ಸದಾಶಿವ್ ಸೊರಟೂರು ಕಥಾ ಅಂಕಣ- BLOCK…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

28

ಬಲಗಡೆಯ ಮೂರು ಚುಕ್ಕಿಯೆ ಆಯ್ಕೆಯನ್ನು ಆರಿಸಿಕೊಂಡು BLOCK ಬಟನ್ ಒತ್ತಿಬಿಟ್ಟಳು. ಅವನ ಕಡೆಯಿಂದ ಇನ್ನೂ typing ಎಂದು ಹಸಿರು ಬಣ್ಣದಲ್ಲಿ ತೋರಿಸುತ್ತಿತ್ತು. ಅದೇನಿರಬಹುದೆಂದು ಅವಳಿಗೆ ತಿಳಿಯುವ ಕುತೂಹಲವೂ ಇರಲಿಲ್ಲವಾ? ಅಥವಾ ಇದೊಂದು ಹೊಸ ಪಟ್ಟಾ? ಅದರ ಬಗ್ಗೆ ಸ್ವತಃ ಅವಳಿಗೇ ಅಂದಾಜಾಗಲಿಲ್ಲ.

ಬ್ಲಾಕ್ ಮಾಡಿ ಮೊಬೈಲ್ ಪಕ್ಕಕ್ಕೆ ಸರಿಸಿದಳು. ಒಂದು ಕ್ಷಣ ಕಣ್ ಮುಚ್ಚಿದಳು. ಬ್ಲಾಕ್ ಮಾಡಿದ್ದಾಳೆ, ಅವನ ಮಾತುಗಳು ಇನ್ಬಾಕ್ಷಿಗೆ ಬಂದು ಇನ್ನು ಕೂರುವುದಿಲ್ಲ. ಕಾಡುವುದಿಲ್ಲ. ಆದರೆ ಅವನು ಮನಸಿಗೆ ಬರುತ್ತಿದ್ದಾನೆ. ಈಗಲೇ ಹೆಚ್ಚು ನೆನಪಾಗುತ್ತಿದ್ದಾನೆ. ನಾನು ಅವನನ್ನು ಬ್ಲಾಕ್ ಮಾಡಿದೀನಿ ಅನ್ನುವ ‘ಅಹಂ’ ಅನ್ನು ಅವನ ನೆನಪಿಗೆ ಇಷ್ಟೆಷ್ಟೆ ಹಚ್ಚುತ್ತಿದ್ದಾಳೆ. ಉಹೂಂ ಗುಣವಾಗುತ್ತಿಲ್ಲ. ಅವನೀಗ ಏನು ಯೋಚಿಸುತ್ತಿರಬಹುದು? ಬ್ಲಾಕ್ ಮಾಡಿದ್ದು ಗೊತ್ತಾಗಿರಬಹುದಾ? ಗೊತ್ತಾದರೆ ಅವನಿಗೆ ಏನು ಅನಿಸಿರಬಹುದು. ಅವನ ಕಣ್ಣಲ್ಲಿ ಏನು ತುಳುಕುತ್ತಿರಬಹುದು? ಅದನ್ನು ನೋಡಬೇಕಿತ್ತು ಅನಿಸುತ್ತಿದೆ ಅವಳಿಗೆ. ಈ ಬ್ಲಾಕ್ ನ್ನು ‘ಇನ್ಮೇಲೆ ನಿನ್ನ ಅವಶ್ಯಕತೆ ಇಲ್ಲ’ ಅನ್ನುವಂತೆ ಅರ್ಥ ಮಾಡಿಕೊಂಡನಾ? ಯಾಕೊ ಒಂದು ಕ್ಷಣ ಎದೆ ದಡಬಡಿಸಿತು ಆಕೆಗೆ.

‘ಬ್ಲಾಕ್ ಮಾಡಿದಷ್ಟು ಎಲ್ಲವೂ ಸುಲಭವೇ?’ ಪಕ್ಕೆಲಬಿನ ಒಳಗಿನಿಂದ ಚಿಮ್ಮಿ ಬಂತು ಒಂದು ಮಾತು.

‘ಆಶಿ..’ ಅವನು ಕರೆದ ಸದ್ದು. ಯೆಸ್ ಅವನದೆ ದನಿ. ತಿರುಗಿ ನೋಡಿದಳು. ಅವನಿಲ್ಲ. ಅವನೇ ಕರೆದದ್ದು. ಅವನು ಕರೆಯುತ್ತಿದ್ದದ್ದು ಹೀಗೆ. ಈಗೇಕೆ ಅವನ ದನಿ ಕೇಳಿಸಿತು? ಬ್ಲಾಕ್ ಮಾಡಿದ ಮೇಲೆಯೇ ಯಾಕೆ ಹೀಗೆ ಆಗ್ತಿದೆ?

ಬ್ಲಾಕ್ ಮಾಡಿದ್ದೆ ನೆವವಾಗಿ ಮನಸು ಮತ್ತಷ್ಟು ಅವನ ಕಡೆ ತೆರೆಸಿಕೊಂಡಿತೆ? ಎಂದೂ ಅವನ ಬಗ್ಗೆ ಇಷ್ಟೊಂದು ಯೋಚಿಸದವಳು ಜಸ್ಟ್ ಬ್ಲಾಕ್ ಮಾಡಿದ್ದೆ ಯಾಕೆ ಅವಳೊಳಗೆ ಹುಣ್ಣಿಮೆಯ ಭೋರ್ಗರೆತ. ಎಷ್ಟೊಂದು ಅಲೆಗಳ ಚಿನ್ನಾಟ.

unblock ಮಾಡಿಬಿಡಲೇ?

ಅವನು ಬಿದ್ದು ಬಿದ್ದು ನಕ್ಕಾನು? ಅಥವಾ ತುಂಬಾ ಖುಷಿಯಿಂದ ಎದ್ದು ಕೂತಾನು! Block ಮಾಡಿದ್ದಕ್ಕೆ ಮನಸು ಹುಚ್ಚೆದ್ದು ಕೂತಿದೆ. Unblock ಮಾಡಿದರೆ ಅದು ಸರಿ ಹೋಗುತ್ತದಾ? ಅವನು ಸರಿ ಹೋಗುತ್ತಾನಾ?

ಅವನು ಸರಿ ಹೋಗುವುದು ಎಂದರೇನು? ಸಡನ್ ಆಗಿ ಪ್ರಶ್ನೆಯೊಂದು ಅವಳಿಂದ ಅವಳಿಗೇ ಕೆಣಕಿತು. ಪಾಪ ಅವನೆಷ್ಟು ಬಾರಿ ಆಣೆ ಮಾಡಿದೆ. ಸಾಬೀತು ಮಾಡಿದ. ಜಿನುಗುತ್ತಿದ್ದ ಅವನ ಕಣ್ಣಲ್ಲಿ ನೀರನ ಬದಲು ಪ್ರಾಮಾಣಿಕತೆ ಸುರಿಯುತ್ತಿತ್ತು..

ಆದರೆ?
ಆದರೆ?

ಅದೆಲ್ಲಾ ನಿಜವಾ? ನೂರು ಬಾರಿ ಕೇಳಿಕೊಂಡಳು. ಸುಳ್ಳಾಗಲಿ ದೇವರೆ ಅಂದುಕೊಂಡಳು.

ಮತ್ತೊಮ್ಮೆ ವಾಟ್ಸಪ್ ತೆಗೆದು ‘unblock’ ಮೇಲೆ ಬೆರಳಿಟ್ಟಳು. ಆದರೆ ಒತ್ತಲಿಲ್ಲ. ಮೊಬೈಲ್ ಪಕ್ಕಕ್ಕೆ ಸರಿಸಿದಳು..
ಆದರೆ ಅವನು ಅವಳೊಳಗೆ ಮತ್ತಷ್ಟು ನುಗ್ಗಿದ..

ಮರು ದಿನ ಬೆಳಗ್ಗೆ ತನ್ನ ಮಾತನ್ನು ತಾನೇ ಕೇಳದೆ unblock ಮಾಡಿಬಿಟ್ಟಳು. ತುಸು ಹಗುರವಾದಂತಾಯ್ತು. Unblock ಮಾಡಿದಾಗ ಇದ್ದು ಒಂದು ದುಗುಡ ಕಳಚಿತ್ತು.‌

ಮೊಬೈಲ್ ಹಿಡಿದು ಕೂತಳು. ಕಾಯತೊಡಗಿದಳು. ಇನ್ನೇನು ಮಸೇಜ್ ಬರಬಹುದು ಅಂತ ಚಡಪಡಿಸಿದಳು. ಪಾಪ ಎಷ್ಟು ಕಾದಿದ್ದನೊ ಅಂತ ತಲ್ಲಣಿಸಿದಳು.

ಮಧ್ಯಾಹ್ನ ಆಯ್ತು ಮಸೇಜ್ ಬರಲಿಲ್ಲ. ಸಂಜೆಗೂ ಬರಲಿಲ್ಲ. ರಾತ್ರಿಯೂ ಅವನ ಸುಳಿವಿಲ್ಲ. ಆನ್ಲೈನ್ ತೋರಿಸುತ್ತಿಲ್ಲ. ಲಾಸ್ಟ್ ಸೀನ್ ಇಲ್ಲ. ಮರುದಿನ ಬೆಳಿಗ್ಗೆ ಒಂದೆರಡು ಸೆಕೆಂಡ್ ನಷ್ಟು ಆನ್ಲೈನ್ ತೋರಿಸಿ ಹೊರಟು ಹೊಯಿತು. ತಾನು‌ unblock ಮಾಡಿರೋದು ಅವನಿಗೆ ಗೊತ್ತಾಗಿಲ್ಲವೇ? ಸ್ಟೇಟಸ್ ಹಾಕಿದರೆ ಗೊತ್ತಾಗುತ್ತದೆ. ಹಾಕಿಬಿಡಲೇ? ಅರೆ block ಮಾಡಿದ ತಾನು ಹೀಗೇಕೆ ಹಂಬಲಿಸುತ್ತಿದ್ದೇನೆ ಅನಿಸಿ ಸುಮ್ಮನಾದಳು. ಮೂರು ದಿನ ಇಂತಹ ಚಡಪಡಿಕೆಯಲ್ಲೆ ಕಳೆದು ಹೋಯಿತು.

ಅದರ ಮರುದಿನ ಮಧ್ಯಾಹ್ನ ಹೊತ್ತಿಗೆ ಅಂಚೆಯವನು ಒಂದು ಪತ್ರವನ್ನು ಕರುಣೆ ಇಲ್ಲದೆ ಎಸೆದು ಹೋದ. ಬಿದ್ದ ಏಟಿಗೆ ಪಾಪ ಅಕ್ಷರಗಳು ಒಡೆದು ಚದುರಿ ಹೋಗದ ಅವಳಿಗಾಗಿ ಉಳಿದವು.

ತೆಗೆದು ನೋಡಿದಳು. ಅರ್ಧಂಬರ್ಧ ವಿಳಾಸ. ಆದರೂ ಹುಡುಕಿಕೊಂಡು ಬಂದಿದೆ. ಸೇರಬೇಕಾದದ್ದು ಸೇರಿಯೇ ಸೇರುತ್ತದೆ. ಇಂದ ವಿಳಾಸ ನೋಡಿದಳು. ಈ ಕಾಲದಲ್ಲೂ ಪತ್ರ ಬರೆಯುವ ತಾಳ್ಮೆಯ, ಮೂರ್ಖತನ ಯಾರದ್ದು ಅಂತ ಅವಲೋಕಿಸಿದಳು. ಅಲ್ಲಿ ವಿಳಾಸ ಇರಲಿಲ್ಲ.

ಪತ್ರ ಒಡೆದಳು. ಅಲ್ಲಿ ಹಾಕಿದ್ದ ಬೆಂಚೊಂದರ ಮೇಲೆ ಕೂತು ಪತ್ರ ತೆರೆದಳು..‌

ಮುದ್ದು ಆಶಿ..

ಮೊದಲ ಸಾಲು ಓದಿ ಎದೆ ಝೆಲ್ ಎಂದಿತು. ಹಣೆಯ ಮೇಲೆ ಸಣ್ಣ ಬೆವರು.

ಮುದ್ದು ಆಶಿ.. ಅದನ್ನೆ ಅದನ್ನೇ ಹತ್ತು ಬಾರಿ ಓದಿದಳು. ಪತ್ರ ಮುಂದುವರೆಯಿತು.

ಮುದ್ದು ಆಶಿ..

ಹೇಗಿದಿಯ? ಕ್ಷಮಿಸು ನಿನ್ನ ಅನುಮತಿ ಇಲ್ಲದೆ ಪತ್ರ ಮನೆಗೆ ಲಗ್ಗೆ ಇಟ್ಟಿದೆ. ಬಹುಶಃ ಈ ಕಾಲದಲ್ಲಿ ಹುಡುಗಿಗೆ ಪತ್ರ ಬರೆದ ಏಕೈಕ ಮೂರ್ಖ ನಾನೇ ಇರಬಹುದು. ನನಗೆ ಈ ಮೂರ್ಖತನವೇ ಇಷ್ಟ.

ಅವತ್ತು ನೀನು ಏನೊ ಅಂದೆ. ಇರಲಿ ಕಲ್ಲು ತೂರಿದವರಿಗೆ ಅದು ಹೋಗಿ ಬೀಳುವ ಏಟಿನ ಅಂದಾಜು ಇರುವುದಿಲ್ಲ. ಅವತ್ತೂ ಇಡೀ ದಿನ ಕೂತು ಯೋಚಿಸಿದೆ. ನೀನು ಆಡಬಹುದಾದ ಮಾತು ಸರಿ ಆದರೆ ಅದು ನಾನು ಕೇಳಬಹುದಾದ ಮಾತಲ್ಲ.

ನಿನಗೆ ಏನೊ ಹೇಳ್ಬೇಕು ಅಂತ ಆಕ್ಷಣಕ್ಕೆ ಒಂದಷ್ಟು ಹೊತ್ತು ವಾಟ್ಸಪ್ ನಲ್ಲಿ ಟೈಪ್ ಮಾಡಿದೆ. ಅಮೇಲೆ ಕಳುಹಿಸಲು ಮನಸಾಗಲಿಲ್ಲ. ಅದನ್ನು ಅಳಿಸಿದೆ. ಉಳಿದಿದ್ದು ಎದೆಯಲ್ಲಿ ನುಂಗಿಕೊಂಡೆ. ಯಾಕೊ ಮನಸು ಮುಚ್ಚಿದಂತಾಗಿತ್ತು. ಈ ಬ್ಲಾಕ್ ಅಂತರಲ್ಲಾ ಅದು. ನಾವು ತುಂಬಾ ಕಾಟ ಕೊಡುವ ಕೆಲವು ನಂಬರ್ ಗಳನ್ನು ಬ್ಲಾಕ್ ಮಾಡ್ತಿವಲ್ಲ ಹಾಗೆ. ಮನಸಿಗೆ ಏನೊ ಸೇರುತ್ತಿರಲಿಲ್ಲ; ಅದರಿಂದ ಏನೂ ಆಚೆ ಬರುತ್ತಿರಲಿಲ್ಲ.

ಮರುದಿನ ಬೆಳಗ್ಗೆ ಮೊಬೈಲ್ ಎತ್ತಿಕೊಂಡು ನಿನ್ನ ನಂಬರ್ ಬ್ಲಾಕ್ ಮಾಡಿಬಿಟ್ಟೆ. ಮನಸು ಮುಚ್ಚಿರುವಾಗ ಮಾತು ಬರುವ ದಾರಿಯಾದರೂ ಯಾಕೆ ತೆರೆದಿರಬೇಕು? ಅಲ್ಲವಾ?

ಜಗತ್ತಿನಲ್ಲಿ ಯಾರದೊ ಮನಸುಗಳು ಯಾರಿಗೊ ತೆರೆದಿವೆ ಮತ್ಯಾರಿಗೊ ಮುಚ್ಚಿವೆ. ಕೆಲವರು ಮುಚ್ಚಿದ ಬಾಗಿಲ ಮುಂದೆ ಬೇಡುತ್ತಾರೆ ಪಾಪ ಅವರನ್ನು ಇನ್ಯಾರೊ ಕಾಡುತ್ತಾರೆ, ಅವರಿಗಾಗಿ ಹಾಡುತ್ತಾರೆ. ಯಾರಿಗೊ ಬೇಕಾದವರು ಇನ್ಯಾರಿಗೆ ಬೇಡವಾಗುತ್ತಾರೆ. ಬ್ಲಾಕ್ ಮಾಡಿದ ಬೆರಳಿಗೆ ನೀನೊಂದು ಶಾಪ ಕೊಡು. ಉಃಶಾಪಕ್ಕಾಗಿ ಬದುಕು ಸವೆಸುತ್ತೇನೆ. ನೀನು ಮಾತು ಗೆಲ್ಲಿಸು; ನಾನು ಬಂಧ ಕಟ್ಟುತ್ತಾನೆ.

ಏನೊ ಬರೆಯಲು ಹೊರಟು ಇನ್ನೇನು ಬರೆದುಬಿಟ್ಟೆ.
ಇನ್ನೊಂದು ಬಾರಿ ಕ್ಷಮಿಸು.

ಚೆನ್ನಾಗಿರು ಮುದ್ದು.‌

ಪತ್ರ ಮುಗಿಯುತ್ತದೆ ಜೊತೆಗೆ ಅವಳ ದೀರ್ಘ ಉಸಿರು ಮುಗಿಯುತ್ತದೆ.

ಮೊಬೈಲ್ ಎತ್ತಿಕೊಳ್ಳುತ್ತಾಳೆ.‌

ಬ್ಲಾಕ್ ಮಾಡಿದರೆ ಅತ್ತ ಕಡೆಯಿಂದ ಮಾತು ಬರುವುದಿಲ್ಲ ನಿಜ ಆದರೆ ಈಗ ಅನ್ ಬ್ಲಾಕ್ ಮಾಡಿದರೂ ಮಾತುಗಳು ಬರುವುದಿಲ್ಲ..

ಅವಳಿಗೆ ಸಣ್ಣ ಸಂಕಟ..‌

ಇತ್ತ ಪತ್ರ ಬರೆದು ಹಾಕಿ ಬ್ಲಾಕ್ ಮಾಡಿ ಹಾಕಿದ ಇವನಿಗೆ ಮನಸು ಬಿಚ್ಚಿಕೊಂಡಿದೆ. ನೂರೆಂಟು ಅಲೆಗಳ ಕುಲುಕು. ಬಾಗಿಲ ಮುಚ್ಚಿದವರಿಗೆ ಬಾಗಿಲಾಚೆಯ ಕುತೂಹಲ. ತೆರೆದಿಟ್ಟು ಕೂರೋಣ ಅನಿಸಿತು. ಬಂದದ್ದು ಬರಲಿ. ಬರುವುದು ನನಗಾಗಿಯೇ ಬಂದಿದ್ದರೆ ಉಳಿಯುತ್ತದೆ ಅನಿಸಿತು.

ಮೊಬೈಲ್ ತೆಗೆದು unblock ಮಾಡುತ್ತಾನೆ..

ಇಬ್ಬರ ಬಾಗಿಲಗಳೂ ತೆರೆದಿವೆ..
ಮುಚ್ಚಿದೆ ಅಂತ ಅವಳು..
ಮುಚ್ಚಿದೆ ಅಂತ ಅವನು..

ಬದುಕಿನ ವಿಚಿತ್ರ ಇದು..
ಮುಚ್ಚಿದ್ದು ತೆರೆದಿದೆ ಅಂದುಕೊಂಡು
ತೆರೆದಿದ್ದು ಮುಚ್ಚಿದೆ ಅಂದುಕೊಂಡು
ಬದುಕುತ್ತೇವೆ..
ಅದೇ ಸರಿ.. ಅದೇ ಒಳ್ಳೆಯದು!

‍ಲೇಖಕರು avadhi

February 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: