ಪ್ರವರ ಕೊಟ್ಟೂರು ಕವಿತೆ- ಅಪ್ಪನಿಗೆ ಎಪ್ಪತ್ತು…

ಪ್ರವರ ಕೊಟ್ಟೂರು

ಏನಾದರೊಂದು ಬರೆಯುತ್ತಲೇ
ಹೊಸದೊಂದು ಜಗತ್ತು ಇರುಳ ನಡುವೆ
ನಕ್ಷತ್ರಗಳಂತೆ ಹುಟ್ಟಿಬಿಡುತ್ತವೆ
ಬೇಸಿಗೆಯ ನಟ್ಟ ನಡುವೆ ಹಡೆವ ಸುಳಿಗಾಳಿಯಂತೆ
ಎಂಥಾ ವಿಲಕ್ಷಣ ಜಗತ್ತು ಅಂತೀರಿ
ಮುಖದ ನೆರಿಗೆಗಳಲ್ಲೇ ಆಯಸ್ಸು ಅಳೆದು,
ಮಾತು ಮಾತಿಗೂ ಸಾಸಿರ ಹಾಡುಗಳು ಸುಳಿದು,
ಕಥೆಯ ಗರ್ಭದಲ್ಲೊಂದು ಕಥೆ
ಅದರಲ್ಲೊಂದು ಮತ್ತೊಂದು ಹೀಗೆ ಅಪರಿಮಿತ
ಹಸಿವೀಲೆ ತುಟಿಯ ಮೇಲೆ ನಗು
ಹೂವಂತೆ ಬಿರಿಯುತ್ತದೆ

ಬರೆಯುತ್ತಾ
ಬಗಲಿಗೊಂದು ಚೀಲ ಇಳಿಬಿಟ್ಟುಕೊಂಡು
ತಾನೇ ಪಾತ್ರವಾಗಿ, ಕಾಲು ದಣಿಯೆ
ಓಡಾಡಿ
ರಕುತದಲೆ ಕೈ ತೊಳೆವವರ ಜೋಡಿ
ಸಾಯಲು ಹೊರಟವರ ಜೋಡಿ
ಮುಕುಳಿಯ ಮೇಲೆ ಚಲ್ಲಾಣವಿಲ್ಲದ ಕಂದಮ್ಮಗಳ ಜೋಡಿ
ರಾಯಲ ಸೀಮೆಯ ಮಚ್ಚು ಲಾಂಗುಗಳ,
ನಾಡ ಪಿಸ್ತೂಲುಗಳ, ಹ್ಯಾಂಡ್‌ ಗ್ರೇನೇಡುಗಳ ನಡುವೆ
ಚಿಟ್ಟೆ ರೂಪು ಧರಿಸಿ
ಕೊನೆಗೆ ಟೀ ಅಂಗಡಿಯ ಮುಂದೆ
ಜೇಬಿನಲ್ಲೇ ಅನಾಥವಾಗಿ ಬಿದ್ದುಕೊಂಡಿರುವ
ಎರಡು ಹಸಿರು ನೋಟುಗಳ
ಮುರಿಸಿದರೆ ಚಿಲ್ಲರೆಯಾದೀತೆಂಬ
ಯೋಚನೆಯಲ್ಲೇ ಬಿಕ್ಕಳಿಕೆ ಖಾಲಿಯಾಗುತ್ತಾ ತುಂಬಿಕೊಳ್ಳುತ್ತದೆ

ಬರೋಬ್ಬರಿ ಆರು ಚಿಲ್ಲರೆ ಅಡಿ ಮನುಷ್ಯ
ಇಷ್ಟು ಸಣ್ಣ ಪುಸ್ತಕದ ಪುಟಗಳಲ್ಲಿ ಹೊಕ್ಕಿ
ಮಣ್ಣಾದ ಅರಮನೆಗಳ ಹುಡುಕಿ
ಸಾವಿರಾರು ಮೈಲುಗಳ ದಾರಿ ಹಿಡಿದು,
ಕೊನೆಗೆ ಮಂಡ್ರಪ್ಪನ ಎದುರು ಡೊಂಕಾದ ಬೆರಳುಗಳಲ್ಲಿ ಪೆನ್ನು ಪೇಪರ್ರು ಹಿಡಿದು
ನಿನ್ನದೇನು ಕಥೆ ಹೇಳಯ್ಯಾ? ಅಂತ
ಹನ್ನೆರಡು ವರುಷ ಕೂತು ಕೇಳಿದ ಕಥೆಗೆ
ಹದಿನೈದಿಪ್ಪತ್ತು ಕೇಜಿ ತೂಕ ಇಳಿದು ಹೋಗಿದೆ

ತಾನು ಸೃಸ್ಟಿಸಿದ ಪಾತ್ರ
ತನ್ನದೇ ಮಾತು ಕೇಳಲು ಒಲ್ಲೆ ಎಂದಾಗ
ಅಸಾಧ್ಯ ಕೋಪ,
ದೇವರು ಹೊಕ್ಕಿದಂಥಾ ನಾಲಿಗೆ ಪಾತ್ರಗಳದ್ದು
ಲಬೊ ಲಬೊ ಎಂದು ಬಾಯಿ ಬಡಿದುಕೊಳ್ಳುವಾಗ
ಕರಡಿ ಪ್ರೀತಿ ಉಕ್ಕಿಬಿಡುತ್ತದೆ

ಅಂಗೈ ಚಾಚಿ ಅವರ ನೋವುಗಳ ಪಡೆದು
ಮೈಗೆ ಹಚ್ಚೆ ಹುಯ್ಯುವಾಗ,
ಹಸಿ ಗಾಯಗಳ ಕಡ ಪಡೆದು
ಸಣ್ಣಗೆ ಮುಲುಕುವಾಗ
ಗುಡಿಯ ಹೊರಗೆ ಹಸಿವೀಲೆ ಕೂತ ಕತ್ತಲನ,
ಕೊಟ್ರನ, ಠೊಣ್ಣಿಯ ಸಂಕಟಗಳ
ಎದೆಯ ಎಲುಬಿನ ನಡುವೆ ಹೊಯ್ದಾಡುವ
ಈಟೇ ಈಟು ಹೃದಯಕ್ಕೆ
ಕತೆಯ ಮುಲಾಮು ಸವರಿಕೊಳ್ಳುತ್ತಾರೆ
ಅಪ್ಪಚ್ಚಿಯಾದ ಬೆರಳುಗಳಲ್ಲಿ

ಹುಟ್ಟಿದ ದಿನದ ಶುಭಾಶಯಗಳು ಅಪ್ಪ

‍ಲೇಖಕರು Admin

October 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: