ಅಮೃತಾ ಹೆಗಡೆ ಅಂಕಣ- ನೆನಪಾಯ್ತು ‘ಮೂರನೇ ಕಿವಿ’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

7

‘ಸೀವಿಯರ್​ಟು  ಪ್ರೊಫೌಂಡ್​​’ ಅಂತ ರಿಪೋರ್ಟ್​ಬಂದಿದೆ ಅಲ್ವಾ… so.. ಇಂಥ ಮಕ್ಕಳಿಗೆ ನಮ್ಮ ಸಹಜ ಮಾತುಗಳು ಕೇಳ್ಸೋದಿಲ್ಲ. ಪಟಾಕಿ ಶಬ್ಧ, ವಾಹನಗಳ ಹಾರ್ನ್​, ಗುಡುಗಿನ ಶಬ್ಧದಂಥ ದೊಡ್ಡ ಶಬ್ಧಗಳನ್ನ ಮಾತ್ರ ಅವನು ಕೇಳಿಸ್ಕೋತಾನೆ ಅಷ್ಟೆ’. ಎಂಬುದು ‘ನನ್ನ ಮಗನಿಗೆ ಏನೆಲ್ಲ ಕೇಳ್ಸುತ್ತೆ?’ ಎಂಬ ನನ್ನ ಪ್ರಶ್ನೆಗೆ ಅವರ ಉತ್ತರವಾಗಿತ್ತು. 

ಎಲ್ಲ ಪರೀಕ್ಷೆಯ ನಂತರ ಮೈಸೂರಿನ ‘ಆಯಿಶ್’ (All India Institute Of Speech and Hearing) ನಲ್ಲಿ ಆಡಿಯಾಲಾಜಿಸ್ಟ್​  ಒಬ್ಬರು ಹೇಳಿದ ಮಾತಿದು. ‘ಹುಟ್ಟಿದ ಸಂದರ್ಭದಿಂದ ಹಿಡಿದು ಈ ಕ್ಷಣದ ತನಕ ನನ್ನ ಮಗ, ನನ್ನ ಧ್ವನಿಯನ್ನೇ ಕೇಳಿಸಿಕೊಂಡಿಲ್ಲ’ ಎಂಬ ಅರಿವೊಂದು ಮನಸ್ಸನ್ನ ಹುಯ್ದಾಡಿಸುತ್ತಿತ್ತು. 

ಅಥರ್ವ ಹುಟ್ಟಿದ ಮೇಲೆ ಅವನಿಗೆ ಆರು ತಿಂಗಳುಗಳಾಗುವ ತನಕ, ನನ್ನಮ್ಮ ಅವನಿಗೆ ಒಂದು ದಿನವೂ ಲಾಲಿ ಹಾಡುಗಳ ಸೇವೆಯನ್ನ ತಪ್ಪಿಸಿರಲಿಲ್ಲ. ಎಣ್ಣೆ ಮಸಾಜ್​, ಸ್ನಾನ, ಆಟ ಆಡಿಸುವಾಗ, ತೊಟ್ಟಿಲು ತೂಗುವಾಗ, ಇಂಥ ಎಲ್ಲ ಸಮಯಗಳಲ್ಲಿ ಅಮ್ಮನ ಲಾಲೀಹಾಡು ಮನೆತುಂಬಿಕೊಳ್ಳುತ್ತಿತ್ತು. ‘ಲಾಲಿ ಎಂದರೆ ಬಾಲ ಆಲೈಸಿ ಕೇಳುವನು… ಹಾಲ ಹಂಬಲನೆ ಮರೆವನು’ ಎಂಬ ಹಾಡನ್ನ ನಾವೆಲ್ಲ ಸೇರಿ ಹಾಡ್ತಾ ಇದ್ರೆ, ಪಾಪೂಗೆ ಈಗ ಎಣ್ಣೆ ಮಸಾಜ್​ ನಡೆಯುತ್ತಿದೆ ಎಂಬುದು ಅಕ್ಕ- ಪಕ್ಕದ ಮನೆಯವರಿಗೆಲ್ಲ ತಿಳಿಯುತ್ತಿತ್ತು. ‘ನೋಡೇ.. ನೋಡೇ.. ಈ ಹಾಡು ಹೇಳ್ತಾ ಇದ್ರೆ ಹ್ಯಾಂಗೆ ಕೇಳ್ತಾನೆ.. ನಿನ್​ಮಗ!’ ಪ್ರತಿ ಬಾರಿಯೂ ನನ್ನ ಕರೆದು ಕರೆದು ತೋರಿಸುವಳು ಅಮ್ಮ. ಯಾಕೋ ಏನೋ ಅಮ್ಮ ಎಣ್ಣೆ ಹಚ್ಚುವಾಗ ಅಥರ್ವ ಆಚೆ ಈಚೆ ನೋಡದೇ, ಅವಳನ್ನೇ ನೋಡುತ್ತಾ, ನಗುತ್ತಾ, ಬಾಯಲ್ಲಿ ತಾನೂ ಶಬ್ಧ ಹೊರಡಿಸುತ್ತಾ, ಅನುಕರಿಸುತ್ತಿದ್ದ.  ಅಮ್ಮನಿಗೇನೋ ಖುಷಿಯೋ ಖುಷಿ. ಪಾಪು ಅವಳನ್ನೇ ಅನುಕರಿಸಿದಷ್ಟೂ ಲಾಲಿ ಹಾಡು ಜೋರಾಗತ್ತಿತ್ತು. ಆದರೂ ಅಲ್ಲೆಲ್ಲೂ ಅನುಮಾನದ ಸಣ್ಣ ಎಳೆಯೂ ಎದ್ದಿರಲಿಲ್ಲ. 

ನಾನಂತೂ ಅಥರ್ವ ಇನ್ನೂ ಹೊಟ್ಟೆಯಲ್ಲಿದ್ದಾಗಲೇ ಸಿನಿಮಾ ಲಾಲಿ ಹಾಡುಗಳನ್ನ ಉರುಹೊಡೆದಿಟ್ಟುಕೊಂಡಿದ್ದೆ. ಮಲಗಿಸುವಾಗ, ತೊಟ್ಟಿಲು ತೂಗುವಾಗಲೆಲ್ಲ ‘ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ’ ಹಾಡುತ್ತಿದ್ದ ನನಗೆ ಒಮ್ಮೆ ಮನೆಗೆ ಬಂದಿದ್ದ ಯಮುನತ್ತೆ ಇನ್ನೊಂದಿಷ್ಟು ಲಾಲಿ ಹಾಡುಗಳನ್ನ ಹೇಳಿಕೊಟ್ಟಿದ್ದರು. ಅವೆಲ್ಲ ನನಗೆ ಕಂಠಗತವಾಗಿತ್ತು. ಈ ಹಾಡುಗಳೆಲ್ಲ ಅವನಿಗೆ ಇಷ್ಟವಾಗಲಿ ಎಂಬ ಆಸೆ ಇದ್ದಿದ್ದಂತೂ ಹೌದು. ಅದಕ್ಕಿಂತ ಹೆಚ್ಚಾಗಿ ‘ಅಯ್ಯೋ… ಹಾಡು ಹಾಡದೇ ಇದ್ರೆ ನನ್ಮಗ ಮಲಗೋದೇ ಇಲ್ಲ ಗೊತ್ತಾ..’ ಅಂತ ನನ್ನ ಗೆಳತಿಯರ ಹತ್ತಿರ ಕೊಂಚ ಹೇಳಿಕೊಳ್ಳಬೇಕು ಎಂಬ ಹುಚ್ಚು ಬಯಕೆಯೂ ಇದ್ದಿತ್ತು.  

ಒಮ್ಮೆ ನಮ್ಮೂರಿನವರೇ ಆದ ಗಪ್ಪಣ್ಣಬಪ್ಪ ಮನೆಗೆ ಬಂದಿದ್ದರು. ಅವರಿಗೂ ಒಬ್ಬಳು ಮೊಮ್ಮಗಳಿದ್ದಳು. ಅಥರ್ವನಿಗಿಂತ ಕೇವಲ ಎರಡು ತಿಂಗಳಿಗೆ ದೊಡ್ಡವಳು ಅಷ್ಟೆ. ಅವರು ಬಂದಾಗೆಲ್ಲ ಮೊಮ್ಮಗಳ ಸುದ್ದಿ ಕೇಳಿದರೆ ಸಾಕು ಖಷಿಯಿಂದ ವಿವರಿಸುವರು. ‘ನನ್ನ ಮೊಮ್ಮಗಳೋ… ಭಾರೀ ಚುರುಕು ಬಿಡು. ತಾಯಿ ಧ್ವನಿ ಕೇಳಿದ್ರೆ ಸಾಕು ಧ್ವನಿ ಬಂದ ಕಡೆ ಹೊರಳಿ ನೋಡ್ತಾಳೆ, ಅವಳಮ್ಮ ಎಷ್ಟು ದೂರದಿಂದ  ಮಾತಾಡಿದ್ರೂ ಇವಳಿಗೆ ಗೊತ್ತಾಬಿಡ್ತದೆ’ ಅಂದಿದ್ದರು. ನನಗೆ ಇನ್ನೂ ಆ ಅನುಭವವಾಗಿಲ್ಲವಲ್ಲ ಎಂಬ ಕೊರಗು ಸ್ವಲ್ಪ ದಿನ ಮನಸ್ಸನ್ನ ಕಾಡಿತ್ತಷ್ಟೇ. ಆದರೆ ಅದೆಲ್ಲವೂ ಈಗ ಅರ್ಥವಾಗತೊಡಗಿತ್ತು. ಆ ಎಲ್ಲ ಬಿಂದುಗಳನ್ನೂ ಸೇರಿಸುತ್ತಾ, ಅಥರ್ವನಿಗೆ ಹುಟ್ಟಿದ ಕ್ಷಣದಿಂದಲೂ ಕಿವಿ ಕೇಳಿಸಿರಲೇ ಇಲ್ಲ ಎಂಬ ಸತ್ಯವನ್ನ ಜೀರ್ಣಿಸಿಕೊಳ್ಳಲು ಮನಸ್ಸು ಒಂದೊಂದೇ ಘಟನೆಗಳನ್ನ ನೆನಪಿಸಿಕೊಳ್ಳುತ್ತಿತ್ತು.  

ನನ್ನಪ್ಪನ ಮನೆಯ ನೆರೆಯ ಗೋಪಾಲಬಪ್ಪ ತೋಟಕ್ಕೆ ಬಂದ ಕೋತಿಗಳನ್ನ ಓಡಿಸುವಲ್ಲಿ ನಿಷ್ಣಾತರು. ತಮ್ಮ ಅಡಿಕೆ ತೋಟದೊಳಗೆ ಕೋತಿಗಳು ನುಗ್ಗಿದಾಗಲೆಲ್ಲ  ಪಟಾಕಿ ಹಚ್ಚಿ ಕೋತಿಗಳನ್ನ ಹೆದರಿಸುತ್ತಿದ್ದ ಅವರ ಬಳಿ, ಆನೆ ಪಟಾಕಿ, ಲಕ್ಷ್ಮೀ ಧಡಾಕಿ, ಆಟಂಬಾಂಬುಗಳ ದೊಡ್ಡ ಸಂಗ್ರಹ ಯಾವಾಗಲೂ ಇರುತ್ತದೆ. ಆವತ್ತು ಕೋತಿಗಳು ನಮ್ಮೆಲ್ಲರ ಮನೆಯ ಮಾಡಿನ ಮೇಲೆಯೇ ಜಿಗಿಯುತ್ತಿದ್ದವು. ಮನೆಯ ಹೆಂಚುಗಳೆಲ್ಲ ಮಂಗಗಳ ದಾಳಿಗೆ ತುತ್ತಾಗುತ್ತಿದ್ದರೆ, ಗೋಪಾಲಬಪ್ಪ ತಳಮಳಿಸುತ್ತಿದ್ದರು. 

ನನ್ನಮ್ಮ ಆಗಷ್ಟೇ ಮೂರುತಿಂಗಳು ಮಗು ಅಥರ್ವನಿಗೆ ಎಣ್ಣೆಸ್ನಾನ ಮಾಡಿಸಿ,  ಕಡೆಲೆಹಿಟ್ಟಿನ ಘಮದಲ್ಲಿ ಇನ್ನೂ ಹಬೆಯಾಡುತ್ತಿದ್ದ ಅವನ ಮೈ ಒರೆಸಿ,  ಪೌಡರ್​ಹಾಕಿ, ಬಿಸಿ ಮೈಗೇ ಮೆತ್ತಗಿನ ಹತ್ತಿಬಟ್ಟೆ ಸುತ್ತಿ, ಬೆಚ್ಚಗಿನ ತೊಟ್ಟಿಲೊಳಗೆ ಮಲಗಿಸಿ, ತೂಗಿ ನಿದ್ದೆಮಾಡಿಸಿ ಹೋಗಿದ್ದಳಷ್ಟೇ. ಒಮ್ಮೆಲೇ ಆಟಂಬಾಂಬ್​ನ ಶಬ್ಧ ಮನೆಯೊಳಗೆಲ್ಲ ನುಗ್ಗಿ, ಇಡೀ ಮನೆ ಕಂಪಿಸಿದಂತಾಯ್ತು. ಆಗಷ್ಟೇ ಮಗು ಮಲಗಿದ ರೀಲೀಫ್​ ಮೋಡ್​ನಲ್ಲಿ ಯಾವುದೋ ಪುಸ್ತಕದಲ್ಲಿ ಕಣ್ಣಾಡಿಸುತ್ತಿದ್ದ ನನಗೂ ಶಾಕ್​ ಆಗಿತ್ತು. 

‘ಅಯ್ಯೋ… ಮಗು ಬೆಚ್ಚಿಬಿತ್ತೋ ಏನೋ.. ತಂಗೀ.. ನಡಿಯೇ ಏನಾಯ್ತು ನೋಡೇ…’ ಅಂತ ಅಮ್ಮ ಅಡುಗೆ ಮನೆಯಿಂದಲೇ ಬಡಬಡಿಸುತ್ತಾ ತೊಟ್ಟಿಲಬಳಿ ಓಡಿ ಬಂದರೆ, ನಾನೂ ಮನೆಯ ಜಗುಲಿಯಿಂದ ಧಾವಿಸಿ ಬಂದಿದ್ದೆ. ಇಬ್ಬರೂ ಏದುಸಿರು ಬಿಡುತ್ತಾ ತೊಟ್ಟಿಲೊಳಗೆ ಇಣುಕಿದರೆ, ಸುಕುಮಾರ ಅಥರ್ವ ನೆಮ್ಮದಿಯಾಗಿ ನಿದ್ದೆ ಮಾಡುತ್ತಲೇ ಇದ್ದ. ‘ಅಯ್ಯೋ ಮುದ್ದು ಕಂದಂಗೆ ಎಂಥ ನಿದ್ದೆ ನೋಡೇ.. ಪಟಾಕಿ ಶಬ್ಧಕ್ಕೂ ಎಚ್ಚರವಾಗಿಲ್ಲ’ ಅಂತ ತಮ್ಮ ಕೈಬೆರಳುಗಳಿಂದ ಲಟಲಟನೆ ದೃಷ್ಟಿ ತೆಗೆದು, ಖುಷಿಪಟ್ಟಳು ಅಮ್ಮ. ಅಲ್ಲದೇ, ಆಗಿಂದಾಗಲೇ ಗೋಪಾಬಪ್ಪನ ಮನೆಗೆ ಓಡಿಹೋಗಿ.. ಏನೋ ಹೇಳಿಬಂದಳು. ಅವತ್ತಿನಿಂದ ದೂರದಲ್ಲೆಲ್ಲೋ ಪಟಾಕಿ ಶಬ್ಧ ಕೇಳಿಸುತ್ತಿತ್ತೇ ಹೊರತು ಮನೆಯ ಹತ್ತಿರ ಶಬ್ಧವಾಗಿರಲಿಲ್ಲ. 

‘ಪಟಾಕಿ ಶಬ್ಧ ಇವನಿಗೆ ಕೇಳಬಹುದು ಅಂದರಲ್ಲ ಆ ಮೇಡಮ್​ ಆದರೂ ಆವತ್ತು ಮನೆಯ ಅಂಗಳದಲ್ಲಿಯೇ ಆಟಂಬಾಂ ಸಿಡಿದ ಶಬ್ಧವಾಗಿದ್ದರೂ ಏಕೆ ಅಥರ್ವನಿಗೆ ಗೊತ್ತಾಗಲಿಲ್ಲ..? ಪಟಾಕಿ ಶಬ್ಧವೂ ಕೇಳದಷ್ಟು ಕಿವುಡೇ…?’ ಆತ ನಿದ್ದೆಯಲ್ಲಿದ್ದನಲ್ಲ.. ಅದಕ್ಕಾಗಿಯೇ ಕೇಳಿಸದಿರಬಹುದು’.  ಪ್ರಶ್ನಿಸುವುದೂ ಮನಸ್ಸೇ, ಅದಕ್ಕೊಂದು ಉತ್ತರ ಹುಡುಕಿ ಹೇಳುವುದೂ ಮನಸ್ಸೇ. ನಮ್ಮ ಕಾಲಮೇಲೇ ಮಲಗಿ ಜಂಘೀ ನಿದ್ದೆಯಲ್ಲಿದ್ದ ಮಗನ ಕಾಟವಂತೂ ಇರಲಿಲ್ಲ ಆದರೂ ಬಸ್ಸಿನಲ್ಲಿ ಅಕ್ಕಪಕ್ಕವೇ ಕುಳಿತರೂ ಮೌನವಾಗಿ ಕಿಟಕಿಯನ್ನೇ ನಿರುಕಿಸುತ್ತಿದ್ದ ನಮ್ಮಿಬ್ಬರ ಕಣ್ಣಿನಲ್ಲಿ ಮಾತ್ರ,  ನಮ್ಮಿಂದ ತಪ್ಪಿಸಿಕೊಂಡು ಹಿಂದೆ ಹಿಂದೆ ವೇಗವಾಗಿ ಸರಿಯುತ್ತಿದ್ದ ರಸ್ತೆ ಇಕ್ಕೆಲಗಳ ಮರಗಳ ಬಿಂಬವಿತ್ತು.  

ಮುಂದೇನು ಮಾಡುವುದು..? ಕಿವಿಗೆ ಹಾಕಲು ಶ್ರವಣ ಸಾಧನವನ್ನಂತೂ ಬುಕ್ ಮಾಡಿಯಾಗಿದೆ. ಇನ್ನು ಹದಿನೈದು ದಿನಗಳೊಳಗೆ ಮಷಿನ್​   ಬರುತ್ತದಂತೆ. ಮಷಿನ್​ಬಂದಮೇಲೆ ಮೈಸೂರಿನ ‘ಆಯಿಶ್’ (ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ಆಫ್​ಸ್ಪೀಚ್​ ಅಂಡ್​ ಹಿಯರಿಂಗ್​) ಗೆ ಹೋಗಿ, ಅವರು ನೀಡುವ ಹದಿನೈದು ದಿನಗಳ ತರಬೇತಿ ತರಗತಿಗೆ ಸೇರಿಕೊಳ್ಳುವುದು ಎಂದು ನಿಶ್ಚಯಿಸಿದ್ದಾಗಿದೆ. ಮಷಿನ್​ಬರುವವರೆಗೆ ಕಾಯುವುದಷ್ಟೆ ಕೆಲಸ ಈಗ ಅಂದುಕೊಂಡು ಕಣ್ಮುಚ್ಚಿದ್ದೆ. ರಾಜರಾಜೇಶ್ವರಿ ನಗರ ಬಂದಾಗ ವಿನಯ್​ ನನ್ನ ಎಬ್ಬಿಸಿದ್ದ.  

ದಿನಗಳು ಕಳೆದವು. ವಾರ ಕಳೆಯುತ್ತಿದ್ದಂತೆ, ಆಯಿಶ್​ಗೆ ಫೋನಾಯಿಸಿದೆ ಶ್ರವಣ ಸಾಧನ ಬಂದಿಲ್ಲ, ಒಂದು ವಾರ ಬಿಟ್ಟು ಕರೆಮಾಡಿ ಅಂದರು. ಇನ್ನೊಂದು ವಾರವೂ ಕಳೆಯಿತು. ಶ್ರವಣ ಸಾಧನಗಳ ಸುದ್ದಿಯೇ ಇಲ್ಲ. ಆಗಲೇ ನನಗೆ ನಾಗರತ್ನ ಫೋನಾಯಿಸಿದ್ದಳು.  

ನಾಗರತ್ನ ನನ್ನ ಬಾಲ್ಯದ ಗೆಳತಿ.  ಅವಳೂ ಕೂಡ ಕಿವುಡು ಮಗುವಿನ ತಾಯಿ. 9 ತಿಂಗಳು ಮಗುವಿಗೇ ಕಿವಿ ಪರೀಕ್ಷೆ ಮಾಡಿಸಿ, ಶ್ರವಣ ಸಾಧನ ಹಾಕಿ, ಯಾವ ತರಬೇತಿ ಶಾಲೆಗೂ ಹೋಗದೇ, ಮನೆಯಲ್ಲಿದ್ದುಕೊಂಡೇ ಮಗಳಿಗೆ ಮಾತು ಕಲಿಸಿದ ಮಹಾತಾಯಿ ಅವಳು. ನನ್ನ ಮಗನ ವಿಷಯ ಅವಳಿಗೆ ಗೊತ್ತಾದ ದಿನವೇ, ನನಗೆ ಫೋನಾಯಿಸಿದ್ದಳು. ಹತ್ತುವರ್ಷಗಳ ಕಾಲ ಸಂಪರ್ಕವೇ ಇಲ್ಲದ ನಮ್ಮ ನಡುವೆ ಸಮಾನ ನೋವೊಂದು ಮತ್ತೆ ಕೊಂಡಿಯಾಗಿತ್ತು.

ತನ್ನ ತೀವ್ರ ಶ್ರವಣದೋಷವಿದ್ದರೂ ಶ್ರವಣ ಸಾಧನದ ಸಹಾಯದಿಂದ ಕೇಳಿಸಿಕೊಂಡು ಚೆನ್ನಾಗಿ ಮಾತನಾಡುತ್ತಿದ್ದ 8 ವರ್ಷದ ಮಗಳು ರಕ್ಷಾಳ ಹತ್ತಿರವೂ ನನ್ನೊಂದಿಗೆ ಮಾತನಾಡಿಸಿ, ಆಶಾವಾದ ಹೆಚ್ಚಿಸಿದಳು. ‘ಕಿವುಡು ಮಕ್ಕಳಿಗೂ ಮಾತು ಕಲಿಸಬಹುದು ಕಣೇ, ನನ್ನ ಮಗಳೇ  ಇಲ್ವಾ ನಿನ್ನ ಕಣ್ಣೆದುರಿಗೆ..? ಒಂದಷ್ಟು ವರ್ಷ ನಾವು ಕಷ್ಟಪಟ್ಟರೆ, ನಮ್ಮ ಕಷ್ಟಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತೆ ಕಣೇ, ಹೆದರಬೇಡ’ ಧೈರ್ಯ ತುಂಬಿದಳು.

ಮೈಸೂರಿನ ಆಯಿಶ್​ನಲ್ಲಿಯೇ ನಾನು ಟ್ರೈನಿಂಗ್​  ಪಡೆದಿದ್ದು. ಅಲ್ಲಿಗೇ ಹೋಗು, ಅವರು ಹೇಳಿದಂತೆಯೇ ಮಾಡು’ ಸೂಚಿಸಿದಳು. ಅಷ್ಟೇ ಅಲ್ಲದೆ, ‘ಮಾತಾಡು, ಜಾಸ್ತಿ ಮಾತಾಡು ನಿನ್ನ ಮಗನ ಹತ್ತಿರ. ನಾವು ಎಷ್ಟು ಜಾಸ್ತಿ ಮಾತನಾಡುತ್ತೀವೋ ಅಷ್ಟು ಬೇಗ ನಮ್ಮ ಮಕ್ಕಳಂಥ ಮಕ್ಕಳಿಗೆ ಮಾತು ಬರುತ್ತದೆ’ ಸಲಹೆ ಕೊಟ್ಟಿದ್ದಳು. ‘ಮಾತಾಡಬೇಕು ಹೌದು, ಏನು ಮಾತನಾಡುವುದು ಇಷ್ಟು ಚಿಕ್ಕ ಮಗುವಿನ ಹತ್ತಿರ..?’ ತಿಳಿಯುತ್ತಿರಲಿಲ್ಲ ನನಗೆ. ಮಾತನಾಡಬೇಕೆಂದು ಶುರು ಮಾಡುತ್ತಿದ್ದಂತೆ, ಮಾತುಗಳೇ ಮುಗಿದು ಹೋದ ಅನುಭವ. ಸುಮ್ಮನಾಗಿಬಿಡುತ್ತಿದ್ದೆ. 

ಮಗನೊಂದಿಗೆ ಜಾಸ್ತಿ ಮಾತನಾಡುವ ನನ್ನ ವಿಫಲ ಯತ್ನ ಜಾರಿಯಲ್ಲಿದ್ದಾಗಲೇ, ನನ್ನ ಅಪ್ಪ ಫೋನಾಯಿಸಿದ್ದರು. ಅವರಿಗೆ ಆಪ್ತರಾದ ರವೀಂದ್ರ ಭಟ್ ಐನಕೈ ಅವರ ಫೋನ್​ನಂಬರ್​ಕೊಟ್ಟು, ‘ಒಮ್ಮೆ ಮಾತನಾಡು ರವೀಂದ್ರರ ಬಳಿ. ಅವರೂ ಇಂಥದ್ದೇ ಸಮಸ್ಯೆಯನ್ನ ಸಮರ್ಥವಾಗಿ ಎದುರಿಸಿ ಗೆದ್ದವರು. ಶ್ರವಣದೋಷ ಇರುವ ಅವರ ಮಗ ನಿರಂಜನ, ಈಗ ಚೆನ್ನಾಗಿ ಮಾತನಾಡುತ್ತಾನೆ. ರವೀಂದ್ರ ಭಟ್​ದಂಪತಿ ನಿನಗೆ ಮಾರ್ಗದರ್ಶನ ಕೊಟ್ಟೇ ಕೊಡುತ್ತಾರೆ’ ಎನ್ನುತ್ತಾ ರವೀಂದ್ರ ಭಟ್ಟರು ಬರೆದರುವ ‘ಮೂರನೇ ಕಿವಿ’ ಪುಸ್ತಕದ ಬಗ್ಗೆ ವಿವರಿಸಿದ್ದರು.

ಅಪ್ಪ ಆ ಪುಸ್ತಕವನ್ನ ವಿವರಿಸುತ್ತಿದ್ದಾಗ ಹಿಂದೆಂದೋ ನಾನು ಆ ಪುಸ್ತಕ ಓದಿದ್ದ ನೆನಪಾಯ್ತು.. ಕಳೆದ ಆರೇಳು ವರ್ಷಗಳ ಹಿಂದೆಯೇ  ನಾನು  ಆ ಪುಸ್ತಕವನ್ನ ಓದಿದ್ದೆ. ಅದು 2010 ರ ಸಮಯವಿರಬಹುದು. ಮುದುವೆಯೂ ಆಗದ ಹುಡುಗಿ ನಾನು. ಆಗಷ್ಟೇ ಕಾಲೇಜು ಮುಗಿಸಿ, ಬೆಂಗಳೂರಿನಲ್ಲಿ ಸಣ್ಣ ಕೆಲಸ ಹಿಡಿದು ಹಿರಿಹಿರಿ ಹಿಗ್ಗಿ, ಊರಿಗೆ ಹೋದಾಗ ಅಪ್ಪನ ಟೇಬಲ್​ಮೇಲೆ ‘ಮೂರನೇ ಕಿವಿ’ಯನ್ನ ನೋಡಿದ್ದೆ.  ವಿಶೇಷವಾಗಿದ್ದ ಆ ಪುಸ್ತಕದ ಹೆಸರು ನೋಡಿ, ಆಶ್ಚರ್ಯದಿಂದ ನಾಲ್ಕಾರು ಹಾಳೆಗಳನ್ನ ತಿರುವಿಯೂ ಹಾಕಿದ್ದೆ.

ಆಗಷ್ಟೇ ಶಿರಸಿಯಲ್ಲಿ ಬಿಡುಗಡೆಯಾಗಿದ್ದ ‘ಮೂರನೇ ಕಿವಿ’ ಪುಸ್ತಕದ ಬಗ್ಗೆ, ರವೀಂದ್ರ ಭಟ್ಟರ ಪತ್ನಿ ದೀಪಾ ಅವರು  ಶ್ರವಣ ದೋಷವಿರುವ ಮಗನಿಗೆ ಮಾತು ಕಲಿಸಲು ಪಟ್ಟ ಕಷ್ಟದ ಬಗ್ಗೆ ಸಮಾರಂಭಕ್ಕೆ ಖುದ್ದು ಅತಿಥಿಯಾಗಿ ಹೋಗಿದ್ದ ಅಪ್ಪ ನನಗೆ ವಿವರವಾಗಿ ಹೇಳಿದ್ದರು. ಆಗ ಕಥೆ ಪುಸ್ತಕದ ರೀತಿಯಲ್ಲಿ ಓದಿ ಮುಗಿಸಿದ್ದ ಆ ಪುಸ್ತಕ ಈಗ ಮತ್ತೆ ಮತ್ತೆ ನೆನಪಾಗುತ್ತಿತ್ತು. ಅಪ್ಪನಿಗೆ ಏನನ್ನಿಸಿತೋ ಏನೋ, ಎರಡೇ ದಿನಗಳಲ್ಲಿ ನಾನೇ ಬೆಂಗಳೂರಿಗೆ ಬರುತ್ತೇನೆ, ರವೀಂದ್ರರ ಮನೆಗೆ ಹೋಗೋಣ ಅಂದುಬಿಟ್ಟರು. 

ಅದೊಂದು ಅಕ್ಟೋಬರ್​ ತಿಂಗಳ ಒಂದು ಭಾನುವಾರ.  ಹಿಂದಿನ ರಾತ್ರಿಯೇ ಊರಿಂದ ಹೊರಟ ಅಪ್ಪ, ಬೆಳಿಗ್ಗೆ 7 ಗಂಟೆಗೇ  ಬೆಂಗಳೂರಿನ ನಮ್ಮ ಮನೆಯಲ್ಲಿದ್ದರು.  ಬಂದವರೇ, ರವೀಂದ್ರ ಭಟ್​ರಿಗೆ ಫೋನ್​ಮಾಡಿ, ಇವತ್ತೇ ಸಾಯಂಕಾಲ ನಿಮ್ಮ ಮನೆಗೆ ನಾವು ಬರುತ್ತೇವೆ ಎಂದರು.  ಅವರೂ ಕೂಡ ಅಷ್ಟೇ ಪ್ರೀತಿಯಿಂದ ನಮ್ಮನ್ನು ಆಹ್ವಾನಿಸಿದರು. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: