ಎಚ್ ಎಸ್ ಆರ್‌ ಕಂಡಂತೆ ಎಂ ಎಸ್ ಶ್ರೀರಾಮ್ ಅವರ ʼನಾನು ನಾನೇ? ನಾನು ನಾನೇ!ʼ

ಎಂ ಎಸ್‌ ಶ್ರೀರಾಮ ಅವರ ಪ್ರಯೋಗಾಥ್ಮಕ ಕಥೆಗಳು ಹೊರ ಬಂದಿದೆ.

ಮನೋಹರ ಗ್ರಂಥಮಾಲಾ ಪ್ರಕಟಿಸಿರುವ ಕೃತಿ- ನಾನು ನಾನೇ? ನಾನು ನಾನೇ!

ಈ ಕೃತಿಗೆ ಖ್ಯಾತ ವಿಮರ್ಶಕ ಎಚ್ ಎಸ್ ರಾಘವೇಂದ್ರ ರಾವ್ ಬರೆದಿರುವ ಮುನ್ನುಡಿ ಇಲ್ಲಿದೆ.

ಎಚ್ ಎಸ್ ರಾಘವೇಂದ್ರ ರಾವ್

ಚಾಣ
‘ಅವನು ಬೀದಿಯಲ್ಲಿ ಹೋಗುತ್ತಿದ್ದ. ಬಂಡೆ ಕಾಣಿಸಿತು. ಇದ್ದಿಲ ಚೂರೂ ಸಿಕ್ಕಿತು. ಬಂಡೆಯ ಮೇಲೆ ಚಂದದ ಚಿತ್ರಗಳನ್ನು ಬರೆದ. ಸ್ವಲ್ಪ ಹೊತ್ತಾದ ಮೇಲೆ ಮಳೆ ಬಂತು. ಬಂಡೆ ಹಾಗೆಯೇ ಉಳಿಯಿತು.’

ನಾನ್ನ ಪ್ರೀತಿಯ ಗೆಳೆಯರಾದ ಎಂ.ಎಸ್. ಶ್ರೀರಾಮ್ ಅವರ ಬರವಣಿಗೆ ಮತ್ತು ಬೆಳವಣಿಗೆಗಳನ್ನು ಹಲವು ಕಾಲದಿಂದ ನೋಡುತ್ತಾ ಬಂದವನು. ಅವುಗಳನ್ನು ಎಲ್ಲ ಸಂಕೀರ್ಣತೆಯಲ್ಲಿ ಅರ್ಥ ಮಾಡಿಕೊಂಡಿರುವೆನೆಂದಲ್ಲ. ಅವುಗಳಲ್ಲಿ ಅಡಕವಾಗಿರುವ ಅನುಭವಲೋಕದ ಹರಹು, ವೈವಿಧ್ಯ ಮತ್ತು ಹೊಸತನಗಳು ಒಂದೆರಡು ಪೀಳಿಗೆಯಷ್ಟೇ ಹಳಬನಾದ ನನ್ನ ನಿಲುಕಿಗೆ ಸಿಲುಕದವು. ಆದರೆ, ಇದು ಯಾವುದೇ ಓದುಗನು ಎದುರಿಸಲೇ ಬೇಕಾದ ಸವಾಲು. ‘ಸ್ವಂತ’ವನ್ನು ‘ಕಲೆ’ಯಾಗಿಸುವುದು ಲೇಖಕನ ಸಮಸ್ಯೆಯಾದರೆ ‘ಅನ್ಯ’ವನ್ನು ಕಲೆಯ ಮೂಲಕವೇ ತನ್ನದಾಗಿಸಿಕೊಳ್ಳುವುದು ಓದುಗನಿಗೆ ಇರುವ ಸವಾಲು.

ಶ್ರೀರಾಮ್ ಅವರು, ತಾರುಣ್ಯದಲ್ಲಿಯೇ ವಯಸ್ಸಾದವರ ಬದುಕಿನ ತವಕ ತಲ್ಲಣಗಳನ್ನು ಕಾಣಲು, ಕಂಡರಿಯಲು ಇಷ್ಟ ಪಟ್ಟವರು. ಇದರಲ್ಲಿ ಅವರು ಮಾಸ್ತಿಯವರನ್ನು ಹೋಲುತ್ತಾರೆ. ಇವರು ಸೃಷ್ಟಿಸಿದ ಮತ್ತು ಹಲವು ಕಥೆಗಳಲ್ಲಿ ಮುಂದುವರಿಸಿದ, ನಡುವಯಸ್ಸಿನ ಭಾಸ್ಕರರಾಯರು, ನನ್ನ ಅಂದಿನ ಮತ್ತು ಇಂದಿನ ಬಿಕ್ಕಟ್ಟುಗಳಿಗೆ ಕನ್ನಡಿಯಾಗಿ ಕಾಣುತ್ತಾರೆ. ಹಾಗೆಯೇ ಕರ್ನಾಟಕದ ಹೊರಗೆ ಹಲವು ವರ್ಷಗಳನ್ನೇ ಕಳೆದಿರುವ, ಕಳೆದ ಕಾಲದ ಕುಟುಂಬಗಳ ರೀತಿ ರಿವಾಜುಗಳನ್ನು ಚೆನ್ನಾಗಿ ಬಲ್ಲ, ತೆಲುಗು ಮತ್ತು ಕನ್ನಡಗಳ ನಡುವೆ ಸಲೀಲವಾಗಿ ವ್ಯವಹರಿಸುವ ಈ ಬರಹಗಾರರು ಆಧುನಿಕತೆಯ ತೀರ ಇತ್ತೀಚಿನ ಅವತರಣಗಳನ್ನೂ ತಮ್ಮ ಗ್ರಹಿಕೆಯೊಳಗೆ ತೆಗೆದುಕೊಂಡವರು.

ಸಮಕಾಲೀನವಾದ ಒತ್ತಡಗಳನ್ನು ಒಳಗೊಂಡರೂ ಅವುಗಳಿಗೆ ಶರಣಾಗದೆ ‘ತಮ್ಮತನ’ವನ್ನು ಕಾಪಿಟ್ಟುಕೊಂಡವರು. ಆದ್ದರಿಂದಲೇ ಅವರು ತಮ್ಮ ಕಾಲದ ಕಥಾಸಾಹಿತ್ಯದ ಕಕ್ಷೆಯೊಳಗೆ ಅನನ್ಯವಾದ ಜಾಗವನ್ನು ಪಡೆದಿದ್ದಾರೆ. ಅವರ ಒಟ್ಟು ಬರವಣಿಗೆಯನ್ನು ಸಮಗ್ರವಾಗಿ ನೋಡಬೇಕೆಂಬ ಹಂಬಲ ನನಗಿದ್ದರೂ ಈ ಸಂಕಲನವು ಅದಕ್ಕೆ ಅವಕಾಶ ಕೊಡುವುದಿಲ್ಲ. ನನ್ನ ಬರಹವು ಇಲ್ಲಿನ ಕಥೆಗಳನ್ನು ಮಾತ್ರ ಸ್ವಲ್ಪ ವಿವರವಾಗಿ ಗಮನಿಸುತ್ತದೆ.

ಕಥೆಯ ಗಾತ್ರವನ್ನೋ ಸ್ವರೂಪವನ್ನೋ ಗಮನದಲ್ಲಿಟ್ಟುಕೊಂಡು ಅದನ್ನು ‘ಅತಿ ಸಣ್ಣ ಕಥೆ’ಯೆಂದೋ ‘ಒಂದು ಸಾಲಿನ ಕಥೆ’ಯೆಂದೋ ಕರೆಯುವುದು ಈಚೆಗೆ ಕನ್ನಡದಲ್ಲಿಯೂ ರೂಢಿಗೆ ಬಂದಿದೆ. ಹಾಗೆ ನೋಡಿದರೆ, ಈ ಪ್ರಕಾರವನ್ನು ಕರೆದುದೇ ‘ಸಣ್ಣ ಕಥೆ’(ಷಾರ್ಟ್ ಸ್ಟೋರಿ) ಎಂದು. ಇದರ ದಾಯಾದಿಗಳಾಗಿ ‘ನೀಳ್ಗತೆ’, ‘ಕಿರು ಕಾದಂಬರಿ’ ಮುಂತಾದ ಪದಗಳನ್ನೂ ಕೊಂಚ ಸಡಿಲವಾಗಿ ಬಳಸುತ್ತಾರೆ. ‘ಕಥೆ’ಗಳು ಎನ್ನುವ ಪ್ರಕಾರವಿದ್ದಂತೆ ತೋರುವುದಿಲ್ಲ. ಆದರೆ, ಕಾದಂಬರಿ, ನಾಟಕ, ಕಾವ್ಯ ಎಲ್ಲದರಲ್ಲಿಯೂ ‘ಒಂದು ಕಥೆ’ ಇದೆ ಎನ್ನುವಾಗ ಆ ಕಥೆಯು ‘ಕಲಾಕೃತಿ’ ಆಗಿರುವುದಿಲ್ಲ. ಸಿನಿಮಾ ಕಥೆಯನ್ನೂ ಸುದೀರ್ಘವಾಗಿ ಹೇಳುವವರುಂಟು.

ಸಣ್ಣಕಥೆಗಳಲ್ಲಿ ಎಷ್ಟೊಂದು ವಿಪುಲತೆ, ವೈವಿಧ್ಯಗಳಿವೆಯೆಂದರೆ, ಅದರ ‘ನಿರ್ವಚನ’ವು ಬೆಳೆಯುತ್ತಾ, ಬದಲಾಗುತ್ತಾ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಾ ಬಂದಿದೆ. ಈ ಅತಿ ಸಣ್ಣ ಕಥೆಗಳ ಪೂರ್ವಜರನ್ನು ಕಾವ್ಯವೂ ಸೇರಿದಂತೆ ವಿಭಿನ್ನ ಪ್ರಕಾರಗಳಲ್ಲಿ ಗುರುತಿಸಬಹುದು. ಬೈಬಲ್ ನಲ್ಲಿ ಬರುವ ‘ಪ್ಯಾರಬಲ್’, ಜಾನಪದ ಕಥೆಗಳ ‘ಫೇಬಲ್’, ಜಪಾನಿನ ಝೆನ್ ಕಥೆಗಳು, ಕ್ವಾನ್ ಗಳು ಇವೆಲ್ಲವೂ ‘ಬಹು ಸಣ್ಣ ಕಥೆ’ಗಳ ಪೂರ್ವಾವತಾರಗಳೇ. ಬಹಳ ಹಿಂದೆಯೇ ಜಿ.ಪಿ. ರಾಜರತ್ನಂ ಅವರು ‘ಹನಿಗಳು’ ಎಂಬ ಬಹು ಸಣ್ಣ ಕಥೆಗಳ ಸಂಕಲನವನ್ನು ಹೊರ ತಂದಿದ್ದರು.

ಇಂಥ ಕಥೆಗಳ ಯಶಸ್ಸು ಕಥೆಗಾರನ ಲೋಕದರ್ಶನ, ಓದುಗಾರಿಕೆ, ಕಲೆಗಾರಿಕೆ ಮತ್ತು ಭಾಷೆಯ ಬಳಕೆಯಲ್ಲಿ ಅವನಿಗಿರುವ ಆಸಕ್ತಿ ಮತ್ತು ನಿಪುಣತೆಗಳನ್ನು ಅವಲಂಬಿಸಿರುತ್ತದೆ. ಒಂದು ವಾಕ್ಯದ ಕಥೆಯಿಂದ ಮೊದಲಾಗುವ ಈ ಪ್ರಕಾರವು ಕೆಲವು ಪುಟಗಳವರೆಗೆ ಹರಡಿಕೊಳ್ಳುವುದರಿಂದ ಕಿರುಗಾತ್ರವೊಂದೇ ಅತಿ ಸಣ್ಣ ಕಥೆಯ ಮಾನದಂಡವಲ್ಲ. ಪಾತ್ರರಚನೆಯಿಂದ ಮೊದಲಾಗಿ ಸನ್ನಿವೇಶಗಳ ನಿರ್ಮಾಣದವರೆಗೆ ಯಾವುದನ್ನೂ ವಿವರವಾಗಿ ಬೆಳೆಸಲು ಇಲ್ಲಿ ಅವಕಾಶವಿರುವುದಿಲ್ಲ.

ಇಡೀ ಕಥೆಯು ಒಂದು ರೂಪಕವೋ ಪ್ರತಿಮೆಯೋ ಆಗಿದ್ದು ಬೇರೆ ಏನನ್ನೋ ಸೂಚಿಸಬಹುದು. ಹಾಗಲ್ಲದೆ ಒಂದು ಕಾದಂಬರಿಗಾಗುವಷ್ಟು ವಿಷಯವನ್ನು ಬಹಳ ಸಂಗ್ರಹವಾಗಿ ಎರಡೇ ಪುಟಗಳಲ್ಲಿ ‘ಸಿನಾಪ್ಟಿಕ್’ ಆಗಿ ಹೇಳಿರಬಹುದು. ಕಾದಂಬರಿ ಮತ್ತು ಸಣ್ಣ ಕಥೆಗಳಂತೆಯೇ ಇಲ್ಲಿಯೂ ವೈವಿಧ್ಯಕ್ಕೆ ಅವಕಾಶವಿದೆ. ಒಬ್ಬನೇ ಕತೆಗಾರನ ಅತಿ ಸಣ್ಣ ಕಥೆಗಳ ಸರಣಿಯನ್ನು ಒಟ್ಟಿಗೆ ಓದಿ ಅವುಗಳ ನಡುವಿನ ಸಂಬಂಧಗಳನ್ನು ಕಂಡುಕೊಳ್ಳುವುದರ ಮೂಲಕ ಲೇಖಕನ ಜೀವನದರ್ಶನವನ್ನು ಅರಸಬಹುದು.

ಲೇಖಕರು ಇವುಗಳನ್ನು ಪ್ರಯೋಗಗಳೆಂದೇ ಕರೆದರೂ ವಾಸ್ತವದಲ್ಲಿ ಅವು ತಮ್ಮದೇ ಆದ ಮೈಪಡೆದಿರುತ್ತವೆ. ಕೆಲವೊಮ್ಮೆ ಈ ಪ್ರಯೋಗಗಳು ಕೇವಲ ಕುತೂಹಲ ಹುಟ್ಟಿಸುವ ಸಂಗತಿಗಳೂ ಆಗಿಬಿಡಬಹುದು. ಉದಾಹರಣೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ಕೇಂದ್ರವಾಗಿ ಹೊಂದಿರುವ ಕಥೆಯನ್ನು ಅವರದೇ ಆದ ಶೈಲಿಯಲ್ಲಿ ಬರೆಯುವಂತೆ.

ಹಲವು ವರ್ಷಗಳ ಹಿಂದೆ ಕವಿ ಎಚ್.ಎಸ್, ವೆಂಕಟೇಶಮೂರ್ತಿಯವರು ಅಡಿಗ, ನರಸಿಂಹಸ್ವಾಮಿ, ಪುತಿನ ಮುಂತಾದವರನ್ನು ಕುರಿತು ಬರೆದ ಸಾನೆಟ್ಟುಗಳನ್ನು ಆಯಾ ಕವಿಗಳ ಕಾವ್ಯಶೈಲಿಯಲ್ಲೇ ಬರೆದ ಪ್ರಯೋಗವು ಈಗ ನೆನಪಿಗೆ ಬರುತ್ತಿದೆ. ಇಂಥ ಕಥೆಗಳಲ್ಲಿ ಮನುಷ್ಯನ ಸ್ವಭಾವ ಹಾಗೂ ವರ್ತನೆಗಳ ಸಂಕೀರ್ಣ ನೆಲೆಗಳ ಹಾಗೂ ಅವುಗಳ ಪರಿಣಾಮವಾದ ಅನೂಹ್ಯಗಳ ಒಂದು ‘ಝಲಕ್’ ಅನ್ನು ಕೊಡಲು ಸಾಧ್ಯವಾಗುತ್ತದೆ. ಓದುವವರಿಗೆ, ‘ಹೌದಲ್ಲಾ…ಇದೂ ನಿಜವೇ..’ಅನ್ನಿಸುತ್ತದೆ. ಅಷ್ಟು ಅದರ ಸಾರ್ಥಕತೆ. ಇಂಥ ಕಡೆ ಕಥನವಿದ್ದರೂ, ಕಥೆಯಿದ್ದರೂ ‘ಕಥೆ’ ಇರುವುದಿಲ್ಲ.

ಕನ್ನಡದಲ್ಲಿ ಹತ್ತು ಹಲವು ಅತಿ ಸಣ್ಣ ಕಥೆಗಳನ್ನು ಬರೆದಿರುವ ಮತ್ತು ಅಂಥ ಕಥೆಗಳ ಬಗ್ಗೆ ವಿಶದವಾಗಿ ಬರೆದಿರುವ ಮಿತ್ರರಾದ ಎಸ್. ದಿವಾಕರ, ಎ.ಎನ್. ಪ್ರಸನ್ನ ಮತ್ತು ಎಂ.ಎಸ್. ಶ್ರೀರಾಮ್ ಅವರು ಪಾಶ್ಚಾತ್ಯ ಹಾಗೂ ಲ್ಯಾಟಿನ್ ಅಮೆರಿಕನ್ ಕಥಾಸಾಹಿತ್ಯವನ್ನು ವ್ಯಾಪಕವಾಗಿ ಓದಿರುವುದು ಕಾಕತಾಳೀಯವೇನೂ ಅಲ್ಲ. ಇಂಥ ಓದು ಅವರಿಗೆ ಸಮಕಾಲೀನ ಕನ್ನಡ ಸಾಹಿತ್ಯವು ರೂಪಿಸಿಕೊಂಡಿರುವ ಮಾದರಿಗಳನ್ನು ಮತ್ತು ಹಾಗೂ ಅದರ ಒತ್ತಡಗಳನ್ನು ಮೀರಲು ಅಗತ್ಯವಾದ ತಿಳಿವಳಿಕೆ ಮತ್ತು ಧೈರ್ಯ ಎರಡನ್ನೂ ಕೊಟ್ಟಿದೆ. ಹಾಗೆಂದು ಅವರು ನಮ್ಮ ಕಾಲದ ಸಾಮಾಜಿಕ ತಿಳಿವಳಿಕೆಯನ್ನು ನಿರಾಕರಿಸುವರೆಂದು ಅರ್ಥವಲ್ಲ. ಆದರೆ, ಅವರೆಲ್ಲರೂ ಹಲವು ಕಾಲದಿಂದ ‘ಹುಡುಕಾಟ’ದಲ್ಲಿ ತೊಡಗಿದ್ದಾರೆಯೇ ವಿನಾ ಗುರಿ ತಲುಪಿದೆನೆಂಬ ವಿಶ್ರಾಂತಭಾವದಲ್ಲಿ ನೆಲೆಸಿಲ್ಲ. ಹಾಗೆಯೇ ಈ ಮೂವರ ಕಥನಕ್ರಮದಲ್ಲಿ ಖಚಿತವಾದ ವ್ಯತ್ಯಾಸಗಳೂ ಇವೆ.

ನವ್ಯ ಲೇಖಕರಿಗೆ ಹತ್ತಿರದಲ್ಲಿದ್ದೂ ಭಿನ್ನವಾಗಲು ಪ್ರಯತ್ನಿಸಿದ ಮೊದಲ ಇಬ್ಬರಿಗೂ ಸುಮಾರು ಎರಡು ಪೀಳಿಗೆಗಳಷ್ಟು ಕಿರಿಯರಾದ ಶ್ರೀರಾಮ್ ಅವರಿಗೂ ವ್ಯತ್ಯಾಸವಿದೆ. ಹಾಗೆಂದು ಶ್ರೀರಾಮ್ ತಮ್ಮ ವಾರಿಗೆಯ ಜಯಂತ ಕಾಯ್ಕಿಣಿ, ವಿವೇಕ ಶಾನಭಾಗರಂತೆಯೂ ಬರೆಯುತ್ತಿಲ್ಲ. ಗಮನಿಸಬೇಕಾದ ಸಂಗತಿಯೆಂದರೆ ಅವರು ಬಹುಮಟ್ಟಿಗೆ ಮಹಾನಗರಗಳಲ್ಲೇ ಬೆಳೆದವರು. ಆದರೆ, ತಮ್ಮ ಪ್ರೊಫೆಶನಲ್’ ಅಗತ್ಯಗಳಿಂದ ಅವರಿಗೆ ಭಾರತದ ಅದರಲ್ಲೂ ಆಂಧ್ರಪ್ರದೇಶ ಮತ್ತು ಗುಜರಾತುಗಳ ನಿಕಟ ಪರಿಚಯವು ‘ಸಂಚಾರೀ ನೆಲೆ’ಯಲ್ಲಿ ಸಿಕ್ಕಿದೆ. ಅವರಿಗೆ ಮೊದಲಿನಿಂದಲೂ ತಮ್ಮ ಹಿರಿಯ ಗೆಳೆಯರಾದ ತಿರುಮಲೇಶ್ ಅವರ ಜೀವನಶೈಲಿ ಮತ್ತು ಕಥನಕ್ರಮಗಳಲ್ಲಿ ಆಸಕ್ತಿ. ಅದು ಜೀವನದಲ್ಲಿ ಬೇರುಬಿಟ್ಟುದೇ ಹೊರತು ಭೂಗೋಳದಲ್ಲಿ ಅಲ್ಲ. ಅವರ ಕಲಾಕೃತಿಗಳಿಗೆ ಕಾಲಬದ್ಧವಾದರೂ ದೇಶಬದ್ಧವಲ್ಲದ ನೆಲೆಗಳಿವೆ. ಅವರ ಬರವಣಿಗೆಯಲ್ಲಿ ವಿವರಗಳಿಗಿಂತ ಕಥನಕ್ಕೆ ಹೆಚ್ಚು ಒತ್ತು ಸಿಗುತ್ತದೆ. ಅವರು ಬೇಕೆಂದೇ ‘ತೀವ್ರ ಭಾವನೆ’ಗಳನ್ನು ನೇರವಾಗಿ ಅಭಿವ್ಯಕ್ತಿ ಮಾಡದ ಶೈಲಿಯನ್ನು ರೂಪಿಸಿಕೊಂಡಿದ್ದಾರೆ. ಅವರು ಕಟ್ಟಿಕೊಡುವ ಸನ್ನಿವೇಶಗಳೂ ಅನುಭವಗಳಿಗಿಂತ ಹೆಚ್ಚಾಗಿ ‘ಕಟ್ಟೋಣ’ಗಳೇ ಆಗಿರುತ್ತವೆ.

ನಮ್ಮ ಕಾಲದಲ್ಲಿ ಅಪರೂಪವಾಗುತ್ತಿರುವ ‘ಸೃಜನಶೀಲ ಕಲ್ಪನಾಶಕ್ತಿ’ಯ ನೆರವನ್ನು ಅವರು ಪಡೆಯುತ್ತಾರೆ. ಅವರ ಕಥೆಗಳು ಕೇವಲ ನಡೆದ/ನಡೆದಿರಬಹುದಾದ/ನಡೆಯಬಹುದಾದ ಸಂಗತಿಗಳ ನಿರೂಪಣೆಯಾಗಲೀ ಜೋಡಣೆಯಾಗಲೀ ಅಲ್ಲ, ಶ್ರೀರಾಮ್ ಅವರು ಮೈಮರೆತು ಬರೆಯುವುದು ಅಪರೂಪ. ಇತರ ಪಾತ್ರಗಳ ವಿಷಯ ಹಾಗಿರಲಿ, ಸ್ವತಃ ತಮ್ಮ ಬಗ್ಗೆ ಬರೆಯುವಾಗಲೂ ಅವರು ಒಂದು ‘ಬೌದ್ಧಿಕ ದೂರ’ವನ್ನು ಕಾದಿಟ್ಟುಕೊಳ್ಳುತ್ತಾರೆ.

ಹಾಸ್ಯ, ವ್ಯಂಗ್ಯ, ಸ್ವ-ವಿಮರ್ಶೆ, ವಿಟ್ ಮುಂತಾದ ಪರಿಕರಗಳು ಅವರನ್ನು ಭಾವುಕತೆಯಿಂದ ‘ಪ್ರೊಟೆಕ್ಟ್’ ಮಾಡುತ್ತವೆ. ಆದರೆ ಅವರ ಪಾತ್ರಗಳಲ್ಲಿ ಭಾವನೆಗಳೇ ಇಲ್ಲವೆಂಬ ತೀರ್ಮಾನಕ್ಕೆ ನಾವು ಬರಬಾರದು. ಅಲ್ಲಿರುವುದು ಒಂದು ಬಗೆಯ ಸಂಯಮ ಹಾಗೂ ‘ಅಂಡರ್ ಸ್ಟೇಟ್ ಮೆಂಟ್’. ಹಾಗೆಯೇ ಅವರ ಕನ್ನಡಕ್ಕೆ ತೆಲುಗು, ಉರ್ದು, ಇಂಗ್ಲಿಷ್ ಮುಂತಾದ ಭಾಷೆಗಳ ‘ನುಡಿಕಟ್ಟು’ ಮತ್ತು ‘ನಡೆಕಟ್ಟು’ಗಳು ಸಹಜವಾಗಿಯೇ ಬರುತ್ತವೆ. ಅವರು ತೆಲುಗಿನಿಂದ ಅನುವಾದಗಳನ್ನು ಮಾಡಿರುವುದು ಕಾಕತಾಳೀಯವಲ್ಲ. ಒಂದು ಅರ್ಥದಲ್ಲಿ ಅವರು ದ್ವಿ-ಭಾಷಿಕ ಲೇಖಕರು. ಯಶವಂತ ಚಿತ್ತಾಲರ ಗದ್ಯದಲ್ಲಿ ಕೊಂಕಣಿಯು ಹಾಸುಹೊಕ್ಕಾಗಿರುವಂತೆ ಇಲ್ಲಿಯೂ ಆಗುತ್ತದೆ.

ನಾನು ಇದುವರೆಗೆ ಹೇಳಿದ ಮಾತುಗಳು, ‘ನಾನು, ನಾನೇ? ನಾನು ನಾನೇ!’ ಎಂಬ ಸಂಕಲನವನ್ನು ಒಳಗೊಳ್ಳುವ ಕೆಲಸದಲ್ಲಿಯೂ ನೆರವಾಗುತ್ತವೆ. ಪ್ರಶ್ನೆಯಲ್ಲಿ ಮೊದಲಾಗಿ ಆಶ್ಚರ್ಯದಲ್ಲಿ ಕೊನೆಯಾಗುವ ಸಂಕಲನದ ಶೀರ್ಷಿಕೆಯು, ‘ಲೋಕಶೋಧನೆ’ ಮತ್ತು ‘ಆತ್ಮಶೋಧನೆ’ ಎರಡರಲ್ಲಿಯೂ ‘ಖಚಿತವಾದ’, ‘ಸರಿಯಾದ’ ತೀರ್ಮಾನಗಳಿಗೆ ಎಡಯಿಲ್ಲವೆಂಬ ಸತ್ಯವನ್ನೇ ಹೇಳುತ್ತವೆ. ನಿಜ ಹೇಳುವುದಾದರೆ ‘ಲೋಕ’ವನ್ನು ಅರಿಯುವ ಪ್ರಾಮಾಣಿಕ ಪ್ರಯತ್ನವು ನನ್ನನ್ನು ಅರಿಯುವ ದಿಕ್ಕಿನಲ್ಲಿ ಚಲಿಸುತ್ತದೆ. ಅಂತೆಯೇ ನನ್ನನ್ನು ಅರಿಯುವ ದಿಟವಾದ ಹುಡುಕಾಟವು ಕೊನೆಗೆ ಇಡೀ ಲೋಕವನ್ನೇ ಒಳಗೊಳ್ಳುತ್ತದೆ. ಏಕಾಂತ ಮತ್ತು ಲೋಕಾಂತಗಳು ಪ್ರತ್ಯೇಕ ದ್ವೀಪಗಳಲ್ಲ. ಹಾಗೆಯೇ ‘ನನ್ನನ್ನು’ ಮತ್ತು ‘ಲೋಕವನ್ನು’ ಅರಿಯುವ ಕೆಲಸವನ್ನು, ಭಾಷೆಯೆಂಬ ಮಾಧ್ಯಮವನ್ನು ಬಳಸುವ ‘ಸಾಹಿತ್ಯ’ವೆಂಬ ಕಲೆಯ ಮೂಲಕ ನಡೆಸಿದಾಗ, ಆ ಹುಡುಕಾಟಕ್ಕೆ ಅದರದೇ ಲಕ್ಷಣಗಳು, ಶಕ್ತಿಗಳು, ಬಿಕ್ಕಟ್ಟುಗಳು ಒದಗಿ ಬರುತ್ತವೆ.

ಈ ಸಂಕಲನದ ಕಥೆಗಳ ಓದಿಗೆ ಹಿನ್ನೆಲೆಯಾಗಿ ಅವರ ‘ಎಂದೆಂದೂ ಮುಗಿಯದ ಆದರೂ ಮುಗಿದಿರುವ ಕಥೆ’ ಎಂಬ ಕಥೆಯ ಕೆಲವು ಮಾತುಗಳನ್ನು ನೋಡಬಹುದು

‘ನಾನು ಮಾತಾಡಬೇಕು. ಆದರೆ ಯಾರೊಂದಿಗೆ ಎಂಬ ಪ್ರಶ್ನೆ ಕಾಡುತ್ತದೆ. ನನ್ನ ಜೀವನದಲ್ಲಿ ಎಸಗಿದ ಪಾಪಗಳನ್ನೆಲ್ಲ ಯಾರಲ್ಲಾದರೂ ತೋಡಿಕೊಳ್ಳಬೇಕು…… ಕೇಳಲು ಯಾರೂ ತಯಾರಿಲ್ಲ. ಯಾರೂ ಇಲ್ಲ. ಎಲ್ಲರೂ ಶಿಲೆಗಳಾಗಿದ್ದಾರೆ. ಅಥವಾ ಶಿಲೆಗಳಾಗುವುದರಲ್ಲಿ ನಿರತರಾಗಿರುವುದರಿಂದ ಅವರಿಗೆ ವ್ಯವಧಾನವಿಲ್ಲ……..ಹಾಗೇ ನಿಂತಿರುವಾಗ ನನಗೊಂದು ಪುಸ್ತಕ ದೊರೆಯುತ್ತದೆ…..ಓದಲು ಪ್ರಯತ್ನಿಸಿದರೆ ಎಲ್ಲವೂ ಮೋಡಿ ಅಕ್ಷರಗಳಂತೆ ಕಾಣಿಸುತ್ತದೆ…..ನಾನು ಹೋಗಿ ಪುಸ್ತಕವನ್ನು ಮುಚ್ಚುತ್ತೇನೆ. ಮುಖಪುಟ ನೋಡಿದಾಗ ನನಗೇ ಆಶ್ಚರ್ಯ! ಅದು ನಾನೇ ಬರೆದಿರುವ ನನ್ನದೇ ಪುಸ್ತಕ…ಪುಸ್ತಕ ಮುಚ್ಚುತ್ತಿದ್ದ ಹಾಗೇ ನನಗೆ ಈ ಜಗತ್ತು ಪರಿವರ್ತಿತವಾದಂತೆ ಭಾಸವಾಗುತ್ತದೆ….ಈಗ ನನ್ನ ತಪ್ಪೊಪ್ಪಿಗೆ ಕೇಳಲು ಅನೇಕ ಮಂದಿ ಸಿದ್ಧರಿರಬಹುದು. ನಾನು ಅವರೊಂದಿಗೆಲ್ಲಾ ಸ್ಪಂದಿಸಬೇಕು…. ಹೀಗೆ ಆಲೋಚಿಸುತ್ತಲೇ ನಾನು ಕಾರ್ಯೋನ್ಮುಖವಾಗಲು ಪ್ರಯತ್ನಿಸುತ್ತೇನೆ. ಅರೇ! ನಾನೇ ಜಡವಾಗುತ್ತಿದ್ದೇನೆ. ಎಷ್ಟು ಪ್ರಯತ್ನಿಸಿದರೂ ಅಲುಗಾಡಲು ಸಾಧ್ಯವಾಗುತ್ತಿಲ್ಲ. ನಾನೀಗ ಶಾಪಗ್ರಸ್ತನಂತೆ, ಇದ್ದಕ್ಕಿದ್ದಂತೆ ಶಿಲೆಯಾಗಿದ್ದೇನೆ. ಸುತ್ತಮುತ್ತಲ ಜಗ ಚಲಿಸುತ್ತಿದೆ. ನಾನು ಮಾತ್ರ ಸ್ಥಿರವಾಗಿ ಜಡವಾಗಿ ನಿಂತಿದ್ದೇನೆ.’

ಆ ಕಿರುಕಥೆಯ ಸಂದರ್ಭದಿಂದ ಆಚೆ ತೆಗೆದು ನೋಡಿದಾಗ, ಈ ಮಾತುಗಳು ಒಬ್ಬ ಲೇಖಕ/ಕಲಾವಿದನ ಬೆಳವಣಿಗೆ, ಬದಲಾವಣೆ ಮತ್ತು ನಿಲುವುಗಳ ಬಗ್ಗೆ ಹೇಳುವ ಸಂಗತಿಗಳೂ ಆಗಿರುವುದು, ನಮಗೆ ಗೊತ್ತಾಗುತ್ತದೆ. ಅಭಿವ್ಯಕ್ತಿಯ ಹಂಬಲ, ಸಹೃದಯರ ಬಗೆಗಿನ ಧೋರಣೆ ಮತ್ತು ಸ್ವಂತ ಅವಲೋಕನಗಳು ಇಲ್ಲಿ ಚಲನಶೀಲವಾಗಿ ಕಂಡು ಬರುತ್ತವೆ. ಶ್ರೀರಾಮ್ ಅವರು ಈ ಕಥೆಗಳಲ್ಲಿ ಮತ್ತು ಬೇರೆ ಕಡೆ ಕೂಡ, ಸ್ವಂತದ ಬಗ್ಗೆ ನೇರವಾಗಿ ಬರೆಯುವುದು ಕಡಿಮೆ. ಮಾಸ್ತಿಯವರಂತೆ ಅವರು ಕೂಡ ಲೋಕನಿರೀಕ್ಷೆಯಲ್ಲಿ ಹೆಚ್ಚು ಆಸಕ್ತರು. ಆದ್ದರಿಂದಲೇ ನಿರ್ಮಮತೆಯು ಅವರ ಕಥೆಗಳ ಮುಖ್ಯ ನೆಲೆ. ಅಂಥ ಮನೋಧರ್ಮಕ್ಕೆ ಈ ಬಗೆಯ ಕಥೆಗಳು ತುಂಬಾ ಅವಕಾಶ ಕೊಡುತ್ತವೆ.

ಈ ಸಂಕಲನದಲ್ಲಿ ಒಟ್ಟು ಐವತ್ತು ಕಥನಗಳಿವೆ. ಕೇವಲ ‘ಎರಡು’ ಸಾಲುಗಳ ‘ಪರಿವರ್ತನೆ’ಯಿಂದ ಹಿಡಿದು, ಹದಿನೇಳು ಪುಟಗಳ ‘ಟ್ವಿಸ್ಟ್-2’ವರೆಗೆ ಕಥೆಗಳ ಗಾತ್ರದ ಹರಹಿದೆ. ಆದ್ದರಿಂದ ಇಲ್ಲಿರುವ ಅನೇಕ ಕಥೆಗಳು ‘ಅತಿ ಸಣ್ಣ ಕಥೆ’ಗಳೇನೂ ಅಲ್ಲ. ಒಂದೇ ಕಥೆಯ ವಿಭಿನ್ನ ನಿರೂಪಣೆಗಳೂ ಇದ್ದು ಅವು ಬೇರೆ ಬೇರೆ ವಾಸ್ತವ ಹಾಗೂ ಕಲ್ಪನೆಯ ಸಾಧ್ಯತೆಗಳ ಕಡೆಗೆ ಕೈಮಾಡುತ್ತವೆ. ಕುತೂಹಲದ ಸಂಗತಿಯೆಂದರೆ ಇಲ್ಲಿನ ಎಲ್ಲ ಕಥೆಗಳೂ ಎರಡು ವಿಭಿನ್ನ ಕಾಲಮಾನಗಳಲ್ಲಿ ಬರೆದವು.

1985 ರಿಂದ 1988 ರವೆರೆಗಿನ ಕಾಲಾವಧಿಯಲ್ಲಿ ಮೊದಲ ಕಂತಿನ ಕಥೆಗಳನ್ನು ಬರೆಯಲಾಗಿದೆ. ಆ ಮೇಲೆ ಸುಮಾರು 28 ವರ್ಷಗಳ ನಿಲುಗಡೆಯಿದೆ. ಉಳಿದ ಕಥೆಗಳನ್ನು 2015 ರಿಂದ 2020 ರ ಅವಧಿಯಲ್ಲಿ ಬರೆದಿದ್ದಾರೆ. ಈ ಮಧ್ಯಂತರದಲ್ಲಿ ಅವರು ಹತ್ತು ಹಲವು ಕಥೆ ಮತ್ತು ಪ್ರಬಂಧಗಳನ್ನು ಬರೆದಿದ್ದರೂ ಈ ರೀತಿಯ ಕಥೆಗಳನ್ನು ಬರೆದಿಲ್ಲ. ಈ ಕಥೆಗಳು ವಸ್ತು, ಮನೋಧರ್ಮ ಮತ್ತು ನಿರೂಪಣ ತಂತ್ರಗಳ ನೆಲೆಯಲ್ಲಿ ಬೇರೆ ಬಗೆಯವು. ಶ್ರೀರಾಮರ ಉಳಿದ ಬರವಣಿಗೆಯು ಒಟ್ಟು ಜೀವನದ ಹಿನ್ನೆಲೆಯಲ್ಲಿ ಮನುಷ್ಯನ ಬೆಳವಣಿಗೆ ಮತ್ತು ಮನುಷ್ಯ ಸಂಬಂಧಗಳ ವಿಶ್ಲೇಷಣೆಯಲ್ಲಿ ಆಸಕ್ತವಾಗಿತ್ತು.

ಸಾರ್ವಜನಿಕ ಜೀವನದ ಸ್ವರೂಪದ ಮೇಲೆ ಪರಿಣಾಮ ಬೀರುವಷ್ಟರ ಮಟ್ಟಿಗೆ ಮಾತ್ರ ರಾಜಕೀಯದಲ್ಲಿ ಆಸಕ್ತಿಯಿತ್ತು. ಆದರೆ, ರಾಜಕೀಯವು ನಮ್ಮ ‘ವೈಯಕ್ತಿಕ’ ಬದುಕಿನೊಳಗೆ ಪ್ರವೇಶಿಸುವ, ಸಂಬಂಧಗಳಿಗೆ ವಿಷ ಬೆರೆಸುವ ಬಗೆಯು ಮನದಟ್ಟಾದಂತೆ, ತಟಸ್ಥರಾಗಿರುವುದು ಯಾವುದೇ ಸಂವೇದನಶೀಲರಿಗೆ ಸಾಧ್ಯವಿಲ್ಲ. ಹಾಗೆಂದು ಸ್ಥೂಲವಾದ ರಾಜಕೀಯ/ಸಾಮಾಜಿಕ ನಿಲುವುಗಳನ್ನು ತಳೆದು ಕಪ್ಪು-ಬಿಳುಪು ಕಥೆಗಳನ್ನು ಸೃಷ್ಟಿಸುವುದು, ಮನುಷ್ಯ ಮತ್ತು ಕಲೆಯ ಸಂಕೀರ್ಣತೆಯನ್ನು ಬಲ್ಲ ಲೇಖಕರಿಗೆ ಸಾಧ್ಯವಿಲ್ಲ. ಆದೂ ಅಲ್ಲದೆ ಪ್ರಬಲವಾದ ರಾಜಕೀಯ ‘ಸೆನ್ಸಾರ್ ಶಿಪ್’ ಇರುವಾಗ, ಕಲೆಯು ಅದನ್ನು ಮೀರುವ ಒಳದಾರಿಗಳನ್ನು ಹುಡುಕುತ್ತದೆ. ಇಂಥ ಬರವಣಿಗೆಯು ವಾಸ್ತವತಾವಾದದ ವಿವರವಾದ ನಿರೂಪಣೆಗೆ ವಿದಾಯ ಹೇಳಿ ‘ಅನ್ಯಮಾರ್ಗ’ಗಳನ್ನು ಹುಡುಕುತ್ತದೆ. ಪೂರ್ವ ಯೂರೋಪಿನ ಲೇಖಕರ ಬರವಣಿಗೆಯಲ್ಲಿ ಇಂಥ ಲಕ್ಷಣಗಳನ್ನು ಗುರುತಿಸಬಹುದು. ಜಾರ್ಜ್ ಆರ್ವೆಲ್ ಬರವಣಿಗೆ ಇದಕ್ಕೆ ಪೂರ್ವಪೀಠಿಕೆ ಹಾಕಿಕೊಟ್ಟಿತ್ತು. ಹಾಗೆಯೇ ಸಾದತ್ ಹಸನ್ ಮಾಂಟೋ ಅವರು ಇಂಥ ಅದ್ಭುತವಾದ ಕಿರುಗತೆಗಳನ್ನು ಬರೆದರು. ಶ್ರೀರಾಮ್ ಅವರು ಈ ಎರಡೂ ಬಗೆಯ ಕಥೆಗಳನ್ನೂ ಬರೆದಿದ್ದಾರೆ.

ಮೊದಲ ಕಾಲಘಟ್ಟದಲ್ಲಿ ಬರೆದ ಕಥೆಗಳು ರಾಜಕೀಯದ ಫಲವಾದ ನೈತಿಕ ಅವನತಿಯನ್ನು ಕೇಂದ್ರವಾಗಿಟ್ಟುಕೊಂಡರೆ, ಎರಡನೆಯ ಹಂತದಲ್ಲಿ ನಿರ್ದಿಷ್ಟ ಬಗೆಯ ‘ರಾಜಕಾರಣ’ ಮತ್ತು ‘ಅಧಿಕಾರದ ದುರ್ಬಳಕೆ’ಯ ಬಗ್ಗೆ ಇರುವ ಅಸಹನೆಯು ಇನ್ನಷ್ಟು ತೀವ್ರವಾಗಿ ವ್ಯಕ್ತವಾಗಿದೆ. ‘ಬಸವನ ಹುಳು’, ಪ್ರಗತಿ’, ‘ಈ ಊರಿನಲ್ಲಿ ಕಳ್ಳರೇ ಇಲ್ಲ’ ಮುಂತಾದವು ಮೊದಲ ಗುಂಪಿನ, ಕಟಕಿ/ಜಾಣತನ ತುಂಬಿದ ‘ಗೊಣಗುಕಥೆ’ಗಳು. ಅವು ಸತ್ಯವನ್ನೇ ಹೇಳುತ್ತಿದ್ದರೂ ಅಲ್ಲಿ ತೀವ್ರತೆಯಾಗಲೀ ಭಾವುಕ ವಿಷಾದವಾಗಲೀ ಇಲ್ಲ. ಆದರೆ ಎರಡನೆಯ ಗುಂಪಿನ ಕಥೆಗಳಲ್ಲಿ – ಪ್ರಾಯಶಃ ಲೇಖಕರ ಅನುಭವಲೋಕವು ವಿಸ್ತರಿಸಿರುವುದರಿಂದ- ನೋವಿದೆ, ನಿಲುವಿದೆ. ‘ಇದು ಸರಿ’ ಎಂದು ಹೇಳುವ ಹೊಣೆಗಾರಿಕೆ ಇದೆ.

‘ದೇಶಪ್ರೇಮ’, ‘ರಾಜಯೋಗ’ ಮುಂತಾದ ಪುಟ್ಟ ಕತೆಗಳು ಇದನ್ನು ಬಹಳ ನೇರವಾಗಿ ಹೇಳಿದರೆ, ‘ಎಚ್ಚರ’, ‘ಜೋಕೆ’, ‘ಸ್ಫೋಟದ ನಂತರ’, ‘ಪಂಚರಂಗಡಿ ಬಷೀರಣ್ಣ’ ಮುಂತಾದವು ಅಸಹಾಯಕತೆ ಮತ್ತು ಕಲೆಗಾರಿಕೆ ಎರಡನ್ನೂ ಏಕ ಕಾಲದಲ್ಲಿ ಒಳಗೊಳ್ಳುತ್ತವೆ. ಅವು ಕೇವಲ ಲೋಕವಿಮರ್ಶೆಯಾಗದೆ ಆತ್ಮವಿಮರ್ಶೆಯೂ ಆಗಿಬಿಡುತ್ತವೆ. ಈ ಗುಣ ಇಂಥ ಕಥೆಗಳನ್ನು ‘ವಕೀಲಿ’ಯಾಗದಂತೆ, ‘ನಾನೆ ಸರಿತನ’ ಆಗದಂತೆ ಕಾಪಾಡುತ್ತವೆ.

ಈ ಸಂಕಲನವನ್ನು ಪ್ರಯೋಗಾತ್ಮಕ ಎಂದು ಕರೆದಿರುವುದು ಸರಿಯಾಗಿದೆ. ಯಾಕೆಂದರೆ ಈ ಕಥೆಗಳು ತಮ್ಮ ಉದ್ದೇಶ ಸಾಧನೆಗಾಗಿ ಬೇರೆ ಬೇರೆ ಸಲಕರಣೆಗಳನ್ನು ಬಳಸಿಕೊಂಡಿವೆ. ಅವೆಲ್ಲವೂ ಒಂದು ಬಗೆಯಲ್ಲಿ ವಾಸ್ತವ ನಿರೂಪಣೆಯಿಂದ ತಪ್ಪಿಸಿಕೊಳ್ಳುವ ಉಪಾಯಗಳು. ಉದಾಹರಣೆಗೆ ‘ವ್ಯೂಹ’ ಎನ್ನುವ ಎರಡು ಪುಟಗಳ ಕಥೆಯನ್ನು ತೆಗೆದುಕೊಳ್ಳಿ.

ಇದು ಹೆಂಡತಿಗೆ ಕಿವಿ ಸರಿಯಿಲ್ಲವೆಂದು ಅವಳನ್ನು ವೈದ್ಯರ ಬಳಿಗೆ ಕರೆತಂದಿರುವ ಶ್ಯಾಮನ ಕಥೆ. ಆ ಹೆಂಡತಿ ಸಂಪೂರ್ಣ ಮೌನಿ. ಎರಡು ವರ್ಷಗಳ ನಂತರ ಶ್ಯಾಮ ಭೇಟಿಯಾದಾಗ, ಅವಳು ಬೆಂಕಿ ಅಪಘಾತದಲ್ಲಿ ಸತ್ತ ಸುದ್ದಿ ತಿಳಿಯುತ್ತದೆ. ಅಪಘಾತವೋ ಆತ್ಮಹತ್ಯೆಯೋ ತಿಳಿಯದು ಎನ್ನುತ್ತಾನೆ. ‘ಸದ್ಯ ವರದಕ್ಷಿಣೆಯ ಕೇಸು ಬೀಳುವುದು ಶಕ್ಯವಿರಲಿಲ್ಲ.ʼ ಎನ್ನುತ್ತಾನೆ. ಕೊನೆಗೆ ಸ್ವತಃ ಅವನಿಗೇ ಕಿವಿ ಕೇಳುವುದಿಲ್ಲವೆಂಬ ಸತ್ಯ ತಿಳಿಯುತ್ತದೆ. ದಾಂಪತ್ಯದೊಳಗಿನ ಕ್ರೌರ್ಯದ ಸ್ವರೂಪ ಹಾಗೂ ಪರಸ್ಪರ ಸಂಬಂಧದ ಕೊರತೆಗಳನ್ನು ಧ್ವನಿಸುವ 1985 ರ ಈ ಕತೆ ಕೆಲವು ವರ್ಷಗಳ ಹಿಂದೆ ಬಂದ ವಿವೇಕ ಶಾನಭಾಗರ ‘ಘಾಚರ್ ಘೋಚರ್’ ಎಂಬ ಒಳ್ಳೆಯ ಕಥೆಯನ್ನು ನೆನಪಿಗೆ ತಂದಿತು. ಹಾಗೆ ನೋಡಿದರೆ ಸಂವಹನದ ಸೋಲು ಶ್ರೀರಾಮರ ಹಲವು ಕಥೆಗಳ ವಸ್ತು.

‘ದಿಕ್ -ಭ್ರಮೆ’ಯೂ ಈ ಸತ್ಯವನ್ನೇ ಹೇಳುತ್ತದೆ. ಇತರರನ್ನು, ನಮ್ಮನ್ನು ಹಾಗೂ ಲೋಕವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಅಗತ್ಯವಾದ ಸಂವೇದನಶೀಲತೆಯ ಕೊರತೆ ಜೀವನದ ದುರಂತಕ್ಕೆ ಮುಖ್ಯ ಕಾರಣ. ಹೀಗೆಯೇ ‘ಊರುಗೋಲು’ ರೀತಿಯ ಕಥೆಗಳು ಪ್ರಶ್ನೆಗಳನ್ನು ಹುಟ್ಟಿಸುವುದರಿಂದಲೇ ಓದುಗನಲ್ಲಿ ವಿಸ್ತರಣೆಯನ್ನು ಪಡೆಯುತ್ತವೆ. ಹಾಗೆ ನೋಡಿದರೆ ಎಲ್ಲ ‘ಅತಿ ಸಣ್ಣ ಕಥೆ’ಗಳನ್ನೂ ದೊಡ್ಡ ಕಥೆಗಳಾಗಿ ಹರಡಿಕೊಳ್ಳುವ ಹೊಣೆಯು ಓದುಗನದೇ ಆಗಿರುತ್ತದೆ. ತಂತ್ರ ಯಾವುದೇ ಇರಲಿ, ಉದ್ದೇಶ ಹಾಗೂ ಪರಿಣಾಮಗಳು ಅವೇ ಇರುತ್ತವೆ.
ಸಣ್ಣ ಕಥೆಗಳಿಗೆ, ಅದರಲ್ಲೂ ‘ಅತಿ ಸಣ್ಣ ಕಥೆ’ಗಳಿಗೆ ದೊಡ್ಡ ಮುನ್ನುಡಿ ಬರೆಯುವುದು ಎಷ್ಟಕ್ಕೂ ತರವಲ್ಲ. ಇವು ಕಲಾವಿದನು ಬಿಡುವಾದಾಗ ತೊಡಗಿಕೊಳ್ಳುವ ‘ಕಲೆತುಣುಕು’ಗಳೇ ಹೊರತು ಹಲವು ಕಲಾತ್ಮಕವಾದ ಆಯಾಮಗಳನ್ನು ಹೊಂದಿರುವ ಕಥಾರಚನೆಗೆ ಪರ್ಯಾಯವಲ್ಲವೆನ್ನುವುದು ಶ್ರೀರಾಮ್ ಅವರಿಗೂ ಗೊತ್ತಿದೆ.

ಈ ಅವಧಿಯಲ್ಲೇ ಅವರು ಮಹತ್ವದ ಕಥೆಗಳನ್ನು, ಕಾದಂಬರಿಯನ್ನು, ಹಲನೆಲೆಗಳ ಪ್ರಬಂಧಗಳನ್ನು ಬರೆದಿದ್ದಾರೆ. ಗಂಭೀರವಾದ ಅಂಕಣ ಬರೆಹಗಳ ಮೂಲಕ ತಮ್ಮ ಕ್ಷೇತ್ರದ ಪರಿಣತಿಯನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಅಂಥ ಹತ್ತು ಹಲವು ಮಹತ್ವದ ಚಟುವಟಿಕೆಗಳ ನಡುವೆ ಈ ಕಥೆಗಳನ್ನು ಬರೆದಿದ್ದಾರೆ. ಅವು ನಿಜಕ್ಕೂ ‘ಪ್ರಯೋಗಾತ್ಮಕ’ವಾದವು. ಈ ಪ್ರಯೋಗಗಳ ಫಲವು ಅವರ ಮುಂದಿನ ಬರವಣಿಗೆಯಲ್ಲಿಯೂ ಕಾಣಿಸುವುದೆಂಬ ನಂಬಿಕೆ ನನಗಿದೆ. ನಾನು ಕೂಡ ಅವರ ಒಟ್ಟು ಬರವಣಿಗೆಯ ಹೇಳಬೇಕಾದ ಮೆಚ್ಚಿಗೆಯ ಮಾತುಗಳು ಸಾಕಷ್ಟಿವೆ. ಈ ಸಂಕಲನದ ಹಿನ್ನೆಲೆಯಲ್ಲಿ ಅವು ಅಪ್ರಸ್ತುತವಾಗುತ್ತವೆ. ನನ್ನಿಂದ ಇಷ್ಟನ್ನು ಬರೆಸಿದ ಈ ಗೆಳೆಯರಿಗೆ ವಂದನೆಗಳು.

‍ಲೇಖಕರು Admin

August 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: