ಅವರ ಲೈಫ್ ಲೈನ್ ಸೀಲ್ ಡೌನ್ ಆಗಿತ್ತು..

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋಛೇಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ಆಫ್ ದಿ ರೆಕಾರ್ಡ್’ ನಲ್ಲಿ.

ದೇಶದಾದ್ಯಂತ ಇಂತಹ ನೂರಾರು ದಾರುಣ ಘಟನೆಗಳು ನಡೆದಿವೆ. ಮೊದಲೇ ಕಳಂಕದಿಂದ ತತ್ತರಿಸುತ್ತಿದ್ದ ಜೀವಗಳಿಗೆ ಈ ಕೊರೊನಾ ಇನ್ನಷ್ಟು ದುರ್ಭರ ಸ್ಥಿತಿಯನ್ನು ತಂದೊಡ್ಡಿದೆ. ಅವರ ಮಕ್ಕಳು, ಅವಲಂಬಿತರ ಸ್ಥಿತಿಯಂತೂ ಇನ್ನೂ ಹೀನಾಯವಾಗಿದೆ. ಈ ಬಗ್ಗೆ ಸುದೀರ್ಘವಾದ ಪತ್ರವೊಂದನ್ನು ನಮ್ಮ ದೇಶದ ಪ್ರಧಾನಿಗೆ ಬರೆದಿರುತ್ತೇನೆ…

ವೆಂಕಟ ಏದುಸಿರು ಬಿಡುತ್ತಾ ಬಂದವನೇ (ಘರ್ ವಾಲಿ) ಮೇಡಂ ಎದುರು ಕುಸಿದು ಕುಳಿತ. 

ಮೇಡಂ ಲಕ್ಷ್ಮೀದೇವಮ್ಮ ಮುಖ ಸೊಟ್ಟಗೆ ಮಾಡಿ ಏನೋ ಆಯ್ತು ನಿನಗೆ? ಅಂತ ಕ್ಯಾಕರಿಸಿದ್ಲು. ಅಕ್ಕ ದೇಶಕ್ಕೆ ದೇಶಾನೇ ಬರ್ ಬಾದ್ ಆಗ್ತಿದೆ, ನೀನು ಗಿರಾಕಿಗಳನ್ನು ಒಳಕ್ಕೆ ಸೇರಿಸಿಕೊಂಡು ಕಾಸು ಎಣಿಸಿಕೊಂಡು ಕೂತಿದ್ದೀಯಾ?

ಎಲ್ಲಾ ನನ್ಮಕ್ಳನ್ನೂ ಮೊದಲು ಆಚೆಗೆ ಕಳ್ಸು ಅಂತ ಕೂಗಾಡಿದ… ಆಯಮ್ಮನಿಗೆ ತಲೆಬುಡ ಅರ್ಥವಾಗಲಿಲ್ಲ. ಏನಾಯ್ತೋ ಅಂತ ಗಾಬರಿಯಿಂದ ಕೇಳಿದಳು, ವೆಂಕಟ ತನ್ನ ಜ್ಞಾನಕ್ಕೆ ತಿಳಿದಷ್ಟು ವಿವರಣೆ ಕೊಟ್ಟ. ಅದರಲ್ಲಿ ಎರಡೇ ಅರ್ಥ ಆಗಿದ್ದು, ಒಂದು ಅದೆಂಥದೋ ಕೊರೊನಾ! ಇನ್ನೊಂದು ದೇಶವೆಲ್ಲಾ ಲಾಕ್ ಡೌನ್!! 

ಇನ್ನು ಅರ್ಧ ಗಂಟೆಯಲ್ಲಿ ನಿನ್ನ ವ್ಯಾಪಾರವನ್ನು ಬಂದ್ ಮಾಡದಿದ್ದರೆ ದೊಡ್ಡ ರಾದ್ಧಾಂತ ಆಗುತ್ತೆ ನೋಡು ಅಂತ ಗಾಬರಿಯಿಂದಲೇ ಒದರಿದ. ಮೇಡಂಗೆ ಅದೇನು ಅರ್ಥವಾಯಿತೋ, ಆ ಕಿಷ್ಕಿಂದೆಯ ಬಾಗಿಲುಗಳನ್ನು  ಧಡಧಡ ಅಂತ ಬಡಿದು, ಹೇ ಬರ್ರಯ್ಯೋ, ದೊಡ್ಡ ಗಂಡಾಂತರ ಬಂದೈತಂತೆ, ನಾನೀಗ ನನ್ನ ಮನೆ ಬಂದ್ ಮಾಡ್ಬೇಕು ಅಂತ ಕಿರುಚ್ಕೊಂಡ್ಳು…

ಚಡ್ಡಿ, ಪ್ಯಾಂಟುಗಳನ್ನು ಎಳೆಳ್ಕೊಂಡೇ ಆಚೆಗೆ ಓಡಿ ಬಂದ ಗಿರಾಕಿಗಳು ಏನೋ ಬೆಂಕಿ ಬಿದ್ದಿರಬೇಕು ಅಂತ ಹೆದರಿದ್ದರು. ನನ್ನ ಮನೆಗಲ್ಲ, ದೇಶಕ್ಕೆ ಬೆಂಕಿ ಬಿದ್ದೈತಂತೆ ನಡೀರಿ ಅಂತ  ಮೇಡಂ ಎಲ್ಲರನ್ನು ಓಡಿಸಿದ್ಲು. 

ಅವರು ಅರೆಬರೆ ಅರ್ಥಮಾಡಿಕೊಂಡು ಎದ್ನೋ, ಬಿದ್ನೋ ಅಂತ  ಓಡಿದ್ರು. ಕೆಲವರು ಚಪ್ಪಲೀನೂ ಹಾಕ್ಕೊಳ್ಳದೇ ಓಡಿ ಹೋದ್ರು. ಗಿರಾಕಿಗಳೆಲ್ಲ ಹೋದ ಮೇಲೆ ನಿಟ್ಟುಸಿರಿಟ್ಟ ಮೇಡಂ ಟಿವಿ ನೋಡಿದಳು. ಪರಿಸ್ಥಿತಿ ಸ್ವಲ್ಪ ಅರ್ಥವಾಯಿತು. ನಮ್ಮನ್ನೆಲ್ಲ ನಡುಮನೆಗೆ ಕರೆದಳು. ನಮ್ಮ ಡ್ರೆಸ್ ಗಳನ್ನು ಸರಿಪಡಿಸಿಕೊಂಡು ಬಂದು ಕುಳಿತೆವು.

ಅವಳಿಗೆ ತಿಳಿದಷ್ಟು ಕೊರೊನಾ ಬಗ್ಗೆ ಹೇಳಿದ್ಲು. ಅಷ್ಟೊತ್ತಿಗೆ ಲಾಕ್ ಡೌನ್ ಬಗ್ಗೆ ಪುಂಖಾನುಪುಂಖವಾಗಿ ಟಿವಿಯಲ್ಲಿ ಯುದ್ಧ ಆರಂಭವಾಗಿತ್ತು. ಕೊರೊನಾ ಅನ್ನೋದು ಯಮ ಪಾಶದಂತೆ ಭಯಂಕರ! ಹೊರಗೆ ಕಾಲಿಟ್ಟರೆ ಕೊರೊನಾ ಫಿಕ್ಸ್!  ಅಂತೆಲ್ಲ ಏರುದನಿಯಲ್ಲಿ ಬಿಡುವಿಲ್ಲದಂತೆ ಕೂಗಾಡ್ತಾನೇ ಇದ್ರು. 

ಲಾಕ್ ಡೌನ್ ಮೇಡಂಗೆ ಒಳಗೊಳಗೆ ಸಣ್ಣ ಭಯ  ಶುರುವಾಯಿತು. ಇದೇನು ಭಾರತ್ ಬಂದ್ ಥರಾನೇನೋ ವೆಂಕಟ? ಅಂದ್ಲು. ಅವನಂತೂ ಸಂಶೋಧಕನಂತೆ, ಇಲ್ಲಕ್ಕೋ, ಬಂದ್ ಆದ್ರೆ ಒಂದು ಅಥವಾ ಎರಡು ದಿನ; ಇದು ಎಷ್ಟು ದಿನಾನೋ ಗೊತ್ತಿಲ್ವಂತೆ, ಆಚೆ ತಲೆ ಹಾಕಿದ್ರೆ ಗುಂಡು ಹೊಡೀತಾರಂತೆ.

ಅಮೆರಿಕಾದಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ, ಇಂಗ್ಲೆಂಡಲ್ಲಿ ಸಾವಿರಾರು ಸಾವು, ಗಲ್ಫ್ ರಾಷ್ಟ್ರಗಳಲ್ಲಿ, ಚೀನಾ, ರಷ್ಯಾ… ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಎಗ್ಗಿಲ್ಲದೆ ಹರಡುತ್ತಿದೆ. ವೈರಸ್ ಒಳಹೊಕ್ಕ ನಂತರ ಉಸಿರಾಟ ತೊಂದರೆ, ಅಂದರೆ ಸಾವು ಫಿಕ್ಸ್.

ಕೈ ಕುಲುಕುವಂತಿಲ್ಲ, ಹೊರಗೆ ಹೋಗುವಂತಿಲ್ಲ, ಮಾಸ್ಕ್ ಧರಿಸುವುದು ಕಡ್ಡಾಯ. ಸೋಶಿಯಲ್ ಡಿಸ್ಟೆನ್ಸ್ ಪರಸ್ಪರ ಅಪ್ಪುಗೆಯಿಲ್ಲ! ಸ್ಪರ್ಶವಿಲ್ಲ! ಎಲ್ಲವೂ ಬಂದ್… ಬಂದ್… ಬಂದ್ಯಾವ ವೇಶ್ಯಾವಾಟಿಕೆಗೆ ಅಪ್ಪುಗೆ, ಒಡನಾಟಗಳು ಅನಿವಾರ್ಯವಾಗಿದ್ದವೋ, ಅವುಗಳಿಂದ ಸಂಪೂರ್ಣ ನಿಷೇಧ.

ಲಕ್ಷ್ಮಿದೇವಮ್ಮನಿಗೆ ಆಕಾಶವೇ ಕಳಚಿ ಬಿದ್ದಿತ್ತು. ಎಲ್ಲವೂ ಅಸ್ಪಷ್ಟ. ಎಂದೂ ಊಹಿಸಿರದ ಬಿಕ್ಕಟ್ಟು ಬಂದೆರೆಗಿತ್ತು. ನಾವಿದ್ದ ಮನೆ ಮೇಡಂಗೆ ಒಂಥರಾ ಬಿಟ್ಟಿ ಬಂದದ್ದು. ಮೇಡಂ ಯೌವ್ವನದ ವೈಭವದಲ್ಲಿದ್ದಾಗ ಪ್ರೀತಿಯಿಂದ ಶ್ರೀಮಂತನೊಬ್ಬ ಬಳುವಳಿಯಾಗಿ ಕೊಟ್ಟದ್ದು. ಬೆಂಗಳೂರಿನಲ್ಲಿ ಇಂಥದ್ದೊಂದು ಆಧಾರವೂ ಘರ್ ವಾಲಿಗಳಿಗೆ ಕನಸಿನ ಮಾತೇ!

ಪೈಂಟಿಂಗ್ ಮಾಡಿಸಿದಾಗ ಮಾತ್ರ ಸಿಂಗರಿಸಿಕೊಂಡ ಜವ್ವನೆಯಂತೆ ಬೀಗಿ, ಸ್ವಲ್ಪ ಸೂರ್ಯ, ವರುಣ ಝಾಡಿಸಿದರೂ ಮಂಕಾಗಿ ನಿಲ್ಲುವ ಈ ಮನೆಯ ಗೋಡೆಗಳು ಅದೆಷ್ಟು ಹೆಜ್ಜೆಗಳನ್ನು ಗುರುತಿಸಬಲ್ಲವೋ… ಒಳಗೆ ಬಂದರೆ ದೊಡ್ಡ ಪಡಸಾಲೆ… ಅಲ್ಲೇ ಆರು ಅಡಿ ಅಗಲ ಆರು ಅಡಿ ಉದ್ದದ ಮೋಟು ಗೋಡೆಗಳ ರೂಮುಗಳು.

ಕಿಷ್ಕಿಂದೆಯ ಎರಡು ಟಾಯ್ಲೆಟ್ ಗಳು, ಅದಕ್ಕೆ ಹೊಂದಿಕೊಂಡಂತೆ ಚಿಕ್ಕ ಬಚ್ಚಲು ಮನೆಗಳು, ಆ ಓಣಿಯಲ್ಲೇ ಅಡುಗೆ ಕೋಣೆ, ಮೇಡಂಗೆ ಮಾತ್ರ ಒಂದು ಕಿರಿದಾದ, ಬಂದೋಬಸ್ತ್ ಆದ ಕೋಣೆ. ಅಲ್ಲೊಂದು ಕಪಾಟು, ಮಂಚ, ಎಲ್ಲಾ ವಹಿವಾಟು, ದುಡ್ಡಿನ ಲೆಕ್ಕಾಚಾರ, ಅವಳ ದಿನಚರಿ ಎಲ್ಲಾ ಅಲ್ಲೇ… ಆಗಾಗ್ಗೆ ತನ್ನೂರಿಗೆ ಹೋಗ್ತಾಳೆ, ಅಲ್ಲಿ ತಮ್ಮನ ಸಂಸಾರ. ಅವರಿಗೆಲ್ಲ ಇವಳೇ ಜೀವನೋಪಾಯ.

ಎಲ್ಲಾ ಅಭಿವೃದ್ಧಿಗೂ ಇವಳ ಎದೆಯೊಳಗೆ ಬಚ್ಚಿಟ್ಟ ನೋಟುಗಳೇ ದಿಕ್ಕು. ನಾವು ಒಟ್ಟು ಎಂಟು ಹುಡುಗಿಯರು ಇದ್ದೇವೆ. ಈ ನಮ್ಮ ಘರ್ ವಾಲಿ ನಮಗೆಲ್ಲ ಆಶ್ರಯ ಕೊಟ್ಟಿದ್ದಾಳೆ. ಬೇರೆ ಬೇರೆ ಊರಿಂದ ಬಂದವರು ನಾವು, ಇವಳ ಮನೆಯಲ್ಲಿದ್ದುಕೊಂಡೇ ವೃತ್ತಿ ಮಾಡ್ತೀವಿ. ಇವಳೇ ರೇಟ್ ಮಾತಾಡ್ತಾಳೆ. 

ಅವನು ಕೊಟ್ಟಿದ್ದರಲ್ಲಿ ಮೊದಲು ಅರ್ಧದಷ್ಟು ಇವಳಿಗೆ, ಉಳಿದ 20ರಷ್ಟು ಪೊಲೀಸರಿಗೆ ಮಾಮೂಲಿ ಕೊಡೋಕೆ, ರೌಡಿಗಳಿಗೆ ತಿಂಗಳಿಗೆ ನಮ್ಮ ಊಟ ತಿಂಡಿ ವಸತಿಗೆ ಅಂತ ಲೆಕ್ಕ ಹೇಳಿ ಒಂದಷ್ಟು ಕಿತ್ಕೊಳ್ತಾಳೆ… ಉಳಿದದ್ದು ನಮಗೆ! ಅವಳು ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಕೊಡೋದು. ನಿಯತ್ತಾಗಿ ಕೊಡೋದೂ ಇರುತ್ತೆ. ಕೊಡದೇ ಸತಾಯಿಸುವುದೂ ಇರುತ್ತೆ. 

ಇನ್ನೊಂದು ತಿಂಗಳು ಇರು ಆಮೇಲೆ ಕೊಡ್ತೀನಿ ಅನ್ನೋದು, ಕೊಡೋದ್ರಲ್ಲಿ ದೋಖಾ ಮಾಡೋದು ಎಲ್ಲಾ ನಡೆಯುತ್ತೆ. ಸಾಮಾನ್ಯವಾಗಿ ವ್ಯವಹಾರ ಚೆನ್ನಾಗಿ ನಡೆಯೋಕೆ ಬೇಕಾದ ಗುಡ್ ವಿಲ್ ಇಟ್ಟುಕೊಳ್ಳುತ್ತಾಳೆ. ಇಲ್ಲದಿದ್ದರೆ ಎಲ್ಲಾ ಕಡೆ ಟಾಂ ಟಾಂ ಹೊಡೆದು ಯಾರೂ ಇವಳ  ಮನೆಗೆ ಬರದಂತೆ ಮಾಡಿ ಬಿಡ್ತೀವಿ ಅನ್ನೋ ಭಯ ಅವಳಿಗೆ ಇರುತ್ತೆ. 

ಹಾಗಾಗಿಯೇ ಆಗಾಗ್ಗೆ ಹುಡುಗೀರು ಘರ್ ವಾಲಿ ಮನೆ ಬದಲಾಯಿಸುತ್ತಲೇ ಇರುತ್ತಾರೆ. ಗಿರಾಕಿಗಳು ಒಳಗಡೆ ಕೊಟ್ಟ ಟಿಪ್ಸ್ ಮಾತ್ರ ನಮ್ಮ ಲೆಕ್ಕದ್ದು. ಒಮ್ಮೊಮ್ಮೆ ಅದರ ಮೇಲೂ ಇವಳ ಕಣ್ಣು ಬೀಳುತ್ತೆ, ಯಾಕೆಂದರೆ ಅವಳು ಹಿಂದೆ ಹೀಗೇ ಘರ್ ವಾಲಿ ಮನೆಗಳಲ್ಲಿ ಇದ್ದವಳಲ್ವಾ.

ಈಗ ಏನೂ ಇಲ್ಲದೇ ಜರ್ದಾ ಜಗಿದುಕೊಂಡು, ಡ್ರಮ್ಮಿಗೆ ಅಲಂಕಾರ ಮಾಡಿದಂಗೆ ಅಲಂಕಾರ ಮಾಡ್ಕೊಂಡು, ಧಮ್ಕಿ ಹಾಕಿ ಗತ್ತು ತೋರಿಸಿಯೇ ನಮ್ಮನ್ನು ಹಿಂಡಿ ತಿಂತಾಳೆ ಅನ್ನೋ ಹೊಟ್ಟೆ ಉರಿ ನಮಗೆಲ್ಲ ಇದ್ದದ್ದೆ. ಆದರೆ ಪೊಲೀಸರ ಕಾಟದಿಂದ ರೌಡಿಗಳು ಪರ್ಕಿಗಳಿಂದ ನಮ್ಮನ್ನು ಪಾರು ಮಾಡಿ, ನಮ್ಮ ಪರವಾಗಿ ಸಂಭಾಳಿಸ್ತಾಳೆ…

ಒಟ್ಟು ಎಂಟು ಹುಡುಗೀರು ಅಂತ ಹೇಳಿದ್ದೆ ಅಲ್ವಾ? ನಾನು ಕನ್ನಡದವಳೇ, ಇನ್ನೂ ಮೂವರು ಕನ್ನಡದವರೇ, ಬಿಜಾಪುರ ರಾಯಚೂರು ಕಡೆಯವ್ರು. ಒಬ್ಬಳು ಹೈದರಾಬಾದಿನೋಳು,  ಇಬ್ಬರು ಡೆಲ್ಲಿಯಿಂದ ಆಚೆಯವರು, ಇನ್ನಿಬ್ಬರು ನೇಪಾಳ ದೇಶದವರು. ಎಲ್ಲರೂ ಹಿಂದಿಯಲ್ಲಿ ಮಾತಾಡ್ತೀವಿ. ನೇಪಾಳಿ ಹುಡುಗೀರೂ ಹಿಂದಿಯಲ್ಲಿ ಮಾತಾಡ್ತಾರೆ.

ಅವರಿಬ್ಬರೂ ಅವರ ಭಾಷೆಯಲ್ಲಿ ಮಾತಾಡಿಕೊಳ್ತಾರೆ. ಮೂರ್ನಾಲ್ಕು ತಿಂಗಳು ಇದ್ದು ಒಂದಿಷ್ಟು ದುಡ್ಡು ಮಾಡ್ಕೊಂಡು ಹೋಗೋಕೆ ಅಂತ ಬಂದಿರ್ತಾರೆ, ಅವರ ಊರಿನವರಿಗೆ ಬೆಂಗಳೂರಿನಲ್ಲಿ ದೊಡ್ಡ ಕೆಲಸ ಇದೆ ಅಂತ ಹೇಳ್ತಾರಂತೆ. ಯಾರಿಗೆ ಏನು ಗೊತ್ತಿದೆಯೋ ಇಲ್ಲವೋ, ಬೆಂಗಳೂರು ಮಾತ್ರ ನಮ್ಮ ವೃತ್ತಿ ಮಾಡೋ ಹುಡುಗಿಯರಿಗೆಲ್ಲ ಚೆನ್ನಾಗಿ ಗೊತ್ತು.

ನಮಗೆಲ್ಲ ಅಡುಗೆ ಮಾಡಿ ಹಾಕೋಕೆ ಒಬ್ಬಳಿದ್ದಾಳೆ. ದಿನಕ್ಕೆ ಎರಡು ಹೊತ್ತು ಊಟ, ಎರಡೋ, ಮೂರೋ ಟೀ… ನಮ್ಮ ದೇಹ ದಂಡನೆಗೆ ಗ್ಯಾರೆಂಟಿ ಸಿಗೋ ಪ್ರತಿಫಲ ಇದೇ. ಉಳಿದ ಎಲ್ಲಾ ಅರೇಂಜ್ ಮೆಂಟ್ಸ್ ನಾವೇ ಮಾಡ್ಕೋಬೇಕು, ಅದಕ್ಕೆಲ್ಲ ಇಲ್ಲಿ ಜೊಲ್ಲು ಸೇರಿಸಿಕೊಂಡು ಬಿದ್ದಿರೋ ಜನ ಇರ್ತಾರೆ.

ಇದಿಲ್ಲಾಂದ್ರೆ ಎಲ್ಲಾದ್ರೂ ರಸ್ತೆ ಬದೀಲಿ ತಿಂದು ಅಲ್ಲೇ ಮಲಗಬೇಕಾಗುತ್ತೆ. ಬಾಗಿಲು ಬಡಿದ ಸದ್ದಾಯ್ತು. ವೆಂಕಟ ಬಾಗಿಲು ತೆಗೆದ. ಅಡುಗೆ ಮಾಡೋ ಕಮಲಳ ಅಮ್ಮ ಒಳ ಬಂದಳು.  ಧಾವಂತದಲ್ಲಿದ್ದಳು. ಹೇ ಕಮಲಾ ಬಾರೇ, ಇನ್ನು ಆಚೇನೇ ಬರೋ ಹಂಗಿಲ್ಲವಂತೆ, ಮಕ್ಕಳ ಗತಿ ಏನು, ನೀನೇನಾದ್ರೂ ಇಲ್ಲಿ ಸಿಕ್ಕಿಹಾಕ್ಕೊಂಡ್ರೆ ಅಂತ ಕೂಗಾಡಿದ್ಲು.

ಮೇಡಂ, ಯಾಕೆ ಹಿಂಗಾಡ್ತೀಯ, ಒಂದೆರೆಡು ದಿನ, ಸರಿ ಹೋಗುತ್ತೆ ಬಿಡು ಅಂದ್ಲು. ಅಯ್ಯೋ ನಿನಗಿನ್ನೂ ಅರ್ಥಾನೇ ಆಗ್ತಿಲ್ಲ ಬಿಡು, ಸ್ವಲ್ಪ ಮುಂಬಾಗಿಲಿಗೆ ಬಂದು ನೋಡು. ಬೀದಿಗಳೆಲ್ಲಾ ಬಿಕೋ ಅನ್ತಿವೆ, ಮನುಷ್ಯರ ತಲೇನೇ ಕಾಣ್ತಿಲ್ಲ, ಇನ್ನೂ ಏನೇನು ಕಾದಿದೆಯೋ ಅಂತ ಸಮರ್ಥಿಸಿಕೊಂಡಳು.

ಮೇಡಂಗೆ ಮೊದ ಮೊದಲು, ಅಯ್ಯೋ ಅವಳಿಲ್ಲದೇ ಏನ್ಮಾಡೋದು ಅನ್ನಿಸಿದ್ರೂ, ಮನೆ ತುಂಬಾ ಹುಡ್ಗೀರಿದ್ದಾರೆ ಬಿಡು ಅನ್ನೋ ಸಮಾಧಾನ. ಬೆಳಗ್ಗೆ ಎದ್ದರೆ ಎಂತದೋ ಉಲ್ಲಾಸ. ಮನಸೆಲ್ಲಾ ಹಕ್ಕಿಯಂತೆ ಹಾರಾಡುತ್ತಿತ್ತು. ಈವತ್ತು ಯಾವ ಗಿರಾಕೀನೂ ಬರಲ್ಲ. ನಮಗೆಲ್ಲಾ ಚುಟ್ಟಿ ಸಿಕ್ತು.

ಮುಟ್ಟಾದರೂ ಗಿರಾಕೀನ ದೂಡೋಳು ಈ ಹೆಮ್ಮಾರಿ ಈಗೇನು ಮಾಡ್ತಾಳೆ, ಅಂತ ಧವನ ಒಳಗೊಳಗೆ ಗುಸುಗುಟ್ಟಿದ್ಲು. ತಡವಾಗಿ ಎದ್ದು ಬಂದ ನಾಸಿರ ನನ್ನನ್ನು ಎತ್ತಿ ಹಿಡ್ಕೊಂಡು ದೀದಿ ಇವತ್ತು ಎಷ್ಟು ಖುಷಿಯಾಗ್ತಿದೆ, ನಮಗೂ ಒಂದು ಬಿಡುವಿನ ದಿನ ಇರುತ್ತೆ ಅಂತ ಗೊತ್ತೇ ಇರಲಿಲ್ಲ. ಒಬ್ಬರಿಗಿಂತ ಒಬ್ಬರಿಗೆ ಒಳಗೊಳಗೆ ಖುಷಿಯೋ ಖುಷಿ.

ಅಂದಂಗೆ ನನ್ನೂ ಸೇರಿದಂಗೆ ಎಲ್ಲರೂ ಮೂವತ್ತು ಮೂವತ್ತೆರಡು ವರ್ಷದ ಒಳಗಿನವರೇ. ಸರಿ ಎಲ್ಲಾ ರಿಲ್ಯಾಕ್ಸ್… ಟಿವಿ ಚಾಲು ಆಯಿತು, ಹೊಟ್ಟೆ ಚುರುಗುಡೋಕೆ ಶುರುವಾಯಿತು.  ಕಮಲ ಇದ್ದಾಗ ಆವತ್ತಿಗೆ ಏನು ಬೇಕು ಅದನ್ನು ತರಿಸಿ ಅವತ್ತಿನ ಅಡುಗೆ ಮಾಡ್ಸೋಳು.

ಇದ್ಯಾವುದರ ಪರಿವೇ ಇಲ್ಲದ ಈ ಹೆಂಗ್ಸು ಎಂದೂ ಒಂದು ಮುಷ್ಟಿ ದಿನಸಿಯನ್ನು ಹೆಚ್ಚು ತರಿಸುತ್ತಿರಲಿಲ್ಲ.  ನಾವೆಂದೂ ಅಡುಗೆ ಮನೆ ಕಡೆ ತಲೆ ಹಾಕಿದವರು ಅಲ್ಲ. ಹೇ ವೆಂಕಟ ಆಚೆ ಹೋಗೋ, ಏನಾದ್ರೂ ಸಿಕ್ಕರೆ ತಗೊಂಡ್ ಬಾ ಹಸಿವಾಗುತ್ತಿದೆ ಅಂದ್ಲು ಮೇಡಂ.

ತನ್ನ ಕಾಯುತ್ತಿದ್ದ ಆಪ್ತನೊಬ್ಬನಿಗೆ ಫೋನ್ ಮಾಡಿದ್ಲು, ಆ ಕಡೆಯಿಂದ ಸ್ವಿಚ್ ಆಫ್ ಆಗಿತ್ತು. ಆಚೆ ಹೋದ ವೆಂಕಟ ಪತ್ತೆಯೇ ಇಲ್ಲ ಮೂರ್ನಾಲ್ಕು ಗಂಟೆ ಹೊತ್ತಿಗೆ ಬಂದ. ಹೊರಗಿನ ಪರಿಸ್ಥಿತಿ ವಿವರಿಸಿದ. ಪಕ್ಕದ ಬೀದಿಲಿರೊ ಅಂಗಡಿ ಸುಧಾಕರನಿಗೆ ಹೇಳಿ ಬಂದಿದ್ದೇನೆ, ರಾತ್ರಿ ಆದ ನಂತರ ಅಂಗಡಿ ತೆಗೆದು ಏನಿದೆಯೋ ಅದನ್ನು ಕೊಡುತ್ತಾನಂತೆ.

ಆದರೆ ಎಷ್ಟು ಜನಕ್ಕೆ ಹೀಗೇ ಹೇಳಿದ್ದಾನೋ ನಾವು ಮೊದಲೇ ಹೋಗಿ ಸಿಕ್ಕಿದ್ದನ್ನು ತರಬೇಕು ಅಂತ ಹೇಳ್ದ. ಸಾಹಸ ಮಾಡಿ ಹಂಚಿಕೊಂಡು ಬಂದಿದ್ದ ಒಂದಿಷ್ಟು ಬನ್ನುಗಳು, ಬಾಳೇಹಣ್ಣು ಎಲ್ಲರಿಗೂ ಕೊಟ್ಟ. ತಿಂದವರೇ ಗುಡ್ಡೆ ಹಾಕ್ಕೊಂಡು ಅಂತ್ಯಾಕ್ಷರಿ ಶುರುವಿಟ್ಕೊಂಡ್ವಿ. ರಾತ್ರಿ ವೆಂಕಟನ ಜೊತೆ ನಾನು, ಸುನಂದಿ, ಮೇಡಂ ಹೋದೆವು. 

ಸುಧಾಕರ ಬಾಗಿಲು ತೆರೆದದ್ದೇ ತಡ ಅವರೂ ಇವರೂ ಅಂತ ತುಂಬಿಕೊಂಡೆ ಬಿಟ್ಟು, ಸಿಕ್ಕಿದ್ದೆಲ್ಲಾ ಬಾಚಿಕೊಂಡು ಅವನು ಹೇಳಿದಷ್ಟು ದುಡ್ಡು ಕೊಟ್ಟು ಬಂದೆವು. ಅಕ್ಕಿ, ಸಕ್ರೆ, ಟೀ ಪುಡಿ, ಬೇಳೆ, ಮೊಟ್ಟೆ, ಉಪ್ಪು, ಬೆಂಕಿ ಪಟ್ಣ, ಕಾರಪುಡಿ,  ಒಂದಿಷ್ಟು ತರಕಾರಿ ಈರುಳ್ಳಿ ಮೆಣಸಿನಕಾಯಿ ಸಿಕ್ತು. ಏನಾದರಾಗಲಿ ನಾವು ಬೇಯಿಸಿ ತಿನ್ನೋಕೆ ದಾರಿಯಾಯಿತು.

ಹೇಗೂ ನರಮನುಷ್ಯರ ಕಾಟನೂ ಇರಲ್ಲ ಅಂತ ನಿರಾಳವಾಯಿತು. ದಿನ ಪೂರ್ತಿ ಟಿವಿ ಚಾಲು ಆಗ್ತಾನೆ ಇರೋದು. ನೋಡ್ತಾ ನೋಡ್ತಾ ಮೇಡಂ ಮಂಕಾಗ್ತಾ ಇದ್ಲು. ಮೂರ್ನಾಲ್ಕು ದಿನ ಕಳೆದಿತ್ತು. ಕೂಡಿಟ್ಟುಕೊಂಡಿದ್ದ ದಿನಸಿಯೆಲ್ಲಾ ಕರಗುತ್ತಾ ಬಂದಿತ್ತು. ಮೇಡಂಗೆ ದಿಗಿಲಾಗತೊಡಗಿತ್ತು. ನಮ್ಮ ಪಾಲಿನ ದುಡ್ಡನ್ನೂ ಖಾಲಿ ಮಾಡ್ತಿರೋ ಬಗ್ಗೆ ಆಗಾಗ್ಗೆ ನಮ್ಮ ಗಮನಕ್ಕೆ ತರ್ತಾನೇ ಇರೋಳು.

ನಾವು ಒಳಗೊಳಗೇ ಶಪಿಸ್ಕೊಂಡು ಸುಮ್ಮನಾದೆವು. ಹೇಗೋ ಒಂದು ಆಶ್ರಯ ಕೊಟ್ಟಿದ್ದಾಳಲ್ಲ, ಆಮೇಲೆ ದುಡಿದರಾಯ್ತು ಅಂದ್ಕೊಂಡು ಎಲ್ಲರೂ ಸುಮ್ಮನಾದೆವು. ತನ್ನ ಆಪ್ತರೂ ಯಾರೂ ಬರೋದಿಲ್ಲ, ಈ ಬಡಪಾಯಿ ವೆಂಕಟ ಒಬ್ಬ ಸಿಕ್ಕಿಬಿದ್ದಿದ್ದಾನೆ.

ಟಿವಿ ಹಾಕಿದರೆ ಭಯಂಕರ, ಆಫ್ ಮಾಡಿದರೆ ಗಾಢಾಂಧಕಾರ ಆ ದಿನ ಬೆಳಗ್ಗೆ ವೆಂಕಟ ಆಚೆ ನಡೆದ,  ಬರೋವಾಗ ಏರಿಯಾದ ಕಾರ್ಪೊರೇಟರ್ ಫ್ರೀಯಾಗಿ ಕೊಟ್ಟ  ಅಕ್ಕಿ, ಎಣ್ಣೆ, ಗೋಧಿಹಿಟ್ಟು, ಟೊಮೇಟೊ ತಂದ. ನಮಗೆಲ್ಲಾ ಮತ್ತೆ ಹುಟ್ಟಿದಂತಾಯ್ತು. ಮೇಡಂ ಪಾಲಿಗಂತೂ ಇರುವ ದಿನಸಿ ಮುಗಿಯುವ ಹೊತ್ತಿಗೆ ಕಾಸಿಲ್ಲದೇ ದಿನಸಿ ತಂದ ವೆಂಕಟ ನಿಜವಾದ ವೆಂಕಟರಮಣನಾಗಿದ್ದ.

ದಿನಕಳೆದಂತೆ ಬದುಕು ನೀರಸವಾಗ್ತಾ ಬಂತು. ಎಲ್ಲರಿಗೂ ಪಾನ್ ತಿನ್ನುವ, ಕುಡಿಯುವ, ಅಡಿಕೆ ಎಲೆ ತಂಬಾಕಿನ ಅಭ್ಯಾಸ ಎಷ್ಟಿತ್ತೆಂದರೆ ಅವಿಲ್ಲದೇ ಮನುಷ್ಯರು ಬದುಕಬಹುದು ಅನ್ನೋದೇ ಆಶ್ಚರ್ಯವಾಗುವಷ್ಟು!

ಇದ್ಯಾವುದರಿಂದಲೂ ಕಂಗಾಲಾಗದ ನಾವು ಇವ್ಯಾವೂ ಸಿಗುವ ದಾರಿಯೇ ಕಾಣದೆ ತಬ್ಬಿಬ್ಬಾದೆವು. ಹೇಗೋ ಅಲ್ಲಿ-ಇಲ್ಲಿ ಇಟ್ಟಿದ್ದ ಪಾನ್ ಪ್ಯಾಕೆಟ್ ಎಲ್ಲ ಖಾಲಿ ಖಾಲಿ. ಮೊದಮೊದಲು ವಿಶ್ರಾಂತಿ ರಜೆ ಎನಿಸಿದ್ದ ಮನಸ್ಸುಗಳಿಗೆ ಈ ಬದುಕು ಹಿಂಡೋಕೆ ಶುರುಮಾಡಿತ್ತು. 

ದಿನದಿನವೂ ದುಡ್ಡನ್ನು ಎಣಿಸಿ ಪೋಣಿಸುವುದರಲ್ಲೇ ಸುಖ ಅನುಭವಿಸುತ್ತಿದ್ದ ಮೇಡಂ ತಲೆ ಕೆಟ್ಟವಳಂತೆ ಆಡೋಕೆ ಶುರು ಮಾಡಿದ್ಲು. ವೆಂಕಟನೊಬ್ಬ ಆಪದ್ಬಾಂಧವನಂತೆ ಹೊರಗಿನ ಜಗತ್ತನ್ನು ನಮ್ಮ ಜೊತೆ ಜೋಡಿಸಿದ್ದ.

ಆ ದಿನ ರಾತ್ರಿ ಹೊರಗೆ ಹೋಗಿದ್ದ ವೆಂಕಟ ನಡುಗುತ್ತಾ ಬಂದ. ಅಕ್ಕಾ, ನಮ್ಮ ಬೀದೀಲೇ ಯಾರಿಗೋ ಕೊರೊನಾ ಬಂದು ಬಿಟ್ಟಿದೆಯಂತೆ. ನಮ್ಮ ರಸ್ತೇನೇ ಸೀಲ್ ಡೌನ್ ಅಕ್ಕಾ…

ಅಂದ್ರೆ ಕರ್ಫ್ಯೂ ಇದ್ದಂಗೆ. ತನಗಿದ್ದ ಜನರಲ್ ನಾಲೆಡ್ಜನ್ನೆಲ್ಲ ಉಪಯೋಗಿಸಿ ಅರ್ಥ ಮಾಡಿಸಿದ್ದ. ಈ ಕೊರೊನಾ ಟಿವಿ ಲೋಕದ್ದು ಅಂತ ಅನ್ಯ ಲೋಕದವರ ಥರಾ ನೋಡ್ತಿದ್ದ ನಮಗೆ ಈ ಸುದ್ದಿ ಶಾಖ್ ಕೊಟ್ಟಿತ್ತು. ನಾವೆಲ್ಲ ಸ್ತಬ್ಧರಾಗಿ ಬಿಟ್ಟೆವು.

ಈಗ ನಮ್ಮ ನಿಜವಾದ ಬದುಕುಗಳ ದಾರುಣ ಕ್ಷಣಗಳು ತೆರೆದುಕೊಳ್ಳೋಕೆ ಶುರು ಮಾಡಿದ್ವು. ಒಬ್ಬೊಬ್ಬರಿಗೂ ಒಂದೊಂದು ಸಂಕಟ. ಮೊದಮೊದಲು ನನ್ನವರು ಅಂತ ಹೇಗೋ  ನಮ್ಮನ್ನು ಸಂಭಾಳಿಸಿದ ಮೇಡಂಗೆ ದಿಗಿಲಾಗತೊಡಗಿತ್ತು.

ಆದಾಯವೇ ಇಲ್ಲದ ಹಗಲು-ರಾತ್ರಿಗಳು, ಮೆಲ್ಲಗೆ ಕೂಡಿಟ್ಟ ಕಾಸೆಲ್ಲಾ ಕರಗುತ್ತಿದೆ ಎಂದು ಹೇಳುತ್ತಿರುವ ಕಪಾಟು, ಏನೋ ಸರಿ ಹೋಗಬಹುದು ಅಂತ ಗಟ್ಟಿಯಾಗಿದ್ದ ಅವಳ ಮನಸ್ಸು ಕಲ್ಲಾಗುತ್ತಾ ಬಂತು.

ಅವಳ ಹಸಲಿ ಮುಖ ನಿಧಾನವಾಗಿ ಹೊರಬರ್ತಾ ಇತ್ತು. ಅಸಹನೆ ಮೂದಲಿಕೆಗಳು ಶುರುವಾದವು. ನಮ್ಮ ಪಾದದಡಿ ಕೆಂಡ ತುಳಿದ ಅನುಭವ ನಮಗೂ ಮೆಲ್ಲನೆ ಆರಂಭವಾಯಿತು.

ಮತ್ತೆ ಅದೊಂದು ರಾತ್ರಿ; ದಢದಢನೆ ಬಡಿದ ಸದ್ದು. ನಡೆದದ್ದು ಮೂರ್ನಾಲ್ಕು ರೌಡಿಗಳು ಬಾಗಿಲಲ್ಲಿ ನಿಂತಿದ್ದರು. ಹೇ ವೆಂಕಟ ಬಾಗಿಲು ತೆಗೆಯೋ, ನಾವು ಒಳಗೆ ಬರ್ತೀವಿ ಅಂತ ಕೂಗಾಡುತ್ತಿದ್ದರು.

ಅಷ್ಟರಲ್ಲಿ ದೂರದಲ್ಲೆಲ್ಲೋ ಹೊಯ್ಸಳದ ಸೈರನ್ ಕೂಗು. ರೌಡಿಗಳು ಕಾಲ್ಕಿತ್ತರು. ವೆಂಕಟನ ಹೆಸರು ಹೇಳಿದ್ದು ಕೇಳಿ, ಯಾರೋ ಪರಿಚಯದ ರೌಡಿಗಳೇ ಅಂತ ಖಾತ್ರಿಯಾಯ್ತು. ಮೊದಲೇ ಬೇಗುದಿಯಲ್ಲಿ ಇದ್ದ ಮೇಡಂ ಇನ್ನಷ್ಟು ಕ್ಷುದ್ರಳಾದ್ಲು. 

ಹೇ… ಹೋಗ್ರೇ, ನಿಮ್ಮನ್ನೆಲ್ಲ ರಕ್ಷಣೆ ಮಾಡಿ ಕೂಳು ಹಾಕೋಕೆ ನಾನೇನು ಅನ್ನದಾನ ಛತ್ರ ಇಟ್ಟಿದ್ದೀನಾ? ಮೊದಲು ಕುಡಿದು ಕೂಗಾಡ್ತಾ ಇದ್ಲು, ಈಗ ಕುಡಿತವಿಲ್ಲದೆ ತಲೆಕೆಟ್ಟು ಕೂಗಾಡ್ತಾಳೆ. ಯಾರೂ ತುಟಿ ಪಿಟಿಕ್ ಅನ್ನಲಿಲ್ಲ.

ಮೊದಲಾಗಿದ್ದರೆ ನನ್ನದು ನನಗೆ ಕೊಟ್ಟುಬಿಡು ಹೋಗ್ತೀನಿ, ಅಂತ ಧಮ್ಕಿ ಹಾಕ್ತಿದ್ವಿ. ಈಗ ನಾಲಿಗೆ ಒಣಗಿತ್ತು ಹೊರಗೆ ದಾರಿಯೇ ಬೇಲಿಯಾಗಿತ್ತು.

ಬರುಬರುತ್ತಾ ಕಿಷ್ಕಿಂದೆಯ ಆ ಟಾಯ್ಲೆಟ್ ಗಳು, ಇಕ್ಕಟ್ಟಾದ ಮೋಟು ಗೋಡೆಗಳ ಹಾಸುಗಳು, ಕುಡಿಯುವ ನೀರು ಸಿಗದೆ ಪೈಪಿನಲ್ಲಿ ಬರುವ ನೀರು ಕುಡಿಯುವಾಗ ಬರುವ ಅಬ್ಬಳಿಕೆಗಳು, ಬಚ್ಚಲು ಮೂಲೆಯಲ್ಲಿ ಏರುತ್ತಿದ್ದ ಪ್ಯಾಡ್ಗಳು, ಖಾಲಿಯಾಗುತ್ತಿದ್ದ ಪೇಸ್ಟ್, ಎಂದೋ ಖಾಲಿಯಾದ ಸೋಪಿನ ಬಟ್ಟಲುಗಳು, ಒಗೆಯಲು ಮನಸ್ಸು, ಸೋಪು ಎರಡೂ ಇಲ್ಲದ ಸಿಂಡುಗಳು, ಹೆಚ್ಚು ಕಡಿಮೆ ಇಲ್ಲವೋ ಖಾಲಿಯಾದ ಹಬ್ಬಗಳು.

ಹಾಗೂ ಯಾವಾಗಲೂ ಮುಚ್ಚಿಟ್ಟ ಮನೆಯ ಮುಗ್ಗಲು ವಾಸನೆ ಉಸಿರುಗಟ್ಟಿಸುತ್ತಿತ್ತು. ಎಲ್ಲರಿಗೂ ಬದುಕು ಭಾರವಾಗುತ್ತಿತ್ತು. ಮೊದಮೊದಲು ಹಾಡಿದ ಅಂತ್ಯಾಕ್ಷರಿಗಳು ಅಂತ್ಯ ಗೊಂಡಿದ್ದವು. ಆಡಿದ ಎಲ್ಲಾ ಆಟಗಳು ಬೇಡವಾಗಿದ್ದವು. 

ಟಿವಿಯಲ್ಲಿ ಮಾತ್ರ ಕೊರೊನಾ ಆರ್ಭಟಕ್ಕಿಂತ ಏರು ಧ್ವನಿಯಲ್ಲಿ ಹೇಳುವವರ ಧ್ವನಿಗಳು ಕೀರಲಾಗಿದ್ದವು. ನಮ್ಮ ಬೀದಿಯ ಸೀಲ್ ಡೌನ್ ತೆರವಾಗಲೇ ಇಲ್ಲ. ಒಬ್ಬರಿಗಿದ್ದ ಸೋಂಕು ಮೂರ್ನಾಲ್ಕು ಆಗಿತ್ತು. 

ಏನಾದರೂ ತಂದು ಹೊಟ್ಟೆ ತುಂಬಿಸುವ ಪ್ರಯತ್ನ ಮಾಡುತ್ತಿದ್ದ ವೆಂಕಟ ಮಂಕಾಗಿ ಮೂಲೆ ಸೇರಿಬಿಟ್ಟ. ಸೀಲ್ ಡೌನ್ ದಾಟುವ ಒಂದು ಕಿಂಡಿಯೂ ಉಳಿದಿರಲಿಲ್ಲ. ಮೇಡಂ ನಿತ್ರಾಣ ಆಗ್ತಾ ಇದ್ಲು.

ನಾವೆಲ್ರೂ ಮೂರು ಹೊತ್ತು ತಿನ್ನುತ್ತಿದ್ದ ದಿನಗಳು ಕಳೆದು ಎರಡು ಹೊತ್ತುಗಳಾದ್ವು. ಅದೂ ಕಳೆದು ಮೇಡಂಗೆ ಮಾತ್ರ ಒಂದು ಹೊತ್ತು ಒಂದು ಮುಷ್ಟಿ ಅನ್ನ ಕೊಡುವ ಸ್ಥಿತಿಗೆ ಬಂದೆವು.  ಅವಳಿಗೆ ಅನ್ನವನ್ನು ತೋಡಿ ತೆಗೆದು ನಂತರ ಉಳಿದ ಅಗುಳುಗಳಿಗೆ ನೀರು ಹಾಕಿ ಕುದಿಸಿ ಆ ಗಂಜಿಯನ್ನು ನಾವೆಲ್ಲ ಕುಡೀತಾ ಇದ್ವಿ. 

ಹಸಿವು ಎಲ್ಲರನ್ನೂ ತಟ್ಟಾಡುವ ಸ್ಥಿತಿಗೆ ತಂದು ನಿಲ್ಲಿಸಿತ್ತು. ಅಲ್ಲಲ್ಲೇ ಮುದುರಿ ಕತ್ತಲಲ್ಲಿ ಉಸಿರು ದಕ್ಕಿಸಿಕೊಳ್ಳುವ ಪ್ರಯತ್ನ ಮಾಡತೊಡಗಿದೆವು. ಮೊದಲ ದಿನ ನನ್ನ ಮೇಲೆರಗಿ ಮೈ ಪರಚಿ ಪಟಲ ಹರಿದ ನೋವನ್ನೂ ಈ ಹಸಿವು, ಸಂಕಟ ಮೀರಿಸಿ ಬಿಟ್ಟಿತ್ತು.

ದಿಕ್ಕೇ ತೋಚುತ್ತಿಲ್ಲ. ಮೇಡಂ ಬಿಡುತ್ತಿದ್ದ ನಿರಾಸೆಯ, ನಿತ್ರಾಣ, ನಿಟ್ಟುಸಿರು ನಮ್ಮನ್ನೆಲ್ಲ ಸೀಳಿಕೊಂಡು ಹೋಗುತ್ತಿತ್ತು. ಅವಳಿಗೆ ತಾನಿನ್ನು ಉಳಿಯುವ ಸಾಧ್ಯತೆ ಕ್ಷೀಣಿಸುತ್ತಿದೆ ಅನ್ನೋ ಭಾವನೆ ಗಟ್ಟಿಯಾಗತೊಡಗಿತ್ತು. ಉತ್ತರವೆ ಇಲ್ಲ ಎಲ್ಲಾ ಪ್ರಶ್ನಾರ್ಥಕವೇ.

ವೆಂಕಟಾ, ಇದೆಂಥಾ ಸಂಕಟವೋ ಮನೆಗೆ ಮುಚ್ಚು ಬಾಗಿಲು ಹಾಕಿದ್ದಲ್ಲದೆ, ಬೀದಿಯನ್ನೂ ಮುಚ್ಚಿ ಬಿಟ್ಟರಲ್ಲೋ ಅಂತ ಕರುಳು ಕಿತ್ತು ಬರೋ ಹಂಗೆ ರೋಧಿಸ್ತಾ ಇದ್ಲು. ಅವಳಿಗೆ ಇನ್ನಾವುದರ ಪರಿವೆಯೂ ಇರಲಿಲ್ಲ. 

ಅಷ್ಟರಲ್ಲಿ ಟಿವಿಯಲ್ಲಿ ಲಾಕ್ ಡೌನ್ ಮುಂದುವರಿದ ಸುದ್ದಿ ಬರುತ್ತಿತ್ತು! ಟಿವಿ ಬಂದ್ ಮಾಡ್ರೇ… ಕಿಟಾರನೆ ಕಿರುಚಿದ್ಲು. ತಕ್ಷಣ ಎಲ್ಲವೂ ಸ್ತಬ್ಧವಾಯಿತು. ಎಲ್ಲರೂ ಅವಳಿಗೆ ಒಳದನಿ ಸೇರಿಸಿದ್ವು.

ಮೇಡಂಗೆ ಯಾವುದೋ ಫೋನ್ ಕರೆ ಬರ್ತಿತ್ತು, ಅವಳಿಗೆ ಮಾತಾಡೋ ಶಕ್ತಿಯೂ ಇರಲಿಲ್ಲ. ಆ ಕಡೆಯ ಧ್ವನಿ ಹೇಳಿದ್ದು, ಹೇ ಲಕ್ಷ್ಮಮ್ಮ ನಿಮ್ಮ ಮನೆಯಲ್ಲಿ ಎಷ್ಟು ಹುಡುಗಿಯರಿದ್ದಾರೆ, ಅವರನ್ನೆಲ್ಲ ಕಳಿಸಿದ್ದೀಯ ತಾನೆ? ನಿನ್ನ ಮನೆ ರಸ್ತೆಗೆಲ್ಲಾ ನಾಳೆಯಿಂದ ಮಿಲ್ಟ್ರಿಯವರನ್ನು ಹಾಕ್ತಾರೆ.

ಹೊರಗೆ ಬಂದರೆ ಕಂಡಲ್ಲಿ ಗುಂಡು ಹಾರಿಸುತ್ತಾರೆ. ನಿನ್ನ ಮನೆ ಸುಳಿವು ಸಿಕ್ಕರೆ ನಾವಂತೂ ಕಾಪಾಡೋಕೆ ಆಗೋಲ್ಲ. ಆ ಕಡೆಯ ಧ್ವನಿ ನಿಂತಿತ್ತು. ಅಕ್ಕಾ, ಆ ಪೇದೆ ರಂಗಣ್ಣ ಮಾತಾಡಿದ್ದು, ಅಂದ ವೆಂಕಟ.

ನಾವೆಲ್ಲಾ ಅಷ್ಟೊತ್ತಿಗೇ ನಿಶ್ಚಿತವಾಗಿದ್ದೆವು. ಹರಿದು ತಿನ್ನೋ ಹಸಿವು, ಭಯ, ಭಯ, ಭಯ, ಸಾವಿನ ಭಯ, ಹಸಿದು ಸಾಯೋ ಸಾವಿನ ಭಯ, ಕೊರೊನಾ ಬಂದು ನರಳಿ ಸಾಯುವ ಸಾವಿನ ಭಯ, ಈಗ ಈ ಮಿಲಿಟರಿಯವರ ಭಯ!! ಮೇಡಂನನ್ನು ನಾನು ಗಮನಿಸುತ್ತಿದ್ದೆ.

ಮಾತು ಪೂರ್ತಿ ಕಡಿಮೆ ಮಾಡಿದ್ಲು. ಕೊಟ್ಟ ಮುಷ್ಟಿ ಅನ್ನದಲ್ಲಿ ತನ್ನನ್ನು ಕಾಪಾಡಿಕೊಳ್ಳೋ ತಪಸ್ಸು ಮಾಡ್ತಿದ್ಲು. ಅವಳು ಅಧೀರಳಾದಂತೆಲ್ಲಾ ನಾವು ನಿಧಾನವಾಗಿ ಚಲನೆ ಕೊಳ್ಳುತ್ತಿದ್ದೆವು. 

ಮೇಡಂ ಆ ದಿನ ರಾತ್ರಿ ತುಂಬಾ ಹೊತ್ತು ಪಡಸಾಲೆಯಲ್ಲೇ ಕುಳಿತಿದ್ಲು. ವೆಂಕಟನೂ ಅಲ್ಲೇ ಕುಳಿತಿದ್ದ. ಸರಿರಾತ್ರಿಯಾದರೂ ಕದಲಲಿಲ್ಲ. ನಾವೆಲ್ಲರೂ ಸೋತ ಮನಸ್ಸಿನೊಳಗೆ ನರಳಿಕೆಯ ಕೂಡಿಸಿ ಹಾಗೆಯೇ ನೆಲಕ್ಕೊರಗಿದೆವು.

ಅಯ್ಯೋ… ಎದ್ದೇಳ್ರೇ… ಸುನಂದಿ ಕೂಗಿಕೊಂಡಳು. ಎಲ್ಲರೂ ಮೈಕೊಡವಿ ಗಾಬರಿಯಿಂದ ಎದ್ದು ಕುಳಿತೆವು. 

ಮೇಡಂ ಕೊಠಡಿ ಬಾಗಿಲು ತೆರೆದಿತ್ತು… ಕಪಾಟಿನ ಕದಗಳು ಕೂಡ… ವೆಂಕಟನೂ ಇರಲಿಲ್ಲ… ಎಲ್ಲದರಿಂದಲೂ ಮುಕ್ತವಾಗಿ ಪ್ರಾಣ ಉಳಿಸಿಕೊಂಡು ನಡೆದೇ ಬಿಟ್ಟಿದ್ದಳು…

ಈಗ ನಿಜವಾಗಿಯೂ ನಮ್ಮೆಲ್ಲರ ಜೀವವು ಸೀಲ್ ಡೌನ್ ಆಗಿತ್ತು.

‍ಲೇಖಕರು ಲೀಲಾ ಸಂಪಿಗೆ

September 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ಲೀಲಕ್ಕ ನಿಮ್ಮ ಅಂಕಣ ಮೂರು ಸಲ ಓದಿದ್ದೇನೆ….
    ಇನ್ನೆಂಥ ಚಳುವಳಿ ಆಗ್ಬೇಕು ಇಂಥವೆಲ್ಲ ನಿಲ್ಲಕೆ.
    ಈ ರಾಜಕೀಯ ಪ್ರಭುಗಳಿಗೆ ದೇಶ ಎಂಥಾ ಸಮಸ್ಯೆಗಳಿಗೆ ಸಿಕ್ಕಿ ನರಳ್ತಾ ಇದೆ ಅನ್ನೋ ಕನಿಷ್ಠ ಬುದ್ಧಿಯೂ ಇಲ್ಲದೆ ಧರ್ಮ ಅವಚಿ ನಿಂತಿದ್ದಾರಲ್ಲ. ಹೆಣ್ಣು ಮಕ್ಕಳ ಅಳಲಿಗೆ ಏನೇನು ದಾಳಿಗಳು…. ತುಂಬಾ ಸಂಕಟವಾಗ್ತಿದೆ ಅಕ್ಕ ಓದಿ….
    ಎಂದಿಗೆ ನಿರಾಂತಕವಾಗಿ ಬದುಕುವುದು ಹೆಣ್ಣು ಮಕ್ಕಳು?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: