ಸರೋಜಿನಿ ಪಡಸಲಗಿ ಸರಣಿ – ಮಲೆನಾಡಿನಿಂದ ಮಲೆನಾಡ ಸೆರಗಿಗೆ…

ಸರೋಜಿನಿ ಪಡಸಲಗಿ

1

ಆ ಪುಟ್ಟ ಸುಂದರ ಹಳ್ಳಿ ತಿಳವಳ್ಳಿಯಲ್ಲಿ ನಾಲ್ಕೂವರೆ ವರ್ಷ ಕಳೆದು ಅಂದರೆ 1985 ದಿಂದ 1989 ಜೂನ್ ವರೆಗೂ- ಆ ಮುಗ್ಧ ಜನರನ್ನು, ಅವರ ಮನ ತಟ್ಟಿ ಹನಿದುಂಬಿಸಿ ಒಂದು ವಿಚಿತ್ರ ಮನಃಸ್ಥಿತಿಯಲ್ಲಿ ನಮ್ಮನ್ನು ಮುಳುಗಿಸಿದ ಅವರ ಆ ಬೀಳ್ಕೊಡುಗೆಯಲ್ಲಿ ತೇಲುತ್ತ ಅವರನ್ನೆಲ್ಲ  ಬಿಟ್ಟು ಮಲೆನಾಡಿನಿಂದ ಮಲೆನಾಡ ಸೆರಗಿನತ್ತ ಅಂದರೆ ಧಾರವಾಡದ ನೆರಳಿನಲ್ಲಿಯೇ ನಿಂತ ಇನ್ನೊಂದು ಪುಟ್ಟ ಹಳ್ಳಿ ಗರಗದತ್ತ ಹೊರಟಿತು ನಮ್ಮ  ಸಂಸಾರ ಹೊಸ ಕನಸು, ಹೊಸ ಆಸೆ  ಹೊತ್ತು. 

ಈಗ ಈ ಇಬ್ಬರೂ ಮಕ್ಕಳೂ ದೊಡ್ಡ ಕ್ಲಾಸ್ ಗೆ ಬಂದಿದ್ರು. ಮಗಳು ಎಂಟನೇ ಕ್ಲಾಸು, ಚಿಕ್ಕ ಮಗ ಆರನೇ ಕ್ಲಾಸ್. ಅಲ್ಲಿ ನನ್ನ ತೌರೂರಿನಲ್ಲಿದ್ದ ದೊಡ್ಡ ಮಗ ಈ ವರ್ಷ ಎಸ್.ಎಸ್.ಎಲ್.ಸಿ.ಗೆ ಬಂದಿದ್ದ. ಮಕ್ಕಳ ಶಿಕ್ಷಣ ಒಂದು ನಿರ್ಣಾಯಕ ಘಟ್ಟದಲ್ಲಿ ಇರುವಾಗ ನಮಗೆ ಧಾರವಾಡದ ಸಮೀಪ ಇರುವ ಗರಗ, ಅದೂ ಒಂದು ಪುಟ್ಟ ಹಳ್ಳಿಯೇ  ಆದ್ರೂ – ಅಲ್ಲಿಗೆ ಬಂದಿದ್ದು ಒಂಥರಾ ಸಮಾಧಾನ ತಂದಿತ್ತು. ಮಕ್ಕಳು ಅಲ್ಲಿಂದ ದಿನಾಲೂ  ಧಾರವಾಡ ಸ್ಕೂಲಿಗೆ ಓಡಾಡ ಬಹುದಿತ್ತು ಬಸ್ಸಿನಲ್ಲಿ. ಅಲ್ಲಿಂದ ನನ್ನೂರು ಹುಕ್ಕೇರಿಯೂ ಬರೀ ಮೂರು ತಾಸಿನ ಪ್ರವಾಸ. ಬೆಳಗಿನ 6.30ಕ್ಕೆ ಗರಗದಿಂದ ಬೆಂಗಳೂರು- ಚಿಕ್ಕೋಡಿ ಬಸ್ಸಿಗೆ ಹೊರಟ್ರೆ 9.30ಕ್ಕೆಲ್ಲಾ  ಹುಕ್ಕೇರಿ ತಲುಪಿ ಬಿಡ್ತಿದ್ವಿ. ಏನೇನೋ ವಿಚಾರ ಹಳವಂಡಗಳ ಮಧ್ಯೆ  ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣವನ್ನು ನಮ್ಮ ಜೀಪು ಪ್ರವೇಶಿಸಿದ್ದೇ ಗೊತ್ತಾಗಲಿಲ್ಲ.

ಜೀಪ್ ಡ್ರೈವರ್ ಬಾರೂದವಾಲೆ ಬ್ರೇಕ್ ಹಾಕಿದಾಗಲೇ ಎಚ್ಚರ – ಆ ಹೊಂಕಣ ನದಿ, ಮಕರವಳ್ಳಿ ಕ್ರಾಸ್ ಎಲ್ಲಾ ಅಲ್ಲೇ ಬಿಟ್ಟು ಬೇರೆ ಲೋಕಕ್ಕೆ  ಬಂದ್ವಿ ಅಂತ ಅರಿವಾದದ್ದು. ಸುತ್ತಲೂ ನೋಡಿದಾಗ ಬಹಳ  ವ್ಯತ್ಯಾಸ ಏನೂ ಕಾಣಲಿಲ್ಲ. ಗೇಟ್ ಒಳಗೆ ಬಂದೊಡನೆ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡ – ಬಹುಶಃ ನಿರ್ಲಕ್ಷ್ಯಕ್ಕೆ ಒಳಗಾದದ್ದು, ಧಾರವಾಡ ಮಗ್ಗುಲಲ್ಲಿ ಇದ್ದದ್ರಿಂದ ಅನಕೊಂಡೆ. ಒಂದು ಮೂವತ್ತು ಮೀಟರ್ ಅಂತರದಲ್ಲಿ ನಮ್ಮ  ಕ್ವಾರ್ಟರ್ಸ್. ಅವೂ ಎಲ್ಲಾ  ಹಳೆಯ, ಕೆಂಪು ಹೆಂಚಿನ ಕಟ್ಟಡಗಳು. ಬರೀ ನಾಲ್ಕು ಮನೆಗಳು. ಇನ್ನುಳಿದ ಎಲ್ಲಾ ಸ್ಟಾಫ್ ಧಾರವಾಡದಿಂದ ಓಡಾಡ್ತಿದ್ರು ಅನಸ್ತದೆ. ಅಲ್ಲೇ ಧಾರವಾಡ ಪಕ್ಕದಲ್ಲೇ ಇತ್ತಲ್ಲ! ಏನೋ ಒಂದು ನನಗೇ ಅರಿವಾಗದಂಥ ಮನಃಸ್ಥಿತಿಯಲ್ಲಿ ಕೆಳಗೆ ಇಳಿದೆ, ಮಕ್ಕಳೂ ನನ್ನೊಂದಿಗೆ.

ಈಗವರು ಎಲ್ಲವನ್ನೂ ಅಚ್ಚರಿಯಿಂದ ನೋಡುವ ವಯಸ್ಸಿನಿಂದ ಸ್ವಲ್ಪ ಮೇಲೆ ಬಂದಿದ್ರು. ನಮ್ಮದೇ ಮೊದಲನೇ ಕ್ವಾರ್ಟರ್ಸ. ಅದರ ಪಕ್ಕದಲ್ಲೇ ಒಂದು ದೊಡ್ಡ  ಬೇವಿನ ಮರ, ಇಷ್ಟಗಲ ರೆಂಬೆ ಕೊಂಬೆ ಚಾಚಿ ನಿಂತಿತ್ತು. ಗಿಡದ ತುಂಬಾ ಮಂಗಗಳು, ಇಣುಕಿಣುಕಿ ಬಂದ ಹೊಸ ಮುಖಗಳತ್ತ  ನೋಡ್ತಿದ್ವು. ನಮ್ಮ ಮನೆಯ ಹೆಂಚಿನವರೆಗೂ ಚಾಚಿದ ಕೊಂಬೆ ಅವುಗಳಿಗೆ ಸೇತುವೆ ಥರಾ ಆಗಿತ್ತು. ಮನೆಯ ಮುಂದೆ ಒಂದು ಕೆಂಪು ಹೂವಿನ  ಗಿಡ. ಅದರಲ್ಲೂ ಒಂದೆರಡು ಪುಟ್ಟ ಪುಟ್ಟ ಮಂಗಗಳು! ಹೆಂಚು ಹೊದಿಸಿದ ಹಳೇ ಕ್ವಾರ್ಟರ್ಸ್! ಪಕ್ಕದಲ್ಲೇ ಮಂಗಗಳ ವಾಸ್ತವ್ಯ! ಹೊಸ ಅನುಭವಕ್ಕೆ ರೆಡಿಯಾಗು ಅಂತ ಎಚ್ಚರಿಸ್ತು ನನ್ನ ಮನಸ್ಸು! ಡ್ರೈವರ್ ಜೀಪ್ ನಲ್ಲಿನ ಸಾಮಾನು ತೆಗೆದಿಡುವಾಗ ಅಲ್ಲಿನ ಅಟೆಂಡರ್ ಮುಲ್ಲಾನೂ ಬಂದಿದ್ದ.

‘ಸಾಮಾನಿನ ಲಾರಿ ಇನ್ನೂ ಬರಲೇ ಇಲ್ಲಲಾ’ ಅಂತ ನನ್ನವರು ನನ್ನ ಕೇಳಿದಾಗಲೇ ಆ ಕಡೆ ಗಮನ ಹೋಯ್ತು ನನಗೂ. ‘ಅರೇ ಹೌದಲಾ?’ ಅಂದೆ. ನಮ್ಮಕಿಂತಲೂ ಮೊದಲೇ ಹೊರಟಿತ್ತು. ಅಂದರೆ ಈಗ ಸುಮಾರು ನಾಲ್ಕೈದು ತಾಸುಗಳ ಮೇಲಾಗಿತ್ತು ಅವರು ಹೊರಟು! ಯಾಕೋ ಸ್ವಲ್ಪ ಗೊಂದಲ ಮನದಲ್ಲಿ. ಬರಬಹುದು ಈಗ ಅಂದೆ. ವಿಚಾರ  ಮಾಡ್ತಾ ನಿಲ್ಲಲು ಸಮಯ ಇರಲಿಲ್ಲ. ಪ್ರತಿ ಸಲದಂತೆ ತಯಾರಿ ಮಾಡಿಕೊಂಡು ಬಂದ ಕುಕ್ಕರ್ ಕೂಗಿಸಿ ಊಟದ ತಯಾರಿ ಮಾಡಬೇಕಿತ್ತು. ಇದೂ ಕೆಟ್ಟ ಕುಗ್ರಾಮವೇ, ಧಾರವಾಡ ಪಕ್ಕದ್ದು ಧಾರವಾಡ ಅಲ್ಲಲಾ! ಈ ಬಾರಿ  ಇನ್ನೊಂದು progress ಆಗಿತ್ತು.

ಅಲ್ಲಿ ತಿಳವಳ್ಳಿಯಲ್ಲಿ ನಮಗೆ ರೊಟ್ಟಿ ಮಾಡಿ ಕೊಡ್ತಿದ್ದ ರಾಜಮ್ಮನ ಕಡೆಯಿಂದ ಚಪಾತಿ ಪಲ್ಯ ಮಾಡಿಸಿಕೊಂಡು ತಂದಿದ್ದೆ. ಹೀಗಾಗಿ ಒಂಚೂರು ಒತ್ತಡ ಕಡಿಮೆ ಇತ್ತು. ತಿಳವಳ್ಳಿಯಿಂದ ನಮ್ಮ ಜೊತೆ ಅಲ್ಲಿನ ಮನೆಗೆಲಸದ ಹೆಣ್ಣು ಮಗಳು, ಅನುಸೂಯಾಳನ್ನೂ ಕರೆದುಕೊಂಡು ಬಂದಿದ್ದೆ ನಮ್ಮೊಂದಿಗೆ. ಗರಗದ ಆಸ್ಪತ್ರೆಯಲ್ಲಿ ಒಬ್ಬನೇ ಅಟೆಂಡರ್ ಇದ್ದ, ಒಬ್ಬ ಮುಸ್ಲಿಂ ಹೆಣ್ಣು ಮಗಳು, ವಯಸ್ಸಾದ ಅಜ್ಜಿ – ನಾನಿ ಅಂತ ಕರೀತಿದ್ರು ಅವಳನ್ನು. ಅವಳೇ ಅಲ್ಲಿನ  unofficial ಆಯಾ! ಅವಳ ವಸತಿ  ಅಲ್ಲೇ ದವಾಖಾನೆಯಲ್ಲೇ. ಅಲ್ಲಿನ ಪೇಷಂಟ್ಸ್ ಸಂಬಂಧಿಕರು ಕೊಡುವುದನ್ನೇ ತಿಂದು, ಹೆರಿಗೆ ಕೇಸ್ ಬಂದಾಗ ನರ್ಸ್ ಗೆ ಸಹಾಯಕಳಾಗಿಯೂ ಇದ್ಲು. ಆಸ್ಪತ್ರೆಯ ಸ್ವಚ್ಛತೆ ಕೆಲಸ ಅವಳದೇ. ಅವಳೂ ಬಂದ್ಲು.

ಅನುಸೂಯಾ ಮತ್ತು ನಾನಿ ಇಬ್ರೂ ಸೇರಿ ಇನ್ನೊಮ್ಮೆ ಮನೇನ ಗುಡಿಸಿ, ಒರೆಸಿ ಸ್ವಚ್ಛ ಮಾಡಿದ್ರು. ನಾನು ನನ್ನ ಜೊತೆ ತಂದಿದ್ದ ನಮ್ಮ  ಮನೆ ದೇವರ ಫೋಟೋ ಒಂದನ್ನು ಅಡುಗೆ ಮನೆಯಲ್ಲಿ ಇದ್ದ  ಜಗುಲಿಯ ಮೇಲಿರಿಸಿ ದೀಪ ಹಚ್ಚಿ ಕೈ ಮುಗಿದೆ. ಗ್ಯಾಸ್ ಸಿಲಿಂಡರ್, ಸ್ಟೋವ್ ಎಲ್ಲಾ  ಜೋಡಿಸಿ ಕುಕ್ಕರ್ ಏರಿಸಿ ಹೊರ ಬಂದ್ರೂ ಇನ್ನೂ ಲಾರಿ ಸುದ್ದೀನೇ ಇಲ್ಲ! ತಿಳವಳ್ಳಿಯಿಂದ ಹೊರಟು ಈಗ ಸುಮಾರು ಆರು ತಾಸಾಗಿತ್ತು. ಇದೇನು ಹೊಸ ಸಮಸ್ಯೆ ಅಂತ ದಿಗಿಲು. ಫೋನ್ ಮಾಡೋದಾದರೂ ಎಲ್ಲಿಗೆ, ಹೇಗೆ ? ಆಗಿನ್ನೂ ಮೊಬೈಲ್ ಫೋನ್ ಬಂದಿರಲಿಲ್ಲ.

ದವಾಖಾನೆಯಲ್ಲೇ ಹೆಸರಿಗೆ ಒಂದು ಫೋನ್ ಇತ್ತು ಅಷ್ಟೇ. ಕುಕ್ಕರ್ ಕೂಗಿ ಅಡುಗೆ ಆದ್ರೂ ಊಟ ಮಾಡುವ ಮನಸ್ಸೇ ಇರಲಿಲ್ಲ. ಸಾಮಾನಿನ  ಜೊತೆ ನನ್ನ ತಮ್ಮನೂ ಇದ್ದ. ತಿಳವಳ್ಳಿಯ ಇಬ್ಬರು ಅಟೆಂಡರ್ಸ್ ಇದ್ದರು. ಹುಡುಗರ, ಅನುಸೂಯಾಳ ಊಟ ಮುಗಿಸಿ ಹೊರ ಬಂದು ಲಾರಿ  ದಾರಿ ಕಾಯ್ತಾ ನಿಂತೆ. ನನ್ನ ಪತಿ ಆಗಲೇ ಆಸ್ಪತ್ರೆಗೆ ಹೋಗಿ ಆಗಿತ್ತು, ಏನೋ ಕೇಸ್ ಬಂದಿದೆ ಅಂತ. ಇಲ್ಲಿನೂ ಅವರೊಬ್ರೇ ಡಾಕ್ಟ್ರು. LMO (Lady  Medical officer) ಪೋಸ್ಟ್  ಇದ್ರೂ ಯಾರೂ ಇರಲಿಲ್ಲ. ನನಗ್ಯಾಕೋ ಸಣ್ಣಗೆ ಅಧೈರ್ಯ ಕಾಡಲಾರಂಭಿಸ್ತು. ಜೊತೆಗೆ  ಅನುಸೂಯಾ  ಬೇರೆ – ‘ಅಕ್ಕಾರ ಲಾರಿ ಯಾಕ್ರೀ ಇನ್ನೂ ಬರಲೇ ಇಲ್ಲ? ಸಾಮಾನ ಬ್ಯಾರೆ ಗಚ್ಚನ ತುಂಬಿತ್ರಿ. ಒಂದ ಕಡೆ ವಾಲಿದ್ಹಾಂಗ ಆಗಿತ್ರಿ.ʼ ಅಂತ ಶುರು ಮಾಡಿದ್ಲು. ಇದೇನ ಬಂತಪಾ ದೇವ್ರೇ ಅಂತ ಥಣ್ಣಗೇ ಕುಳಿತು ಬಿಟ್ಟೆ ನಾ.

ಮನೆ ತುಂಬಾ ತಿರುಗಾಡಿ ಬಂದ ನನ್ನ ಮಗಳು ಹಿಂದಿನ ಬಾಗಿಲಿಂದ ಧಡ ಧಡನೇ ಓಡಿ ಬಂದಿದ್ದ ನೋಡಿ ‘ಯಾಕ ಏನಾತು’ ಅಂದೆ. ‘ಅಲ್ಲಿ ನೋಡಲ್ಲೆ’ ಅಂತ ಕೈ ತೋರಿಸಿದ್ಲು, ನೋಡಿದ್ರ ಇಷ್ಟೆತ್ತರದ ಮಂಗ ಒಳಗೆ ಬಂದು ಅಡಿಗೆ ಮನೆ ಬಾಗಿಲಿಗೆ ಅಡ್ಡಲಾಗಿ ಕೂತು ಬಿಟ್ಟಿದೆ! ಕೈಕಾಲೇ ಆಡಲಿಲ್ಲ ನಂಗೆ. ಹೊಸ ಜಾಗ ಬೇರೆ, ಲಾರಿ ಬರದ ಟೆನ್ಶನ್ ಒಂದು. ಈಗ ಈ ಮಂಗ! ಅಷ್ಟ್ರಲ್ಲಿ  ನಾನಿ, ಬಲೇ ಗಟ್ಟಿ ಮುದುಕಿ, ಒಂದು  ಕೋಲು  ತಗೊಂಡು ಅದ್ಹೇಗೋ ಅದನ್ನು ಹೊರ ಹಾಕಿದ್ಲು. ಅದು ಹೋಗೋ ಮುಂದೆ ಅಡಿಗೆ ಮನೆಯ ಡಬ್ಬದಿಂದ ಚಪಾತಿ ಎತ್ಕೊಂಡೇ ಹೋಯ್ತು. ‘ವೈಸೆ ದರವಾಜಾ ಖುಲ್ಲಾ ನಂಹೀ ರಖನಾಗೇ ಮಾಂ! ಸಬ ಅಂದರ್ ಘುಸತೆ ಹೈಂ. ಬಿಲ್ಲಿ, ಚೂಹೇಂ ಭೀ ಬಹುತ ಯಹಾಂ’ ಅಂದ್ಲು. ಆತ ಬಿಡವಾ  ಇದೊಂದ  ಹೆಚ್ಚಿನ ಅನುಭವ ನಂಗೆ ಅಂತ ಮತ್ತೆ ಹೊರಬಂದು ಗೇಟ್ ನತ್ತ ದೃಷ್ಟಿ ಬೀರಿ ನಿಂದೆ. ಹಾಗೇ ಸುಮಾರು ಅರ್ಧಗಂಟೆ  ನಿಂತಿರಬಹುದು, ಲಾರಿ ಹಾರ್ನ್ ಆಯ್ತು. ಅಂತೂ ಒಮ್ಮೆ ಲಾರಿ ಬಂದು ಮನೆ ಮುಂದೆ ನಿಂತು. ಹುಶ್ ಅಂದೆ.

ಲಾರಿಯಿಂದ ಕೆಳಗಿಳಿದು ಬಂದ ನನ್ನ ತಮ್ಮ ಬೆವರೊರೆಸಿಕೊಳ್ಳುತ್ತ. ‘ಯಾಕೋ ಇಷ್ಟು ತಡ’ ಅಂದೆ. ಲಾರಿ ಗಾಲಿ ಪಂಕ್ಚರ್ ಆಯ್ತಂತೆ. ವಾಲಿದಂತಾಗಿದ್ದ ಸಾಮಾನುಗಳ ಮೇಲ್ಭಾಗ ಪೂರ್ತಿ ಹೊಳ್ಳಿಧಾಂಗ ಆಯ್ತಂತೆ. ಆ ಗಾಲಿ ಸರಿ ಮಾಡಿ, ಹೇರಿದ್ದ ಸಾಮಾನೆಲ್ಲ ಸರಿ  ಮಾಡ್ಕೊಂಡು ಬರೋಷ್ಟ್ರಲ್ಲಿ ಇಷ್ಟು ತಡಾ ಆತಂತೆ. ‘ಯಾವ ಸಾಮಾನೂ  ಹೊರಗೆ ಬಂದು ಬಿದ್ದು ಹೋಗಿಲ್ಲಲಾ’ ಅಂತ  ಕೇಳಿ ಎಲ್ಲಾ ಸರಿ ಇದೆ  ಅಂತ ಖಾತ್ರಿ ಮಾಡ್ಕೊಂಡೆ. ಆಗ  ವೇಳೆ ಸುಮಾರು ನಾಲ್ಕು ಗಂಟೆ. ‘ಮೊದಲು ನೀವೆಲ್ಲಾ ಊಟಾ ಮುಗಸ್ರಿ. ಆಮ್ಯಾಲನ ಲಾರಿ ಅನ್ಲೋಡ ಮಾಡ್ರೆಪಾ, ಭಾಳ ತಡಾ ಆಗೇದ’ ಅಂದೆ. ಆದರೆ ಆ ಲಾರಿ ವಾಪಸ್ಸು ತಿಳವಳ್ಳಿಗೆ ಹೋಗಬೇಕಿತ್ತು. ಹೀಗಾಗಿ ಅವರು ಧಡಾಭಡಾ ಸಾಮಾನು ಇಳಿಸಲಿಕ್ಕೆ ಶುರು ಮಾಡಿದ್ರು. ನನ್ನ ತಮ್ಮ ಆ ಹೊತ್ತೇ ಬೆಂಗಳೂರುಗೆ ವಾಪಸ್ಸು ಹೊರಡೋದಿತ್ತು. ಆಗಿನ್ನೂ ಪ್ರೈವೇಟ್ ಬಸ್ಸು ಅಷ್ಟಿರಲಿಲ್ಲ. ಒಂದೋ-ಎರಡೋ ಅಷ್ಟೇ. ಜನತಾ, ನ್ಯಾಷನಲ್ ಟ್ರಾವೆಲ್ಸ್ ಅಂತಿದ್ವು. ಆದರೆ ಟಿಕೆಟ್ ಬುಕ್ ಮಾಡೋರ್ಯಾರು? ಅದಕ್ಕೇ ಚಿಕ್ಕೋಡಿಂದ  ನನ್ನೂರ ಮಾರ್ಗವಾಗಿ ಬರ್ತಿದ್ದ  ಬೆಂಗಳೂರು ಬಸ್ಸಿಗೆ ಆತ ಹೋಗೋದಂತ ಇತ್ತು.

ಸಂಜೆ ಆರು ಗಂಟೆಗೆ ಗರಗಕ್ಕೆ ಬರತಿತ್ತದು. ಅಲ್ಲೇ  ಆಸ್ಪತ್ರೆ ಗೇಟ್ ನಿಂದ ಒಂದು ನಾಲ್ಕು ಹೆಜ್ಜೆ ದೂರದಲ್ಲಿ ರಸ್ತೆ ಬದಿಯಲ್ಲಿ ನಿಲ್ಲುತ್ತಿತ್ತು ಬಸ್ಸು. ಇಲ್ಲೂ ಅದೇ ಬಸ್ಸು ನಿಲ್ದಾಣ ತಿಳವಳ್ಳಿಯಲ್ಲಿ ಇದ್ದಂಗೆ. ಆತನಿಗೆ ಗಡಿಬಿಡಿ, ದಣಿವು. ಎಲ್ಲ ಕೆಲಸ ಮುಗಿದ್ರೂ ಸುರೇಶ ಬರಲೇ ಇಲ್ಲ. ನನ್ನ ತಮ್ಮ ಅಲ್ಲೇ ಆಸ್ಪತ್ರೆಯಲ್ಲೇ ಅವರನ್ನು ಭೇಟಿಯಾಗಿ ಊರಿಗೆ ಹೋದ. ಮುಸ್ಸಂಜೆಯ ಏಳು ಗಂಟೆಗೆ ತಿಳವಳ್ಳಿ ಜನ ಹೊರಟು ನಿಂತ್ರು.

ನಾನೀನ್ನ ಆಸ್ಪತ್ರೆಗೆ ಕಳಿಸಿ ನನ್ನ ಪತಿಯನ್ನ ಬರ ಹೇಳಿದೆ, ಬಂದ್ರು ಸುರೇಶ. ಅವರೆಲ್ಲ ಹನಿದುಂಬಿ, ಕಣ್ಣೊರೆಸಿಕೊಳ್ಳುತ್ತ ನಡೆದ್ರು. ಮನ ಮಣ ಭಾರ ನಂದು. ಹೆಜ್ಜೆ  ಕದಲಿಸದೇ ನಿಂತಿದ್ದೆ ಏನೋ ಕಳೆದುಕೊಂಡ ಹಾಗೆ. ಅಲ್ಲಿದ್ದಾಗ ಬಿಡುಗಡೆಗೆ ಹಂಬಲಿಸಿದ  ಜೀವ ಈಗ ಮರಳಿ ಹಾರಿ ಹಾರಿ ಅತ್ತಲೇ ಹೋಗಲೆಳೆಸುತ್ತಿತ್ತು. ಇದುವೇ ಜೀವನ ಅಲ್ವಾ? ಇಲ್ಲದುದರ ಕಡೆ ತುಡಿಯುವುದು, ಮಿಡಿಯುವುದು!

ಹೆಗಲ  ಮೇಲೆ ಕೈ ಇಟ್ಟು  ನನ್ನ  ಮಗಳು ಅಮ್ಮಾ  ನಿಮ್ಮ ಊಟ ? ಅಂದ್ಲು. ನಾ ಮರೆತೇ ಬಿಟ್ಟಿದ್ದೆ. ಮೊದಲು ಸುರೇಶ  ಅವರ ಊಟ ಮುಗಿಸಿದೆ. ನನಗ್ಯಾಕೋ ಹಸಿವು ಇಂಗೇ ಹೋಗಿತ್ತು. ಅನುಸೂಯಾ ‘ಅಕ್ಕಾರ ಚಹಾ ಮಾಡೂಣೇನ್ರಿ?’ ಅಂತ  ಕೇಳಿ  ಪರೋಕ್ಷವಾಗಿ ಚಹಾದ ಬೇಡಿಕೆ  ಇಟ್ಲು. ಹೌದಲಾ ಬಂದಾಗಿನಿಂದ ಇನ್ನೂ ವರೆಗೂ ಯಾರದೂ ಚಹಾ ಆಗಿರಲಿಲ್ಲ. ಗಡಿಬಿಡಿಯಲ್ಲಿ  ಸಕ್ಕರೆ ಟೀಪೌಡರ್ ಎಲ್ಲಾ ಲಾರಿ ಸಾಮಾನುಗಳ ಜೊತೆ ಸೇರಿ ಹೋಗಿತ್ತು. ನಾನೀನ್ನೇ ಕೇಳ್ದೆ – ಹತ್ರ ಎಲ್ಲಾದರೂ ಅಂಗಡಿ ಇದ್ಯಾ ಅಂತ. ‘ಅಕ್ಕಾರ ತಡೀರಿ ಇಲ್ಲೇ ಐತಿ. ತಂದ ಕೊಡ್ತೀನಿ’ ಧ್ವನಿ ಬಂದ ಕಡೆ ತಿರುಗಿ ನೋಡಿದರೆ, ಹುಡುಗರ ಒಂದು ದಂಡೇ ಇದೆ ಅಲ್ಲಿ ! ಅವರೆಲ್ಲಾ  ನನ್ನ ಚಿಕ್ಕ ಮಗನ ಫ್ರೆಂಡ್ಸ್ ಆಗಿ ಬಿಟ್ಟಿದ್ರು. ಈ  ರೀತಿಯ ತ್ವರಿತ ಹೊಂದಾಣಿಕೆ ಈ ಊರೂರು ವಲಸೆಯಾಟ ನೀಡಿದ ತರಬೇತಿ ನನ್ನ ಮಕ್ಕಳಿಗೆ! 

ತಂದ ಕೊಡ್ತೀನಿ ಅಂತ ಹೇಳಿದ ಹುಡುಗ ಗಫಾರ್, ಅವನಣ್ಣ ಮಕ್ತುಂ. ಅವನೇ ನನಗೆ ಪಕ್ಕದಲ್ಲೇ ಇರುವ ಬಾವಿಯಿಂದ ನೀರು ಸೇದಿ ತಂದು ಕೊಟ್ಟಿದ್ದ. ಇಲ್ಲೂ ನಲ್ಲಿ ಇರಲಿಲ್ಲ. ಬಾವಿ ನೀರೇ ಗತಿ. ಮರುದಿನದಿಂದ ಗಫಾರ್ ಮತ್ತು ಮಕ್ತುಂ ಇಬ್ರೂ ಸೇರಿ ನೀರು ತುಂಬಿಸುವುದಾಗಿ  ಹೇಳಿದ್ರು. ಅವರು ನನ್ನ ಮಗನ ಸ್ನೇಹಿತರೂ ಹೌದು! ಇಲ್ಯಾವ ಜಾತಿ ಮತ, ಅಂತಸ್ತು ಲೆಕ್ಕಕ್ಕೇ ಇರಲಿಲ್ಲ. ಅದೊಂದು ದೊಡ್ಡ ವರ ಅನಕೋತೀನಿ ನಾ. ಆ ಎಲ್ಲ ಮುಗ್ಧ ಮಕ್ಕಳು ಯಾವುದೇ ಸಂಕೋಚ ಇಲ್ಲದೇ ನಾ ಮುಂದು ತಾ ಮುಂದು ಅಂತ ಅಲ್ಲಿನ ಎಲ್ಲಾ ವಿಷಯ, ವಿಶೇಷಗಳ ವರದಿ ಒಪ್ಪಿಸುವಾಗ ಒಂಥರಾ ಮುದ. ಅಷ್ಟ್ರಲ್ಲಿ ಗಫಾರ್ ಸಕ್ಕರೆ ಚಹಾ ಪುಡಿ ತಗೊಂಡು ಬಂದ. ಹಾಲಿತ್ತು, ಇನ್ನೇನು ಚಹಾಕ್ಕೆ ನೀರು ಇಡೋಷ್ಟ್ರಲ್ಲಿ ಅಲ್ಲೇ ನಮ್ಮ ಆಸ್ಪತ್ರೆಯ ಆವರಣಕ್ಕೆ ಹೊಂದಿಯೇ ಇದ್ದ ಗೌಡರು, ಒಬ್ಬ ಆಳುಮಗನೊಡನೆ ಟೀಯೊಂದಿಗೆ ಬಂದ್ರು. ಮನಸಿಗೆ ಹಾಯೆನ್ನಿಸ್ತು  ಯಾಕೋ. ಆಸ್ಪತ್ರೆಯ ಸ್ಟಾಫ್ ಒಬ್ರಿದ್ರು ಅವರ ಜೊತೆ. ಎಲ್ರ ಪರಿಚಯ ಆಯ್ತು. ಹೊಸ ಪರಿಸರದಲ್ಲಿ ಮೆಲ್ಲನೆ ಮನ ಅರಳಿದ್ಹಾಂಗಾತು. 

ಇನ್ನೂ ಎಲ್ಲಾ ಸಾಮಾನು ಅಲ್ಲಲ್ಲೇ ಇದ್ವು. ದಣಿದ ಮಕ್ಕಳು ಮಲಗಿದ್ವು. ರಾತ್ರಿ 10 ಗಂಟೆ ಆಗಿತ್ತು. ನಾನೂ ಹಾಗೇ ಹುಶ್ ಅಂತ ಕುಳಿತು  ಕೇಳಿದೆ ನನ್ನ  ಪತಿಯನ್ನು- ‘ಎಲ್ಲಾ ಬರೋಬ್ಬರಿ  ಅದಲಾ?’ ಅಂತ. ಯಾರೂ ಮೊದಲು ಬಂದು ನೋಡಿದ್ದಿಲ್ಲ. ಆ ಹೊತ್ತೇ ಬಂದಿದ್ದು. ‘ಹೂಂ…’ ಅಂದ್ರು. ‘ಯಾಕ ಧನಿ ಎಳೀತೀರಲಾ’ ಅಂದಾಗ ‘ಎಲ್ಲಾ  ಛಲೋ ಅದ. ಆದರ ಹೊಡೆದಾಟ ಬಡೆದಾಟದ್ದು, ಕೊಲೆ ಪ್ರಕರಣಗಳೇ ಭಾಳಂತ’ ಅಂದು ಸುಮ್ಮನಾದ್ರು. ಬಂಕಾಪುರದಲ್ಲಿ accident case ಬಹಳ ಹೈವೇ ಹತ್ರ ಇದ್ದದ್ದರಿಂದ. ತಿಳವಳ್ಳಿಲೀ ಸ್ವಲ್ಪ ಕಡಿಮೆ MLC (Medico legal case). ಈಗ ಇಲ್ಲಿ  ಹೀಗಾ? ತಿಳವಳ್ಳಿ ಜನ ಅಂದಿದ್ದು ಕಿವಿಗೆ ಅಪ್ಪಳಿಸ್ತು- ‘ಗರಗಕ್ಕೇನ  ಹೋಕ್ಕೀರಿ ಅಪ್ಪಾರ, ಅಲ್ಲಿ ಹಾಡೇ ಹಗಲಿನ್ಯಾಗs ನರಿ ಓಡಾಡ್ತಾವಂತ್ರೀ. ಅಂಥಾ ಊರ ಯಪ್ಪಾ ಅದು’. ಕಣ್ಮುಚ್ಚಿ ಹೊಸ ಅನುಭವಗಳಿಗೆ ತಯಾರಾಗ್ತಾ ಮಲಗುವ ಪ್ರಯತ್ನದಲ್ಲಿ ಮಗ್ಗಲು  ಬದಲಿಸಿದೆ.

| ಇನ್ನು ನಾಳೆಗೆ |

‍ಲೇಖಕರು Admin

August 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shrivatsa Desai

    ಈ ವೈದ್ಯರ ಪತ್ನಿಯ ಅನುಭವಗಳನ್ನು ಓದುತ್ತ ಹೋದಂತೆ (ಹಿಂದಿನ ಸರಣಿಯನ್ನೂ ಓದಿದ್ದೆ) ಕಳೆದು ಹೋದ ದಿನಗಳ ಬಗ್ಗೆ nostalgic ಆಗುವದರ ಜೊತೆಗೆ ಸಂವಹನ, ತಂತ್ರಜ್ನಾನ ಒದಗಿಸಿದ ಸೌಲಭ್ಯ, ಮಾರ್ಪಾಡಾದ ಜೀವನ ಇವೆಲ್ಲವನ್ನು ನೋಡುತ್ತ ನಾವು ಹೆಚ್ಚು ಸಂತೋಷದಲ್ಲಿದ್ದೇವೆಯೇ ಅಂತ ಪ್ರಶ್ನಿಸುವಂತೆ ಮಾಡಿತು. ಹಳೆಯದೂ ನಮಗೆ ಬೇಕು ಓದಲು, ಮನನ ಮಾಡಲು. ನಾಳೆಯ ಕಂತಿನ ದಾರಿ ಕಾಯುವೆ. ಆ ಲಾರಿಗಾದಂತೆ ಪಂಕ್ಚರ್ ಆಗದೆ ಬರಲಿ! ಶ್ರೀವತ್ಸ ದೇಸಾಯಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: