ರೊಟ್ಟಿ ಊಟದ ಕೂಡ ಓದೋ ಸುಖ…

ರಶ್ಮಿ ಎಸ್

ನಮ್ಮನಿಯೊಳಗ ಎಲ್ಲಾರಿಗೂ ಓದ್ಕೊಂತ ಉಣ್ಣೂದು ಚಟ ಅದ. ಇದು ಎಲ್ಲಾರಿಗೂ ಸಿಂದಗಿ ಮನಿಯಿಂದ ಅಂಟಿರುವ ಚಟ. ನಮ್ಮ ಸಿಂದಗಿ ಮನಿ ಅಡಗಿ ಮನಿನೆ ಅಷ್ಟು ದೊಡ್ಡದು ಇತ್ತು. ಎಲ್ಲಾರೂ ಸಾಲಕ ಕುಂತ್ರ ಪ್ರತಿಯೊಬ್ಬರ ಎಡಗೈಯೊಳಗ ಒಂದು ಪುಸ್ತಕ ಕಾಯಂ ಇರೂದು. ನಮ್ಮಜ್ಜ ಉಣ್ಣಾಕ ಕುಂತ್ರ, ಮುಂದಿನ ಸರದಿ ನಮ್ದೆ ಆಗ್ತಿತ್ತು.

ಅಲ್ಲೀತನಾನೂ, ಜಿನ್ನೆದಾಗ (ಮನಿಯೊಳಗಿಂದ ಮಾಳಗಿಗೆ ಹೋಗುವ ಮೆಟ್ಟಿಲು ಇರುವ ಜಾಗ. ಸಣ್ಣದೊಂದು ಬಾಗಿಲು ಇರ್ತದ ಇದಕ. ಆ ಮೆಟ್ಟಲ ಮ್ಯಾಲೆ ಕುಂತು ಓದುವ ಖುಷಿನೆ ಬ್ಯಾರೆ.), ಪಡಸಾಲಿಯೊಳಗ, ಅಂಗಳ ಮತ್ತು ಪಡಸಾಲಿ ಕೂಡಿಸುವ ಮೆಟ್ಟಿಲು ಮ್ಯಾಲ, ಹೊಸ್ತಲ ದಾಟಿದ ಮ್ಯಾಲೆ ನಮ್ಮಜ್ಜನ ಖೋಲಿ ದಾಟಿ, ಅಂಗಳಕ್ಕ ಬರಬೇಕು.ಎಡಕ್ಕ ಅಜ್ಜನ ಖೋಲಿ, ಬಲಕ್ಕ ದವಸ ಧಾನ್ಯದ ಚೀಲ, ಅವುಗಳ ಪಕ್ಕ ಪ್ರಜಾಮತ, ಸುದಾ, ವನಿತಾ, ಪ್ರಜಾವಾಣಿ, ತರಂಗ, ಕರ್ಮವೀರ ಜೋಡಿಸಿ ಇಟ್ಟಿರ್ತಿದ್ರು.

ಅಲ್ಲಿಂದ ಹಳೆ ಸರಕು ಕಿತ್ತಿ ಓದೂದು ನಮಗ ಅಗ್ದಿ ಪ್ರೀತಿಯ ಕೆಲಸ ಆಗಿತ್ತು. ಹಂಗ ಆ ಜಿನ್ನೆಯೊಳಗ ಕುಂದ್ರೂದದ ಅಲ್ಲಾ.. ಅದೊಂದು ನಮೂನಿ ಜಿನ್ನಿ ನಮ್ ಕೂಡ ಇರುವ ಬಲ ಕೊಡುವಂಥ ಅನುಭವ. ಹಿತವಾದ ಬೆಳಕು, ತಂಪಾದ ಗಾಳಿ. ನಮ್ಮದೇ ಕಲ್ಪನಾ ಲೋಕ.

ಊಟಕ್ಕ ಕರದ್ರಂದ್ರ ಆ ಕಲ್ಪನೆಗೆ ಒಂದು ಬ್ರೇಕ್‌ ಬೀಳ್ತಿತ್ತು. ಆದ್ರ ನಮ್ಮ ಬಸು ಮಾಮಾ, ಹೇಮಕ್ಕ ಅಂದ್ರ ನನ್ನ ಪ್ರೀತಿಯ ಮೇಮಿ ಯಾವಾಗಲೂ ಕೈಯ್ಯಾಗ ಒಂದು ಪುಸ್ತಕ ಹಿಡ್ಕೊಂಡೇ ಉಣ್ಣೋರು. ಹಿಂಗ ಉಣ್ಣಾಕ, ಓದ್ಕೊಂತ ಉಣ್ಣುವ ಸುಖಕ್ಕೇ ಖಟಿರೊಟ್ಟಿ ತಾಟಿನಾಗ ಮುರಕೊಂಡು, ಕುದಿಬ್ಯಾಳಿ, ಮಸಾಲಿ ಖಾರ ಹಚ್ಕೊಂಡು ಉಣ್ಣೋರು.

ಮಾಡೆದಾಗ ಖಟಿರೊಟ್ಟಿ ಯಾವತ್ತೂ ಖಾಲಿ ಆಗ್ತಿರಲಿಲ್ಲ. ಒಮ್ಮೆಮ್ಮೆ ಮಾಡಿನ ಮಾಡು ಮುಟ್ಟುಹಂಗ ಆದಾಗ, ಅವನ್ನ ತಗದು ಒಗ್ಗರಣಿ ಹಾಕೋರು. ಅದಕ್ಕ ರೊಟ್ಟಿಮುರಿ ಅಂತ ಕರಿಯೂದು. ರೊಟ್ಟಿ ಒಗ್ಗರಣಿ ಅಂತಲೂ ಅಂತಾರ.

ಖಟಿ ರೊಟ್ಟಿಯನ್ನ ನಲ್ಲಿ ನೀರು ಅಥವಾ ಚರಗಿ ನೀರು ತೊಗೊಂಡು ಹದವಾಗಿ ತೊಯಿಸಿ, ಪುಡಿ ಮಾಡಬೇಕು. ಪುಡಿ ಮಾಡಿ ತೊಯ್ಸಿದ್ರ ಮುದ್ದಿ ಆಗ್ತದ. ಭಾಳ ಮಂದಿ ಅವಲಕ್ಕಿ ತೊಯ್ಸಿದ್ಹಂಗ ಅಂತ ಅನ್ಕೊಂಡು ಮೊದಲು ಚೂರು ಮಾಡಿ, ಆಮೇಲೆ ತೊಯ್ಸತಾರ. ಆದ್ರ ಅದು ಮಜಾ ಬರೂದಿಲ್ಲ. ಉಣ್ಣೂಮುಂದ ರೊಟ್ಟಿ ಕುರುಮ್‌ ಅನ್ನೂದು ತಿಳಿಯೂದಿಲ್ಲ. ಅಗ್ದಿ ಮೂರು ನಾಕು ತಿಂಗಳ ಕೂಸಿಗೆ ಮಾರಿ ವರಸ್ತೇವಿಯಲ್ಲ, ಹಂಗ ಒಂದೀಟೆ ನೀರು ಸೋಕಿಸಿ, ತಯೊಇಸಬೇಕು.

ಒಗ್ಗರಣಿಗೆ ಒಂದು ಕಡಾಯಿ ಆದ್ರ ಬೇಷಿರ್ತದ. ಅದಕ್ಕ ಉಳ್ಳಾಗಡ್ಡಿ, ತಪ್ಪಲು ಉಳ್ಳಾಗಡ್ಡಿ ಇದ್ರ, ತಲ್ಲಪ ಜೊತಿಗೆ ಕತ್ತರಿಸಿಕೊಳ್ಳಬೇಕು. ಕರಿಬೇವು, ಕೊತ್ತಂಬ್ರಿ, ಸಾಸಿವಿ, ಜೀರಗಿ ಖಮ್ಮನ್ನುವ ಒಗ್ಗರಣಿ ಕೊಡಬೇಕು. ಉಳ್ಳಾಗಡ್ಡಿ ಹಸಿಬಿಸಿ ಬೆಂದಿರುಮುಂದ, ಚೂರು ಹುಣಸಿಹುಳಿ ಹಿಂಡಬೇಕು. ಕಂದು ಬಣ್ಣ ಬ್ಯಾಡಾದ್ರ, ಆಮೇಲೆ ನಿಂಬಿಹುಳಿನೂ ಹಿಂಡಬಹುದು. ನಮ್ಮ ಮಸಾಲಿ ಖಾರ ಹಾಕಬೇಕು. ಮಸಾಲಿ ಖಾರ ಮಾಡೂದೆ ಒಂದು ದೊಡ್ಕತಿ. ಅದನ್ನ ಇಲ್ಲಿ ಬರಿಯೂದಿಲ್ಲ. ಆದ್ರ ನಮ್ಮ ರುಚಿನೆ ಬೇಕು ಅನ್ನೂದಾದ್ರ ಉಮಾದೀಸ್‌ ಅವರ ಮಸಾಲಿ ಖಾರ ಬಳಸ್ರಿ. ಹುಳಿ, ಖಾರ ಒಗ್ಗೂಡುಮುಂದ ಚೂರು ಬೆಲ್ಲನೂ ಹಾಕಬೇಕು. ಹುಣಸೀಹುಳಿ ಹಿಂಡದೇ, ನಿಂಬೆಹುಳಿ ಹಿಂಡಿದ್ರ, ಮ್ಯಾಲೆ ಚೂರು ಸಕ್ರಿ ಉದುರಸ್ಕೊರಿ.

ಆ ಹುಳಿ ಕಮರು ಹೋಗೂದ್ರೊಳಗ ಮಸಾಲಿಖಾರದ ಘಮ ತೇಲಾಕ ಶುರು ಮಾಡ್ತದ. ಅವಾಗ ಚೂರು ಮಾಡಿದ ರೊಟ್ಟಿ ಇದ್ರೊಳಗ ಹಾಕಿ ಕಲಕಬೇಕು. ಅಗ್ದಿ ನಮ್ಮ ಪ್ರೀತಿ ಹುಡುಗಿ, ಮಗಳ ಮುಂಗುರುಳು ತೀಡ್ತೀವಲ್ಲ ಹಂಗ… ಇಲ್ಲಾಂದ್ರ ಇವು ಸಿಟ್ಮಾಡ್ಕೊಂಡು ಪುಡಿಯಾಗುವ ಸಾಧ್ಯತೆನೆ ಭಾಳ.

ಇದಕ್ಕ ಜೋಡಂದ್ರ ನಮ್ಮ ಕರಿದ ಸೇಂಗಾ. ಇವಂತೂ ಕಾಯಂ ಮನ್ಯಾಗ ಇರ್ತಾವ. ಕಾದೆಣ್ಣಿಯೊಳಗ ಸೇಂಗಾ ಕರದು, ಮ್ಯಾಲೆ ಒಂದಿಷ್ಟು ಉಪ್ಪು, ಖಾರ ಉದುರಿಸಿ, ಖಾರದ ಸೇಂಗಾ ಮಾಡಿಟ್ಟಿರ್ತೀವಿ. ಅವನ್ನ ಮ್ಯಾಲೆ ಉದುರಿಸಿಕೊಂಡು, ಕಪ್‌ನಾಗ ಚಹಾ ಬಗ್ಗಸ್ಕೊಂಡು, ತಿನ್ಕೊಂತ ಚಹಾ ಹೀರಿದ್ರ… ಆಹಹಾ…

ರೊಟ್ಟಿ ಮುರಿಮುಂದ ಸ್ವರ್ಗನ ಕಾಲುಮುರಕೊಂಡು ಬಿದ್ದಿರ್ತದ. ಖಟಿರೊಟ್ಟಿ ಮತ್ತು ರೊಟ್ಟಿ ಮುರಿ ಇವೆರಡೂ ನಮ್ಮ ಗುಣ ಸ್ವಭಾವವನ್ನೇ ತೋರ್ತಾವ.

ಬೆಂದ ರೊಟ್ಟಿಗೆ ಹಂಚಿನ ಹಿಂದ ಇಟ್ಟು, ಹದವಾದ ಕಾವು ಕೊಟ್ಟಾಗ ಅವು ಖಟಿಯಾಗ್ತಾವ. ಕುರುಕುರು ಆಗ್ತಾವ. ಸುಮ್ನ ಮಾಡಿದ ರೊಟ್ಟಿ ಒಣಗಿಸಿದ್ರ ಅವು ಬಿರುಸಾಗ್ತಾವ. ಕುರುಕುರು ಆಗೂದಿಲ್ಲ. ಥೇಟ್‌ ನಮ್ಮ ಮನಸಿದ್ದಂಗ. ಬೇಕನಿಸಿದಾಗ ಪ್ರೀತಿ ಸಿಕ್ರ ಅರಳ್ತದ. ಕಾಯ್ದು ಕಾಯ್ದು ಸಿಕ್ಕಾಗ ಅದು ಬರೇ ಅಗತ್ಯ ಆಗ್ತದೇ ಹೊರತು ಪ್ರೀತಿ ಆಗೂದೆ ಇಲ್ಲ. ಹಂಗ ಮನಸು ಬಿರುಸಾದಾಗ ಪ್ರೀತಿ ಮಾಡೆ ಸೇರ್ತದ. ನಾವು ಮಾಡು ನೋಡ್ಕೊಂತ ಮಲಗ್ತೀವಿ.

ಖಟಿ ರೊಟ್ಟಿಗೆ ನೀರು ಸೋಕಿಸಿದ್ಹಂಗ ಕಾಳಜಿ ತಾಕಿದಾಗ, ಸೋಕಿದಾಗ ಮನಸು ಮೃದು ಆಗ್ತದ. ಕಷ್ಟ ಸುಖದೊಳಗ ಪಾಲ್ಗೊಂಡಾಗ ಆ ಹುಳಿ, ಖಾರದ ಸ್ವಾದ ಒಂದಾಗ್ತದ. ಇವೆರಡೇ ಹೆಚ್ಚಾದ್ರ ಬದುಕಿನಾಗ ಎಂಥ ಸಂಭ್ರಮ ಇರ್ತದ ಹೇಳ್ರಿ? ಸಾಂಗತ್ಯ ಸಂಭ್ರಮದೊಳಗ ಬದಲಾಗಬೇಕಂದ್ರ ಅಲ್ಲಿ ಒಂದು ಸವಿ ಇರಬೇಕು. ಅದು ಇಂಥ ಜಗಳಗಳ ಹಿಂದೆಯೂ ಬೆಲ್ಲದಂಥ ಸವಿ, ನಮ್ಮ ಪ್ರೀತಿ, ಕಾಳಜಿ ಕಾಣ್ತಿರಬೇಕು. (ತೋರಬಾರದು. ಕಾಣಬೇಕು). ಹಂಗಾದಾಗ ಬದುಕು ಬ್ಯಾಸರಾಗುವಷ್ಟು ತದುಕಿದ್ರೂ ರೊಟ್ಟಿಮುರಿ ಹಂಗೇ ಸವಿಬಹುದು. ಚಹಾ ಕುಡದು, ಅಮೃತ ಪಾನ ಆದಂಗ ಮತ್ತ ಮರುದಿನದ ಸಂಘರ್ಷಕ್ಕ ತಯಾರಾಗಬಹುದು.

ಅಗ್ದಿ ನಮ್ಮ ರೊಟ್ಟಿಯಹಂಗೆ, ಕುದಿನೀರಿನ ಜಿಗುಟು ಹಾಕಿಸಿಕೊಂಡು, ಕೊಣಮಗಿಯೊಳಗ ಎಲ್ಲಾ ಕಡೆನೂ ತಟ್ಟಸ್ಕೊಂತ, ಹಂಚಿನಮ್ಯಾಲೆ ಹೊಟ್ಟಿಹುಬ್ಬಿಸಿಕೊಂಡು… ಮತ್ತ ಬುಟ್ಟಿಯೊಳಗ ಮೆತ್ಗ ಆಗ್ಕೊಂತ.. ನಮ್ಮತನ ಬಿಡದೇ ಇದ್ರ, ಕಾಲ ಎಷ್ಟರೆ ನಾದಲಿ, ವಿಧಿ ಎಷ್ಟರೆ ತಟ್ಲಿ, ನಮ್ಮವರ ನಡುವೆ ನಾವು ಬೆಚ್ಗ ಇರ್ತೀವಿ.

ಅದಕ್ಕೇ ನಮ್ಮ ಸಿಂದಗಿ ಮನಿಯ ಓದು, ಆ ರೊಟ್ಟಿ, ರೊಟ್ಟಿ ಮುರಿ, ಮೇಮಿ, ಬಸು ಮಾಮಾ, ಅಜ್ಜ, ಇಂಡಿಯಮ್ಮನ್ಹಂಗ ಈ ಊಟ, ಊಟದ ಕೂಡ ಓದು.

ಬೀದರ್‌ನಾಗ ನಾನು, ಗಿರಿಯಣ್ಣ ಹಿಂಗ ಓದ್ಕೊಂತ ಉಣ್ತೀವಿ. ನಮ್ಮ ಮಕ್ಕಳೊಳಗ ಭೂಮಿ, ಆದಿ, ಚಿನ್ನಿ, ಅಮ್ಮು ಈಗೀಗ ಚೂರು ಅರ್ನಿನೂ ಹಿಂಗ ಓದ್ತದ.

ಅವರೂ ರೊಟ್ಟಿ ಮುರಿ ಆನಂದಸ್ತಾರ. ಊಟವನ್ನು ಆದರದಿಂದ ಆಸ್ಥೆಯಿಂದ ಆಸ್ವಾದಿಸೋರು, ಬದುಕನ್ನೂ ಆನಂದಸ್ತಾರ. ರೊಟ್ಟಿ ಮುರಿ ತಿಂದು ನೋಡ್ರಿ…

‍ಲೇಖಕರು Admin

October 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: