ಪಿಂಕ್ ಚಿತ್ರದಲ್ಲೂ ಉತ್ತರಗಳಿಲ್ಲ!

ಹಾರುವ ಚಿಟ್ಟೆಯ ರೆಕ್ಕೆ ಮೇಲೆ ಕಲ್ಲು ಇಟ್ಟವರಾರು..

rajeev narayan nayakರಾಜೀವ ನಾರಾಯಣ ನಾಯಕ

ಹೆಣ್ಣು ಬದಲಾಗಿದ್ದಾಳೆ. ಅವಳ ಆಯ್ಕೆಗಳೂ ಬದಲಾಗಿವೆ. ಅವಳ ಯೋಚನೆಗಳು ಮತ್ತು ‘ವೇ ಆಫ್ ಲೈಫ್’ ಕೂಡ ಬದಲಾಗಿವೆ. ಇನ್ನೂ ಬದಲಾಗದಿರುವುದು ಈ ಸಮಾಜದ ಫ್ಯೂಡಲ್ ಮನಸ್ಥಿತಿ. ಹೀಗಾಗಿಯೇ ಬದಲಾವಣೆ ಮತ್ತು ಯಥಾಸ್ಥಿತಿಗಳ ನಡುವೆ ಸದಾ ಸಂಘರ್ಷ ಉಂಟಾಗುತ್ತಿದೆ. ಈ ಸಂಘರ್ಷವನ್ನು ಎದುರಿಸಬೇಕಾದ, ಅದನ್ನು ಮೀರಿ ತನ್ನ ನೈಜ ಅಸ್ಮಿತೆಯನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಸ್ತ್ರೀಶಕ್ತಿಗೆ ದೊಡ್ಡ ಸವಾಲಾಗಿದೆ.

pink-brushಇಂಥದ್ದೇ ಒಂದು ಸಂಘರ್ಷವನ್ನು ಕೇಂದ್ರವಾಗಿಟ್ಟುಕೊಂಡು ಪರಿಣಾಮಕಾರಿಯಾಗಿ ಚಿತ್ರಿಸಿರುವ ‘ಪಿಂಕ್ ‘ ಎಂಬ ಹಿಂದಿ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದೆ. ಸಾಮಾನ್ಯ ಹಿಂದಿ ಚಿತ್ರಗಳಲ್ಲಿರುವ ಹಾಡು, ಕುಣಿತ, ಫೈಟ್ಸ್, ಸೆಂಟಿಮೆಂಟ್ಸ್ ಜಾಡಿನಿಂದ ಭಿನ್ನವಾಗಿರುವ ಈ ಚಿತ್ರವನ್ನು ಅನಿರುದ್ಧ ರಾಯ್ ಚೌಧುರಿ ಅತ್ಯುತ್ತಮವಾಗಿ ನಿರ್ದೇಶಿಸಿದ್ದಾರೆ.

ಚಿತ್ರದ ಕಥೆ ಸುತ್ತುವುದು ಒಂದು ಚಿಕ್ಕ ಘಟನೆಯ ಕೇಂದ್ರದಲ್ಲಿ. (ಅವಧಿಯಲ್ಲಿ ಸಂಧ್ಯಾರಾಣಿ ಮತ್ತು ಗಿರಿಜಾ ಶಾಸ್ತ್ರಿಯವರು ಈಗಾಗಲೇ ಚಿತ್ರವನ್ನು ಸಾಕಷ್ಟು ವಿವರವಾಗಿ ಮತ್ತು ಅರ್ಥಪೂರ್ಣವಾಗಿ ವಿಶ್ಲೇಷಿಸಿರುವುದರಿಂದ ಮತ್ತೆ ದೀರ್ಘಗೊಳಿಸುವ ಅಗತ್ಯವಿಲ್ಲ.)

ಮೀನಲ್, ಫಲಕ್ ಮತ್ತು ಆಂಡ್ರೆ ಎಂಬ ಮೂವರು ಭಿನ್ನ ವೃತ್ತಿಯಲ್ಲಿರುವ ಮಹಿಳೆಯರು ದಕ್ಷಿಣ ದೆಹಲಿಯ ಏರಿಯಾದಲ್ಲಿ ಅಪಾರ್ಟಮೆಂಟ್ ಬಾಡಿಗೆ ಹಿಡಿದು ಒಂದೇ ಕಡೆ ವಾಸಿಸುತ್ತಿರುತ್ತಾರೆ. ಬೇರೆ ಬೇರೆ ಪ್ರದೇಶದ ಮೂವರೂ ಬೇರೆ ಬೇರೆ ಕಷ್ಟ ಸುಖ ಉಳ್ಳವರು. ಅವರನ್ನು ಬೆಸೆಯುವ ಅಂಶ: ದುಡಿಮೆ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ. ಅವರಿಗೆ ಗೆಳೆಯರಿದ್ದಾರೆ. ಆಗಾಗ ಪಾರ್ಟಿಗೂ ಹೋಗುತ್ತಾರೆ. ಚೂರು ಗುಂಡು ಹಾಕಲೂ ಹಿಂಜರಿಯುವುದಿಲ್ಲ.

ಒಂದು ತಡರಾತ್ರಿಯಲ್ಲಿ ಈ ಹುಡುಗಿಯರು ಗೆಳೆಯರಂತಿದ್ದ ಮೂವರು ಡ್ಯೂಡ್‌ಗಳ ಜೊತೆಗೆ ರಾಕ್ ಶೋ ಮುಗಿಸಿ ಒತ್ತಾಯಕ್ಕೆ ಅವರೊಡನೆ ಡಿನ್ನರ್‌ ಗೆ ಹೋಗುತ್ತಾರೆ. ಒಂದೆರಡು ಸುತ್ತು ಡ್ರಿಂಕ್ಸ್ ಕೂಡ ಆಗುತ್ತದೆ. ಗುಂಪಿನಲ್ಲಿದ್ದ ರಾಜವೀರ್ ಎನ್ನುವ ಕೊಬ್ಬಿನ ಹುಡುಗನ ತಲೆಯಲ್ಲಿ “ಬಾರ್‌ಗೆ ಬಂದವಳು ಬೆಡ್‌ಗೆ ಬಾರದಿರುವಳೇ!” ಎನ್ನುವ ಹುಳ ತೆವಳಾಡುತ್ತದೆ. ಹೋಟೆಲ್ ರೂಮಿನಲ್ಲಿ ಆತ ಮೀನಲ್ ಎನ್ನುವ ಹುಡುಗಿಯ ಮೈಕೈ ಮುಟ್ಟುತ್ತಾ ಅವಳನ್ನು ಅತಿಕ್ರಮಿಸುತ್ತಾನೆ.  “ಬೇಡ! ಹಾಗೆಲ್ಲ ಮಾಡಬೇಡ, ನಂಗಿಷ್ಟವಿಲ್ಲ’ ಎಂದು ಆತನನ್ನು ದೂರ ತಳ್ಳಿದರೂ ಬಲವಂತ ಮಾಡಿದಾಗ ಅವಳು ಬಿಯರ್ ಬಾಟಲಿನಿಂದ ಅವನ ತಲೆಗೆ ಇಕ್ಕುತ್ತಾಳೆ. ಆ ಪೆಟ್ಟು ಕಣ್ಣಿನ ಸಮೀಪವೇ ಬಿದ್ದು ರಕ್ತದೋಕುಳಿಯಾಗುತ್ತದೆ. ಕೈಮೀರಿದ ಪರಿಸ್ಥಿತಿಯಿಂದ ಎಲ್ಲರೂ ಕಂಗಾಲಾಗುತ್ತಾರೆ. ಮೂವರೂ ಹುಡುಗಿಯರು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಅಲ್ಲಿಂದ ಅವರ ನಾರ್ಮಲ್ ಬದುಕು ಉಧ್ವಸ್ಥಗೊಳ್ಳುತ್ತದೆ.

ತಲೆಗೆ ಬಿದ್ದ ಪೆಟ್ಟು ಗುಣವಾದರೂ ಪುರುಷ ಅಹಂಕಾರಕ್ಕೆ ಆದ ಗಾಯ ಮಾಣುವುದಿಲ್ಲ. ಹುಡುಗರು ಈ ಹುಡುಗಿಯರ ಹಿಂದೆ ಬಿದ್ದು ಇಲ್ಲದ ಕಿರುಕುಳ ನೀಡುತ್ತಾರೆ. ತಮ್ಮಶ್ರೀಮಂತಿಕೆ, ಹಣದ ಬಲ ಮತ್ತು ಅಧಿಕಾರಸ್ಥರ ಸಂಪರ್ಕದಿಂದ ಇವರ ಮೇಲೆ ವೇಶ್ಯಾವಾಟಿಕೆಯ ಆರೋಪ ಹೊರಿಸಿ ಕೊಲೆ ಪ್ರಯತ್ನದ ಸುಳ್ಳು ಕೇಸು ದಾಖಲಿಸುತ್ತಾರೆ. ತಲೆಗೆ ಇಕ್ಕಿದ ಹುಡುಗಿ ಮಿನಾಲ್ ಳನ್ನು ಬಂಧಿಸಿ ಜೈಲಿಗಟ್ಟಲಾಗುತ್ತದೆ. ಫಲಕ್ ಳನ್ನು ಕೆಲಸದಿಂದ ವಜಾಗೊಳ್ಳುವಂತೆ ಮಾಡಲಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಇವರು “ದಂಧೆ’’ ನಡೆಸುವವರು ಎಂದು ಬಿಂಬಿಸಿ ಅವರನ್ನು ಮಾನಸಿಕವಾಗಿ ಜರ್ಜರಗೊಳ್ಳುವಂತೆ ಮಾಡಲಾಗುತ್ತದೆ. ಅಕ್ಕಪಕ್ಕದವರು ಅಪಾರ್ಟಮೆಂಟಿನ ಸುತ್ತಲಿನವರು ಸಮಾಜ ಇವರನ್ನು ಕಾಣುವ ದೃಷ್ಟಿ ಬದಲಾಗುತ್ತದೆ. ಅಧಿಕಾರ ಕೇಂದ್ರಿತ  ವ್ಯವಸ್ಥೆ ಹೇಗೆ ಸಾಮಾನ್ಯ ಮನುಷ್ಯ ಚೇತನವನ್ನು ಹೊಸಕಿಹಾಕಬಲ್ಲದು ಎನ್ನುವುದು ಭಯಾನಕ ಸ್ವರೂಪದಲ್ಲಿ ತೆರೆದುಕೊಳ್ಳುತ್ತದೆ.

ಆದರೆ ಇದೇ ರೋಗಗ್ರಸ್ಥ ವ್ಯವಸ್ಥೆಯಲ್ಲೂ ಅಸಹಾಯಕರನ್ನು ಕೈಹಿಡಿದು ರಕ್ಷಿಸಬಲ್ಲ ಶಕ್ತಿಗಳಿರುತ್ತವೆ. ಅಂಥ ಒಂದು ಆಶಾಕಿರಣವಾಗಿ ಬರುವವನು ಹತ್ತಿರದಲ್ಲೇ ಇದ್ದು ದೂರದಲ್ಲೆ ಎಲ್ಲವನ್ನೂ ಗಮನಿಸುತ್ತಿರುವ ದೀಪಕ್ ಸೆಹಗಲ್ ಎನ್ನುವ ವೃದ್ಧ ವಕೀಲ. ಮರೆವಿನ ಕಾಯಿಲೆಯಿರುವ ನಿವೃತ್ತ ವಕೀಲ ಈ ಹೆಣ್ಣುಮಕ್ಕಳ ಪರವಾಗಿ ಕೋರ್ಟಿನಲ್ಲಿ ಸಮರ್ಥ ವಾದ ಮಂಡಿಸಿ ನ್ಯಾಯ ಒದಗಿಸಿಕೊಡುತ್ತಾನೆ.

pink flowersಈ ವಕೀಲನ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ತಮ್ಮ ಎಂದಿನ ಅಮೋಘ ಅಭಿನಯದಿಂದ ಮತ್ತು  ಹೃದಯವನ್ನೇ ತಮ್ಮ ಕಂಚಿನ ಕಂಠಕ್ಕೆ ತಂದು ಹೇಳುವ ಡೈಲಾಗ್‌ಗಳಿಂದ ನವಿರೇಳಿಸುತ್ತಾರೆ. ಕಾನೂನಿನ ವ್ಯಾಖ್ಯಾನಗಳಿಂದ ಶುಷ್ಕಗೊಳ್ಳಬಹುದಾಗಿದ್ದ ಮಾತುಗಳನ್ನು ಅಮಿತಾಬ್ ಮನುಷ್ಯ ಭಾವನೆಗಳಲ್ಲಿ ಅದ್ದಿಸಿ ಸಜೀವಗೊಳಿಸುತ್ತಾನೆ. ಕಣ್ಣಿಲ್ಲ ಎಂದು ಹೇಳಲಾಗುವ ಕಾನೂನಿಗೆ ಹೃದಯವನ್ನೂ  ಕೊಡುತ್ತಾನೆ!

ಸವಾಲು ಪಾಟೀ ಸವಾಲಿನಲ್ಲಿ ಹೆಣ್ಣು- ಹೆಣ್ಣಿನ ಸ್ವಾತಂತ್ರ್ಯ-ಹೆಣ್ಣಿನ ಆಯ್ಕೆಗಳು- ಹೆಣ್ಣಿನ ಶೀಲವನ್ನು ನಿರ್ಧರಿಸುವ ಫ್ಯೂಡಲ್ ಮನಸ್ಸುಗಳು-ಇವೆಲ್ಲವೂ ಕಾನೂನು ಮತ್ತು ಮನೋಭಾವಗಳ ಕತ್ತಿಯ ಅಲುಗಿನಲ್ಲಿ ಚಕಮಕಿಗೊಳ್ಳುತ್ತವೆ. ಹೊಸ ಕಿಡಿಗಳು ಹೊಳೆಯುತ್ತವೆ.  ಗಂಡು ತಡ ರಾತ್ರಿಯಲ್ಲಿ ಅಡ್ಡಾಡುವುದು, ಡ್ರಿಂಕ್ಸ್ ಮಾಡುವುದು ಮಾನ್ಯ. ಅದೇ ಹೆಣ್ಣು ಹಾಗೆ ಮಾಡಿದರೆ ಅದು ಅವಳ ಚಾರಿತ್ರ್ಯದ ಮೇಲಿನ ವ್ಯಾಖ್ಯಾನ! ಅಂಥ ಹೆಣ್ಣುಗಳನ್ನು ಸುಲಭದಲ್ಲಿ “ಲಭ್ಯ” ವಾಗುವರೆಂದು ತೀರ್ಮಾನ! ಡಬಲ್ ಸ್ಟ್ಯಾಂಡರ್ಡ್ ಅಂದರೆ ಇದೇ ಅಲ್ಲವೇ!

ಬೇಕು ಬೇಡಗಳು- ಲೈಂಗಿಕತೆಯನ್ನೂ ಒಳಗೊಂಡು- ಎಲ್ಲವೂ ಹೆಣ್ಣಿನ ಆಯ್ಕೆಗೆ ಬಿಟ್ಟಿದ್ದು. ಅವಳು “ಬೇಡ” ಅಂದರೆ ಬೇಡ ಅಂತಾನೇ ಅರ್ಥ. “ನೋ’’ ಎನ್ನುವುದು ಒಂದು ಶಬ್ದ ಮಾತ್ರವಲ್ಲ. ಅದು ಪೂರ್ತಿ ಅರ್ಥವಿರುವ ಒಂದು ವಾಕ್ಯ. ಅದರಲ್ಲಿಯ ಭಾವಾರ್ಥ ಮತ್ತು  ವಾಕ್ಯಾರ್ಥ ಒಂದೇ! ಅದನ್ನು ಗೌರವಿಸಬೇಕಾದದ್ದು ಪುರುಷರ, ಈ ಸಮಾಜದ ಕರ್ತವ್ಯ.ಇಂದಿನ ಜರೂರು ಕೂಡ…ಇಂಥ ಸಂದೇಶವನ್ನು ಚಿತ್ರದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಮಂಡಿಸಲಾಗಿದೆ.

ಚಿತ್ರದ ಹೈಲೈಟ್ ಅಂದರೆ ರಿತೇಶ್ ಶಾ ಬರೆದಿರುವ ತಟ್ಟುವ ಡೈಲಾಗುಗಳು. ಅಮಿತಾಬ್ ತಮ್ಮ ಅದ್ಭುತ ಧ್ವನಿಯಲ್ಲಿ ಆ ಡೈಲಾಗುಗಳನ್ನು ನೇರ ನಮ್ಮೆದೆಗೇ ಮುಟ್ಟಿಸುತ್ತಾರೆ. ತಮ್ಮ ಅಭಿನಯದಿಂದಾಗಿ ಚಿಕ್ಕ ಚಿಕ್ಕ ಪಾತ್ರಗಳೂ ನೆನಪುಳಿಯುತ್ತವೆ. ವಿಶೇಷವಾಗಿ ಅಪರಾಧಿ ಹುಡುಗರ ಪರವಾಗಿ ವಾದಿಸುವ ವಕೀಲನ ಪಾತ್ರದಲ್ಲಿ ಪಿಯುಶ್ ಮಿಶ್ರಾ, ಮೀನಲ್ ಪಾತ್ರದಲ್ಲಿ ತಾಪಸಿ ಪನ್ನು, ರಾಜವೀರ್ ಪಾತ್ರದಲ್ಲಿ ಅಂಗದ ಬೇಡಿ ಅವನ ಗೆಳೆಯನ ಪಾತ್ರದಲ್ಲಿ ವಿಜಯ ವರ್ಮಾ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ಹಿನ್ನಲೆ ಸಂಗೀತ ಹಿತವಾಗಿದೆ.

ಕೋರ್ಟಿನ ಸವಾಲು ಮತ್ತು ಪಾಟೀಸವಾಲುಗಳ ನಡುವೆ ಅಮಿತಾಬ್ ಆರೋಪಿ ಮಿನಾಲಳನ್ನು “ನೀನು ಇನ್ನೂ ಕನ್ಯೆಯಾ?” ಎಂದು ಕೇಳುತ್ತಾನೆ. ಅದಕ್ಕೆ ಮಿನಾಲ್ “ಇಲ್ಲ” ಎಂದು ಉತ್ತರಿಸುವ ಹಿಮ್ಮತ್ತನ್ನು ತೋರುತ್ತಾಳೆ. ಹತ್ತೊಂಬತ್ತನೆ ವಯಸ್ಸಿನಲ್ಲಿ ತನ್ನ ಗೆಳೆಯನೊಂದಿಗೆ ಸಹಮತದಿಂದ ದೈಹಿಕವಾಗಿ ಒಂದಾಗಿದ್ದನ್ನು ತುಂಬಿದ ಕೋರ್ಟಿನಲ್ಲೇ ಹೇಳುತ್ತಾಳೆ. ಇದು ಹೆಣ್ಣಿನ ಸ್ವತಂತ್ರ ಮನೋಭಾವ, ಅವಳ ಲೈಂಗಿಕ ಆಯ್ಕೆ ಮತ್ತು ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧದ ಗಟ್ಟಿ ಧ್ವನಿಯಾಗಿ ಉಳಿಯುತ್ತದೆ.

ರಾಜಕೀಯ ಒತ್ತಡ, ಸುಳ್ಳು ಸಾಕ್ಷಿಗಳು, ತಿದ್ದಿದ ದಾಖಲೆಗಳ ನಡುವೆಯೂ ಸಮರ್ಥ ವಾದ ಮಂಡನೆಯ ಕಾರಣಕ್ಕೆ ಹುಡುಗಿಯರು ಆರೋಪ ಮುಕ್ತರಾಗುತ್ತಾರೆ. ಕೋರ್ಟು ಹುಡುಗರನ್ನು ಅಪರಾಧಿಗಳೆಂದು ತೀರ್ಪು ನೀಡುತ್ತದೆ. ಹುಡುಗಿಯರಿಗೆ ನ್ಯಾಯ ದೊರೆತ ಬಗ್ಗೆ ಖುಶಿಯಾದರೂ ಆ ಹುಂಬ ಹುಡುಗರ ಬಗ್ಗೆ ಒಂದು ಕ್ಷಣ ಅಯ್ಯೋ ಅನಿಸಿದರೆ ಅದು ಅವರ ಕೃತ್ಯದ ಸಮರ್ಥನೆ ಅಲ್ಲ.

ಎಷ್ಟೆಂದರೂ ಅವರು ನಮ್ಮ ಪಿತೃಪ್ರಧಾನ ವ್ಯವಸ್ಥೆಯ ಪಿಂಡಗಳು.  ಪುರುಷ ಅಹಂಕಾರ, ದೌರ್ಜನ್ಯ  ತಲೆಮಾರುಗಳಿಂದ ಅವರಲ್ಲಿ ದಾಟಿ ಬಂದಿದೆ. ಆಧುನಿಕ ಶಿಕ್ಷಣಕ್ಕೂ ಕೂಡ ಅವರ ಫ್ಯೂಡಲ್ ಮನೋಭಾವವನ್ನು ಬದಲಿಸಲು ಸಾಧ್ಯವಾಗಿಲ್ಲವಾದರೆ ನಾವು ಎಲ್ಲಿ ತಪ್ಪುತ್ತಿದ್ದೇವೆ? ಶತಮಾನಗಳಿಂದ ಬಂದ ವ್ಯವಸ್ಥೆಯನ್ನು ತಿದ್ದುವ, ಅದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸುವ ದಾರಿ ಯಾವುದು? ಇಂಥ ಪ್ರಶ್ನೆಗಳಿಗೆ ಪಿಂಕ್ ಚಿತ್ರದಲ್ಲೂ ಉತ್ತರಗಳಿಲ್ಲ!

‍ಲೇಖಕರು Admin

October 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Prakash Nayak

    ಲೇಖನ ತುಂಬಾ ಚೆನ್ನಾಗಿದೆ, ಇನ್ನೊಮ್ಮೆ ಸಿನೇಮಾದಲ್ಲಿನ ಹಲವು ಸಂಗತಿಗಳನ್ನು ನೆನಪಿಸಿತು. ಇಂತಹ ಚರ್ಚೆಗಳು ಸಿನೇಮಾದ ಧೋರಣೆ ಮನಸ್ಸಿನೊಳಕ್ಕೆ ಇಳಿಯಲು ಸಹಾಯಕಾರಿ. ನನಗೂ ಸಿನೇಮಾದ ಒಟ್ಟೂ ಧೋರಣೆ ಹಿಡಿಸಿತು, ಆದರೆ ವಿವರಗಳು ಸಿನಿಮೀಯವಾಗಿವೆ. ಮೂವರಿಗೂ ಒಮ್ಮಿಂದೊಮ್ಮೆಲೇ ಶಿಕ್ಷೆ ಕೊಡುವ ಮೊದಲು, ಅವರನ್ನೂ ಅರೋಪಿಗಳನ್ನಾಗಿ ಘೋಷಿಸಿ, ವಿಚಾರಣೆ ನಡೆಸಬೇಕಿತ್ತಲ್ಲವೇ? ಸಾಕ್ಷಿ ಹೇಳಲು ಬಂದವನನ್ನೂ ಆರೋಪಿಯನ್ನಾಗಿ ಮಾಡದೇ ಶಿಕ್ಷಿಸುವುದು ನಿರ್ದೇಶಕ, ನೋಡುಗರ ಆಶಯ ಮಾತ್ರವಾದೀತು, ಕಾನೂನು ರೀತ್ಯಾ ಸರಿಯಾಗಿರಲಿಕ್ಕಿಲ್ಲ. ಇನ್ನು ಸಮಾಜ, ಮಾಧ್ಯಮ, ಪೋಲೀಸ್ ಮತ್ತು ಕೋರ್ಟ್ ನಡವಳಿಕೆಗಳು ಸಿನೇಮಾದಲ್ಲಿ ತೋರಿಸಿದ್ದಕ್ಕಿಂತಲೂ ನಿಜದಲ್ಲಿ ಇನ್ನಷ್ಟು ಕೆಟ್ಟಿವೆ, ಅನ್ನುವುದು Quantitative ಸುಳ್ಳು ಎಂದು ಸಹಿಸಿಕೊಳ್ಳಬಹುದು.
    ಮುಖ್ಯವಾಹಿನಿಯಲ್ಲಿ ಬಂದ ಒಳ್ಳೆಯ ಸಿನೇಮಾ, ಎತ್ತಿರುವ ಪ್ರಶ್ನೆ ಮತ್ತು ಕೊಟ್ಟಿರುವ ಉತ್ತರ ಎರಡೂ ಸಮಂಜಸ, ಸಕಾಲಿಕ.

    ಪ್ರತಿಕ್ರಿಯೆ
    • ರಾಜೀವ ನಾಯಕ

      ಚಿತ್ರದಲ್ಲಿ ಕೆಲವು ಎಳಸು ದ್ರಶ್ಯಗಳನ್ನು, ಕಾನೂನು ರೀತ್ಯಾ ಸರಿಯಲ್ಲದ ನಿರ್ಣಯಗಳನ್ನು ತಪ್ಪಿಸಬಹುದಿತ್ತು. ಒಂದು ಉತ್ತಮ ಪ್ರಯತ್ನದ ಚಿತ್ರದಲ್ಲಿ ಇಂಥ ಸಿಲ್ಲೀ ಮಿಸ್ಟೇಕುಗಳು ಇರಬಾರದಿತ್ತು. ಸೂಕ್ಷ್ಮ ಗ್ರಹಿಕೆಗಳ ಮೂಲಕ ಪ್ರತಿಕ್ರಿಯಿಸಿದ್ದಕ್ಕಾಗಿ ಥ್ಯಾಂಕ್ಸ್ ಪ್ರಕಾಶ್!

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: