ನಿನ್ನ ಅಧೀನ
ಬೆಳಕು ಕತ್ತಲೆ ಎಂಬುದು ಕಣ್ಣು ರೆಪ್ಪೆಯಾಟ
ನೋಟದ ಪರಿಧಿಗೆ ಸೆಳೆದುಕೊ, ನಾನು ನಿನ್ನ ಅಧೀನ
ಇರುವ ಇರದಿರುವುದೆಲ್ಲ ‘ಅಲ್ಲಮ’ ನಿನ್ನ ಅಧೀನ
ನನ್ನನೂ ಶೂನ್ಯ ಮಾಡಿಕೊ, ನಾನು ನಿನ್ನ ಅಧೀನ
ಸಿರಿ

ಮಾತು ಬೇಡ ಅಪ್ಪಿಕೊ, ನಾನು ನಿನ್ನ ಅಧೀನ
ಒಲವ ಹಾಡ ಹಾಡಿಕೊ, ನಾನು ನಿನ್ನ ಅಧೀನ
ಗಡಿಯಾರದ ಮುಳ್ಳಿಗೆ ಓಡುವುದೇ ಕಾಯಕ
ಚಲಿಸದಿರಲು ಬೇಡಿಕೊ, ನಾನು ನಿನ್ನ ಅಧೀನ
ನೋಡಲೇನಿದೆ ಲೋಕದಲಿ ನಿನ್ನ ಹೊರತಾಗಿ
ಕಣ್ಣ ಗೊಂಬೆ ಮಾಡಿಕೊ, ನಾನು ನಿನ್ನ ಅಧೀನ
ನಿನ್ನ ನೆನಪಿನ ಗಾಳಿ ಆವರಿಸಿಗೆ ಉಸಿರಲಿ
ಎದೆಯ ಒಳಗೆ ತುಂಬಿಕೊ, ನಾನು ನಿನ್ನ ಅಧೀನ
ಅಕ್ಕ ಏನಾದರೂ ಚೆನ್ನನ ಮರೆಯಲಿಲ್ಲ
ಜಗದ ಹಂಗು ಕಳಚಿಕೊ, ನಾನು ನಿನ್ನ ಅಧೀನ
‘ಸಿರಿ’ ಸುಳಿ ಹೊಕ್ಕಳಲಿ ಮಳುಗಿದರೆ ಮರೆವ ರೋಗ
ಕಣ್ಮುಚ್ಚಿ ನೆನಪಿಸಿಕೊ, ನಾನು ನಿನ್ನ ಅಧೀನ

‍ಲೇಖಕರು avadhi

December 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಅಲ್ಲಮ – ಸಿರಿ ಸಂವಾದ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: