ಮೆಹಬೂಬ್ ಮಠದ ನೋಡಿದ ನಾಟಕ..

ಮೆಹಬೂಬ್ ಮಠದ


ಯಾವುದೋ ಮಹಾನಗರವೇ ಆಗಿರಲಿ ಇಲ್ಲವೆ ನಾವ್ಯಾರೂ ಹೆಸರು ಕೂಡ ಕೇಳಿರದ ಕುಗ್ರಾಮವೇ ಆಗಿರಲಿ ಅಲ್ಲಿನ ಮೇಲ್ಜಾತಿಯ ವ್ಯಕ್ತಿಯ ಮೇಲೆ ಬೇರೆ ಸಮುದಾಯದವರು ಒಂದು ವೇಳೆ ಕೂಗಾಡಿ ಸಣ್ಣ ಹಲ್ಲೆ ಮಾಡಿದರೂ ಸಾಕು ‘ತಾಯಿ ಕರುಳಿನ’ ಹಾಗೂ ಜವಾಬ್ದಾರಿಯುತ ‘ನಾಲ್ಕು ಜನ’ ಕಣ್ಣು ಪಿಳುಕಿಸುವದರೊಳಗೆ ಅದನ್ನು ಜಗತ್ತಿನಾದ್ಯಂತ ದೊಡ್ಡ ಸುದ್ದಿ ಮಾಡುತ್ತಾರೆ ಮತ್ತು ಮಾಡಬೇಕು ಕೂಡ.

ಒಂದು ವೇಳೆ ಆ ವ್ಯಕ್ತಿ ಸತ್ತರೆ ಮುಗೀತು ಕತೆ ನಡೆದ ಭೀಕರ ಕೊಲೆಯ ಬಗ್ಗೆ ಚರ್ಚೆಗಳು ಸಮರೋಪಾದಿಯಲ್ಲಿ ನಡೆಯುತ್ತವೆ, ನ್ಯಾಯಕ್ಕಾಗಿ ಕೆಲವರು ಬೀದಿಗೂ ಇಳಿಯುತ್ತಾರೆ ಮತ್ತು ಅದರಲ್ಲಿ ಸಫಲರೂ ಆಗುತ್ತಾರೆ ಆದರೆ ಅದೇ ಬೇರೊಬ್ಬ ಮನುಷ್ಯ ಅವನಿಷ್ಟದ ಅಂಬೇಡ್ಕರ್ ರಿಂಗ್ ಟೋನ್ ಇಟ್ಟುಕೊಂಡಿದ್ದಕ್ಕೆ, ಮದುವೆಯಲ್ಲಿ ಕುದುರೆ ಏರಿದ್ದಕ್ಕೆ, ಕೂಲಿ ಕೇಳಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ, ಒಳ್ಳೆ ಬಟ್ಟೆ ಹಾಕಿದ್ದಕ್ಕೆ, ಅಂಬೇಡ್ಕರ್ ಬ್ಯಾನರ್ ಕಟ್ಟಿದ್ದಕ್ಕೆ, ಮೆರವಣಿಗೆಯಲ್ಲಿ ಕುಣಿದಿದ್ದಕ್ಕೆ, ರಸ್ತೆ ನೀರು ಮನೆ ಕೇಳಿದ್ದಕ್ಕೆ ಹೀಗೆ ಅತೀ ಕ್ಷುಲ್ಲಕ ಕಾರಣಗಳಿಗೆ ಮಟ ಮಟ ಮಧಾಹ್ನಗಳಲ್ಲಿ ಅಕ್ಷರಷಃ ಕೊಲೆಯಾಗುತ್ತಾನೆ ದುರಂತವೆಂದರೆ ಅವನ ಕೊಲೆ ದೊಡ್ಡ ಸುದ್ದಿಯಾಗುವುದಿಲ್ಲ, ಬಹಳಷ್ಟು ಜನರ ಕಣ್ಣುಗಳು ಒದ್ದೆಯಾಗುವುದಿಲ್ಲ, ಕೈ ಮತ್ತು ಬಾಯಿಗಳು ಹೇಳಿಕೆ ನೀಡುವುದಿಲ್ಲ ಏಕೆಂದರೆ ಅವ ದಲಿತ…. ಅವನ ಕೊಲೆಗೆ ನ್ಯಾಯ ಕೇಳುವವರು ಮತ್ತು ಕೊಡಿಸುವವರು ಯಾರು? ಲಕ್ಷ್ಮೀ (ಹಣ) ಎಲ್ಲರನ್ನೂ ಸಮನಾಗಿ ಕಾಣ್ತಾಳೆ ಆದರೆ ಲಕ್ಷ್ಮೀಯನ್ನೆ ಹಗಲಿರುಳು ಧ್ಯಾನಿಸುವ ನಾವು ಯಾಕೆ ಎಲ್ಲರನ್ನು ಸಮನಾಗಿ ಕಾಣಲ್ಲ? ದಲಿತರ ಜೀವಕ್ಕೆ ಬೆಲೆಯೇ ಇಲ್ಲವೇ? ದಲಿತ ಮಗು ಕಂಡರೆ ದೇವರಿಗೆ ಇಷ್ಟವಿಲ್ಲವೆ? ಯಾರೋ ಮಾಡಿದ ಅನಿಷ್ಟಗಳನ್ನು ಈಗಲೂ ಪಾಲಿಸಬೇಕೆ? ಇಂಥ ಕೆಂಡದಂತ ಪ್ರಶ್ನೆಗಳ ಮೂಲಕ ಆರಂಭವಾಗುವ ಗಂಗಮ್ಮ ನೀರನಾಗೆ ಜಡೆ ಹೆಣೀತಾವ್ಳೆ ನಾಟಕ ಒಮ್ಮೆಲೆ ನೋಡುಗರ ಎದೆಯನ್ನು ಕಲಕುತ್ತದೆ.

ಕೂಲಿಯೊಬ್ಬನ ಪುಟ್ಟ ಮಗಳು ಗುಡಿಯೊಳಗೆ ಹೋಗಿದ್ದಕ್ಕೆ ಗುಡಿ ಅಪವಿತ್ರವಾಯಿತೆಂದು ಆ ಮಹಾಪರಾಧಕ್ಕೆ ಕಾರಣಳಾದ ಮಗುವಿನ ತಂದೆಗೆ ಊರ ಶಾನುಭೋಗ, ಗೌಡ ಸೇರಿಕೊಂಡು 20,000 ದಂಡ ಹಾಕುತ್ತಾರೆ ಅವನಿಗೆ ಕೊಡಲು ಸಾಧ್ಯವಾಗದ್ದಕ್ಕೆ ಇಡೀ ಕುಟುಂಬವನ್ನೇ ಜೀತಕ್ಕೆ ಇಟ್ಟುಕೊಳ್ಳುವ ಹುನ್ನಾರ ನಡೆಸುತ್ತಾರೆ ಆಗ ಅವರ ಕೊರಳು ಬಿಗಿಯುವ ಕಾನೂನಿನ ಕೈ ಮತು ಅಂತಃಕರಣದ ಕೈಗಳು ಅವರನ್ನು ಶಿಕ್ಷಿಸುತ್ತವೆ.

ಬಾವಿಗೆ ಈಜಲು ಬರುವ ದಲಿತ ಮಕ್ಕಳನ್ನು ವಿದ್ಯುತ್ ಬೇಲಿಯಿಂದ ಅಮಾನುಷವಾಗಿ ಕೊಲ್ಲಲಾಗುತ್ತದೆ, ರಾಮಪುರ ಎಂಬ ಹಳ್ಳಿಗೆ ಬರುವ ದಲಿತ ನವವಧುವನ್ನು ಆ ಊರಿನ ದುಷ್ಟ ಮನಸ್ಥಿತಿಯ ಜನ ನೀರು ಕೊಡುವಾಗ ಹೀನವಾಗಿ ಅವಮಾನಿಸುತ್ತಾರೆ ಆಕೆ ನನ್ನನ್ನು ನನ್ನಪ್ಪ ಈ ಊರಿಗೆ ಕಳಿಸುವ ಬದಲು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗಾದರೂ ಬಿಡಬಾರದಿತ್ತೆ ಎಂದು ಹಪಹಪಿಸುತ್ತಾಳೆ.

ತಾವು ತಮ್ಮ ಕುಟುಂಬ, ತಮ್ಮ ಮನೆತನಗಳು ಸುರಕ್ಷಿತ ವಲಯದಲ್ಲಿದ್ದರೆ ಸಾಕು ಉಳಿದವರ ಗೊಡವೆ ನಮಗೇಕೆ? ಒಂದು ವೇಳೆ ಮಾತಾಡಿದರೆ ಎಲ್ಲಿ ನಮ್ಮ ಸುರಕ್ಷಿತ ವಲಯವನ್ನು ಅವರು ಧ್ವಂಸ ಮಾಡುತ್ತಾರೊ ಎಂದು ಹಗಲಿರುಳು ಯೋಚಿಸುತ್ತ ಸಹಮಾನವರ ಬದುಕು ಬೀದಿಯಲ್ಲಿ ಶವವಾಗುವುದನ್ನು ಕಾಫಿ ಹೀರುತ್ತ ತಣ್ಣಗೆ ನೋಡುವವರ ನಡುವೆ ದೇಶದಾದ್ಯಂತ ಅನುದಿನವೂ ನಡೆಯುತ್ತಿರುವ ದಲಿತರ ಮೇಲಿನ ಅಸಂಖ್ಯ ದೌರ್ಜನ್ಯಗಳ ಕುರಿತು ನಾಟಕ ತೀವ್ರವಾಗಿ ಮಾತಾಡುತ್ತದೆ.

ಒಂದು ತೋಟದಲ್ಲಿ ಹಲವಾರು ಬಗೆಯ ಹೂಗಳು ಇರುತ್ತವೆ. ಅವುಗಳ ಬಣ್ಣ ಬೇರೆ, ಆಕಾರ ಬೇರೆ, ಗಾತ್ರ ಬೇರೆ, ಪರಿಮಳ ಬೇರೆ ಆದರೆ ಎಲ್ಲಾ ಹೂಗಳು ತಮ್ಮ ವಿಶಿಷ್ಟ ಮಕರಂದದ ಮೂಲಕ ಇನ್ನೊಂದು ಜೀವಿಗೆ ಊಟ ನೀಡುತ್ತವೆ ಅದರಂತೆ ಈ ನೆಲದಲ್ಲಿ ಹಲವು ಜಾತಿಮತಗಳಿವೆ ಅವುಗಳು ಪರಸ್ಪರರಿಗೆ ಮಾನವೀಯತೆ ಎಂಬ ಮಕರಂದವನ್ನು ಹಂಚುವ ಮೂಲಕ ಮನುಷ್ಯರನ್ನು ಬಣ್ಣ, ಭಾಷೆ, ಬಟ್ಟೆ, ಆಕಾರ, ಆಹಾರದ ಆಧಾರದಲ್ಲಿ ಶ್ರೇಷ್ಠ ಕನಿಷ್ಠವೆಂದು ನೋಡದೆ ಎಲ್ಲರೂ ಒಂದೇ ಎನ್ನುವ ಬುದ್ಧನ ಪ್ರೇಮದ ಕಣ್ಣುಗಳಿಂದ ನೋಡಬೇಕೆಂಬ ಜೀವಕಾರುಣ್ಯದ ಪಾಠವನ್ನು ಅರಿವಿಗೆ ಬಾರದಂತೆ ಕಲಿಸುವುದರಲ್ಲಿ ನಾಟಕ ಯಶಸ್ವಿಯಾಗಿದೆ.

ವೇದಿಕೆ ಮೇಲೆ ಕುಳಿತವರು ಕೆಲವರಿಗೆ ಮಾತ್ರ ಹಾಡು ಹಾಡಲು ಅವಕಾಶ ನೀಡುತ್ತಾರೆ ಹಾಗೆ ಹಾಡಲು ಬರುವವರೂ ಕೂಡ ವೇದಿಕೆ ಮೇಲೆ ಕುಳಿತಿರುವ ಗಣ್ಯರಿಗೆ ಇಷ್ಟವಾದ ಮತ್ತು ಅವರು ಹೇಳುವ ಹಾಡನ್ನೇ ಹಾಡಬೇಕು ಎನ್ನುವ ಸಂದರ್ಭದಲ್ಲಿ ಎಲ್ಲರೂ ತಮಗಿಷ್ಟ ಬಂದ ಹಾಡನ್ನು ಹಾಡುತ್ತ ಇತರರ ಹಾಡಿಗೆ ಹೆಜ್ಜೆ ಹಾಕುತ್ತ ಇದ್ದರೆ ಎಲ್ಲರ ಬದುಕು ಹಸನಾಗುತ್ತದೆ ಎನ್ನುವ ಬಹು ದೊಡ್ಡ ಫಿಲಾಸಫಿಯನ್ನು ಎದೆಯಿಂದ ಎದೆಗೆ ದಾಟಿಸುವ ಕೆಲಸವೂ ಇದರ ಮೂಲಕ ಆಗುತ್ತಿದೆ. ಇದರಲ್ಲಿನ ದೃಶ್ಯಗಳು ನಮ್ಮ ನೆಲದಲ್ಲಿ ನಡೆದ ನಿಜವಾದ ಘಟನೆಗಳು ಅಂತ ಗೊತ್ತಾದಾಗಲಂತು ಜನ ಮತ್ತಷ್ಟು ಮರುಗಿದರು.

ನಾಟಕದ ಕೊನೆಯಲ್ಲಿ ಸಂವಿಧಾನದ ಪ್ರಸ್ತಾವನೆ ಓದುವಾಗ ಮಕ್ಕಳನ್ನು ಸೇರಿಸಿ ನೆರೆದಿದ್ದ ಗ್ರಾಮದ ಜನರೆಲ್ಲಾ ಎದ್ದು ನಿಂತು ಓದುವ ದೃಶ್ಯ ನೋಡಿ ಸಾರ್ಥಕವೆನಿಸಿತು. ನಾಟಕ ನಡೆವಾಗ ಊರಿನ ಮುಕ್ಕಾಲು ಪಾಲು ಮಕ್ಕಳು ಸ್ಟೇಜಿನ ಎದುರಿಗೆ ಇದ್ದರು. ಮೊದ ಮೊದಲಿಗೆ ನೋವಿನ ಸನ್ನಿವೇಶಗಳು ಬಂದಾಗ ಕೂಡ ಜೋರಾಗಿ ನಗುತ್ತಿದ್ದ ಅವರು ಆಮೇಲೆ ಅದರೊಂದಿಗೆ ಪ್ರಯಾಣಿಸುತ್ತ ತಮ್ಮನ್ನು ತಾವು ಮರೆತರು ಇದಕ್ಕೆ ಪಾತ್ರಧಾರಿಗಳೆಲ್ಲರೂ ಅತ್ತ್ಯುತ್ತಮವಾದುದ್ದನ್ನೇ ಕೊಡಲು ಪ್ರಯತ್ನಿಸಿದ್ದು ಕಾರಣವಾಯಿತು.

ಆಧುನಿಕೋತ್ತರ ಹಾಗೂ ಜಾಗತೀಕರಣೋತ್ತರದ ಜೀವನಶೈಲಿಯು ನಮ್ಮನ್ನು ವಿವಿಧ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತಿದೆ ಇದ್ದವರು ಸುಲಭವಾಗಿ ಇಲ್ಲದವರು ಕಷ್ಟಪಟ್ಟು ದೇಹಕ್ಕೆ ಅಂಟುವ ಆ ಕಾಯಲೆಗಳನ್ನು ವಾಸಿಮಾಡಿಕೊಳ್ಳುತ್ತೇವೆ ಅದೇನೊ ಸರಿ ಆದರೆ ವೇಗವಾಗಿ ಹರಡಿ ಮನಸುಗಳಿಗೆ ಅಂಟಿಕೊಳ್ಳುತ್ತಿರುವ ಆತಂಕಕಾರಿ ಮತ್ತು ಅಪಾಯಕಾರಿ ಕಾಯಿಲೆಗಳನ್ನು ವಾಸಿ ಮಾಡುವುದು ಹೇಗೆ? ಈ ಮಾನಸಿಕ ಕಾಯಿಲೆಗಳು ಕುಣಿಯುತ್ತಿರುವ ರಭಸಕ್ಕೆ ಎಲ್ಲವೂ ಕುಸಿಯುವ ಕಾಲ ದೂರವಿಲ್ಲ ಎನ್ನುವ ವರ್ತಮಾನದ ಸನ್ನಿವೇಷದಲ್ಲಿ ಈ ನಾಟಕ ಸಾಂಸ್ಕೃತಿಕ ಮದ್ದಿನ ಪೊಟ್ಟಣದಂತೆ ಉತ್ತರವಾಗಿ ಎದುರು ನಿಂತಿದೆ.

ಈ ಸಾಂಸ್ಕೃತಿಕ ಮದ್ದನ್ನು ದೇಶದ ಉದ್ದಗಲಕ್ಕೂ ಹಂಚುವ ಮೂಲಕ ಮುಂದೆ ಕಾಡಬಹುದಾದ ಇದಕ್ಕಿಂತ ಗಂಭೀರ ಕಾಯಿಲೆಗಳನ್ನು ಈಗಿನಿಂದಲೆ ತಡೆಯಬೇಕಾಗಿದೆ. ಪಂಪ, ಕುವೆಂಪು, ಬುದ್ಧ, ಬಸವ, ಅಂಬೇಡ್ಕರ್ ರವರ ಸಂದೇಶಗಳನ್ನು ಸಾರುವ ಈ ನಾಟಕ ಮಕ್ಕಳಿಗೆ ಪಠ್ಯವಾದರೆ ಅವರು ಭವಿಷ್ಯದಲ್ಲಿ ಇತರರಿಗೂ ಮಾನವೀತೆಯ ಪಾಠ ಮಾಡುವ ಮೂಲಕ ಆರೋಗ್ಯಯುತ ಹಾಗು ರಚನಾತ್ಮಕ ಸಮಾಜದ ನಿರ್ಮಾಣ ಮಾಡಬಲ್ಲರು.

ನಾಡಿನ ಮಹತ್ವದ ದಲಿತ ಕವಿ, ನಾಟಕಕಾರ ಹಾಗೂ ಸಾಂಸ್ಕøತಿಕ ಚಳವಳಿಕಾರರಾದ ಕೋಟಿಗಾನಹಳ್ಳಿ ರಾಮಯ್ಯ ಮೇಷ್ಟ್ರು ಬರೆದಿರುವ ಈ ನಾಟಕವನ್ನು ರಂಗಭೂಮಿಯ ಹೆಸರಾಂತ ನಿರ್ದೇಶಕರಾದ ಸಿ. ಬಸವಲಿಂಗಯ್ಯನವರು ನಿರ್ದೇಶಿಸಿದ್ದಾರೆ. ಬುಡ್ಡಿ ದೀಪ ಕಲಾ ಶಾಲೆ ತಂಡದ ನಟನೆ ಜೊತೆಗೆ ಚೌಕಿ ಸಾಂಸ್ಕೃತಿಕ ಕೇಂದ್ರ ನಿರ್ಮಾಣದ ಹೊಣೆಯನ್ನು ಹೊತ್ತಿಕೊಂಡಿದೆ. ಈಗಾಗಲೇ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಈ ತಂಡಕ್ಕಿದೆ. ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ಬಹಳ ಶಕ್ತಿಯುತವಾಗಿ ದಾಟಿಸುವ ಈ ನಾಟಕದ ಪ್ರದರ್ಶನವನ್ನು ಆಸಕ್ತ ಸಂಗಾತಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಏರ್ಪಡಿಸುವ ಮೂಲಕ ಸಮಾನತೆಯ ಮದ್ದನ್ನು ಹಂಚಬೇಕು.

‍ಲೇಖಕರು Admin

May 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: