‘ಮೊಗಸಾಲೆ’ಯಲ್ಲಿ ಕುಳಿತು…

ವಿಶ್ವನಾಥ ಎನ್. ನೇರಳಕಟ್ಟೆ

ಡಾ| ನಾ. ಮೊಗಸಾಲೆಯವರಲ್ಲಿ ಸಂದರ್ಶನಕ್ಕಾಗಿ ಅವಕಾಶ ಕೇಳಿದ್ದೆ. ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಒಪ್ಪಿಗೆಯಿತ್ತ ಅವರ ವಿನಮ್ರತೆಗೆ ಮನದಲ್ಲಿಯೇ ವಂದಿಸುತ್ತಾ ಬಸ್ಸು ಹತ್ತಿ ಕುಳಿತವನ ತಲೆ ತುಂಬಾ ಅವರ ಸಾಹಿತ್ಯದ ಮಥನ. ಸುಮಾರು ಸಮಯಗಳಿಂದ ಕಾಡುತ್ತಿದ್ದ ಪ್ರಶ್ನೆಗಳೆಲ್ಲಾ ತಲೆಯಿಂದ ಹೊರ ಜಿಗಿಯಲು ತಯಾರಿ ಮಾಡಿಕೊಂಡಿದ್ದವು. ಜಾಗತೀಕರಣ, ಧರ್ಮ- ದೇವರು, ಮತಾಂತರ, ಪ್ರಾದೇಶಿಕತೆ ಎಂದೆಲ್ಲಾ ಜಪಿಸುತ್ತಲೇ ಬಸ್ಸಿನಿಂದಿಳಿದು, ರಿಕ್ಷಾ ಹಿಡಿದೆ.

ಅವರ ಸಾಹಿತ್ಯದಲ್ಲಿ ಬರುವ ಕುಪ್ಪಣ್ಣಯ್ಯನ ಹೋಟೆಲ್, ಸುಂದರಿಯ ದಿಟ್ಟತನ, ‘ಉಲ್ಲಂಘನೆʼಯ ಅಂಬಕ್ಕೆಯ ಗತ್ತು- ಗಾಂಭೀರ್ಯ, ಕಾಣೆಯಾದ ವಲ್ಲಭಾಚಾರ್ಯರ ಮೂಲಗ್ರಂಥ ಎಲ್ಲವೂ ಇಲ್ಲೇ ಎಲ್ಲಾದರೂ ಇರಬಹುದೇ ಎಂದು ಹುಡುಕಾಡುತ್ತಿದ್ದಂತೆಯೇ ರಿಕ್ಷಾ ಡಾ|ಮೊಗಸಾಲೆಯವರ ಮನೆಯೆದುರನ್ನು ತಲುಪಿತ್ತು. ಜಿಜ್ಞಾಸುವಾಗಿ ಕಾಂತಾವರದ ‘ಮೊಗಸಾಲೆ’ ಮನೆಯೊಳಗನ್ನು ಹೊಕ್ಕ ನನಗೆ ಮೊದಲು ಕಂಡದ್ದು ಡಾ|ನಾ. ಮೊಗಸಾಲೆಯವರು. ‘ಬಯಲ ಬೆಟ್ಟʼದಂತೆ ಕುಳಿತಿದ್ದರು. ಮುಖದ ಮೇಲೆ ನಿಷ್ಕಲ್ಮಶ, ಅಂತಃಕರಣ ಭರಿತವಾದ ಆತ್ಮೀಯ ನಗು. ಮುಂದಿನ ಸುಮಾರು ಮೂರು ಗಂಟೆಗಳ ಕಾಲ ಸ್ವಗತದಂತಹ ಸಂವಾದವೊಂದು  ಸಾಕಾರಗೊಳ್ಳುವಂತಾಯಿತು.

ನಿಮ್ಮ ಸಾಹಿತ್ಯದಲ್ಲಿ ಅನುಭವ ನಿಷ್ಠತೆಯನ್ನು ಕಾಣುವುದಕ್ಕೆ  ಸಾಧ್ಯವಿದೆಯೇ?

ಖಂಡಿತವಾಗಿಯೂ. ನೈಜವಾಗಿ ನಡೆದ ಘಟನೆಗಳನ್ನೇ ಸಾಹಿತ್ಯ ರೂಪದಲ್ಲಿ ಪ್ರಸ್ತುತಪಡಿಸಿದ್ದೇನೆ. ಹಾಗೆಂದು ನಡೆದ ಘಟನೆಗಳನ್ನು ನಡೆದ ರೀತಿಯಲ್ಲಿಯೇ ನಿರೂಪಿಸಿದರೆ ವರದಿ ಎನಿಸಿಕೊಳ್ಳುತ್ತದೆ. ಅದರಲ್ಲಿ ಒಂದಿಷ್ಟು ಕಾಲ್ಪನಿಕತೆ, ಕಾವ್ಯಾತ್ಮಕತೆಗಳು ಸೇರಿಕೊಂಡಾಗ ಸಾಹಿತ್ಯದ ರೂಪವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ. ದೊರೆತ ಸಣ್ಣ ಸುಳುಹನ್ನು ಎದುರಿಗಿರಿಸಿಕೊಂಡು, ಅದನ್ನು ಅಪರಿಮಿತವಾಗಿ ವಿಸ್ತರಿಸುವುದು ಸಾಹಿತ್ಯಕವಾಗಿ ನನಗೆ ದೊರೆತಿರುವ ಶಕ್ತಿ. ಇದನ್ನೇ ಬಹುತೇಕ ಸಂದರ್ಭಗಳಲ್ಲಿ ಅಳವಡಿಸಿಕೊಂಡಿದ್ದೇನೆ.

ವಾಚಾಳಿತನ ನನ್ನ ಸಹಜಗುಣ. ಇದನ್ನೇ ನನ್ನ ಸಾಹಿತ್ಯ ರಚನೆಗಳಲ್ಲೂ ನೀವು ಗುರುತಿಸುವುದಕ್ಕೆ ಸಾಧ್ಯವಿದೆ. ನನ್ನ ಕೆಲವು ಸಣ್ಣಕಥೆಗಳಲ್ಲಿ ಮಾತೇಕಥೆಯಾಗಿ ಬದಲಾಗುತ್ತದೆ. ನನ್ನ ಸಾಹಿತ್ಯ ರಚನೆಯಲ್ಲಿ, ಅದರಲ್ಲೂ ವಿಶೇಷವಾಗಿ ಸಣ್ಣಕಥೆ, ಕಾದಂಬರಿಗಳಲ್ಲಿ ಅನುಭವ ನಿಷ್ಠತೆಯನ್ನು ನೀವು ಪ್ರಮುಖವಾಗಿ ಗುರುತಿಸಬಹುದಾಗಿದೆ.

ಬರಹಗಾರರನ್ನು ಅವರಿರುವ ಪ್ರದೇಶ ಪ್ರಭಾವಿಸುವುದು ಸಹಜ ಸಂಗತಿ. ನಿಮ್ಮ ಸಾಹಿತ್ಯದಲ್ಲಿ ಕರಾವಳಿ ಪ್ರದೇಶದ ಪಾತ್ರ ಏನು?

ಕರಾವಳಿ ಪ್ರದೇಶ ಮೊದಲಿನಿಂದಲೂ ನನ್ನನ್ನು ಪ್ರಭಾವಿಸಿದೆ. ಇಲ್ಲಿಯ ಜನ ಜೀವನ, ಜನರ ಮೂಲಭೂತ ಪ್ರವೃತ್ತಿ, ಇಲ್ಲಿ ನಡೆದಿರುವ ಸಾಮಾಜಿಕ- ಆರ್ಥಿಕ ಸ್ಥಿತ್ಯಂತರಗಳನ್ನು ಬಹಳ ಹತ್ತಿರದಿಂದ ಗಮನಿಸಿಕೊಂಡಿದ್ದೇನೆ. ಇಲ್ಲಿನ ಜನರು ಒಂದು ಕಾಲಘಟ್ಟಕ್ಕೆ ಎದುರಿಸುತ್ತಿದ್ದ ವಿವಿಧ ಸಾಮಾಜಿಕ ಸಮಸ್ಯೆಗಳು ನನ್ನನ್ನು ಬಹುವಾಗಿ ಕಾಡಿವೆ. ಈ ಕಾರಣದಿಂದಲೇ ತಾರುಣ್ಯದ ಹಂತದಲ್ಲಿ ವಯೋಮಾನದ ಸಹಜ ಆಸಕ್ತಿಗೂ ಮೀರಿದ ಚಿಂತನೆಯನ್ನು ಒಳಗೊಂಡ ‘ಮಣ್ಣಿನ ಮಕ್ಕಳು’ ಕಾದಂಬರಿ ಬರೆಯುವುದಕ್ಕೆ ಸಾಧ್ಯವಾಗಿದೆ.

ಶ್ರಮಿಕ ವರ್ಗದ ಜನರು ಎದುರಿಸುವ ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳು ಆ ಕಾದಂಬರಿಯ ಕೇಂದ್ರ ಸ್ಥಾನದಲ್ಲಿವೆ. ನನ್ನ ಸಾಹಿತ್ಯದ ಮೂಲಕ ಅಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಪ್ರಯತ್ನ ನಡೆಸಿದ್ದೇನೆ. ಇಲ್ಲಿ ನಡೆದ ಕಮ್ಯೂನಿಷ್ಟ್ ಚಳುವಳಿಗಳು, ಭೂಮಸೂದೆ ಜಾರಿ- ಹೀಗೆ ಹಲವು ಸಂಗತಿಗಳ ಕುರಿತು ಭಿನ್ನ ಆಯಾಮಗಳಲ್ಲಿ ಗಮನಹರಿಸಿದ್ದೇನೆ.

ನೀವು ಹೀಗೆ ಒಡಮೂಡಿಸಿರುವ ಪ್ರಾದೇಶಿಕ ವಿಚಾರಗಳನ್ನು ಸಾರ್ವತ್ರಿಕಗೊಳಿಸುವುದಕ್ಕೆ ಸಾಧ್ಯವಿದೆಯೇ?

ನನ್ನ ಸಾಹಿತ್ಯದಲ್ಲಿ ಬರುವ ಪ್ರಾದೇಶಿಕ ವಿಚಾರಗಳನ್ನು ಈ ದೇಶದ ಯಾವುದೇ ಪ್ರದೇಶಕ್ಕೂ ಅನ್ವಯಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ವ್ಯಕ್ತಿಯೊಬ್ಬನ ಹೆಸರು ಬದಲಾವಣೆ ಮಾಡಿ ಕರೆದ ತಕ್ಷಣ ಆತನ ಸ್ವಭಾವ, ಅಂತಃಸ್ಸತ್ವ ಬದಲಾಗಲು ಸಾಧ್ಯವಿಲ್ಲ. ಹಾಗೆಯೇ ನನ್ನ ಬಹುತೇಕ ಸಾಹಿತ್ಯ ರಚನೆಗಳಲ್ಲಿ ‘ಸೀತಾಪುರ’ ಎನ್ನುವ ಕಾಲ್ಪನಿಕ ಪ್ರದೇಶವನ್ನು ತಂದಿದ್ದೇನೆ. ಈ ಪ್ರದೇಶ, ಪ್ರದೇಶದ ಹೆಸರು ಸಾಂಕೇತಿಕ ಮಾತ್ರ.ಈ ಪ್ರದೇಶದ ಮೂಲಕ ನೀಡಲಾಗಿರುವ ಚಿತ್ರಣ ಹೆಚ್ಚು ವಾಸ್ತವಿಕವಾದದ್ದು. ಈ ವಿಚಾರಗಳನ್ನು ಸಾರ್ವತ್ರಿಕಗೊಳಿಸುವುದಕ್ಕೆ ಸಾಧ್ಯವಿದೆ.

ನನ್ನ ಸಾಹಿತ್ಯದಲ್ಲಿರುವ ಪ್ರಾದೇಶಿಕ ವಿಚಾರಗಳನ್ನು ಕೆಲವಾರು ಭೌಗೋಳಿಕ ವ್ಯತ್ಯಾಸಗಳ ಹೊರತಾಗಿ ಗಮನಿಸಕೊಳ್ಳಬೇಕಾದದ್ದು ಬಹುಮುಖ್ಯವಾದ ಅಂಶ. ಬಹುತೇಕ ಸಾಹಿತ್ಯ ಸಂದರ್ಭಗಳಲ್ಲಿ ಕಾಲ್ಪನಿಕ ಪ್ರದೇಶವನ್ನು ಆಧಾರವಾಗಿರಿಸಿಕೊಂಡಿದ್ದೇನೆ. ಆದರೆ ನನ್ನಚಿಂತನೆ- ಆಲೋಚನೆಗಳು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರವೇ ಸೀಮಿತಗೊಂಡಿಲ್ಲ. ಪ್ರದೇಶದ ನಿರ್ಬಂಧವನ್ನು ಮೀರಿ ಸಾರ್ವತ್ರಿಕವಾಗಿ ಚಿಂತಿಸುವ, ಚಿತ್ರಿಸುವ ಉದ್ದೇಶ ನನ್ನ ಸಾಹಿತ್ಯದಲ್ಲಿದೆ.

ನಿಮ್ಮ ‘ಪಲ್ಲಟ’ ಕಾದಂಬರಿಯಲ್ಲಿ ಜಮೀನ್ದಾರಿಕೆ ವ್ಯವಸ್ಥೆಯೊಳಗಿನ ಒಳ್ಳೆಯತನವನ್ನು ಗುರುತಿಸಿದ್ದೀರಿ. ವಾಸ್ತವತೆಯ ನೆಲೆಯಲ್ಲಿ ಇದನ್ನು ಗಮನಿಸಿಕೊಳ್ಳುವುದಕ್ಕೆ ಸಾಧ್ಯವಿದೆಯೇ?

ಕನ್ನಡ ಸಾಹಿತ್ಯ ಪಂಥಗಳು ಭಿನ್ನ ದೃಷ್ಟಿಕೋನಗಳಲ್ಲಿ ಸಮಾಜವನ್ನು ಗ್ರಹಿಸಿಕೊಂಡಿವೆ. ನವೋದಯ ಸಂದರ್ಭದಲ್ಲಿಕಪ್ಪು- ಬಿಳುಪು ಪಾತ್ರ ಚಿತ್ರಣವನ್ನು ಕಾಣಬಹುದು. ನವ್ಯ ಅದರಿಂದ ಬಿಡುಗಡೆ ಹೊಂದಿತು. ಅಂದರೆ ಒಬ್ಬ ವ್ಯಕ್ತಿಯ ಜಾತಿ, ಸಮುದಾಯಯಾವುದೂ ಮುಖ್ಯವಾಗಲಿಲ್ಲ. ನಾನು ನನ್ನ ಕಾದಂಬರಿಯಲ್ಲಿ ಕಪ್ಪು- ಬಿಳುಪು ಚಿತ್ರಣವನ್ನು ಮೀರಿದ ಹಲವು ವಿಚಾರಗಳನ್ನು ತಂದಿದ್ದೇನೆ. ಒಬ್ಬ ವ್ಯಕ್ತಿ, ವರ್ಗ, ಸಮುದಾಯವನ್ನು ಒಂದೇ ನೆಲೆಯಲ್ಲಿ ಗ್ರಹಿಸಿಕೊಳ್ಳುವ ಬಗೆ ನನ್ನದಲ್ಲ. ಜಮೀನ್ದಾರಿಕೆಯೊಳಗಿನ ಒಳ್ಳೆಯತನವನ್ನು ತಂದಿರುವುದಕ್ಕೆ ನಾನು ಕಂಡ ಘಟನೆಗಳು ಕಾರಣ. ಭೂಮಸೂದೆ ಜಾರಿಯಾದಾಗ ತಾವಾಗಿಯೇ ಭೂಮಿಯನ್ನು ಒಕ್ಕಲಿನವರಿಗೆ ಬಿಟ್ಟುಕೊಟ್ಟ ಜಮೀನ್ದಾರರನ್ನೂ ಕಂಡಿದ್ದೇನೆ.

ಪ್ರಾಣ ಹೋದರೂ ಜಮೀನು ಬಿಟ್ಟುಕೊಡುವುದಿಲ್ಲ ಎಂದು ಹಠ ಹಿಡಿದು ಒಕ್ಕಲಿನವರನ್ನು ಇನ್ನಿಲ್ಲದ ಹಾಗೆ ಶೋಷಿಸಿದವರೂ ಇದ್ದಾರೆ. ಆದ್ದರಿಂದ ವ್ಯಕ್ತಿಗಳಿಗೆ ಅವರು ಪ್ರತಿನಿಧಿಸುವ ವರ್ಗ, ಸಮುದಾಯಗಳ ಆಧಾರದಲ್ಲಿ ಗುಣಗಳನ್ನು ಆರೋಪಿಸಲು ಸಾಧ್ಯವಿಲ್ಲ. ಪಾಳೇಗಾರಿಕೆ ಕುಟುಂಬದಿಂದ ಬಂದು ಅದ್ಭುತ ಜೀವನ ಪ್ರೀತಿಯನ್ನು ಇರಿಸಿಕೊಂಡವರನ್ನು ನೋಡಿದ್ದೇನೆ. ಈ ಪ್ರಭಾವದಿಂದಲೇ ‘ಪಲ್ಲಟ’ ಕಾದಂಬರಿಯಲ್ಲಿ ರಂಗಪ್ಪ ಶೆಟ್ಟಿಎನ್ನುವ ಜಮೀನ್ದಾರರ ಪಾತ್ರವನ್ನು ಒಳ್ಳೆಯತನಕ್ಕೆ ಸಂಕೇತವೆಂಬಂತೆ ಸಕಾರಾತ್ಮಕವಾಗಿ ಚಿತ್ರಿಸಿದ್ದೇನೆ. ನಾನು ಗಮನಿಸಿಕೊಂಡ ಜಮೀನ್ದಾರರೊಬ್ಬರ ನೈಜ ವ್ಯಕ್ತಿತ್ವವನ್ನೇ ಆ ಪಾತ್ರದ ಮೂಲಕ ಅಭಿವ್ಯಕ್ತಿಸಿದ್ದೇನೆ.

ಸಾಹಿತ್ಯ ವಲಯ ಮೊದಲಿನಿಂದಲೂ ದೇವರನ್ನು ಭಿನ್ನ ಭಿನ್ನ ನೆಲೆಗಳಲ್ಲಿ ಗ್ರಹಿಸಿಕೊಂಡಿದೆ. ನಿಮ್ಮ ನಿಲುವೇನು?

ದೇವರನ್ನು ನಂಬುವುದು ಬಿಡುವುದು ಅವರವರ ಖಾಸಗಿತನಕ್ಕೆ ಸಂಬಂಧಿಸಿದ ವಿಚಾರ. ದೇವರನ್ನು ನಂಬುವುದರಿಂದಾಗಲಿ, ನಂಬದೇ ಇರುವುದರಿಂದಾಗಲಿ ಸಮಾಜಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ; ತೊಂದರೆಯಾಗಬಾರದು. ದೇವಸ್ಥಾನಕ್ಕೆ ಕೆಲವು ಜಾತಿಯ ಜನರಿಗೆ ಪ್ರವೇಶ ಇಲ್ಲದೇ ಇರುವ ರೀತಿಯ ವ್ಯವಸ್ಥೆಯನ್ನು ನಾನು ವಿರೋಧಿಸಿದ್ದೇನೆ. ಆಶ್ಚರ್ಯಕರ ಸಂಗತಿಯೆಂದರೆ, ಇಂತಹ ಜಾತಿಯ ಜನರೂ ಕೂಡ ತಾವು ದೇಗುಲ ಪ್ರವೇಶಿಸಿದರೆ ಅಪಚಾರ ಎಸಗಿದಂತಾಗುತ್ತದೆ, ದೇವರಿಗೆ ಕೋಪ ಬರುತ್ತದೆ ಎಂಬ ತಪ್ಪು ತಿಳಿವಳಿಕೆಗೆ ಒಳಗಾಗಿದ್ದರು. ಇವರ ಈ ಮನಃಸ್ಥಿತಿಯನ್ನು ಬದಲಾಯಿಸುವುದು ನನ್ನ ಮುಂದಿದ್ದ ಸವಾಲು. ಅಂತಹ ಜನರಿಗೆ ‘ನಿಮ್ಮನ್ನು ಸೃಷ್ಟಿಸಿದ್ದೂ ದೇವರೇ; ನನ್ನನ್ನು ಸೃಷ್ಟಿಸಿದ್ದೂ ದೇವರೇ. ದೇವರಿಂದ ಒಳ್ಳೆಯದಾಗುತ್ತದೆಯೇ ಹೊರತು ಕೆಡುಕಾಗುವುದಿಲ್ಲ’ ಎಂಬ ವಿಚಾರವನ್ನು ತಿಳಿಸಿಕೊಟ್ಟು ದೇಗುಲ ಪ್ರವೇಶಿಸುವಂತೆ ಮಾಡಿದ್ದೇನೆ.

ದೇವರ ಕುರಿತ ಪರಿಕಲ್ಪನೆಯನ್ನು ತಪ್ಪಾಗಿ ವ್ಯಾಖ್ಯಾನಿಸುವ ಜನರಿಂದಾಗಿ ಧಾರ್ಮಿಕ ನಂಬಿಕೆಗಳಲ್ಲಿ ತಾರತಮ್ಯವನ್ನು ಕಾಣುವಂತಾಗಿದೆ. ಸಾಮಾಜಿಕವಾಗಿ, ಸಾಹಿತ್ಯಕವಾಗಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ‘ಶ್ರೇಷ್ಠತೆ’ಯ ಪರಿಕಲ್ಪನೆ ತಪ್ಪು. ಶ್ರೇಷ್ಠತೆಯನ್ನು ಹೊಂದುವುದರಲ್ಲಿ ತಪ್ಪಿಲ್ಲ. ಆದರೆ ‘ನಾನು ಶ್ರೇಷ್ಠ’ ಎಂದು ಅಂದುಕೊಂಡು ಉಳಿದವರನ್ನು ಕೀಳಂದಾಜಿಸುವ, ಶೋಷಿಸುವ ಪ್ರವೃತ್ತಿ ಸರಿಯಲ್ಲ. ನಮ್ಮ ಶ್ರೇಷ್ಠತೆ ಇನ್ನೊಬ್ಬರಿಗೆ ಕೆಡುಕಾಗದಂತೆ ಬದುಕುವುದು ತುಂಬಾ ಮುಖ್ಯ. ದೇವರ ವಿಚಾರದಲ್ಲಿಯೂ ಅಷ್ಟೇ. ದೇವರು ಶ್ರೇಷ್ಠ ಎನ್ನುವುದರಲ್ಲಿಯೇನೂ ಸಮಸ್ಯೆಯಿಲ್ಲ. ಆದರೆ ಆ ಶ್ರೇಷ್ಠತೆ ಒಬ್ಬ ಸಾಮಾನ್ಯನ ಬದುಕನ್ನುಅವನತಿಗೆ ಕೊಂಡೊಯ್ಯುವಂತಾಗ ಬಾರದು.ಇದು ನನ್ನ ನಿಲುವು.

‘ನೆಲಮುಗಿಲುಗಳ ಮಧ್ಯೆ’ ಕಾದಂಬರಿಯಲ್ಲಿ ಆಂಶಿಕವಾಗಿ, ‘ಪಂಥ’ ಕಾದಂಬರಿಯಲ್ಲಿ ಪ್ರಧಾನ ನೆಲೆಯಲ್ಲಿ ಮತಾಂತರಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಚರ್ಚಿಸಿದ್ದೀರಿ.ನಿಮ್ಮ ಒಟ್ಟು ಅಭಿಪ್ರಾಯವೇನು?

ಒಂದು ಕಾದಂಬರಿಯಲ್ಲಿ ಒಂದು ಪ್ರಕ್ರಿಯೆಗೆ ಸಂಬಂಧಿಸಿದ ಸಮಗ್ರ ವಿಚಾರಗಳನ್ನು ತರಲು ಸಾಧ್ಯವಿಲ್ಲ. ಕಾದಂಬರಿಯ ಪಾತ್ರಗಳ ಮೂಲಕ ನಮ್ಮ ವಿಚಾರಗಳನ್ನು ಒತ್ತಾಯ ಪೂರ್ವಕವಾಗಿ ತರಲಾಗುವುದಿಲ್ಲ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ವ್ಯಕ್ತಿತ್ವ ಇದ್ದೇ ಇದೆ. ಆ ವ್ಯಕ್ತಿತ್ವವನ್ನು ಮೀರಿ ಪಾತ್ರ ಚಿತ್ರಣ ಮಾಡಲಾಗುವುದಿಲ್ಲ. ಹಾಗೊಂದು ವೇಳೆ ಮಾಡಿದರೆ ಕೃತಕತೆಗೆ ಎಡೆಮಾಡಿಕೊಟ್ಟಂತಾಗುತ್ತದೆ. ಮತಾಂತರದ ಬಗ್ಗೆ ನನ್ನದೇ ಆದ ಧೋರಣೆ ಇದೆ. ಮತಗಳಿಗಿಂತ ಮಾನವೀಯತೆ ಮುಖ್ಯ. ಮತಗಳ ಮೂಲಕವೇ ಮನುಷ್ಯನ ಉದ್ಧಾರವಾಗುತ್ತದೆ ಎನ್ನುವುದು ಎಷ್ಟು ಮಾತ್ರಕ್ಕೂ ನಿಜವಲ್ಲ. ಹಾಗೆಂದು ಧರ್ಮ ಕೆಟ್ಟದ್ದಲ್ಲ. ಆದರೆ ಬಹುತೇಕರು ಧರ್ಮವನ್ನು ತಿಳಿದು ಕೊಂಡಿದ್ದೇವೆ, ಅರಿತುಕೊಂಡಿಲ್ಲ.

ಅಂದರೆ, ದೇವರನ್ನು ಪೂಜಿಸುವುದು, ದೇವರಿಗೆ ಹರಕೆ ಹೇಳುವುದು, ದೇವರ ಹೆಸರಿನಲ್ಲಿ ಬದುಕುವುದೇ ಧರ್ಮ ಎಂದು ಅಂದುಕೊಂಡಿದ್ದೇವೆ. ಆದರೆ ದಾರ್ಶನಿಕರು ವ್ಯಾಖ್ಯಾನಿಸುವ ಧರ್ಮ ಬೇರೆ ರೀತಿಯದ್ದು. ಈ ನೆಲೆಯಲ್ಲಿ ಮತಾಂತರ ಎಂಬ ಪದ ಬಳಕೆಯೇ ತಪ್ಪು.‘ಮನಾಂತರ’ ಹೆಚ್ಚು ಸೂಕ್ತ. ಭೌತಿಕ ಸ್ವರೂಪಗಳನ್ನು ಬದಲಾಯಿಸಿದ ಮಾತ್ರಕ್ಕೆಒಬ್ಬ ವ್ಯಕ್ತಿಯ ಅಂತರಂಗವೂ ಬದಲಾಗಿದೆ ಎಂದು ಅಂದುಕೊಳ್ಳುವುದು ಮೂರ್ಖತನ ವಾಗುತ್ತದೆ. ಮತಾಂತರ ಎನ್ನುವುದು ಯಕ್ಷಗಾನದಲ್ಲಿ ವೇಷ ತೊಟ್ಟ ಹಾಗೆ. ಇಂದು ರಾವಣನ ವೇಷ ಹಾಕಿಕೊಂಡವ ನಾಳೆ ರಾಮನಾಗಬಹುದು. ಆದರೆ ಆತನ ಮೂಲ ಸ್ವಭಾವ ಬದಲಾಗುವುದಿಲ್ಲ. ಆದ್ದರಿಂದ ಧರ್ಮದ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮತಾಂತರವನ್ನು ಕೈಗೊಳ್ಳುವುದು ಮೂರ್ಖತನದ ಪರಮಾವಧಿಯಾಗಿದೆ. ಮತಗಳ  ಕಟ್ಟುಪಾಡುಗಳನ್ನು ಮೀರಿದ ಮನುಷ್ಯರಾಗುವುದು ಹೆಚ್ಚು ಮುಖ್ಯ.

ನಿಮ್ಮ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯನ್ನು ಅಂತಃಕರಣ, ಸಮಾನತೆ ಹಾಗೂ ಬಂಡಾಯ- ಹೀಗೆ ಮೂರು ಆಯಾಮಗಳಲ್ಲಿ ವ್ಯಕ್ತಪಡಿಸಿದ್ದೀರಿ.ಇದಕ್ಕೆ ಪ್ರೇರಣೆಗಳೇನು?

ಒಬ್ಬಳು ಹೆಣ್ಣಿನ ಪಾವಿತ್ರ್ಯೆತೆ ಅಥವಾ ಶೀಲವನ್ನು ದೈಹಿಕ ನೆಲೆಯಲ್ಲಿ ಗುರುತಿಸುವುದಕ್ಕಿಂತ ದೊಡ್ಡ ಕ್ರೌರ್ಯ ಇನ್ನೊಂದಿಲ್ಲ. ಶೀಲ ಎನ್ನುವುದು ಮನಸ್ಸಿಗೆ ಸಂಬಂಧಪಟ್ಟಿದೆ. ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣು ಅನುಭವಿಸುವ ಮಾನಸಿಕ ಯಾತನೆ ಹೆಚ್ಚು ಆರ್ದ್ರವಾದದ್ದು. ಈ ನೆಲೆಯಚಿಂತನೆ ನನ್ನನ್ನು ಸ್ತ್ರೀಸಂವೇದನೆಯ ಬರವಣಿಗೆಗೆ ಪ್ರೇರೇಪಿಸಿದೆ.  ಬಂಡಾಯ ಮನೋಧರ್ಮವನ್ನು ಹೊಂದಿದ್ದ ಹಲವು ಹೆಣ್ಣುಮಕ್ಕಳನ್ನು ನನ್ನ ಬಾಲ್ಯ ಕಾಲದಿಂದಲೂ ಗಮನಿಸಿಕೊಂಡು ಬಂದಿದ್ದೇನೆ. ಆದರೆ ನಾನು ಗಮನಿಸಿಕೊಂಡ ಈ ಸ್ತ್ರೀಯರಿಗೆ ಪುರುಷ ಪ್ರಧಾನ ವ್ಯವಸ್ಥೆಯನ್ನು ಬದಲಾಯಿಸಬೇಕೆಂಬ ಪರಿಕಲ್ಪನೆಯೇನೂ ಇರಲಿಲ್ಲ.

ತಮ್ಮ ಅಸ್ಮಿತೆಗಾಗಿ, ಸ್ವಾಭಿಮಾನಕ್ಕಾಗಿ, ಸಂದರ್ಭದಒತ್ತಡದಿಂದ ಹೊರಬರುವುದಕ್ಕಾಗಿ ಬಂಡಾಯವೇಳುತ್ತಿದ್ದರು. ನನ್ನ ಸಾಹಿತ್ಯದಲ್ಲಿ ಇದೇ ಮಾದರಿಯ ಸ್ತ್ರೀಬಂಡಾಯ ವ್ಯಕ್ತಗೊಂಡಿದೆ. ಸ್ತ್ರೀಯರ ಕುರಿತಾದ ನನ್ನ ಕಾಳಜಿ, ಪ್ರೀತಿಗೆ ಕಾರಣ ನನ್ನ ಪುಟ್ಟತ್ತೆ. ಗಂಡನಿಂದ ಪರಿತ್ಯಕ್ತೆಯಾಗಿ ವಿಧವೆಯ ಹಾಗಿದ್ದರೂ ಕೂಡಾ ಅಂದಿನ ಕಾಲಘಟ್ಟದ ನಿರ್ಬಂಧಗಳನ್ನು ಮೀರಿ ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕನ್ನು ನಡೆಸಿದ್ದಾರೆ. ನನ್ನ ಬದುಕು, ವ್ಯಕ್ತಿತ್ವ ರೂಪುಗೊಳ್ಳುವಿಕೆಯಲ್ಲಿಯೂ ಅವರ ಪಾತ್ರ ಇದೆ. ಹೀಗೆ ನನ್ನ ಸುತ್ತಮುತ್ತ ಇದ್ದ ಅನೇಕ ಮಹಿಳೆಯರು ಅವರ ದಿಟ್ಟತನ, ಸಮಾನತೆಯನ್ನು ಆಧರಿಸಿಕೊಂಡ ಬದುಕು, ಶೋಷಣೆಯನ್ನು ವಿರೋಧಿಸಿ ಯಶಸ್ವಿಯಾಗುವ ಛಾತಿಯ ಮೂಲಕ ನನ್ನನ್ನು ಪ್ರೇರೇಪಿಸಿದ್ದಾರೆ.

ಜಾಗತೀಕರಣದ ಪರಿಣಾಮಗಳನ್ನು ಅತ್ಯಂತ ಜಾಗೃತ ಮನಃಸ್ಥಿತಿಯಲ್ಲಿ ನಿಮ್ಮ ಸಾಹಿತ್ಯ ಪರಾಮರ್ಶಿಸಿದೆ. ಜಾಗತೀಕರಣದ ಕುರಿತ ನಿಮ್ಮ ಕಾಣ್ಕೆ ಏನು?

ಜಾಗತೀಕರಣದ ಕುರಿತು ಚಿಂತಿಸಬೇಕಾದದ್ದು ಇಂದಿನ ಕಾಲಘಟ್ಟದ ಅನಿವಾರ್ಯತೆ. ಕಾರಣ, ಜಾಗತೀಕರಣ ಎನ್ನುವುದು ಧನಾತ್ಮಕವೂ ಹೌದು; ಋಣಾತ್ಮಕವೂ ಹೌದು. ವಿವಿಧ ನೆಲೆಗಳಲ್ಲಿ ಪ್ರಗತಿಶೀಲತೆಗೆ ಜಾಗತೀಕರಣ ಎಡೆಮಾಡಿಕೊಟ್ಟಿದೆ. ಇದು ಧನಾತ್ಮಕವಾದದ್ದು. ಆದರೆ ಬಹುಸಂಸ್ಕೃತಿಗಳನ್ನು ನಾಶಪಡಿಸುತ್ತದೆ. ಇಂದು ಗ್ರಾಮಗಳಲ್ಲಿನ ಜನಸಂಖ್ಯೆ ಕಡಿಮೆಯಾಗುತ್ತಿದೆ. ಮನೆತನಗಳೇ ನಾಶವಾಗುತ್ತಿವೆ.

ಔದ್ಯೋಗಿಕ ವ್ಯವಸ್ಥೆಯಲ್ಲಿ ಬದಲಾವಣೆಗಳು ನಡೆಯುತ್ತಿವೆ. ಹಾಗೆಂದು ಈ ರೀತಿಯ ಸ್ಥಿತ್ಯಂತರ ಆಗದೇ ಇದ್ದರೆ ವ್ಯಕ್ತಿಯ ಬದುಕು ನಡೆಯುವುದೂ ಸಾಧ್ಯವಿಲ್ಲ ಎಂಬಂತಹ ಅನಿವಾರ್ಯತೆಯಿದೆ. ಜಾಗತೀಕರಣ ಎನ್ನುವುದು ತೀರಾ ಸಂಕೀರ್ಣವಾದದ್ದು. ಆದ್ದರಿಂದ ಜಾಗತೀಕರಣದ ದುಷ್ಪರಿಣಾಮಗಳನ್ನು ಹಂತ ಹಂತವಾಗಿ ನೀಗಿಸಿಕೊಳ್ಳಬೇಕಾಗಿದೆ.

ಕಾಂತಾವರವನ್ನು ಅಯಸ್ಕಾಂತಾವರಗೊಳಿಸುವ ನಿಟ್ಟಿನಲ್ಲಿ ಹೊಸ ಪರಿಕಲ್ಪನೆಯನ್ನು ಕಾರ್ಯಗತಗೊಳಿಸಿದ್ದೀರಿ.ಅದರ ಬಗ್ಗೆ ದಯವಿಟ್ಟು ತಿಳಿಸಿಕೊಡಿ.

‘ಸಾಂಸ್ಕೃತಿಕಗ್ರಾಮ’ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡುಕಾರ್ಯಾಚರಿಸುತ್ತಿದ್ದೇನೆ. ಕಾಂತಾವರ ಇಂದು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಅತ್ಯಂತ ಸಮರ್ಥವಾಗಿದೆ.ಇದು ಹೀಗೆಯೇ ಮುಂದುವರಿಯಬೇಕೆಂಬ ಇರಾದೆಯಿಂದ ಈ ಪರಿಕಲ್ಪನೆಯನ್ನು ಇರಿಸಿಕೊಂಡಿದ್ದೇನೆ. ೩೨ ನಿವೇಶನಗಳನ್ನು ಸಾಲಮಾಡಿ ಖರೀದಿಸಿಟ್ಟುಕೊಂಡಿದ್ದೇನೆ. ಸರಕಾರ ನಿಗದಿಪಡಿಸಿರುವಷ್ಟೇ ಮೊತ್ತಕ್ಕೆ ಸಾಹಿತಿ, ಕಲಾವಿದರಿಗೆ ಈ ನಿವೇಶನಗಳನ್ನು ನೀಡುತ್ತೇನೆ. ಲಾಭದ ಉದ್ದೇಶ ಇರಲ್ಲಿಲ್ಲ.

ಸಾಹಿತ್ಯ, ಸಂಸ್ಕೃತಿಯಲ್ಲಿ ಆಸಕ್ತಿ ಇರುವ ೩೨ ಜನರುಅದರಲ್ಲಿಯೂ ವಿಶೇಷವಾಗಿ ತರುಣರು ಈ ಗ್ರಾಮದಲ್ಲಿ ಉಳಿದುಕೊಳ್ಳುವಂತಾಗಬೇಕು ಎನ್ನುವುದು ನನ್ನಅಭಿಲಾಷೆ.ಇದುಇಡೀ ಪ್ರಪಂಚದಲ್ಲಿ ಇದುವರೆಗೂ ನಡೆಯದಿರುವ ಪ್ರಕ್ರಿಯೆಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಗ್ರಾಮಗಳನ್ನು ವೃದ್ಧಾಶ್ರಮಗಳನ್ನಾಗಿ ಪರಿವರ್ತಿಸುತ್ತಿರುವ ಜಾಗತೀಕರಣದ ವಿರುದ್ಧ ನಾನು ಕೈಗೊಳ್ಳಬಹುದಾದ ಸಣ್ಣಮಟ್ಟಿನ ಹೋರಾಟ, ಪ್ರತಿಭಟನೆಇದೆಂದು ಭಾವಿಸಿಕೊಂಡಿದ್ದೇನೆ. ಇದೇ ಮಾದರಿಯ ಹೋರಾಟ ಪ್ರತೀ ಗ್ರಾಮಗಳಲ್ಲಿಯೂ ನಡೆದಾಗ ಜಾಗತೀಕರಣದ ದುಷ್ಪರಿಣಾಮಗಳನ್ನು ಎದುರಿಸಿ ನಿಲ್ಲುವಲ್ಲಿ ಯಶಸ್ವಿಯಾಗುತ್ತೇವೆ ಎಂಬ ನಂಬಿಕೆ ನನ್ನದು.

‍ಲೇಖಕರು Avadhi

September 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: