ಸಾಣೂರಿನಲ್ಲಿ ನಿಂತು ಹೇಳುತ್ತಿದ್ದೇನೆ : ದಯವಿಟ್ಟು ಕ್ಷಮಿಸಿ..

ಮಂಜುನಾಥ ಕಾಮತ್

ದಯವಿಟ್ಟು ಕ್ಷಮಿಸಿ… ತಾಳಮದ್ದಳೆ ಕಾರ್ಯಕ್ರಮದ ವರೆಗೆ ನಾನು ಫೇಸ್ಬುಕ್ಕಿನಲ್ಲಿ ತುಂಬಾನೇ ತಾರತಮ್ಯ ಮಾಡುತ್ತಿದ್ದೆ. ಮುಸ್ಲಿಂ ಯುವಕರ ಫ್ರೆಂಡ್ ರಿಕ್ವೆಸ್ಟ್ ಬಂದ್ರೆ ನಾನು accept ಮಾಡ್ತಾನೇ ಇರ್ಲಿಲ್ಲ. ಏನೋ ಒಂದು ತಪ್ಪು ತಿಳುವಳಿಕೆ.

ನನ್ನ ಸಹಪಾಠಿಗಳು, ನಮ್ಮೂರಿನವ್ರನ್ನು ಬಿಟ್ರೆ ಬೇರೆ ಯಾರೂ ನನ್ನ ಫ್ರೆಂಡ್ ಲಿಸ್ಟಲ್ಲಿ ಇರ್ಲಿಲ್ಲ. ಆದ್ರೆ ಮೊನ್ನೆ ಕಾರ್ಯಕ್ರಮಕ್ಕೆ ಮಸೀದಿಯವ್ರ ಸಹಕಾರ ಮತ್ತು ಮುಸ್ಲಿಂ ಯುವಕರ ಪ್ರೋತ್ಸಾಹ ನೋಡಿ ನನ್ನಲ್ಲಿದ್ದ ತಪ್ಪು ಕಲ್ಪನೆ ಬದಲಾಗಿದೆ.

ಆ ಕುರಿತು ಬರೆದ ಲೇಖನ ಈಗಾಗ್ಲೇ 300 ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ಇನ್ ಬಾಕ್ಸಿಗೆ ಅದೆಷ್ಟೋ ಮಂದಿ ಮೆಸೇಜು ಮಾಡಿ “ಓದುಗರು” ಬಳಗದ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಆ ಲೇಖನ ಓದಿ ಐವತ್ತಕ್ಕೂ ಹೆಚ್ಚು ಮುಸ್ಲಿಂ ಯುವಕ ಯುವತಿಯರಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಒಂಚೂರೂ ಅನುಮಾನವಿಲ್ಲದೆ ಎಲ್ಲರನ್ನೂ accept ಮಾಡಿದ್ದೇನೆ. ಹೃದಯಾಂತರಾಳದಿಂದ.

ಮುಸ್ಲಿಂ ಸಹೋದರ ಸಹೋದರಿಯರೇ ಈವರೆಗಿನ ನನ್ನ ತಪ್ಪುಕಲ್ಪನೆಗೆ ಕ್ಷಮೆ ಇರಲಿ.

ಅದು ಆದದ್ದು ಹೀಗೆ-

ತಾಳ ಮದ್ದಳೆ ಆಯೋಜಿಸಿದ್ದ ಸೇತುವೆಯ ಒಂದು ತುದಿಗೆ ಸಾಣೂರು ಮಸೀದಿ. ನಮ್ಮದು ಪೌರಾಣಿಕ ಪ್ರಸಂಗ.

ಮಸೀದಿಯ ಪಕ್ಕ ರಾಮ ನಾಮ? ಕೃಷ್ಣ ಪಠಣ?

ಹೀಗೆ ಹಲವರು ನಮ್ಮನ್ನು ಎಚ್ಚರಿಸಿದ್ದರು. ಜಾಗೃತೆ ಹೇಳಿದ್ದರು. ಹೆದರಿಕೆ ನಮಗೂ ಇತ್ತು….

ಆ ಕಾರಣಕ್ಕೆ ನಾವು ನಮ್ಮ ಮೂಲ ಕಲ್ಪನೆಯನ್ನೇ ಅಡಗಿಸಿಟ್ಟಿದ್ದೆವು. ಶರಸೇತು ಬಂಧದ ಮೂಲಕ ಧಾರ್ಮಿಕ ಸಾಮರಸ್ಯದ ಸೇತುವೆ ಗಟ್ಟಿ ಇದೆ ಎನ್ನುವುದನ್ನು ಸಾಬೀತು ಪಡಿಸೋದೇ ನಮ್ಮ ಉದ್ದೇಶವಾಗಿತ್ತು.

ಆದರೆ ಇದೆಲ್ಲ ಪ್ರಚಾರಕ್ಕೆ ಬಂದು ಮಸೀದಿಯವ್ರಿಗೆ ಯಾರಾದರೂ ಒತ್ತಡ ಹೇರಿದರೆ? ನಮ್ಮ ಕಾರ್ಯಕ್ರಮಕ್ಕೆ ಅಡಚಣೆ ತಂದರೆ? ಹೆದರಿ ಆ ಮಾತನ್ನೇ ಅಡಗಿಸಿಟ್ಟು ಕೇವಲ ಸೇತುವೆ ಮೇಲೆ ಶರಸೇತು ಬಂಧ, ಶಾಂಭವೀ ನದಿ ತಟದಲ್ಲಿ ತಾಳಮದ್ದಳೆ ಎಂಬುದಷ್ಟನ್ನೇ ಹೇಳಿಕೊಂಡು ಪ್ರಚಾರ ಮಾಡಿದ್ದೆವು.

ಆದರೆ ನಾವು ಹೆದರುವ ಅಗತ್ಯವೇ ಇರಲಿಲ್ಲ. ಮೊದಲಿನಿಂದ ಅವ್ರ ಜೊತೆ ಸಂಪರ್ಕದಲ್ಲಿರುತ್ತಿದ್ದರೆ ಅನುಮಾನಕ್ಕೆ ಎಡೆಯೇ ಇರುತ್ತಿರಲಿಲ್ಲ.

ಕಾರ್ಯಕ್ರಮದ ಬೆಳಿಗ್ಗೆ ಮಸೀದಿಯ ಅಂಗಳದಲ್ಲಿ ಇನ್ನೂರು ಕುರ್ಚಿಗಳು ಹೊರಬಂದಿದ್ದವು. ಇದ್ನ ನೀವು ಬಳಸಿಕೊಳ್ಳಿ. ಕಲಾವಿದರು ಎಷ್ಟೊತ್ತಿಗೆ ಬರುತ್ತಾರೆ? ಅವ್ರಿಗೊಂದು ಸನ್ಮಾನ ಮಾಡ್ಬಹುದೇ? ಅಂತ ಮುಸ್ಲಿಂ ಯುವ ಸಂಘಟನೆಯ ಮುಖಂಡರು ಕೇಳಿಕೊಂಡಾಗ ನಿಜ್ಜಕ್ಕೂ ಕಣ್ಣೀರು ಬಂತು. ನಮ್ಮ ತಪ್ಪು ಕಲ್ಪನೆಗೆ ಬೇಸರವಾಯಿತು.

ಸಾಣೂರಿನ ಸಂಪ್ರದಾಯದಂತೆ ಕಾರ್ಯಕ್ರಮಕ್ಕೆ ಮುನ್ನ ಮಾರಿಗುಡಿ, ನಾಗನ ಕಟ್ಟೆ ಮತ್ತು ಮಸೀದಿಗೂ ಹೋಗಿ ನಾವು ಪ್ರಾರ್ಥನೆ ಮಾಡಿ ಕಾಣಿಕೆ ಸಲ್ಲಿಸಿ ಬಂದಿದ್ದೆವು.

ಮಸೀದಿ ನನಗಂತೂ ಬೇರೆ ಅಂತ ಅನ್ನಿಸಲೇ ಇಲ್ಲ. ನಮ್ಮನ್ನು ಒಳಗೆ ನಿಲ್ಲಿಸಿ ಅಲ್ಲಿನ ಪೂಜಾರಿ ಸುಮಾರು ಐದು ನಿಮಿಷಗಳ ಕಾಲ ಪ್ರಾರ್ಥಿಸಿದ್ದ. ನಮ್ಮ ಬಳಗ ದೇವಸ್ಥಾನಕ್ಕೆ ಹೋದರೆ ಹೇಗೋ, ಹಾಗೆಯೇ ಅಲ್ಲಿಯೂ ಕೈ ಜೋಡಿಸಿ ನಿಂತು ನಮಸ್ಕರಿಸಿದ್ದೆವು.
ಫೋಟೋ ತೆಗೀಬಹುದೋ ಬಾರದೋ ಅನ್ನುವ ಸಂಶಯವಿದ್ದರೂ ಒಂದೆರಡು ಫೋಟೋವನ್ನೂ ತೆಗೆದೆವು. ಅವ್ರೆಲ್ರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದೆವು. ಅವ್ರು ನಮ್ಮನ್ನು ತಮ್ಮ ಉರುಸಿಗೆ ಆಹ್ವಾನಿಸಿದರು.
****

ಕಾರ್ಯಕ್ರಮ ಆರಂಭವಾಯ್ತು. ಸಾವಿರ ಜನ ಸೇರಿದ್ದರು. ಅವ್ರಿಗೆಲ್ಲಾ ಬಾಯಾರಿಕೆಗೆ ಬೆಲ್ಲ, ನೀರನ್ನು ಮಸೀದಿಯ ಜಗಲಿಯಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರನ್ನು ಮಸೀದಿಯವ್ರೇ ಒದಗಿಸಿದ್ದರು. ಹತ್ತಿಪ್ಪತ್ತು ಮಂದಿ ಮುಸ್ಲಿಂ ಮಹಿಳೆಯರು, ಮಕ್ಕಳು ಪಕ್ಕದ ಮರಳ ರಾಶಿಮೇಲೆ ಕೂತು ತಾಳಮದ್ದಳೆ ಕೇಳಿದ್ದರು.
****

ಇನ್ನೊಂದರ ಬಗ್ಗೆ ನಾವು ತುಂಬಾ ಆಲೋಚಿಸಿದ್ದೆವು. ನಮ್ಮ ಕಾರ್ಯಕ್ರಮದ ಅವಧಿಯಲ್ಲಿ ಎರಡು ಭಾರಿ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತೆ. ಮೈಕಿನಲ್ಲಿ. ನಮ್ಮಿಂದ ಅವ್ರಿಗೆ ತೊಂದ್ರೆ ಆಗಬಾರ್ದು. ಆ ಹೊತ್ತಿಗೆ ಸರಿಯಾಗಿ ಭಾಗವತರಿಗೆ ಹೇಳಿ ಅಷ್ಟು ಹೊತ್ತು ತಾಳಮದ್ದಳೆ ನಿಲ್ಲಿಸೋಣವೆಂದುಕೊಂಡಿದ್ದೆವು.

ವಿಶೇಷ ಏನು ಗೊತ್ತಾ? ನಮ್ಮ ಕಾರ್ಯಕ್ರಮವನ್ನು ನಿಲ್ಲಿಸುವ ಅವಶ್ಯಕತೆಯೇ ಬಂದಿರಲಿಲ್ಲ. ಯಾಕಂದ್ರೆ ಅವ್ರ ಪ್ರಾರ್ಥನೆ ನಮಗೆ ಕೇಳಿಸಲೇ ಇಲ್ಲ. ಮೈಕದ ಧ್ವನಿಯನ್ನು ಎಂದಿಗಿಂತ ಸ್ವಲ್ಪ ತಗ್ಗಿಸಿದ್ದರು.

****

ಎಲ್ಲವೂ ಮುಗಿಯುವ ಹೊತ್ತಿಗೆ ಗಂಟೆ ಎಂಟೂವರೆ. ಕತ್ತಲೆಗೇ ಅವ್ರ ಕುರ್ಚಿಗಳ್ನ ಸಾಗಿಸಿದ್ದೆವು. ಅದ್ರಲ್ಲಿ ಮೂರು ಕುರ್ಚಿಗಳು ಕಡಿಮೆ ಇದ್ದವು. ಅಯ್ಯೋ ಬಾಡಿಗೆ ಕುರ್ಚಿಯೊಂದಿಗೆ ಸೇರಿಹೋಯ್ತಾ?

ಆಗ ಮಸೀದಿಯ ಹುಡುಗನೊಬ್ಬ ಬಂದು, ವಿಷಯ ತಿಳಿದು ಅದಕ್ಯಾಕೆ ಟೆನ್ಷನ್? ಇಲ್ಲೇ ಇರಬಹ್ದು ನೋಡೋಣವೆಂದು ಅವ್ನೂ ನಮ್ಜೊತೆ ಕುರ್ಚಿ ಹುಡುಕಲು ಬಂದ. ತೆಂಗಿನ ತೋಟದ ಕೆಳಗೆ ಕತ್ತಲೆಯಲ್ಲಿದ್ದ ಕುರ್ಚಿಯನ್ನು ಹುಡಕಿ ತಂದು ಮಸೀದಿಯೊಳಗಿಟ್ಟ.

ಒಟ್ನಲ್ಲಿ ಸಾಣೂರಿಗೆ ಬಂದಿದ್ದ ರಾಮ ಕೃಷ್ಣರು ಮುಸಲ್ಮಾನರ ಸಹಿಷ್ಣುತೆಗೆ ಭಂಗ ತರಲಿಲ್ಲ. ಅವರಿಟ್ಟ ಬೆಲ್ಲ ನೀರನ್ನು ಕುಡಿದು ಅವರ ಸೇವೆಯನ್ನು ಸ್ವೀಕರಿಸಿದರು. ನಮ್ಮ ಕಾರ್ಯಕ್ರಮಕ್ಕೆ ಅಲ್ಲಾನೂ ಹಾರೈಸಿದ್ದರು. ಚಂಡೆ ಮದ್ದಳೆ ತಾಳ ಜಾಗಟೆಗಳು ಅವ್ರಿಗೂ ಖುಷಿ ಕೊಟ್ಟಿದ್ದವು.

‍ಲೇಖಕರು admin

December 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Dr. Prabhakar M. Nimbargi

    It is really good that an incident experienced by you made you to convert your attitude. Tolerance to other faiths is in blood of Indians. How do you think the music maestros like Ustad Alla Rakha Khan and Ustad Bismilla Khan start their riyaz, they start with Saraswati Vandana.

    ಪ್ರತಿಕ್ರಿಯೆ
  2. ಹಜರತಅಲಿ ಇ ದೇಗಿನಾಳ

    ಬಾಂದವ್ಯವನ್ನು ಹೀಗೇಯೇ ಬೆಸೆಯಬೇಕು.

    ಪ್ರತಿಕ್ರಿಯೆ
  3. ಆಶಿಕ್ ಮುಲ್ಕಿ

    ಮಂಜುನಾಥ್ Brother ಕ್ಷಮೆ ಕೊಡಲು ನಾವು ಯಾರು , ಕ್ಷಮೆ ಕೇಳಲು ನೀವು ಯಾರು !

    ಪ್ರತಿಕ್ರಿಯೆ
  4. sandhya h

    Ide reeti nmmellara bandhutvada besuge heege gattigollutta dodda aalada maravagali. .Rajakaarnigalau tikki eseyuva daalavagadantaha echchara mudali

    ಪ್ರತಿಕ್ರಿಯೆ
  5. Rashmi Moily Patel

    Sogasaagide!! Nimma experience! Naanu Karkala dalli beledu, matte bengaluru, eega USA..nalvattu varushada hinde nanna dakshina Kannada Hege ittu haage nodalu bahala kaatura. Nimma lekhana odi swalpa hope bandide. Heege baritha iri.
    Rashmi Moily Patel

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: