ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಹೊಸ ಕವಿತೆ – ವೈನು ಮೆತ್ತಿದ ತುಟಿಗಳು..

ಸದಾಶಿವ್ ಸೊರಟೂರು

ನನ್ನನ್ನು ಬೆಚ್ಚಿಬೀಳಿಸುವ
ಪದಗಳಿಂದ ಹೆಣೆದ
ಆ ಕವಿತೆಯ ಪುಸ್ತಕ ಎತ್ತಿಟ್ಟೆ
ಅವು ನನ್ನನ್ನು ಯಾವುದೇ ಸಮಯದಲ್ಲಿ
ಕೊಲ್ಲಬಹುದು..

ಹೊರಗೆ ಮಳೆ ಅಳುತಿದೆ
ಕಣ್ಣೀರಲ್ಲಿ ಮನ ಬೆಚ್ಚಗೆ..

ಫ್ರಿಡ್ಜ್ ನ ಬಾಗಿಲು ತೆರೆದು
ವೈನಿನ ಬಾಟಲು ಹೊರಗೆಳೆದು
ಕಡು ಕಣ್ಣೀರಲಿ ತೊಳೆದ
ನಡು ಸಣ್ಣಗಿನ ಬಟ್ಟಲಿಗೆ
ಸುರಿದುಕೊಂಡೆ
ಢಾಳ ಕೆಂಪನೆ ವೈನು
ತುಟಿ ಕುರಿತಾಗಿ ಅವಳುಬರೆದ ಕವಿತೆ ಸಾಲು
ನೆನಪಾಗಿ ತಿವಿಯಿತು ಬಟ್ಟಲಿನ ಅಂಚು..

‘ವೈನು ಒಳ್ಳೆಯದಲ್ಲ’ ಇದು ಶಾಸನ ವಿಧಿಸಿದ
ಎಚ್ಚರಿಕೆ!!

ಕವಿತೆಯನ್ನ ಯಾಕೆ ಇನ್ನೂ ಹೊರಗಿಟ್ಟಿದ್ದಾರೆ!?
ಯಾಕೆ ಯಾರೂ ದೂರು ನೀಡಿಲ್ಲ..!
ಸರ್ಕಾರದ ಮೌನಕ್ಕೆ ನನ್ನ ಧಿಕ್ಕಾರ.!!

ಮೂಗು ಮುಚ್ಚಿಕೊಂಡು ಟವಲು
ಮರೆಯಲಿ ಕುಡಿಯಬಾರದು ವೈನು
ಬೆವರ ಹನಿ ಬೆನ್ನಲ್ಲಿ‌ ಹುಟ್ಟಿ ಹೊಟ್ಟೆ ಮೇಲೆ
ಬಿದ್ದು ಅಲ್ಲಿಂದ ಸೊಂಟ ಬಳಸಿ
ಜಾರುವಂತೆ
ಒಳಗಿಳಿಯಬೇಕು;
ಕವಿತೆಯಾದರೇನು..,
ವೈನಾದರೇನು..

ಕವಿತೆಯ ಸಾಲುಗಳಿಂದ ತಿವಿಸಿಕೊಂಡು
ಯಾವುದೊ ಪುಟದಲ್ಲಿ
ಪ್ರಜ್ಞೆ ತಪ್ಪಿ ಬೀಳಬಹುದು
ವೈನು ಕೂಡ ಕೆಡವಬಹುದು
ಬಿದ್ದವನಷ್ಟೆ ಏಳಬಹುದು..
ಕವಿತೆಗೆ ಸೋತವನಿಗೆ ಮುಕ್ತಿ ಎಲ್ಲಿ!?

ಅವಳ ಕವಿತೆ ಓದಿದ ತುಟಿಗಳು
ಗಾಯಗೊಂಡಿವೆ
ವೈನು ಅವುಗಳ ಸಾಂತ್ವನಕಿಳಿದಿದೆ
ಶ್.. ಸುಮ್ಮನಿರಿ
ಹೊರಗೆ ಮಳೆ ಅಳುತ್ತಿದೆ
ಕಣ್ಣೀರಲಿ ಮನ ಬೆಚ್ಚಗಿದೆ
ಬಟ್ಟಲಲಿ ವೈನಿದೆ
ತುಟಿಗೆ ಕವಿತೆಗಳಿವೆ..

‍ಲೇಖಕರು Admin

27 May, 2022

2 Comments

  1. ದೀಪಾ

    ನಿಮ್ಮ ವೈನ್ ಗಿಂತ ಅವಳ ಕವಿತೆಯೆ ನಶೆ ಹೆಚ್ಚಾಗಿದೆ..
    ಸುರಿದುಕೊಳ್ಳಿ
    ನಡುಬಟ್ಟಲ ದಾಟಿ ಕುತ್ತಿಗೆಯತನಕ

  2. Archana H

    ಸೂಪರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading