ಸಿನಿಮಾದಲ್ಲಿ ಜಯಂತಿ ಪಾತ್ರ ಉಳ್ಕಂದಂಗೆ..

ನಮ್ಮೂರ ಓಬವ್ವ

ಮದಕರಿ ನಾಯಕನಾಳಿದ ಚಿತ್ರದುರ್ಗದ ಕಲ್ಲಿನ ಕೋಟೆ ಅನ್ನೋದು ಏಳು ಸುತ್ತಿನ ಕೋಟೆ. ಅದರ ಅಂಚಲ್ಲೊಂದು ಸೀ ನೀರ ಬಾವಿ. ನೀರ ಬಾವಿಯ ಕಾಲು ದಾರೀಲೊಂದು ಕೋಟೆಯಿಂದಾಚೆಗೆ ಹೊರಗೆ ಹೋಗುವಂಥ ಒಂದು ಕಳ್ಳ ಕಿಂಡಿ. ಹೀಗೆ ಗೈಡ್ ಅದರ ವರ್ಣನೆ ಮಾಡುವಾಗ, ಒನಕೆ ಓಬವ್ವನ ಕಿಂಡಿ ಅನ್ನೋ ಹೆಸರು ಯಾಕೆ ಬಂತು? ಅಂತ ಅವನು ವಿವರಿಸುತ್ತಾ ಹೋದ.

ಓಬವ್ವನ ಗಂಡ ಕೋಟೆ ಕಾವಲು ಕಾದು, ಬುರ್ಜು ಇಳಿದು ಬಂದು ಊಟಕ್ಕೆ ಅಂತ ಕೂರ್ತಾನೆ. ಮನೇಲಿ ಕುಡಿಯುವ ನೀರು ಇರುವುದಿಲ್ಲ.ಅವಸರವಸರದಲ್ಲಿ, ಇವಳು ನೀರಿನ ಕೊಡ ಸೊಂಟದಲ್ಲಿಟ್ಟು ನೀರು ತರಾಕೆ ಅಂತ ಹೋಗ್ತಾಳೆ. ಅಂಥ ಕಲ್ಲಿನ Nammuru-1ಕೋಟೆಯನ್ನೇ ದಾಟಿ ನುಸುಳಿ ಶತ್ರುಪಡೆ ಒಂದೊಂದಾಗಿ ಒಳಗೆ ಕಾಲಿಡೊದನ್ನು ನೋಡ್ತಾಳೆ .ಇವಳು ಅದನ್ನು ಕಂಡ ಕೂಡ್ಲೆ ಮನೆಗೆ ಬಂದು ಒನಕೆ ಎತ್ತ್ಕೊಂಡು ಹೋಗಿ ಆವೇಶದಿಂದ ನುಸುಳಿ ಬರುತ್ತಿರುವ ಶತ್ರುವಿನ ಒಂದೊಂದೇ ತಲೆಯನ್ನು ಜಪ್ಪಿ,ಎಳೆದೆಳೆದು ಹೆಣದ ರಾಶಿಯನ್ನೇ ಹಾಕ್ತಿರ್ತಾಳೆ.

ಊಟ ಮಾಡಿ ಬಂದ ಗಂಡ ಇವಳ ರಣಚೆಂಡಿ ಅವತಾರ ನೋಡಿದವನೆ ತಕ್ಷಣ, ರಣಕಹಳೆ ಕೊಂಬುಗಳನ್ನು ಊದಿ ಕೋಟೆ ಜನರನ್ನು ಎಚ್ಚರಿಸುತ್ತಾನೆ. ಅಪಾಯ ತಪ್ಪಿ,ಕೋಟೆ ಹಾಗೂ ಜನರ ರಕ್ಷಣೆ ಆಗುತ್ತೆ. ಆಗ, ಜನ ಮನಸಲ್ಲೇ ಅವಳನ್ನ ಹರಸಿ ಈ ಕಿಂಡಿಗೆ ಅವಳ ಹೆಸರನ್ನೇ ಕರುದ್ರು..ಅದು ” ಒನಕೆ ಓಬವ್ವನ ಕಿಂಡಿ” ಎಂದು ಹೆಸರಾಗಿ ಇಂದಿಗೂ ಸಹಿತ ಉಳಿದಿದೆ. ಈ ವಿವರಣೆಗಳು ಪಾಠವಾಗಿ, ನಾಗರಹಾವಿನ ಸಿನಿಮಾದಲ್ಲಿ ಹಾಡಾಗಿ, ಜಯಂತಿ ಅಭಿನಯದಿಂದಾಗಿ, ಈ ಕಥೆ ಜನತೆಯ ತಲೆಯಲ್ಲಿ ಒಂದು ದಾಖಲಾಗಿ ಉಳಿದು ಹೋಗಿದೆ.

ಆದರೆ ನನ್ನ ತಲೆ ವಳಗೆ ಓಬವ್ವನಿಗೆ ಸರಿಸಾಟಿಯಾಗಿ ಜಯಂತಿಯ ಸುಂದರ ಚಿತ್ರಣ ನಿಲ್ಲುವುದೇ ಇಲ್ಲ. ಅಂಥ ಅಧ್ಭುತ ಸಿನಿಮಾ ತಾರೆಯ ಆ ಜಾಗದಲ್ಲಿ ನನಗೆ. “ನಮ್ಮೂರ ರಾಜನ ಹೆಂಡತಿ” ಯ ಚಿತ್ರಣ ಬಂದು ನಿಲ್ಲುತ್ತೆ.. ವರಸೆಲಿ ಚಿಗವ್ವಾ ಎಂದು ನಾವು ಅವಳನ್ನ ಕೂಗ್ತಿದ್ವಿ. ನಮ್ಮ ಬುಡಕಟ್ಟಿನವರೇ ಆದ ಅವಳ ಗಂಡ ರಾಜ ಅನ್ನುವ ಆಸಾಮಿಯನ್ನು ನಾವು ಎಂದೂ ಚಿಗಯ್ಯ ಅಂಥ ಕರಿಲೆ ಇಲ್ಲ. ಅವಳ್ನೂಅಷ್ಟೆ. ಎದ್ರುಗಡೆ ಸಿಕ್ಕುದ್ರೆ ಮಾತ್ರ ಚಿಗವ್ವ ಅಂತ ಕೂಗುವಿ. ಬಾಕಿಯಂತೆ ಅವರ ಮನೆ ಸುದ್ದಿ ಬಂದ ಕೂಡ್ಲೆ ಮತ್ತೆ ಅವಳು ರಾಜನ ಹೆಂಡ್ತಿನೇ .

ಇವಳು ಇದ್ದಿದ್ದು ಐದು ಮುಕ್ಕಾಲು ಅಡೀ ಎತ್ತರ. ಅಷ್ಟಗಲದ ಹರವಾದ ಮೈಕಟ್ಟು. ಗುಡಿಯಲ್ಲಿರುವ ದೇವಿಯರಿಗಿರುವ ಪ್ರಮಾಣಬದ್ದ ಎದೆಯ ಮಾಟ. ಸಣ್ಣ ಸೊಂಟಕ್ಕೊಂದು ಬೆಳ್ಳಿ ಡಾಬು. ಗಾಢ ಬಣ್ಣದ ಸೀರೆಯಂಚು.ಅದನ್ನುಕಾಲಿಂದ ಚಿಮ್ಮುವಾಗ ಕಾಣುವ ದಪ್ಪನೆಯ ಕಾಲುಬಳೆಗಳು, ಕಾಲುಂಗುರ, ಮುಖಕ್ಕೆ ಕಳೆ ಕೊಡುವ ಕಿವಿಯ ಬಿಳೆ ಕಲ್ಲಿನ ಬೆಂಡೋಲೆ,ಮೂಗಲ್ಲಿ ಎಣ್ಣೆಬಿಟ್ಟ ಅಗಲದ ಬೇಸರಿ, ಹಣೆ ಮೇಲಿನ ಕಾಸಗಲದ ಕುಂಕುಮ ಇಟ್ಟು ಕಳೆಕಳೆಯಾದ ಮುಖ. ಹರಳೆಣ್ಣೆ ಒತ್ತಿ ಬಾಚಿದ ತಲೆಕೂದಲ ದಪ್ಪನೆಯ ಗಂಟು. ನಡೆದು ಮುಂದಕ್ಕೆ ಹೋಗುವಾಗ ಅಷ್ಟಗಲಕ್ಕೆ ಹರಡಿದ ಅವಳ ಸೊಂಟದ ಕೆಳಗಿನ ಭಾಗ ಎಲ್ಲವೂ ಅವಳ ಇಡುತ್ತಿದ್ದ ಹೆಜ್ಜೆಗೆ ಹಾಗೆ, ಅಲಗುತ್ತಿದ್ದವು.ಅಂಥ ಧೃಢವಾದ ನಡಿಗೆ. ಲಕ್ಷಣವಾದ ಮೈಕಟ್ಟಿನ ಕಪ್ಪು ಕೆಂಪಿನ ಸುಂದರವಾದ ಹೆಣ್ಣು.

ವತ್ತರಿಸಿಕೊಂಡ ಎಲಡಿಕೆ ರಸ ಉಗದು ನಮ್ಮನ್ನ ಕಂಡೇಟ್ಗೆ, “ಹಾಸನದ ಕೋಟೆ ಇಂದ ಯಾವಾಗ ಬಂದವ್ವಾ ನನ್ ಚಿನ್ನ” ಅಂತ ಕೆಂಪು ಬಾಯತುಂಬ ನಗ್ತಾ ಕೇಳಳು. ಮುಖದಲ್ಲಿ ನನ್ನ ಮೇಲೆ ಮುದ್ದು ಅನ್ನೋದು ಉಕ್ಕಿ ಹರಿತಿರೋದು. ಓದೊ ಮಕ್ಕಳು ಅಂದ್ರೆ ಅವಳಿಗೆ ಹಿಗ್ಗು.

“ಅಪ್ಪನ ಕುಟೆ ಬಂದ್ಯಾ? ಊರ ನೋಡ್ಕಂದು ತಿರುಗಿ ಹೋಗ್ಬುಡು ನನ್ನವ್ವಾ… ಇದ್ಯಾಬ್ಯಾಸ ಅನ್ನದು ನಾನು ಗುಡ್ಡದ ಮೇಲಿನ ಕಲ್ಲು ಹೊಡ್ದಂಗಾ? ನಿಮ್ಮ ಹೆತ್ತೋರು ಪುಣ್ಯಾತ್ಮರು ಓದುಸ್ತವ್ರೆ. ಚೆನ್ನಾಗಿ ಓದು ಮಗ. ಬಂದಾಗ ವಸಿ ನಿಮ್ಮ ಮುಖ ನೋಡ್ಕಂತಿವಲ್ಲ. ನಮಗೆ ಅಷ್ಟೇ ಸಾಕು!” ಅನ್ನೋಳು. ಸ್ವರದಲ್ಲಿಯ ಕಕ್ಕುಲತೆ ಬೆಣ್ಣೆಯಷ್ಟು ನಯವಾಗಿದ್ದು, ಆಸೆ ಹೊತ್ತ ಅವಳ ಈ ಮುಖ ನನ್ನೊಳಗೆ ಅಚ್ಚೊತ್ತಿದ್ದೂ ಅಲ್ದೆ, ಈ ಜೀವ ನಂದೇ ಅನ್ನಸೋದು.

villageಅವಳು ನಮ್ಮ ಮನೆ ಮುಂದೆ, ದಿನ ಹಾದು ಹೋಗವಾಗ, ಗಟ್ಟಿ ಸ್ವರದ ಮಾತಿನ ಜತೆಗೆ, ಅವಳ ಹೆಗಲ ಮೇಲೆ ಭಾರಿ ಗಾತ್ರದ್ದೊಂದು ಸುತ್ತಿಗೆ, ಉದ್ದನೆಯ, ಗಟ್ಟಿಯಾದ, ಕಾವಿನ ಆಸರೆಯಲ್ಲಿ ಕುಳಿತಿರ್ತಿತ್ತು. ಶಕ್ತಿದೇವತೆ ತಾಯಿ ಚಾಮುಂಡಿಯ ಅಸ್ತ್ರದಂತೆ ಅದು ಯಾವಾಗಲೂ ಅವಳ ಜೊತೆಗೇ ಇರ್ತಿತ್ತು. ಆದರೆ ಅವಳ ತಲೆಯ ಮೇಲಿನ ಊಟದ ಕುಕ್ಕೆ ಕತ್ತಿನ ನರಗಳಲ್ಲೆ ನಿಯಂತ್ರಣವಾಗುತ್ತಾ ಇರದು. ಒಂದು ಕೈ ಸುತ್ತಿಗೆ ಹಿಡಿದು ಇನ್ನೊಂದು ಕೈ ಕಂಕುಳಲ್ಲಿರೊ ಕೈಕೂಸ ಹಿಡ್ದಿರೊದು. ಉಳಿದ ಇನ್ನೆರಡು ಮಕ್ಕಳು ಅವಳ ಹೆಜ್ಜೆ ಅನುಸರಿಸ್ತಾ ಹೋಗುತ್ತಾ, ಅವಳಿಗೆ ಶಕ್ತಿ ದೇವತೆಯ ಹಾಗೆ ಸಂತಾನಲಕ್ಷ್ಮಿಯ ಸ್ಥಾನವನ್ನೂ ನೀಡಿ ಸಾಗ್ತಿರೋವು.

ಹೀಗೆ ಕಮಲದ ಹೂವು ಹಿಡಿದ ಆ ಲಕ್ಷ್ಮಿ,ಆಯುಧ ಹಿಡಿದ ಈ ದುರ್ಗೆಯರಿಗೇ ಸಾಟಿ ಹೊಡಿತ ನಮ್ಮೂರಿನ ಸಂಸಾರ ದೇವತೆ ಹೊಟ್ಟೆ ಪಾಡಿಗೆ ಮಾರಮ್ಮನ ಗುಡಿ ದಾಟಿ, ಊರ ಬಾಗಲ ಕೋಡಗಲ್ಲ ಹಾದು, ಗದ್ದೆ ತೆವರಿಲಾಸಿ ,ಮಠದ ತೋಪು ಹಾದಿಲೇರಿ, ನಮ್ಮೂರಿನ ಗಡಿಲಿರೊ ಅಂಥ, ಕಲ್ಲುಗುಡ್ಡದಲ್ಲಿ , ಮಕ್ಕಳೊಂದಿಗೆ ಹೋಗಿ ಅಂಡೂರೋಳು. ಕಲ್ಲು ವಡ್ಡರ ಜತಿಗೆ ಕಲ್ಲು ಒಡೆಯುತ್ತ, ಹನ್ನೆರಡನೆ ಶತಮಾನದ ಬಸವಣ್ಣನ ತಲೆಮೇಲೆ ಹೊಡೆದ ಹಾಗೆ, ಕಾಯಕವೇ ಕೈಲಾಸಾಂತ ನಂಬಿ ಬದುಕ ಮಾಡೋಳು.

ನಮ್ಮೂರಲ್ಲೇ ಮೊಟ್ಟಮೊದಲು ಕಲ್ಲು ಒಡೆಯುವ ಕಾಯಕ ಮಾಡಿದ ಗಂಡುಗಿತ್ತಿ ಈ ರಾಜನ ಹೆಂಡತಿ. ಕಳ್ಳನ ಹೆಂಡ್ತಿ ಮುಂಡೆ ಆಗೋದೆ ಸರಿ ಅನ್ನೋಹಂಗೆ ಕುಡುಕರ ಹೆಂಡ್ತಿರ ಪಾಡೂವೆ ತಪ್ಪಿದ್ದಲ್ಲ. ರಾತ್ರಿ ನೆಟ್ಟಗೆ ನಿದ್ದೆ
ಮಾಡೊ ಹಂಗಿಲ್ಲ. ಬೆಳಗೆದ್ದು ಸಂಸಾರಕ್ಕೆ ಗಂಡ ತಂದ್ ಹಾಕ್ತಾನೆ ಅಂತ ನಂಬಂಗಿಲ್ಲ. ಇಂಗೆ ಅರೆಗಣ್ಣಿನ ಸಂದಿಲೇ ಬದುಕ ನಚ್ಚಕೊಂಡು, ಜೀವ ಸವುಸ್ಬೇಕು.

ಇದ್ಯಾವೂರ ಬಾಳು ಥೂತ್! ನಂದೂವೆ ತಗ, ಅಂದುದ್ದೇಯ… ಇವ್ಳು, ಒಂದು… ನಿರ್ಧಾರಕ್ ಬಂದ್ಲು. ಇದ್ದ ಎರಡೆಕ್ರೆ ಹೊಲದಲ್ಲಿ ಮಳೆ ಬಂದಾಗ ರಾಗಿ ಹುಳ್ಳಿ ಚೆಲ್ಲುದ್ರೆ ಮುಗಿತು. ಎಂಗೋ ಅರೆ ಹೊಟ್ಟೆ ಪಾಡು.. .. ಆಗದು. ಉಳದ ತಾಪೆತ್ರಯಕ್ಕೆ ಏನ್ ಮಾಡದು? ಅವಳ ತವರು ಹಳ್ಳಳ್ಳೀಲಿ ಯಾತುಕ್ಕು, ಕಡಮೆ ಮಾಡದಂಗೆ ಒಬ್ಳೇ ಮಗಳು ಅಂತವ, ಹಾಲುತುಪ್ಪ ಇಕ್ಕಿ ಅವರವ್ವ ಇವಳನ್ನ ಸಾಕಿದ್ಲಾ? ಅದ ನೆನಕಂದ್ರೆ ಅವಳಿಗೆ ತನ್ನ ಮಕ್ಕಳನ್ನೂ ಅಂಗೆ ಸಾಕಬೇಕು ಅಂತ ಅನ್ಸದು.

ಅವಳ ಕಳ್ಳು ಅನ್ನದು ಹಂಗೆಯ ಕಿತ್ಕ… ಬರಾದು. ಅವಳ ಹಣೆಬರಕ್ಕೆ ಬ್ಯಾರೆ….. ಇಂಥ ಗಂಡ! ಮರ ಕುಯ್ಯೊಕೆ ಹೊಯ್ತಾನೆ.. ವಾರ ವಾರದ ಬಟವಾಡೇ ಬರತೀತೆ, ಕೈಯಲ್ಲಿ ನಾಕು ಕಾಸು ಓಡಾಡತಿತೆ, ಅಂತವ ಗಂಡು ತೋರ್ಸುದ್ ವಾಜರಹಳ್ಳಿ ಹಲ್ಲುಬೀರ ಅನ್ನೋನು, ಹೇಳದ್ದ ಮಾತ ನಂಬಿ, ಹೊಸ ಸಂಬಂಧ ಮಾಡಿ, ಅವರಪ್ಪ ಈಗ.. ವಳಗೇ ನೋಯ್ತಿದ್ದ. ಅಪ್ಪನ ಮನೆಯವ್ರೂವೆ.. ಎಷ್ಟು ಅಂತ, ಯಾರಾಕಾರು? ಇವಳ ಸಂಸಾರವ.

“ನನಗೇ, ಇಂಗೆ, ಯಾರಾಕ್ತಾ…ಕುಂತ್ಕಂದ್ರೆ. ನನ್ನ ಹಿಂದ್ಗುಟ್ಟೆ ಹುಟ್ಟಿದ ಆ… ತಮ್ಮಗಳ ಪಾಡೇನಾಗ್ಬೇಡ. ತವರು ತಿಂದ್ಯೋ…ತವಡು ತಿಂದ್ಯೋ… ” ಅನ್ನೋ ಗಾದೆ ಮಾತ ನೆನಕಂದು, ಅವಳು, ಈ ನಿರ್ಧಾರಕ್ಕೆ ಬಂದಿದ್ಲು.

ಬೆಳುಗ್ಗೆ ಎದ್ರೆ ಗಂಡ, ಮಂಗಳೂರಿನ ಮರ ಕುಯ್ಯೋ ಬ್ಯಾರಿ ಜತಿಗೆ ಹೋಗೊನ… ಗರಗಸ ಹಿಡುದು ಬೆಳಿಗ್ಗಿಂದ.. ಬೈಗರ್ಗೂ ನೆಲಕ್ಕೆ ಕೆಡವಿದ ಬೆವರಿನ ದುಡ್ಡು ತಂದೋನೆಯ, ಕತ್ಲಾತಿದ್ದಂಗೆ.. ಕಡೆಪೇಟೆ ಹೆಂಡದಂಗಡಿಯ ಸೇರೋನು. ಹೆಂಡ ಕುಡ್ದು ಅಲ್ಲೆ ಬುಂಡೆ ಬಿಸಾಕಿ, ರಾತ್ರಿ ಕತ್ತಲನ್ನ ಹೆಗ್ಲಿಗೆ ಇಳೆಬಿಟ್ಕಂಡು, ಊರ ದಾರಿಯ ಹಿಡ್ಯನು. ತಿಂಗಳು ಬೆಳಕಲ್ಲಿ ಅಸಾರೆ ಬಿದ್ಕ್ಂಡು, ನಿದ್ಗಣ್ಣಲ್ಲಿ ಕನಸು ಕಾಣ್ತಿರದಾ, ಆ ದಾರಿ ಅನ್ನೋದು.. ಅವನ ಕುಡ್ಡ ಕಣ್ಣಿಗೆ ಹಾವಿನಂಗಿರ ಅದು, ನೆಟ್ಟಗೆ ಕಾಣದು. ಅವನ ಕೈಯ ಹಿಡಕಂದು, ಮಡಿ ಮಾಡಕಂದು ಬಂದ ಅಗಸರು, ತಂದು ಹಾಸಿರೊ ನಡೆಮುಡಿ ಅಂಗಿರೊ, ಹಾದಿ ಅನ್ನದು, ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡಸಕಬಂದು, ಮನೆತಂಕ ತಂದು ಜೋಪಾನಾಗಿ, ಇವನ್ನ ಬುಟ್ಟುಬುಡೋದು. ಅಂಥ ಸ್ನೇಹ!

ರಾತ್ರಿ ಕತ್ಲ ಹಾದಿಗೂವೆ, ಇವನುಗೂವೆ.. ಇಂಥರೊಬ್ಬರ ಕಂಡ್ರೆ ಅದಕ್ಕು ಆಸೆ ಅನ್ನಿ. ಎಂಗೊ ಅದು ಇದು ಅಂತ ಒಳಗಿನ ಸಂಕಷ್ಟವ ಇವ್ರು ಅದರ ಕೈಲಿ ನಿಧಾನಕ್ಕೆ ಗಂಟಗಟ್ಲೆ, ಮಾತಾಡ್ತಾ ಬರರ. ಊರರೆಲ್ಲರುವೆ ಮನೆ ವಳಗೆ ಅಗಳಿ ಹಾಕಿ, ಹೆಂಡ್ತಿ ಮಕ್ಳು ಮಗ್ಲಲ್ಲಿ ಮಲಕ್ಕಂಡಿದ್ರೆ, ಕುಡ್ದೋರು ಮಾತ್ರ… ತುಳುಸ್ಕ್ಂಡು ಸಾಕಾಗಿರೊ ದಾರಿ ಜತೆಲಿ, ನಿಧಾನಕ್ಕೆಅವರ ಕಷ್ಟ ಸುಖವ, ಹತ್ತತ್ಸಲ ಹೇಳಿ ಅತ್ತು ಕರದು, ಹಗರಾಗರು.

ದಾರಿ ಅನ್ನದು, ಜನ್ರ ಕಷ್ಟದ ಮುಂದೆ ನನ್ ಕಷ್ಟೇನು? ಮಹಾ.. ತೆಗಿ, ಬಿಸಾಕು ಅತ್ಲಾಗೆ.. ಅನ್ಕಳದು. ಹಿಂಗೆ ತೊದ್ಲು ಮಾತ ಆಡ್ತಾಆಡ್ತಾ, ಕತ್ತ ಭೂಮಿ ಕಡಿಕೆ ಜೋಲಾಡುಸ್ಕ್ಂಡು.. ಬಂದಿದ್ದೆಯ ರಾಜ ಧಬಧಬಧಬ ಅಂತ ಬಾಗ್ಲು ಬಡಿಯೋನು. ಅಂಥ! ಪರಿ, ಅವನು ಮೈ ಮರತು ಬಂದಿರೊ ದೆಸಿಗೆ, ದಳದಳನೆ ಮೂರು ಮಕ್ಕಳು ಅನ್ನವು ಮನೇಲಿ ಹೂವುನಂಗೆ ಅರಳಕಂಡು, ಊರಲ್ಲಿ, ರಾಜನ ಸಂಸಾರ ಹೆಂಗೋ, ತಳ ಊರ್ತು . ಆದ್ರೆ, ಜಬಾಬ್ದಾರಿ ಅನ್ನದು ಮಾತ್ರ ಇವನಿಗೆ.. ಬರ್ನಿಲ್ಲ. ಕೆಲ್ಸಕ್ಕೆ ಹೋದ್ರು ಹೋದ. ಇಲ್ದಿರಿಲ್ಲ. ತಗ ಇವ್ಳು ನೋಡುದ್ಲು.. ನೋಡುದ್ಲು.. ಕೊನಿಗೆ ಸಾಕಾಗಿ, ಅತ್ಲಾಗಿ ಮಕ್ಕಳು ಕಟ್ಕ್ಂಡು ಅಂಗೆ ಪರದಾಡಿದ್ಲು.

sheಅಪ್ಪನ ಮನೆಲಿ ಅವರವ್ವ ಸಾಕಿದ ಮಟ್ಟು ಅನ್ನದು, ಕೂಲಿಗೋಗಕೆ ಬ್ಯ್ಯಾ…ಡ, ಅಂತ ತಲೆ ವಗಿಯದು. ಒಂದಿನ ಅವಳು ಸಾಕಿದ ಆಡು, ದಂಡ ಕಟ್ಕಂದು, ವಾದರಳ್ಳಿ ಕಾವಲು ದಾಟಿ ಕದ್ದು ಹೋಗಿದ್ವು. ಹುಡಕ್ಕಂಬರಕೆ ಅಂತ ಹೋದೋಳು ಗುಡ್ಡದ ದಾರಿಯ ಹಿಡ್ದು ಅಲ್ಲಿಗೆ ಬಂದ್ಲು. ಬಂದಳೆ ನೋಡ್ತಳೆ. ವಡ್ಡರ ಹೆಂಗುಸ್ರು “ಬೇಬಿ ಜಲ್ಲಿ”ಯ ಒಡ್ಡು ಗುಡ್ಡೇ ಹಾಕುತಾವ್ರೆ. ಚಿಳ್ಳೆಪಳ್ಳೆ ಮಕ್ಕಳು ಅವಳ ಸುತ್ತ್ಲೂವೆ ಆಡ್ಕತಾವೆ. ನಿಂತ್ಕಂದು ಎಲ್ಲನೂ ನೋಡ್ಕಂದ್ಳು, ಯಾಪಾರ ಅನ್ನದು ಕಣ್ಣೆದ್ರುಗೆ ಆ ವಡ್ಡರ ಎಂಗ್ಸಿನ ಕೈಗೆ ಕಾಸ ಎಣುಸ್ತು. ಆಗ, ಬಾಯ ಮೇಲೆ ಅಂಗೆ, ಬೆರಳಿಟ್ಕಂಬುಂಟ್ಲು.

ಅವಳು, ಇದ ಕಂಡುದ್ದೆ ತಕ, ಅವಳ ಮನಸ್ಸಿನ ಗಾಯಕ್ಕೆ ಔಷಧಿ ಬಳ್ಳಿ ಕಾಲಿಗೆ ಸಿಕ್ಕತು.. ನನ್ನ ದಾರಿ ಇದೆಯಾ.. ಅಂತ ಅಂದಳೆಯಾ, ಅದು ತೋರ್ದಂಗೆ ಆಗ್ಲಿ ಅಂತ ಸಮಧಾನಾದ್ಲು. ಅಂಗೇ ಎಲ್ಲನು ಉಪಾಯದಲ್ಲಿ ತಿಳ್ಕಂದ್ಲು. ಈ ದಾರಿಲಿ ರಟ್ಟೆ ಭದ್ರಾಗಿದ್ರೆ ಸಾಕು, ಹೊಟ್ಟಿಗೆ, ಬಟ್ಟಿಗೆ, ತೊಂದ್ರಿಲ್ಲ.ಯಾವನ್ಗೂ ಬಗ್ಗಿ ಸಲಾಮು ಹಾಕ ಅಂಗಿಲ್ಲ, ಅನ್ಕ್ಂದಳೆ, ಏನ್ ಮಾಡುದ್ಲು?

ಸಂತೆಲಿ ಸುತ್ತಿಗೆ ಖರೀದಿ ಮಾಡಿದ್ದೆಯ ವಾರದೊಳಗೆ ಬೇಬಿ ಜಲ್ಲಿ ಒಡ್ಯಾದ ಕಲುತ್ಲು. ಆರು ತಿಂಗಳೊತ್ಗೆ ದಪ್ಪನೆ ಬೋಡ್ರಸ್ಸ ವಡೆಯಾಕೆ ಸುರು ಮಾಡಿ ಕೊನಿಗೆ ಸಬ್ ಕಂತ್ರಾಟಲ್ಲಿ ಗುಡ್ಡನೆ ಅಳತೆ ಹಿಡುದು ಕಲ್ಲ, ಒಡುದ್ಲು. ಊರಲ್ಲಿ ಯಾರೂ ಉಸ್ರೆತ್ತದೆ ಇರೊ ಹಂಗೆ ಮಕ್ಕಳನ್ನ ಸಾಕ್ಕಂತ ಮಕ್ಕಳ ಒಂದು ನೆಲೆ ಮಾಡುದ್ಲು. ನಿಸೂರಾಗಿ ಹಿಡ್ದಿದ್ದ ಉಸುರ ಬುಟ್ಲು. ಯಾರಾರು ಅವಳ ತಂಟೆಗೆ ಹೋದ್ರೆ ಮಾತ್ರವ, ಮುಗಿತು. ಅವರ ಕುಲ ಜಾಲಿಸಿ “ಹಾಟು ಕೊಳೆ ರಕ್ತವ” ಅವರ ಬಾಯಿಗ ಹೂದು, ಸೊಂಟದ ಕೆಳಗಿನ ಕಿವಿಲಿ ಕೇಳಬಾರದ ಮಾತಲ್ಲಿ ಅವರನ್ನ ಬಿಸ್ನೀರಿಗೆ ಅಜ್ಜಿ ತೊಳು…ದ್ ಬುಡಳು.

ಅದುಕ್ಕೆ… ಯಾರೂ ಅವಳ ತಂಟೆಗೆ ಓಯ್ತಿರ್ಲಿಲ್ಲ. ಇಂಗೆ ಅವಳ ಬಾಯಾಳತನ ಸಹಿಸದೆ ಇರೊ ಊರರು ಒಂದಿನ, ಮರಕ್ಕೆ ಯಾವುದೋ ನೆಪ ಹೂಡಿ ಅವಳನ್ನ ಕಟ್ಟಿ ಹಾಕಿದ್ರು. ಅದಕ್ಕೆ ತಕ್ಕ ತಪ್ಪ, ತೋರ್ಸಕ್ಕಾಗದಲೆ, ನೆವನೂ ಹೇಳಕ್ಕಾಗದೆಲೆ ಅತ್ಲಾಗಿ ಕಟ್ಟಬಿಚ್ಚಿ ಬುಟ್ರು. ಅಂಗೆಲ್ಲಾ ಬಡಪಟ್ಟಿಗೆ ಅವ್ಳನ್ನ, ಯಾವ ನನ್ಮಗನ ಕೈಲೂ ಬಗ್ಗ್ಸಾಕೆ ಆಯ್ತಿರಲಿಲ್ಲ. ಆದ್ರೆ, ಅವಳು ನ್ಯಾಯವಂತೆ.. ಕಷ್ಟ ಅನ್ನದ ಹೆಗಲೇರುಸ್ಕಂಡು ದುಡಿಯೊ ಅವಳ ಛಲವ ಕಂಡಿದ್ದೆ, ಏನ್ ಮಾಡಾರು? ಅತ್ಲಾಗಿ, ಎಲ್ಲಾ ಬಾಯ ಅಮುಕ್ಕಂಡು ಸುಮ್ನಾಗರು.

ಅವಳ ಬಾಯಾಳತನ ಎಲ್ರಗೂ ರೂಢಿ ಆಗಿತ್ತು. ಅವಳದೊಂದು ಕೋಳಿ ಕಳವಾದ್ರು ಸಾಕು.. ಅವಳ ಪೋಲಿ ಬಯ್ಗಳ ಕೇಳಿದ ಅಪ್ಪಂತೊರು ಇನ್ನೊಂದಿನ ಅವಳ ಸುದ್ದಿಗೆ.. ಓ..ಯ್ತಿರ್ನಿಲ್ಲ. ಸರಿ, ಇಂಥಾ ಎದೆಗಾರ್ತಿ ಸಾಯಂಕಾಲ ಆತಿದ್ದಂಗೆಯ ಗಪ್ ಚಿಪ್ನೆ ಸುಮ್ನಾಗ್ಬುಡೋಳು. ಅದೂವೆ ಗಂಡ ಬರ ಹೊತ್ನಲ್ಲಿ.. ಯಾಕೆ ಅಂದ್ರೆ, ರಾಜನ ಆರ್ಭಟ ಬಾಯಿಂದಲ್ಲ. ಕೈಯಿಂದು. ಸಿಕ್ಕಿದ ಸೌದೆ ಸೊಪ್ಪಲ್ಲಿ, ಒನಕೇಲೆ ಬಾರ್ಸುಬುಡೋನು. ಏನ್ ಸಿಕ್ಕಿದ್ರೆ ಅದ್ರಲ್ಲೆಯ..

ಹೊಡ್ತ ತಡಿದೆ ಇವ್ಳು.. ಅವ್ವ,ಅವ್ವ.. ಅಂತ ಧಡಧಡನೆ ಓಡಿ ಬಂದುದ್ದೇಯ ನಮ್ಮನೆ ಹತ್ತು ಮೆಟ್ಲ ಒಂದೆ ಏಟಿಗೆ ಹಾರಿದ್ದೆ , ನಮ್ಮವ್ವನ್ನ ಮೊರೆ ಬಿದ್ದು, ಮನೆ ಹಿಂದ್ಲೆ ಅಟ್ಟಕ್ಕೋಗಿ, ಸದ್ದಿಲ್ದಂಗೆ ಮುಚ್ಚಿಟ್ಕಳಳು. ಅವನು ಕಣ್ಣಾಮುಚ್ಚಾಲೆ ಆಟದಲ್ಲಿ ಕಳ್ಳರು ಹುಡುಕಬಂದಂಗೆ ಕುಡಿದ ನಶೇಲಿ ಅತಲಾಗೊಂದು,ಇತ್ತಲಾಗೊಂದು ಕಿಸಕಾಲ ಎಸಿತಾ,ಕೆಂಪನೆ ಕಣ್ಣ ಮೆಡ್ರುಸ್ಖಂದು
“ನಮ್ಮನೆ ಲಕ್ಷ್ಮಿ ನೋ..ಡು…ದ್ರೇನತ್ತ್ಗೆ” ಅಂತ ಉದ್ದುಕ್ಕೆ, ತೊದ್ಲುಸ್ಕಂದು ಮುಂದ್ಲ ಬಾಗ್ಲ ಹಟ್ಟಿಕಲ್ಲ ಮೇಲೆ ನಿಂತ್ಕಳನು.ಅವ್ವ “ಇಲ್ಲ ಕಣ ರಾಜಾ ನಾನು ನೋಡ್ನಿಲ್ಲ. ಕತ್ಲಾತ ಬಂತು. ನಿನ್ನ ಹೊಡ್ತ ತಡಿನಾರ್ದೆ ಎತ್ಲಾಗೆ ಹೋದ್ಲು ನೋಡ ಹೋಗಿ…” ಅನ್ನದು ಮಾಯಿ ಅಂಗೆ.

“ಇವತ್ತು ಬರ್ಲಿ ಅವಳನ್ನ ಹುಟ್ಲಿಲ್ಲ ಅನ್ನುಸ್ಬುಡ್ತಿನಿ.. ಅರಬ್ಬೆ ಅಂಗಾಡ್ತಾಳೆ, ಮಾದರ್ಚೋದ್ ತಂದು. ಊರೋರ ಮೇಲೆಲ್ಲ ನಾಲುಗೆ ಹರಿಬುಡ್ತಾಳಂತೆ.. ಎಲ್ಲರು ನನ್ನ.. ಕೇಳ್ತಾರೆ ” ಅಂತ ಎಲ್ರೆದ್ರುಗೆ ಮೀಸೆ ತಿರುವಿ ಮನಿಗ ಹೋಗಿ ಬಿದ್ಕಳನು.

ವಸಿ ಹೊತ್ತಾದ್ ಮೇಲೆ ಇವಳು ಹೊರಡಳು. ಅವ್ವ ಹೆದ್ರುಕೊಂಡು
“ಬ್ಯಾಡ ಕಣೆ ಲಕ್ಷ್ಮಿ. ಮತ್ತೆ ಹೊಡ್ತಾ ತಿನ್ಬೇಡ. ಮೈ ಎಲ್ಲಾ ಊದ್ಕಂಡೀತೆ ಆಗ್ಲೆ. ನೀನು ಇವತ್ತು ಇಲ್ಲೆ ಮಲ್ಕಳಗೀ..” ಅಂದಾಗ
“ಅವ್ವ, ನನ್ನ ಹೆತ್ತವ್ವ ಕನವ್ವ, ನೀನು.. ಸುಮ್ನಿರವ್ವ.. ಬಂದ್ ಹೊತ್ನಲ್ಲಿ ವಸಿ ಹೊತ್ತು ಅಂಗಾಡ್ತಾನೆ. ಆಮೇಲೆ ಸುಮ್ಮಗಾಯ್ತನೆ. ಇಷ್ಟೊತ್ತಿಗೆ.. ನಿದ್ದ್ ಬಂದು ಆಗ್ಲೆ ಗೊರಿತಿರ್ತಾನೆ ಮೂಳ. ನೀನು ಹೆದ್ರುಕೊಬೇಡ ಕಣವ್ವಾ.. ಕಷ್ಟ ಕಾಲಕ್ಕೆ ಅಪ್ಪಾವ್ವ ಅಂತ ನೀವಿದಿರಲ್ಲವ್ವ.. ನನ್ನ ಜತೀಗೆ.”

“ಅವನೂವೆ ಎಷ್ಟೊತ್ನಲ್ಲಿ ಉಂಡಿದ್ನೋ ಏನೋ? ಪಾಪ್ರು ನನ್ ಮಗ! ಹಾಳು ಹೊಟ್ಟೇಲಿ ಕುಡ್ದು ಲೋಲಾಗಿ ಬಂದು ಹಸ್ಕ್ಂಡು, ಅವನ್ ಬಾಯಿಗೆ ಮಣ್ ಹಾಕ…… ಅಂಗೆ ಮಲ್ಕತನೆ ಕನವ್ವಾ. ಎದ್ದು ಒಂದಪ ಉಚ್ಚೆ ಹೂದ್ರೆ ಮುಗಿತು.. ಹೊಟ್ಟೆ ಖಾಲಿ ಆಗಕುಲ್ವಾ.. ಅವನಿಗೆ. ಅದೂ ತಿಳಿಯುಕಲ್ವಲ್ಲಾ? ಅವನ್ ನೆಣ ಕೊಚ್ಚಿ ಅವನ ಮಗ್ಲಿಗ್ ಹರವಾ.. ಪಾಪ! ಮಕ್ಳಿಗೆ ಉಣ್ಣಕ್ಕೆ ಇಕ್ ಬಂದಿದ್ದೆ. ಅವೂ ಇವನ ಅಬ್ಬರ ನೋಡಿ ಅಂಗೆ ಮೂಲೆ ಸೇರಿರ್ತವೆ. ಏನ್ ಮಾಡ್ಲವ್ವ ಇವನ್ನ? ಕಟ್ಕಂದು. ಗೇಯ್ಕಂಡು ತಿನ್ನನ ಅಂದ್ರೆ ಅದಕೂ ಬಿಡಲ್ಲನಲ್ಲ, ನನ್ನ ಹಣೆಬರಕ್ಕೆ ಹೊಣೆ ಯಾರು? ಹೇಳು. ಅರಿದೆ… ಗಾದೆ ಕಟ್ಟವ್ರೇನವ್ವ ಆ ಕಾಲದೋರು..” ಅಂತ ಆಸೇನೋ? ಅಸಹಾಯಕತೆನೋ? ಸಿಟ್ಟೋ? ಅವಳದ್ದೆ ಒಂದು ಪರಿಭಾಷೇಲಿ ಸಮಜಾಯಿಷಿ ಹೇಳೋಳು. ಸೆರಗಲ್ಲಿ ಹನಿಗಣ್ಣ ಸೀಟ್ಕಳತಾ ಅಂಗೆಯ…

ಅವ್ವ ಎದ್ ಹೋಗಿ ಏನಾರ ತಿನ್ನಕೆ ತಂದು ಕೊಟ್ಟು, “ತಿನ್ನಗೀ, ಹೊಟ್ಟೇಗ್ ಒಂಚೂರು ತಾಡ ಆಗ್ಲಿ” ಅನ್ನದು.
” ಅವರ ಬುಟ್ಟು ತಿಂದೇನಾ… ನಾನು. ಗಂಟಲಲ್ಲಿ ಇಳಿವಲ್ದು..” ಅಂತ ವಸಿ ಬಾಯಗೆ ಹಾಕಂದು, ಸೆರಗಲ್ಲಿ ಇಟ್ಕಂದು, ಮನಿಗೆ ತಗ ಹೋಗಳು. ಅವ್ವ ಗಾಯಕ್ಕೆ ಎಣ್ಣೆನ ಸವರುವಾಗ ಸೌದೆ ಸೀಳಿನ ಬಾಸುಂಡೆ ಅನ್ನವು ಸಕಲೇಶನ ತೋಳಲ್ಲಿರೊ ಹಾವಂಗೆ ಅವಳ ಮೈಯ ತುಂಬ ನುಲ್ಕಂದಿರವು. ಗಾಯಾಗಿ ರಕ್ತಾನೂ ಸುರುಸ್ತಿರವು. ವಿಷ ನುಂಗಿ ನೀರ ಕುಡ್ದು, ಧರೆಗೆ ಒಳ್ಳೇದು ಮಾಡೋ ವಿಷಕಂಠನ ಹಂಗೆ ತನ್ನ ಗುಡಿಗೆ ಆ ತಾಯಿ ಸಾ…ಗಿ ಹೋಗೋಳು.

treeಇಂಥ ಕಷ್ಟದೊಳಗೂ, ತನ್ನ ಮನೆಬಾಗ್ಲುಗೆ ಯುದ್ಧ ಭೂಮಿಲಿ ಹೋರಾಡಿ ಬರೊ ಧೀರೆ ತೆರದಲ್ಲಿ ತೆರಳಿ, ರಾತ್ರಿ ಅನ್ನದ ತುಂಬ್ಸಳು. ಬೆಳಕರಿತಲೆ… ಮನೆ ಸಾವುರುಸಿ ಮಕ್ಕಳ ಹೊಟ್ಟೆಗೆ ಬುತ್ತಿ ಕಟ್ಕಂದು, ಭುಜದ ಮೇಲೆ ಬಾಳಿನ ಹೊರೆ ಕರಗಸೋ ಅಂತ ಅಸ್ತ್ರ ಅನ್ನೋ ಸುತ್ತಿಗೆನ ಹೊತ್ಕಂದು ಮತ್ತೆ ಹೊರಡಳು. ರೊಟ್ಟಿಬುತ್ತಿಯ ತಲೆ ಮೇಲೆ ಅಂಗೆ ಕತ್ತಿನ ಬಲದಲ್ಲೆ ಗಾಳಿಲಿ ಆಡುಸ್ತಾ ಅಂಗೆ ಸರಳಿನಂಥ ಕಾಲು ಬಳೆಯ ಕಾಲನ್ನ” ಠಣ್ಣ ಠಣ್ಣ ” ಅನ್ನೋ ಸದ್ದಲ್ಲಿ ಗಟ್ಟಿಯಾಗಿ ನೆಲಕ್ಕೆ ಊರುತ್ತಾ, ಹಂಗೆ ಕಾಯ್ತಿರೊ ಕಲ್ಲು ಗುಡ್ಡದ ತಲೆ ಮೇಗಡಿಕೆ ಹೋಗಳು. ಈ ಥರದಲ್ಲಿ, ಕಲ್ಲು ವಡ್ಡರಂಗೆ ಕಲ್ಲಿನ ಗುಡ್ಡದಲ್ಲಿ ಹೊಟ್ಟೆ ಹೊರ್ದೋಳು ನಮ್ಮೂರಲ್ಲಿ ಇವಳೆ… ಮೊದಲು. ಆಮೇಲೆ….ನೂರಾರು ಜನ ಅದರಿಂದ ವಸಿ ಕಾಸು ಮಾಡ್ಕಂದ್ರು.

ನನ್ನ ಮದುವೆ ಆದ ಮೇಲೆ ಒಂದಿನ ಊರಿಗೆ ಹೋಗೋ ದಾರೀಲಿ ರಾಜನ ಹೆಂಡ್ತಿ ಎದುರು ದಿಕ್ಕಲ್ಲಿ ದಿಬ್ಬ ಹತ್ತಿ ಇಳಿವಾಗ ಸಿಕ್ಕಿದ್ಲು. ನಾನು ಬಾಯತುಂಬ ನಕ್ಕು ಖುಶೀಲಿ ಹೋಗಿ ಕೈ ಹಿಡಕಂಡೆ. “ಏನು ಚಿಗವ್ವ? ಎಷ್ಟು ದಿವ್ಸಾಯ್ತು.ನಿನ್ನ ನೋಡಿ.ಗುಡ್ದಕ್ಕೆ ಹೋಗಲ್ವಾ ಈಗ?” ಕೇಳ್ದೆ. “ಗುಡ್ಡ ಎಲ್ಲಿ ಉಳ್ಕಂಡಿತವ್ವಾ? ಕೆರೆ ಆಗೀತೆ…ನಮ್ಮೂರರೆ ಗಲಾಟೆ ಮಾಡ್ಕಂದು ಈಗ ಕೆಲ್ಸ ನಿಲ್ಸಿ ಕಾಯಕ್ಕೆ ಪೋಲಿಸ್ನವರ ಹಾಕವ್ರಂತೆ. ಇನ್ನೂ ಮುಗಿಲಾರ್ದಷ್ಟು ಕಲ್ಲು ನೆಲದೊಳಗೆ ಸೇರ್ಕಂಡೀತೆ ಅಂತರವ್ವ. ನಾವೆ ಒಂದು ಮೂವತ್ತು ವರ್ಶ ಕಲ್ಲು ಒಡ್ದೀವಲ್ಲೆ. ವಡದಷ್ಟೂ ಹೆಚ್ತದೆ ಆ ತಾಯಿ ಸಂಪತ್ತು. ಮಕ್ಕಳ ದುರಾಸೆ ಕಂಡ್ರೂ ಕಾಣದಂಗೆ ಇರ್ತಾಳೆ ನೋಡು ಬಿನ್ನಾಣಗಿತ್ತಿ. ಅವಳನ್ನ,ನಮ್ಮಂಥ ನರ ಮನುಶನ ಕೈಲಿ ಮುಗ್ಸಕೆ ಆದಾದ ಮಗ? ನೀನೆ ಹೇಳು….” ಅಂತ ಅದರ ಖಜಾನೆ ಕಥೆ ಹೇಳ್ತು. ನಿಲ್ಲಕ್ಕಾಗದಿರ ನೋವಲ್ಲೂವೆ ನರಳ್ತಾ,ನಿಧಾ….ನಕ್ಕೆ

“ಅಯ್ಯೊ ನನ ಕಂದ ಚೆನಗಿದಿಯೇನೆ. ಅತ್ತೆ ಮನೇವ್ರು ಒಳ್ಳೆರಂತಲ್ಲ. ಅವ್ವ ಹೇಳ್ತು. ಅಳಿಮಯ್ಯರು ಬರ್ನಿಲ್ವಾ…?” ಅಂತ ವಿಚಾರುಸ್ಕಂಡು ಕಾಲ ತೋರುಸ್ತು. ಕಾಲಿಗೆ ಗ್ಯಾಂಗ್ರಿನ್ ಆಗಿತ್ತು. ನೋಡುದ್ ಕೂಡ್ಲೆ, ಇದು ನಿಲ್ಲೋದಿಲ್ಲ. ಕಪ್ಪಾಗೋಗಿದೆ. ಮೇಲ್ಮುಖನಾಗಿ ಬಂದುಬುಡುತ್ತೆ ಅಂತ ಖಾತ್ರಿ ಆಗಿ, ನಂಗೆ ಗಾಬರಿ ಆಯ್ತು. “ಚಿಗವ್ವಾ,ನೀನು ಡಾಕ್ಟ್ರು ಹೇಳದಂಗೆ ಕೇಳಕಂಡು ವಾಸಿ ಮಾಡ್ಕ.ಹಾಂ.. ಗೊತ್ತಾಯ್ತಾ?”ಎರಡೆರಡು ಸಲ ಹೇಳಿ ಅವಳ ಕಳುಸ್ದೆ.

ಮನೆಯ ಸೂರನ್ನ ತನ್ನ ತೋಳಬಲದಲ್ಲಿ ಎತ್ತಿ ನಿಲ್ಲಿಸಿದ್ದ ಛಲಗಾತಿ ಹೆಣ್ಣು ಈಗ ಮಕ್ಕಳು ಮದುವೆ ಮಾಡಿ, ಕೂತು ಉಣ್ಣೋ ಸಮಯದಲ್ಲಿ ದೇಹ ಅನ್ನೋದೆ ಅವಳಿಗೆ ಕೈ ಕೊಟ್ಟಿತ್ತು. “ಈ ದೇವರಂಥ ಅನ್ನೇಕಾರ ಯಾರಾದ್ರು ಪ್ರಪಂಚದ ಮ್ಯಾಲೆ…. ಇದನಾ?.” ಅವಳು ಕಷ್ಟದ ಕಾಲದಲ್ಲಿ ಯಾವಾಗಲೂ ಆಡ್ತಿದ್ದ ಮಾತು ಆ ಕ್ಷಣಕ್ಕೆ ನೆನಪಾಯ್ತು. ಹಳೆದೆಲ್ಲ ನೆನುಸ್ಕಂಡು ಅವಳು ಮರೆ ಆಗೋವರ್ಗೂ ನಾ ತಿರುತಿರುಗಿ ನೋಡ್ತಲೆ ಇದ್ದೆ.

ಆಗ ಸಣ್ಣದರಲ್ಲಿ, ದೂರದಲ್ಲಿದ್ದರೂ ದೊಡ್ದದಾಗಿ ಕಾಣ್ತಿದ್ದ ಗುಡ್ಡದ ಮೇಲಗಡೆ ಸಾಬರು ಗುಡುಸ್ಲು ಒಂದು ಕಾಣಸ್ತಿತ್ತು. ಅಳಲೆ ಕಾಯಿ ಅಂಟುವಾಳವ ಗುಡ್ದದ ಕಲ್ಲ ಮೇಲೆ ಹರವುಕೊಂಡು ಅವರು ಕಾಯತಿರೋರು.. ರಾತ್ರಿ ಹೊತ್ನಲ್ಲಿ, ಹಚ್ಚಿಟ್ಟ ಲಾಟೀನಿನ ಸಣ್ಣಗೆ ಉರಿಯೊ ಬೆಳಕು ನಮ್ಮೂರಿಂದ ಕಾಣದು. ಚಿಕ್ಕವರಾಗಿದ್ದಾಗ ನಮ್ಮಂಥ ಪ್ಯಾಟೇಯಿಂದ ಬಂದಂಥ ಓದೋ ಮಂಗಗಳನ್ನ, ನಮ್ಮ ದಾಯಾದಿ ಮನೆ ಹೊಟ್ಟೆಕಿಚ್ಚಿನ ಹೆಣ್ಣುಡುಗೀರು, ಕೊಳ್ಳಿದೆವ್ವ ಅಂತ ಹೇಳಿ ಆ ಬೆಳಕ ತೋರಿಸಿ, ನಮ್ಮನ್ನ ನಂಬುಸಿ, ಯಾಮಾರ್ಸರು. ನಾವು ಅದ ನಂಬಕೊಂಡು ರಾತ್ರಿ ಅಂಬ ಕರೆ ಕತ್ತಲ ನಮ್ಮ ಕಣ್ಣಲ್ಲಿ ತುಂಬ್ಸಾಕೆ ಏಳು ಹನ್ನೊಂದು ಆಗಿ.. ಕಷ್ಟ ಪಡತಿದ್ವಿ.

ಅವ್ವನ್ನ ಸೆರಗ ಹಿಡಕೊಂಡು ನಡುದ್ರೂ ಸೈತ, ಗವ್ಗುಡೊ ಕತ್ಲು ಹೆದ್ರುಸೋದು. ಅವ್ವ ಹಿಂದಿರೊದು. ಇಲ್ಲ, ಮುಂದಿರೊದು. ಅವ್ವನ್ನೇ ದಿಕ್ಕು ತಪ್ಪ್ಸಿ ಇನ್ನೂ ಇರೊ ಅಂಥ ಮೂರು ದಿಕ್ಕಿಂದ ಈ ಕೊಳ್ಳಿ ದೆವ್ವ ಏನಾರ…. ಬಂದ್ರೆ ಎನ್ ಮಾಡೋದು?…….. ಇನ್ನೂ ಗಟ್ಟಿಯಾಗಿ.. ಹಿಡುದ ಸೆರಗ.. ಕೈ ಬಿಡ್ತಿರಲಿಲ್ಲ. ನಾವು ಹಿಂಗೆ ಹೆದ್ರುಕೊಳ್ಳದ ನೋಡಿದ್ದೆಯ, ಆ ಹುಡ್ಗೇರು ನಮ್ಮ ಕಡೆಗೆ ಒಂದು ಕುಹಕದ ಅಡ್ಡ ನಗೆಯ ಬಿಸಾಡರು.

hands“ಹೆದ್ರಿ ಉಚ್ಚೆ ಹುಯ್ಕೋತವೆ. ಕಾರ್ಮೆಂಟಲಿ ಇದೆಯ ಕಲ್ಸಿರದು” ಅನ್ನರು.ಅವ್ರ ಅಡ್ಡ ಮಾತು ನಮಗೆ ಅರ್ಥ ಆಗ ಅಷ್ಟರಲ್ಲಿ ಬೆಳಕು ಚಾವಡಿ ತುಂಬಲು ಕಾಯ್ತಿರೊ ಹಾಲಂಗೆ ಹರಿದು, ಬೆಚ್ಚಗಾಗ್ತಿರೊ ಬಿಸಲಲ್ಲಿ ಕೆನೆಗಟ್ಕತಿರದು. ಬೆಳುಗ್ಗೆ ಎದ್ದಾಗ ಹೆದ್ರಿಕೆ, ಮರ್ತು ಹೋಗಿರೋದು. ನಮ್ಮಪ್ಪ ನಮ್ಮಗಳನ್ನ ಪ್ಯಾಟೆಗೆ ಹೊರುಡುಸೋ ಗಡಿಬಿಡಿಲೆ ಮುಂದ್ಗಡೆ ಮೆಟ್ಲ ಮೇಲೆ ನಿಂತ್ಕಂಡು, ದಿನಕರನಿಗೆ ಕೈ ಮುಗಿತಿರದು.”ಓ.. ಅಪ್ಪ, ಎದ್ದು ಮುಖ ತೊಳ್ದು ಹೊರ್ಡತಾ.. ಈತೆ ಆಗಲೇ” ಅಂತವ, ಊರು ಅನ್ನದ ದೂರ ಮಾಡೋ ಬೇಜಾರಲ್ಲಿ ನಾವು ಮಕ್ಕಳು ಬಚ್ಚಲು ಮನಿಗೆ ಕಾಲೆಳೆಕೋಂಡು.. ಹೋಗತಿದ್ವಿ.. ಸಧ್ಯಕ್ಕೆ ಕೊಳ್ಳಿದೆವ್ವದ ಕಾಟದಿಂದಂತೂ ತಪ್ಪುಸ್ಕಳತಿದ್ವಿ.

ಹಿಂಗೆ, ವರುಶ ಅನ್ನವು ಗಾಡಿ ಚಕ್ರದಂಗೆ ಉರುಳಿ ಉರುಳಿ, ನಮ್ಮೂರಿನ ಕಲ್ಲುಗುಡ್ಡ ಅನ್ನದು ಕರಗಿ, ನೀರಾಗಿ, ಕೆರೆಯಾಗಿ ಕಲ್ಲ ಚಪ್ಪಡಿಲಿ ಮುಖ ಕಾಣ ಹಂಗೆ ಕನ್ನಡಿಯಂಥ ತಿಳಿನೀರ ಕೊಳವಾಗಿ ಉಳಿದು ಹೋಗಿದೆ. ಅದು ನಮ್ಮೂರ ಭಾರೆ ಮೇಲೆ ಇರದ್ರಿಂದ ಯಾವ ಗಲೀಜು ಗೊಸ್ರು ಅದಕ್ಕೆ ಸೇರದಿಲ್ಲ.

ನಮ್ಮೂರ ಒನಕೆ ಓಬವ್ವ ಸತ್ತು ಸ್ವರ್ಗ ಸೇರಿ ಕಣ್ಮರೆಯಾದ್ರೂವೆ, ಸಿನಿಮಾದಲ್ಲಿ ಜಯಂತಿ ಪಾತ್ರ ಉಳ್ಕಂದಂಗೆ ನನ್ನ ಮನಸಿನ ಮುಂದೆ ಆಗಾಗ ಸುತ್ತಿಗೆ ಹೊತ್ತ ಅವಳ ಎತ್ತರದ ಛಾಯೆ, ಆಗ ಇದ್ದ ಗುಡ್ಡದ ಕಡೆಗೆ, ನಡಕೊಂಡು ಹೋಗ್ತಾ ಇರತ್ತೆ. “ಹೆಂಗಿದಿಯಾ? ನನ್ ಚಿನ್ನ.. ಮಗ ಯಾವಾಗ ಬಂದ್ಯೆ?” ಅಂತ ಬಾಯ್ತುಂಬ ಕೇಳ್ತಲೆ ಕಲ್ಮಶವಿಲ್ಲದ ನಗೆ ನಕ್ಕು ಲಕ್ಷಣವಾದ ಮುಖ ತೋರುಸಿ ಮರೆಯಾಗುತ್ತೆ.

‍ಲೇಖಕರು Admin

October 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

7 ಪ್ರತಿಕ್ರಿಯೆಗಳು

  1. Sarojini Padasalagi

    ನಿಜಕ್ಕೂ ಮನ ಮಿಡಿಯುವ ಚಿತ್ರಣ .ಕ್ಷಮಯಾ ಧರಿತ್ರಿ , ಕಾರ್ಯೆಷು ದಾಸಿ ಅನ್ನೋದನ್ನ ಸಿದ್ಧ ಮಾಡಿದ್ದಾಳೆ ನಿಮ್ಮ ,’ರಾಜನ ಹೆಂಡ್ತಿ ‘ ,ಶೋಷಿತ ವರ್ಗದ ಪ್ರತಿನಿಧಿ , ಅವರ ನೋವಿಗೆ ಧ್ವನಿಯಾಗಿದ್ದಾಳೆ .ಇಷ್ಟೆಲ್ಲಾ ಆದರೂ ಇನ್ನೂ ಹೆಣ್ಣೆಂದು ಹೀಗಳೆಯುವುದು ತಪ್ಪಿಲ್ಲವಲ್ಲಾ ? ನಮ್ಮ ಸಮಾಜ ತನ್ನ ನಿಲುವು ಬದಲಿಸೀತೆ ? ಬಂದೀತಾ ಆ ಕಾಲ ?

    ಪ್ರತಿಕ್ರಿಯೆ
  2. Anonymous

    ರಾಜನ ಹೆಂಡ್ತಿ ಬಹುಕಾಲ ಮನಸ್ಸಿನಲ್ಲಿ ಉಳಿಯುವಂತಿದೆ ಅವಳ ಚಿತ್ರಣ …
    ಚೆನ್ನಾಗಿದೆ ಸುಜಾತ.

    ಪ್ರತಿಕ್ರಿಯೆ
  3. Vijay Hanakere

    “ಈ ದೇವರಂಥ ಅನ್ನೇಕಾರ ಯಾರಾದ್ರು ಪ್ರಪಂಚದ ಮ್ಯಾಲೆ…. ಇದನಾ?.”

    illi annekara andre enu… Sujatakka… ??

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: