ಸಾಕ್ಷಿ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ಯನ್ನು ‘ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ‘ವಿಜಯ ಕರ್ನಾಟಕ’ದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ 

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

‘ನೀವು ಕೊಲೆ ಮಾಡಿದ್ದಕ್ಕಾಗಿ ಸರೆಂಡರ್ ಆಗಲೇಬೇಕೆಂದಿದ್ದರೆ ಇಷ್ಟು ತಡವಾದದ್ದು ಏಕೆ ?’
ಕೋರ್ಟ್ ನಲ್ಲಿ ಹಾಜರುಪಡಿಸಲಾಗಿದ್ದ ವ್ಯಕ್ತಿಯನ್ನು ನ್ಯಾಯಾಧೀಶರು ಕೇಳಿದರು. 

‘ತನಿಖೆ ನಡೆಸುತ್ತಿದ್ದೆ ಸರ್’
‘ತನಿಖೆನಾ? ನೀವೇನ್ ಪೊಲೀಸೇನ್ರಿ?’
‘ಇಲ್ಲ ಸರ್. ನಾನು ಮಾಡಿದ ಕೊಲೆಯ ತನಿಖೆಯನ್ನೇ ನಡೆಸುತ್ತಾ ಇದ್ದೆ’ 
‘ಏನ್ ಹೇಳ್ತಾ ಇದ್ದೀರ ನೀವು?’
‘ಸತ್ಯವನ್ನೇ ಹೇಳ್ತಾ ಇದ್ದೀನಿ ಸರ್…’

‘ಅದ್ಹೇಗ್ರಿ? ನೀವು ಮಾಡಿದ ಕೊಲೆ ನಿಮಗೆ ತಿಳಿದಿರೋದಿಲ್ವ? ಅದನ್ನು ತನಿಖೆ ಮಾಡಿ ಪತ್ತೆ ಮಾಡಬೇಕಾ?’
‘ಹಾಗಲ್ಲ ಸರ್.‌ ನಾನು ಕೊಲೆ ಯಾರು ಮಾಡಿದ್ದು ಅಂಥ ತನಿಖೆ ನಡೆಸ್ತಾ ಇರಲಿಲ್ಲ. ಕೊಲೆ ನೋಡಿದ್ದು ಯಾರು ಅಂತ ಶೋಧ ಮಾಡ್ತಿದ್ದೆ ಸರ್’ 

‘ಏನ್ರಿ ಹಾಗಂದ್ರೆ?’
‘ನಾನು ಕೊಲೆ ಮಾಡೋವಾಗ ಯಾರೋ ಅದನ್ನು ನೋಡಿದ್ರು ಸರ್. ಅದು ಯಾರು ಅಂತ ಪತ್ತೆ ಮಾಡಬೇಕಿತ್ತು’
‘ಅಂದ್ರೆ ಅವರನ್ನೂ ಕೊಲೆ ಮಾಡಿಬಿಟ್ರೆ ಸಾಕ್ಷಿ ಯಾವುದೂ ಉಳಿಯೋದಿಲ್ಲ ಅಂತಾ ತಾನೆ?’
‘ಇಲ್ಲ ಸರ್ ಅದಕ್ಕಲ್ಲ…’
‘ಮತ್ತೇನಕ್ಕೆ?’ 
‘ಅವರನ್ನು ಹಿಡಿದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿಕ್ಕೆ’ 

‘ಅಲ್ಲಯ್ಯ, ಕೊಲೆ ಮಾಡಿದವನನ್ನು ಹಾಜರುಪಡಿಸಿದ ಮೇಲೆ ಈ ಕೊಲೆ ನೋಡಿದವನ ಅವಶ್ಯಕತೆ ಏನಿತ್ತು?’
‘ನನಗೆ ಈ ಹಿಂದಿನ ನ್ಯಾಯಾಧೀಶರು ಆ ರೀತಿಯ ಶಿಕ್ಷೆ ನೀಡಿದ್ದರು’ 
‘ಯಾವ ರೀತಿಯ ಶಿಕ್ಷೆ?’

‘ನಿನ್ನ ಅಪರಾಧಕ್ಕೆ ನಿನಗೆ ಗಲ್ಲು ಶಿಕ್ಷೆ ನೀಡಬೇಕು. ಆದರೆ ನೀನು ಕೊಲೆ ಮಾಡಿರುವುದು ಯಾರಿಗೋ ಒಬ್ಬರಿಗೆ ತಿಳಿದಿದೆ‌. ಅವರ್ಯಾರೆಂದು ನೀನು ಪತ್ತೆ ಮಾಡಿಕೊಳ್ಳಬೇಕು. ಹಾಗೆ ಪತ್ತೆ ಮಾಡಿಕೊಂಡು ನ್ಯಾಯಾಲಯಕ್ಕೆ ತಿಳಿಸಬೇಕು. ಆಗ ನಿನಗೆ ನೀಡುವ ಶಿಕ್ಷೆಯಲ್ಲಿ ವಿನಾಯತಿ ನೀಡುವ ಬಗ್ಗೆ ನ್ಯಾಯಾಲಯ ಯೋಚಿಸುತ್ತದೆ’ 

ನ್ಯಾಯಾಧೀಶರು ಆತನ ಕೇಸಿನ ಎಲ್ಲಾ ಫೈಲುಗಳನ್ನು ಮತ್ತೊಮ್ಮೆ ಪರಿಶೀಲಿಸಿದರು. ಯಾರು ಈ ಹಿಂದೆ ಅಂಥದ್ದೊಂದು ಆದೇಶ ಕೊಟ್ಟಿರಬಹುದೆಂದು ತಿಳಿಯಲು. ಆ ರೀತಿ ಆದೇಶ ಕೊಟ್ಟಿದ್ದ ನ್ಯಾಯಾಧೀಶರು ನಿವೃತ್ತರಾಗಿದ್ದರು. ಕೆಲ ದಿನಗಳ ತನಕ ಈ ಕೇಸಿನ ತೀರ್ಪನ್ನು ಕಾಯ್ದಿರಿಸಿದರು.

ಆ ದಿನ ಕೋರ್ಟ್ ಮುಗಿಸಿದ ನ್ಯಾಯಾಧೀಶರು ಹಾಗೆ ತೀರ್ಪಿತ್ತಿದ್ದ ನ್ಯಾಯಾಧೀಶರಿಗೆ ಕರೆ ಮಾಡಿ ಅವರನ್ನು ಭೇಟಿಯಾಗಬೇಕೆಂಬ ಇಂಗಿತ ವ್ಯಕ್ತ ಪಡಿಸಿದರು.‌ ಅದಕ್ಕೆ ಹಿರಿಯ ನಿವೃತ್ತ ನ್ಯಾಯಾಧೀಶರು ಕೂಡ‌ ಸಮ್ಮತಿಸಿದರು. 

‘ನೀವು ಕೊಟ್ಟ ಆ ಆದೇಶ ಅಥವಾ ತೀರ್ಪಿನ ಔಚಿತ್ಯವೇನು ಎಂದು ಕೇಳಬಹುದೆ ಸರ್?’ ನಿವೃತ್ತ ನ್ಯಾಯಾಧೀಶರ ಮನೆಯ ಲಾನ್ ನಲ್ಲಿ ಮುಖಾಮುಖಿಯಾಗಿ ಕೂತಿದ್ದ ನ್ಯಾಯಾಧೀಶರು ಕೇಳಿದರು. 

‘ಯಾವ ತೀರ್ಪಿನ ಬಗ್ಗೆ ಹೇಳುತ್ತಿದ್ದೀರಿ ನೀವು?’ 

‘ಅದೇ ಸರ್. ಕೊಲೆ ಮಾಡಿದ ವ್ಯಕ್ತಿಯೊಬ್ಬ ತಾನೇ ಸರೆಂಡರ್ ಆಗಿದ್ದಾಗ ಅವನಿಗೆ ನೀವು ಆತ ಕೊಲೆ ಮಾಡಿದ್ದನ್ನು ನೋಡಿದವರು ಯಾರು ಎಂದು ಪತ್ತೆ ಮಾಡಿಕೊಂಡು ಬಂದರೆ ಶಿಕ್ಷೆಯ ಪ್ರಮಾಣದಲ್ಲಿ ವಿನಾಯಿತಿ ನೀಡಬಹುದೆಂದು ಕೊಟ್ಟ ತೀರ್ಪಿನ ಬಗ್ಗೆ’ 

‘ಓಹ್! ಅದಾ? ಕೊಲೆಗಾರ ಯಾರೂ ಅಂತ ಗೊತ್ತಾಗದೆ ಇರೋವಾಗ ಸಾಕ್ಷಿಗಳ ಮೂಲಕ ಆತನನ್ನು ಹುಡುಕೋ ಪ್ರಯತ್ನ ಮಾಡ್ತೀವಲ್ಲ, ಹಾಗೆ ಕೊಲೆಗಾರನೇ ಬಂದು ಒಪ್ಪಿಕೊಂಡಾಗ ಸಾಕ್ಷಿಯನ್ನು ಹುಡುಕೋದು ಮುಖ್ಯ ಅನ್ನಿಸಿ ಅಂಥ ತೀರ್ಪು ಕೊಟ್ಟೆ’ 

‘ಇದೇನೋ ಗೊಂದಲಮಯವಾಗಿದೆ ಸರ್’ 

‘ಸಾಕ್ಷಿಗಳು ಸೃಷ್ಟಿಯಾಗೋದು ಗೊಂದಲದಲ್ಲಿಯೇ’ 

‘ಸರಿ ಸರ್. ಈಗ ಆತ ಸಾಕ್ಷಿ ಹುಡುಕಿಕೊಂಡು ಬಂದಿಲ್ಲ. ನಾನೇನು ತೀರ್ಪು ನೀಡುವುದು?’ 

‘ಅದನ್ನು ನಾನು ನಿರ್ಧರಿಸಲಾಗದು. ನೀವೇ ನಿಮಗೆ ಸರಿ‌ ಅನ್ನಿಸಿದ್ದನ್ನು ಮಾಡಿ’ 

‘ಹಾಗೆಯೇ ಆಗಲಿ ಸರ್’ ಎಂದ ನ್ಯಾಯಾಧೀಶರು,
ಹಿರಿಯರ ಸಮಯಕ್ಕಾಗಿ ಅವರಿಗೆ ಧನ್ಯವಾದ ತಿಳಿಸಿ‌ ಅಲ್ಲಿಂದ ಹೊರಟರು.

ಈ ನಡುವೆ ನಗರದಲ್ಲಿ ಮತ್ತೊಂದು ಕ್ಷುಲ್ಲಕ ಘಟನೆ ನಡೆದಿತ್ತು. 

ಬೀದಿ ನಾಯಿಯೊಂದು ವಿಪರೀತ ಬೊಗಳುತ್ತ ಆ ಏರಿಯಾದ ಕಾರ್ಪೊರೇಟರ್ ಮನೆ ಬಳಿ ಬಂತು. ಹುಚ್ಚು ಹೆಚ್ಚಾದ ನಾಯಿಯಿರಬೇಕೆಂದು ತಿಳಿದು ಅಲ್ಲಿಂದ ಅದನ್ನು ಓಡಿಸಲಾಯಿತು. ನಂತರ ಆ ಏರಿಯಾದ ಪೊಲೀಸ್ ಸ್ಟೇಷನ್ ಎದುರಲ್ಲಿ ಕುಳಿತ ನಾಯಿ ಕೂಗಾಡುತ್ತಿತ್ತು. ಎಸ್ ಐ ಅವರ ಆದೇಶದ ಮೇರೆಗೆ ಅದನ್ನು ಅಲ್ಲಿಂದ ಎತ್ತಂಗಡಿ ಮಾಡಿಸಲಾಯಿತು.

ಮತ್ತೆ ಆ ನಾಯಿ ಅದೇ ಏರಿಯಾದ ಎಮ್ ಎಲ್ ಎ ಮನೆಯ ಮುಂದೆ ಕಾಣಿಸಿಕೊಂಡಿತು. ಅದರ ಕಿರುಚಾಟವೂ ಈಗ ಹೆಚ್ಚಾಗಿತ್ತು. ಶಾಸಕರ ಮನೆಯ ಮುಂದೆ ಇಂಥದ್ದೆಲ್ಲ ಸಹ್ಯವಾಗುವುದಾದರೂ ಹೇಗೆ? ಹಾಗಾಗಿ ಆ ನಾಯಿಯನ್ನು ನಗರದ ಹೊರವಲಯದ ಹೈವೇ ಗೆ ಬಿಟ್ಟು ಬರಲಾಯಿತು. ಆದರೆ ನಾಯಿ ಸುಮ್ಮನಾಗಲಿಲ್ಲ. 

ಅಲ್ಲಿಂದ ಬಂದು ತಹಶೀಲ್ದಾರ್ ಆಫೀಸಿನ ಬಳಿ ಆಕಾಶಕ್ಕೆ ಮುಖ ಮಾಡಿ ಜೋರಾಗಿ ಕೂಗಲಾರಂಭಿಸಿತು. ಕಲ್ಲಿನಲ್ಲಿ ಹೊಡೆದು ಓಡಿಸಿದ್ದರಿಂದಾಗಿ ಸೀದಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಂದು ಕೂತು, ಹೋಗಿ ಬರುವವರನ್ನೆಲ್ಲ ಅಡ್ಡ ಹಾಕಿತು. ಏನೋ ಹೇಳಲೆತ್ನಿಸಿದಂತೆ ಕೂಗಲಾರಂಭಿಸಿದಾಗ ಅದನ್ನು ಅಲ್ಲಿಂದಲೂ ಓಡಿಸಲಾಯಿತು. 

ಅದು ನಂತರ ಎಸ್ಪಿ ಸಾಹೇಬರ ಮನೆಯ ಮುಂದೆ ಹಾಜರಾಯಿತು. ಅಲ್ಲೂ ಅದಕ್ಕೇನು ಮಹಾ ಸ್ವಾಗತ ಸಿಗಲಿಲ್ಲ. ಎಸ್ಪಿ ಸಾಹೇಬರು ತಮ್ಮ ಇಲಾಖೆಗೆ ಸಂಬಂಧಿಸಿದ ಶ್ವಾನದಳದ ಬಗ್ಗೆ ಹೊಂದಿದ್ದ ಕಕ್ಕುಲಾತಿಯನ್ನು ಇತರೆ ಶ್ವಾನಗಳ ಬಗ್ಗೆಯೇನು ಹೊಂದಿರುವಂತೆ ಕಾಣಲಿಲ್ಲ.

‘ಬೀದಿ ನಾಯಿಗಳನ್ನ ಹದ್ದು ಬಸ್ತಿನಲ್ಲಿಟ್ಟಿಲ್ವೇನ್ರಿ?’ ಎನ್ನುತ್ತಾ, ಸರ್ಕಲ್ ಇನ್ಸಪೆಕ್ಟರ್ ಕಡೆಗೆ ವಕ್ರನೋಟ ಬೀರಿ ಜೀಪ್ ಹತ್ತಿದರು. ‘ಐ ವಿಲ್ ಲುಕ್ ಇಂಟು ದಿಸ್ ಸರ್’ ಎಂದು ಹೇಳಿದ ಸರ್ಕಲ್ ಇನ್ಸಪೆಕ್ಟರ್, ಆ ನಾಯಿಯನ್ನು ಅಲ್ಲಿಂದ ವಿಲೇವಾರಿ ಮಾಡಿಸಿದರು. 

ಹಠ ಬಿಡದ ನಾಯಿ ಮರುದಿನ ಜಿಲ್ಲಾ ನ್ಯಾಯಾಧೀಶರ ಮನೆಯ ಕಾಂಪೌಂಡ್ ಮುಂದೆ ಹಾಜರಾಯ್ತು.‌ ತನ್ನ ಖಾಯಂ ವರಸೆಯಲ್ಲಿ ಏನೋ ಮಹತ್ವದ್ದನ್ನು ಹೇಳಲು ಪ್ರಯತ್ನಿಸುವಂತೆ ಹಂಬಲಿಸುತ್ತಿತ್ತು. ನ್ಯಾಯಾಧೀಶರ ಕಾರು ಹೊರ ಬರುತ್ತಿದ್ದಂತೆ ಅದನ್ನು ಹಿಂಬಾಲಿಸುತ್ತಾ ಜೋರಾಗಿ ಕೂಗತೊಡಗಿತು.‌

ಇದನ್ನು ಗಮನಿಸಿದ ನ್ಯಾಯಾಧೀಶರು ಎಸ್ಪಿಯವರಿಗೆ ಕಾಲ್ ಮಾಡಿ ನಾಯಿಯ ಉಪಟಳದ ಬಗ್ಗೆ ದೂರಿದರು. ಜಿಲ್ಲಾ ನ್ಯಾಯಾಧೀಶರ ಕಾರನ್ನೇ ಬೆನ್ನತ್ತಿದ್ದ ಆ ನಾಯಿಯನ್ನು ಬಂಧಿಸಲಾಯಿತು. 

‘ನೀವು ಕೊಲೆ ಮಾಡಿದ್ದನ್ನು ನೋಡಿದ ಸಾಕ್ಷಿಯನ್ನು ಪತ್ತೆ ಮಾಡಿದಿರಾ?’ ಎಂದು ಕೇಳಿದರು ನ್ಯಾಯಾಧೀಶರು. 
‘ಇಲ್ಲ ಸರ್. ಆಗಲಿಲ್ಲ… ಆದರೆ ಒಂದು ಮಾರ್ಗ ಇದೆ. ನೀವು ಸಹಾಯ ಮಾಡಬೇಕು’
‘ಏನದು ಹೇಳಿ. ಉಚಿತವೆನಿಸಿದಲ್ಲಿ ಘನ ನ್ಯಾಯಾಲಯವು ನಡೆಸಿಕೊಡುತ್ತದೆ’ 

‘ಯಾವುದಾದರೂ ಪೊಲೀಸ್ ಸ್ಟೇಷನ್ ಗೆ ಕೊಲೆ ನೋಡಿದವರ್ಯಾರಾದರೂ ಸ್ವಯಂಪ್ರೇರಿತರಾಗಿ ಬಂದು ದೂರು ಕೊಟ್ಟಿದ್ದಾರಾ ಎಂದು ತಿಳಿದುಕೊಳ್ಳಲು ಸಾಧ್ಯವಾಗುವುದಾದರೆ…’  ‘ಆಗಲಿ’ ಎಂದ ನ್ಯಾಯಾಧೀಶರು ಈ ಬಗ್ಗೆ ತಕ್ಷಣ ಮಾಹಿತಿ ಪಡೆಯುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು. ಅದರಿಂದ ಆರೋಪಿಗೇನೂ ಪ್ರಯೋಜನವಾಗಲಿಲ್ಲ.

ಆ ಥರದ ಯಾವ ಪ್ರಕರಣಗಳೂ ದಾಖಲಾಗಿಲ್ಲ ಎಂಬ ಮಾಹಿತಿ ಪೊಲೀಸ್ ಇಲಾಖೆಯ ಮೂಲಗಳಿಂದ ಬಂತು. ಹಾಗಾಗಿ ನ್ಯಾಯಾಧೀಶರು ತಮ್ಮ ತೀರ್ಪನ್ನು ಪ್ರಕಟಿಸಿಯೇ ಬಿಟ್ಟರು; ‘ಆರೋಪಿಯು ತಾನೇ ಕೊಲೆ ಮಾಡಿರುವುದಾಗಿ ಹೇಳುತ್ತಿದ್ದರೂ, ಈ ಕೊಲೆಗೆ ಯಾವುದೇ ಸಾಕ್ಷಾಧಾರಗಳು ಇಲ್ಲದ ಕಾರಣ ಅವನನ್ನು ಈ ಕೇಸಿನಿಂದ ಖುಲಾಸೆಗೊಳಿಸಲಾಗಿದೆ’ 

ಈ ಹಿಂದೆ ನಿವೃತ್ತರಾಗಿದ್ದ ನ್ಯಾಯಾಧೀಶರು ಈ ತೀರ್ಪಿನ ಬಗ್ಗೆ ಮರುದಿನ ಬೆಳಗ್ಗೆ ದಿನಪತ್ರಿಕೆಯಲ್ಲಿ ಓದಿ ಮುಗುಳ್ನಕ್ಕರು. ಹಾಗೆಯೇ ಈ ತೀರ್ಪಿತ್ತಿದ್ದ ನ್ಯಾಯಾಧೀಶರು, ನಗರದ ಪ್ರಮುಖ ಅಧಿಕಾರ ಕೇಂದ್ರಗಳ ಬಳಿ ಉಪಟಳ ನೀಡುತ್ತಿದ್ದ ನಾಯಿಯೊಂದನ್ನು ಪೊಲೀಸರು ಬಂಧಿಸಿರುವ ಸುದ್ದಿಯನ್ನು ಓದಿ ನಿರುಮ್ಮಳವಾದರು. 

ಅಥಾರಿಟಿಯನ್ನು ಬಡಿದೆಬ್ಬಿಸುವ ತನ್ನೆಲ್ಲ ಪ್ರಯತ್ನಗಳೂ ಸೋಲು ಕಂಡಿದ್ದಕ್ಕೆ, ಆ ನಾಯಿ ಮಾತ್ರ ಶಪಿಸಿಕೊಳ್ಳುತ್ತಲೇ ಇತ್ತು… 

September 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: