ಭುವನೇಶ್ವರಿ ಹೆಗಡೆ ಅಂಕಣ- ‘ಕೇಳು ಸಖಿ’ -ಕಡಲ ತಡಿಯಲ್ಲೊಂದು ಬರಹಗಾರ್ತಿಯರ ಶಿಬಿರ…

9

ನನ್ನ ಅಧ್ಯಾಪನ ವೃತ್ತಿಯ ಒಟ್ಟು ದಿನಗಳಲ್ಲಿ ನಾನು ಬರೆದ ಲೇಖನಗಳು ಮತ್ತು ಮಾಡಿದ ಭಾಷಣಗಳು ಇವುಗಳ ದಾಖಲಾತಿ ಮಾಡಿ ಬರೆದಿಡಲು ಒಂದೇ ಒಂದು ದಪ್ಪನಾದ ನೋಟ್ ಬುಕ್ ಮಾಡಿಟ್ಟಿದ್ದೇನೆ. ಪ್ರತಿ ತಿಂಗಳು ಮಾಡಿದ ಭಾಷಣ ಹೋದ ಊರುಗಳು ಅದಕ್ಕಾಗಿ ಮಾಡಿದ ಪ್ರಯಾಣದ ವೆಚ್ಚ ಇತ್ಯಾದಿ ವಿವರಗಳು ಮೂವತ್ತೈದು ವರ್ಷಗಳ ಹಿಂದಿನಿಂದಲೂ ನನ್ನ ಬಳಿ ದಾಖಲೆಯಾಗಿ ಉಳಿದಿವೆ.

ನಾವು ಕಾಲೇಜಿನಲ್ಲಿ ಮಾಡಿದ ಪಾಠಗಳನ್ನು ವಿವರ ಪಠ್ಯ ಪಠ್ಯೇತರ ಚಟುವಟಿಕೆಗಳ ವಿವರವನ್ನು ದಾಖಲಿಸಲು ಒಂದು ವರ್ಕ್ ಡೈರಿ ಕೊಟ್ಟಿರುತ್ತಾರೆ. ಅಲ್ಲಿ ದಿನ ದಿನದ ಚಟುವಟಿಕೆಗಳನ್ನು ನಮೂದಿಸಿ ಹೆಚ್ಓಡಿ ಅವರ ಸಹಿ ಪಡೆದು ಇಟ್ಟುಕೊಳ್ಳಬೇಕು ತಿಂಗಳಿಗೊಮ್ಮೆ ಪ್ರಾಂಶುಪಾಲರು ಅದನ್ನು ಪರಿಶೀಲಿಸಿ ಸಹಿ ಮಾಡುತ್ತಾರೆ.

ಇದೇ ಮಾದರಿಯಲ್ಲಿ ನನ್ನ ಖಾಸಗಿ ಡೈರಿಯನ್ನು ನಾನು ಬರೆಯುತ್ತಲೇ ಬಂದಿದ್ದು ಅದನ್ನು ಆಗಾಗ ಪರಿಶೀಲಿಸಿದಾಗ ಉಕ್ಕಿಬರುವ ಖುಷಿಯನ್ನು ದಾಖಲಿಸಲು ಸಾಧ್ಯವಿಲ್ಲ ಅಷ್ಟು ಸ್ಥಳಗಳು ಅಷ್ಟು ವ್ಯಕ್ತಿಗಳು ಅಷ್ಟೊಂದು ಕಾರ್ಯಕ್ರಮಗಳು ಅದರಲ್ಲಿ ದಾಖಲಾಗಿವೆ. ಈ ಬಗೆಯ ಭಾಷಣಗಳಿಗೆ ಕಾರಣವಾಗಿದ್ದು ನನ್ನ ಬರವಣಿಗೆ ಹಾಗೂ ಅದರ ಮೂಲಕ ನನ್ನನ್ನು ಗುರುತಿಸಿದ ಓದುಗರು ಕಾರಣವಾಗಿದ್ದಾರೆ. ಹೀಗೆ ವೃತ್ತಿ, ವಿದ್ಯಾರ್ಥಿಗಳು, ಪತ್ರಿಕೆ, ಓದುಗರು, ಭಾಷಣ ಕೇಳಿದವರು ಇದೇ ಪ್ರಪಂಚವಾಗಿ ಮೂರು ದಶಕಗಳನ್ನು ನನಗರಿವಿಲ್ಲದೆ ಕಳೆದಿದ್ದೇನೆ.    

ಓದುಗರು ಪತ್ರಿಕೆಯೊಂದನ್ನು ರೂಪಿಸಬಲ್ಲ ಶಕ್ತಿಯುಳ್ಳವರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪತ್ರಿಕೆಯ ಯಶಸ್ಸಿಗೆ ಓದುಗರು ಎಷ್ಟು ಮುಖ್ಯವೋ ಆ ಓದುಗರಿಗೆ ಒಳ್ಳೆಯ ಹೂರಣವನ್ನು ಗ್ರಾಸವನ್ನು ತಮ್ಮ ಬರಹಗಳ ಮೂಲಕ ಒದಗಿಸುವ ಲೇಖಕ ವರ್ಗವೂ ಅಷ್ಟೇ ಮಹತ್ವದ್ದು. ತಲೆಮಾರು ಬದಲಾಗುತ್ತಿದ್ದಂತೆ ಹಳೆಯ ತಲೆಮಾರಿನವರ ಶೈಲಿ ವಸ್ತು ವಿಷಯಗಳಲ್ಲಿ ಬದಲಾವಣೆಯನ್ನು ಬಯಸುವ ಓದುಗರು ಬರತೊಡಗುತ್ತಾರೆ. ಆದ್ದರಿಂದ ಪತ್ರಿಕೆಯೊಂದರ ಜವಾಬ್ದಾರಿ ಓದುಗರನ್ನು ಗಳಿಸಿ ರೂಪಿಸಿಕೊಳ್ಳುವುದೇ ಆಗಿದೆ. ಸಶಕ್ತ ಬರಹಗಾರರ ತಂಡವೊಂದನ್ನು ರಚಿಸಿಕೊಳ್ಳಬೇಕಾದ ಅಗತ್ಯವೂ  ಇದೆ.

ಈ ಅಗತ್ಯವನ್ನು ಮನಗಂಡ ಮಣಿಪಾಲ ಸಮೂಹದ ಪತ್ರಿಕೆಗಳ ಮಾಲಕಿ ಸಂಪಾದಕಿ ಸಂಧ್ಯಾ ಪೈ ಅವರ ಮಾರ್ಗದರ್ಶನದಲ್ಲಿ ತುಷಾರ ಪತ್ರಿಕೆಯ ಸಂಪಾದಕ ಪೃಥ್ವಿರಾಜ್ ಕವತ್ತಾರ್ ಅವರು ಒಂದು ವಿನೂತನ  ಪ್ರಯೋಗವನ್ನು ಹಮ್ಮಿಕೊಂಡಿದ್ದರು. ತೀರಾ ಅನೌಪಚಾರಿಕವಾದ ಒಂದು ಶಿಬಿರವನ್ನು ಏರ್ಪಡಿಸಿ ಹೊಸದಾಗಿ ಬರೆಯಲು ತೊಡಗಿರುವ ಯುವ ಲೇಖಕಿಯರನ್ನು ಒಂದೆಡೆ ಕಲೆ ಹಾಕಿ ಅವರಿಗೆ ಇಬ್ಬರು ಹಿರಿಯ ಲೇಖಕಿಯರಿಂದ ಆಪ್ತವಾದ ಮಾತುಕತೆಯ ಮೂಲಕವೇ ಮಾರ್ಗದರ್ಶನ ನೀಡಿ ಹೊಸ ಹೊಳಹುಗಳಿಗೆ ಸಿದ್ಧಪಡಿಸಬಹುದಾದ ವಿನೂತನ ಮಾದರಿಯ ಕಾರ್ಯಕ್ರಮವೊಂದನ್ನು ಕುಂದಾಪುರದ ಕಡಲ ತಡಿ ‘ಬೀಜಾಡಿ’ಯಲ್ಲಿರುವ ‘ಕಡಲ ಮನೆ’ ಎಂಬ ಒಂದು ವಿಶಾಲವಾದ ವಿಶಿಷ್ಟವಾದ ವಿನ್ಯಾಸದ ಮನೆಯಲ್ಲಿ ಎಲ್ಲರೂ ಉಳಿಯುವಂತೆ ಏರ್ಪಾಡು ಮಾಡಿದ್ದರು. ಕೊರೋನಾ ಬರುವ ಕೆಲವೇ ತಿಂಗಳುಗಳ ಹಿಂದೆ ನಡೆದ ಶಿಬಿರ ಇದು.    

ಶಿಬಿರಕ್ಕೆ ನಾನು ಹಾಗೂ ವೈದೇಹಿ ಇಬ್ಬರನ್ನೂ ನಿರ್ದೇಶಕರು ಎಂದು ನಿಯೋಜಿಸಲಾಗಿತ್ತು .ಉರಿ ಬಿಸಿಲಿನ ತಾಪವು ಇನ್ನೂ ಪ್ರಾರಂಭವಾಗದ ನವೆಂಬರ ತಿಂಗಳ ಹದ ಚಳಿಯ ದಿನಗಳು ಕರಾವಳಿಯಲ್ಲಿ ಹಿತವಾಗಿರುತ್ತವೆ. ವೈದೇಹಿಯವರ ಜೊತೆ  ಕುಂದಾಪುರದ ಕಡಲ ಮನೆ ಗೆ ಹೋಗಿಳಿದಾಗ ಅಲ್ಲಿ ಅದಾಗಲೇ ಕರ್ನಾಟಕದ ಬೇರೆ ಬೇರೆ ಕಡೆಯಿಂದ ಬಂದ ಹೊಸ ಮುಖದ ಲೇಖಕಿಯರು ಸಂಕೋಚ ದಿಂದ ಮುಗುಳ್ನಗೆಯಷ್ಟನ್ನೇ ವಿನಿಮಯ ಮಾಡಿಕೊಳ್ಳುತ್ತಾ ಕುಳಿತಿದ್ದರು. ಪರಸ್ಪರ ಪರಿಚಯಿಸಿ ಕೊಳ್ಳುತ್ತಲೇ ಊಟಕ್ಕೆ ತೊಡಗಿದಾಗ ಈ ಸಂಕೋಚದ ತೆಳು ಪರದೆ ಮೆಲ್ಲನೆ ಕಳಚಿ ಕೊಳ್ಳ ತೊಡಗಿತು.

ಕುಂದಾಪುರದ ವೈದ್ಯ ಕುಟುಂಬದ ಅದ್ಭುತ ಘಮದ ಅಡುಗೆ ನಮ್ಮ ಕೈಗೂ ಬಾಯಿಗೂ ಜಗಳ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಕುಂದಾಪುರದ ತಿಳಿ ಸಾರು ಹಾಗೂ ಮಂಗಳೂರು ಸೌತೆಯ ಹುಳಿಗೆ ಅಲ್ಲಿಯದೇ ಸ್ವಾದವಿದೆ. ಮಜ್ಜಿಗೆ ಹುಳಿ, ತೊಂಡೆ, ಗೋಡಂಬಿ ಕಾಯಿಪಲ್ಯ ಶಿಬಿರಕ್ಕೆ ನಮ್ಮನ್ನು ಕಟ್ಟಿ ಹಾಕಿ ಬಿಟ್ಟಿತ್ತು. ಎಲ್ಲರಿಗೂ ಪ್ರಾರಂಭದ ಸಂಕೋಚ ಆತಂಕ. ಅಷ್ಟರಲ್ಲಿ ನಮ್ಮೊಂದಿಗೆ ಬಂದು ಸೇರಿಕೊಂಡವರು ಅಮೆರಿಕೆಯಲ್ಲಿರುವ ನಾಗ ಐತಾಳ್ ದಂಪತಿಗಳು. ಅವರ ಸಾಹಿತ್ಯಾಂಜಲಿ ಸಂಸ್ಥೆಯ ಮೂಲಕ ತುಷಾರ ಕಥಾ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡುತ್ತಾ ಬಂದವರು, ಸಾಹಿತ್ಯದ ಅಭಿಮಾನಿಗಳು. 

ಊಟವಾದ ಬಳಿಕ ಪ್ರಥ್ವಿರಾಜ್ ಅವರಿಂದ ಸಣ್ಣ ಪ್ರಸ್ತಾವನೆ ತಾನು ಮತ್ತು ಫೋಟೋಗ್ರಾಫರ್ ಇಬ್ಬರೇ ಗಂಡಸರು. ಉಳಿದವರೆಲ್ಲ ಮಹಿಳೆಯರೇ. ನಿಮಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡುತ್ತಾ ನಾವು ಹಿನ್ನೆಲೆಯಲ್ಲಿ ಇರುತ್ತೇವೆ. ಎರಡು ದಿನಗಳನ್ನು ನೀವು ಪೂರ್ತಿಯಾಗಿ ಬಳಸಿಕೊಳ್ಳಿ.   

ಯಾವುದೇ ಬಗೆಯ ಶಿಷ್ಟಾಚಾರದ ಬಂಧನ ಇರುವುದಿಲ್ಲ ಎಲ್ಲರೂ ಮುಕ್ತವಾಗಿ ನಿಮ್ಮ ಅನಿಸಿಕೆಗಳನ್ನು ಹೇಳಬಹುದು ಎಂದು ಶಿಬಿರದ ಉದ್ದೇಶವನ್ನು ವಿವರಿಸಿ ಉತ್ತೇಜನದ ಒಂದು ಪೀಠಿಕೆ ಹಾಕಿ ಹಿಂದೆ ಸರಿದುಬಿಟ್ಟರು. ನಾಗ ಐತಾಳರು ತಮ್ಮ ತಾಯಿಯ ಕುರಿತು ಮಾತನಾಡಿ ಶಿಬಿರವನ್ನು ಉದ್ಘಾಟಿಸಿದರು. ತಾಯಿಯನ್ನು ತಾಯ್ ನೆಲವನ್ನು ಕುಂದಾಪುರದ ಭಾಷೆಯನ್ನು ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವಾಗ ವಯೋವೃದ್ಧರಾದ ನಾಗ ಐತಾಳರ ಕಣ್ಣಂಚಿನಲ್ಲಿ ನೀರು ಒಸರಿತ್ತು. ಹಾರ ತುರಾಯಿ ಮೈಕು ಮೊದಲಾದವುಗಳಿಲ್ಲದ ಮನೆಯಂಗಳದ ಆಪ್ತ ಕಾರ್ಯಕ್ರಮ ಅದಾಗಿತ್ತು.     

ನಂತರದ್ದು ನನ್ನ ಮತ್ತು ವೈದೇಹಿಯವರ ಜತೆ ಹೊಸ ಲೇಖಕಿಯರ ಅನೌಪಚಾರಿಕ ಬೈಠಕ್ ಪ್ರಾರಂಭವಾಯಿತು. ಇದು ಯಾವುದೇ ಸೆಮಿನಾರ್ ಗಳ ರೂಪದಲ್ಲಿ ಇರಲಿಲ್ಲ. ಟಿಎ. ಡಿಎ. ಸಂಪನ್ಮೂಲ ವ್ಯಕ್ತಿಗಳು ಅಲ್ಲಿ ಇರಲಿಲ್ಲ. ಕನ್ನಡದ ಮೇಲಿನ ಪ್ರೀತಿಯಿಂದ ಹೊಸ ಹೊಸ ಯುವ ಲೇಖಕಿಯರು ರೂಪುಗೊಳ್ಳಬೇಕೆಂಬ ಕಾಳಜಿಯಿಂದ  ಅಲ್ಲಿ ನೆರೆದಿದ್ದರು. ಎಷ್ಟೇ ಆತ್ಮೀಯರಾಗಿದ್ದರೂ ಖ್ಯಾತ ಕಥೆಗಾರ್ತಿ ಕವಯಿತ್ರಿ ವೈದೇಹಿಯವರ ಜತೆ ಶಿಬಿರ ನಿರ್ದೇಶನದ   ಹೊಣೆಗೆ ನಾನು ಕೈಜೋಡಿಸ ಬೇಕಿತ್ತು. ‘ನೀನು ಪ್ರೊಫೆಸರ್ ಆದವಳು ಕಣೆ, ಶಿಬಿರಾರ್ಥಿಗಳನ್ನು ನಿಯಂತ್ರಿಸುವುದು ನಿನ್ನ ಜವಾಬ್ದಾರಿ’ ಎಂದವರು ತಮಾಷೆ ಮಾಡಿದ್ದರು. 

ಕೈ ಚಾಚಿದರೆ ಕಡಲಿನ ತೆರೆಗಳ ವಿಸ್ತಾರವಾದ ಬೀಚು, ಕಡಲ ತಡಿಯಲ್ಲಿರುವ ಮಲೆನಾಡಿನ ವಿಸ್ತಾರವಾದ ಮನೆಗಳನ್ನು ಮೀರಿಸುವ ಕಡಲ ಮನೆ ನಮಗೆಲ್ಲ ತಂಪಾದ ಒಂದು ಆಶ್ರಯವನ್ನು ನೀಡಿತ್ತು. ಮೈಕುಗಳೇ ಇಲ್ಲದ ಶಿಬಿರಾರ್ಥಿಗಳು ಹೇಗೆ ಬೇಕು ಹಾಗೆ ಕೂತುಕೊಂಡು ಕೇಳುವ ಮೊದಲನೇ ಬೈಠಕ್ ನಲ್ಲಿ ವೈದೇಹಿಯವರು ಮೆಲ್ಲ ಮೆಲ್ಲನೆ ಕಥೆಗಳ ರಚನೆಗೆ ಬೇಕಾದ ತಾಳ್ಮೆ ತಾದಾತ್ಮ್ಯ ಕಥಾವಸ್ತುಗಳನ್ನು ಸುತ್ತಮುತ್ತಲಿನ ಪರಿಸರದಲ್ಲಿ ಪರೀಕ್ಷಿಸಿ ಪಡೆದುಕೊಳ್ಳಬಹುದಾದ ಜಾಣ್ಮೆ, ದಕ್ಕಿಸಿಕೊಂಡ ಅನುಭವವನ್ನು ಕಲಾತ್ಮಕವಾಗಿ ಓದುಗರ ಮನಮುಟ್ಟುವ ಕಲೆಗಾರಿಕೆಯ ಕುರಿತು ಹೇಳುತ್ತ ಹೋದರು.

ತಮ್ಮ ಮೆಚ್ಚಿನ ಲೇಖಕಿ ವೈದೇಹಿಯವರನ್ನು ಅಷ್ಟು ಹತ್ತಿರದಿಂದ ನೋಡುವ ಕೇಳುವ ಅನುಭವ ಯುವತಿಯರನ್ನು ಮೂಕವಾಗಿಸಿತ್ತು. ಆದರೆ ಕ್ರಮೇಣ ವೈದೇಹಿಯವರನ್ನು ಕಿವಿಗೊಟ್ಟು ಆಲಿಸಿದ ಯುವತಿಯರ ಕುತೂಹಲ ವಿಶ್ವಾಸವಾಗಿ ಮಾರ್ಪಟ್ಟಿದ್ದು ಸ್ಪಷ್ಟವಾಗಿ ಕಾಣತೊಡಗಿತ್ತು. ಇನ್ನೂ ಪ್ರಾರಂಭಿಕ ಹಂತದಲ್ಲಿರುವ ಯುವತಿಯರು ತಮ್ಮ ಅನುಮಾನ ಪ್ರಶ್ನೆಗಳನ್ನೆಲ್ಲ ಕೇಳಿ ಉತ್ತರ ಪಡೆದು  ಖುಷಿ ಪಟ್ಟರು. ಕಥಾ ರಚನೆಗೆ ಬೇಕಾದ ಹಂದರ ವೊಂದನ್ನು ವೈದೇಹಿ ಸೊಗಸಾಗಿ ನಿರ್ಮಿಸಿದ್ದರು. ನನ್ನದು ಲಲಿತ ಪ್ರಬಂಧ ಪ್ರಕಾರದಲ್ಲಿ ಇರಬೇಕಾದ ವೈಶಿಷ್ಟ್ಯಗಳನ್ನು, ಸೊಗಸನ್ನು ವಿವರಿಸುವ ಕೆಲಸ. 

ಹಾಗೆ ನೋಡಿದರೆ ಲಲಿತ ಪ್ರಬಂಧ ರಚನೆ ತುಂಬಾ ಕಷ್ಟದ್ದು. ಅತ್ತ ಘಟನೆಗಳಿಗಷ್ಟೇ ಬದ್ಧವಾಗಿದ್ದರೆಅದೊಂದು ವರದಿಯಾಗಿ ಬಿಡುತ್ತದೆ. ಹಾಗೆಂದು ಕಲ್ಪನೆಯನ್ನು ಹೆಚ್ಚಾಗಿ ಆಶ್ರಯಿಸಿದರೆ ಅದು ಫಿಕ್ಷನ್ ಎನಿಸಿಕೊಳ್ಳುತ್ತದೆ. ಇವೆರಡರನಡುವಿನ ಒಂದು ಲಲಿತವಾದ ಮಾರ್ಗದಲ್ಲಿ ಪ್ರಬಂಧಗಳು ನಡೆಯಬೇಕಾಗುತ್ತದೆ. ಹಾಸ್ಯ, ಚತುರೋಕ್ತಿ, ವಿಚಾರ- ವಿನೋದ ಎಲ್ಲವನ್ನೂ ಒಳಗೊಂಡ ಒಂದು ಸಶಕ್ತ ಪ್ರಕಾರದ ಕುರಿತು ತಿಳಿಸಿ ಹೇಳುವ ಅವಕಾಶ ನನ್ನದಾಯಿತು. ಹೆಚ್ಚಿನ ಯುವತಿಯರು ಕವಿತೆ, ಕಥೆಗಳನ್ನು ಆರಿಸಿಕೊಂಡು ಬರೆಯತೊಡಗಿದವರು. ಈ ಲಲಿತ ಪ್ರಬಂಧ ಪ್ರಕಾರಕ್ಕೆ ಅವರು ಆಕರ್ಷಿತರಾಗುವಂತೆ ಮಾಡಬೇಕಾದ ಅಗತ್ಯ ಹಾಗೂ ಜವಾಬ್ದಾರಿ ನನ್ನ ಮುಂದಿತ್ತು. ಅದೆಲ್ಲವನ್ನೂ ಸುಲಭವಾಗಿ ಲಲಿತವಾಗಿ ನಾನಲ್ಲಿ ಹೇಳಿಕೊಳ್ಳಲು ಸಾಧ್ಯವಾದುದು ಪೃಥ್ವಿರಾಜ್ ಅವರು ನಿರ್ಮಿಸಿದ ಒಂದು ಅನೌಪಚಾರಿಕ ಸೌಹಾರ್ದ ಸುಂದರ ವಾತಾವರಣದಿಂದಾಗಿ.

ಸೂರ್ಯ ಬಾನಂಚಿಗೆ ಬರುವ ತನಕವೂ ನಮ್ಮ ಚರ್ಚೆ ಚಹಾ ಪಾನ ನಡೆಯಿತು. ಸಂಜೆ ಎಲ್ಲರನ್ನು ಈ ಸಮಯ ಕಡಲ ತಡಿಯಲ್ಲಿ ವಿಹಾರದ ಸಮಯ, ಬೀಚಿಗೆ ಹೋಗಿ ಕಾಲಾಡಿಸಿ ಆದರೆ ನೀರಲ್ಲಿಯೇ ಇಳಿದು ಆಟವಾಡಬೇಡಿ ಎಂದು ಕಾಲೇಜು ಮೇಷ್ಟ್ರ ಧಾಟಿಯಲ್ಲಿ ಹೇಳಿ ನಾವು ಸಮುದ್ರ ತೀರದತ್ತ ಹೆಜ್ಜೆ ಹಾಕಿದೆವು. ಯುವತಿಯರೆಲ್ಲ ಕಾಲೇಜು ವಿದ್ಯಾರ್ಥಿನಿಯರಾಗಿಬಿಟ್ಟಿದ್ದರು. ‘ಹುಷಾರು ಕಣ್ರೋ ತೀರಾ ತೆರೆಯ ಒಳಗೆ ಹೋಗಬೇಡಿ’ ಎಂದು ಆಗಾಗ ಹೇಳುವ ಜವಾಬ್ದಾರಿಯನ್ನು ವೈದೇಹಿ ನನಗೆ ವಹಿಸಿಬಿಟ್ಟಿದ್ದರು.

| ಇನ್ನು ಮಂದಿನ ವಾರಕ್ಕೆ |

‍ಲೇಖಕರು Admin

August 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: