ಸರೋಜಿನಿ ಪಡಸಲಗಿ ಕವಿತೆಗಳು

ಸರೋಜಿನಿ ಪಡಸಲಗಿ

1. ಕಾಪಿಡಲು ಕಾಯುತಿದೆ ಜೀವ

ನಿತಾಂತ ರಮಣೀಯ ಪ್ರಶಾಂತ
ಇರುಳಿಗಾಗಿ ಕಾಯುತಿದೆ ಜೀವ ||
ಕಡುಗಪ್ಪು ಕತ್ತಲಲಿ ಕರಗಿ ಕಣ್ಮುಚ್ಚಿ
ಕನಸು ಸೋರದಂತೆ ಕಣ್ಣಂಗಳದಲಿ
ಬಂಧಿಸಿ ಕಾಪಿಡಲು ಕಾಯುತಿದೆ ಜೀವ ||

ಸರಿದ ದಾರಿಯುದ್ದಕೂ ಕಣ್ಣರಳಿಸಿದರೆ
ಅಸಂಖ್ಯ ನೆನಪುಗಳು ಹಾಸಿ ಹೊದ್ದು
ಒರಗಿ ಮಲಗಿ ಮೈಸುತ್ತ ಮುತ್ತ ಎರಗಿ
ಕಾಡುವ ಆ ಸೊತ್ತನ ಅವುಚಿ ಕತ್ತಲಲಿ
ಕಣ್ಣಂಗಳದಲಿ ಬಂಧಿಸಿ ಸೋರದಂತೆ
ಕಾಪಿಡಲು ಕಾಯುತಿದೆ ಜೀವ ||

ಸ್ತಬ್ಧ ಇರುಳನು ಕಣ್ಣಗಲಿಸಿ ಬಗೆದು
ನಾಳೆಗಳ ಅರಸಿ ರೂಪು ರೇಷೆ ಬರೆದು
ಅದರೊಡಲಲಿ ನವಿರು ನಕ್ಷೆ ಕೆತ್ತುತ
ಆ ಚಿತ್ತಾರಗಳ ಬಲು ಜೋಕೆಯಾಗಿ
ಕಣ್ಣಂಗಳದಲಿ ಬಂಧಿಸಿ ಸೋರದಂತೆ
ಕಾಪಿಡಲು ಕಾಯುತಿದೆ ಜೀವ ||

ಪಡುವಣ ಕೆಂಬಣ್ಣ ಮೂಡಣ ಹೊಂಬಣ್ಣ
ಕದಡಿ ಕರಗಿಸಿ ಬೆರೆಸಿದ ಆ ಕಡುಗತ್ತಲಿನ
ಹೊದಿಕೆಯಡಿ ಹಾಯಾಗಿ ಕಾಲು ನೀಡಿ
ಕನಸೊಂದನ ಮುಚ್ಚಟೆಯಿಂದ ಎದೆಲಿರಿಸಿ
ಹೊಸ ಹೊಂಗನಿಸಿಗೆ ಕೈ ಚಾಚಿ ಬಾಚುತ
ಆ ಜೀವ ಸೆಲೆಯ ಕಣ್ಣಂಗಳದಲಿ ಬಂಧಿಸಿ
ಸೋರದಂತೆ ಕಾಪಿಡಲು ಕಾಯುತಿದೆ ಜೀವ ||

2. ವ್ಯಾಖ್ಯೆ ಉಂಟೆ

ವ್ಯಾಖ್ಯೆಯ ಹಂಗಿಲ್ಲದ ಅಂಕೆಯಿಲ್ಲದ
ಹೇಳಿ ಅರ್ಥೈಸಲಾಗದ ವ್ಯರ್ಥ ಪ್ರಯತ್ನದ ಶಬ್ದ ತಾಯಿ
ತಿಳಿಯಲಾರದ ಆಳದ ಅಂತ ಕಾಣದ ಹೃದಯ
ಒಣ ಮಾತುಗಳ ಜಡತೆಯಿರದ ಚೇತನ
ಅದನ ಎಲ್ಲಿ ಹೇಗೆ ಹಿಡಿದಿಡುವಿ ಹೇಳು
ಯೋಚಿಸು ಉಂಟೇ ಆ ಶಕ್ತಿ ನಿನ್ನ ಶಬ್ದಗಳಿಗೆ

ಬಿದ್ದಾಗ ಅತ್ತಾಗ ನೊಂದಾಗಲಷ್ಟೇ ಅಲ್ಲವೇ ಅಲ್ಲ
ಅನುಕ್ಷಣ ನಿನ್ನೆದೆಯ ಬಡಿತ ಆಲಿಸುತ್ತಿರುವ
ಗಳಿಗೆ ಗಳಿಗೆ ನಿನ್ನ ನೆರಳಾಗಿರುವ ನೀನೇ ತಾನಾಗಿರುವ
ತನ್ನತನವನ್ನೆಲ್ಲ ಧಾರೆಯೆರೆದು ತನ್ನಿರುವ ಮರೆತಿರುವ
ಆ ಅವಳನ್ನ ಎಲ್ಲಿ ಹೇಗೆ ಹಿಡಿದಿಡುವಿ ಹೇಳು
ಯೋಚಿಸು ಉಂಟೇ ಆ ಶಕ್ತಿ ನಿನ್ನ ಶಬ್ದಗಳಿಗೆ

ಎದೆಯುದ್ದ ಬೆಳೆದು ನಿಂತ ಕಂದನ ದಿನವೆಂದು
ಒಮ್ಮೆಯೂ ಎಣಿಸದ ದಿನವೂ ಹೊಸ ದಿನ
ಹೊಸ ಆಸೆ ಕನಸು ಹುರುಪಿನ ದಿನ ಕಂದನದು
ಅಸಹಾಯಕ ಸಿಟ್ಟಿನಲ್ಲೂ ಒಲವೇ ಕಾಂಬ
ಆ ಅವಳನ್ನು ಎಲ್ಲಿ ಹೇಗೆ ಹಿಡಿದಿಡುವಿ ಹೇಳು
ಯೋಚಿಸು ಉಂಟೇ ಆ ಶಕ್ತಿ ನಿನ್ನ ಶಬ್ದಗಳಿಗೆ

ಮಾಗಿ ಬಾಗಿದರೂ ಬಾಗದ ಮಮತೆಯ ವೃಕ್ಷ
ಕಂದನ ಮುಜುಗರ ಕಾಣದ ಕೋಪದಲೂ ನಗು
ನಡುಗುವ ತನುವಿಗೆ ಆಸರೆ ನೀಡುವ ಕಂದ ನೊಂದಾನು
ಗಟ್ಟಿಯಾಗೆನುತ ಒಲವನೆಳೆಯ ಅರಸುವ ಮಂಜುಗಣ್ಣಗಳ
ಆ ಅವಳನ್ನು ಎಲ್ಲಿ ಹೇಗೆ ಹಿಡಿದಿಡುವಿ ಹೇಳು
ಯೋಚಿಸು ಉಂಟೇ ಆ ಶಕ್ತಿ ನಿನ್ನ ಶಬ್ದಗಳಿಗೆ
ನೀಡಬಲ್ಲೆಯಾ ವ್ಯಾಖ್ಯೆ ಆ ಶಬ್ದ ‘ತಾಯಿ’ ಗೆ |

‍ಲೇಖಕರು Admin

July 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shrivatsa Desai

    ಎರಡೂ ಅದ್ಭುತ ಕವನಗಳು. ಭಾವಭರಿತವಾದ ಕವಿತೆ ತಾಯಿಯ ಬಗ್ಗಿ ಬರೆದದ್ದನ್ನು ಬಣ್ಣಿಸಲು ಶಬ್ದಗಳುಂಟೇ?

    ಪ್ರತಿಕ್ರಿಯೆ
  2. Sarojini Padasalgi

    ಧನ್ಯವಾದಗಳು ಶ್ರೀ ವತ್ಸ ದೇಸಾಯಿ ಅವರೇ. ನಿಮ್ಮ ಪ್ರೋತ್ಸಾಹ ಕರ ನುಡಿಗಳಿಗೆ ನಮನ!
    ಈ ಅವಕಾಶ ಒದಗಿಸಿದ ಅವಧಿಗೂ ಧನ್ಯವಾದಗಳು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: