ಜಯರಾಮಚಾರಿ ಹೊಸ ಕಥೆ- ಸೋಮವಾರ, ಮಟಮಟ ಮಧ್ಯಾಹ್ನ..

ಈ ಬಂಧನ…

ಜಯರಾಮಚಾರಿ

ಚಂದ್ರ ಲೇಔಟ್ ನ ನಮ್ಮೂರ ತಿಂಡಿಯ ಹೋಟೆಲ್ ಗಿಂತ ಸ್ವಲ್ಪವೇ ದೂರದ ರೋಡಿನ ಹತ್ತಿರ ಹೊಯ್ಸಳ ಗಾಡಿ ನಿಂತು ಅದರಿಂದ ಇಳಿದ ಪೇದೆಯೊಬ್ಬ ‘ನೀವೇ ಏನ್ರೀ ಜಯರಾಮಚಾರಿ’ ಎಂದು ಕೇಳಿದಾಗ ‘ಹೌದು’ ಅಂದ ಜಯರಾಮಚಾರಿ. ಉದ್ದ ತೋಳಿನ ಕಪ್ಪು ಟೀ ಶರ್ಟ್, ಸಿಮೆಂಟ್ ಕಲರಿನ ಶಾರ್ಟ್, ಉದ್ದ ಕೂದಲ ಬಿಟ್ಟು ಅದನ್ನ ಹೆಂಗಸರಂತೆ ಬ್ಯಾಂಡ್ ಹಾಕಿ ಹಿಂದೆ ತಳ್ಳಿದ್ದ, ಅವನಿಗಿಂತ ಒಂದು ಮಾರು ದೂರದಿ ಅವನ ಗೆಳೆಯ ನಾಗಭೂಷಣ ಇದ್ದ, ಅವನ ಕೈಯಲ್ಲಿ ಮೊಬೈಲ್ ಇತ್ತು, ಪೇದೆ ಅವನ ಕಡೆಗಣಿಸಿ ‘ಹತ್ತೋಲೆ ಗಾಡಿ’ ಎಂದು ಜಯರಾಮಚಾರಿಗೆ ಆವಾಜ್ ಹಾಕಿದ, ಸೆಕೆಂಡುಗಳಲ್ಲೇ ಬಹುವಚನ ಏಕವಚನವಾಗಿ ಅವನು ಹಾಕಿದ ಆವಾಜಿನಲ್ಲೇ ತಾನು ವಿರೋಧಿಸಿದರು ತನ್ನನ್ನು ಪಕ್ಕ ಎತ್ತಿಕೊಂಡು ಹೋಗುತ್ತಾರೆ ಎಂದು ಗೊತ್ತಾಗಿ, ಅವನ ತೊಡೆಗಳು ನಡುಗಿದವು, ‘ನಾ… ನಾನ್… ಯಾಕೆ ಗಾಡಿ ಹ…’ ಅಷ್ಟರಲ್ಲಿ ಬಿರಿಯಾನಿ ತಿಂದು, ಹಲ್ಲಿನತ್ತಿರ ಸಿಕ್ಕಿಕೊಂಡ ಮಟನ್ ಪೀಸುಗಳನ್ನ ಕೈಯಿಂದಲೇ ತೆಗೆದು ಡ್ರೈವರಿಗೆ ಹಿಂಸೆ ಕೊಡುತ್ತಿದ್ದ ಇನ್ಸ್‌ಪೆಕ್ಟರ್ ಇಳಿದು ಬಂದು ಕೆನ್ನೆಗೆ ಒಂದು ಬಿಟ್ಟರು. ಜಯರಾಮಚಾರಿಗೆ ನಾಲ್ಕು ದಿಕ್ಕುಗಳು ಒಂದಾಗಿ ದಿಕ್ಕಾಪಾಲಾಗುವುದು ಹೇಗೆ ಎಂದು ಗೊತ್ತಾಯ್ತು.

ಮೊಬೈಲ್ ಹಿಡಿದ ನಾಗಭೂಷಣ ಮೊಬೈಲ್ ಜೇಬಿಗಿಳಿಸಿ, ಪೊಲೀಸರನ್ನು ಕೇಳಬೇಕು ಎನ್ನುವಷ್ಟರಲ್ಲಿ ಹೊಯ್ಸಳ ಗಾಡಿ 1921 ಫೇಸ್‌ಬುಕ್ ಸ್ನೇಹಿತರು ಇರುವ, 391 ಇನ್ಸ್ಟಾಗ್ರಾಮ್ ಫಾಲೋವರ್ ಇರುವ, 819 ಕ್ಲಬ್ ಹೌಸ್ ಗೆಳೆಯರಿರುವ, 238 ಯು ಟೂಬ್ ಸಬ್ ಸ್ಕೈಬರ್ ಇರುವ ಅಡಕಸಬಿ ಜಯರಾಮಚಾರಿಯನ್ನು ಅನಾಮತ್ತು ಎತ್ತಿಕೊಂಡು ಹೋಗಿ ನಾಗರಭಾವಿಯ ಜೈಲಿನಲ್ಲಿಟ್ಟರು.

ತನ್ನ ಗೆಳೆಯ ಯಾಕೆ ಅರೆಸ್ಟ್ ಆದ ಎಂದು ನಾಗಭೂಷಣನಿಗೂ ತಿಳಿಯದೆ, ಬರ್ತಾ ಎರಡು ಗಾಡಿಯಲ್ಲಿ ಬಂದು ಈಗ ಒಬ್ಬನೇ ಮಿಕ್ಕ ಒಂದು ಗಾಡಿಯನ್ನು ಹೇಗೆ ಸಾಗಿಸುವುದೆಂದು ಗೊತ್ತಾಗದೆ, ಹೋರಾಟಗಾರ ರಘು ಜಾಣಗೆರೆಗೆ ಕರೆ ಮಾಡಿದ, ಅದಕ್ಕೂ ಮುನ್ನ ಶ್ರೀಧರಕೃಷ್ಣನಿಗೆ ಕಾಲ್ ಮಾಡಿದ ಅವನ ನಂಬರ್ ಎಂದಿನಂತೆ ಬ್ಯುಸಿ ಇತ್ತು. ರಾಷ್ಟ್ರೀಯ ಪಕ್ಷಗಳಿಂದ ನಮ್ಮ ರಾಜ್ಯಕ್ಕೆ ಕಿಂಚಿತ್ತೂ ಉಪಯೋಗವಿಲ್ಲವೆಂದು ,ರಾಜ್ಯ ಉದ್ದಾರ ಆಗಲು ಪ್ರಾದೇಶಿಕ ಪಕ್ಷ ಬೇಕೆಂದು ಮನಗಂಡು ರಘು ಜಾಣಗೆರೆ ಹೊಸದಾಗಿ ಹುಟ್ಟಿಕೊಂಡ ಪ್ರಾದೇಶಿಕ ಪಕ್ಷಕ್ಕೆ ಸೇರಿ, ಕಣ್ಣಿಗೆ ಬೀಳೋ ಎಲ್ಲ ಭ್ರಷ್ಟಾಚಾರವನ್ನು ಫೇಸ್‌ಬುಕ್ ಲೈವ್ ಲಿ ತೋರಿಸಿ ಗಲಾಟೆ ಮಾಡಿಕೊಂಡು ಜೈಲು ಕೂಡ ಹೋಗಿ ಹೋರಾಟಗಾರನಾಗಿದ್ದ. ರಘು ಮತ್ತೆ ನಾಗಭೂಷಣ ನಮ್ಮೂರ ತಿಂಡಿಯಲ್ಲಿ ಬಿಸಿ ಬಿಸಿ ಕಾಫಿಯನ್ನ ಹೀರುತ್ತಾ ಜಯರಾಮಚಾರಿ ಮಾಡಿರಬಹುದಾದ ಹಲ್ಕಾ ಕೆಲ್ಸಗಳು ಏನಾದರೂ ಇವೆಯಾ ಪಟ್ಟಿ ಮಾಡುತ್ತಿದ್ದರು. ಕೊನೆಗೆ ಇಷ್ಟರಲ್ಲಿ ಒಂದು ಇರಬಹುದು ಎಂದು ನಿರ್ಧಾರಕ್ಕೆ ಬಂದರು.

ಅವರು ಮಾಡಿದ ಪಟ್ಟಿ ಹೀಗಿತ್ತು

೧. ಮದ್ವೆ ಆಗಿ ಒಂದು ವರುಷವು ಆಗಿಲ್ಲ. ಸಾಲ ಗೀಲ ಜಾಸ್ತಿ ಆಗಿ ಡೌರಿ ಪಡೆಯಲು ಹೆಂಡತಿಗೇನಾದರೂ ಹೊಡೆದಿರಬಹುದಾ ?

೨. ಯಾವಾಗಲೂ ಆನ್ ಲೈನ್ ಫೇಸ್ ಬುಕ್ ಲಿ ಅದು ಇದು ಬರಿದು ಫೇಕ್ ಅಕೌಂಟ್ ಏನಾದರೂ ಮಾಡಿ ದುಡ್ಡು ಕೇಳೊದೊ, ಇಲ್ಲ ಯಾವುದಾದರೂ ಹುಡುಗಿಗೆ ಟಾರ್ಚರ್ ಕೊಟ್ಟು Harassment ಕೇಸ್ ಏನಾದರೂ ಆಗಿರಬಹುದಾ ?

೩. ಬಲ ಎಡ ಕಿತ್ತಾಟದಲ್ಲಿ ಏನಾದ್ರೂ ಬರಿದು ನಾಡದ್ರೋಹ ಏನಾದ್ರೂ ಆಗಿದ್ಯಾ ?

೪. ರಮ್ಮಿ ಗಿಮ್ಮಿ ಆನ್ ಲೈನ್ ಬ್ಯಾನ್ ಮಾಡಿದರು ಆಡಿ ಸಿಕ್ಕಿ ಹಾಕಿಕೊಂಡನ ?

೫. ಪಿಚ್ಚರ್ ಮಾಡ್ತೀನಿ ಅಂತ ಡವ್ ಮಾಡಿ ನಾಲ್ಕೇ ನಾಲ್ಕು ಕಿತ್ತೋದ ಅದೆಂತದೋ ಶಾರ್ಟ್ ಫಿಲ್ಮ್ ಮಾಡಿ ಅದನ್ನ ಇಟ್ಟುಕೊಂಡು ಯಾವುದಾದ್ರೂ ನಿರ್ಮಾಪಕರಿಗೆ ಮುಂಡ ಇಟ್ಟಿದ್ದಾನ ?

ಇದಿಷ್ಟು ಅಪರಾಧಗಳ ಪಟ್ಟಿ. ಅದರ ಸಾಧ್ಯಾನು ಸಾಧ್ಯತೆ ಯೋಚಿಸುತ್ತಿದ್ದರು, ಯಾವುದಕ್ಕೂ ಮೊದಲು ಮನೆಗೆ ಹೇಳಿಬಿಡೋಣ ಅಂದು ಅವನ ಹೆಂಡತಿ ಯಮುನಾಗೆ ಕಾಲ್ ಮಾಡಿ ಹೇಳಿಬಿಟ್ಟರು. ಆಕೆ ‘ಅಯ್ಯೋ ಏನಾಯ್ತು’ ಎಂದು ಅರಚುತ್ತಾ, ಅಳುತ್ತಾ, ಆಮೇಲೆ ಕೋಪವಾಗಿ ‘ಇರೋ ಕೆಲ್ಸ ಬಿಟ್ಟು ಬರಿ ಅದು ಇದು ಅಂತ ಮಾಡ್ತ ಇದ್ರೆ’ ಎಂದು ಆ ಟೈಮಿನಲ್ಲೂ ಉಗಿದು ಸರಿ ಅಣ್ಣಾ ಎಂದು ಕಾಲ್ ಕಟ್ ಮಾಡಿದಳು. ಕಾಲ್ ಕಟ್ ಆಗ್ತಿದ್ದಂತೆ ಶ್ರೀಧರ ಕಾಲ್ ಮಾಡಿ ಏನಾಯ್ತು ಎಂದು ಕೇಳಿ ವಿಷಯ ಗೊತ್ತಾಗಿ ಅವನು ಕೂಡ ಉಗಿದ, ರಘು ಆಗಲೇ ಸ್ಟೇಷನ್ ಹೊರಗಿನಿಂದಲೇ ಎಂದು ಲೈವ್ ಮಾಡಿ ‘ರಾಜ್ಯದಲ್ಲಿ ಯಾವ ನಾಗರೀಕನು ಸೇಫ್ ಇಲ್ಲ ಇದಕ್ಕೆ ಈ ಅರೆಸ್ಟ್ ಒಂದೇ ಸಾಕು’ ಎಂದು ಹೇಳಿ ಪೊಲೀಸರಿಗೆ ರಾಜ್ಯ ಸರಕಾರಕ್ಕೆ ಉಗಿದ ವಿಡಿಯೋ ಫೇಸ್ಬುಕ್ ಲಿ ಮೂರು ಸಾವಿರ ವೀವ್ ಆಗಿ ಹೆಚ್ಚು ಕಮ್ಮಿ ಎಲ್ಲರಿಗೂ ತಿಳಿದು ಹೋಯ್ತು, ಅದೇ ಕ್ಷಣಕ್ಕೆ ಅವನ ಶಾಲಾ ಗೆಳೆಯ ಮಂಜಣ್ಣ ನು ಕಾಲ್ ಮಾಡಿ ‘ಗುರು LOAN ಕಟ್ಟಿಲ್ಲ ಅಂತ ಕಾಲ್ ಬರ್ತಾ ಇತ್ತು ಪಕ್ಕ ಇದು ಬ್ಯಾಂಕ್ ನವರ ಕೆಲ್ಸ ಬ್ಯಾಂಕಿಗೆ ಹೋಗಿ ವಿಚಾರಿಸೋಣ ಅಂದು ಯಾವುದಕ್ಕೂ ಇರಲಿ ಎಂದು ಅವನೊಬ್ಬ ಕೇರ್ ಲೆಸ್ ವೆಸ್ಟ್ ಫೆಲ್ಲೋ’ ಎಂದ, ‘ಎಂತ ಸಾವ ಚಾರಿದು’ ಅಂತ ಪಕ್ಕದಲ್ಲಿದ್ದ ಕೃಷ್ಣ ಪೂಜಾರಿ ಕೂಡ ಧ್ವನಿಗೂಡಿಸಿದ.

ನಾಗಭೂಷಣ ರಘು ಇಬ್ಬರು ಅವನ ಗಾಡಿ ಮನೆಗೆ ತಲುಪಿಸಿ, ನೋಡೋಣ ಗೊತ್ತಾಗುತ್ತೆ ಎಂದು ಅವರವರ ಮನೆಗೆ ಹೋದರು.

ಒಂದೆರಡು ದಿನವಾಯ್ತು, ಟೈಂ ಟೈಂ ಗೆ ಊಟ ತಿಂದು ಜೈಲಿನ ಕಂಬಿ ಹಿಡಿದು ಪೊಲೀಸ್ ಸ್ಟೇಷನ್ ನಾ ಸರ್ಕಸ್ ತರ ನೋಡುತ್ತಿದ್ದ. ತನ್ನನ್ನು ಇವರು ಆರೆಸ್ಟ ಮಾಡಿದ್ದು ಯಾಕೆ ? ಮಾಡುವ ಮುನ್ನ ಯಾವ ವಾರೆಂಟ್ ಕೊಡಲಿಲ್ಲ ಯಾಕೆ? ಇಷ್ಟು ದಿನವಾದರೂ ಮನೆಯವರಾಗಲೀ, ಸ್ನೇಹಿತರಾಗಲಿ ಯಾವ ಲಾಯರನ್ನು ಕರೆದು ಕೊಂಡು ಬರಲಿಲ್ಲ ಯಾಕೆ ಎಂದು ಯೋಚಿಸುತ್ತಿದ್ದ. ನೋಡಲು ಬಂದವರಲ್ಲಿ ಹೆಂಡತಿ ಮೊದಲ ದಿನ ಅತ್ತರೆ, ಮರುದಿನ ಉಗಿದು ಅವರಮ್ಮ ಮಾಡಿಕೊಟ್ಟ ಮಟನ್ ಬಿರಿಯಾನಿ, ಕೈಮಾ ಉಂಡೆ ಕೊಟ್ಟು ‘ಎಲ್ಲ ಸರಿ ಆಗುತ್ತೆ ಬನಶಂಕರಮ್ಮ ಒಳ್ಳೆದ್ ಮಾಡ್ತಾಳೆ’ ಎಂದು ಹೋದಳು. ಎರಡು ದಿನವಾದ್ರೂ ಯಾವ ಪೊಲೀಸ್ ಹೊಡೆಯದೆ ಇದ್ದುದ್ದರಿಂದ ಅಂತ ಘನ ಘೋರ ಅಪರಾಧ ಮಾಡಿಲ್ಲ ಎಂದುಕೊಂಡ. ಇನ್ಸ್‌ಪೆಕ್ಟರ್ ಮಾತ್ರ ಬಂದು ‘ಏನ್ ಮಾಡ್ತಾವನೆ ರೀ ಆ ಅಡಕಸಬಿ’ ಎಂದು ಕೇಳಿ ಹೋಗುತ್ತಿದ್ದರು.

ಕೊನೆಗೂ ರಾಜಕೀಯ ಪತ್ರಿಕೋದ್ಯಮ ಪೊಲೀಸ್ ವ್ಯವಸ್ಥೆಯ ಪರಿಚಯವಿದ್ದ ಶ್ರೀಧರ ಅವನ ಕರ್ಮ ಪತ್ತೆ ಹಚ್ಚಿ ಮತ್ತೆಂದೂ ಅಂತ ಕರ್ಮಗಳನ್ನು ಮಾಡೊಲ್ಲಾ ಎಂದು ಕ್ಷಮಾ ಪತ್ರ ಬರೆಸಿ, ಪೊಲೀಸರ ಮುಂದೆ ಬೇಕಂತಲೇ ಅವನಿಗೆ ಉಗಿದು ಬಿಡಿಸಿಕೊಂಡು ಬಂದು ಮನೆಗೆ ಎಸೆದು ಹೋಗಿದ್ದ. ‘ನೋಡು ಚಾರೀಶ ನೀನು ಮಾಡ್ಬೇಕು ಅಂತ ಇರೋ ಕೆಲ್ಸ ಗುಡ್ ಬಟ್ ಅದಕ್ಕೆ ಸ್ವಲ್ಪ ಫೇಮಸ್, ಆಗ್ಬೇಕು ಪವರ್ ಬೇಕು’ ಅಂತ ಯಥಾಪ್ರಕಾರ ಬೈದಿದ್ದ .

ಅಂದ ಹಾಗೆ ಜಯರಾಮಚಾರಿ ಮಾಡಿದ ಕೆಲ್ಸ ಏನೆಂದರೆ. ತನ್ನ ಸುಯ್ ಟಪಕ್ ಯೂ ಟೂಬ್ ಚಾನೆಲ್ ಚೆನ್ನಾಗಿ ಆಗಬೇಕೆಂದು , ಅದರಿಂದ ತಾನು ವಿಶಿಷ್ಟ ಕಾರ್ಯಕ್ರಮ ಮಾಡಬೇಕೆಂದು ಯೋಚಿಸಿದಾಗ ಹೊಳೆದದ್ದು ಇದು, ಪ್ರತಿ ರಸ್ತೆಯಲ್ಲೂ ಇರುವ ಹೊಂಡಗಳು. ಒಂದಷ್ಟು ಹೊಂಡಗಳಿಗೆ ಮಣ್ಣು ತುಂಬಿ ಗೊಬ್ಬರ ತುಂಬಿ ಅಲ್ಲಿ ಚೆಂಡು ಹೂವು ದಾಸವಾಳ ಹೂ ನೆಟ್ಟು ರಾತ್ರೋ ರಾತ್ರಿ, ‘ನಾಗರಿಕರ ಕೀವಿಗೆ ಪಾಲಿಕೆಯ ಹೂವು’ ಎಂದು ವಿಡೀಯೊ ಮಾಡಿದ್ದ, ಹಾಗೆ ಒಂದೊಂದು ರಸ್ತೆಯ ಹೊಂಡಗಳಿಗೂ ಒಂದು ಸಣ್ಣ ಡುಬಕ್ ಇತಿಹಾಸ ಬರೆದಿದ್ದ ಉದಾಹರಣೆಗೆ ರಿಂಗ್ ರೋಡಿನಿಂದ ಮುದ್ದೀನಪಾಳ್ಯ ಹೋಗೋ ರಸ್ತೆಗೆ.

‘ನೋಡಿ ವೀಕ್ಷಕರೇ ಈ ಹೊಂಡ ಅಂತಿಂತ ಹೊಂಡ ಅಲ್ಲ, ಕ್ರಿಸ್ತ ಶಕ ೪೨೦ ನೇ ಸಮಯದಲ್ಲಿ ರಾಜ ತಿರುಬೋಕನ ನೂರಾ ಎರಡನೇ ಪತ್ನಿ ರಾಣಿ ಗೊಬ್ಬಕ್ಕ ಈಜಾಡಲು ಬಳಸುತ್ತಿದ್ದ ಹೊಂಡ ಈ ಹೊಂಡದಲ್ಲೂ ತಾವರೆ ಅರಳಿ. ಹಂಸ ಹೊರಳಿ, ಜಲಕ್ರೀಡೆಯಲ್ಲಿ ರಾಣಿ ನರಳಿ ನೂರು ಮೀನುಗಳು ಮರಣ ಹೊಂದಿದ ಹೊಂಡ, ಅಂತ ಹೊಂಡವನ್ನು ಅಂತ ಒಂದು ಐತಿಹಾಸಕ ಜಾಗವನ್ನು ಸುಖಾ ಸುಮ್ಮನೆ ಟಾರ್ ಹಾಕಿ ಇತಿಹಾಸ ಅಳಿಸಿ ಹಾಕಲು ಪಾಲಿಕೆಗೆ ಮನಸ್ಸಿಲ್ಲ, ಅದನ್ನು ಹಾಗೆ ರಕ್ಷಿಸಿ ಇನ್ನೂ ಕಾಪಾಡಿದ್ದಾರೆ ಇದು ಬಾರಿ ರಸ್ತೆಯಲ್ಲ, ಐತಿಹಾಸದ ಸಾಕ್ಷಿ’

ಮಾಗಡಿ ರಸ್ತೆಯ ಸರಣಿ ಹೊಂಡಗಳಿಗೆ ಬರೆದ ಇತಿಹಾಸ.

‘ನೋಡಿ ವೀಕ್ಷಕರೇ ಹೊಂಡ ಸಮೂಹ ಈ ರಸ್ತೆ ಬರೀ ಮಾಗಡಿ ರಸ್ತೆಯಲ್ಲ ಮಾದರಿ ರಸ್ತೆ, ಇತಿಹಾಸದ ಸುವರ್ಣ ಪುಟಗಳನ್ನು ಸಂರಕ್ಷಿಸಿದ ರಸ್ತೆ, ಇಷ್ಟೆಲ್ಲ ಹೊಂಡಗಳಿದ್ದರು, ಏನೆಲ್ಲ ಆಕ್ಸಿಡೆಂಟ್ ಆದರೂ, ಇದನ್ಯಾಕೆ ಸರಿ ಮಾಡ್ತಿಲ್ಲ ಅಂತ ಕೋಪ ಬಂದಿರಬಹುದು ಆ ಕೋಪದಲ್ಲೂ ನರ ಸತ್ತ ನಿಮ್ಮ ಕೋಪ ಅದುಮಿಕೊಂಡಿರಬಹುದು ಆದರೆ ನಿಮಗೆ ಗೊತ್ತಿಲ್ಲ ಸ್ನೇಹಿತರೆ ಕ್ರಿಸ್ತ ಶಕ ೮೯೪ ರಲ್ಲಿ ರಾಜ ಚಕ್ ಚಮಕ್ ಆದಿತ್ಯ ತನ್ನ ರಾಜ್ಯ ರಕ್ಷಿಸಿಕೊಳ್ಳಲು ತನ್ನ ರಾಜ್ಯಕ್ಕೆ ತಲುಪುವ ಹೆದ್ದಾರೀ ಅನ್ನು ಆಕ್ರಮಣಕಾರರಿಂದ ರಕ್ಷಿಸಲು ದೊಡ್ಡ ದೊಡ್ಡ ಹೊಂಡ ಮಾಡಿದ್ದ ಅವೇ ಈ ಹೊಂಡಗಳು ಈಗ ಹೇಳಿ ಇಂತ ರೋಚಕ ಹೊಂಡಗಳನ್ನು ಮುಚ್ಚದೆ ಮುಂದಿನ ಜನಾಂಗಕ್ಕೆ ರಕ್ಷಿಸಿ ಇಡ್ತಾ ಇರೋ ಪಾಲಿಕೆ ಕೆಲ್ಸ ಕೆಟ್ಟದ್ದ ?’

ಚಂದ್ರ ಲೇಔಟ್ ನ ರೋಡಿನ ಬಗ್ಗೆ ಬರೆದ ಇತಿಹಾಸ.

‘ನೋಡಿ ವೀಕ್ಷಕರೇ ಈ ಹೊಂಡ ಅತ್ಯಂತ ಪವಿತ್ರವಾದ ಹೊಂಡ, ರಾಣಿ ಪದ್ಮಾವತಿ ಆಕ್ರಮಣಕಾರರಿಂದ ತಪ್ಪಿಸಿಕೊಳ್ಳಲು ಬೆಂಕಿಗೆ ಹಾರಿದರೆ . ಈ ನಮ್ಮ ರಾಜ್ಯದ ರಾಣಿ ಪವಿತ್ರಾದೇವಿ ತನ್ನ ಕಾಮುಕ ರಾಜನ ತಲೆ ಕಡಿದು ತಾನು ಕೂಡ ಒಳ್ಳೆ ಪತ್ನಿ ಆಗಲಿಲ್ಲ ಎಂದು ಕೋಟೆಯಿಂದ ಹಾರಿ ಬಿದ್ದ ಬಾವಿ ಇದು ಕ್ರಮೇಣ ಮಣ್ಣು ತುಂಬಿ ಈಗ ಹೊಂಡ ಆಗಿದೆ ಅಷ್ಟೇ, ರಾಣಿ ಪವಿತ್ರಾದೇವಿಯ ಸ್ಮರಣಾರ್ರ್ಥ ಈ ಸ್ಥಳ ಉಳಿಸಿಕೊಳ್ಳಲಾಗಿದೆ’

ಈ ತರ ಬರೆದು ಅದರ ಮೂರನೇ ಭಾಗ ಮಾಡಲೆಂದೇ ತನ್ನ ಗೆಳೆಯನಿಗೆ ಮಗ ನಾನು ಒಂದು ವಿಡಿಯೋ ಮಾಡ್ತೀನಿ ನೀನು ಸೆರೆ ಹಿಡಿ ಎಂದು ಕರೆದುಕೊಂಡು ಬಂದಿದ್ದ, ಮೊದಲ ಎರಡು ಭಾಗ ತಾನೇ ಕೈಲಿ ಹಿಡಿದು ಮಾಡಿದ್ದ ಯಾಕೋ ಅಷ್ಟಾಗಿ ಚೆನ್ನಾಗಿ ಬಂದಿರಲಿಲ್ಲ, ೫೦ ವೀವ್ ಕೂಡ ಬಂದಿರಲಿಲ್ಲ, ಈ ಸಲ ಹೀಗೂ ಉಂಟೆ ಧ್ವನಿಯಲ್ಲೀ ಮಾತಾಡಿ ವೈರಲ್ ಮಾಡೋಣ ಎಂದು ಅಲ್ಲಿಗೆ ಬಂದಿದ್ದ, ಮೊದಲ ಎರಡು ವಿಡಿಯೋ ಮತ್ತು ಹೂ ಕುಂಡದ ಪೋಸ್ಟುಗಳನ್ನ ನೋಡಿ ಪ್ರಗತಿಪರ ಅನಿಕೇತನ ಅದನ್ನು ಪಾಲಿಕೆಗೆ, ಮುಖ್ಯಮಂತ್ರಿಗೆ, ಆಯುಕ್ತರಿಗೆ, ಕೊನೆಗೆ ಪ್ರಧಾನ ಮಂತ್ರಿಗೂ ಟ್ವಿಟ್ಟರ್ ಮಾಡಿ ಪಾಲಿಕೆಯಲ್ಲೇ ಇರುವ ತನ್ನ ಸ್ನೇಹಿತನಿಗೆ ಹೇಳಿದ್ದ.

ಅದು ಕಂಪ್ಲೇಂಟ್ ಕೂಡ ಆಗಿತ್ತು, ಆತ ಹಾಗೆ ಮಾಡಲು ಕಾರಣವಿದೆ ಇತ್ತೀಚೆಗೆ ತಾನು ಬರೆದ ಕರ್ಣನ್ ಸಿನಿಮಾ ಪೋಸ್ಟಿಗೆ ಜಯರಾಮಚಾರಿ ಹಹಹಾ ಈ ಮೋಜಿ ಒತ್ತಿ ‘ನಿಂದೆಲ್ಲಾ ಬರಿ ಹೋಳು ಗುರು ಬರೀ ಮಾತು ಅಷ್ಟೇ’ ಅಂತ ಕಾಮೆಂಟ್ ಹಾಕಿದ್ದ. ಅದಕ್ಕೆ ಅವನಿಗೆ ಗೊತ್ತಿಲ್ಲದ ಬಲಪಂಥೀಯರು ಲೈಕ್ ಮಾಡಿದ್ದರು, ಇದೇನು ಹೊಸತಲ್ಲ ಬಲದವರಿಗೆ ಗುಮ್ಮಿದ್ದಾಗ ಎಡದವರು, ಎಡದವರಿಗೆ ಗುಮ್ಮಿದ್ದಾಗ ಬಲದವರು ಬೇಷರತ್ ಬೆಂಬಲ ಕೊಡುವುದು, ಕೊನೆಗೂ ಪಾಲಿಕೆ ಕೊಟ್ಟ ಕಂಪ್ಲೇಟ್ ಹಿಡಿದು ಪೊಲೀಸರು ಅವನನ್ನು ಯಶಸ್ವಿಯಾಗಿ ಬಂಧಿಸಿದ್ದಿದರು.

‍ಲೇಖಕರು Admin

December 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಜಯರಾಮಾಚಾರ್ರೇ , ನಿಮಗೊಂದು ಸಲ ನಿಜವಾಗ್ಲೂ ಹಿಂಗಾಗಿ ಬಿಟ್ರೆ ಅಂತ ಯೋಚಿಸಿ ನಗ್ತಾ ಇದ್ದೆ. ಆಗ ಕ್ಲಬ್ ಹೌಸ್ ಬಿಕೋ ಅಂತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: