ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಅನುವಾದಿತ ಕವಿತೆ- ಭೀತಿ…

ಮೂಲ : ಗಿಬ್ರಾನ್ 
ಕನ್ನಡಕ್ಕೆ: ಸರೋಜಿನಿ ಪಡಸಲಗಿ

ಅರಿಯದ ಕಡಲ ಸೇರುವ ಮುನ್ನ ಹರಿದು ಬಂದ ನದಿಗೂ ಭೀತಿಯ ನಡುಕ
ಸಾಗಿ ಬಂದ ದಾರಿಯುದ್ದಕ್ಕೂ ದಾಟಿ ಬಂದಿದ್ದರೂ
ಗಿರಿಯ ಕಡಿದಾದ ತುದಿಯಿಂದ
ಕೊರಕಲು – ತಿರುವು – ಹಳ್ಳ- ತಿಟ್ಟುಗಳಗುಂಟ
ಜೊತೆಗೇ ಸಮತಟ್ಟು ಬಯಲು ಜನಸಂದಣಿಯ ನಡುವಿಂದ
ಸಾಗಿ ಬಂದ ಹಾದಿ ಅದು ಬಲ್ಲದದನ
ಈಗ ಇದಿರಿಗುಂಟು ಅರಿಯದ ವಿಶಾಲ ಸಾಗರ
ಒಳಹೊಗಲೇ ಬೇಕಾದ ನೀಲ ನೀರ ಹರವು

ಈ ಕಡಲಲ್ಲಿ ಸೇರಿ ಕರಗಿ ಹೋದರೆ ಮತ್ತೆಲ್ಲಿ ಉಂಟು ಉಳಿವು
ಎಂದೆಂದಿಗೂ ಮಾಯ ಮರೆತು ಹೋದ ಇರುವು
ಆದರೆ ಹೋಗಲುಂಟೇ ಮರಳಿ ಬಂದ ದಾರಿಯಲಿ
ಕಾಲನ ಪಥದಲ್ಲಿ ಸಾಗಿ ಬಂದು ಕಡಲಿನ ಬಯಲಿನಂಚಿನಲ್ಲಿ ಬಂದು ನಿಂತ ಜೀವದಂತೆ
ಬಲು ಅಸಹಾಯಕ ಅದೂ
ಬೇಕೋ ಬೇಡವೋ ಒಂದಾಗಲೇ ಬೇಕು ಕಡಲ ಒಡಲಲ್ಲಿ
ಆವಾಗಲೇ ಅನುಭವಿಸೀತು ಭೀತಿ ದೂರಾಗಿ ಅದೇನೋ ಆನಂದವ
ತಿಳಿದೀತು ನನ್ನ ಅಸ್ತಿತ್ವ ಅಳಿದಿಲ್ಲ ಬೆಳೆದೆ ನಾ ಎಂದು
ನಾನೀಗ ಕಡಲೊಡನೆ ಸೇರಿ ಕಡಲಾದೆ
ಈ ಬಲು ವಿಸ್ತಾರದ ನೀಲ ಬಯಲಲ್ಲಿ ಬಯಲಾದೆ ಎಂದು ||

‍ಲೇಖಕರು Admin

1 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading