ಸರೋಜಿನಿ ಪಡಸಲಗಿ ಅಂಕಣ- ಇನ್ನೂ ನೆತ್ತಿ ಮ್ಯಾಲಿನ ಮಾಸ ಹಾರಿಲ್ಲಾ….

‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

3

ನಮ್ಮ  ಏಕಾಗ  ಪ್ರತಿಯೊಂದು ವಿಷಯದಾಗ ಅಪಾರ  ಆಸಕ್ತಿ. ಒಂದು ಹೊಸಾದು  ಏನಾದರೂ ನೋಡಿದ್ರ ಅದನ್ನ  ಕಲೀಲಿಕ್ಕೇ  ಬೇಕು. ಇಂಥಾ ಕಲಾ  ಆಕೀ ಕಡೆ  ಇದ್ದಿದ್ದಿಲ್ಲಾ ಅಂತ ಇರಲಿಲ್ಲ. ಎಲ್ಲಾದ್ರಾಗೂ  ಉಮ್ಮೇದಿ, ಹುರುಪು. ಮೊಮ್ಮಕ್ಕಳು ಒಂದು  ಛಂದ ಬಟ್ಟೆ ತೊಟ್ಟರೆ, ಸೊಸೆ ಏನರೆ ಛಂದ ತುರುಬ ಹಾಕೋಂಡ್ರ , ಹಂಗ ಹೆರಳ ಹಾಕೊಂಡ್ರೂ  ಕೌತುಕನs ಆಕಿಗೆ. ಆಕೀ ಆ ಉಮ್ಮೇದಿ ಸಾಂಕ್ರಾಮಿಕ ಆಗೀನೋ ಅಥವಾ ಆಕೀ ಗುಣಾ ನಮ್ಮೊಳಗೂ ಇಳಿದು ಬಂದದ್ದಕ್ಕೋ ನಾವೂ ಹುರುಪಲೇ ಕುಣಿತಿದ್ವಿ.

ಒಂಚೂರು ಹೊತ್ತು ಹೊರಳಿ ಇಳೀಮುಖ ಆತಂದ್ರ, ಬುಟ್ಟಿ ತಗೊಂಡು  ತಯಾರೇ ಮೊಗ್ಗು ಹರೀಲಿಕ್ಕೆ. ನಾನಾ ನಮೂನಿ  ಮಲ್ಲಿಗೆ ಬಿಡ್ತಿದ್ವು ಮನಿ ಅಂಗಳಾ, ಹಿತ್ತಿಲ ತುಂಬ. ಆ ಮ್ಯಾಲೆ ನಮ್ಮ ಕಡಿಂದ ದೀಪ ಜ್ಯೋತಿ ನಮೋಸ್ತುತೆ ಹೇಳಿಸಿ,  ತಾನು ಹೂ  ಕಟಿಗೋತ  ನಮಗೆಲ್ಲ ಪುರೋಚಿ  ಹೇಳ್ತಿದ್ಲು , ಸಣ್ಣಾವ್ರಿದ್ದಾಗ. (ಪುರೋಚಿ ಅಂದ್ರ, ಸಣ್ಣ ಮಕ್ಕಳಿಗೆ  ಆರಂಭಿಕ ಅಭ್ಯಾಸ ನಾ ಹಿಂದೆ  ಹೇಳಿದಂತೆ. ವಾರ, ತಿಥಿ, ನಕ್ಷತ್ರ, ಹಿಂದೂ ಮಾಸಗಳು, ಇಂಗ್ಲಿಷ್ ತಿಂಗಳುಗಳು, ಮೂಲಾಕ್ಷರಗಳು, ಕೊನೆಗೆ ಒಂದ್ನಾಲ್ಕು ದೇವರ ಸ್ತೋತ್ರಗಳು ಇಷ್ಟು ಹೇಳೋದು)

ನಮ್ಮ ಏಕಾನ ಮಾಲಿನೂ ‌‌‌‌‌‌‌‌‌‌‌‌‌‌‌‌‌‌‌ನಾನಾ ನಮೂನೀ ಛಂದ ಇರೋವು. ಅದರಾಗ ಬಾಳೀ ನಾರು ಸೀಳಿ ಮೂರು  ಸೀಳು ಮಾಡಿ ಅದರಾಗ  ಮೊಗ್ಗು ಇಟ್ಟು ಹೆರಳ ಹಾಕಿಧಾಂಗ ಹೆಣೆದ ಮಾಲೆ ಭಾಳ  ಮುದ್ದ ಅನಸ್ತಿತ್ತು. ಒಂದೇ ಒಂದು  ದಿನ  ಹೂ ಮುಡಿಯದೇ  ಇದ್ದ ದಿನ ನೆನಪಿಲ್ಲ ನನಗೆ. ಶ್ರಾವಣ ಮಾಸ ಬಂತಂದ್ರ  ಮುಗೀತು; ಅಕ್ಷರಶಃ: ಕುಣೀತಿದ್ಲು  ಆಕಿ. ಕ್ಯಾದಿಗಿ  ಹೆರಳಿನ  ಸಂಭ್ರಮ ನೋಡೋ ಹಂಗಿರೋದು. ಕ್ಯಾದಿಗೆ ಬನಕ್ಕ ಹೋಗಿ ಅಲ್ಲಿಂದ ಕ್ಯಾದಿಗೆ ಹೊಡಿ  ತರೋರದೇ ಒಂದು ಸಮುದಾಯ ಇತ್ತು. ಅವರಿಗೆ ದಾಸರು ಅಂತಿದ್ರು. ಅವರಿಗಷ್ಟೇ ಜಮಾಸೋದು ಅದು. ಕ್ಯಾದಿಗೆ  ಸುವಾಸನೆಗೆ  ಹಾವು ಭಾಳ. ಆ ದಾಸರಿಗೆ ಏಕಾ  ವರವಿನೇ (ವರ್ತನೆಗೆ)  ಹೇಳಿಬಿಡೋಳು ; ಕ್ಯಾದಿಗೆ ಸುಗ್ಗಿ ಮುಗಿಯೋ ವರೆಗೆ  ದಿನ ಬಿಟ್ಟು ದಿನ ತಂದು ಕೊಡ್ತಿದ್ರು ಅವರು. ವಾರದಲ್ಲಿ ಎರಡು ಮೂರು ಸಲ ಅಂತೂ ನಕ್ಕೀನೇ ಕ್ಯಾದಿಗೆ ಹೆರಳು- ನನಗೂ, ನಮ್ಮವ್ವಗೂ. ಅದರ  ಜೋಡೀನೇ  ನಾಜೂಕಾಗಿ ಕತ್ತರಿಸಿ ಹೆಣಿದ ಕ್ಯಾದಿಗೆ ಮಾಲೆ;  ಒಂದು ರಟ್ಟು ದುಂಡಗೆ ಅಥವಾ ಅರ್ಧ ಚಂದ್ರಾಕಾರದಲ್ಲಿ ಕತ್ತರಿಸಿ ಅದರ ಮೇಲೆ ಕ್ಯಾದಿಗೆ  ಮೊಗ್ಗು ಮಾಡಿ ಇಟ್ಟು ಹೆಣೆಯುವುದು!

ಒಟ್ಟಲ್ಲಿ ದಿನಾಲೂ ಹಬ್ಬ!

ಹೀಂಗs ಒಂದು ಶ್ರಾವಣ ಮಾಸದಾಗ ಏಕಾ ನನಗ ಕ್ಯಾದಿಗೆ ಹೆರಳು ಹಾಕಲಿಕ್ಹತ್ತಿದ್ಲು. ನಾ  ಆಗ ಆರು ಅಥವಾ ಏಳನೇ ಕ್ಲಾಸ್ನಲ್ಲಿದ್ದೆ  ಅನಸ್ತದ.ನನ್ನ ತಲೀ ಒಳಗ ಮತ್ತ ಒಂದ ಪ್ರಶ್ನೆ ಎದ್ದ ನಿಂತು ಬಿಟ್ತು. ನಾ ಏಕಾಗ ಕೇಳ್ದೆ-” ಏಕಾ ನಿನ್ನ ಕೂದಲೂ ಉದ್ದ  ಇದ್ದೂ ಏನು” ಅಂದೆ. ಆಕಿ ಏನೂ ಮಾತಾಡ್ಲಿಲ್ಲ.” ನಿನಗೂ ಕ್ಯಾದಿಗಿ  ಹೆರಳು ಸೇರತಿತ್ತೇನು” ಮತ್ತ ಕೇಳ್ದೆ ನಾ.ಹೂಂ ಅಂತ  ಸಪ್ಪಗಿನ  ಧ್ವನೀಲೆ  ಅಂದ್ಲು ಆಕಿ. ” ಏಕಾ ನೀ  ಕೂದಲಾ  ಕತ್ತರಿಸ ಬಾರದಿತ್ತು” ಅಂತ  ಅಂದೆ. ಏನ  ಅಂದಾಳು ಆಕಿ? ಒಳಗಿದ್ದ  ನಮ್ಮವ್ವ ಗಡಬಡಿಸಿ  ಬಂದು ” ಎಷ್ಟ ಮಾತಾಡ್ತೀಯ ಖೋಡಿ,! ಸುಮ್ಮನ  ಹೆರಳ  ಹಾಕಿಸಿ ಕೊಂಡು  ಎದ್ದ ಹೋಗು” ಅಂತ  ಜಬರಿಸಿ ಇಷ್ಟಗಲ ಕಣ್ಣು ತೆಗೆದು ಕಣ್ಣಿಂದನs  ಬೈದ್ಲು  ನಮ್ಮವ್ವ.

 ಏಕಾ ತನ್ನ  ಗಂಟಲು  ಸರಿ ಮಾಡ್ಕೊಂಡು,”ಯಾಕ ಆಕೀನ್ನ  ಹಂಗ  ಜಬರಸ್ತಿ?  ಆ ಕೂಸು ಏನ  ಕೇಳ ಬಾರದ್ದ  ಕೇಳೇದ  ಈಗ?”  ಅಂತ  ಅಂದು ನಮ್ಮ ಅವ್ವಾನ  ಮಾರಿ  ನೋಡಿದ್ಲು. ಆಕಿ  ಮಾರಿ  ಕೆಳಗ ಹಾಕೊಂಡು  ಒಳಗ ಹೋದ್ಲು. ನಾ ಏನೋ ಅಡ್ನಾಡ  ಪ್ರಶ್ನೆ ಕೇಳೀನಿ ಅಂತ  ಕಲ್ಪನಾ ಬಂತು. ಆದ್ರ  ನನಗೇನ  ಅದರ  ತಲಿಬುಡಾ  ತಿಳಿಲಿಲ್ಲ. ನನ್ನ  ಪೆಚ್ಚ ಮಾರಿ ನೋಡಿ ಏಕಾ ಅಚ್ಛಾದ್ಲೆ ” ಅಕ್ಕವ್ವಾ ನನ್ನ  ಕೂದಲೂ  ಭಾಳ  ಉದ್ದ ಇದ್ದು, ಮೊಳಕಾಲ  ತನಕಾ ಬರೂಹಾಂಗ. ಆದರ ಏನ ಮಾಡೋದು  ಅಕ್ಕವ್ವಾ, ಆ  ಪ್ರಸಂಗನs  ಹಂಗಿತ್ತ ಬಾಳಾ”  ಅಂತ  ಉಸಿರು ಬಿಟ್ಲು. ” ಅಂಥಾದೇನ ಆತ  ಹೇಳಲಾ ಏಕಾ ” ಅಂತ  ನನ್ನ ಎದ್ದಲಗಾಟಾ! ಏಕಾ  ಹೇಳಿದ್ಲು  ಆ ಪ್ರಸಂಗದ  ಸುದ್ದಿ.

ಆ ದಿನ  ನಮ್ಮಜ್ಜ  ಕಾಲರಾ  ಬಂದು ತೀರ್ಕೊಂಡ ದಿನ, ಎಲ್ಲಾ ಸ್ವಲ್ಪ  ಅಯೋಮಯ ಸ್ಥಿತಿ ಆಗಿ ಬಿಟ್ತು. ಇಲ್ಲಿ  ಮನ್ಯಾಗ  ಯಾರೂ ಇಲ್ಲ ಏಕಾನ  ಜೋಡಿ, ಆ ಎರಡು  ಕಂದಮ್ಮಗಳ ಹೊರತು.ರಾವಸಾಹೇಬ್ರ ಅವ್ವಾ ಅಪ್ಪ ತೀರಿಕೊಂಡಿದ್ರು ಲಗೂನ. ನನಗೀಗ ಅನಸ್ತದ ಆಗ ಮನುಷ್ಯನ  ಸರಾಸರಿ  ಜೀವಮಾನನ  ಕಡಿಮೆ ಇತ್ತು. ಅದೂ ಅಲ್ಲದೇ  ಏಕಾನ  ತೌರಮನಿಗೂ  ಸುದ್ದಿ  ಮುಟ್ಟಸಲಿಕ್ಕೇ ಬೇಕಲಾ. ಅದಕೆ  ನಾನಾ ಸಾಹೇಬ್ರು ಅಲ್ಲಿದ್ದ  ಒಂದೆರಡು ಮೂರು  ಬಾಡಿಗೆ ಕಾರುಗಳಲ್ಲಿ  ಒಂದನ್ನು ಐನಾಪೂರಕ  ಕೊಟ್ಟು ಕಳಿಸಿ  ಏಕಾನ  ತೌರಿನವರನ್ನು  ಕರೆಸಿ ಕೊಂಡ್ರಂತ. ಅವರೆಲ್ಲಾ  ಬಂದ ಮೇಲೆ  ಮುಂದಿನ  ಕೆಲಸ  ಎಲ್ಲಾ ಲಗೂ ಲಗೂನ  ಮುಗಿಸಿದ್ರಂತ. ಏಕಾ ಹುಶ್  ಅಂದ್ಲಂತ. “ಹಂಗ್ಯಾಕ  ಅಂದಿ ಏಕಾ ‘ ನನ್ನ ಪ್ರಶ್ನೆ. ಆಕೆಗೆ ತನ್ನ  ಕೂದಲಾ ತಗೀಲಿಲ್ಲಾಂತ  ನಿರಾಳ  ಅನಿಸ್ತಂತ. ಆ ಮ್ಯಾಲೆ ಗೊತ್ತಾತ ಂಂಂಂ ಅಂತ ಅದು  ಹತ್ತನೇ ದಿನದ ಕರ್ಮ ಅಂಬೋದು. ನನಗ ಈಗ ಒಂದು ಎಳಿ ಸಿಕ್ಕಹಾಂಗ ಆತು ನಮ್ಮವ್ವ ಯಾಕ ಅಷ್ಟ  ಸಿಟ್ಟು ಮಾಡಿಕೊಂಡ್ಲು  ಅಂತ. ಏನೂ ಮಾತಾಡದೆ ಏಕಾನ ಮಾರಿ ನೋಡ್ದೆ.

ನಮ್ಮ ಏಕಾನ  ಅವ್ವಾ ಅಪ್ಪಗ  ದೊಡ್ಡ  ಧರ್ಮ ಸಂಕಟ; ಇಷ್ಟ ಸಣ್ಣ  ಹುಡುಗಿ  ಕೂದಲಾ  ತಗದು ಕೆಂಪ ಸೀರೆ  ಉಡಿಸಿ  ಕೂಡಸೂದ  ಹ್ಯಾಂಗ? ಹಂಗs  ಬಿಟ್ರೆ  ಮಂದಿ  ಏನಂದಾರು  ಎಂಬ ಅಂಜಿಕೆ, ಅನುಮಾನ. ನಮ್ಮ ಏಕಾಗಂತೂ ಇದು ಯಾವುದರ  ಖಬರs  ಇದ್ದಿಲ್ಲಂತ. ಆ ದಿನ  ಅಂದ್ರ  ನಮ್ಮಜ್ಜ ತೀರಿಕೊಂಡ ದಿನ  ಇಷ್ಟೆಲ್ಲಾ ಗದ್ದಲ  ನಡದಿದ್ರೂ  ಅಣ್ಣಾ ಸಾಹೇಬಗ  ಅದೆಲ್ಲಾ ಏನ  ತಿಳೀಬೇಕು ? ಎರಡು ವರ್ಷದ ಪುಟ್ಟ  ಮಗು.ತಮ್ಮಪ್ಪ  ಹಿಂಗ್ಯಾಕ  ಮಲಗ್ಯಾರ,  ಎಲ್ಲಾರೂ ಯಾಕ  ಅಳಲೀಕ್ಹತ್ಯಾರ  ಗೊತ್ತೇ ಆಗಲಿಲ್ಲ. ಮತ್ತಷ್ಟು ಗಾಬರಿ ಆತೋ ಏನೋ ಏಕಾನ  ಸೆರಗ ಹಿಡಿದು ಎಳೀಲಿಕ್ಹತ್ತಿತ್ತಂತ  ಊಟಕ್ಕ ಹಾಕ ಬಾ ಅಂತ. ಅವರದು ಮುಂಜಾನೆ ಊಟದ ಹೊತ್ತಾಗ. ಅಂದ್ರ ಆಗೆಲ್ಲ  ತಿಂಡಿ ಗದ್ದಲ ಇರಲಿಲ್ಲ. ಚಿಕ್ಕ ಮಕ್ಕಳಿಗೆ  ಒಂತುತ್ತು ಬಿಸಿ ಅನ್ನಾ ಮಾಡಿ  ಉಣಿಸಿ ಬಿಡೋದೇ ರೂಢಿ. ಸೇರಿದ  ಮಂದಿ  ಕಣ್ಣಾಗ ನೀರು. ಯಾರೋ ಎತ್ತಿಕೊಂಡು ಹೊರಗೆ  ಹೋದ್ರಂತ. ಅದನ್ನೆಲ್ಲ ಒಮ್ಮೆ ಕಲ್ಪನೆ ಮಾಡಿಕೊಂಡ್ರೆ  ಕರುಳು ಹಿಂಡುವ ಸಂಕಟ.

 ದಿನ ಕರ್ಮ  ಸುರು ಆದು. ಆದ್ರ ಇನ್ನೂ ಆ ಕೂದಲು, ಕೆಂಪು ಸೀರೆ  ಸಮಸ್ಯೆ ಬಗೀಹರದಿದ್ದಿಲ್ಲ. ನಮ್ಮ ಏಕಾನ ಅಕ್ಕ  ಭಾರೀ ಜೋರ ಇದ್ಲು. ಆಕಿ ಗಟ್ಟಿ  ಹಟಾನs  ಹಿಡದ ಬಿಟ್ಲು.

“ಯಾರ  ಅದ ಹೆಂಗ ಆಕಿ  ಕೂದಲಿಗೆ  ಕೈ ಹಚ್ತೀರಿ ನಾ  ನೋಡ್ತೀನಿ. ಇನ್ನೂ  ನೆತ್ತಿ ಮ್ಯಾಲಿನ ಮಾಸ ಹಾರಿಲ್ಲಾ; ಗಲ್ಲದಾಗಿನ  ಹಾಲ  ಆರಿಲ್ಲಾ. ಆಕೀ ತಲಿ ಕೂದಲಾ ತಗೀತೀರಿ? ಕೆಂಪ ಸೀರಿ ಉಡಿಸಿ ಕುಬಸ  ಇಲ್ಲದ  ಆ  ಹಾಲ ತುಂಬಿದೆದಿ ಪೋರಿನ್ನ ಕೂಡಸ್ತೀರಿ?  ಬುದ್ಧಿ ಅದ ಏನ ನಿಮಗ? ಅದ್ಯಾರ ಏನ ಅಂತಾರೋ ಏನು ಮಾಡ್ತಾರೋ  ನೋಡ್ತೀನಿ ಬೇಕಾದವರು ಬೇಕಾದ್ದ  ಅನಕೊಳ್ಳಿ;  ನಾ  ಮಾತ್ರ ಆಕಿನ್ನ  ಮಡಿ  ಆಗಲಿಕ್ಕೆ  ಬಿಡಾಂಗಿಲ್ಲ” ಅಂತ ನಿಂತ  ಬಿಟ್ಲು. ಆಕಿ ರೌದ್ರಾವತಾರ  ನೋಡಿ  ಎಲ್ಲಾರೂ  ಗಪ್ ಚುಪ್  ಆದ್ರಂತ. ಯಾವ  ಸದ್ದು ಗದ್ದಲ ಇಲ್ಲದ,  ಅದುಮಿಟ್ಟ, ತುಳಿದಿಟ್ಟ ಹೆಣ್ಣಿನ ಮನಸಿನ  ಸಿಡಿದೆದ್ದ  ಆಕ್ರೋಶ ಇದು ಅಂತ  ಈಗ ಅನಸ್ತದ ನನಗೆ. ಅದಕ್ಕೆ ಯಾವ ಪ್ರಚಾರವೂ ಇರಲಿಲ್ಲ, ಪ್ರಯೋಜನವೂ  ತಾತ್ಕಾಲಿಕವಾದರೂ ಹೆಣ್ಣಿನ ಮನಸಿನ ಕನ್ನಡಿ ಅದು. 

ಆ  ಹತ್ತನೇ ದಿನ ದಾಟಾಯ್ತು. ಉಳಿದೆಲ್ಲ ವಿಧಿಗಳೂ  ಮುಗಿದ್ವು. ಹದಿನೈದು ದಿನ ಕಳದು. ಅಷ್ಪ್ರಾಗ  ಮತ್ತೊಂದು  ಆಘಾತ!  ಆಷಾಢದ ಥಂಡಿ, ಮಳಿಗಾಳಿ ; ಈ ಗದ್ದಲದಾಗ  ಎಳೀಕಂದಮ್ಮನ  ಕಾಳಜಿ, ದೇಖರೇಖಿಯೊಳಗೆ  ಹೈ ಗೈ  ಆತೋ ಏನೋ; ಕೂಸಿಗೆ  ಜೋರ  ಜ್ವರ ಕೆಮ್ಮು ಬಂದು ‌‌ ಅದೂ  ತೀರಿ ಹೋಯ್ತು.. ಏಕಾನ  ಕರುಳಿಗೆ ಬೆಂಕಿ  ಇಟ್ಟು ಹೋಗೇ ಬಿಟ್ತು ಅದು. ಈಗ ಏಕಾನ  ಜೀವನದ ತುಂಬ ಬರೀ ಖಾಲಿತನ! ಆದರೆ ಆ ಎರಡು ವರ್ಷದ  ಕಂದಮ್ಮನ ಸಲುವಾಗಿ ಜೀವ ಹಿಡೀಬೇಕಿತ್ತು.  ಕಾಳಜಿ ಚಿಂತೆಗಳ  ಜೊತೇಲೇ ತಾನು, ತನ್ನ ಎರಡು ವರ್ಷದ ಮಗು ಅಣ್ಣಾ ಸಾಹೇಬನ  ಬಾಳಿಗೊಂದು ದಾರಿ ಮಾಡಿಕೋ ಬೇಕಿತ್ತು. ಹೆಂಡತಿ ಸತ್ತ  ಮರುವರ್ಷವೇ ಮದುವೆ ಆಗಿ ತನ್ನ ಜೀವನದ ಹಾದಿ ಸುಗಮ ಮಾಡ್ಕೋಳ್ಳೋ ಗಂಡಿನ್ಹಾಂಗ  ಆಗಿರಲಿಲ್ಲ ಹೆಣ್ಣಾದ ಆಕೀ ಸ್ಥಿತಿ. ವೈಧವ್ಯದ  ನೋವಿನ ಜೊತೆಗೆ ಸಮಾಜವನ್ನು ಎದುರಿಸಿ  ಸಾಗಬೇಕಾದ  ಅಗ್ನಿಪರೀಕ್ಷೆ. ಅದರ  ಜೊತೆಗೆ ನಡೀಬೇಕಿತ್ತು.  ಆಸ್ತಿಗೇನು ಕೊರತೆ ಇರಲಿಲ್ಲ. ಆದರೆ ಅದಕ್ಕೂ ವ್ಯವಸ್ಥಿತ  ಉಸ್ತುವಾರಿ ಇದ್ರನೇ  ಉತ್ಪನ್! ಕೇವಲ ಹದಿನೆಂಟು  ವರ್ಷದ  ಆ ಹುಡುಗಿಗೆ‌  ಏನೂ ತಿಳೀದ  ಪರಿಸ್ಥಿತಿ  ಅದು. ಮುಲ್ಕಿ ಆಗಿತ್ತು ಏಕಾಂದು. ಆದರೆ ಹೆಣ್ಣು ಮಕ್ಕಳಿಗೆ  ಹೊರಗಿನ ವ್ಯವಹಾರದಲ್ಲಿ  ಕೈ ಹಾಕುವಷ್ಟು ಧೈರ್ಯ, ಸ್ವಂತಿಕೆ ಇದ್ದರೂ  ಸ್ವಾತಂತ್ರ್ಯ, ಅವಕಾಶ ಎರಡೂ ಇಲ್ಲದ  ಕಾಲವದು. ಒಟ್ಟು ಕತ್ತಲಲ್ಲಿ ಕಣ್ಣು ಕಟ್ಟಿ ಬಿಟ್ಟಂಥ ಪರಿಸ್ಥಿತಿ ಸೋನವ್ವಂದು.

ಮುಂದ  ಹೆಂಗ  ಏನು ಅನ್ನೋದೊಂದು  ದೊಡ್ಡ ಪ್ರಶ್ನೆ ಆಗಿ  ಕೂತು ಬಿಡ್ತು ಈಗ.ರಾವಸಾಹೇಬ್ರು ಬಿಟ್ಟು ಹೋದ  ಆಸ್ತಿ, ಜಮೀನು ತೋಟ ಪಟ್ಟಿಗೆಲ್ಲ ಏನರೇ  ವ್ಯವಸ್ಥಾ ಮಾಡಿ  ತಮ್ಮ ಮಗಳು , ಮೊಮ್ಮಗನ್ನ  ತಮ್ಮ ಜೋಡಿ ಕರಕೊಂಡು ಹೋಗೋದೋ, ಇಲ್ಲಾ ಇಲ್ಲೇ  ಆಕಿ ಜೋಡಿ ಯಾರರೇ ಸ್ವಲ್ಪ ದಿನ ನಿಂತು ಎಲ್ಲಾ ಒಂದ ನಿಟ್ಟಿಗೆ ಹತ್ತೆಂದ್ರ  ತಾಯಿ ಮಗು ಇಲ್ಲಿರತಾರ; ತಾವು ಆಗಾಗ  ಬಂದು ಹೋಗೋದು ಅಂತ ವಿಚಾರ ನಡೀತು. ಏಕಾನ  ಅಪ್ಪಗ  ತಮ್ಮ ಬಡತನದ ಚಿಂತೆ. ಗಂಗಾಬಾಯಿ ತಾಯಿ ಕರುಳು  ಕೊರಗ್ತಿದ್ರೂ  ಏನೂ  ಹೇಳಲಾಗದ ಸ್ಥಿತಿ ಆಕೀದು. ಆಗಲೂ ಮತ್ತ  ಏಕಾನ  ಅಕ್ಕನs‌  ಮುಂದ ಬಂದು  ಮಾತಾಡಿದ್ಲು;” ಇದರಾಗ  ವಿಚಾರ ಮಾಡೂದೇನದ? ಆ ಎಳೀ  ಹುಡುಗಿ, ಆ ಎಳೇ ಕಳಲು  ; ಎರಡನ್ನ ಇಲ್ಲಿ ಬಿಟ್ಟು ಹೋಗೂ ಮಾತು ಮಾತ್ರ ಸುಳ್ಳು, ಅಸಾಧ್ಯ. ಇದ್ದದ್ದನ್ನ  ಹಂಚಿಕೊಂಡು  ತಿನೂದು. ನಾನೂ ಅಷ್ಟ ಎಡಾ ಬಲಾ  ನೋಡ್ಲಿಕ್ಕೆ  ಇದ್ದೀನಲಾ.” ಅಂತ ಹೇಳಿ ತನ್ನ ಗಂಡನ  ಮಾರಿ  ನೋಡಿದ್ಲು. ಅವರೂ ಹೌದು ಅಂತ  ತಲಿ ಆಡಿಸಿದ್ರು. ಆಕೀ ಗಂಡ  ಕನ್ನಡ ಸಾಲಿ ಮಾಸ್ತರು. ಆಕೀಗಿನ್ನೂ  ಮಕ್ಕಳಾಗಿರಲಿಲ್ಲ. ಆತು ಆಕೀ ಹೇಳಿಧಾಂಗ  ಎಲ್ಲಾ ಒಂದ  ವ್ಯವಸ್ಥಿತ  ಜೋಡಣಿ  ಮಾಡಿ  ಸೋನವ್ವನ್ನ, ಆಕೀ ಮಗನ್ನ ಕರಕೊಂಡು  ಎಲ್ಲಾರೂ ಐನಾಪೂರಕ್ಕ  ಹೋದ್ರು. ಏಕಾನ  ಅಕ್ಕ  ಒಂದ ನಾಲ್ಕ ದಿನಾ ತಂಗಿ ಜೋಡಿ ಇದ್ದು ಗಂಡನ  ಊರಿಗೆ  ಹೋದ್ಲಂತ.

 ಇಷ್ಟ  ಹೇಳಿ  ಏಕಾ  ಯಾಕೋ ಸುಮ್ಮನಾದ್ಲು. ಕ್ಯಾದಿಗಿ  ಕತ್ತರಿಸಿ  ಅದರ ಮೊಗ್ಗು ಮಾಡೂದ್ರಾಗ  ಮಗ್ನ  ಆಗಿದ್ಲು. ‘ಮತ್ತ ನೀ  ಹಿಂಗ  ಯಾವಾಗ ಆದಿ’? ಅಂತ  ನನ್ನ  ಪ್ರಶ್ನೆ.” ಅದೂ ಒಂದು ದೊಡ್ಡ ಕತೀನ  ಅಕ್ಕವ್ವಾ” ಅಂದ್ಲು ಏಕಾ.

 ಐನಾಪೂರಕ್ಕ  ಹೋದ ಮ್ಯಾಲೆ ಏಕಾನ  ಅಪ್ಪ  ಒಂದ ಸ್ವಲ್ಪ ದಿನಾ  ಆದ ಮ್ಯಾಲೆ  ಏಕಾನ  ಹತ್ರ ಹೋಗಿ  ಹೇಳಿದ್ರಂತ “ನೋಡ  ಸೋನಿ,  ನನ್ನ ಪರಿಸ್ಥಿತಿ  ನಿನಗ  ಗೊತ್ತs  ಅದ. ಆ ಒಂದ  ಹೊಟೆಲ್  ಮ್ಯಾಲನs‌ ನಮ್ಮ ಇಷ್ಟ ಮಂದಿದು  ಹೊಟ್ಟಿ  ತುಂಬ ಬೇಕು. ಹುಡಗೂರ ಸಾಲಿ ಪಾಲಿದೂ ವ್ಯವಸ್ಥಾ ಆಗಬೇಕು. ನಿನ್ನ  ಜಮೀನ ದೇಖರೇಖಿ, ಈ ಚಾದಂಗಡಿ  ಎಲ್ಲಾ ಸಂಭಾಳಸೂದ  ಆಗೂದಿಲ್ಲ ನಂಗ. ನಿಂದು ಜಮೀನು  ನೋಡ್ಕೊಂಡು  ಅದs  ಉತ್ಪನ್ನದಾಗ ನಾವೂ  ಉಣ್ತೀವೇನವಾ. ಇಲ್ಲಾ  ಜಮೀನದ  ಉಸಾಬರಿ  ಬಿಟ್ಟು  ನಾ ನನ್ನ ಹೊಟೇಲ  ನೋಡ್ಕೊಂಡ  ಮೊದಲಿನಾಂಗ‌ ಇರ್ತೀನಿ.  ಅದರಾಗs ನಿನಗೂ ನಿನ್ನ  ಮಗ್ಗೂ ಒಂದು ತುತ್ತು ಹಾಕ್ತೀನಿ”  ಅಂದ್ರು. ಏನ ಹೇಳ್ಯಾಳು ಏಕಾ? 

“ಆತಪಾ  ಅಪ್ಪಾ, ನನ್ನ ಜಮೀನs‌ ದೇಖರೇಖಿ  ಮಾಡು. ಬಂದ  ಉತ್ಪನ್ನದಾಗ  ಎಲ್ಲಾರೂ  ಉಂಡಕೊಂಡಿರೋಣಂತ” ಅಂದ್ಲು.

 ಹಿಂಗ  ಒಂದ ನಾಲ್ಕ ವರ್ಷ ನಡೀತಂತ. ಯಾಕೋ  ಏಕಾಗ  ಏನೋ ಸಂಶಯ. ಏನೋ ಭಾನಗಡಿ ನಡದದ ಅಂತ ಅನ್ನಿಸ್ತಿತ್ತು. ಅದು ಖರೇನ ಆತು. ರೊಕ್ಕ ಅನೂದು  ಭಾಳ  ಕೆಟ್ಟ. ಆ ದುರಾಗ್ರಹ ಏಕಾನ ಅಪ್ಪನ್ನೂ ಬಿಡಲಿಲ್ಲ. ಅನಾಯಾಸ  ಸಿಗೂ ರೊಕ್ಕಾ ಬಿಡೂ ಅಷ್ಟು ಸರಳತನ ಬರೂದು ಅಷ್ಟು ಸರಳ ಅಲ್ಲ. ಮಾನವ ಸಹಜ ದೌರ್ಬಲ್ಯ. ಅದು ಅಂತ:ಕರಣದ  ಗಡಿ ದಾಟಲಿಕ್ಕೂ ಅಜೀಬಾತ ಹೇಸೂದಿಲ್ಲ.  ಒಂದೊಂದೇ  ಹೊಲಾ ಮಾರಲಿಕ್ಕೆ ಶುರು ಮಾಡಿದ್ರಂತ. ಏಕಾಗ  ದಿಕ್ಕೇ ತೋಚದ್ಹಾಂಗ ಆತು. ತನ್ನ ಮಗನಿಗೆ ಪೂರಾ  ಮೋಸ ಆಗ್ತದ ಅಂತ ಅನ್ನಿಸ್ತು. ಕಡೀಕ ಒಂದಿನಾ ತಡೀಲಾರದೇ ಗೋಡೆ ಕಡೆ ಮುಖಮಾಡಿ ಮಲಗಿದಾಕಿ  ಎದ್ದ ಕೂತು, ಆಮ್ಯಾಲೆ ಎದ್ದ ನಿಂತ್ಲಂತ. ಕೂದಲಾ ತಗಿಸಿ  ಕೆಂಪು ಸೀರೆ ಉಟ್ಕೊಂಡು, ಮಡಿ ಹೆಂಗಸಾಗಿ  ಉಂಡ ಊಟಾ ಕುಡದ ನೀರು ಅಂತ ಶುರು ಮಾಡಿ  ತನ್ನ  ಜಮೀನು ಜಾಯದಾದದ್ದು  ತಾನs‌‌ ಜವಾಬ್ದಾರಿ ತಗೊಂಡು  ನಮ್ಮ ಜಮೀನುಗಳಿರುವ  ಬೆಳವಿ ನಂದಿಕುರಳಿಗೆ  ಓಡಾಡ್ಲಿಕ್ಕ ಶುರು ಮಾಡಿದ್ಲು.

ಯಾರನ್ನಾದರೂ ಜೋಡಿ ಕರಕೊಂಡು ಹೋಗ್ತಿದ್ಲು. ಒಬ್ಬಳೇ ಹೋಗಿ ಬರೂ ವಯಸ್ಸಲ್ಲ. ಮಂದೀ ಪರೀಕ್ಷಾ ದೃಷ್ಟಿಯಿಂದ ರಕ್ಷಾನೂ ಹೌದು. ಹಂಗs ಅದೇ  ವಾಜ್ಮಿನೂ ಹೌದಾಗಿತ್ತು ವಾಸ್ತವಿಕತೆಯ ದೃಷ್ಟಿಯಿಂದ.  ಜಮೀನದೆಲ್ಲಾ ದೇಖರೇಖಿ,  ಬಿತಿಗಿ, ರಾಶಿ ರೈತರು ಆಳು ಕಾಳು ಅಂತ ಪುಟ್ಟ ಪೂರಾ ನೋಡ್ಕೋತಿದ್ಲು. ಆಗ ಏಕಾ ಇಪ್ಪತ್ತೆರಡು ವರ್ಷದಾಕಿ.

ಮುಂದೆ ನಮ್ಮ ಅಣ್ಣಾಂದು  ಮುಲ್ಕಿ ಪರೀಕ್ಷಾ ಆದಕೂಡಲೇ ಚಿಕ್ಕೋಡಿಯಲ್ಲಿ ಮನೆ ಮಾಡಿ ಸ್ವತಂತ್ರವಾಗಿ ತನ್ನ ಮಗನೊಂದಿಗೆ  ಇರೋಕ ಶುರು ಮಾಡಿದ್ಲು , ತನ್ನ ಇಪ್ಪತ್ತೆಂಟನೇ ವಯಸ್ಸಿಗೆ. ನನಗ ಈಗ ಅನಸ್ತದ ಸ್ವತಂತ್ರ ಜೀವನನೂ   ನಡೆದಿದ್ದು,  ಅನುವು ಆಪತ್ತಿಗೆ  ತೌರಿದೆ  ಅನ್ನೋ ಭರೋಸದ ಮ್ಯಾಲೆ,  ಅವರ  ಮರ್ಜಿ ಕಾಯಕೋತನ.  ತನ್ನ ಮಗನಿಗೆ, ರಾವಸಾಹೇಬರ  ವಂಶದ ಕುಡಿಗೆ  ಅನ್ಯಾಯ ಆಗಬಾರದು, ಅಂತ ರಾವ್ ಸಾಹೇಬರ ಮಗನ ಆಸ್ತಿ  ಥೇಟ್ ಹಾವಿನ  ಹಿಡಿತದಾಗ  ಹಿಡದಿಟ್ಟಾಂಗ ಇಟ್ಟು  ಕಾಯ್ಕೊಂಡು ಬಂದ್ಲು ತೌರನ್ನೂ ಮರೀದೇ, ದೂರ ಮಾಡದೇ. ಕತ್ತಿ ಅಲಗಿನ ಮ್ಯಾಲಿನ ಕಸರತ್ತಾಗಿತ್ತು  ನಮ್ಮ ಏಕಾನ  ಜೀವನ. ಬಲು ನಾಜೂಕಾಗಿ  ಸಂಭಾಳಿಸಿದ  ಸೂಕ್ಷ್ಮಮತೀ ಏಕಾ.

ನಾ ಈಗ ವಿಚಾರ  ಮಾಡಿದಾಗ ಏನೋ ಒಂದು ಹೇಳಲಾಗದ  ಭಾವ  ಎದೀತುಂಬ; ಹೊಟ್ಟೇಲಿ ಸಂಕಟ. ಏಕಾನ ಖಂಬೀರತನ, ತಿಳುವಳಿಕೆ ಆಳರೇ ಎಷ್ಟಿತ್ತು ಅನಕೋತೀನಿ.ಆಕೀನ ಗಟ್ಟಿತನ, ವ್ಯವಹಾರ ಜ್ಞಾನ, ಶಾಣ್ಯಾತನಕ್ಕ ಅಂಚರೇ ಇತ್ತೋ ಇಲ್ಲೋ  ಅನಸ್ತದ. ನಮ್ಮ ಅಣ್ಣಾ ಎಲ್ಲಾ ನೋಡ್ಕೋಳಿಕ್ಕೆ  ಶುರು ಮಾಡಿದ ಮ್ಯಾಲ ಸುದ್ಧಾ ಏಕಾನ  ಸಲಹಾ ಸೂಚನಾ ತಗೋತಿದ್ರು. ಸುಗ್ಗಿ, ಕಬ್ಬಿನ ಗಾಣ ಶುರು ಆತಂದ್ರ ಅದೆಲ್ಲಾ ಮುಗ್ಯೂ ತನಕಾ  ತೋಟದ ಮನೆಯಲ್ಲಿ  ಅಖಂಡವಾಗಿ ಕಾವಲು ನಿಂತು ಅಣ್ಣಾಗ ಆಲದ ಮರದ್ಹಾಂಗ ಆಸರ  ಆಗಿ ನಿಂದರಾಕಿ ಆಕಿ. ನಂದಿಕುರಳಿ ಹೊಲಾ  ಮಾರಿಬಿಟ್ರು ಅಣ್ಣಾ. ಬೆಳವಿಗೆ ಮಾತ್ರ ದಿನಾ  ಹೋಗಿ ಬರ್ತಿದ್ರು ಅಣ್ಣಾ, ಸೈಕಲ್ ಮ್ಯಾಲೆ.

ಬರೀ  ಮುಲ್ಕಿ ಓದಿದ  ನಮ್ಮ ಏಕಾ ಇಷ್ಟ ಎತ್ತರಕ್ಕ ಹೆಂಗ ಏರಿದ್ದಾಳು ! ಉತ್ತರ ಇಲ್ಲದ ಅಗಾಧತೆ ಅದು. ಇದಕ್ಕಿಂತ ಬೇರೆ ತಪಸ್ಸೇನಾದರೂ  ಇದ್ದೀತಾ, ಆ ಸಾಧ್ಯತೆ ಇದೆಯಾ ಅನಸ್ತದ ನನಗೆ. ನಾ ಈಗ ಹೇಳ್ತಿರತೀನಿ – Impossible, Tension, Tired, Bore 

ಈ ಶಬ್ದಗಳು ನನ್ನ ಡಿಕ್ಷನರಿಲಿ ಇಲ್ಲ ‌‌‌‌‌‌‌‌ಅಂತ . ಇದನ್ನ ಏನೂ ಹೇಳದೆ ನಮ್ಮ ಏಕಾ ಆಗಲೇ  ಸಾಧಿಸಿದ್ಲು.

ರೂಪ  ವಿಕಾರ ಮಾಡಿ  ಕೂಡಿಸಬಹುದು ಈ ಸಮಾಜ; ಆದರೆ ಆಸೆ, ಕಾಮನೆ, ಭಾವನೆಗಳನ್ನ ಮುರುಟಿಸೋದು? ಅವತರ  ರೂಪಾ ಕೆಡಸೋದು ಹೆಂಗ? ಅವನ್ನೆಲ್ಲಾ ಸಂಭಾಳಿಸಿಕೊಂಡು ನಡಿಯೋದು ದೊಡ್ಡ  ಸಾಧನಾ. ಗಂಡ ಸತ್ತ  ನೋವು ನಿರಂತರ  ಅದನ್ನು ಬದಿಗೊತ್ತಿ, ಪ್ರತಿಯೊಂದು ಬಾಬ್ತಿಲೂ ಹಿಡಿತ ಸಾಧಿಸಿ ನಡೆದ ಏಕಾ,    ಮಗನ ಸಂಸಾರಕ್ಕಂತೂ ಸರೀನೇ;’ ತೊಲೆ ಸಿಡಿದಲ್ಲಿ ಕಂಬ’

ಅನ್ನುವಂತೆ  ಪ್ರತಿಯೊಬ್ಬರ  ಕಷ್ಟಕ್ಕೂ  ಆಗುವ ಜೀವವಾಗಿತ್ತು ಅದು. ತಾ ಪೂರ್ತಿ ತಲೆ ಸುಡುವ ಬಿಸಿಲಿನಲ್ಲಿ ನಿಂತು,  ದಾರಿ ತುಂಬ ತಣ್ಣೆಳಲು  ಹಾಸಿ ನಡದಿದ್ದಾಳೆ  ಏಕಾ. ಆ ತಣ್ಣೆಳಲ ಹಾದಿಯಲ್ಲಿ ಸಾಗಿ ಬಂದ ಈ ಜೀವದ ತುಂಬ ತನ್ನ ಛಾಯೆಯ ಛಾಪನ್ನು ಬಲು  ಆಳವಾಗಿ ಮೂಡಿಸಿ ಹೋಗಿದ್ದಾಳೆ ಏಕಾ  ಯಾವ ಸ್ವಾರ್ಥ, ಇರಾದೆನೂ ಇಲ್ಲದೇ !

|ಇನ್ನು ಮುಂದಿನ ವಾರಕ್ಕೆ|

‍ಲೇಖಕರು Admin

May 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಶ್ರೀವತ್ಸ ದೇಸಾಯಿ

    Misfortunes come in threes ಅನ್ನುವ ಆಂಗ್ಲ ಪದಗುಚ್ಛ ಇದೆ. ಎಳೆವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ವಿಧವೆ, ಎರಡೇ ತಿಂಗಳಲ್ಲೇ ಎರಡನೆಯ ಮಗುವಿನ ಸಾವು, ನಂತರ ಇಪ್ಪತ್ತೆರಡರ ವಯಸ್ಸಿನ ಸ್ಫುರದ್ರೂಪಿ ನೀಳವೇಣಿಗೆ. ಕ್ರೂರ ಶಾಸ್ತ್ರದ ಮುಂಡನ ! ಇವುಗಳನ್ನೆಲ್ಲ ಎದುರಿಸಿದ ಏಕಾಕಿ ‘ಏಕಾ’ನ ಜೀವನದ ಮೂರನೆಯ ಅಧ್ಯಾಯ ಆಗಿನ ಕಾಲದ ಸಾಮಾಜಿಕ ಧಾರ್ಮಿಕ ಕಟ್ಟಳೆಗಳನ್ನು ತಮ್ಮ ಇಂದಿನ ಸುಲಲಿತ. ಆದರೆ ಉತ್ತರ ಕರ್ನಾಟಕ ಶೈಲಿಯಲ್ಲಿ ಇನ್ನೂ ಮನಸ್ಸಿಗೆ ನಾಟುವಂತೆ ಬರೆದ ಲೇಖಕಿಯನ್ನು ಅಭಿನಂದಿಸದೆ ಇರಲಾರೆವು .

    ಪ್ರತಿಕ್ರಿಯೆ
    • Sarojini Padasalgi

      ಶ್ರೀವತ್ಸ ದೇಸಾಯಿಯವರೇ ಧನ್ಯವಾದಗಳು. ಹೌದು ಕ್ರೂರ ವ್ಯವಸ್ಥೆಯ ಅಡ್ಡಗಾಲು ದಾಟುತ್ತ ಸಾಗಿದ ಏಕಾನ ಜೀವನ ಹಲವು ಮುಖವುಳ್ಳದ್ದು, ಏಕಾಕಿಯಾಗಿ ಸಾಗಿದ ಏಕಾಂದು.

      ಪ್ರತಿಕ್ರಿಯೆ
  2. ramesh pattan

    ಬರಹ ಓದಿ ಕಣ್ಣು ತೇವಗೊಂಡವು.
    ರಮೇಶ ಪಟ್ಟಣ. ಕಲಬುರಗಿ

    ಪ್ರತಿಕ್ರಿಯೆ
    • Sarojini Padasalgi

      ಧನ್ಯವಾದಗಳು ರಮೇಶ್ ಸರ್. ಹೌದು ಸರ್ ನಾನೇ ಬರೆದ ಏಕಾನ ಜೀವನದ ಒಂದೊಂದು ಘಟನೆಗಳೂ ನನ್ನ ಎದೆಯನ್ನು ಸೀಳಿದಂಥ ನೋವನ್ನು ಕೊಡ್ತವೆ ನಂಗೂ; ನಾ ಬಲ್ಲದ್ದೇ ಆದರೂ!

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: