ಬಾವಿಗಳು ಬದುಕಾಗಿ..

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. 

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. 

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಹಳೇ ತೋಟದ ಬಾವಿ

ಐವತ್ತು ಎತ್ತಿನ ಕಣದಗಲ ತೋಡಿಕೊಂಡು ಅಡವಜ್ಜ ಗಿರಿಯಜ್ಜ ನಿರ್ಮಿಸಿದ ಕಪ್ಲೇ ಬಾವಿ ಇದು. ಇದು ಊರಿನ ಎಲ್ಲರ ಮೆದುಳಲ್ಲಿ ಎರಡು ನೂರು ವರ್ಷಗಳು ದಾಟುವ ಕಾಲಕ್ಕೂ ಅನೇಕ ಸ್ಥಿತ್ಯಂತರಕ್ಕೆ ಸಿಕ್ಕಿಯೂ ಒಣಗದಂತೆ ನಿಂತಿದೆ. ಊರಿನ ಸುತ್ತಮುತ್ತ ಊರೊಳಗೆ ಅನೇಕ ಕೂಪಗಳಿವೆ.

ಎಲ್ಲವೂ ಆಯಾ ಕಾಲಮಾನದ ಜನತೆಯ ಆಂತರ್ಯದಲ್ಲಿ ಭಿನ್ನ ಚರ್ಚೆಗೆ ಒಳಗಾಗಿ ರೂಪ ಬದಲಿಸಿಕೊಂಡರೂ ಕೂಡ ತಮ್ಮ ಪೂರ್ವದ ಅನನ್ಯ ಛಾಯೆಯ ಚಲನೆಯನ್ನು ಬಿಟ್ಟು ಕೊಟ್ಟಿಲ್ಲ.

ಹಳೇ ತೋಟದ ಬಾವಿಗೂ ನನ್ನ ಊರಿಗೂ ನಿರಂತರ ಒಕ್ಕಲುತನದ ನಂಟು. ಈ ಬಾವಿ ತೋಡಿದ್ದು ಅಡವಜ್ಜ ಗಿರಿಯಜ್ಜ ಸಹೋದರರು. ಆ ಕಾಲಕ್ಕೆ ಎತ್ತಿನ ಗಾಡಿಗಳು ಇರಲಿಲ್ಲವಂತೆ. ಐವತ್ತು ಎತ್ತಿನ ಕಣದಗಲ ತೋಡಿ ಬಾವಿಗೊಂದು ಲಕ್ಷಣ ಕೊಡುವ ವೇಳೆಗೆ ವರ್ಷ ಮುಗಿದದ್ದು ಶ್ರಮದ ಗುರುತಾಗಿ ಅನೇಕರೊಳಗೆ ನೆಲೆಸಿದೆ.

ಆ ಕಾಲಕ್ಕೆ ಕೋಣಗಳನ್ನು ಸಾಕುತ್ತಿದ್ದರು. ಸರಿಸುಮಾರು ನೂರೈವತ್ತು ಕೋಣಗಳ ಮೇಲೆ ಕಲ್ಲುಗಳನ್ನು ಹೇರಿಕೊಂಡು ಬಂದು ಒಟ್ಟು ಬಾವಿಯ ಅರುಗನ್ನು ಚೌಕಾಕಾರದಲ್ಲಿ ಪೋಣಿಸಿದ್ದಾರೆ. ಇಡೀ ಬಾವಿ ಹದಿನೈದು ಮಟ್ಟಿಗಿಳಿದು.

ಕಪ್ಲೇ ಕಟ್ಟಿಕೊಳ್ಳುವ ವೇಳೆಗೆ ಕಡಿ ಮರದ (ನೇರಳೆ ಮರ) ತೀರುಗಳನ್ನು ಸಮಮಟ್ಟ ಅರ್ಗಿನ ಭಾಗಕ್ಕೆ ಸೇರಿಸಿ ಅದರ ಮೇಲೆ ಕಲ್ಲುಗಳನ್ನು ಜೋಡಿಸಿ ಭದ್ರವಾಗಿ ಹೆಣೆದಿರುವುದೇ ವಿಸ್ಮಯ. ಈ ಬಾವಿಯ ನರಗಳು ನನ್ನ ಊರಿಗೆ ಎದೆಯಾಗಿರುವ ದೊಡ್ಡಳ್ಳದ ಮರಳಿನಲ್ಲಿ ಮುಳುಗಿ ಕಡು ಬೇಸುಗೆಯಲ್ಲೂ ಸಲೀಲಕ್ಕೆ ಅಭಾವ ಬರದಂತೆ ಕಾಪಿಟ್ಟುಕೊಂಡಿವೆ.

ಸುತ್ತ ಇರುವ ಜಮೀನು ಭತ್ತ ಕೊರ್ಲೆ, ಅಡಿಕೆ, ತೆಂಗು ಎಲ್ಲವುಗಳ ಹಸಿರಿಗೆ ಸವೆದುಕೊಂಡು ಒಕ್ಕಲನ್ನು ಕ್ಷಾಮ ಬರದಂತೆ ಕಾಯ್ದದ್ದು ಇತಿಹಾಸ. ನಸುಕಿಗೆ ಬಿಗ್ಯಾದ ಎರಡು ಜೊತೆ ಕೋಣಗಳನ್ನು ಕಟ್ಟಿ ನೀರೆತ್ತುವಾಗ ಸುತ್ತಲಿನ ನೆಲ ಉಸಿರಾಡುತ್ತಿತ್ತು. ಊರಿನ ಎಲ್ಲಾ ಮನಸ್ಸುಗಳು ಹಳೆಯ ತೋಟದ ಬಾವಿಯು ಕಟ್ಟಿಕೊಟ್ಟ ಬಾಳನ್ನು ಜೀವ ಪರಂಪರೆಯ ರೋಮಾಂಚನಗಳ ಜೊತೆಗಿಟ್ಟು ನೆನೆಯುತ್ತಾರೆ.

ಇಲ್ಲಿ ಒಂದು ಅಗಲನೆಯ ವಿಸ್ತಾರವಾದ ಹಳೆಯ ವಟತರುವಿದೆ. ಈ ತರುವಿನ ಒಳಗಿಂದ ಇಳಿಬಿದ್ದ ಜಂಬನ್ನು ಅನೇಕರು ಬೆಳಗಿನಲ್ಲಿ ತುದಿ ಜಿಗುಟಿ ಒಳ್ಳೆಯದೆಂದು ತಿನ್ನುತ್ತಾರೆ. ಊರೆಂದ ಮೇಲೆ ಅನೇಕ ನಂಬಿಕೆಗಳು ಹುಟ್ಟುವುದು ಸಹಜ.

ಹಾಗೆಯೇ ಕ್ರಮೇಣ ಇಲ್ಲಿ ಏಳು ಕಲ್ಲಿನ ಬೆನಕಗಳನ್ನು ವಟದ್ರುಮದ ಬುಡಕ್ಕಿಟ್ಟು ಪೂಜಿಸಿದ ಮೇಲೆ ಏಳು ಮಂದಕ್ಕಗಳು ಎಂಬ ಅಕ್ಕತಂಗಿಯರ ಹೆಸರಿನಲ್ಲಿ ಆಚರಣೆಗೆ ನಾಂದಿಯಾಗಿದೆ.

ನನ್ನ ಊರಿನ ಎಲ್ಲಾ ಹೆಣ್ಣು ಮಕ್ಕಳು ಸೋಮವಾರದಂದು ಸೀರೆ ಏರಿಸಿ ಅಮ್ಮನ ಅಚ್ಚು ತಂದು ಹಸಿ ಅಕ್ಕಿ ತೊಮ್ಟ, ಹಸಿ ಕಡಲೇ ಬೇಳೆ, ಕರಿ ಎಳ್ಳು ಬೆರೆಸಿ ಉಪ್ಪಿಲ್ಲದೆ ಫಲಾರ ಮಾಡಿ ಹಂಚಿ ಪೂಜಿಸುವುದು ವಾಡಿಕೆ.

ಊರಿನ ಈ ಏಳು ಮಂದಕ್ಕಗಳಿಗೆ ಪಕ್ಕದ ಊರಿನ ಅರ್ಚಕರು ಬಂದು ಪೂಜಿಸಿ ಕೊಡುವುದು ವಿಪರ್ಯಾಸವೋ ಅಥವಾ ಬಕುತಿಯ ಅತಿರೇಕವೋ ಪ್ರಶ್ನೆ ಅಷ್ಟೆ.

ಊರ ಜನಗಳ ಬಾಯಲ್ಲಿ ಏಳು ಮಂದಕ್ಕಗಳು ಕಲ್ಲಾಗಿ ಸುಮ್ಮನೆ ಕುಳಿತಿಲ್ಲ. ಹಳೇ ತೋಟದ ಬಾವಿಗೆ ಸ್ನಾನಕ್ಕೆ ಹೋಗುತ್ತಾರೆ. ಸೋಮವಾರ ಆ ಬಾವಿಯ ಪಕ್ಕದಲ್ಲೇ ಕಟ್ಟಿರುವ ಹಳೆಯ ಕಲ್ಲಿನ ಮನೆಯಲ್ಲಿ ನೆಲಹಸನು ಮಾಡಿ ವಿರಾಮಕ್ಕಾಗಿ ಮಲಗಿದವರು ಏಳು ಜನರು ಒಬ್ಬೋಬ್ಬರೇ ಬಾವಿಗೆ ಬೀಳುವ ಸದ್ದು ಕೇಳುತ್ತದೆ ಎಂದು ಹೇಳುವರು.

ಜೊತೆಗೆ ಈ ಬಾವಿಗೆ ಮಂದಕ್ಕಗಳು ಜಳಕಕ್ಕೆ ಬರುವ ಕಾರಣದಿಂದಾಗಿ ಮೈಲಿಗೆ ಆಗುವಂತಿಲ್ಲವೆಂಬ ಕಂದಾಚಾರವೂ ಸೇರಿ ಹೋಗಿದೆ. ಹೆಣ್ಣುಮಕ್ಕಳು ಮುಟ್ಟಿನ ದಿನಗಳಲ್ಲಿ ಅಲ್ಲಿ ಓಡಾಡುವಂತಿಲ್ಲ.

ಈ ಏಳು ಮಂದಮ್ಮಗಳಿಗೆ ಗಂಡಸರ ಪ್ರಜ್ಞೆಯನ್ನು ಹಾಗೆ ಅಂತಹದನ್ನು ಪುಷ್ಟೀಕರಿಸುವ ಮೌಢ್ಯದ ಮನಸುಗಳನ್ನು ನಿಯಂತ್ರಿಸಲು ಅಸಾಧ್ಯವಾಗಿರುವುದು ದುರಂತ.

ವಟವೃಕ್ಷದ ತುಂಬಾ ಎಲೆಗೊಂದರಂತೆ ಹಿರೇಹಕ್ಕಿಗಳು ಜೋತುಬಿದ್ದು ಶಿಕಾರಿಯವರ ತುಪಾಕಿಯ ಸದ್ದಿಗೆ ಮಾಂಸವಾಗಿ ಹಕ್ಕೆಳ್ಕ ಆಗಿದೆ ಎಂದು ನಂಬಿ ಸೊರಗುವ ಎಳೆ ಮಕ್ಕಳ ನಡುವಿಗೆ ಕರಿಯ ದಾರದಲ್ಲಿ ಈ ಹಕ್ಕಿಗಳ ಯಲ್ಕಗಳು ಸೇರುವುದು ಮಾತ್ರ ಉಳಿವಿನ ಸಂಕೇತದಂತೆ ಸಾಗುತ್ತಲೇ ಇದೆ.

ಹಿರೇಹಕ್ಕಿಗಳು ಊರ ಸುತ್ತ ಇರುವ ಹಿಪ್ಪೇಮರಕ್ಕೆ ಹಾರಿ ಕಚ್ಚಿ ತಂದು ಬೀಳಿಸಿದ ಬೀಜಗಳು ಅನೇಕರ ಮನೆಯ ಸೊಡರು ಉರಿಯಲು ಎಣ್ಣೆಯಾಗಿವೆ. ಬೈಸಿಕಲ್‌ನಲ್ಲಿ ಎಣ್ಣೆ ಮಾರುವವರು ಈಗಲೂ ನನ್ನ ಊರಿಗೆ ಬರುತ್ತಾರೆ. ಇವರ ಹತ್ತಿರ ಸಿಗುವ ಕಮ್ಗಡ್ಲೆಗೆ ತಿಪ್ಪೆಯಲ್ಲಿರುವ ಗಾಜಿನ ಶೀಸಗಳು ಮಕ್ಕಳ ಕೈಸೇರಿ ಬಾಯಿಗೆ ಕಮ್ಮನೆ ಮಿಠಾಯಿ.

ಹಿಪ್ಪೇಬೀಜಗಳನ್ನು ಕೂಡಿಕ್ಕಲು ದಿನಗಟ್ಟಲೆ ಊರಿನ ಅನೇಕರು ಹೋಗುವುದು ನಿಂತಿಲ್ಲ. ಹೀಗೆ ಬಾವಿಯೊಂದು ತನ್ನೊಳಗೆ ಅನೇಕಗಳನ್ನು ಕೂಡಿಕೊಂಡು ಬಾಳಿನ ಜಾಡಿಗೆ ಆಕಾರ ಕೊಡುತ್ತಾ ಟಿಸಿಲೊಡೆದದ್ದು ವಾಸ್ತವ.

ಇತ್ತೀಚಿನ ದಿನಗಳಲ್ಲಿ ಮರಳು ದಂಧೆ, ಊರಿನ ಜನರ ಕಣ್ಣಲ್ಲಿ ಸಂಪತ್ತಿನ ಮಾಯೆಯಾಗಿ ದೊಡ್ಡಳ್ಳದ ಗಡ್ಡೆಯಲ್ಲಿದ್ದ ಗಿಡಗಂಟೆಗಳೆಲ್ಲಾ ಬೇರು ತೇಲಿಸಿಕೊಂಡು ದುಃಖಿಸುವುದನ್ನು ಕಂಡರೆ ಭಯವಾಗುತ್ತದೆ.

ಎಂತಹ ಕಠಿಣ ಕಾನೂನುಗಳು ಬಂದರೂ ಮರಳಿನ ಕಳ್ಳತನಕ್ಕೆ ಕಡಿವಾಣ ಹಾಕಲಾಗದೆ ಜೀವಸಂಕುಲಕ್ಕೆ ಜೀವವಾಗಿದ್ದ ದೊಡ್ಡಳ್ಳ ದೊಗರು ಬಿದ್ದು ಒಣಗಿ ವಾಟೆಯಾಗಿದೆ.

ಇಪ್ಪತ್ತು ವರ್ಷಗಳ ಹಿಂದೆ ಇದೆ ಹಳ್ಳದಲ್ಲಿ ನಾವೆಲ್ಲಾ ಮರಳಲ್ಲಿ ಕಾಲು ಊಣಿಕೊಂಡು ಸಾಹಸದಿಂದ ಶಂಕ, ಬಚ್ಚ, ಕಪ್ಪೆಯಿಲ್ಲದ ಚಿಪ್ಪುಗಳನ್ನೆಲ್ಲಾ ಆಯ್ದು ತರುತ್ತಿದ್ದ ನೆನಪುಗಳೆಲ್ಲಾ ಈಗ ಮೆದುಳಿನಂತಿದ್ದ ಮರಳನ್ನು ಕಳೆದುಕೊಂಡು ಹಳ್ಳದ ಕಡೆಗೆ ಮುಖ ಹಾಕಲು ಬಿಡುತ್ತಿಲ್ಲ.

ಹಳ್ಳಕ್ಕೆ ಸಮೀಪದ ಬಂಧುವಿನಂತಿದ್ದ ಹಳೇ ತೋಟದ ಬಾವಿಗೆ ಈಗ ಮಾಟ ತಗುಲಿದೆಯಂತೆ. ಊರಿನ ಯಾರೋ ಒಬ್ಬ ಮಾಟಗಾರ ಎಂತದೋ ಪುಡಿ ಮಾಡಿ ಜೀವಸೆಲೆಯಾಗಿದ್ದ ಈ ಬಾವಿಯೊಳಗೆ ಸುರಿದನಂತೆ ಬೆಳಗಿನ ಜಾವ ಸರಿಯಾಗಿ ಬಾವಿ ಎಮ್ಮೆಗೊಡ್ಡು ವರ್ಲುದಂತೆ ಉಕ್ಕಿ ನೊರೆಯಾಗಿ ಹರಿದಿದ್ದನ್ನು ಅಲ್ಲಿನ ಹಳೆಯ ಮನೆಯಲ್ಲಿ ಮಲಗಿದ್ದ ಅಡವಜ್ಜ ಕಿಟ್ಟನೆ ಕಿರುಚಿ ಎದ್ದು ನೋಡಿದರಂತೆ ನೀರೆಲ್ಲಾ ನೆತ್ತರಿನ ಬಣ್ಣವಾಗಿ ಆವತ್ತಿಗೆ ಆ ಬಾವಿ ತನ್ನೆಲ್ಲಾ ಶಕ್ತ ಬಲವನ್ನು ಕಳೆದುಕೊಂಡು ಅಸುನೀಗಿದೆ.

ಎಂತದ್ದೇ ಕಡು ಬೇಸಿಗೆ ಬಂದರೂ ಬರ ಹಾದು ಹೋದರೂ ಒಣಗದೆ ಹಸಿರನ್ನು ಪೊರೆದ ಬಾವಿ ನಿಸ್ತೇಜವಾದದ್ದು ಮಾಟಕ್ಕೋ ಅಥವಾ ಮರಳು ಮುಕ್ಕಿದ ಮಾಯಗಾರರ ವ್ಯಸನಕ್ಕೋ ಗೊತ್ತಿಲ್ಲ.

ಹೊಸಬಾವಿ
ಇದೇ ಹಳ್ಳಕ್ಕೆ ಸದಾ ಜೊತೆಯಿರುತ್ತೇನೆ ನಿನ್ನ ಮೈತ್ರೀಯೇ ನನಗೆ ಜೀವಬಲ ಎಂದು ಮಾತುಕೊಟ್ಟಂತಿದ್ದದು ಈ ಹೊಸಬಾವಿ. ಇದರ ಅಂಕಿತ ನೂರೈವತ್ತು ವರ್ಷ ಕಳೆದರೂ ಹೊಸದೇ ಆಗಿ ಬೆಳಗಿದೆ.

ಮುಗ್ಗರಿಸಿದರೆ ಮೂರೇ ಹೆಜ್ಜೆ ಈ ಹೊಸ ಬಾವಿ ನನ್ನ ಊರಿಗೆ. ಇದು ಕೂಡ ಕಪ್ಲೆ ಬಾವಿ ಇದನ್ನು ನಿರ್ಮಿಸಿದ ಮೇಲೆ ಎಲೆಯ ಬಳ್ಳಿ ಕಟ್ಟಿ ಅಲ್ಲಿದ್ದ ನೆಲವನ್ನೆಲ್ಲಾ ಸೋಸಿ ಸಮ ಮಾಡಿ ಕಪ್ಪು ಜಿಗುಟು ಮಣ್ಣು ಇರುವ ಕಾರಣದಿಂದಲೇ ಹೇರಳವಾಗಿ ಭತ್ತ ಬೆಳೆದವರು ಅಡವಜ್ಜ ಗಿರಿಯಜ್ಜರು. ಅವರ ಮಕ್ಕಳು ಈ ಬಾವಿಗೆ ತಮ್ಮ ಕಾಲಕ್ಕೆ ಹೊಸ ರೂಪ ಕೊಟ್ಟರು.

ಸುಣ್ಣದ ಕಲ್ಲಿನಲ್ಲಿ ಗಾರೆಯ ಕಾಲುವೆ ನಿರ್ಮಿಸಿ ಊರು ನೆರೆಯೂರುಗಳು ಮೆಚ್ಚುವಂತೆ ಮೊದಲಿಗೆ ವಿದ್ಯುತ್ ಅಳವಡಿಸಿ ಬೋಗವಾಗಿ ವ್ಯವಸಾಯ ಮಾಡಿದ ಕೀರ್ತಿ ಇವರದು. ಊರಿನ ಎಲ್ಲಾ ಗಂಡು ಹೆಣ್ಣು ಮಕ್ಕಳು ಲಿಂಗಭೇದ ಹಿಡಿತಕ್ಕೆಂದೂ ಸಿಗದೆ ಈ ಬಾವಿಯಲ್ಲಿ ಈಜು ಕಲಿತದ್ದು ಒಂದು ಶಿಕ್ಷಣ.

ನಸುಕಿನಲ್ಲಿ ಪ್ರಚಂಡ ಚಳಿಗೂ ಬಗ್ಗದೆ ಊರಿನ ಅನೇಕ ಹಿರಿಯರು ಕೂಡ ಈ ಬಾವಿಯಲ್ಲಿ ಮುಳುಗೆದ್ದು ಪರಾಕ್ರಮಿಗಳಂತೆ ಬೀಗುತ್ತಿದ್ದರು. ಈ ಹೊಸಬಾವಿಯ ಬಡ್ಡೆಗೆ ಕೆಂಪು ತೊಳೆಯ ಹಲಸಿನ ಮರ ನೂರೆಂಟು ನಾರಿನ ಹಕ್ಕಿಗಳ ತೊಟ್ಟಿಲುಗಳನ್ನು ತೂಗಿಕೊಳ್ಳಲು ಆಸರೆಯಾದ ತುಬ್ಲಿಮರ ಮಕ್ಕಳ ಬಾಯಿಗೆ ತೊಟ್ಟಿನಲ್ಲಿ ಹನಿ ಸಿಹಿ ಇಳಿಸುವ ಕರ್ಬಿಪಷ್ಠಿ ಹೂವಿನಗಿಡ ಎಲ್ಲವೂ ಶೋಭೆ ತಂದಿವೆ.

ಭರಣಿ ಮಳೆ ಭುವಿ ಮುಟ್ಟಿದರೆ ಸಾಕು ಮರುದಿನವೇ ಈ ಬಾವಿಯ ಪಕ್ಕದಲ್ಲಿ ಸಣ್ಣ ಸಣ್ಣ ಮಡಿ ಮಾಡಿ ಮೆಣಸು ಬದನೆ ಒಟ್ಲು ಬಿಡೋರು ಇವೆಲ್ಲಾ ತಿಂಗಳು ತುಂಬುವ ಮೊದಲೇ ಕಲ್ಲೊಲಕ್ಕೆ ಬಂದು ಮೆಣಸಿನ ಸೊಸಿ ಹಾಕುವ ಕಾಯಕಕ್ಕೆ ಅದೆಷ್ಟೋ ಕೃಷಿ ಭಕ್ತರ ಕೈಗಳು ಜೊತೆಯಾಗಿ ಶಿವರಾತ್ರಿಯವರೆಗೂ ಮೆಣಸಿನ ಹಣ್ಣು ಬಿಡಿಸುವ ತೊಟ್ಟು ಕೊಯ್ದು ಮಾಳ್ಗೆ ಮೇಲೆ ಒಣಗಾಕುವ ಕ್ರಿಯೆಗೆ ಹಬ್ಬದಂತಹ ಸಡಗರವಿದೆ.

ಒಣಗಿದ ಮೆಣಸಿನ ಹಣ್ಣುಗಳು ಮೆಣಸಿನ ಕಾಯಿಯಾಗಿ ದೊಡ್ಡ ಅಗ್ರಹಾರದ ಪಾರ್ವತಕ್ಕನ ಕೈಯಲ್ಲಿ ಹಸನಾಗಿ ನುರಿತು ಪಳಗಿ ಬೆಂದು ಮಾರಾಟಕ್ಕೆ ನನ್ನೂರಿನ ಬೀದಿಗೆ ಬಂದಾಗ, ಊರಿನ ಎಲ್ಲಾ ಮನೆಗಳಿಗೂ ಮಣ್ಣಿನ ಗುಡಾಣಗಳು ಬರುತ್ತಿದ್ದವು.

ಮಣ್ಣಿನ ಸಖ್ಯ ಹೊತ್ತ ಈ ಗುಡಾಣಗಳು ದವಸ, ಧಾನ್ಯ, ಹಪ್ಪಳ, ಸಂಡಿಗೆ ಗಳನ್ನೆಲ್ಲಾ ತುಂಬಿಕೊಂಡು ಮೆಣಸಿನಕಾಯಿಯ ಖಾರವನ್ನು ಹೊತ್ತು ಮನೆಯ ಸದಸ್ಯರಂತಾಗಿ ಸಾಲು ಸಾಲು ಮಡಕೆಗಳು ಜಪ್ಪಯ್ಯವೆನ್ನದೆ ಮನೆಮನೆಗಳಲ್ಲೂ ಜಾಗ ಮಾಡಿಕೊಂಡು ಇವತ್ತಿಗೂ ವಾಸಿಸುತ್ತಿವೆ.

ಹೊಸ ಬಾವಿಯ ನೀರು ಏರ ಒಟ್ಟುಗಳಲ್ಲಿ ತುಂಬಿ ಊರಮಗ್ಗಲ ಹೊಲಗಳಿಗೆಲ್ಲಾ ಬಂದು ಶಿವನು ರಾತ್ರಿಯಲ್ಲಿ ಆಗಮಿಸಿ ಜಾಗರಣೆ ಮಾಡಿಸುವ ಕಾಲ ಬರುವವರೆಗೂ ಗಿಡಗಂಟೆಗಳನ್ನೆಲ್ಲಾ ಕಾಯುತ್ತಿದ್ದುದು ಈ ಹೊಸ ಬಾವಿಯ ಜೀವ ಜಲವೇ.

ಊರಿನ ದನ ಕರ ಕುರಿ ಜನಕ್ಕೆಲ್ಲಾ ತನ್ನ ಶಕ್ತಿಯನ್ನು ಧಾರೆ ಎರೆದ ಈ ಹೊಸ ಬಾವಿ ಈಗ ತನ್ನ ರೂಪ ನೀಗಿಕೊಂಡು ನರಳುತ್ತಿರುವುದಕ್ಕೆ ಕಾರಣ ಮರಳು ದಂಧೆಯೇ. ಆದರೂ ಹಾವು ಹಲ್ಲಿ ಹಾವರಾಣಿಗಳಿಗೆ ಜಾಗ ಕೊಟ್ಟು ಸಣ್ಣ ದೊಡ್ಡ ಖಗಗಳ ಸಮೂಹಗಳನ್ನು ಆಸು ಪಾಸಿನ ಮರದ ಕೊಂಬೆಗಳಲ್ಲಿ ಉಳಿಸಿಕೊಂಡು ಪೊರೆಯುತ್ತಿದೆ.

ಬಾವಿಯ ಪಕ್ಕದಲ್ಲಿರುವ ಕಲ್ಲುಗುಟ್ಟೆಯ ಸಂದಿಗಳಲ್ಲಿ ನುಗ್ಗಿ ಮಳೆಗಾಲದ ಪಸ್ಮೆಗೆ ಸಣ್ಣ ಬೇರಿಳಿಸಿಕೊಂಡು ಬೊಗಸೆ ತುಂಬಾ ಹೂ ಕೊಡುವ ಮುಳ್ಳುಜಾಜಿ ಹೂವಿಗೆ ಈಗಲೂ ಮುಗಿಬೀಳುವವರ ಸಂಖ್ಯೆ ತಗ್ಗಿಲ್ಲ.

ಕರಿಯಮ್ಮನ ಬಾವಿ
ದೊಡ್ಡಳ್ಳದ ಒಂದಷ್ಟು ನೀರನ್ನು ಬಸಿದುಕೊಂಡು ತುಂಬಿ ನಿಲ್ಲುವ ಕರಿಯಮ್ಮನ ಬಾವಿ ಎಂದರೆ ಊರಿನ ಜನಕ್ಕೆಲ್ಲಾ ಭಯ. ನನ್ನ ಊರಿನ ಕರಿಯಕ್ಕ ಸತ್ತ ಮೇಲೆ ಈ ಬಾವಿಯಲ್ಲಿ ಗಾಳಿಯಾಗಿ ನೆಲೆಸಿ ಆ ದಾರೆಗೆ ಓಡಾಡೋ ಎಲ್ಲರನ್ನು ಕಾಡುತ್ತಾಳೆ ಎಂದು ನಂಬಿಸಲಾಗಿದೆ.

ನಾವೆಲ್ಲಾ ಮಾಧ್ಯಮಿಕ ಶಾಲೆಗೆ ನೆರೆಯೂರಿಗೆ ಹೋಗುವಾಗ ಈ ಬಾವಿಯ ಮಗ್ಗುಲಲ್ಲೆ ಹಾದು ಹೋಗಬೇಕಾಗಿತ್ತು. ಅಮಾವಾಸ್ಯೆ ಬಂತೆಂದರೆ ಊರಾಗಿರೋ ಮಕ್ಕಳು ಮರಿನೆಲ್ಲಾ ಗಾಳಿಯಾಗಿ ಮುರೀತಾಳೆ ಇಸ್ಕೂಲಿಗೆ ಕಳ್ಸಬೇಡ್ರಿ ಅನ್ನೋ ಮಾತು ಕೆಲವು ಮನೆಗಳಿಂದ ಹೊರಬೀಳೋದು.

ಈ ಕರಿಯಮ್ಮನ ಬಾವಿಯ ಗೆಡ್ಡೆಯಲ್ಲಿ ದಡಿ ಕಪ್ಪೆಗಳು ಕುಂತು ದಾರಿ ಹೋಕರ ನಡಿಗೆಯ ಸದ್ದಿಗೆ ನೀರಲ್ಲಿ ದುಮ್ಕವು. ಆ ಬಾವಿಯ ವಾಸಿಗಳಾದ ಕಪ್ಪೆಗಳೇ ಅಕ್ಕಪಕ್ಕದ ಊರಿನ ಜನರ ಮನದಲ್ಲಿ ದೆವ್ವವಾಗಿ ಹೆದರಿಸುತ್ತಿವೆ. ನನ್ನೂರಿನ ಸಾವಿತ್ರಿ ಒಮ್ಮೆ ಅಜಾನಕ್ಕಾಗಿ ಈ ಬಾವಿಯಲ್ಲಿ ಮುಳುಗಿ ಹಳ್ಳದಲ್ಲಿ ಬಟ್ಟೆ ಒಗೆಯುವ ನೆರೆಯೂರಿನ ಜನರಿಂದ ರಕ್ಷಿಸಲ್ಪಟ್ಟು ಏಳೂರು ಮಾರಿಯರ ತಾಯಿತ ಕಟ್ಟಿದರೂ ಜ್ವರ ಬಿಡ್ಲಿಲ್ಲ.

ಕರಿಯಮ್ಮ ಗಾಳಿಯಾಗಿ ಮೈ ಹೊಕ್ಕವ್ಳೆ ಅಂತ ಸ್ಕೂಲ್ ಬಿಡ್ಸಿ ಕಲಿಕೆಗೆ ಕಲ್ಲು ಬಿತ್ತು. ಎಷ್ಟೋ ಹೆಣ್ಣು ಮಕ್ಕಳು ಈ ದೆವ್ವದ ಭಯದಿಂದಲೇ ಏಳನೇ ತರಗತಿ ಮುಗಿಯುವ ಮೊದಲೇ ಮದುವೆಗೆ ಸೆರೆಯಾದದ್ದು ದುರಂತ. ಹಿರಿಯರು ಕಿರಿಯರೆನ್ನದೆ ಅಮಾಸ್ಯೆ ಹುಣ್ಣಿಮೆಗಳು ಬಂದವೆಂದರೆ ಈ ಬಾವಿಯನ್ನು ದೆವ್ವ ಮಾಡಿಕೊಂಡು ಬೆಚ್ಚುವವರ ಗುಂಪು ಹೆಚ್ಚುತ್ತಲೇ ಇದೆ.

ಸೇದಬಾವಿ
ನನ್ನೂರಿನ ಎಲ್ಲಾ ಮನೆಯ ಹರವಿಗಳನ್ನು ತುಂಬಿಸಿ ಕುಡಿಯೋ ನೀರಿನ ಬಾವಿಯಾಗಿ ಹೆಸರು ಗಳಿಸಿದ್ದು ಸೇದಬಾವಿ. ಊರಿನ ಜನ ಈ ಸೇದಬಾವಿಯ ಗಾಲಿಗೆ ಹಗ್ಗ ಹಾಕಿ ನೀರೆಳೆಯುವಾಗ ಸರ್ತಿ ಮೇಲೆ ಕಾಯ್ದಿದ್ರು.

ಊರಿನ ಮನೆ ಮನೆಯ ಕತೆಗಳೆಲ್ಲಾ ಈ ನೀರಲ್ಲಿ ಮಿಂದು ಪಿಸು ಮಾತುಗಳಾಗಿ ನೀರು ಸೇದಲು ಬರುವ ಹೆಂಗಸರ ಕಿವಿಗಳಲ್ಲಿ ಗುಟ್ಟಾಗಿ ವಾಸಿಸುತ್ತಿವೆ. ಹಗ್ಗ ತುಂಡಾಗಿ ಬಿಂದಿಗೆ ಬಾವಿಯಲ್ಲೇ ಉಳಿದರೆ ಅಂತರಗಂಗೆ ತಂದು ಹಗ್ದುಂಟೆ ಬಿಟ್ಟು ಬಿಂದಿಗೆ ತೆಗೀವಾಗ ಮುಳುಗಿದವರನ್ನು ಜೀವಬೆರಸೆ ಎತ್ತೋರಂಗೆ ಪರದಾಡ್ತಿದ್ರು ಜನ.

ಒಟ್ಟಾರೆ ಈ ಸೇದಬಾವಿ ಊರಿನ ಎಲ್ಲಾ ಜೀವ ಸಂಕುಲದ ದಾಹವನ್ನು ತಣಿಸಿ ನಮ್ಮೊಳಗೆ ಅನಂತದಂತೆ ಬೆಳಗಿದೆ. ಮನೆ ಮನೆಯ ಬಾಳು ಈ ಸೇದಬಾವಿಯ ಗೋಡೆಗೆ ಬಳಿದುಕೊಂಡು ಉಳಿದಿದೆ.

ಸೇದಬಾವಿಯ ಪಕ್ಕದಲ್ಲಿರುವ ದೊಡ್ಡನಿಂಗಜ್ಜನ ಬಾವಿ ಮಾತ್ರ ಮಲೆತು ನಾರುತ್ತಿರುವ ತನ್ನ ನೀರಿಗೆ ಆಗಾಗ ನಾಗರ ಹಾವುಗಳನ್ನು ಕೆಡವಿಕೊಂಡು ಬಳಕೆಗೆ ಬಾರದೆ ಹೆದರಿಸುವುದು ತಪ್ಪಿಲ್ಲ.

ನಮ್ಮೊಳಗೆ ಬಾವಿಯು
ಬಾವಿಯೊಳಗೆ ನಾವು
ಬೆಳಗು ಬೈಗುಗಳನ್ನು
ತುಂಬಿಕೊಂಡು ಇದ್ದೇವೆ
ಇದ್ದವರು ಇದ್ದಾರೆ
ಇರಬೇಕಾದವರೂ ಇದ್ದಾರೆ.

September 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Meghana N +91

    ಬದುಕನ್ನು ಬರಹವಾಗಿಸಿ ಪಳೆಯುಳಿಕೆಯಾಗಿರುವ ಬಾವಿಗಳ ಬದುಕನ್ನು ಕಟ್ಟಿಕೊಡುವ ಅಪರೂಪದ ಲೇಖನ ಪರಿಸರ ಪ್ರಜ್ಞೆ ಪಸರಿಸುವ ನಿಮ್ಮ ಎಲ್ಲಾ ಪ್ರಯತ್ನಗಳು ಸಫಲವಾಗಲಿ ಅಭಿನಂದನೆಗಳು

    ಪ್ರತಿಕ್ರಿಯೆ
  2. ಎಸ್ ಬಿ ಎಂ ಯತೀಶ್

    ನಾನು ಬಾಲ್ಯದಲ್ಲಿ ಇಣುಕಿ ನೋಡಿದ ಸೇದಾ ಬಾವಿ
    ಈಜು ಕಲಿತು ಜಿಗಿದು ಕುಣಿದ ಕಲ್ಲುಬಾವಿ
    ತೋಟದಲ್ಲಿ ತಾತನ ನೆನಪಿನಲ್ಲಿರುವ ತೋಟದಮನೆಯ ಬಾವಿ
    ಈಗೆ ಅದೆಷ್ಟು ನೀರಿನ ಮೂಲಗಳು ನಮಗೆ ನೆನಪು ಬರದಂತ ಕಾಲಮಾನದಲ್ಲಿ, ಕೊಳವೆ ಬಾವಿಗಳು ಮುಗ್ದ ಮಕ್ಕಳ ಜೀವ ನುಂಗುವ ಆತಂಕದ ಕಾಲದಲ್ಲಿ ನಮ್ಮ ಪೂರ್ವಜರ ತನು ಮನ ಅರ್ಪಿಸಿ ತೆರೆದಿದ್ದ ಬಾವಿಗಳಿಗೆ ಜೀವಕಳೆ ತರುವ ಲೇಖನ ತಂದ ಅವಧಿಗೆ ಹಾಗೂ ಗೀತಮ್ಮಗೂ ಅಭಿನಂದನೆಗಳು

    ಪ್ರತಿಕ್ರಿಯೆ
  3. Vishwas H C

    ಅಕ್ಕ ಬರೆದ, ತನ್ನೂರಿನ ಬಾವಿಗಳ ಬಗೆಗಿನ ಈ ಅಪೂರ್ವ ಲೇಖನವನ್ನು ಓದಿದಾಗ, ಓದುಗರ (ಮುಖ್ಯವಾಗಿ ನನ್ನ) ಮನದಲ್ಲಿ ಮೂಡುವ ಚಿತ್ರವನ್ನು ಹೀಗೆ ವಿವರಿಸಬಹುದು.

    ಹಳೇ ತೋಟದ ಬಾವಿಯು (ಅಡವಜ್ಜ ಗಿರಿಯಜ್ಜ ಸಹೋದರರ ಶ್ರಮ) ಪುರಾತನ ಸಂಕೇತವಾಗಿ ನಿಂತಿದೆ, ಆದರೆ ಇರುವುದು ಅನುಪಯುಕ್ತ ಸ್ಥಿತಿಯಲ್ಲಿ. ಹೇಗೆ ನಮ್ಮ ಅಜ್ಜ ಅಜ್ಜಿಯರು ಕಟ್ಟಿ ಬೆಳೆಸಿದ ಸಂಪ್ರದಾಯ, ಸಂಸ್ಕೃತಿಗಳು ಆವಿಯಾಗಿ ಹೋಗುತ್ತಿರುವುದೋ ಹಾಗೆ.

    ಹೊಸಬಾವಿಯು, ಅಯ್ಯನ ಆ ಸಂಸಾರ ಸರಿದೂಗಿಸುವ ಪರಿಯನ್ನು ಬಿಂಬಿಸುತ್ತದೆ‌‌. ಅಪ್ಪನಾದವ, ಮನೆಯ ಯಜಮಾನನಾಗಿ ನಡೆದುಕೊಳ್ಳುವ ರೀತಿಯದು. ಸ್ವಯಿಚ್ಛೆ ಇಲ್ಲದೆ ಮನೆ ಮಂದಿಗಳ ಸುಖಗಳನ್ನ ಕೊಡುವನೋ, ಮಕ್ಕಳಿಗೆ ಶಿಕ್ಷಣ ಕೊಡುವನೋ, ಹಾಗೇಯೇ ಈ ಹೊಸಬಾವಿಯೂ ಕೂಡ. ಅರ್ಥಾತ್, ಬದಿಗೆ ನಡೆಯುವ ಮರಳು ದಂದೆಯಂತಹ ಹಲ್ಲೆಗಳಾಗಲಿ ಅಥವಾ ಬಾವಿಗೆ ಏನೇ ಹಾನಿಯಾಗುತ್ತಿದರೂ, ಹೊಸಬಾವಿಯು ಆ ಮೆಣಸಿನ ಕಾಯ್ಹಣ್ಣುಗಳು, ಕೆಂಪು ಹಲಸು, ಈಜುವ ಸಾಮರ್ಥ್ಯ, ತೋಟಗಾರಿಕೆಗೆ ನೀರು ಇತ್ಯಾದಿಗಳನ್ನು ಕೊಟ್ಟು ಕಾಪಾಡುವಂತೆ.

    ಕರಿಯಮ್ಮನ ಬಾವಿ: ನಮ್ಮೊಳಗೆ ನಸುಕಿರುವ ಕೇಡು, ಹಿಂಸಾತ್ಮಕ ಗುಣ, ಭಯವನ್ನುಂಟು ಮಾಡೋ ಸ್ವಭಾವಗಳು. ನಮ್ಮಲ್ಲಿ ಸತತ ಪ್ರಯತ್ನದ ನಂತರವೂ ಯಶಸ್ಸು ಲಭಿಸದೆ, ಆ ಕಾರ್ಯವೆಂದರೆ ಒಂದು ಭಯ ಕಟ್ಟಿಕೊಳ್ಳುತದೆಯೋ ಹಾಗೆ, ಆ ಕಾರ್ಯ ಸಿದ್ಧಿಗೊಳಿಸುವ ಪ್ರಯತ್ನದಲ್ಲಿ ಕೆಟ್ಟದಾರಿ ಹಿಡಿಯುವ, ಕೇಡುಂಟು ಮಾಡುವ ಸಂಭವ , ಅದರಿಂದ‌ ಇತರಿಗೆ ಉಂಟಾಗುವ ಭಯ,ಭೀತಿಗಳನ್ನು ಬಿಂಬಿಸುತ್ತವೆ. ಕರಿಯಕ್ಕನ ಸಾವು ಹೇಗೆ ಅಲ್ಲಿ ಗಾಳಿಯಾಗಿ ಬಾವಿಯಲ್ಲಿ ನೆಲಸಿರುವ ನಂಬಿಕೆ ಇದೆಯೋ, ಅಲ್ಲಿನ ಜನರಿಗೆ ಭಯವನ್ನು ಹುಟ್ಟಿಸುತ್ತದೆಯೋ ಹಾಗೆ. ಸಾವಿತ್ರಿಯ ಶಿಕ್ಷಣಕ್ಕೆ ಕಲ್ಲು ಬಿದ್ದಂತೆ.

    ಸೇದಬಾವಿ: ನಾವು ಬದುಕಬೇಕಾದ ರೀತಿಯ ಪ್ರತಿಬಿಂಬವಿದು. ನಮ್ಮೊಳಗಿನ ಬುದ್ಧಿ, ಶಕ್ತಿಗಳು, ಎಲ್ಲರಿಗೂ ಸಹಾಯಕಾರಿ ಹಾಗೂ ಉಪಯುಕ್ತರವಾಗಿಯೇ ಇರಬೇಕು. ಹೇಗೆ ಸೇದಬಾವಿಯ ನೀರು, ಊರಿನ ಜನರ ಹಾಗೂ ಪ್ರಾಣಿ ಸಂಕುಲಗಳ ದಾಹ ನೀಗಿಸುತ್ತದೆಯೋ ಹಾಗೆ.

    ದೊಡ್ಡನಿಂಗಜ್ಜನ ಬಾವಿ: ನಮ್ಮ ಜಡತ್ವದ ಸಂಕೇತವದು. ಯೋಜನೆ ರಹಿತ, ಜವಾಬ್ದಾರಿಗಳಿಲ್ಲದೆ, ಸಮಯ ಪ್ರಜ್ಞೆಗಳಿಲ್ಲದೆ ಬದುಕುವ ಬದುಕು ವ್ಯರ್ಥ, ಕೆಟ್ಟ ಯೋಚನೆಗಳು ಹುಟ್ಟವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಹೇಗೆ, ದೊಡ್ಡನಿಂಗಜ್ಜನ ಬಾವಿಯ ನೀರು ಅನುಪಯುಕ್ತವೋ ಹಾಗೆ, ಅಲ್ಲಿನ ಭಯವುಂಟು ಮಾಡುವ ಹಾವುಗಳು ನಮ್ಮಲ್ಲಿನ ಕೆಡಕು, ಭಯೋತ್ಪಾದಕ ಗುಣಗಳ ಬಿಂಬ.

    ಪ್ರತಿಕ್ರಿಯೆ
  4. ಗೀತಾ ಎನ್ ಸ್ವಾಮಿ

    ಮೇಘ, ಯತೀಶ್, ವಿಶ್ವಾಸ್, ಎಲ್ಲರಿಗೂ ಪ್ರೀತಿಯಿಂದ ಗೌರವಗಳು……
    ನಿಮ್ಮೆಲ್ಲರ ಭಾಷೆಯು ಚೆಂದವಿದೆ….
    “ಭಾಷೆ ಬರೀ ಮಾತಲ್ಲ ಅದು ಮನುಷ್ಯತ್ವ” ಅಂತ ಕವಿ ಎನ್ ಕೆ ಹನುಮಂತಯ್ಯ ಸರ್ ಹೇಳಿದ್ದು ನೆನಪಾಯಿತು…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: