ಸಾಂಸ್ಕೃತಿಕ ಪತ್ರಿಕೋದ್ಯಮದ ಸಾಧನ ಸಂಪತ್ತುಗಳು

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. 

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

|ಕಳೆದ ಸಂಚಿಕೆಯಿಂದ|

ಹೊಸ ಸಂಪಾದಕರಾದ ಎಂ ಬಿ ಸಿಂಗ್ ಅವರು ಸಾಪ್ತಾಹಿಕ ಪುರವಣಿಯ ಪೂರ್ತಿ ನಿರ್ವಹಣೆಯನ್ನೇನೊ ನನಗೆ ವಹಿಸಿದರು. ಆದರೆ ಅದು ಒಬ್ಬರ ಕೆಲಸ, ಇನ್ನೊಬ್ಬ ಉಪಸಂಪಾದಕ ಬೇಕಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಹೀಗೆ, ಏಕಮೇವಾದ್ವಿತೀಯನಾದ ನನ್ನಲ್ಲಿ ‘ಸಾಪು’ಗೆ ವಸ್ತು-ವಿನ್ಯಾಸಗಳಲ್ಲಿ ಹೊಸ ರೂಪ ಕೊಡುವ ಆಸೆ ಚಿಗುರಿತು.

ಕನ್ನಡ ಸಾಂಸ್ಕೃತಿಕ ಪತ್ರಿಕೋದ್ಯಮದಲ್ಲಿ ‘ಪ್ರವಾ’ ಸಾಪ್ತಾಹಿಕ ಪುರವಣಿ ಮತ್ತು ದೀಪಾವಳಿ ವೀಶೇಷಾಂಕಗಳ ಕೊಡುಗೆ ಗಣನೀಯವಾದುದು ಎಂಬುದು ಈ ವೇಳೆಗಾಗಲೇ ಮಾನ್ಯವಾಗಿತ್ತು. ಅದನ್ನು ಮತ್ತಷ್ಟು ಎತ್ತರಕ್ಕೊಯ್ದು ಕನ್ನಡ ಸಾಂಸ್ಕೃತಿಕ ಲೋಕದ ʼಧೃವ ತಾರೆ’ಯಾಗಿಸುವ ಹುಮ್ಮಸ್ಸಿನಿಂದ ಒಂದು ನೀಲನಕ್ಷೆ ಸಿದ್ಧಪಡಿಸಿ ಅದಕ್ಕೆ ಸಂಪಾದಕರ ಅಂಗೀಕಾರವನ್ನೂ ಪಡೆದುಕೊಂಡೆ.

ಹೊಸ ವಿನ್ಯಾಸ ರೂಪಿಸುವ ಕೆಲಸವನ್ನು ಕಲಾವಿದ ಗೆಳೆಯ ಚಂದ್ರನಾಥ್‌ಗೆ ವಹಿಸಲಾಯಿತು. ಸಾಹಿತ್ಯ, ಕಲೆಗಳ ಹಳೆ ಪೀಳಿಗೆಯನ್ನು ಅಲಕ್ಷಿಸದೇ, ಆಧುನಿಕ ಸಂವೇದನೆಯ ಹೊಸ ಪೀಳಿಗೆಯನ್ನೂ ಪೋಷಿಸಿ/ಪ್ರೋತ್ಸಾಹಿಸುವ ಮೂಲಕ ʼಸಾಪು’ವನ್ನು ಹೆಚ್ಚು ಸತ್ವಶಾಲಿಯೂ ನವನವೋನ್ಮೇಷ ಶಾಲಿನಿಯೂ ಆಗಿ ಚೆಂದ ಕಾಣಿಸುವಂತೆ ಮಾಡುವ ಕೆಲಸ ನನ್ನ ಹೊಣೆಗಾರಿಕೆಯನ್ನು ಹೆಚ್ಚಿಸಿತ್ತು. ಆ ವೇಳೆಗಾಗಲೇ ʼನವ್ಯದ ಪರ’ ಎಂಬ ಹೆಗ್ಗಳಿಕೆಗೋ ತೆಗ್ಗಳಿಕೆಗೋ ಪಾತ್ರವಾಗಿದ್ದ ‘ಸಾಪು’ವನ್ನು ಮತ್ತಷ್ಟು ನವ್ಯ ಮಾಡಬೇಡಿ ಎಂದು ಸಿಂಗ್ ಸಾಹೇಬರು ನನಗೆ ಶುರುವಿಗೇ ಎಚ್ಚರಿಕೆ ನೀಡಿದ್ದರು.

ಓದುಗರ ಬೇಕು-ಬೇಡಗಳನ್ನೂ ಗಮನದಲ್ಲಿಟ್ಟುಕೊಂಡು ಹೊಸ ಅಭಿರುಚಿ, ಹೊಸ ಸಂವೇದನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಾಪ್ತಾಹಿಕ ಪುರವಣಿಯನ್ನು ಬೆಳೆಸುವ ಸಂಕಲ್ಪದಿಂದ ನಾನು ಮುಂದೆ ಅಡಿ ಇಟ್ಟೆ. ಈ ನಿಟ್ಟಿನಲ್ಲಿ ಲೇಖಕರು ಮತ್ತು ಕಲಾವಿದರ ಸಹಕಾರ ಅತ್ಯಗತ್ಯವಾಗಿತ್ತು. ಎಂದೇ ಸಾಹಿತಿಗಳು ಮತ್ತು ಕಲಾವಿದರುಗಳನ್ನು ಸಂಪರ್ಕಿಸುವುದು ನನ್ನ ಮೊದಲ ಕೆಲಸವಾಯಿತು.

ಬೆಂಗಳೂರಿನ ಕವಿಗಳು, ಸಾಹಿತಿಗಳು, ಕಲಾವಿದರುಗಳನ್ನು ಭೇಟಿ ಮಾಡಿದ್ದರ ಜೊತೆಗೆ, ಸಂಪಾದಕರ ಒಪ್ಪಿಗೆ ಪಡೆದು ಮೈಸೂರು ಮತ್ತು ಧಾರವಾಡಗಳಿಗೂ ಹೋಗಿ ಕವಿಗಳು, ಸಾಹಿತಿಗಳು ಮತ್ತು ಕಲಾವಿದರೊಡನೆ ಸಮಾಲೋಚಿಸಿ ಅವರ ಸಹಕಾರ ಕೋರಿದೆ. ಸುಪ್ರಸಿದ್ಧರು, ಹೊಸ ಪೀಳಿಗೆಯ ಪ್ರಖ್ಯಾತರು ಮತ್ತು ಉದಯೋನ್ಮುಖರು ಇವರೆಲ್ಲರನ್ನೂ ಗಣನೆಗೆ ತೆಗೆದುಕೊಂಡು ಅವರುಗಳಿಂದ ಪ್ರಚಲಿತಕ್ಕೆ ಪ್ರಸ್ತುತವಾಗುವ ರೀತಿಯಲ್ಲಿ ಲೇಖನ/ಕಥೆ/ಕವನ/ಅಂಕಣಗಳನ್ನು ಬರೆಸುವುದು ನನ್ನ ಈ ಭೇಟಿಯ ಮುಖ್ಯ ಉದ್ದೇಶವಾಗಿತ್ತು.

ಮೈಸೂರಿನಲ್ಲಿ ಬೆಳಗ್ಗೆ ಸಾಹಿತಿ ಮಿತ್ರರನ್ನು ಭೇಟಿಮಾಡಿ ನಂತರ ಮಾನಸ ಗಂಗೋತ್ರಿಯ ಕಡೆ ಹೆಜ್ಜೆ ಹಾಕಿದೆ. ಆಗ ಹಾರೋಗದ್ದೆ ಮಾನಪ್ಪ ನಾಯಕರು ಕನ್ನಡ ಆಧಯ್ಯನ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ನಾಯಕರನ್ನು ಭೇಟಿಯಾಗಲು ಬೆಳಗ್ಗೆ ಪೂರ್ವಭಾವಿಯಾಗಿ ಅವರಿಗೆ ಟೆಲಿಫೋನ್ ಮಾಡಿ ಸಮಯ ನಿಗದಿಪಡಿಸಿಕೊಂಡಿದ್ದೆ.

ನಾಯಕರ ಕೊಠಡಿ ಪ್ರವೇಶಿಸಿದಂತೆ ಅವರು, “ಬನ್ನಿ ಸ್ವಾಮಿ ಬನ್ನಿ” ಎಂದು ಆತ್ಮೀಯಕವಾಗಿ ಸ್ವಾಗತಿಸಿದರು. ಇದು ನನಗೆ ತುಂಬ ಅನಿರೀಕ್ಷಿತವಾಗಿತ್ತು. ಏಕೆಂದರೆ ಆ ವೇಳೆಗೆ ನನಗೆ ಅಂಟಿಕೊಂಡಿದ್ದ ʼನವ್ಯದ ಅಡ್ಡೆಯವನು’ ಎಂಬ ಹಣೆಪಟ್ಟಿ ಒಂದು ಕಾರಣವಾದರೆ, ಕೆಲವು ತಿಂಗಳುಗಳ ಹಿಂದೆ ಜಿ ಎಚ್ ನಾಯಕರು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಬರೆದ “ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮಾರ್ಗಗಳ ಸಂಕ್ಷಿಪ್ತ ಸಮೀಕ್ಷೆ” ಲೇಖನ ಕುರಿತ ವಿವಾದ ಮತ್ತೊಂದು ಕಾರಣವಾಗಿತ್ತು.

“ಇಪ್ಪತ್ತು ಪುಟಗಳ ಲೇಖನದಲ್ಲಿ ನವ್ಯರಿಗೆ ೧೩ ಪುಟ ಮೀಸಲಿಟ್ಟು, ಬೇಂದ್ರೆಯವರಿಗೆ ೯ ಸಾಲು, ಕೆ ವಿ ಪುಟ್ಟಪ್ಪ ಅವರಿಗೆ ಒಂದು ಪುಟಕ್ಕಿಂತ ಕಡಿಮೆ ಸ್ಥಳ ಕೊಟ್ಟಿರುವ ಲೇಖಕರು, ಮಾಸ್ತಿ, ಡಿವಿಜಿ, ಪುತಿನ, ಭೈರಪ್ಪ ಅವರ ಹೆಸರನ್ನು ಹೇಳಿಲ್ಲ…” ಇತ್ಯಾದಿಯಾಗಿ ಹಾಮಾನಾ, ಜಿ ಎಚ್ ನಾಯಕರ ಲೇಖನವನ್ನು ಟೀಕಿಸಿ, ಇಂಥ ವಿಮರ್ಶಕರ ಬಗ್ಗೆ ಎಚ್ಚರ ಅಗತ್ಯ ಎಂದು ಕನ್ನಡ ಜನತೆಗೆ ಕರೆ ನೀಡಿದ್ದರು. ಅಲ್ಲದೆ ಈ ಲೇಖನವನ್ನು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸಕೂಡದೆಂದು ಅಕಾಡೆಮಿಯಲ್ಲಿ ಠರಾವನ್ನೂ ಮಾಡಿಸಿದ್ದರು.

ನಾನು ಜಿ ಎಚ್ ನಾಯಕರನ್ನು ಸಮರ್ಥಿಸಿ ಪ್ರಜಾವಾಣಿ ವಾಚಕರ ವಾಣಿ ವಿಭಾಗದಲ್ಲಿ ಬರೆದ ಪತ್ರದಿಂದಾಗಿ ಹಾ ಮಾ ನಾಯಕರಲ್ಲಿ ನನ್ನ ಬಗ್ಗೆ ಪೂರ್ವಾಗ್ರಹ ಬೆಳೆದಿತ್ತು. ಎಷ್ಟರ ಮಟ್ಟಿಗೆ ಎಂದರೆ, ಅವರು ತಮ್ಮದೊಂದು ಲೇಖನದಲ್ಲಿ ನನ್ನನ್ನು ಪತ್ರಕರ್ತನೆಂದೂ ಪರಿಗಣಿಸದೇ ʼವಾಚಕರವಾಣಿ ಲೇಖಕ’ ಎಂದು ಹಗುರವಾಗಿ ಕಂಡಿದ್ದರು. ಪತ್ರಕರ್ತನಾಗಿ ವಾಚಕರ ವಾಣಿಯ ಮಹತ್ವ ತಿಳಿದಿದ್ದ ನಾನು ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಾಮಾನಾ ಹೇಗೆ ಸ್ವಾಗತಿಸುವರೋ ಎಂಬ ಆತಂಕ ನನ್ನಲ್ಲಿತ್ತು. ಅವರ ಸ್ವಾಗತ ಕಂಡು ನಿರಾಳನಾದೆ.

ಹಾ ಮಾ ನಾಯಕರು ಆಗಷ್ಟೇ ʼಪ್ರಜಾಮತ’ಕ್ಕೆ ಬರೆಯುತ್ತಿದ್ದ ಅಂಕಣವನ್ನು ನಿಲ್ಲಿಸಿದ್ದರು. ಬೇರೆ ಯಾವ ಪತ್ರಿಕೆಗೂ ಬರೆಯುತ್ತಿರಲಿಲ್ಲ. ಅವರಿಂದ ʼಸಾಪು’ಗೆ ಒಂದು ಅಂಕಣ ಬರೆಸುವುದು ನನ್ನ ಭೇಟಿಯ ಉದ್ದೇಶವಾಗಿತ್ತು. ಉಭಯ ಕುಶಲೋಪರಿಗಳಾದ ನಂತರ ನಾನು ಅಂಕಣ ಬರೆಯಯವಂತೆ ಅವರಲ್ಲಿ ವಿನಂತಿಸಿಕೊಂಡೆ.

“ನನಗೆ ನಿಮ್ಮ ಬಗ್ಗೆಯಾಗಲೀ ‘ಪ್ರವಾ’ ಬಗ್ಗೆಯಾಗಲೀ ಯಾವುದೇ ಪೂರ್ವಾಗ್ರಹಗಳಿಲ್ಲ. ನಿಮ್ಮ ಆಹ್ವಾನಕ್ಕೆ ವಂದನೆಗಳು. ಸ್ವಲ್ಪ ಸಮಯ ಕೊಡಿ ಯೋಚಿಸಿ ತಿಳಿಸುತ್ತೇನೆ” ಎಂದರು ನಾಯಕರು.

ಒಂದೆರಡು ವಾರ ಬಿಟ್ಟು ಸಂಪರ್ಕಿಸಲೇ ಎಂದಾಗ “ಬೇಡ ನಾನೇ ಬರೆಯುತ್ತೇನೆ” ಎಂದರು. ಅಲ್ಲಿಗೆ ನಮ್ಮ ಔಪಚಾರಿಕ ಮಾತುಕತೆ ಮುಕ್ತಾಯವಾಯಿತು. ನಾನು ವಿದಾಯ ಹೇಳಲು ಎದ್ದು ನಿಂತೆ.

“ಕುಳಿತುಕೊಳ್ಳಿ ಸ್ವಾಮಿ, ಏಕೆ ಇಷ್ಟು ಆತುರದಲ್ಲಿದ್ದೀರಿ” ಎಂದರು ನಾಯಕರು.

“ಆತುರವೇನಿಲ್ಲ. ನಿಮ್ಮ ಸಮಯ ಹಾಳು ಮಾಡುವ ಇಚ್ಛೆ ಇಲ್ಲ.”

“ಇಲ್ಲ, ಇಲ್ಲ ನಿಮ್ಮ ಭೇಟಿಯ ಸಮಯವೂ ನನಗೆ ಉಪಯುಕ್ತವಾದುದೇ” ಎಂದು ಕುಳ್ಳಿರಿಸಿ ಕಾಫಿ ಸತ್ಕಾರ ನೀಡಿದ ನಾಯಕರು ಮೆಲ್ಲಗೆ ಪೀಠಿಕೆ ಹಾಕಿದರು.

“ನನ್ನನ್ನು ಅಂಕಣ ಬರೆಯಲು ಕೇಳಿದ್ದೀರಿ. ಅದಕ್ಕೆ ಧನ್ಯವಾದಗಳು. ಆದರೆ ನಿಮ್ಮ ಶರತ್ತುಗಳೇನು ಎಂದು ತಿಳಿಸಲಿಲ್ಲವಲ್ಲ”

“ವಿಶೇಷವಾದ ಶರತ್ತುಗಳೇನೂ ಇಲ್ಲ. ನೀವು ವಾರಕ್ಕೊಂದು ಲೇಖನ ಬರೆದು ಕೊಡಬೇಕು. ಅದು ಐದುನೂರರಿಂದ ಏಳುನೂರು ಪದಗಳ ಮಿತಿಯಲ್ಲಿರಬೇಕು. ನಿಮ್ಮ ಲೇಖನಕ್ಕೆ ಸೂಕ್ತ ಸಂಭಾವನೆ ನೀಡಲಾಗುವುದು.”

“ಇದರಲ್ಲಿ ನನ್ನ ಸ್ವಾತಂತ್ರ್ಯವೆಷ್ಟು?”

“ಲೇಖಕರಾಗಿ ನಿಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ, ಲೇಖನದ ವಸ್ತು, ವಿಷಯ ಆಯ್ಕೆ, ಭಾಷೆ, ಶೈಲಿ ಇವೆಲ್ಲದರಲ್ಲೂ ಒಬ್ಬ ಸೃಜನಶೀಲ ಲೇಖಕನಿಗಿರುವ ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯ ನಿಮಗಿರುತ್ತದೆ. ಹಾಗೆಯೇ ಸಂಪಾದಕರಿಗೂ ಪತ್ರಿಕೆಯ ಸಂಪಾದಕೀಯ ನೀತಿ, ವೃತ್ತಿಯ ನೀತಿನಿಯಮಗಳ ಬದ್ಧತೆಗಳಿರುತ್ತವೆ ಎಂಬುದನ್ನು ತಾವು ಗಮನದಲ್ಲಿಟ್ಟುಕೊಂಡರೆ ಸಾಕು.”

“ಆಯಿತು ಸ್ವಾಮಿ. ನನ್ನದು ಇನ್ನೊಂದು ಮಾತಿದೆ, ನಾನು ಪ್ರತಿ ಬರಹಕ್ಕೂ ೫೦೦ ರೂ ಸಂಭಾವನೆ ಅಪೇಕ್ಷಿಸುತ್ತೇನೆ”

“ಆಗಬಹುದು ಸರ್, ಅದೇನೂ ದೊಡ್ಡ ವಿಷಯವಲ್ಲ”

“ಸರಿ ಸ್ವಾಮಿ, ನನಗೆ ಯೋಚಿಸಲು ಒಂದು ವಾರ ಕಾಲಾವಕಾಶ ಕೊಡಿ”

(ಆಗ ನಮಗೆ ಗರಿಷ್ಠ ೪೦೦ ರೂ. ವರೆಗೆ ಸಂಭಾವನೆ ಕೊಡಲು ಅಧಿಕಾರವಿತ್ತು. ನಾನು ಹಾಮಾನಾ ಅವರಿಂದ ಬರೆಸುವ ಉತ್ಸಾಹದಲ್ಲಿ ಇದನ್ನು ಯೋಚಿಸದೇ ಆಗಲಿ ಎಂದು ಬಿಟ್ಟಿದ್ದೆ. ಸಂಪಾದಕರಲ್ಲಿ ಅರುಹಿದಾಗ ಅವರು ವಿಶೇಷ ಪ್ರಕರಣ ಎಂದು ಹೇಳಿ ೫೦೦ ರೂ ಗೆ ಆಡಳಿತವರ್ಗದ ಅನುಮತಿ ದೊರಕಿಸಿಕೊಟ್ಟರು.)

ನಾಲ್ಕೈದು ದಿನಗಳಲ್ಲೇ ಹಾಮಾನಾ ತಮ್ಮ ಒಪ್ಪಿಗೆ ಸೂಚಿಸಿ ಪತ್ರ ಬರೆದರು. ಅಂಕಣಕ್ಕೆ ನಾಲ್ಕೈದು ಹೆಸರುಗಳನ್ನು ಸೂಚಿಸಿದ್ದರು. ಅವುಗಳಲ್ಲಿ ʼಸಂಪ್ರತಿ’ಯನ್ನು ನಾನು ಆಯ್ಕೆ ಮಾಡಿದೆ. ೧೯೮೫ ರ ಜನವರಿ ೬ರಿಂದ “ಸಂಪ್ರತಿ” ಶುರುವಾಯಿತು. ಕೆಲವೇ ವಾರಗಳಲ್ಲಿ ಹಾಮಾನಾ ಕಲ್ಬುರ್ಗಿ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಕಗೊಂಡರು. ಅಲ್ಲಿಂದ ಸಮಯಕ್ಕೆ ಸರಿಯಾಗಿ ನನ್ನ ಕೈಸೇರುವಂತೆ ಲೇಖನ ಕಳುಹಿಸುತ್ತಿದ್ದರು. ಅಂಕಣ ತುಂಬ ಜನಪ್ರಿಯವಾಯಿತು.

೧೯೯೦ರಲ್ಲಿ ನಾನು ʼಸುಧಾ’ಕ್ಕೆ ವರ್ಗಾವಣೆಗೊಂಡ ನಂತರವೂ ಸೆಪ್ಟಂಬರ್ ವರೆಗೆ ಹಾಮಾನಾ ಈ ಅಂಕಣ ಬರೆದರು. ಅಲ್ಲಿಯವರೆಗೆ ʼಪ್ರವಾ’ದಲ್ಲಿ ಇಷ್ಟು ಸುದೀರ್ಘಕಾಲ ಒಂದು ಅಂಕಣ ಅವ್ಯಾಹತವಾಗಿ ಪ್ರಕಟಗೊಂಡಿರಲಿಲ್ಲ. ಅಂಚೆಯ ವಿಳಂಬದಿಂದಾಗಿ ಒಂದು ವಾರ ಮಾತ್ರ (ಮಾರ್ಚಿ ೨, ೧೯೮೬) ಪ್ರಕಟಗೊಳ್ಳಲಿಲ್ಲ. ಇದೊಂದು ದಾಖಲೆ. ಮುಂದೆ ಡಿ ವಿ ರಾಜಶೇಖರ್ ಪ್ರಾರಂಭಿಸಿದ ಜಿ ವೆಂಕಟಸುಬ್ಬಯ್ಯನವರ “ಇಗೋ ಕನ್ನಡ” ಈ ದಾಖಲೆಯನ್ನು ಮುರಿಯಿತು.

ಹಾಮಾನಾ ಅವರ ಲೇಖನವನ್ನು ಪರಿಷ್ಕರಿಸುವ ಪ್ರಮೇಯವೇ ಬರುತ್ತಿರಲಿಲ್ಲ. ವಿಷಯದ ಆಯ್ಕೆ, ಮಂಡನೆ, ಭಾಷೆ ಎಲ್ಲದರಲ್ಲೂ ಅಚ್ಚುಕಟ್ಟು. ಒಮ್ಮೆ ಮಾತ್ರ ಅವರ ಲೇಖನಕ್ಕೆ ಕತ್ತರಿ ಆಡಿಸಲೇ ಬೇಕಾದ ಅನಿವಾರ್ಯತೆ ಒದಗಿ ಬಂತು. ಒಂದು ಲೇಖನದಲ್ಲಿ, ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ನಮ್ಮ ಸಂಪಾದಕರಾದ ಎಂ ಬಿ ಸಿಂಗ್ ಅವರ ನಡೆಯನ್ನು ಪ್ರಶಂಶಿಸಿ ಒಂದು ಪ್ಯಾರ ಬರೆದಿದ್ದರು. ಸಿಂಗ್ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ತಮಗೆ ಬೇಡವೆಂದು ಸಕಾರಣವಾಗಿಯೇ ನಿರಾಕರಿಸಿದ್ದರು.

“ನೀವು ದೊಡ್ಡ ಪತ್ರಿಕೆಯವರಿಗೆ ಮಾತ್ರ ಪ್ರಶಸ್ತಿ ನೀಡುತ್ತೀರಿ. ಸಣ್ಣ ಪತ್ರಿಕೆಯವರನ್ನ ಗಮನಿಸುವುದಿಲ್ಲ. ಇದು ಸರಿಯಲ್ಲ. ಅವರಿಗೂ ಗೌರವ ಸಂದಾಯವಾಗಬೇಕೆಂದು ನಾನು ಸಲಹೆ ಮಾಡಿದ್ದೇನೆ. ಆ ಸಲಹೆಯನ್ನು ನೀವು ಮಾನ್ಯ ಮಾಡಿಲ್ಲ. ಈ ತಾರತಮ್ಯ ನನಗೆ ಸರಿ ಕಾಣುವುದಿಲ್ಲ. ಆದ್ದರಿಂದ ನಾನು ನಿಮ್ಮ ಪ್ರಶಸ್ತಿಯನ್ನು ಸ್ವೀಕರಿಸಲಾರೆ” ಎಂದು ಎಂ ಬಿ ಸಿಂಗ್ ಅವರು ಪ್ರಶಸ್ತಿಯನ್ನು ತಿರಸ್ಕರಿಸಿ ಸರ್ಕಾರಕ್ಕೆ ಕಾಗದ ಬರೆದಿದ್ದರು.

ಸರ್ಕಾರ ಸಣ್ಣ ಪತ್ರಿಕೆಗಳ ಸಮಸ್ಯೆ ಕುರಿತಂತೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಪ್ರಶಸ್ತಿ ಪುರಸ್ಕಾರಗಳನ್ನು ನೀಡುವಾಗ ಸಣ್ಣ ಪತ್ರಿಕೆಯವರನ್ನೂ ಪರಿಗಣಿಸಬೇಕೆಂದು ಸಿಂಗ್ ಅವರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆ ವರ್ಷದ ಪ್ರಶಸ್ತಿಗಳ ಬಗ್ಗೆ ಬರೆಯುತ್ತಾ ಈ ವಿಚಾರ ತಿಳಿದಿದ್ದ ಹಾಮಾನಾ ಸಿಂಗ್ ಅವರ ನಿಲುವನ್ನು ಪ್ರಶಂಶಿಸಿದ್ದರು. ಇದನ್ನು ನಾನು ಸಿಂಗ್ ಅವರ ಗಮನಕ್ಕೆ ತಂದೆ.

“ಏನು ಮಾಡುತ್ತೀರಿ?”

“ಏನು ಮಾಡೋಣ ಸರ್?’

“ಪುರವಣಿ ಸಂಪಾದಕರಾಗಿ ನಿಮ್ಮ ನಿಲುವೇನು, ಹೇಳಿ. ಪ್ರಕಟಿಸುವಿರಾ?”

“ನಮ್ಮ ಪತ್ರಿಕೆಯಲ್ಲಿ ನಮ್ಮ ಬಗ್ಗೆಯೇ ಹೊಗಳಿಕೆ ಪ್ರಕಟಸಿಕೊಳ್ಳುವುದು, ನಮ್ಮನ್ನೇ ಮಾದರಿಯಾಗಿ ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದೇ ನನ್ನ ಭಾವನೆ. ಹಾಮಾನಾ ಅವರು ಲೇಖನದಲ್ಲಿ ಇದನ್ನೇ ಮಾಡಿದ್ದಾರೆ. ಆದರೆ ನೀವು ತೆಗೆದುಕೊಂಡಿರುವ ನಿಲುವಿನಲ್ಲಿ ನೈತಿಕ ಮೌಲ್ಯವಿದೆ ಹಾಗೂ ಆಯ್ಕೆಯ ಮಾನದಂಡಗಳು ನ್ಯಾಯೋಚಿತವಾಗಿಲ್ಲ ಎಂಬುದು ಅದರಿಂದ ತಿಳಿಯುತ್ತದೆ, ಆದ್ದರಿಂದ ಇದು ನಿಮ್ಮ ಗುಣಗಾನದಷ್ಟೇ ಸಾರ್ವಜನಿಕ ಮಹತ್ವದ ವಿಷಯವೂ ಆಗುತ್ತದೆ. ಹೀಗಾಗಿ ಪ್ರಕಟಿಸಿದರೆ ತಪ್ಪಿಲ್ಲ ಎಂದೂ ಅನ್ನಿಸುತ್ತಿದೆ.”

“ಬೇಡ. ಆ ಪ್ಯಾರ ಎಡಿಟ್ ಮಾಡಿ. ನಾಯಕರಿಗೆ ಫೋನ್ ಮಾಡಿ ಹೇಳಿ”

ನಾಯಕರು ಇದಕ್ಕೆ ಮೊದಲು ಒಪ್ಪಲಿಲ್ಲ. ಆದರೆ ಇದು ಸಂಪಾದಕರು ಮತ್ತು ಪತ್ರಿಕೆಯ ನೀತಿ ವಿಚಾರ ಎಂದಾಗ ಒಪ್ಪಿದರು. ಹೊಗಳಿಕೆಯ ಪ್ಯಾರಾ ಕಿತ್ತುಹಾಕಿ ಅಂಕಣ ಪ್ರಕಟಿಸಿದೆ.

ರಾಜ್ಯೋತ್ಸವ ಪ್ರಶಸ್ತಿಗಾಗಿ ಏನೆಲ್ಲ ಪ್ರಭಾವ ಬೀರಿದ, ಶಿಫಾರಸುಗಳನ್ನು ಮಾಡಿಸಿದ ಪತ್ರಕರ್ತರನ್ನು ನಾನು ಕಂಡಿದ್ದೇನೆ. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಒಬ್ಬ ಪತ್ರಕರ್ತರಂತೂ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣದೆ, “ಪ್ರಶಸ್ತಿ ಪ್ರಕಟಿಸುವವರೆಗೆ ಏಳುವುದಿಲ್ಲ” ಎಂದು ಮುಖ್ಯಮಂತ್ರಿಗಳ ಕಚೇರಿ ಎದುರು ಧರಣಿ ಮುಷ್ಕರ ನಡೆಸಿ ಪ್ರಶಸ್ತಿ ಪಡೆದುಕೊಂಡದ್ದನ್ನೂ ನಾನು ಬಲ್ಲೆ. ಆದರೆ ಸಿಂಗ್ ಅವರಂತೆ ಪ್ರಶಸ್ತಿ ಬೇಡ ಎಂದ ಇನ್ನೊಬ್ಬ ಪತ್ರಕರ್ತರನ್ನು ಕಂಡಿಲ್ಲ, ಕೇಳಿಲ್ಲ.

ಹಾಮಾನಾ ಅವರ ʼಸಂಪ್ರತಿ’ ಬರಹಗಳ ಹೆಚ್ಚಳವೆಂದರೆ ಅದರ ಸಾಹಿತ್ಯಕ ಮೌಲ್ಯ. ಇದನ್ನು ಗಮನಿಸಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ, ಅಲ್ಲಿಯವರೆಗೆ ಪತ್ರಿಕಾ ಬರಹವೆಂದು ಅನಾದರಣೆಗೊಳಗಾಗಿದ್ದ ಅಂಕಣ ಬರಹವನ್ನು ಸೃಜನಶೀಲ ಸಾಹಿತ್ಯವೆಂದು ಮಾನ್ಯ ಮಾಡಿತು. ಹಾಮಾನಾ ಅವರ ʼಸಂಪ್ರತಿ’ ಬರಹಗಳ ಮೊದಲ ಸಂಪುಟಕ್ಕೆ ೧೯೮೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

ಕೀರ್ತಿನಾಥ ಕುರ್ತಕೋಟಿಯವರಿಂದ ನಾನು ಬರೆಸಿದ ‘ಸಮ್ಮುಖ’ ಅಂಕಣವೂ ಶುರುವಾಯಿತು. ಸಾಹಿತ್ಯ ಪ್ರ‍್ರಿಯರಿಗೆ, ಸಾಹಿತ್ಯದ ವಿದ್ಯಾರ್ಥಿಗಳಿಗೆ ರುಚಿಕರವಾಯಿತು, ಉಪಯುಕ್ತವಾಯಿತು. ಈ ಅಂಕಣ ಪ್ರಕಟವಾಗುತ್ತಿದ್ದಾಗಲೇ ಒಂದು ದಿನ ಜಿ ಬಿ ಜೋಶಿಯವರು ಮತ್ತು ಕುರ್ತಕೋಟಿಯವರು ಯಾವುದೋ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿಗೆ ಬಂದವರು ‘ಪ್ರಜಾವಾಣಿ’ಗೆ ಭೇಟಿಕೊಟ್ಟರು. ನೇರವಾಗಿ ನನ್ನ ಬಳಿಗೇ ಬಂದರು. ಹಿರಿಯರನ್ನು ಆಧರಿಸಿ ಕುಳ್ಳಿರಿಸದ ನಂತರ ಒಂದಷ್ಟು ಹೊತ್ತು ಪುರವಣಿ ಬಗ್ಗೆ, ಅಂಕಣಗಳ ಬಗ್ಗೆ ಲೋಕಾಭಿರಾಮ ಮಾತುಕತೆ ನಡೆಯಿತು. ನಂತರ ಕುರ್ತಕೋಟಿಯವರು “ಹೊರಡೋಣು ಇನ್ನು” ಎಂದರು. “ನೀ ಎನಾ ಹೇಳಬೇಕೋಂತಿದಿಯಲ್ಲ ಅದನ್ನ ಹೇಳಬಿಡು ಮತ್ತ” ಅಂದರು ಜೋಶಿಯವರು. ಕುರ್ತಕೋಟಿಯವರು ಮೌನ ಮುರಿಯಲಿಲ್ಲ.  ಜೋಶಿಯವರೇ ಮಾತು ಮುಂದುವರಿಸಿ,

“ನೋಡಿ ರಂಗನಾಥ ರಾವ ‘ಪ್ರವಾ’ಗೆ ಇದು ಸರಿಯಲ್ಲ ಅನಿಸ್ತದೆ” ಎಂದು ರಾಗ ತೆಗೆದರು.

“ಜೋಶಿಯವರೇ ಸರಿಯಲ್ಲ ಎನ್ನುವುದು ಯಾವುದು?” ನಾನು ಕೇಳಿದೆ.

“ಸಂಭಾವನೆಯಲ್ಲಿ ಲೇಖಕರ ನಡುವೆ ತಾರತಮ್ಯ ತೋರೋದು…ಇದರಾಗ ಕುರ್ತಕೋಟಿಗೆ ಅಪಮಾನವಾಗದ”

ನನಗೆ ಅರಿವಾಗಿ ಹೋಯಿತು. ನಮಗಿದ್ದ ಮಿತಿಯಲ್ಲಿ ಕುರ್ತಕೋಟಿಯವರಿಗೆ ಪ್ರತಿ ಲೇಖನಕ್ಕೆ ೪೦೦ ರೂ ಕೊಡುತ್ತಿದ್ದೆವು. ಹಾಮಾನಾ ಅವರಿಗೆ ೫೦೦ರೂ ಕೊಡುತ್ತಿರುವುದು ಹೇಗೋ ಕುರ್ತಕೋಟಿಯವರಿಗೆ ಗೊತ್ತಾಗಿ ಹೋಗಿತ್ತು. ಹೀಗಾಗಿ ಅವರು ತಮ್ಮ ಅಸಮಾಧಾನವನ್ನೇ ತೋರಿಸಲು ಬಂದಿದ್ದರು.

ನನಗೂ ತಾರತಮ್ಯದ ಮಾತು ಕೇಳಿ ತುಂಬ ಕಸಿವಿಸಿಯಾಯಿತು. ಸ್ವಲ್ಪ ಯೋಚಿಸಿ –

“ಇದನ್ನು ನಾನು ಸರಿಪಡಿಸುತ್ತೇನೆ. ಆ ಬಗ್ಗೆ ಕಾಳಜಿ ಮಾಡಬೇಡಿ. ಅಂಕಣ ಮುಂದುವರಿಸಿ” ಎಂದು ಕುರ್ತಕೋಟಿಯವರಲ್ಲಿ ಮನವಿ ಮಾಡಿದೆ. ನನ್ನ ಮಾತು ಅವರಿಗೆ ಸಮಾಧಾನ ತಂದಿರಬೇಕು. ನಗುನಗುತ್ತಲೇ ಹೊರಟರು. ನಂತರ ನಾನು ಈ ವಿಷಯವನ್ನು ಸಿಂಗ್ ಅವರಲ್ಲಿ ಪ್ರಸ್ತಾಪಿಸಿದಾಗೆ “ಗೌರವ ಸಂಭಾವನೆ ಮೊತ್ತವನ್ನು ಪರಿಷ್ಕರಿಸೋಣ. ಯಾವುದಾದರೂ ಒಂದು ಮಾನದಂಡವಿಟ್ಟುಕೊಂಡು. ನೀವೊಂದು ಪ್ರಪೋಸಲ್ ಕೊಡಿ ನಾನು ಮಾತಾಡುತ್ತೇನೆ” ಎಂದರು.

ಮುಂದೆ ಸಾಧ್ಯವಾದಷ್ಟೂ ಇಂಥ ಅಸಮಾಧಾನಗಳಿಗೆಡೆ ಮಾಡಿಕೊಡದಂತೆ ಗೌರವಧನವನ್ನು ಹೆಚ್ಚಿಸುವ ನಮ್ಮ ಪ್ರಸ್ತಾವನೆಗೆ  ಶ್ರೀ ಹರಿಕುಮಾರ್ ಅವರು ಒಪ್ಪಿಗೆ ನೀಡಿದರು.

ಕುರ್ತಕೋಟಿಯವರ ʼಸಮ್ಮುಖ’ ಅಂಕಣ ಬರಹಗಳು ಮುಂದೆ ʼಉರಿಯ ನಾಲಗೆ’ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ೧೯೯೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಯಿತು. ಇದು ʼಪ್ರವಾ’ ಸಾಪು ಗೆ ಮೂಡಿದ ಎರಡನೆಯ ಕೋಡು. ಅಂಕಣ ಬರಹಕ್ಕೆ ಸೃಜನಶೀಲ ಸಾಹಿತ್ಯದ ಮಾನ್ಯತೆ ತಂದುಕೊಡುವುದರಲ್ಲಿ ʼಪ್ರವಾ’ ತನ್ನ ಸಾಂಸ್ಕೃತಿಕ ಹೊಣೆಗಾರಿಕೆಯನ್ನ ನಿರ್ವಹಿಸಿತ್ತು ಎಂದು ಈಗ ಯಾವ ಎಗ್ಗೂ ಇಲ್ಲದೆ ಹೇಳಬಹುದು.

ಧಾರವಾಡದಲ್ಲಿ ಕಣವಿ, ಕುರ್ತಕೋಟಿ, ಜಿ ಬಿ ಜೋಶಿ, ಗಿರಡ್ಡಿ, ಸಿದ್ಧಲಿಂಗ ಪಟ್ಟಣ ಶೆಟ್ಟಿ, ಆರ್ಯ ಹೀಗೇ ಹಲವಾರು ಲೇಖಕ ಮಿತ್ರರನ್ನು ಭೇಟಿ ಮಾಡಿ ಸಮಾಲೋಚಿಸಿದೆ. ʼಸಾಪು’ಗೆ ಬರೆಯುವಂತೆ ಕೋರಿದೆ. ಕುರ್ತಕೋಟಿಯವರು ಅಂಕಣ ಬರೆಯಲು ಒಪ್ಪಿದ್ದು ಧಾರವಾಡ ಭೇಟಿಯ ಮೊದಲ ಸಿದ್ಧಿಯಾಗಿತ್ತು. ಅಲ್ಲಿಂದ ಎನ್ಕೆ ಅವರನ್ನು ಭೇಟಿಯಾದೆ. ಅವರು ಬೇಂದ್ರೆಯವರ ಬದುಕನ್ನಾಧರಿಸಿ ಕಾದಂಬರಿಯೊಂದನ್ನು ಬರೆಯುತ್ತಿರುವ ವಾಸನೆ ಹಿಡಿದೇ ನಾನು ಅವರಲ್ಲಿಗೆ ಹೋಗಿದ್ದೆ. ಕಾಂಬರಿಯನ್ನು ʼಪ್ರವಾ’ಗೆ ಕೊಡಿ, ʼಸಾಪು’ದಲ್ಲಿ ಧಾರಾವಾಹಿಯಾಗಿ ಪ್ರಕಟಿಸುತ್ತೇನೆ ಎಂದು ಆ ಹಿರಿಯ ಪ್ರಸಾರಕ/ಲೇಖಕರಿಗೆ ಮನವಿ ಮಾಡಿದೆ.

ಎನ್ಕೆ ಸಂತೋಷದಿಂದ ಒಪ್ಪಿದರು. ಹೇಳಿದ ಸಮಯಕ್ಕೆ ಹಸ್ತಪ್ರತಿಯ ಮೊದಲ ಕಂತನ್ನು ಕೊಟ್ಟರು. ʼಧಾರವಾಡ ಮಾಸ್ತರ’ ಶುರುವಾಯಿತು, ಬೇಂದ್ರೆಯವರ ಮನೋಬಿಂಬಗಳನ್ನು ಬಿಂಬಿಸುವ ಚಂದ್ರನಾಥರ ಮನೋಹರ ಚಿತ್ರಗಳೊಂದಿಗೆ. ಅವರ ಚಿತ್ರಗಳ ರೇಖೆ ವರ್ಣಗಳಲ್ಲಿ ʼಬೇಂದ್ರೆತನ’ ಪುಟಿಯುತ್ತಿತ್ತು. ಆಗ ಧಾರವಾಡದಲ್ಲಿ ಸಹೋದ್ಯೋಗಿ ಪ್ರೇಮಕುಮಾರ್ ಹರಿಯಬ್ಬೆ ನಮ್ಮ ಬಾತ್ಮೀದಾರರಾಗಿದ್ದರು. ಅವರು ಮುತುವರ್ಜಿ ವಹಿಸಿ ಉಳಿದ ಕಂತುಗಳು ನನಗೆ ಸಕಾಲದಲಿ ತಲುಪುವಂತೆ ಮಾಡಿದರು. ʼಧಾರವಾಡ ಮಾಸ್ತರ’ ಕಾದಂಬರಿ ನಮ್ಮ ವಾಚಕರ ಹಾಗೂ ಸಹೃದಯಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು.

ಸಾಹಿತಿ, ಕಲಾವಿದ ಮಿತ್ರರು ಮತ್ತು ಸಹೋದ್ಯೋಗಿ ಮಿತ್ರರಾದ ರಮೇಶ್, ಚಂದ್ರನಾಥ್, ಜಿ ಕೆ ಸತ್ಯ, ಶ್ರೀನಿವಾಸ ಮೂರ್ತಿ, ಮನೋಹರ, ಖ್ಯಾತ ವ್ಯಂಗ್ಯ ಚಿತ್ರಕಾರ ಆರ್ ಮೂರ್ತಿ- ಈ ಕಲಾವಿದರುಗಳ ಸಹಕಾರಗಳಿಂದ ʼಸಾಪು’ ಹೊಸ ವಸ್ತು ವಿನ್ಯಾಸಗಳಲ್ಲಿ ಹಳೆಯ/ಹೊಸ ಓದುಗರ ಹೃದಯಕ್ಕೆ ಲಗ್ಗೆ ಇಟ್ಟಿತು.

|ಮುಂದಿನ ಸಂಚಿಕೆಯಲ್ಲಿ|

December 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: