ಕಣ್ಮರೆಯಾದ ಯಕ್ಷಲೋಕದ ಧ್ರುವ ನಕ್ಷತ್ರ…

ಪುರುಷೋತ್ತಮ ಬಿಳಿಮಲೆ

ಕುಂಬಳೆ ಸುಂದರ ರಾವ್ (ಮಾರ್ಚ್ ೨೦, ೧೯೩೪- ನವಂಬರ ೩೦, ೨೦೨೨)
ನಾನು ಕಣ್ಣು ಬಾಯಿಬಿಟ್ಟು ಆಟ ನೋಡುತ್ತಿದ್ದೆ. ಕೌರವನ ಆಸ್ಥಾನದಲ್ಲಿ ಧುರವೀಳ್ಯ ಸ್ವೀಕರಿಸಿ ಹೊರಟ ಕೃಷ್ಣ ಅನತಿ ದೂರ ಸಾಗಿ ಹಿಂಬಾಲಿಸಿ ಬರುತ್ತಿದ್ದ ಕರ್ಣನ ‌ ಇದ್ದಕ್ಕಿದ್ದಂತೆ ಬರಸೆಳೆದು ಅಪ್ಪಿ ʼ ಕರ್ಣಾ, ನನಗೂ ನಿನಗೂ ಭೇದವೇ?ʼ ಎಂದು ಕೇಳುತ್ತಾನೆ. ಇದುವರೆಗೆ ತನ್ನನ್ನು ಸೂತ ಪುತ್ರನೆಂದೇ ಭಾವಿಸಿಕೊಂಡಿದ್ದ ಕರ್ಣ ದಿಗ್ಭ್ರಮೆಗೊಂಡು ಹೇಳುತ್ತಾನೆ- ʼ ಕೃಷ್ಣಾ, ನೀನೋ ಒಂದು ಪರ್ವತ, ನಾನೋ ಪ್ರಪಾತ. ನೀನೋ ಆ ಮಹಾ ಸಿಂಧು, ನಾನೋ ಆ ಸಿಂಧುವಿನಿಂದ ಸಿಡಿದು ಬಿದ್ದ ಒಂದು ಬಿಂದು, ಹೇ ಜಗದ ಬಂಧೂ, ನಾನೂ ನೀನೂ ಹೇಗೆ ಒಂದು?. ಹೀಗೆ ಹೇಳುವಾಗ ಕುಂಬಳೆಯವರು ಮಾತುಗಳು ಯಾಂತ್ರಿಕವಾಗುತ್ತಿರಲಿಲ್ಲ. ಬದಲು ಭಾವೋತ್ಕರ್ಷತೆಯಿಂದ ಕೂಡಿರುತ್ತಿದ್ದುವು. ಭಾರತೀಯ ಕಾವ್ಯ ಮೀಮಾಂಸೆಯ ಎಲ್ಲ ಲಕ್ಷಣಗಳೂ ಕುಂಬಳೆಯರ ಮಾತಿನ ಮುಂದೆ ನಮಗೆ ಸಪ್ಪೆ ಅನಿಸುತ್ತಿತ್ತು.

ನಾನು ಯಕ್ಷಗಾನ ನೋಡಲು ಆರಂಭಿಸಿದ್ದು ಬಹುಮಟ್ಟಿಗೆ 1959-60ರ ಸುಮಾರಿನಲ್ಲಿ. ಅಂದಿನಿಂದ ಇಂದಿನವರೆಗೆ ಕಳೆದ ೬೦ ವರ್ಷಗಳಲ್ಲಿ ನಾನು ನೂರಾರು ಯಕ್ಷಗಾನಗಳನ್ನು ನೋಡಿದ್ದೇನೆ, ತಾಳಮದ್ದಳೆಗಳ ವಾದ ವಿವಾದಗಳಿಗೆ ಕಿವಿ ಗೊಟ್ಟಿದ್ದೇನೆ. ಈಗ ೨೦೨೨ ರ ಕೊನೆಯಲ್ಲಿ ಒಂದು ಕ್ಷಣ ನಿಂತು ಹಿಂದಿರುಗಿ ನೋಡಿದರೆ, ನಾನು ಮತ್ತು ನನ್ನ ತಲೆಮಾರಿನ ಜನರು ಯಕ್ಷಗಾನ ನೋಡುತ್ತಿದ್ದ ಕಾಲವು ಯಕ್ಷಗಾನದ ಸುವರ್ಣ ಯುಗ ಆಗಿತ್ತೇ ಎಂಬ ಭಾವ ಬಲವಾಗಿ ಮೂಡುತ್ತಿದೆ.

ಆ ಕಾಲಘಟ್ಟದ ಬಹುದೊಡ್ಡ ಪ್ರತಿಭೆಯೆಂದರೆ ಕುಂಬಳೆ ಸುಂದರ ರಾಯರು. ತಮ್ಮ ಅಸಾಧಾರಣ ಪ್ರತಿಭೆಯಿಂದಾಗಿ ಅವರು ಲಕ್ಷಾಂತರ ಯಕ್ಷಗಾನ ರಸಿಕರ ಮನಸೂರೆಗೊಂಡದ್ದಲ್ಲದೆ, ಯಕ್ಷಲೋಕದಲ್ಲಿ ತಮ್ಮದೇ ಮಾತಿನ ಛಾಪು ಮೂಡಿಸಿ ಇತಿಹಾಸ ಸೃಷ್ಟಿಸಿದರು. ನಮ್ಮ ಭಾಗ್ಯವೋ ಎಂಬಂತೆ, ಸುಂದರ ರಾಯರು ತಮ್ಮ ಆತ್ಮಚರಿತ್ರೆಯನ್ನೂ ಬರೆದು ಮಹದುಪಕಾರ ಮಾಡಿದ್ದಾರೆ. ಸುಂದರಕಾಂಡ (ಸಂ. ಅಮೃತ ಸೋಮೇಶ್ವರ)ವು ಅವರ ಅಭಿನಂದನ ಕೃತಿಯೇ ಹೌದಾದರೂ, ಅದರ ಆರಂಭದ ʼಯಕ್ಷಪಥ ಯಾತ್ರಿಕ ʼಭಾಗದಲ್ಲಿʼ೨೩೬ ಪುಟಗಳಷ್ಟು ದೀರ್ಘವಾಗಿ ಕುಂಬಳೆಯವರು ತಮ್ಮ ಕಲಾ ಜೀವನದ ಏಳು-ಬೀಳುಗಳ ಬಗ್ಗೆ ಪ್ರಾಮಾಣಿಕವಾಗಿ ಬರೆದುಕೊಂಡಿದ್ದಾರೆ.

ಕುಂಬಳೆ ಪರಿಸರದಲ್ಲಿ ನೇಯ್ಗೆ ಕುಲ ವೃತ್ತಿ ಮಾಡಿಕೊಂಡಿದ್ದ ಬಡಕುಟುಂಬದಲ್ಲಿ ಜನಿಸಿದ, ಮಲೆಯಾಳಂ ಮಾತೃಭಾಷೆಯ ಸುಂದರ ಎಂಬ ಹೆಸರಿನ ಹುಡುಗ, ಅತ್ತ ನೇಯ್ಗೆಯನ್ನೂ ಕಲಿಯದೆ, ಇತ್ತ ಶಾಲೆಗೂ ಹೋಗದೆ, ಯಕ್ಷಗಾನ ಕಲಾವಿದನಾಗಿ ಹಂತ ಹಂತವಾಗಿ ಮೇಲೇರುತ್ತಾ ಹೋಗಿ, ಕುಂಬಳೆ ಸುಂದರ ರಾವ್ ಆಗಿ ರೂಪುಗೊಂಡ ಬಗೆಯ ರೋಚಕ ವಿವರಗಳು ಇಲ್ಲಿವೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಊರು ಬಿಡಬೇಕಾದ ಸಂದರ್ಭ ಬಂದದ್ದು, ಬಣ್ಣಹಚ್ಚಿ, ವೇಷ ಕಟ್ಟಿದರೂ, ರಂಗಸ್ಥಳ ಪ್ರವೇಶ ಮಾಡಲಾಗದೇ ವೇಷ ಬಿಚ್ಚಿ, ಬಣ್ಣ ಅಳಿಸದೇ ಮನೆ ಸೇರಿದ ಪ್ರಸಂಗ-ಇತ್ಯಾದಿ ಘಟನೆಗಳನ್ನು ಸುಂದರ ರಾಯರು ಒಂದು ಬಗೆಯ ಮುಗ್ಧತೆಯಲ್ಲಿ ವಿವರಿಸುವ ಸೊಗಸನ್ನು ಓದಿಯೇ ತಿಳಿದುಕೊಳ್ಳಬೇಕು.

ಬಡತನದ ಬೇಗುದಿಯಲ್ಲಿ ಉರಿದು, ಅದರ ಬೂದಿಯಿಂದೆದ್ದು ಬಂದ ಕುಂಬಳೆಯವರು ಮುಂದೆ ಸುಮಾರು ೬೦ ವರ್ಷಗಳ ಕಾಲ ಯಕ್ಷಗಾನ ರಂಗಭೂಮಿಯ ಅದ್ವಿತೀಯ ಕಲಾವಿದರಾಗಿ ರಾರಾಜಿಸಿದರು. ನಿರಂತರ ಅವಮಾನಕ್ಕೊಳಗಾದ “ಮಾಸ್ಟರ್ ಸುಂದರ’ ಮುಂದೆ ಪ್ರಾಸ ಬದ್ಧವಾಗಿ ಮಾತಾಡುವಾಗ ಬದುಕು ಮತ್ತು ರಂಗಭೂಮಿ ಅನುಸಂಧಾನಗೊಂಡು, ನನ್ನಂಥ ಅನೇಕ ಪ್ರೇಕ್ಷಕರ ಕಣ್ಣು ತೇವಗೊಂಡದ್ದು ಸುಳ್ಳಲ್ಲ.

ಈಗ ದೆಹಲಿಯಲ್ಲಿ ಕಣ್ಣು ತೇವಮಾಡಿಕೊಂಡು ಕುಳಿತಿರುವ ನನ್ನ ಮುಂದೆ ಕುಂಬಳೆಯವರ ನಹುಷ, ಕೃಷ್ಣ, ಸುಧನ್ವ ಪೆರುಮಲೆ ಬಲ್ಲಾಳ, ಕಾಂತು ಪೂಂಜ, ಕಚ, ಚ್ಯವನ, ಭಗೀರಥ, ಭರತ, ಕರ್ಣ ಚಾರ್ವಾಕ, ಉತ್ತರ, ವಿಶ್ವಾಮಿತ್ರ ಮೊದಲಾದ ಪಾತ್ರಗಳು ಜೀವಂತವಾಗಿ ಕಾಣುತ್ತಿವೆ. ಅವರ ಮಾತುಗಳಿಗೆ ಕ್ರಿಯೆಯಾಗುವ ಅಪೂರ್ವ ಗುಣವಿರುವುದರಿಂದಾಗಿ ‘ಕುಂಬಳೆಯವರಿಗೆ ಕುಣಿಯಲು ಬರುವುದಿಲ್ಲ’ ಎಂಬ ಮಾತಿಗೆ ಅರ್ಥವೇ ಉಳಿಯುವುದಿಲ್ಲ. ನಾನು ಬದುಕಿದ ಕಾಲಘಟ್ಟದ ಬಗ್ಗೆ ಹೆಮ್ಮೆ ಪಟ್ಟುಕೊಳ್ಲಲು ಕುಂಬಳೆಯವರೂ ಕಾರಣ ಎಂಬುದು ಸಣ್ಣ ಸಂಗತಿಯೇನಲ್ಲ.
ನಿಮಗೆ ನಮನಗಳು ಸಾರ್

‍ಲೇಖಕರು Admin

December 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: