‘ಸಿಂಧೂರಿ’ ಸಮಷ್ಠಿ ದರ್ಶನದಲ್ಲಿ ಸಮಕಾಲೀನತೆ ಬಿಂಬಿಸುವ ಕೃತಿ

ಪ್ರಕಾಶ್‌ ಕೊಡಗನೂರ್

ಪು ತಿ ನರಸಿಂಹಾಚಾರ್ಯರ ‘ಸಮಷ್ಟಿದರ್ಶನರಹಿತರೆಕೃಪಣರು’ ಕವಿವಾಣಿಯಂತೆ ಗೋಚರಿಸುವ ಪ್ರಗತಿಪರಚಿಂತಕ, ವಿಮರ್ಶಕ ಡಾ. ಭೈರಮಂಗಲ ರಾಮೇಗೌಡರ ‘ಸಿಂಧೂರಿ’ ಕಥಾ ಸಂಕಲನ ‘ಪ್ರೀತಿಯ ಹುಡುಗ ಮೋಸದ ಹುಡುಗಿ’ ಕಥಾ ಶೀರ್ಷಿಕೆಯಿಂದ ನನ್ನಿಂದ ಆಕರ್ಷಿತವಾಗಿ ಓದಿನಲ್ಲಿ ಪೂರ್ಣಗೊಂಡ ಕೃತಿ.

ಕಥೆಯಲ್ಲಿ ಲೇಖಕರು ಪ್ರಸ್ತಾಪಿಸಿರುವಂತೆ ನಾನು ಕೂಡ ಆಟೋ ಹಿಂದಿನ ಬರಹಗಳಿಂದ ಸೆಳೆಯಲ್ಪಟ್ಟವನೇ! ನಿತ್ಯದ ಸಹಜ ಕುತೂಹಲದಿಂದ ಪ್ರಯಾಣಿಸುವ ಸಂದರ್ಭದಲ್ಲಿ ಆಟೋದೆಡೆ ಕಣ್ಣು ಹಾಯಿಸುವ ಲೇಖಕರು ಅದರ ಹಿಂದಿನ ಬರಹಕ್ಕೆಆಟೋದವನ ಬಳಿ ಕಾರಣವನ್ನು ಕೇಳಿದಾಗ ಕಥೆ ಬಿಚ್ಚಿಕೊಳ್ಳುತ್ತದೆ.

ಒಂದು ನಿಗೂಢತೆಯಿಂದ ಮತ್ತೊಂದು ನಿಗೂಢತೆಯತ್ತ ಸಾಗುವ ಕಥೆಯು ಸಹಜ ನಿರೂಪಣಾ ಶೈಲಿಯಿಂದ ಓದಿಸಿಕೊಳ್ಳುತ್ತ ಅಂತಿಮವಾಗಿ ಆಟೋದವನ ಮನೋಸ್ಥಿತಿಯಿಂದ ‘ಪುರುಷರೇ ಚಾಲಕರಾಗಿರುವುದರಿಂದ ಲಾರಿ, ಆಟೋ, ಟ್ಯಾಕ್ಸಿಗಳ ಹಿಂಬದಿಯಲ್ಲಿ ಹೆಣ್ಣನ್ನು ವಂಚಕಿ ಎಂದು ಬಿಂಬಿಸುವ ಮಾತುಗಳು ಕಠೋರ ಸತ್ಯವೆಂಬಂತೆ ರಾರಾಜಿಸುವ ಕಹಿಸತ್ಯವನ್ನು ಬಯಲಿಗೆಳೆದು ಒಂದು ವೇಳೆ ಹೆಂಗಸರೇ ಚಾಲಕರಾಗಿದ್ದಿದ್ದರೆ ಗಂಡಸರ ಕಪಟ, ವಂಚನೆಗಳನ್ನು ಕುರಿತು ಮತ್ತಿನ್ನೆಂಥ ಕಹಿಸತ್ಯಗಳು ಸ್ಫೋಟಗೊಳ್ಳುತ್ತಿದ್ದವೋ’ ಎಂಬ ತಾರ್ಕಿಕ ಆಲೋಚನೆಯೊಂದನ್ನು ಓದುಗನಿಗೆ ದಾಟಿಸುವ ಜಾಣ್ಮೆ ಪ್ರದರ್ಶಿಸುತ್ತಾರೆ.

ಇನ್ನು ಈ ಸಂಕಲನದ ‘ಆತಿಥ್ಯ’ ನನಗಿಷ್ಟವಾಗುವ ಮತ್ತೊಂದು ಕಥೆ. ಕಥೆಯಲ್ಲಿನ ನೋಡಬಾರದ, ಆದರೆ ನೋಡಬೇಕೆಂದು ಮನ ಒತ್ತಾಯಿಸುವ ದೃಶ್ಯ… ವಿವೇಕ ಗೆಲ್ಲಲಾಗಲಿಲ್ಲ… ನನಗೊಂದು ಮಗು ಬೇಕು, ನಿಮ್ಮಂತೆ ಮುದ್ದಾದ ಮಗು, ಪ್ಲೀಸ್… ಮಾತುಗಳು ಸಾಂದರ್ಭಿಕತೆಯ ಸಾಚಾತನದೊಂದಿಗೆ ನಾಗರೀಕ ಜಗತ್ತಿನ ಶುಷ್ಕ ಆದರ್ಶೀಯ ನೆಲೆಗಟ್ಟನ್ನು ಮೀರಿದಂತೆ ಕಾಣುತ್ತದೆ. ಎಲ್ಲೂ ವಾಚ್ಯವೆನಿಸದೆ ನಿರೂಪಣೆಗೊಂಡು ನಮ್ಮನ್ನು ಕಟ್ಟಿ ಹಾಕುವುದು ಈ ಕಥೆಯ ವಿಶೇಷ.

ಇಡೀ ಸಂಕಲನದಲ್ಲಿ ‘ತಪ್ತ’ ಕಥೆ ಚಿಕ್ಕದಾದರೂ ಮನುಷ್ಯನ ಕೃತ್ರಿಮತೆ, ಸಂವೇದನಾ ರಹಿತ ಮತ್ತು ಯಾಂತ್ರೀಕೃತ ಬದುಕಿಗೆ ಹಿಡಿದ ಕೈಗನ್ನಡಿ ಎನ್ನಬಹುದು. ಅರೆ, ಹೌದಲ್ಲ! ಸಾಮಾನ್ಯ ಬದುಕಿನ ಓಘದಲ್ಲಿ ನಿರ್ಲಕ್ಷಿಸಲ್ಪಡುವ ಅದೆಷ್ಟು ಘಟನೆ, ಸಂಗತಿಗಳು ನಮ್ಮ ಬದುಕಿನಲ್ಲೂ ಹಾದು ಹೋಗಿರುವ ನೆನಪಿನಂತೆ ಭಾಸವಾಗುತ್ತವೆ. ಈ ಕಥೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಸಂಕಲನದ ಪ್ರಮುಖ ಕಥೆಗಳಲ್ಲಿ ಒಂದಾಗಿ ನಮ್ಮನ್ನು ಕಾಡುತ್ತದೆ.

ಕೃತಿಯ ‘ಸಮುದ್ರದ ತಡಿಯಲೊಂದು ಮನೆಯ ಮಾಡಿ, ಎತ್ತಣ ಮಾಮರ ಎತ್ತಣ ಕೋಗಿಲೆ, ಸಿಂಧೂರಿ, ಸಂಬಂಧಗಳು’ ಕಥೆಗಳು ದಿಕ್ಕೆಟ್ಟ ಬದುಕಿನ ಸಾಂತ್ವನ ಕೇಂದ್ರಗಳಂತೆ ಭಾಸವಾಗುವುದಲ್ಲದೆ ಭರವಸೆಯ ಬೆಳಕನ್ನು ಬಿತ್ತುವ ಕಾರಣದಿಂದ ಮೌಲ್ಯಯುತವೆನಿಸಿಕೊಳ್ಳುತ್ತವೆ. ‘ಬಿಕ್ಕುತಿಹಳು ಯಾಕೋ ನೀರೆ, ಗಾಳ’ ದಂಥ ಕಥೆಗಳಿಗೆ ಹೋದರೆ ವಸ್ತುಸ್ಥಿತಿಯ ‘ಒಪ್ಪುಗೆ-ಅಪ್ಪುಗೆ’ಯನ್ನು ಸಾದರಪಡಿಸುತ್ತಲೇ ಭವಿಷ್ಯದ ಕಾಣ್ಕೆಯನ್ನೂ ಬಿತ್ತುವ ಕಾರ‍್ಯವನ್ನು ಇವು ಯಶಸ್ವಿಯಾಗಿ ನಿಭಾಯಿಸುತ್ತವೆಯೆಂದು ಹೇಳಲೇಬೇಕು.

ಗಂಡಸರ ರಸಿಕಾಗ್ರತನದ ಮೂಲಕ ಹೊರಹೊಮ್ಮುವ ಕಥೆಯಂತೆ ಕಂಡರೂ ‘ಮುತ್ತಿನಹಾರ’ದ inside ಮತ್ತು inserted ಕಥೆಗಳೇ ಬೇರೆ. ವೇಶ್ಯಾವಾಟಿಕೆಗೆದೂಡಲ್ಪಡುವ ದೀಪಿಕಾ ದಿವಾಕರನ ಮುಂದೆ ಬೆತ್ತಲಾಗುವ ಸಂದರ್ಭದಲ್ಲಿ ಕಾಚಾ ತೆಗೆದರೂ ಬ್ರಾ ಮಾತ್ರ ಸಡಿಲಿಸುವುದಿಲ್ಲ.

ಹಟಕ್ಕೆ ಬಿದ್ದ ದಿವಾಕರ ಬ್ರಾಗಳನ್ನೆಳೆದಾಗ ಕಾಣುವ ಸ್ತನಗಳ ಸುತ್ತಲಿನ ಕಪ್ಪು ಕಲೆಗಳು ಕಾಮ ಪಿಪಾಸುಗಳ ವಿಕೃತತೆಯ ‘ಮುತ್ತಿನಹಾರ’ವಾದ ಸಂಗತಿ ಬೆಳಕಿಗೆ ಬಂದಾಗ ಆರ್ದ್ರ, ವಿಹ್ವಲ, ಉದ್ವೇಗದ ಭಾವ ಒಟ್ಟೊಟ್ಟಿಗೆ ಹೊಮ್ಮಿ ಓದುಗನನ್ನು ಪರವಶನನ್ನಾಗಿಸುತ್ತದೆ. ಇಲ್ಲಿ ಗಮನಾರ್ಹವೆನಿಸುವ ಮತ್ತೊಂದು ಮುಖ್ಯ ಸಂಗತಿಯೆಂದರೆ ‘ಫಟಿಂಗತನ’ದಲ್ಲೂ ಸಂವೇದನಾಶೀಲತೆಯನ್ನು ಮೆರೆಯುವ ದಿವಾಕರ್ ಮತ್ತು ‘ಬೋಸಡಿತನ’ದಲ್ಲೂ ಸ್ತ್ರೀತತ್ವದಿಂದ ಬೆಳಗುವ ದೀಪಿಕಾ!

ಸಾಹಿತ್ಯದಲ್ಲಿ ಕತೆ, ಕವಿತೆ, ಕಾದಂಬರಿ, ನಾಟಕ ಪ್ರಕಾರಗಳಲ್ಲಿ ಬುದ್ಧಿಗಿಂತ ಭಾವಕ್ಕೇ ಹೆಚ್ಚು ಪ್ರಾಧಾನ್ಯ.ಈ ನಿಟ್ಟಿನಲ್ಲಿ ಬೈರಮಂಗಲ ರಾಮೇಗೌಡರ ಕಥೆಗಳು ಇನ್ನಷ್ಟು ಭಾವಪೂರ್ಣವಾಗಬೇಕಿತ್ತು ಎಂದು ಅನಿಸುತ್ತದೆಯಾದರೂ ಬುದ್ಧಿಯ ಲೇಪನದಿಂದ ಕಥೆಗಳು ವಿಶಿಷ್ಟ ಮೆರಗನ್ನು ಪಡೆದುಕೊಂಡಿರುವ ಖುಷಿ ನಮ್ಮದಾಗುತ್ತದೆ. ಅಲ್ಲದೆ ಸ್ವತಃ ವಿದ್ವಾಂಸರೂ ವಿಮರ್ಶಕರೂ ಆಗಿರುವ ಲೇಖಕರು ಎಲ್ಲಿಯೂ ‘ವಿದ್ವತ್ತಿನ ಆಳ್ತನ, ಭಾಷಿಕ ತೋಳ್ತನ’ಕ್ಕೆ ಬಲಿಯಾಗದೆ ಬಹುತೇಕ ತಮ್ಮ ಅನುಭವಗಳನ್ನೇ ಸರಳ ಸಹಜ ಶೈಲಿಯಲ್ಲಿ ಕಥೆಗಳನ್ನಾಗಿ ಮಂಡಿಸಿರುವುದು ಈ ಕೃತಿಯ ವೈಶಿಷ್ಟ್ಯ.

‍ಲೇಖಕರು Avadhi

December 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: