ಬೇಲೂರು ಕೃಷ್ಣಮೂರ್ತಿ ನುಡಿ ನಮನ

ಸುಮಾ ವೀಣಾ, ಹಾಸನ

ಹೆಸರಾಂತ ನಾಟಕಕಾರ ಬೇಲೂರು ಕೃಷ್ಣಮೂರ್ತಿ ಅವರು ತೊಂಬತ್ತು ವರ್ಷದ ತುಂಬು ಜೀವನಕ್ಕೆ ಇಂದು ಪೂರ್ಣವಿರಾಮ ಇಟ್ಟಿದ್ದಾರೆ. ಇವರ ನಿಜನಾಮಧೇಯ ಎಂ. ಕೃಷ್ಣ ಮೂರ್ತಿ ರಾವ್. ಎಂ ಅರ್ಥಾತ್ ಮಾದನಹಳ್ಳಿ. ಇದು ಅರಸೀಕೆರೆ ತಾಲ್ಲೂಕು ಜಾವಗಲ್ ಹೋಬಳಿಯ ಪುಟ್ಟಗ್ರಾಮ. ಮೂಲತಃ ಶಾನುಭೋಗರ ಮನೆತನಕ್ಕೆ ಸೇರಿದ ಇವರು 8.8.1931 ರಲ್ಲಿ ಅನಂತರಾಮಯ್ಯ ಹಾಗು ಲಕ್ಷ್ಮಿದೇವಮ್ಮನವರ ಆರನೇಯ ಮಗನಾಗಿ ಜನಿಸುತ್ತಾರೆ.

ಪ್ರಾಥಮಿಕ ಶಿಕ್ಷಣವನ್ನು ಹಾಸನದಲ್ಲಿ ಮುಗಿಸಿದ ಇವರು 1952 ರಲ್ಲಿ ದೈಹಿಕ ಶಿಕ್ಷಕರಾಗಿ ಬೇಲೂರಿನಲ್ಲಿ ತಮ್ಮ ವೃತ್ತಿ ಬದುಕಿಗೆ ಕಾಲಿಡುತ್ತಾರೆ. ಉತ್ತಮ ನಟರಾಗಿದ್ದ ಬೇಲೂರು ಕೃಷ್ಣಮೂರ್ತಿಗಳು ಕನ್ನಡ ಚಿತ್ರರಂಗದ ಖ್ಯಾತ ನಟರಾದ ಉದಯಕುಮಾರ್ ಹಾಗು ಶಕ್ತಿಪ್ರಸಾದ್ ರವರ ಸಮಕಾಲೀನರು. ಖ್ಯಾತ ಹಾಸ್ಯ ನಟರಾದ ಮುಸುರಿ ಕೃಷ್ಣ ಮೂರ್ತಿಯವರ ದತ್ತಾತ್ರೇಯ ನಾಟಕ ಮಂಡಳಿ, ಬೇಲೂರಿನ ಎಸ್.ಜೋಷಿಯವರ ನಟರಾಜ ನಾಟಕ ಮಂಡಳಿಯಲ್ಲಿಯೂ ಕಾರ್ಯ ನಿರ್ವಹಿಸುತ್ತಾರೆ. ಅಂದಿನ ಖ್ಯಾತ ನಟರಾದ ಸೋರೋಟ್ ಆಶ್ವಥ್, ಶ್ರೀಮತಿ ರಾಜಮ್ಮ ಇವರೊಂದಿಗೆ ಸಂಸಾರ ನೌಕೆ, ಪ್ರೇಮಲೀಲ, ಸೌಭಾಗ್ಯಲಕ್ಷ್ಮಿ, ಮುಂತಾದ ನಾಟಕಗಳನ್ನು ಪ್ರದರ್ಶಿಸಿರುತ್ತಾರ

1962ರಲ್ಲಿ ‘ಬಲಿದಾನ’ ಎಂಬ ನಾಟಕದ ಮೂಲಕ ಇವರು ಸ್ವತಃ ನಾಟಕ ರಚನೆಗೆ ಮುಂದಾದ ಇವರು 2004ರವರೆಗೆ ನೂರು ನಾಟಕಗಳನ್ನು ರಚಿಸಿ ಶತನಾಟಕ ಸರದಾರರಾಗುತ್ತಾರೆ. ಇವರ ಕಲಾ ಸೇವೆಗೆ 1993ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ‘ಸಾಹಿತ್ಯಶ್ರೀ ಪ್ರಶಸ್ತಿ’, 2005ರಲ್ಲಿ ‘ಬುದ್ಧ ಶಾಂತಿ ಪ್ರಶಸ್ತಿ’, 2006ರಲ್ಲಿ ‘ಆರ್ಯಭಟ ಪ್ರಶಸ್ತಿ’, 2006ರಲ್ಲಿ ‘ಸುವರ್ಣ ಕನ್ನಡಿಗ ಪ್ರಶಸ್ತಿ’, ‘ಸಾಹಿತ್ಯಶ್ರೀ ಪ್ರಶಸ್ತಿ’ಗಳನ್ನು ಪಡೆದುಕೊಂಡಿರುತ್ತಾರೆ. 1993ರಲ್ಲಿ ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿದ್ದಾರೆ. ತುಮಕೂರಿನ ಅಭಿಮಾನಿಗಳು ರಜತ ಕಿರೀಟದೊಂದಿಗೆ ‘ನಾಟಕ ಸಾರ್ವಭೌಮ’ ಎಂಬ ಕೃತಿಯನ್ನು ಅರ್ಪಿಸಿರುತ್ತಾರೆ. ಇವರ ನೂರನೆ ನಾಟಕ ಬಿಡುಗಡೆ ಸಂದರ್ಭದಲ್ಲಿ ಅಖಲ ಕರ್ನಾಟಕ ರಂಗಭೂಮಿ ಕಲಾವಿದರ ಒಕ್ಕೂಟ ಬೆಂಗಳೂರು ಇವರು “ಅಭಿನವ ಭರತಮುನಿ” ಎಂಬ ಬಿರುದು ನೀಡಿ ಸನ್ಮಾನಿಸಿರುತ್ತಾರೆ.

ಅಲ್ಲದೆ ಶ್ರೀಯುತರು ಬೇಲೂರು ತಾಲ್ಲೂಕಿನ ಮೊಟ್ಟ ಮೊದಲ ಕನ್ನಟ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ, ಹಾಸನ ಜಿಲ್ಲಾ 11ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುತ್ತಾರೆ. ಶ್ರೀಯುತರು ರಚಿಸಿದ ನಾಟಕಗಳು ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ರಂಗದ ಮೇಲೆ ಪ್ರಯೋಗಗೊಂಡಿವೆ. ಅಬುದಾಬಿಯಲ್ಲಿ ನಡೆದ 9ನೆಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಸನ್ಮಾನಿಸಿರುತ್ತಾರೆ. ಅಲ್ಲದೆ ಇವರು ತಚಿಸಿದ ನಾಟಕಗಳು, ಅಮೇರಿಕಾ, ಕೆನೆಡಾ, ಮಸ್ಕಟ್, ಮುಂತಾದ ರಾಷ್ಟ್ರಗಳಲ್ಲಿ ಅಭಿನಯಿಸಲ್ಪಟ್ಟಿವೆ . ಇವರಿಗೆ 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ.

ಇವರ ಪ್ರಮುಖ ನಾಟಕಗಳು:ಬಲಿದಾನ, ಜೀತ, ತಿರಗುಬಾಣ, ಮುರಿದ ಮನೆ, ಶನಿಕಾಟ, ಬಾಳು ಬೆಳಗಿತು, ನಾ ಸತ್ತಾಗ, ಸಾವಿತ್ರಿ ಸವಾಲು ಇತ್ಯಾದಿ ಧ್ವನಿ ಸುರುಳಿಗಳು: ಕುದುರೆ ಮೊಟ್ಟೆ, ತ್ಯಾಗಿ, ಬನ್ನಿ ನಗುವ ಬನ್ನಿ ಕಾದಂಬರಿಗಳು: ದಾಹಜ, ಪುತ್ರವಾತ್ಸಲ್ಯ, ನಿಗೂಢ, ಬೆಟ್ಟದ ಬೈರಾಗಿ, ನಗೆಗಡಲು ದೂರದರ್ಶನದಲ್ಲಿ ಜುಗ್ಗಾಸ್ವಾಮಿ ಜುಗ್ಗಾ, ಹೊಯ್ಸಳೇಶ್ವರ ವಿಷ್ಣುವರ್ಧನ, ಪದುಕು ಲಡಾಯಿ (ತುಳು) ಬಾಡಿಗೆ ಬಹಿಡಾರ ಮುಂತಾದ ನಾಟಕಗಳು ಪ್ರಸಾರವಾಗಿವೆ. ಹಾಗೆ ರೇಡಿಯೋದಲ್ಲಿ ಲಚ್ಚಿ,ತ್ಯಾಗಿ, ಅಸಲಿನಕಲಿ, ಬೇಸತ್ತು ಬಿದ್ದ
ಭಾವ ಮುಂತಾದ ನಾಟಕಗಳು ಹಾಗೂ ಚಿಂತನಗಳು ಪ್ರಸಾರವಾಗಿವೆ.

ರಂಗಭೂಮಿಯನ್ನು ಹೊರತುಪಡಿಸಿ ಇವರ ವಿಶೇಷತೆಗಳೆಂದರೆ ಯಕ್ಷಿಣಿ, ಸಮ್ಮೋಹನ ವಿದ್ಯೆ, ಗೃಹವೈದ್ಯ, ಛಾಯಾಗ್ರಹಣ, ಸರ್ಪವಿಷ ಚಿಕಿತ್ಸೆ, ಯೋಗಾಸನ, ಚಲನಚಿತ್ರ ನಿರ್ಮಾಣ, ನಾಟಕ ಅಭಿನಯ, ಪ್ರಸಾದನ, ಮುದ್ರಣ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು. ಪಾದರಸದಂತೆ ಕ್ರಿಯಾಶೀಲರಾಗಿದ್ದ ಇವರ ರಂಗತರಬೇತು ಶಾಲೆ, ರಂಗ ವಸ್ತು ಸಂಗ್ರಹಾಲಯ ತೆರೆಯಬೇಕೆಂಬ ಕನಸು ಕನಸಾಗಿಯೇ ಉಳಿದಿದೆ. ಇನ್ನಾದರೂ ಸರಕಾರ ಹಾಗೂ ರಂಗಾಸಕ್ತರು ‘ಶತನಾಟಕ ಸಾರ್ವಭೌಮ ಶ್ರೀ ಬೇಲೂರು ಕೃಷ್ಣಮೂರ್ತಿ’ಯವರ ಕನಸನ್ನು ಸಾಕಾರಗೊಳಿಸಿ ನಿಜವಾದ ಗೌರವ ಸಲ್ಲಿಸಬೇಕಿದೆ.

‍ಲೇಖಕರು Avadhi

September 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: