ಮಂಜುನಾಥ್ ನರಗುಂದ ಅನುವಾದಿತ ಕವಿತೆ – ಕೆಂಪು ಇರುವೆಗಳು…

ಮೂಲ: ಪ್ರತಿಷ್ಠಾ ಪಾಂಡ್ಯ

ಕನ್ನಡಕ್ಕೆ : ಮಂಜುನಾಥ್ ನರಗುಂದ

ಚಿಕ್ಕದಾದ ಹುತ್ತದಿಂದ
ಸಣ್ಣ ಕೆಂಪು ಇರುವೆಗಳು ಹೊರಬಂದವು
ಅಡಿಗೆ ಮನೆ ಬಾಗಿಲಿನ ಚೌಕಟ್ಟಿನ ಕೆಳಗಿನ ಬಲ ಮೂಲೆಯಲ್ಲಿ
ನೇರವಾಗಿ ಒಂದೇ ಸಾಲಿನಲ್ಲಿ ಚಲಿಸುತ್ತಾ
ಮೊದಲು ಮೇಲಕ್ಕೆ ಹೋಗಿ
ನಂತರ ಎಡಕ್ಕೆ
ತದನಂತರ ಕೆಳಗೆ
ಮತ್ತೆ ಸರಳ ರೇಖೆಯಂತೆ ಚಲಿಸಿ
ಅಡುಗೆ ಕಟ್ಟೆಯುದ್ದಕ್ಕೂ
ಒಂದೇ ಓರಣದಂತೆ ಮೆರವಣಿಗೆ
ಒಂದರ ನಂತರ ಒಂದಾಗಿ
ಬಹಳ ಶಿಸ್ತುಬದ್ಧ ಕಾರ್ಮಿಕರ ಹಾಗೆ.

ಅಮ್ಮ ಸ್ವಲ್ಪ ಸಕ್ಕರೆ ಹಾಕಿದಾಗ
ಅಥವಾ ಅಡಿಗೆ ಕೋಣೆಯಲ್ಲಿ ಸತ್ತ ಜಿರಳೆ ಇದ್ದಾಗ
ಅವು ಪ್ರತಿ ಬಾರಿ ಬರುತ್ತಿದ್ದವು
ಈ ಇರುವೆಗಳು ಪ್ರತಿ ಧಾನ್ಯವನ್ನು
ಅಥವಾ ಇಡೀ ಅವಶೇಷವನ್ನು ಎಳೆಯುವ ದೃಶ್ಯ ನೋಡುತ್ತಿದ್ದಳು.
ಅವು ಹಿಂತಿರುಗುವಾಗಲೂ ಸಹ
ಅದೇ ವಾಕರಿಕೆಯ
ಶಿಸ್ತುಬದ್ಧ ಶೈಲಿ
ತಾಯಿ ತನ್ನ ರಕ್ಷಣೆಗೆ ಧಾವಿಸುವವರೆಗೂ
ಅವಳು ಕಿರುಚುತ್ತಿದ್ದಳು.

ಇಂದು ಪ್ರತಿಕಾರ ತೀರಿಸಿಕೊಳ್ಳಲು
ಅವು ಆಕೆಯ ಮನೆಗೆ
ದಾಳಿ ಇಟ್ಟಿದ್ದವು
ಮಧ್ಯರಾತ್ರಿಯ ದುಃಸ್ವಪ್ನದಂತೆ,
ತಮ್ಮ ಮನೆಯೊಳಗೆ
ಅಸಂಖ್ಯಾತ ಇರುವೆಗಳು ಬಂದಿದ್ದು ಹೇಗೆಂದು
ಆಕೆ ಅಚ್ಚರಿಪಟ್ಟಿದ್ದಳು.
ಯಾವುದೇ ಸಾಲುಗಳಿಲ್ಲ
ಯಾವುದೇ ಕ್ರಮವಿಲ್ಲ
ಇನ್ನಾವುದೇ ಶಿಸ್ತಿಲ್ಲ
ಮೊದಲಿನ ಹಾಗೆಯೇ ಅವು
ಇಡೀ ಗೂಡಿನಿಂದ
ಹೊರಬಂದವು.
ಅಮ್ಮ ಗೂಡಿನ ದಿಬ್ಬಗಳ ಮೇಲೆ ಸ್ವಲ್ಪ ಗ್ಯಾಮಾಕ್ಸಿನ್ ಪುಡಿ
ಉದುರಿಸಿದಾಗ ಭಾವೋನ್ಮತ್ತ,
ಆಕ್ರೋಶದೊಂದಿಗೆ,
ಉಸಿರಾಡಲು ಹೆಣಗಾಡುತ್ತಾ
ಅವು ಆಕೆಯ ಮನೆಗೆ
ದಾಳಿ ಇಡುತ್ತಿದ್ದವು.

ಅವಳು ಬೇಗನೆ ಅವುಗಳನ್ನು
ಕೋಣೆಯಿಂದ
ಹೊರಗೆ ಗುಡಿಸಿ
ಬಾಗಿಲನ್ನು ಬಿಗಿಯಾಗಿ
ಮುಚ್ಚಿದಳು.
ಆದರೆ ತಕ್ಷಣ ಅವು ಕಿಟಕಿಯ ತಳದಿಂದ
ಬಾಗಿಲಿನ ಕೆಳಗಿನಿಂದ
ಒಮ್ಮೆಗೆ ಲಕ್ಷಾಂತರ ಸಂಖ್ಯೆಯಲ್ಲಿ
ಆ ಮೇಲ್ಮೈಯನ್ನು ಆವರಿಸಿಕೊಂಡಿರುವುದು
ಅಷ್ಟೇನೂ ಕಾಣುತ್ತಿಲ್ಲ
ಬಾಗಿಲಿನ ಚೌಕಟ್ಟಿನಲ್ಲಿನ ಬಿರುಕುಗಳಿಂದ
ಮುಖ್ಯ ಬಾಗಿಲಿನ ಸಣ್ಣ ಕೀ ಹೋಲ್‌ನಿಂದ
ಸ್ನಾನ ಗೃಹದ ರಂಧ್ರಗಳಿಂದ
ಬಿಳಿ ಸಿಮೆಂಟಿನ ಸಂದಿನಿಂದ
ಫ್ಲೋರಿನ ಅಂಚುಗಳಿಂದ
ಸ್ವಿಚ್ ಬೋರ್ಡಿನ ಹಿಂದಿನಿಂದ
ಗೋಡೆಗಳಲ್ಲಿನ ತೇವದ ಬಿರುಕುಗಳಿಂದ
ಪೊಳ್ಳಾಗಿರುವ ಕೇಬಲ್ ಗಳಿಂದ
ಕಪಾಟುಗಳಲ್ಲಿ ಆವರಿಸಿರುವ ಕತ್ತಲೆಯಿಂದ
ಹಾಸಿಗೆಯ ಕೆಳಗಿರುವ ಖಾಲಿ ಪ್ರದೇಶದಿಂದ
ವಿಚಲಿತಗೊಂಡಂತಹ ಇರುವೆಗಳು
ಕಾಲೋನಿಗಳನ್ನು ಆವರಿಸಿವೆ
ಅವು ತಮ್ಮ ಮನೆಗಳ ಹುಡುಕಾಟದಲ್ಲಿವೆ
ಭಗ್ನಗೊಂಡಿರುವ, ವಿನಾಶವಾಗಿರುವ, ಧ್ವಂಸಗೊಂಡಿರುವ
ತಮ್ಮ ಜೀವನದ ಹುಡುಕಾಟದಲ್ಲಿವೆ
ಯಾರದೋ ಬೆರಳುಗಳ ನಡುವೆ ಹತ್ತಿಕ್ಕಲಾಗಿದೆ
ಇನ್ನಾರದೋ ಕಾಲಡಿಯಲ್ಲಿ ಉಸಿರುಗಟ್ಟಿವೆ
ಹಸಿದ ಗೂಡುಗಳು
ಬಾಯಾರಿದ ಗೂಡುಗಳು
ಕೆರಳಿರುವ ಗೂಡುಗಳು
ಕೆಂಪು ಕಟ್ಟಿರುವೆ ಗೂಡುಗಳು
ಉಸಿರಾಟಕ್ಕಾಗಿ ಏದುಸಿರು ಬಿಡುತ್ತಿವೆ
ಆ ಕೆಂಪು ಇರುವೆಗಳ ಗೂಡುಗಳು.

‍ಲೇಖಕರು Admin

October 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: