ಈ ನೆಲದ ಸಿನೆಮಾ ‘ಕನ್ನಡಿಗ’

ರೇಣುಕಾರಾಧ್ಯ ಎಚ್ ಎಸ್

ಇದೀಗ ಬಿ.ಎಂ ಗಿರಿರಾಜ್ ರ ‘ಕನ್ನಡಿಗ’ ಸಿನೆಮಾ ನೋಡಿ ಮುಗಿಸಿದೆ. ಕನ್ನಡ ಸಾಹಿತ್ಯ ಪರಂಪರೆಯ, ಕನ್ನಡ ಸಂಸ್ಕೃತಿಯ ಜೀವ ಸತ್ವವನ್ನು ಒಬ್ಬ ಕನ್ನಡಿಗನಾಗಿ ಕನ್ನಡದ ಅಸಲಿ ನಿರ್ದೇಶಕನಾಗಿ ನೀವು ಕಟ್ಟಿರುವ ಬಗೆ marvelous…. ಗಿರಿರಾಜ್.

ಮೂಲತಃ ಲಿಪಿಕಾರ ಮತ್ತು ,ಹತ್ತನೇ ಶತಮಾನದಲ್ಲಿ ಬದುಕಿ ದಾನಚಿಂತಾಮಣಿಯೆಂದೇ ಪ್ರಸಿದ್ಧಳಾದ ಅತ್ತಿಮಬ್ಬೆಯ ವಂಶಜನಾದ ಸಮಂತಭದ್ರ ಎಂಬ ಜೈನ ವೀರ ಸೇನಾನಿ, 16ನೇ ಶತಮಾನದಲ್ಲಿ ಕನ್ನಡನೆಲವನ್ನು, ಆಳುತ್ತಿದ್ದ ಸಾಳ್ವ ವಂಶದ ಅರಸಿ ಕಾಳುಮೆಣಸಿನ ರಾಣಿಯೆಂದೇ ಪ್ರಸಿದ್ಧಳಾದ ಕನ್ನಡತಿ ರಾಣಿ ಚೆನ್ನಭೈರಾದೇವಿಯ ಸೇನಾ ನಾಯಕನೀತ.

ರಾಣಿ ಚೆನ್ನಾಭೈರಾದೇವಿಯಿಂದ ಆಣತಿಗೊಂಡು ಕನ್ನಡ ನೆಲವನ್ನು, ಕನ್ನಡವನ್ನು ಉಳಿಸುವ ಪಣತೊಟ್ಟು, ಕತ್ತಿ ಬಿಟ್ಟು, ಕಂಠ ಹಿಡಿದು ( ಕಂಠ ಎಂದರೆ ಹಿಂದೆ ಓಲೆಗರಿಯ ಮೇಲೆ ಬರೆಯಲು ಬಳಸುತ್ತಿದ್ದ ಕಬ್ಬಿಣದ ಲೇಖನಿ) ಕನ್ನಡವ ಕಾವ ಧೀರನಾಗುತ್ತಾನೆ.

ಕನ್ನಡ ಸೇವೆಗಾಗಿ ರಾಣಿಯಿಂದ ಒಂದು ದ್ವೀಪವನ್ನು ಉಡುಗೊರೆಯಾಗಿ ಪಡೆದು, ಅಲ್ಲೊಂದು ಕನ್ನಡಮ್ಮನ ದೇವಳ ಕಟ್ಟಿಸಿ, ತನ್ನ ಮುಂದಿನ ಇಡೀ ಬದುಕನ್ನು ಕನ್ನಡದ ಏಳಿಗೆಗಾಗಿ ಸವೆಸಬೇಕೆಂದು ಆಜ್ಞೆಗೊಂಡಿದ್ದರಿಂದ ಹಾಗೆಯೇ ಬದುಕುತ್ತಾನೆ. ಮುಂದೆ ಆತನ ವಂಶಸ್ಥರು ಕನ್ನಡ ಸೇವೆಯ ಕೆಲಸವನ್ನು ಮುಂದುವರೆಸಿಕೊಂಡು ಬರುತ್ತಾರೆ.

ಮುಂದೆ 1858 ರಲ್ಲಿ ಆತನ ಎಂಟನೇ ತಲೆಮಾರಿನ ಕುಡಿ ‘ಗುಣಭದ್ರ’ ನು ತನ್ನ ವಂಶಸ್ಥರು ರಾಣಿ ಚೆನ್ನಭೈರಾದೇವಿ ಕೊಟ್ಟಿದ್ದ ದ್ವೀಪವನ್ನು ಮತ್ತು ಆ ದ್ವೀಪದ ಗುಹೆಯಲ್ಲಿ ಕನ್ನಡದ ಇತಿಹಾಸ, ಸಾಹಿತ್ಯ, ಕಲೆಗೆ ಸಂಬಂಧಿಸಿದ ಶಾಸನ, ಹಸ್ತಪ್ರತಿಗಳನ್ನು ರಕ್ಷಿಸಿ ಕಾಪಾಡಿಕೊಂಡು ಹೋಗಲು ಪಣತೊಟ್ಟು, ನಿಲ್ಲುತ್ತಾನೆ. ಮುಂದೆ ಆತ ತನ್ನ ವಂಶಜರು ಒಂದು ಕಠಿಣ ವ್ರತದಂತೆ ಪಾಲಿಸಿಕೊಂಡು ಬಂದಿದ್ದ ಕನ್ನಡವನ್ನು ಕಾಪಾಡುವ ಕೆಲಸವನ್ನು ಗುಣಭದ್ರ ಹೇಗೆ ಮಾಡುತ್ತಾನೆ. ಅದರಲ್ಲಿ ಅವನು ಯಶಸ್ಬಿಯಾಗುತ್ತಾನೋ? ಇಲ್ಲವೋ ಎಂಬುದೇ ಸಿನೆಮಾದ ಕಥಾ ವಸ್ತು.

ಕನ್ನಡದ ಮೊದಲ ಕೃತಿ ಶ್ರೀವಿಜಯ ಕವಿಯ ‘ಕವಿರಾಜಮಾರ್ಗದಲ್ಲಿ’ ಕನ್ನಡ ಪರಂಪರೆಯ ಬಗ್ಗೆ ಒಂದು ಮಾತಿದೆ. ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮಂ, ಪರಧರ್ಮಮಂ’ ಅಂತ. ಅಂದರೆ ಸಂಪತ್ತು ಎಂಬುದು ಬೇರೆ ಏನಲ್ಲ. ಬೇರೆಯವರ ವಿಚಾರ ಮತ್ತು ಧರ್ಮದ ಬಗೆಗೆ ನಾವುಗಳು ಯಾವಾಗಲೂ ಸಹಿಷ್ಣುತೆಯಿಂದ ಇರಬೇಕು ಅಂತ. ಈ ಅಂಶ, ವಿಚಾರ ಕನ್ನಡ ಪರಂಪರೆಯಲ್ಲಿ ಕನ್ನಡ ಸಂಸ್ಕೃತಿ ಆರಂಭದಿಂದ ಹಿಡಿದು ಇವತ್ತಿನವರೆಗೂ ಒಳವಿದ್ಯುತ್ತಿನಿಂತೆ ಕನ್ನಡಿಗರ ಜನಜೀವನದಲ್ಲಿ ಹರಿಯುತ್ತಲೇ ಇದೆ.

ಈ ಅಂಶವನ್ನೇ ‘ಕನ್ನಡಿಗ’ ಚಿತ್ರದ ನಿರ್ದೇಶಕ ಬಿ.ಎಂ. ಗಿರಿರಾಜ್ ಅವರು ತಮ್ಮ ಸಿನೆಮಾದ ಉದ್ದಕ್ಕೂ ಪರಿಣಾಮಕಾರಿಯಾಗಿ ಹೇಳಲು ಪ್ರಯತ್ನಿಸಿರುವುದು ಸಿನೆಮಾದ ಪ್ರತಿ ಪ್ರೇಮ್ ನಲ್ಲೂ ಎದ್ದು ಕಾಣುತ್ತದೆ. ಹತ್ತನೇ ಶತಮಾನದಿಂದಿಡಿದು ಇವತ್ತಿನವರೆಗೂ ಈ ನೆಲದಲ್ಲಿ ಕನ್ನಡ ಜನರ ಬದುಕು, ಬರಹ ಕೈತಪ್ಪುವ ವಿಚಾರದಲ್ಲಾಗಲಿ, ಇಲ್ಲವೇ ಇಲ್ಲಿನ ಜಾತಿ- ಧರ್ಮ, ಯಜಮಾನ, ಆಳು, ಅಣ್ಣ ,ತಮ್ಮ ಇವರುಗಳ ಮಧ್ಯೆಯ ವಿರಸವನ್ನು ಹುಟ್ಟಿಸಿದ್ದು ಹೊರಗಿನ ಬ್ರಿಟೀಷರು ನೇರ ಕಾರಣರಲ್ಲ, ಇಲ್ಲಿನ ಬ್ರಾಹ್ಮಣಿಕೆಯ ಹುನ್ನಾರಗಳೇ ಮುಖ್ಯ ಕಾರಣ ಎಂಬುದನ್ನು ಸೂಚ್ಯವಾಗಿ, ಕೆಲವೊಮ್ಮೆ ನೇರವಾಗಿ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

ಮೂಲತಃ ಜರ್ಮನಿಗನಾಗಿ ಈ ನೆಲದಲ್ಲಿ ಹುಟ್ಟದಿದ್ದರೂ ಜಾನ್ ಫರ್ಡಿನೆಂಡ್ ಕಿಟೆಲ್ ಅಪ್ಪಟ ಕನ್ನಡಿಗನಾದ ಬಗೆಯನ್ನು ಸಿನೆಮಾ ಕಟ್ಟಿರುವ ಬಗೆ ವಿಶೇಷವಾಗಿದೆ. ಇಡೀ ಸಿನೆಮಾದಲ್ಲಿ ಫರ್ಡಿನೆಂಡ್ ಕಿಟೆಲ್ ನ ಸಹಾಯಕಿಯಾಗಿ ಬರುವ ಉಗ್ರ ಮೌನವ್ರತಧಾರಿಣಿಯಾದ ಆನ್ನಾಳ ಪಾತ್ರ, ಆಳು ಬುಳ್ಳನ ಪಾತ್ರ, ಗುಣಭದ್ರನ ಮಡದಿ, ಮಗಳು, ಅಳಿಯ ಈ ಪಾತ್ರಗಳನ್ನು ಸೃಷ್ಟಿಸಿರುವ ನಿರ್ದೇಶಕ ಬಿ.ಎಂ. ಗಿರಿರಾಜ್ ನಿಜಕ್ಕೂ ಕನ್ನಡದ ಹೆಮ್ಮೆಯ ನಿರ್ದೇಶಕ.

ಗಿರಿರಾಜ್ ರಲ್ಲೊಬ್ಬ ಅಧ್ಬುತ ಪ್ರೇಮ ಕಲಾವಿದ ಮತ್ತು ಕವಿ ಇದ್ದಾನೆ. ಇದಕ್ಕೆ ಸಾಕ್ಷಿಯಾಗಿ ಸಿನೆಮಾದಲ್ಲಿ ಎರಡು ದೃಶ್ಯಗಳನ್ನು ಮರೆಯದೆ ನೋಡಿ. ದೃಶ್ಯ ಒಂದು : ಗುಣಭದ್ರನ ಮಗಳು ಲಕ್ಷ್ಮಿಯನ್ನು ಒಮ್ಮೆ ದಾರಿಯಲ್ಲಿ ಧೋ ಎಂದು ಮಳೆ ಹುಯ್ಯುವಾಗ ಕಾಣುವ ಭಾವಿ ಅಳಿಯ, ಲಕ್ಷ್ಮಿಯ ಮನೆಗೆ ಬಂದು, ಆಕೆಯನ್ನು ತನ್ನ ತಂದೆ ತಾಯಿ ಒಪ್ಪಿರುವುದಾಗಿಯೂ, ಹೇಳಿ, ಲಕ್ಷ್ಮಿಗೆ ತಾನು ಇಷ್ಟವೇ ಎಂದು ಕೇಳಿ, ಮಳೆಯಲ್ಲಿಯೇ ಹೊರಡುತ್ತಾನೆ.

ಆಗ ಲಕ್ಷ್ಮೀ ಅದೇ ಮಳೆಯಲ್ಲಿ ತನ್ನ ಭಾವಿ ಪತಿ ಹೊರಟ ಹಾದಿ ಹಿಡಿದು ನೋಡಲು ಬರುತ್ತಾಳೆ, ನೋಡಿದರೆ ಆಕೆಯ ಹಿಂದೆಯೇ ಬಂದ ಭಾವಿ ಪತಿ, ಮಳೆಯಲ್ಲಿಯೇ ಅವಳ ಕೈ ಹಿಡಿದು, ಅವಳ ಕೈಗೆ ನೇರಳೆ ಹಣ್ಣನ್ನು ಕೊಡುವ ದೃಶ್ಯ… ಒಂದು ಪ್ರೇಮಕಾವ್ಯವೇ ಸರಿ.

ಎರಡನೇ ದೃಶ್ಯ : ಜೀವನ ಪರ್ಯಂತ ಮಾತನಾಡದ ವ್ರತ ತೊಟ್ಟಿದ್ದ ಜರ್ಮನ್ ಹೆಣ್ಣು ಮಗಳು ಆನ್ನಾ, ಸಿನೆಮಾದ ಕಡೆಯಲ್ಲಿ ಗುಣಭದ್ರನನ್ನು ‘ಅಪ್ಪಾ’ ಎಂದು ಕನ್ನಡದಲ್ಲಿ ಕರೆಯುವ ಧ್ವನಿ ನೋಡುಗರಲ್ಲಿ ತಮಗೆ ಗೊತ್ತಿಲ್ಲದಯೇ ಕಣ್ಣೀರು ತರಿಸುತ್ತೆ.

ಇದಿಷ್ಟು ಸಿನೆಮಾ ನೋಡಿದ ತಕ್ಷಣ ಉತ್ಸಾಹದಲ್ಲಿ ಸಿನೆಮಾ ಬಗ್ಗೆ ಬರೆಯಬೇಕೆನಿಸಿದ ಮಾತುಗಳಿವು. ಸಿನೆಮಾದಲ್ಲಿ ರವಿಚಂದ್ರ ವಿ. ಅವರ ನಟನೆ ಮತ್ತು ಡೈಲಾಗ್ ಡೆಲವರಿ ಅಲ್ಲಲ್ಲಿ ಅಂದರೆ ಕೆಲ ದೃಶ್ಯಗಳಲ್ಲಿ ಸಹಜವಾಗಿಲ್ಲ. ಸಂಗೀತ ಕೆಲವು ಕಡೆಯಲ್ಲಿ ಹೆಚ್ಚಾಯಿತು ಅನ್ನಿಸುತ್ತದೆ.
ಉಳಿದಂತೆ ಇಡೀ ಸಿನೆಮಾದಲ್ಲಿ ಭಾವನಾತ್ಮಕ ದೃಶ್ಯಗಳಲ್ಲಿ ರವಿಚಂದ್ರನ್, ಗುಣಭದ್ರನ ಮಡದಿ ಸಂಕಮ್ಮಬ್ಬೆಯ ಪಾತ್ರಧಾರಿ ಪಾವನ, ಬುಳ್ಳನ ಪಾತ್ರಗಳ ನಟನೆ ಎಕ್ಸಲೆಂಟ್…

ಸಿನೆಮಾ ಪೂರ್ತಿ ದಕ್ಷಿಣ ಕನ್ನಡ ನೆಲದ ಭಾಷೆ, ಅಲ್ಲಿನ ಸಂಸ್ಕೃತಿ, ತಳ ಸಮುದಾಯದ ಆಚರಣೆಗಳಿಂದ ಕೂಡಿ ಇಲ್ಲಿ ಎಲ್ಲವೂ ಮುಖ್ಯ ಎಂಬುದನ್ನು ಒತ್ತಿ ಹೇಳುತ್ತದೆ. ಕನ್ನಡ ಭಾಷೆ, ಬರಹ, ಸಂಸ್ಕೃತಿಯನ್ನು ಉಳಿಸುವ ವಸ್ತುವನ್ನು ಇಟ್ಟುಕೊಂಡು ಕನ್ನಡ ಸಿನೆಮಾ ಮಾಡಬಹುದು ಎಂಬ ವಿಚಾರ ಬಿ.ಎಂ. ಗಿರಿರಾಜರಿಗೆ ಹೇಗೆ ಹೊಳೆಯಿತೋ ಗೊತ್ತಿಲ್ಲ. ಈ ವಿಷಯ ಇಟ್ಟುಕೊಂಡು ಗಟ್ಟಿಯಾದ ಮತ್ತು ಪರಿಣಾಮಕಾರಿಯಾದ ಚಿತ್ರಕಥೆ, ಅಷ್ಟೇ ಪರಿಣಾಮಕಾರಿಯಾದ ಸಂಭಾಷಣೆಯಿಂದ ಸಿನೆಮಾ ಪೂರ್ತಿ ಲವಲವಿಕೆಯಿಂದ ನೋಡಿಸಿಕೊಳ್ಳುತ್ತೆ.

ಬಿ.ಎಂ.ಗಿರಿರಾಜ್ ನಿಜಕ್ಕೂ ಕನ್ನಡದ ಹೆಮ್ಮೆಯ ನಿರ್ದೇಶಕ…. ಹ್ಯಾಟ್ಸಾಫ್ ಗಿರಿರಾಜ್ ರೆ….

‍ಲೇಖಕರು Admin

December 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: