ಪ್ರತಿಭಾ ನಂದಕುಮಾರ್ ಅಂಕಣ- ಒಂದು ಯುದ್ಧ ವರ್ಣನೆ…

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಇಲ್ಲಿ ಹೈದರಾಲಿಯ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಬರೆಯಬೇಕೆನ್ನುವ ಉದ್ದೇಶ ಇರುವುದರಿಂದ ಮತ್ತು ಯುದ್ಧಗಳ ಬಗ್ಗೆ ವಿವರವಾಗಿ ಬರೆದರೆ ಅದೊಂದು ಚರಿತ್ರೆಯ ಪಠ್ಯವಾಗುವುದರಿಂದ ಹೈದರಾಲಿಯ ಯುದ್ಧ ತಂತ್ರಗಳ ಬಗ್ಗೆ ವಿವರ ಹೇಳದೇ ಸುಮ್ಮನೆ ಅಲ್ಲಲ್ಲಿ ಒಂದೊಂದು ವಾಕ್ಯ ಬರೆದಿದ್ದೆ. ಆದರೆ ಒಂದಾದರೂ ಯುದ್ಧದ ವಿವರಣೆಯನ್ನು ಬ್ರಿಟಿಷರ ದಾಖಲೆಯಿಂದ ಅನುವಾದಿಸಬೇಕು ಅನ್ನುವ ತುಡಿತ ತೀವ್ರವಾಗಿ ಇದೊಂದನ್ನು ಬರೆಯುತ್ತಿದ್ದೇನೆ. ಇಪ್ಪತ್ತೆರಡನೆ ಶತಮಾನದಲ್ಲಿ ತಂತ್ರಜ್ಞಾನದ ಪರಾಕಾಷ್ಠೆಯಲ್ಲಿ ರಿಮೋಟ್ ದಾಳಿ ನಡೆಯುತ್ತಿರುವಾಗ – ನಿನ್ನೆ ಅಮೆರಿಕಾ ತನ್ನ ದೇಶದಲ್ಲೇ ಕೂತು ಕಾಬೂಲಿನ ಒಬ್ಬನೇ ಒಬ್ಬ ನಾಗರಿಕ ಸಾಯದಂತೆ ಪ್ಲಾನ್ ಮಾಡಿ ಭಯೋತ್ಪಾದಕರ ಮೇಲೆ ಬಾಂಬ್ ಹಾಕಿ ಯಶಸ್ವಿಯಾಗಿದ್ದು ನೋಡಿದರೆ – ಹೈದರಾಲಿಯ ಕಾಲದ ಯುದ್ಧ ರೀತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅದಕ್ಕಾಗಿ ಈ ವಿವರಣೆ.  ಇದು ಸಂಪೂರ್ಣ ಅನುವಾದ. ನನ್ನ ಸ್ವಂತ ಬರಹವಲ್ಲ. ಇದು ಸಿಕ್ಕಾಪಟ್ಟೆ ದೀರ್ಘವಾಗಿರುವುದರಿಂದ ಸ್ವಲ್ಪ ಸಂಗ್ರಹ ಮಾಡಿದ್ದೇನೆ, ಅಷ್ಟೇ. 

ಬ್ರಿಟಿಷರಿಗೆ ಭಾರತದಲ್ಲಿ ಉತ್ತಮ ಯುರೋಪಿಯನ್ ಅಶ್ವದಳವನ್ನು ರೂಪಿಸಲು ಸಾಧ್ಯವಾಗಲಿಲ್ಲ. ಈಗ ತಾನೇ ಇಂಗ್ಲೆಂಡಿನಿಂದ ಅಶ್ವದಳದ ಒಂದು ಪಡೆಯನ್ನು ಕಳಿಸಿರುವುದರಿಂದ ಇಲ್ಲಿ ನಾವು ಇನ್ನಷ್ಟು ಬಲಗೊಳ್ಳುವುದು ಸಾಧ್ಯ. ಇಂಗ್ಲಿಷ್ ಅಶ್ವದಳದ ಉತ್ಕೃಷ್ಟತೆಯ ಬಗ್ಗೆ ಈಗಾಗಲೇ ಯುರೋಪಿನಲ್ಲಿ ಸಾಕಷ್ಟು ಹೆಸರಾಗಿದೆ. ಅದರ ಕಾರಣ ಉತ್ತಮ ಕುದುರೆಗಳಿಗಿಂತ ಹೆಚ್ಚಾಗಿ ಉತ್ತಮ ಅಶ್ವಾರೋಹಿಗಳೇ ಆಗಿದ್ದಾರೆ.

ಇಂಗ್ಲೆಂಡಿನಲ್ಲಿ ಅಶ್ವಾರೋಹಿಗಳ ಸಂಬಳ ತುಂಬಾ ಉತ್ತಮವಾಗಿದ್ದು ಶ್ರೀಮಂತ ರೈತರು ಮತ್ತು ವ್ಯಾಪಾರಿಗಳ ಮಕ್ಕಳು ಅಶ್ವದಳಕ್ಕೆ ಸೇರಲು ಹಾತೊರೆಯುತ್ತಾರೆ. ಹೀಗಿರುವಾಗ ಅಧಿಕಾರಿಗಳು ಸಧೃಢ, ಸುಂದರ ಕಾಯದ, ಉತ್ತಮ ವ್ಯಕ್ತಿತ್ವವುಳ್ಳ ಯುವಕರನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲು ಗಮನಹರಿಸುತ್ತಾರೆ ಮತ್ತು ಅವರನ್ನು ಶಿಸ್ತಿನಿಂದ ಇರುವಂತೆ ಮಾಡಲು ಯಾವುದೇ ಕ್ಷಣದಲ್ಲಿ ಡಿಸ್ ಮಿಸ್ ಮಾಡುವ ಭಯವನ್ನು ಅಸ್ತ್ರವಾಗಿ ಬಳಸುತ್ತಾರೆ. ಈ ಅಧಿಕಾರಿಗಳ ಆದ್ಯ ಕರ್ತವ್ಯ ಎಂದರೆ ಭಾರತಕ್ಕೆ ಉತ್ತಮ ಅಶ್ವದಳವನ್ನು ಕಳಿಸುವುದಾಗಿದೆ.

ನಮ್ಮ ದೇಶದಲ್ಲಿ ಪಾಲಿಸುತ್ತಿದ್ದ ಶಿಸ್ತನ್ನೇ ಭಾರತದಲ್ಲೂ ಕಾಪಾಡಿಕೊಂಡು ಬರುವಂತೆ ಮಾಡುವುದು ಅವರ ಆದ್ಯತೆ ಆಗಿದೆ. ಸಾಮಾನ್ಯವಾಗಿ ಇಂಗ್ಲೆಂಡಿನಿಂದ ಭಾರತಕ್ಕೆ ಕಳಿಸುತ್ತಿದ್ದ ಅಶ್ವಾರೋಹಿಗಳು ಕೆಟ್ಟಸ್ವಭಾವದವರಾಗಿದ್ದು ಸ್ವೇಚ್ಚಾಚಾರ ಬಯಸುವವರಾಗಿರುತ್ತಾರೆ. ಕಂಪನಿಯು (ಈಸ್ಟ್ ಇಂಡಿಯಾ ಕಂಪನಿ) ಸೈನಿಕರನ್ನು ಡಿಸ್ ಮಿಸ್ ಮಾಡುತ್ತಿಲ್ಲವಾದ ಕಾರಣ ಅಶ್ವಾರೋಹಿಗಳಿಗೆ ವಿಧಿಸುತ್ತಿದ್ದ ದೊಡ್ಡ ಶಿಕ್ಷೆ ಎಂದರೆ ಇನ್ ಫೆಂಟ್ರಿ ಅಥವಾ ಕಾಲಾಳಾಗಿ ಸೇವೆ ಮಾಡಬೇಕಾಗಿರುವುದು. ಅದರಿಂದ ಅವರ ಸಂಬಳ ಕಡಿಮೆ ಆಗುತ್ತದೆ  ಅಷ್ಟೇ. ಆದರೆ ಫ್ರೆಂಚರು ಭಾರತದಲ್ಲಿ ಅತ್ಯುತ್ತಮ ಅಶ್ವದಳವನ್ನು ಇಟ್ಟಿರಲು ಕಾರಣ ಅವರು ಶಿಸ್ತಿಗಿಂತ ಹೆಚ್ಚಾಗಿ ಅಶ್ವಾರೋಹಿಯ ಸಾಮರ್ಥ್ಯದ ಬಗ್ಗೆಯೇ ಹೆಚ್ಚು ಗಮನ ಕೊಡುತ್ತಿರುವುದು. 

ಮದ್ರಾಸಿನಲ್ಲಿದ್ದ ಮೂವತ್ತು ಸಾವಿರಕ್ಕೂ ಮೀರಿದ ಇಂಗ್ಲಿಷ್ ಸೈನ್ಯ, ಜೊತೆಗೆ ಮಹಮದಲಿ ಖಾನ್ ನ ಸೈನ್ಯ, ಜೊತೆಗೆ ಕೆಲವು ಪಾಳೆಯಗಾರರ ದಂಡು, ಜೊತೆಗೆ ಮರಾಠರ ಇಪ್ಪತ್ತು ಸಾವಿರ ಸೈನಿಕರು. ಕನಿಷ್ಠ ಐವತ್ತು ಸಾವಿರ ಸೈನಿಕರ ಸೇನೆಯನ್ನು ಹೈದರಾಲಿಯ ವಿರುದ್ಧ ಆರ್ಕಾಟನ್ನು ರಕ್ಷಿಸಲು ನೇಮಿಸಲಾಯಿತು. ಅತ್ತ ಹೈದರಾಲಿ ಬಾಂಬೆ ಪ್ರೆಸಿಡೆನ್ಸಿಯ ಎಂಟು ಸಾವಿರ ಸೈನಿಕರು ಮಂಗಳೂರಿಗೆ ದಾಳಿ ಮಾಡಿದಾಗ ಅವರ ವಿರುದ್ಧ ಸ್ವತಃ ಯುದ್ಧ ಸನ್ನದ್ಧನಾಗಿದ್ದ. 

‘ಬ್ರಿಟಿಷ್ ಸೈನ್ಯ ಜನರಲ್ ಸ್ಮಿತ್ ನಾಯಕತ್ವದಲ್ಲಿ ಸಾಗಿತ್ತು. ಸ್ಮಿತ್ ಗೆ ಶಿಸ್ತಿನ ಸೈನ್ಯದ ಅನುಕೂಲವಿತ್ತು, ಅದರಲ್ಲಿ ಅತ್ಯಂತ ಸಮರ್ಥರಾದ ಹಲವಾರು ಯುರೋಪಿಯನ್ ಪಡೆಗಳಿಂದ ಕೂಡಿದ್ದು, ಯುದ್ಧಕ್ಕೆ ಮೊದಲು ಗೆಲುವಿನ ಅತಿ ವಿಶ್ವಾಸ ಇತ್ತು. ಅವರೆಲ್ಲ ಪರ್ಷಿಯಾದ ನಾದಿರ್ ಷಾನ ಸೈನ್ಯದೊಡನೆ ಹೋರಾಡಿ ಗೆದ್ದವರಾಗಿದ್ದರು. ಜೊತೆಗೆ ಬಂದೂಕುಗಳ ಸಂಖ್ಯೆಯೂ ಅಧಿಕವಾಗಿತ್ತು. ಹಾಗಾಗಿ ಸ್ಮಿತ್ ಹೈದರಾಲಿಯ ಸೈನ್ಯವನ್ನು ಸುಮ್ಮನೆ ಧೂಳಿಪಟ ಮಾಡುವ ಬಗ್ಗೆ ಅತಿ ಆತ್ಮವಿಶ್ವಾಸದಿಂದ ಕೂಡಿದ್ದ. 

ಆದರೆ ಈ ಆತ್ಮವಿಶ್ವಾಸಕ್ಕೆ ವಿರುದ್ಧವಾಗಿ ಸ್ಮಿತ್ ಗೆ ಹಲವಾರು ಅನಾನುಕೂಲಗಳೂ ಇದ್ದವು. ಮೊದಲನೆಯದಾಗಿ ಅವನ ಅಶ್ವಾರೋಹಿಗಳ ಧೋರಣೆ – ಮೊದಲೇ ಹೇಳಿದಂತೆ ಸ್ವೇಚ್ಛಾಚಾರಿಗಳಾಗಿದ್ದರು. ಅವರಿಗೆ ಭಾರತದ ಗುಡ್ಡಗಾಡಿನ ಪ್ರದೇಶದಲ್ಲಿ ಯುದ್ಧಮಾಡಿದ ಅನುಭವವಿರಲಿಲ್ಲ. ಎರಡನೆಯದಾಗಿ ಅವರನ್ನು ಭಾರತವನ್ನು ಕೊಳ್ಳೆ ಹೊಡೆಯುವುದರಿಂದ ತಡೆಯುವ ಸಾಮರ್ಥ್ಯ ಸ್ಮಿತ್ ಗೆ ಇರಲಿಲ್ಲ. ಕೊಳ್ಳೆ ಹೊಡೆಯುವುದು ಅವರ ಮೂಲ ಉದ್ದೇಶವಾಗಿತ್ತು. (ಬ್ರಿಟಿಷ್ ಸಿಪಾಯಿಗಳು ಭಾರತದಿಂದ ಕೊಳ್ಳೆ ಹೊಡೆದ ಸಂಪತ್ತಿಗೆ ಲೆಕ್ಕವೇ ಇಲ್ಲ) ಮೂರನೆಯದಾಗಿ ತನ್ನ ಸೈನ್ಯದ ಸರಂಜಾಮುಗಳನ್ನು ಹೊತ್ತೊಯ್ಯಲು ಅವನ ಬಳಿ ಸಾಕಷ್ಟು ಸಂಖ್ಯೆಯ ಎತ್ತುಗಳಿರಲಿಲ್ಲ. ಹಾಗಾಗಿ ಸೈನ್ಯಕ್ಕೆ ಅಗತ್ಯವಾದಷ್ಟು ದಿನಸಿ, ಮದ್ದು ಗುಂಡು ಇತ್ಯಾದಿಗಳನ್ನು ಹೊತ್ತೊಯ್ಯಲು ಅವನಿಗೆ ಸಾಧ್ಯವಿರಲಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಅವನು ಮದ್ರಾಸಿನ ಗವರ್ನರ್ ಮತ್ತು ಕೌನ್ಸಿಲ್ ಗಳ ಮೇಲೆ ಅವಲಂಬಿಸಬೇಕಾಗಿತ್ತು. ಅವರ್ಯಾರಿಗೂ ಹೈದರಾಲಿಯ ಸೈನ್ಯದ ಸಾಮರ್ಥ್ಯ ಗೊತ್ತಿರಲಿಲ್ಲ. ಹೈದರನ ಸೈನ್ಯದ ಸಂಖ್ಯೆಯಾಗಲಿ ಶಿಸ್ತಿನ ಬಗ್ಗೆ ಆಗಲಿ ಸ್ವಲ್ಪ ಕೂಡಾ ಮಾಹಿತಿ ಇರಲಿಲ್ಲ. ಅಷ್ಟಲ್ಲದೇ ಭಾರತದ ಪ್ರಾಂತ್ಯಗಳ ಭೌಗೋಳಿಕ ಸ್ಥಿತಿಗತಿಗಳ ಪರಿಚಯವೇ ಇಲ್ಲದೇ ಸ್ಮಿತ್ ನ ಆಜ್ಞೆಗೆ ತದ್ವಿರುದ್ಧ ಆಜ್ಞೆಗಳನ್ನು ಹೊರಡಿಸುತ್ತಿದ್ದರು. ಸ್ಮಿತ್ ಮೊದಲೇ ಈ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರೂ ಅದನ್ನು ಪರಿಗಣಿಸುತ್ತಿರಲಿಲ್ಲ. ಇದು ಸ್ಮಿತ್ ಗೆ ಎಷ್ಟರಮಟ್ಟಿಗೆ ಅಡ್ಡಿಯಾಯಿತೆಂದರೆ ಕೊನೆಗೆ ಹೈದರನ ಸೈನ್ಯ ಬ್ರಿಟಿಷ್ ಸೈನ್ಯವನ್ನು ಸೂರೆ ಮಾಡಿ ಲಂಗುಲಗಾಮಿಲ್ಲದಂತೆ ಬಗ್ಗುಬಡಿದಾಗ ಅವರೆಲ್ಲರೂ ಸ್ಮಿತ್ ಮೇಲೆ ತಪ್ಪು ಹೊರೆಸಿ ಅವನು ಸರಿಯಾಗಿ ಯುದ್ಧ ಮಾಡಲಿಲ್ಲ ಎಂದು ದೂಷಿಸಿದರು!   

ಆದರೆ ಸತ್ಯಸಂಗತಿ ಏನೆಂದರೆ ಅವರೆಲ್ಲರೂ (Those gentleman) ಒಂದು ಕ್ಷಣಕ್ಕೂ ಸ್ವಂತ ಲಾಭಕ್ಕೆ ಲೂಟಿ ಮಾಡಿಕೊಳ್ಳುವ ಉದ್ದೇಶವನ್ನು ಮರೆಯಲಿಲ್ಲ! ಇದಕ್ಕಾಗಿ ಅವರು ಸೈನ್ಯಕ್ಕೆ ಕಂಟ್ರಾಕ್ಟರುಗಳ ಮೂಲಕ ಸರಬರಾಜು ಮಾಡುತ್ತಿದ್ದರು ಮತ್ತು ಅವರ ಜೊತೆ ಶಾಮೀಲಾಗಿದ್ದರು. ಅವರು ಸೈನ್ಯಕ್ಕೆ ಸರಬರಾಜು ಮಾಡುವ ನೆಪದಲ್ಲಿ ಮದ್ರಾಸಿನ ಜನರನ್ನು ಎಷ್ಟರಮಟ್ಟಿಗೆ ಲೂಟಿ ಮಾಡಿದರು ಎಂದರೆ ಅದಕ್ಕಾಗಿ ಹೊಸದಾಗಿ ಕಂಡುಹಿಡಿದ ಎರಡು ಉದಾಹರಣೆಗಳು ಸಾಕು ಅದರ ವಿರಾಟ್ ಸ್ವರೂಪವನ್ನು ತೋರಿಸಲು:

ಮೊದಲನೆಯದು ಸೈನಿಕರಿಗೆ ಸುಲಭವಾಗಿ ಸಿಗುವ ಸಾರಾಯಿ ಕೊಡುವ ಬದಲು ರಮ್ ಕೊಡಬೇಕೆಂದು ನಿರ್ಧರಿಸಲಾಯಿತು. ಏಕೆಂದರೆ ಇದನ್ನು ಬಟಾವಿಯಾದಿಂದಲೇ ತರಿಸಬೇಕಿತ್ತು ಮತ್ತು ಅಲ್ಲಿಂದ ತರಿಸಿಕೊಡುವವರು ಇದರಿಂದ ಲಾಭ ಗಳಿಸುತ್ತಿದ್ದರು. ಜೊತೆಗೆ ನಡುವೆ ಅಧಿಕಾರಿಗಳು ಕಟ್ ಪಡೆಯಬಹುದಿತ್ತು. ಎರಡನೆಯದು ಸೈನ್ಯದ ಸಾಮಾನು ಸರಂಜಾಮುಗಳನ್ನು ಹೊತ್ತೊಯ್ಯಲು ಎತ್ತುಗಳ ಸರಬರಾಜು ಕುರಿತದ್ದು. ಅಷ್ಟು ಸಂಖ್ಯೆಯ ಎತ್ತುಗಳನ್ನು ಸರಬರಾಜು ಮಾಡುವುದು ಸುಲಭವಲ್ಲದ ಕಾರಣ ಜನರ ಎತ್ತುಗಳನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿದ್ದರು. ಎತ್ತುಗಳ ಬದಲಿಗೆ ಜನರಿಗೆ ಅವುಗಳ ನಿಜ ಬೆಲೆಯಾದ ಆರರಿಂದ ಎಂಟು ವರಹಗಳ ಹಣ ಕೊಡುವ ಬದಲು ತಿಂಗಳಿಗೆ ಒಂದು ವರಹ ಬಾಡಿಗೆ ಕೊಡುವ ಒಪ್ಪಂದ ಮಾಡು (ಹೇರು)ತ್ತಿದ್ದರು.

ಮೊದಲ ತಿಂಗಳು ಸರಿಯಾಗಿ ಒಂದು ವರಹ ಕೊಡುತ್ತಿದ್ದರು. ಎರಡನೆಯ ತಿಂಗಳ ಕೊನೆಯಲ್ಲಿ ಎತ್ತು ಸತ್ತುಹೋಯಿತೆಂದು ಎತ್ತಿನ ಮಾಲೀಕರಿಗೆ ಹೇಳಿಬಿಡುತ್ತಿದ್ದರು. ಆದರೆ ಕಂಪನಿಯ ಲೆಕ್ಕದಲ್ಲಿ ಎತ್ತುಗಳನ್ನು ಖರೀದಿಸಲಾಯಿತೆಂದು ದಾಖಲಿಸುತ್ತಿದ್ದರು. ಬ್ರಿಟಿಷ್ ಅಧಿಕಾರಿ ಎತ್ತಿನ ಜೊತೆಗೆ ಒಬ್ಬ ಸೇವಕನನ್ನು ಇಟ್ಟುಕೊಳ್ಳಲು ಬಯಸಿದರೆ ಅವನಿಗೆ ತಿಂಗಳಿಗೆ ಐದು ರೂಪಾಯಿಗಳ ಸಂಬಳ ಕೊಡಬೇಕಿತ್ತು. ಇದನ್ನೂ ಅಧಿಕಾರಿಗಳು ಅಪ್ಲೈ ಮಾಡಿ ಪಡೆಯುತ್ತಿದ್ದರು. ಈ ಸುಂದರ ಯೋಜನೆಯಿಂದ ಬಹಳ ಬೇಗ ಮದ್ರಾಸಿನಲ್ಲಿ ಒಂದೇ ಒಂದು ಎತ್ತೂ ಸಹ ಸಿಗುತ್ತಿರಲಿಲ್ಲ. ಹೊರಗಿನಿಂದ ಖರೀದಿಸಲು ಬಯಸುವವರೂ ಸಹ ಯಾವಾಗ ಬ್ರಿಟಿಷರು ಬಂದು ಎತ್ತನ್ನು ಎಳೆದುಕೊಂಡು ಹೋಗುವರೋ ಎನ್ನುವ ಭಯದಲ್ಲಿ ಎತ್ತಿನ ಖರೀದಿಯನ್ನೇ ನಿಲ್ಲಿಸಿಬಿಟ್ಟರು. ಇದರಿಂದಾಗಿ ಸೈನ್ಯಕ್ಕೆ ಅಗತ್ಯವಾದ ಸಾಮಾನು ಹೊತ್ತೊಯ್ಯಲು ಕೂಲಿಗಳನ್ನೇ ನೇಮಿಸಿಕೊಳ್ಳಬೇಕಾಯಿತು. 

ಪ್ರಾರಂಭದಲ್ಲಿ ಸ್ಮಿತ್ ಸಣ್ಣ ಪುಟ್ಟ ಊರುಗಳನ್ನು ಸುಲಭವಾಗಿ ತನ್ನ ವಶಕ್ಕೆ ತೆಗೆದುಕೊಂಡ. ತಿರುಪತ್ತೂರು, ವಾಣಿಯಂಬಾಡಿ, ಕಾವೇರಿ ಪಟ್ನಮ್ ಕೊನೆಗೆ ಕೃಷ್ಣಗಿರಿ ಕೋಟೆಯನ್ನೂ ಗೆದ್ದುಕೊಂಡ. ಬೆಂಗಳೂರಿನಿಂದ ಕೃಷ್ಣಗಿರಿ ಇಪ್ಪತ್ತೆರಡು ಗಾವುದ ದೂರವಿದೆ. ಆದರೆ ಅದನ್ನು ತಲುಪಲು ಎರಡು ಕಿರಿದಾದ ಕಿಬ್ಬಿಗಳನ್ನು ಹಾದುಹೋಗಬೇಕು. 

ಹೈದರ್ ಬೆಂಗಳೂರಿನಿಂದ ಹೊರಟು ಎರಡನೇ ದಿನ ಬೆಟ್ಟದ ಬುಡ ತಲುಪಿದ. ಅದು ವೆಲ್ಲೂರು ಪಾಸ್ ನ ಎದುರು ಕಾವೇರಿ ಪಟ್ನದಿಂದ ನಾಲ್ಕು ಗಾವುದ ದೂರದಲ್ಲಿತ್ತು. ಕೃಷ್ಣಗಿರಿಯ ಬಲಬದಿಗೆ ಏಳು ಗಾವುದ ದೂರದಲ್ಲಿ ಪಾಲೇರ್ ಮತ್ತು ವಾಣಿಯಂಬಾಡಿಯಿಂದ ಎರಡು ಗಾವುದ ಅಂತರದಲ್ಲಿ ವೆಂಕಟಗಿರಿ ಪಾಸ್ ನಿಂದ ಆರು ಗಾವುದ ದೂರದಲ್ಲಿತ್ತು. ಬೆಂಗಳೂರಿನಿಂದ ಸೈನ್ಯ ಹೊರಟ ಬಗ್ಗೆ ಬ್ರಿಟಿಷ್ ಅಧಿಕಾರಿಗೆ ಮಾಹಿತಿ ತಿಳಿದಿದ್ದು ತಡವಾಗಿ. ಅದೂ ನಿಜಾಮನ ಸೈನ್ಯದ ಬೇಹುಗಾರರಿಗೆ ಲಂಚ ಕೊಟ್ಟಿದ್ದರಿಂದ. 

ಮಾಹಿತಿ ತಿಳಿದ ಮೇಲೆ ಸ್ಮಿತ್ ಕೃಷ್ಣಗಿರಿಯಲ್ಲಿ ಭದ್ರತೆಯನ್ನು ಹೆಚ್ಚಿಸಿ ತಾನು ಸ್ವತಃ ವೆಲ್ಲೂರು ಪಾಸಿನಲ್ಲಿ ರಕ್ಷಣೆಗೆ ನಿಂತ. ಫಿರಂಗಿಯನ್ನು ಎಳೆದುಕೊಂಡು ಹೋಗಲು ವೆಲ್ಲೂರು ಪಾಸ್ ಒಂದೇ ಸೂಕ್ತ ಮಾರ್ಗವಾಗಿತ್ತು. ಕಾವೇರಿ ಪಟ್ನಮ್ ಹಿಂದಿದ್ದರಿಂದ ವೆಲ್ಲೂರು ಪಾಸ್ ನಟ್ಟನಡುವಿನಲ್ಲಿದ್ದು ಹೈದರ್ ಆ ಪಾಸ್ ಮೂಲಕ ದಾಳಿ ಮಾಡಿದರೆ ಅಗತ್ಯಬಿದ್ದಲ್ಲಿ ಓಡಿಹೋಗಲು (ಬ್ರಿಟಿಷ್ ಸೈನ್ಯ) ಸೂಕ್ತ ಸ್ಥಳವಾಗಿತ್ತು. 

ಇತ್ತ ಹೈದರ್ ತನ್ನ ಸೇನಾಧಿಕಾರಿಗಳನ್ನು ಮೀಟಿಂಗ್ ಕರೆದು ಯುದ್ಧ ತಂತ್ರವನ್ನು ಚರ್ಚಿಸಿದ. ಮೂರು ಪಾಸ್ ಗಳಲ್ಲಿ ಯಾವುದನ್ನು ಆರಿಸಿಕೊಳ್ಳಬೇಕು ಎನ್ನುವುದು ಚರ್ಚೆಯ ವಿಷಯವಾಗಿತ್ತು. ಪ್ರತಿ ಪಾಸ್ ನ ನಕ್ಷೆ ತಯಾರಿಸಿ ಪ್ರತಿಯೊಂದು ಸಣ್ಣ ವಿಷಯವನ್ನೂ ಕೂಲಂಕಷವಾಗಿ ಚರ್ಚಿಸಲಾಯಿತು. ಇಂಗ್ಲಿಷರು ವೆಲ್ಲೂರು ಪಾಸಿನಲ್ಲಿ ತಮ್ಮ ಸಮಸ್ತ ಸೈನ್ಯವನ್ನು ನಿಲ್ಲಿಸಿ ಕಾಯುತ್ತಿದ್ದುದರಿಂದ ಮತ್ತು ಕೃಷ್ಣಗಿರಿ ಪಾಸ್ ಮೂಲಕ ಫಿರಂಗಿಯನ್ನು ಎಳೆದುಕೊಂಡು ಹೋಗುವುದು ಅಸಾಧ್ಯವಾದ್ದರಿಂದ ವೆಂಕಟಗಿರಿ ಪಾಸ್ ನಿಂದ ಸಾಗುವುದು ಉತ್ತಮ ಎಂದು ತೀರ್ಮಾನಿಸಲಾಯಿತು.

ನಿಜಾಮನ ಸೈನ್ಯ ಹೈದರನ ಸೈನ್ಯದ ಎಡಬದಿಗಿದ್ದು, ಪಾಸ್ ಗೆ ಸಮೀಪವಾಗಿದ್ದರೂ ಸಹ, ಅವನಿಗೆ ಹೇಳದೇ ಹೈದರಾಲಿ ಮುಂಜಾನೆ ಎರಡು ಗಂಟೆ ಹೊತ್ತಿಗೆ ತನ್ನದೇ ಸೈನ್ಯಕ್ಕೆ ತಮ್ಮ ಸರಕುಗಳನ್ನೆಲ್ಲ ಕ್ಯಾಂಪಿನಲ್ಲೇ ಬಿಟ್ಟು ಸಾಲಾಗಿ ಒಂಟಿ ಸೈನಿಕರ ದಂಡಾಗಿ ಸಾಗಲು ಅಪ್ಪಣೆ ಕೊಟ್ಟ. 

ಕರ್ನಾಟಕದವರು ಮತ್ತು ಇತರ ಹಂಗಾಮಿ ಸೈನಿಕರ ದಂಡು ಮುಂಚೂಣಿಯಲ್ಲಿತ್ತು.  ಅವರ ಹಿಂದೆ ಸಿಪಾಯಿ ಅಥವಾ ಕಾಲಾಳುಗಳು. ಒಬ್ಬೊಬ್ಬನ ಹಿಂದೆ ಗ್ರೆನೇಡಿಯರ್ ಗಳು. ಅವರ ಹಿಂದೆ ಅಶ್ವದಳ. ಅವರ ಹಿಂದೆ ಶಸ್ತ್ರಪಡೆ. ಅವರ ಹಿಂದೆ ಎರಡು ಸಾವಿರ ತೋಪಾಸಿಗಳು, ಅವರ ಮದ್ದುಗುಂಡಿ ಸಾಗಿಸುವವರು. ಅವರ ಹಿಂದೆ ಯುರೋಪಿಯನ್ ಪಿರಂಗಿದಾರರು. ಎಲ್ಲಕ್ಕಿಂತ ಹಿಂದೆ ಯುರೋಪಿಯನ್ ಅಶ್ವದಳದ ಎರಡು ಪಡೆ. ಈ ಸಾಲಿನ ಬಲಬದಿಗೆ ಹೈದರ್ ಸ್ವತಃ ಕುದುರೆ ಏರಿ ಸಾಗಿದ. ಅವನ ಹಿಂದೆ ಎರಡು ಸಾವಿರ ಅಶ್ವದಳ. ಇದು “ವ್ಯೂಹ” ರಚನೆ.

ಈ ಆರ್ಡರ್ ಅನ್ನು ಲಂಚ್ ಪಡೆದ ನಿಜಾಮನ ಬೇಹುಗಾರರು ಸ್ಮಿತ್ ಗೆ ತಿಳಿಸಿದರು. ಸ್ಮಿತ್ ತಕ್ಷಣ ವೆಲ್ಲೂರು ಪಾಸ್ ಬಿಟ್ಟು ವೆಂಕಟಗಿರಿ ಪಾಸ್ ಕಡೆಗೆ ಧಾವಿಸಿದ. ಅದು ಕೇವಲ ಮೂರು ಗಾವುದ ದೂರದಲ್ಲಿದ್ದುದರಿಂದ ಸುಲಭವಾಗಿ ಸ್ಮಿತ್ ಸೈನ್ಯ ಸಾಗಬಹುದಿತ್ತು. ಆದರೆ ಆ ಗುಡ್ಡಗಾಡಿನ ರಸ್ತೆ ಬ್ರಿಟೀಷ್ ಸೈನ್ಯಕ್ಕೆ ಪರಿಚಿತ ಹಾದಿಯಾಗಿರಲಿಲ್ಲ. ಒಂದು ಗಂಟೆ ನಡೆಯುವಷ್ಟರಲ್ಲಿ ಸುಸ್ತಾಗಿ ಯುರೋಪಿಯನ್ ಸೈನಿಕರು, ತೋಪಾಸಿಗಳು ಮತ್ತು ಶಸ್ತ್ರಪಡೆ ಬಲಗಡೆಗೆ ತಿರುಗಿ ವೆಲ್ಲೂರು ಪಾಸ್ ಕಡೆಗೆ ತ್ವರಿತಗತಿಯಲ್ಲಿ ಸಾಗಿದರು. 

ಈ ಪಡೆಯ ಮುಖ್ಯ ಕರ್ತವ್ಯ ಶಸ್ತ್ರಪಡೆಯ ಬೆಂಗಾವಲಾಗಿರುವುದೇ ಆಗಿದ್ದರಿಂದ ಅವರಿಗೂ ತೋಪಾಸಿಗಳ ಹಿಂದಿದ್ದ ಬೆಂಗಾಲಿನ ಪಡೆಗೂ (ಕ್ಯಾವಲ್ರಿ ) ನಡುವೆ ಸಾಕಷ್ಟು ಅಂತ ಏರ್ಪಟ್ಟಿತು. ಈ ಪಡೆಯ ಮುಖ್ಯಸ್ಥನಿಗೆ ಮಾತ್ರ ಬದಲಾದ ಮಾರ್ಗದ ರಹಸ್ಯ ತಿಳಿದಿದ್ದರಿಂದ ಆತ ದೀರ್ಘವಾದ ಅಂಕುಡೊಂಕಾದ ಆದರೆ ಮಟ್ಟಸವಾದ ಹಾದಿಯಲ್ಲಿ ಶೀಘ್ರವಾಗಿ ಸೇನೆಯನ್ನು ಸಾಗಿಸಿಕೊಂಡು ಬಂದ. ಜನರಲ್ ಸ್ಮಿತ್ ಮುಂದಾಲೋಚನೆಯಿಂದ ಮಹಮದ್ ಅಲಿಯ (ಇವನು ಬ್ರಿಟಿಷರಿಗೆ ನೆರವಾದ) ಸೈನ್ಯದ ಸ್ವಲ್ಪ ಭಾಗವನ್ನು ವೆಲ್ಲೂರು ಪಾಸ್ ನಲ್ಲೆ ಬಿಟ್ಟು ಬಂದಿದ್ದ. ಹೈದರನ ಅಶ್ವದಳ ಕೃಷ್ಣಗಿರಿಯನ್ನು ದಾಟಿ ಸಾಗಿಬಂದಂತೆ ಅದನ್ನು ಕಂಡು ಸ್ಮಿತ್ ಹಿಂದೆ ಬಿಟ್ಟಿದ್ದ ಪಡೆ ತಮ್ಮ ಸ್ಥಳವನ್ನು ಬಿಟ್ಟು ನಾಗಾಲೋಟದಿಂದ ಕಾವೇರಿ ಪಟ್ನಮ್ ಕಡೆಗೆ ಸಾಗಿತು.

ಯುರೋಪಿಯನ್ ಕಮಾಂಡೆಂಟ್ ತನ್ನ ಪೋಸ್ಟ್ ಅನ್ನು ಬಿಟ್ಟು ಜಾಗ ಖಾಲಿ ಮಾಡಿದಂತೆಯೇ ಫ್ರೆಂಚ್ ಸೇನಾಧಿಕಾರಿಯಾಗಿದ್ದ ಪಠಾಣ್ ಬಹೌದ್ ಖಾನ್ ಒಂಭತ್ತು ಪಿರಂಗಿಗಳಲ್ಲಿ ಮೂರು ಮೂರು ತೋಪು ಹಾರಿಸಿದ. 

ಇದು ಹೈದರ್ ಮತ್ತು ಬಹೌದ್ ಖಾನ್ ನಡುವೆ ಮಾಡಿಕೊಂಡ ಸನ್ನೆಯ ಒಪ್ಪಂದವಾಗಿತ್ತು. ಅಂದರೆ ಪಾಸ್ ಖಾಲಿಯಾಗಿದೆ ಬರಬಹುದು ಅನ್ನುವ ಸಂಕೇತ. (ಫ್ರೆಂಚರಿಗೆ ಹೈದರ್ ಬಹಳ ಪ್ರಿಯನಾಗಿದ್ದ)  

ತಕ್ಷಣ ಹೈದರ್ ತನ್ನ ಸೈನ್ಯದೊಡನೆ ವೆಲ್ಲೂರು ಪಾಸ್ ಕಡೆಗೆ ಧಾವಿಸಿ ಬಂದ. 

ಅತ್ತ  ವೆಂಕಟಗಿರಿ ಪಾಸ್ ಕಡೆಗೆ ಸಾಗಿದ್ದ ಸ್ಮಿತ್ ಹೈದರನ ಸೈನ್ಯ ವೆಲ್ಲೂರು ಪಾಸ್ ದಾಟುತ್ತಿದೆ ಎನ್ನುವ ಸುದ್ದಿ ತಿಳಿದು ಮತ್ತೆ ತನ್ನ ಸೈನ್ಯಕ್ಕೆ ಕಾವೇರಿ ಪಟ್ನಕ್ಕೆ ಸಾಗಲು ಆದೇಶ ನೀಡಿದ. ತನ್ನ ಅತ್ಯುತ್ತಮ ಸಾವಿರದ ಇನ್ನೂರು ಸಿಪಾಯಿಗಳನ್ನು ಮೂವತ್ತು ಯುರೋಪಿಯನ್ ಪಿರಂಗಿದಾರರನ್ನು ಮತ್ತು ಕೆಲವು ತೋಪಾಸಿಗಳನ್ನು ಸಾಗಲು ಹೇಳಿ ತಾನು ತಿರುಪತ್ತೂರಿಗೆ ಹೋದ, ಮದ್ರಾಸಿನಿಂದ ಬರುತ್ತಿದ್ದ ಇನ್ನಷ್ಟು ಪಡೆಗಳನ್ನು ಸ್ವೀಕರಿಸಲು. ಕರ್ನಲ್ ವುಡ್ ನೇತೃತ್ವದಲ್ಲಿ ಮದ್ರಾಸಿನಿಂದ ಏಳು ಅಥವಾ ಎಂಟು ಸಾವಿರ ಸಿಪಾಯಿಗಳು ಬರುವವರಿದ್ದರು. 

ಅತ್ತ ಹೈದರಾಲಿಯ ಸೈನ್ಯ ಒಂದೇ ದಿನದಲ್ಲಿ ಪಾಸ್ ದಾಟಿಬಿಟ್ಟಿತು. ರಾತ್ರಿಯ ಸಮಯದಲ್ಲಿ ಸಾಮಾನು ಮತ್ತು ದಿನಸಿಗಳು ಬಂದವು.  ಇತ್ತ ಇಡೀ ದಿನ ಮುಂಜಾನೆಯಿಂದ ರಾತ್ರಿಯವರೆಗೆ ಅಲೆದಾಡಿ ಸುಸ್ತಾಗಿದ್ದ ಯುರೋಪಿಯನ್ ಸೈನ್ಯ ಕಾಡಿನಲ್ಲಿ ಬೇಟೆ ಆಡಿಕೊಂಡು ಮಾಂಸ ಸಹಿತ ಸಾಗಿ ರಾತ್ರಿ ಮಾಂಸವನ್ನು ಬೇಯಿಸಿಕೊಂಡು ತಿನ್ನಬೇಕೆಂದು ಕಾತರರಾಗಿದ್ದರೆ, ಅಡಿಗೆಯವರು ಬರುವುದು ತಡವಾಗಿ ಅವರಿಗಾಗಿ ಕಾಯುತ್ತಿದ್ದರು. 

ಬೆಟ್ಟದ ಪಾಸ್ ದಾಟಿ ಬಂದ ಹೈದರ್ ತಡಮಾಡದೆ ತನ್ನ ಬಾಮೈದ ಮಖ್ದುಮ್ ಅನ್ನು ನಾಲ್ಕು ಸಾವಿರ ಅಶ್ವಾರೋಹಿಗಳ ಜೊತೆ ಕಾವೇರಿ ಪಟ್ಟಣವನ್ನು ಮುತ್ತಿಗೆ ಹಾಕಿ ಇಂಗ್ಲಿಷ್ ಸೈನ್ಯವನ್ನು ಹಿಗ್ಗಾಮುಗ್ಗಾ ಚಚ್ಚಲು ಕಳಿಸಿದ. ಅವನ ಆಜ್ಞೆಯನ್ನು ಅವನ ಸೈನ್ಯ ಎಷ್ಟು ಚೆನ್ನಾಗಿ ಪಾಲಿಸಿತು ಅಂದರೆ ಕಾವೇರಿ ಪಟ್ಟಣವನ್ನು ಲೂಟಿ ಮಾಡಿದ್ದಲ್ಲದೆ ತಿರುಪತ್ತೂರನ್ನು ತಲುಪುವ ಎಲ್ಲಾ ಮಾರ್ಗಗಳನ್ನು ಮುಚ್ಚಿತು. ಜನರಲ್ ಸ್ಮಿತ್ ತಾನು ಹಿಂದೆ ಬಿಟ್ಟಿದ್ದ ನೂರು ಅಶ್ವದಳವನ್ನು ಪಟ್ಟಣದೊಳಗೆ ಕೂಡಿಹಾಕಲಾಯಿತು. ಬೇಹುಗಾರರನ್ನು ಅಡ್ಡ ಹಾಕಿ ಸ್ಮಿತ್ ಗೆ ತಲುಪಬೇಕಾಗಿದ್ದ ಎಲ್ಲ ಪತ್ರ ಮತ್ತು ಮಾಹಿತಿಯನ್ನು ಕಿತ್ತುಕೊಂಡು ಹೈದರನಿಗೆ ತಲುಪಿಸಲಾಯಿತು. ಅದರಿಂದ ಜನರಲ್ ಸ್ಮಿತ್ ಮತ್ತು ನಿಜಾಮನ ನಡುವೆ ಸ್ನೇಹದ ಪತ್ರ ವ್ಯವಹಾರ ನಡೆಯುತ್ತಿದೆ, ನಿಜಾಮನನ್ನು ನಂಬಬಾರದು ಎನ್ನುವ ಹೈದರನ ಸಂಶಯ ದೃಢಪಟ್ಟಿತು. (ಆ ಸಂಶಯದಿಂದಲೇ ಹೈದರ್ ಪ್ರಾರಂಭದಲ್ಲಿ ನಿಜಾಮನ ಸೈನ್ಯಕ್ಕೆ ಮಾಹಿತಿ ನೀಡದೇ ಸಾಗಿದ್ದು)

ಮಖ್ದುಮ್ ಕಾವೇರಿ ಪಟ್ನದಲ್ಲಿ ತನ್ನ ಸೇನಾಪತಿಯನ್ನು ನಿಲ್ಲಿಸಿ ತಿರುಪತ್ತೂರಿಗೆ ಬಂದ. ಅತ್ತ ಜನರಲ್ ಸ್ಮಿತ್ ಎರಡನೇ ದಿನ ಸಂಜೆ ತನ್ನ ಕ್ಯಾಂಪ್ ತಲುಪಿದವನು ತನಗೆ ಏನೂ ಸುದ್ದಿ ಬರದೇ ಇರಲು ಕಾರಣ ಹೈದರನ ಪಾಳಯದಲ್ಲಿ ಏನೂ ಆಗುತ್ತಿಲ್ಲ ಅದಕ್ಕೇ ಎಂದುಕೊಂಡು ನಿರಾಳನಾಗಿದ್ದ. ಹಾಗಾಗಿ ಬೆಳಗ್ಗೆ ತನ್ನ ಸೈನ್ಯದ ಎತ್ತುಗಳನ್ನು ಮೇಯಿಸಿಕೊಂಡು ಬರಲು ಸೇವಕರನ್ನು ಕಳಿಸಿದ.  

ಮೈದಾನದಲ್ಲಿ ಎತ್ತುಗಳು ಮೇಯುತ್ತಿರುವುದು ತಿಳಿಯುತ್ತಲೇ ಮಖ್ದುಮ್ ತನ್ನ ಅಶ್ವದಳವನ್ನು ಬಿಟ್ಟ. ಅವರು ಗಾಳಿಯಂತೆ ವೇಗವಾಗಿ ಸಾಗಿಬಂದು ಎತ್ತುಗಳನ್ನೆಲ್ಲಾ ಚದುರಿಸಿಬಿಟ್ಟರು. ಬೇಕಾದಷ್ಟು ಎತ್ತುಗಳನ್ನು ಎಳೆದುಕೊಂಡರು. ಅದನ್ನು ನೋಡಿ ಸ್ಮಿತ್ ಸಾವಿರ ಅಶ್ವಾರೋಹಿಗಳನ್ನು ಇವರ ಮೇಲೆ ಕಳಿಸಿದ. 

ಮಖ್ದುಮ್ ನ ಪಡೆ ಕಾಯುತ್ತಿದ್ದು ಸ್ಮಿತ್ ನ ಪಡೆ ಹತ್ತಿರ ಬರುವವರೆಗೆ ತಡೆದು ಹತ್ತಿರ ಬಂದಾಗ ಅವರ ಮೇಲೆ ಬಿದ್ದಿತು. ಸ್ಮಿತ್ ಪಡೆ ತಮ್ಮನ್ನು ರಕ್ಷಿಸಿಕೊಳ್ಳಲು ಕೋಟೆಯ ಕಡೆಗೆ ಸಾಗಿದಾಗ ಮಖ್ದುಮ್ ಪಡೆ ಅವರನ್ನು ಬೆನ್ನು ಹತ್ತಿತು. ಶತ್ರುವಿನ ಅಶ್ವದಳ ತಮ್ಮನ್ನು ಸುತ್ತುವರಿಯುತ್ತಿದೆ ಎಂದುಕೊಂಡು ಸ್ಮಿತ್ ಅಳಿದುಳಿದ ಎತ್ತುಗಳು, ಸೈನ್ಯ ಸಾಮಾನು ಎತ್ತಿಕೊಂಡು ತಿರುಪತ್ತೂರು ಕೋಟೆ ಬಿಟ್ಟು ತಿರುವಣ್ಣಾಮಲೈ ಮತ್ತು ಜಿಂಜಿ ನಡುವಿನ ಸಿಂಗುಮನ್ ಗೆ ಸಾಗಿದ. ಅಲ್ಲಿ ಬಂದು ತಲುಪುವಷ್ಟರಲ್ಲಿ ಸ್ಮಿತ್ ಸೈನ್ಯ  ಸಿಕ್ಕಾಪಟ್ಟೆ ಸುಸ್ತಾಗಿತ್ತು. ಅವನ ಬಳಿ ಇನ್ನೂರು ಅಶ್ವಾರೋಹಿಗಳು, ಆರು ಜನ ಯುರೋಪಿಯನ್ನರು ಮತ್ತು ಕೆಲವೇ ಎತ್ತುಗಳು ಮಾತ್ರವಿತ್ತು.  

ಜನರಲ್ ಸ್ಮಿತ್ ಹೈದರನ ಯುದ್ಧತಂತ್ರ ಸೈನ್ಯದ ಬಗ್ಗೆ ದಂಗಾಗಿ ಮದ್ರಾಸಿಗೆ ಸುದ್ದಿ ಮುಟ್ಟಿಸಿದ. ಜೊತೆಗೆ ಆದಷ್ಟು ಬೇಗ ಕರ್ನಲ್ ವುಡ್ ನನ್ನು ಎರಡು ಬೆಟಾಲಿಯನ್ ಸಹಿತ ಕಳಿಸಿ ಎಂದು ಬೇಡಿಕೊಂಡ.  ತಾನಿರುವ ಸ್ಥಳ ಕೋಟೆ, ದೊಡ್ಡ ಕೆರೆ ಮತ್ತು ನದಿಯಿಂದ ಕೂಡಿರುವುದರಿಂದ ಹೈದರನ ಸೈನ್ಯದಿಂದ ತಾನು ಸುರಕ್ಷಿತ ಎಂದು ತಿಳಿದ. 

ಅತ್ತ ಆ ರಾತ್ರಿ ಹೈದರ್ ಕಾವೇರಿ ಪಟ್ನದಿಂದ ಒಂದೂವರೆ ಗಾವುದ ದೂರದಲ್ಲಿ ಬೀಡುಬಿಟ್ಟು ಹತ್ತಿರದಲ್ಲೇ ಇದ್ದ ಸಣ್ಣ ಗುಡ್ಡ ಹತ್ತಿ ಅಲ್ಲಿಂದಲೇ ಸ್ಮಿತ್ ಸೈನ್ಯದ ಚಲನೆಯನ್ನು ಗಮನಿಸತೊಡಗಿದ. ಸಾಮಾನ್ಯವಾಗಿ ಊರು ಬಿಟ್ಟು ಹೋಗುವಾಗ ಸೈನ್ಯ ಮನೆಗಳಿಗೆ ಬೆಂಕಿ ಹಾಕುವುದರಿಂದ ಅಲ್ಲಿಂದಲೇ ಹೈದರ್ ಶತ್ರುವಿನ ಚಲನೆಯನ್ನು ಗಮನಿಸುವುದು ಸಾಧ್ಯವಿತ್ತು. ಹೈದರ್ ತನ್ನ ಸೈನ್ಯಕ್ಕೆ ಸ್ಮಿತ್ ಸೈನ್ಯವನ್ನು ಚದುರಿಸಲು ಅಪ್ಪಣೆ ಮಾಡಿದ.

ಎಂಟು ಫಿರಂಗಿಗಳನ್ನು ಸಣ್ಣ ಗುಡ್ಡದ ಮೇಲಕ್ಕೆ ಸಾಗಿಸಿದ್ದ ಅವನ ಸೇನಾಧಿಕಾರಿಗಳು ರಾತ್ರಿ ಎರಡು ಗಂಟೆ ಹೊತ್ತಿನಲ್ಲಿ ಎಡಬಿಡದೆ ಬ್ರಿಟಿಷ್ ಸೈನ್ಯದ ಮೇಲೆ ಗುಂಡಿನ ಮಳೆಗರೆದರು. ಇದನ್ನು ಎಳ್ಳಷ್ಟೂ ನಿರೀಕ್ಷಿಸಿಲ್ಲದ ಸ್ಮಿತ್ ಸೈನ್ಯಾಧಿಕಾರಿ ತಬ್ಬಿಬ್ಬಾದ. ಸಾಮಾನ್ಯವಾಗಿ ಸೈನ್ಯ ಹೀಗೆ ಓಡಿ ಹೋಗುವಾಗ ಸಾರ್ವಜನಿಕರು ಸೈನಿಕರ ಜೊತೆ ಸೇರಿಕೊಂಡು ದೋಚಲು ಬರುತ್ತಾರೆ. ಸುಮಾರು ಸಾವಿರಗಳಷ್ಟು ಜನ ಸಿಕ್ಕಿದನ್ನು ದೋಚಿಕೊಂಡು ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವುದು, ಪಿರಂಗಿ ಧಾಳಿ, ಜೊತೆಗೆ ಸೈನಿಕರು ಪುತ ಪುತನೆ ಬೀಳುತ್ತಿರುವುದು – ಇವೆಲ್ಲವೂ ಸ್ಮಿತ್ ನ ಸೇನಾಧಿಕಾರಿಯನ್ನು ಕಂಗೆಡಿಸಿಬಿಟ್ಟಿತು.’

| ಮುಂದುವರೆಯುವುದು |

‍ಲೇಖಕರು Admin

August 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಾಸುದೇವ ಶರ್ಮಾ

    ಅಬ್ಬಾ! ಯುದ್ಧದವರೌದ್ರ ವರ್ಣನೆ ಸೊಗಸಾಗಿದೆ. ಇದರ ನೆರಳಿನಲ್ಲಿ ಸಾಮಾನ್ಯ ಜನ ಅದೆಷ್ಟು ನರಳಿದರು ಎಂಬುದನ್ನೂ ಹೇಳಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: