ಸದಾಶಿವ್ ಸೊರಟೂರು ಹೊಸ ಕವಿತೆ- ನೆತ್ತರಿನಲಿ ಅದ್ದಿದ ಗುಲಾಬಿ..

ಸದಾಶಿವ್ ಸೊರಟೂರು

ಪ್ರತಿಬಾರಿಯೂ ಸಣ್ಣಗೆ ಬೆವರುತ್ತೇನೆ
ಒಮ್ಮಿಂದೊಮ್ಮಲೆ ಮೂಗಿಗೆ ಬಂದು
ಬಡಿಯುವ
ಸ್ಪಿರಿಟ್ ಫಿನಾಯಿಲ್ ಮಾತ್ರೆ ಮದ್ದಿನ
ಕಮ್ಮನೆ ವಾಸನೆಗಳು
ನರದೊಳಗೆ ಹರಿದಾಡುತ್ತವೆ.. 

ಹಾದಿಯಲ್ಲಿ ನಾಲ್ಕು ಹೆಜ್ಜೆ
ಸವೆಸುವ ಹೊತ್ತಿಗೆ
ರಾತ್ರಿ ಪಾಳಿಯ ದಾದಿ
ಹೊರಬರುತ್ತಾಳೆ
ನಿದ್ದೆಗೆಟ್ಟ ಅವಳ ಕಣ್ಣುಗಳಲಿ
ರೋಗಿಗಳ ನಿಟ್ಟುಸಿರು
ಓದಿಕೊಳ್ಳುತ್ತೇನೆ..

ರೊಯ್ಯನೆ ಓಡಿಬಂದ
ಆಂಬುಲೆನ್ಸ್ ನ ಸದ್ದಿಗೆ
ಆಸ್ಪತ್ರೆಯ ವರಾಂಡದಲ್ಲಿ
ಗೋಡೆಗೆ ನೇತುಹಾಕಲಾದ
ಚಿತ್ರದೊಳಗಿನ ಮಗು
ಬೆಚ್ಚಿಬೀಳುತ್ತದೆ

ಮೂರನೇ ರೂಮಿನಲ್ಲಿ
ಕೂತ ವ್ಯಕ್ತಿಯೊರ್ವ
ಹೆಗಲಿಗೆ ಸ್ಟೆತೊಸ್ಕೋಪ್
ತಗಲಿಸಿಕೊಂಡು
ವಿಧಿಯೊಂದಿಗೆ ಶರಂಪರ
ಜಗಳವಾಡಲು ಸಿದ್ದನಾಗಿದ್ದಾನೆ..

ಆಸ್ಪತ್ರೆಯ ಹೊಸ್ತಿಲು
ತುಳಿಯುವವರ ಮುಖದಲ್ಲಿ
ತರಹೇವಾರಿ ಆತಂಕಗಳು
ಬದುಕಿನ ಅಷ್ಟೂ ತಲ್ಲಣಗಳು
ಇಲ್ಲಿ ಮಾತ್ರ ನೆರೆದಿವೆ..

ರಕ್ತ ಮೂತ್ರ ಮೂಳೆ ಮಾಂಸಗಳ
ಪರೀಕ್ಷೆಗೆ ನೀಡಿ ಕೂತವರ
ಕ್ಷಣಗಳನ್ನು ಯುಗಗಳಲ್ಲಿ ಅಳೆಯಲಾಗುತ್ತದೆ
ಅವರ ಎದೆಯ ಸದ್ದು ಹೊರಗೆ
ಗುಡುಗಿನಂತೆ ಕೇಳಿಸುತ್ತದೆ..

ಜನರಲ್ ವಾರ್ಡಿನಿಂದ
ಹೆಣವೊಂದನ್ನು ಸಾಗಿಸುವ
ಹೊತ್ತಿನಲ್ಲೇ
ಹೆರಿಗೆಯ ಮನೆಯಿಂದ
ಮಗುವೊಂದು ಕಿಟಾರನೆ ಕಿರುಚಿ
ಜಗತ್ತಿಗೆ ಬಂದಿದ್ದನ್ನು ಸಂಭ್ರಮಿಸುತ್ತದೆ

ಸಾವಿನೊಂದಿಗೆ ಹೋರಾಡಿ ಗೆದ್ದ
ದೊಡ್ಡಮೊತ್ತವು
ನಾಳೆಗಳನ್ನು ಮಂಕಾಗಿಸುತ್ತದೆ
ದುಬಾರಿ ಬಿಲ್ಲುಗಳು
ಮತ್ತೊಂದು ರೋಗವಲ್ಲದೆ
ಇನ್ನೇನು?

ಸತ್ತವರ ಆತ್ಮಗಳ ಪಿಸುಗಾಟ
ಬದುಕಿದಂತಿರುವವರ ನೋವಿನ
ನಿಟ್ಟುಸಿರು
ಬದುಕಲಾಗದವರ ಸಂಕಟ
ಎಲ್ಲವೂ
ನನಗೆ ಉಸಿರುಗಟ್ಟಿಸುತ್ತವೆ..

ಸಾವು ಗೆಲ್ಲುವ ಹೊಡೆದಾಟದಲಿ
ತರಚುಗಾಯಗಳೆಷ್ಟೊ!
ಬದುಕಿನ ನಶ್ವರತೆಯ ಬೋಧನೆಯಷ್ಟೊ!
ಮತ್ತೆ ಮತ್ತೆ ಮೂಡಿದ ಭರವಸೆಗಳೆಷ್ಟೊ!

ನಿತ್ಯ ಆಸ್ಪತ್ರೆಯ ಮುಂಭಾಗದಲ್ಲಿ
ಅರಳುವ
ಕಡು ನೆತ್ತರಿನ ಗುಲಾಬಿಯ ಬಣ್ಣ
ಒಮ್ಮೆಯಾದರೂ ಬಿಳಿಯಾಗಲಿ
ಹಸುರಾಗಲಿ ನೀಲಿಯಾಗಲಿ
ಎಂದು ಆಶಿಸುತ್ತೇನೆ
ಆದರೆ
ಮತ್ತೆ ಮತ್ತೆ ನೆತ್ತರಿನಲಿ ಅದ್ದಿದ
ಗುಲಾಬಿ ಅರಳುತ್ತಲೇ ಇರುತ್ತದೆ..

‍ಲೇಖಕರು Admin

December 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: