ನಾ ದಾ ಕಂಡಂತೆ ಮುದ್ದುಕೃಷ್ಣ…

ನಾ ದಾಮೋದರ ಶೆಟ್ಟಿ


ಎಪ್ಪತ್ತೈದು ವರ್ಷ ಎಂಬುದು ಮನುಷ್ಯ ಬದುಕಿನ ಪ್ರಮುಖ ಘಟ್ಟಗಳಲ್ಲೊಂದು. ಅರುವತ್ತನ್ನು ʻನಿವೃತ್ತಿಯ ಕಾಲʼ ಎಂದು ಸರಕಾರವೇ ಘೋಷಿಸಿ, ಪಿಂಚಣಿಯನ್ನೂ ಕೊಟ್ಟು, ಕರ್ತವ್ಯದ ಉತ್ತುಂಗದಲ್ಲಿರುವಾಗಲೇ ʻಹೋಗು, ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆʼ ಎಂದಿತ್ತು. ಇಂತಹ ಗುರುತರ ತೀರ್ಮಾನ ತೆಗೆದುಕೊಳ್ಳುವ ಮುನ್ನ ಅವರು ವೈ.ಕೆ.

ಮುದ್ದುಕೃಷ್ಣರಂಥವರನ್ನು ಕರೆದು ಸಮಾಲೋಚಿಸಬೇಕಿತ್ತು ಎಂದು ಹೇಳಬೇಕೆನಿಸುತ್ತದೆ. ನಿವೃತ್ತಿಗೆ ಮುನ್ನ ಹೇಗೆ ಅವರಿದ್ದರೋ ಅಷ್ಟೇ ಮುತುವರ್ಜಿಯನ್ನು ನಿವೃತ್ತಿಯ ಬಳಿಕವೂ ಅವರು ಕಾಯ್ದುಕೊಂಡಿದ್ದಾರೆ.

ಮುದ್ದುಕೃಷ್ಣ ಅವರು ಸರಕಾರಿ ಹುದ್ದೆಯಲ್ಲಿದ್ದಾಗ ಆಡಳಿತ ಯಂತ್ರವನ್ನು ಬಳಸಿ ಹಲವು ಅಸಾಮಾನ್ಯ ಕೆಲಸಗಳನ್ನು ಮಾಡಿದ್ದರು. ʻಅದು ಅವರ ಕರ್ತವ್ಯದ ಭಾಗ, ಮಾಡಿದ್ದಾರೆ ಅಷ್ಟೇʼ ಎನ್ನಬಹುದು. ಅಂಥಹುದೇ ಹುದ್ದೆಯಲ್ಲಿದ್ದವರು ಯಾರು ಯಾವಾಗ ಬಂದರು? ಯಾವಾಗ ಹೋದರು? ಎಂಬ ಸುಳಿವೇ ನೀಡದ ಅದೆಷ್ಟೋ ಅಧಿಕಾರಿಗಳನ್ನು ನಾವು ಕಂಡಿದ್ದೇವೆ. ಅಧಿಕಾರವೆಂಬುದು ಅವಕಾಶ. ಅದನ್ನು ಹೇಗೆ ಉಪಯೋಗಿಸುತ್ತೀರಿ ಎಂಬುದು ಅವರವರ ಯೋಗ್ಯತೆಗೆ, ಪ್ರತಿಭೆಗೆ, ಕ್ರಿಯಾಶೀಲತೆಗೆ ಮತ್ತು ಕರ್ತವ್ಯ ಪರಿಪಾಲನಾ ಕಸುವಿಗೆ ಬಿಟ್ಟ ವಿಚಾರ. ಸಂಬಳಕ್ಕಾಗಿಯಷ್ಟೇ ಉದ್ಯೋಗ ಮಾಡುವ ಅಸಂಖ್ಯಾತ ಅಧಿಕಾರಿಗಳನ್ನು ಕಂಡಾಗ ಅಸಹ್ಯವೆನಿಸುತ್ತದೆ. ಸರಕಾರಿ ಉದ್ಯೋಗವನ್ನುʻಕೈಚಾಚುವ ಕಾಯಕʼವೆಂದುಕೊಂಡ ಇಂದಿನ ಬಹುಪಾಲು ಅಧಿಕಾರಿಗಳಿಗೆ ತಾವು ಕೈಗೊಂಡ ಕೆಲಸವನ್ನು ಚಿರಸ್ಥಾಯಿಗೊಳಿಸಬೇಕೆಂಬ ಕನಿಷ್ಠ ಕುತೂಹಲ ಕೂಡ ಇರುವುದಿಲ್ಲ. ಅಂಥವರಿಗೆ ಮುದ್ದುಕೃಷ್ಣ ಅವರೊಂದು ಪಾಠ.

ಕರ್ನಾಟಕ ಸರಕಾರಕ್ಕೇ ಪ್ರತಿಷ್ಠೆಯನ್ನು ತಂದುಕೊಟ್ಟ ʻಕನ್ನಡ ಭವನʼ ವನ್ನು ರಾಜಧಾನಿಯ ಜೆ ಸಿ ರಸ್ತೆಯಲ್ಲಿ ನೆಟ್ಟು ಬೆಳೆಸುವ ಅಸಮ ಸಾಹಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಮುದ್ದುಕೃಷ್ಣ ಅವರು ಮೆರೆದಾಗ, ʻಸರಕಾರಿ ಅಧಿಕಾರಿಗಳಿಗೆ ಇದು ಬೇಕಿತ್ತಾ? ಸಂಬಳಕ್ಕೆ ಎಷ್ಟು ಬೇಕಿತ್ತೋ ಅಷ್ಟು ಕೆಲಸ ಮಾಡಿ ತೆಪ್ಪಗೆ ಮನೆಗೆ ಹೋಗುವುದಲ್ಲವೆ?ʼ ಎಂದು ಯಾರಾದರೂ ಅಂದುಕೊಳ್ಳಬಹುದು. ಕೆಂಗಲ್‌ ಹನುಮಂತಯ್ಯನವರು ಸುಮ್ಮನೆ ಕೂತಿದ್ದರೆ ಹೀಗೊಂದು ವಿಧಾನ ಸೌಧ ರೂಪುಗೊಳ್ಳಬಹುದಿತ್ತೆ? ಅಂತೆಯೇ ಇದು ಕೂಡ. ಸರಕಾರದ ಒಂದೊಂದು ಹನಿ ದುಡ್ಡಿಗೆ ತನ್ನ ಒಂದೊಂದು ಹನಿ ಬೆವರನ್ನು ಮಿಳತಗೊಳಿಸಿ, ದೂರಾಲೋಚನೆಯೊಂದಿಗೆ ಕರ್ತವ್ಯ ಪರಿಪಾಲನೆ ಮಾಡಿದ್ದಕ್ಕೆ ಒಂದು ಶಾಶ್ವತ ಭವನ ಕನ್ನಡದ ಕಾಯಕಕ್ಕೆ ಒದಗಿಬಂತು.

ಮಹಾನಗರಪಾಲಿಕೆಯಲ್ಲಿ ಅಧಿಕಾರಿಯಾಗಿದ್ದಾಗ ನೂರಾರು ಉದ್ಯಾನವನಗಳ ಉದ್ದೀಪನಕ್ಕೆ ಕಾರಣಕರ್ತರಾದದ್ದು ಒಂದು ತೆರನಾದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದು ಇನ್ನೊಂದು ಮಹತ್ವದ ಬೆಳವಣಿಗೆ. ದಕ್ಷ ಅಧಿಕಾರಿ ಹೇಗಿರಬೇಕು ಎನ್ನುವುದಕ್ಕೆ ವೈಕೆ ಮುದ್ದುಕೃಷ್ಣಣ ಅವರು ಅತ್ಯುತ್ತಮ ಉದಾಹರಣೆ.

ಆಡಳಿತ ಯಂತ್ರದಿಂದ ಕಳಚಿಕೊಂಡ ಬಳಿಕವೂ ಸಾಂಸ್ಥಿಕ, ಸಂಘಟನಾತ್ಮಕ, ಸಾಮಾಜಿಕ ಕೆಲಸಗಳನ್ನು ಅದೇ ಮುತುವರ್ಜಿಯಿಂದ ಮುಂದುವರಿಸುವುದು ಮುದ್ದುಕೃಷ್ಣ ಅವರಿಗೆ ಸಾಧ್ಯವಾಯಿತು. ಅವರ ಆತ್ಮವೃತ್ತಾಂತವನ್ನು ಒಟ್ಟಾರೆಯಾಗಿ ಅವಲೋಕಿಸಿದರೆ ಅದೇ ಒಂದು ಹಾಡು. ಎಳವೆಯಿಂದ ಕಂಡುಕೊಂಡ ಹಾಡಿನ ಜಾಡು ಬದುಕಿನುದ್ದಕ್ಕೂ ಅವರ ಒಡನಾಡಿಯಾಯಿತು.

ʻಸಾರ್ವಜನಿಕರ ವೇದಿಕೆಯಲ್ಲಿ ಹಾಡುವುದು ಸರಕಾರೀ ಅಧಿಕಾರಿಗೆ ಶೋಭಿಸದುʼ ಎಂದು ಬಿಂಕತೊಟ್ಟು, ನಡುವೆ ಎಲ್ಲೋ ಅದನ್ನು ಕಿತ್ತೊಗೆಯುತ್ತಿದ್ದರೆ ಮುದ್ದುಕೃಷ್ಣರಂಥ ಮುದ್ದುಕೃಷ್ಣರು ರೂಪುಗೊಳ್ಳುತ್ತಿರಲಿಲ್ಲ.
ಅವರು ಕಟ್ಟಿದ ಸುಗಮ ಸಂಗೀತ ಪರಿಷತ್ತು ರಾಜ್ಯದ ಉದ್ದಗಲಗಳಲ್ಲಿ ಸುಮಾರು ನಲುವತ್ತು ಸಾವಿರ ಆಕಾಂಕ್ಷಿಗಳಿಗೆ ಸುಗಮ ಸಂಗೀತದ ಬಾಲಬೋಧೆಯನ್ನು ಹೇಳಿಕೊಟ್ಟಿದೆ. ಎಲ್ಲೆಲ್ಲಿ ರಾಜ್ಯಮಟ್ಟದ ಸಮ್ಮೇಳನ ನಡೆಸುತ್ತಾರೋ ಅಲ್ಲೆಲ್ಲ ಅದಕ್ಕೆ ಪೂರ್ವಭಾವಿಯಾಗಿ ಸುಗಮ ಸಂಗೀತ ಕಾರ್ಯಾಗಾರ. ಇಲ್ಲಿಯ ತನಕ ಸುಮಾರು ಹದಿನೇಳು ರಾಜ್ಯ ಸಮ್ಮೇಳನಗಳು! ದಸರಾದಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ಸುಗಮ ಸಂಗೀತಕ್ಕೆ ಆದ್ಯತೆ ಲಭಿಸುವುದ್ಕೆ ವೈಕೆ ಮುದ್ದುಕೃಷ್ಣ ಅವರೇ ಕಾರಣಕರ್ತರು. ವಿದೇಶಗಳಲ್ಲಿ ಸುಗಮ ಸಂಗೀತದ ಕಹಳೆ ಸತತವಾಗಿ ಮೊಳಗುವಲ್ಲಿ ವೈ ಕೆ ಮುದ್ದುಕೃಷ್ಣ ಹಾಗೂ ಅವರ ತಂಡದ ಪಾತ್ರ ಮಹತ್ವದ್ದಾಗಿದೆ.

ಜೂನ್‌ ೫. ೨೦೨೨. ವೈಕೆ ಮುದ್ದುಕೃಷ್ಣ ಅವರ ಬದುಕಿನಲ್ಲಿ ಮಹತ್ವದ ದಿನ. ಅಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ದಿನವಿಡೀ ಕಾರ್ಯಕ್ರಮ, ಜಾನಪದ, ಭಾವಗೀತೆಗಳ ಸಂಭ್ರಮ. ಅವರ ಆತ್ಮಕಥನ ʻಹಾಡು ಹಿಡಿದ ಜಾಡುʼ ಕೃತಿಯನ್ನು ಮಾನ್ಯ ಮುಖ್ಯಮಂತ್ರಿಯವರು ಬಿಡುಗಡೆಗೊಳಿಸುವರು. ಮಾನ್ಯ ಪ್ರತಿಪಕ್ಷ ನಾಯಕರೂ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವರು.
ಹಾಡು ಹಿಡಿದ ಜಾಡು- ಮುದ್ದುಕೃಷ್ಣ ಅವರ ಬದುಕಿನ ವೈವಿಧ್ಯಮಯ ಬದುಕನ್ನು ಕಣ್ಣಮುಂದಿರಿಸುತ್ತದೆ. ಅದರ ಜೊತೆಗೆ ಅವರ ಆತ್ಮೀಯರಲ್ಲಿ ಕೆಲವರು ಮಂಡನೆಮಾಡಿರುವ ಸಂಕ್ಷಿಪ್ತ ಅಭಿಪ್ರಾಯಗಳೂ ಸೇರಿಕೊಂಡಿವೆ. ಅಂತಹ ಸುಮಾರು ನಲುವತ್ತರಷ್ಟು ಕಿರುಬರಹಗಳನ್ನು ಪ್ರತಿ ಅಧ್ಯಾಯದ ಕೊನೆಯಲ್ಲಿ -ಸಾಧ್ಯವಾದಷ್ಟೂ ಸಂದರ್ಭೋಚಿತವಾಗಿ- ಬಳಕೆಯಾಗಿವೆ.

ಒಟ್ಟಾರೆಯಾಗಿ ʻಹಾಡು ಹಿಡಿದ ಜಾಡುʼ ಓದುಗರ ಪಾಲಿಗೆ ರೋಚಕವೆನಿಸುವುದು ಒಂದೆಡೆಯಾದರೆ ಮುದ್ದುಕೃಷ್ಣ ಅವರು ಸಾಗಿದ ಮಾರ್ಗ ಹೊಸತಲೆಮಾರಿಗೆ ಅನುಕರಣೀಯವಾಗುವುದು ಇನ್ನೊಂದೆಡೆ.

ವೈ ಕೆ ಮುದ್ದುಕೃಷ್ಣ ಅವರನ್ನು ಕುರಿತಂತೆ ಇದೊಂದು ಚರಿತ್ರಾರ್ಹ ದಾಖಲಾತಿಯೆಂಬುದು ನನ್ನ ಭಾವನೆ. ಸಾರ್ವಜನಿಕ ಸೊತ್ತಾಗಿದ್ದ ಮುದ್ದುಕೃಷ್ಣ ಅವರು ಸಂಸಾರಕ್ಕೂ ಅಷ್ಟೇ ಪ್ರಾಮುಖ್ಯ ನೀಡಿದವರು. ಆದರೆ ಸಾರ್ವಜನಿಕಕ್ಕಿರುವ ತಾಕತ್ತು ಬೃಹತ್ತಾದಾಗಲಷ್ಟೇ ದಾಖಲಾತಿಗೆ ಮಹತ್ತು ಒದಗುವುದು.

ಆ ದೃಷ್ಟಿಯಲ್ಲಿ ಮುದ್ದುಕೃಷ್ಣ ಅವರ ಬದುಕು ಸಾರ್ವಜನಿಕ ಕ್ಷೇತ್ರದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಬೇಕಾದ ಅನಿವಾರ್ಯತೆಯಿದೆ. ಮುಂದಿನ ಪೀಳಿಗೆ ಅರಿತು, ಅನುಭವಿಸಿ, ವರ್ತಿಸಬೇಕಾದ ಅನೇಕ ವಿಷಯಗಳನ್ನು ʻಹಾಡು ಹಿಡಿದ ಜಾಡುʼ ಹೊಂದಿದೆ.

‍ಲೇಖಕರು Admin

May 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಮುದ್ದುಕೃಷ್ಣ ಹಾಗೂ ಅವರ ಹಾಡು ಹಿಡಿದ ಜಾಡು ಬಗ್ಗೆ ನಿಮ್ಮ ಮೆಚ್ಚುನುಡಿಗಳು ಈ ಜಾಡನ್ನರಿವ ಕುತೂಹಲ ಮೂಡಿಸಿವೆ. ಕಾದಿರುವೆವು, ನಾವು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: