ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಕವಿತೆ – ತಡೆ ಹಾಯು…

ಮೂಲ: ಆಲ್ಫ್ರೆಡ್ ಲಾರ್ಡ್ ಟೆನಿಸನ್
ಕನ್ನಡಕ್ಕೆ : ಸರೋಜಿನಿ ಪಡಸಲಗಿ

ಕವಿಯುತಿಹ ಮುಸ್ಸಂಜೆಯಲಿ ಕಂಡೆ ಮಂದ
ತಾರಕೆಯ
ಆ ಮಬ್ಬಿನಲಿ ಕೇಳುತಿಹೆ ದೂರ ತೀರದ ಒಂದು
ಕರೆಯ
ಈ ಬಾಳ ದಂಡೆಯ ಮೇರೆ ಮೀರಿ ದಾಟಿ ಹೋಗುವಾಸೆ ಈ ಜೀವಕೆ
ಅರಿಯದ ಕಡಲಲಿ ಕಾಣದೆ ಯಾವ ನರಳಿಕೆ
ಹೊರಳಿಕೆಯ

ಮನದ ಭಾವಗಳ ಏರಿಳಿತವೂ ಮುಳುಗಿ ಹೋಗಿದೆ ಶಾಂತತೆಯಲಿ
ಆವರಿಸಿದ ಪರಿಪೂರ್ಣ ನಿರ್ಲಿಪ್ತತೆಯಲಿ
ಬೇಕಿಲ್ಲ ಅದಕೆ ಯಾವ ಗೊಂದಲದ ಗೋಜು
ಸಾಗರದ ಅಲೆಗಳ ತಿಳಿಯದ ಆಳದ ತಳದ
ತನ್ನ ಠಾವಿಗೆ ಮರಳುವ ಹಂಬಲ ಈ ಮರುಳು ಜೀವಕೆ

ಬಾಳಿನಿಳಿ ಸಂಜೆಯ ಮುಸುಕಿನಲಿ ರಿಂಗಣಿಸಿದೆ
ಆ ಕರೆಯ ನಾದ
ಮುತ್ತಿಹುದು ಪ್ರಶಾಂತ ಘನಸಾಂದ್ರ ಕಡುಕಪ್ಪು
ಛಾಯೆಯೊಂದಾಗ
ಬೇಡ ಯಾವ ಅಳಲು ನೋವು ಇರದಿರಲಿ ಮರುಗು ಆಕ್ರಂದನ
ಏಕತಾನದಿ ನಾ ಹೊರಟಾಗ ದೂರ ತೀರಕೆ ನಿತಾಂತತೆಯಲಿ

ಆ ನನ್ನ ಪಯಣದ ಗೊತ್ತು ಗುರಿ ಮೀರಿಹುದು
ನನ್ನಳವಿನ ಮಿತಿಯ
ಆದರೂ ಬಲ್ಲೆ ಈ ಕಾಣದ ಕಡಲ ಅಲೆ ಕರೆದೊಯ್ಯಲಹುದು ಎಲ್ಲು ತೊಡರದಲೆ
ಕಾಣಬಹುದು ನಾನಲ್ಲಿ ನನ್ನ ದೂರದ
ಬಲು ನಿಗೂಢ ಪಯಣದ ಹರಿಕಾರನ ಕಣ್ತುಂಬ
ನಾ ಸಾಗಿ ಹೋದಾಗ ಈ ಜೀವಜಗದ ಮೇರೆಯ
ತಡೆ ಹಾಯ್ದು ನಡೆದಾಗ

‍ಲೇಖಕರು Admin

1 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading