ಪ್ರದೀಪ ಆರ್ ಎನ್ ಓದಿದ ʼಗಾಂಧೀಜಿಯವರ ಉಪವಾಸಗಳು ಮತ್ತು…ʼ

ಪ್ರದೀಪ ಆರ್ ಎನ್

ಕನ್ನಡದಲ್ಲಿ ಶೇಕ್ಸ್ ಪಿಯರ್ ಸಾಹಿತ್ಯವನ್ನು ಹೆಚ್ಚು ಅಧ್ಯಯನ ಮಾಡುವಂತೆ ಪ್ರೇರೇಪಿಸಿದ ಪ್ರಮುಖರಲ್ಲಿ ಪ್ರೊ.ಜಿ.ಕೆ.ಗೋವಿಂದರಾವ್ ಕೂಡ ಒಬ್ಬರು. ರಂಗಭೂಮಿಯ ಜೊತೆಗೂ ತಮ್ಮನ್ನು ತೊಡಗಿಸುಗೊಂಡು‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸುತ್ತಿದ್ದ ಚಿಂತಕರಿವರು. ಪ್ರಭುತ್ವವನ್ನು ಪ್ರಶ್ನೆಸುತ್ತಾ ಸಮಾಜವನ್ನು ಜಾಗೃತಪ್ರಜ್ಞೆಯ ಕಡೆ ನಡೆಸುತ್ತಿದ್ದ ಪ್ರೊ.ಜಿ.ಕೆ.ಜಿ.ಯವರು ೨೦೨೧ರಲ್ಲಿ ನಿಧನರಾದರು. ಗಾಂಧೀಜಿ ಕೈಗೊಂಡ ಉಪವಾಸಗಳನ್ನು ಕುರಿತು ಬಂದ ಇವರ ದೀರ್ಘ ಪ್ರಬಂಧವು “ಗಾಂಧೀಜಿಯವರ ಉಪವಾಸಗಳು ಮತ್ತು…” ಎಂಬ ಪುಸ್ತಕ ರೂಪದಲ್ಲಿ ಹೊರಬಂದಿದೆ.

ಭಾರತದ ಆಧುನಿಕ ಇತಿಹಾಸದ ಪ್ರಮುಖ ವಾಗ್ವಾದ ಅಥವಾ ಸಂವಾದಗಳಲ್ಲಿ ಗಾಂಧಿ-ಅಂಬೇಡ್ಕರ್ ನಡುವೆ ನಡೆದ ಸಂಘರ್ಷ ಮುಖ್ಯವಾದದ್ದು. ಇದರೊಂದಿಗೆ ನಮಗೆ ನೆನಪಾಗುವ ಮತ್ತೊಂದು ಮುಖ್ಯ ವಾಗ್ವಾದವೆಂದರೆ ಗಾಂಧಿ-ಠಾಗೂರ್ ನಡುವಿನದು. ಅಂಬೇಡ್ಕರ್ ನಡುವೆ “ಮೀಸಲಾತಿ” ಕುರಿತು ನಡೆದ ಸಂವಾದ ನಡೆದರೆ, ಠಾಗೂರ್ ನಡುವೆ “ಸ್ವದೇಶಿ” ಕುರಿತು ನಡೆಯಿತು. ಪ್ರೊ.ಜಿ.ಕೆ.ಗೋವಿಂದರಾವ್ ಅವರ ಈ ಕೃತಿಯೂ ಗಾಂಧೀಜಿಯವರ ಉಪವಾಸವನ್ನು ಅದರಲ್ಲೂ ಮುಖ್ಯವಾಗಿ ಅಂಬೇಡ್ಕರ್ ಸೂಚಿಸಿದ್ದ ದಮನಿತರಿಗೆ ಪ್ರತ್ಯೇಕ ಮತದಾನದ‌ ಹಕ್ಕಿನ ಬೇಡಿಕೆಯ ವಿರುದ್ಧ ೧೯೩೨ರಲ್ಲಿ‌ ಕೈಗೊಂಡ ಉಪವಾಸದ ಕುರಿತ ಚರ್ಚೆ ಇದೆ. ಗಾಂಧೀಜಿಯ ಈ ಉಪವಾಸ ಇತಿಹಾಸದಲ್ಲಿ “ಎಪಿಕ್ ಪಾಸ್ಟ್” (the epic fast) ಎಂದೇ ಹಲವು ಟೀಕೆಗಳಿಗೆ ಗುರಿಯಾಯಿತು ಎನ್ನಬಹುದು.

ಆಧ್ಯಾತ್ಮಿಕ ನೆಲೆಯ ಉಪವಾಸವನ್ನು ಗಾಂಧಿ ತಮ್ಮ ಹೋರಾಟದ ಆಯುಧವನ್ನಾಗಿ ಮಾಡಿಕೊಂಡರು. ಉಪವಾಸವನ್ನು ‘ಆತ್ಮಶುದ್ಧೀಕರಣ’ದ ಮಾರ್ಗವೆಂದು ಕರೆಯುತ್ತಿದ್ದರು. ಹರಿಜನರಿಗೆ ಪ್ರತ್ಯೇಕ ಮೀಸಲಾತಿ ಕುರಿತು ವಿಚಾರವಾಗಿ ಗಾಂಧಿ ಹೂಡಿದ ಈ‌ ಉಪವಾಸವೂ ಅವರನ್ನು ಒಬ್ಬ‌ ಸನಾತನ ಹಿಂದೂವಾದಿ ಎಂದು ಟೀಕಿಸಲು ಕಾರಣವಾಯಿತು. ಹರಿಜನರ ಉದ್ಧಾರವನ್ನು ಸಹಿಸದ ಗಾಂಧಿಯ ಬಗೆಗೆ ಅಂಬೇಡ್ಕರ್ ಅವರಿಗು ಅಸಮಧಾನ ಇತ್ತು. ಇದಕ್ಕೆ ಗಾಂಧಿ ನೀಡಿದ‌ಕಾರಣ ಎಂದರೆ, ದಲಿತರಿಗೆ ಪ್ರತ್ಯೇಕ ಮೀಸಲಾತಿಯಿಂದಾಗಿ ಹಿಂದೂಧರ್ಮ ಹೊಡೆಯುತ್ತದೆ ಅದಕ್ಕಾಗಿ ನಾನು ಇದನ್ನು ವಿರೋಧಿಸಿ‌ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ನಿರ್ಧರಿಸಿದರು. ಕೊನೆಗೆ ಅಂಬೇಡ್ಕರ್ ಗಾಂಧೀಜಿಯ ಆರೋಗ್ಯದಲ್ಲಿನ ವ್ಯತ್ಯಯದಿಂದಾಗಿ ಅವರ ಸಾವು ಸಂಭವಿಸಿದರೆ‌ ಅದಕ್ಕೆ ತಾನು ಹಾಗೂ ತನ್ನ ಸಮುದಾಯದ ಜನ ಕಾರಣರಾಗುತ್ತಾರೆ ಎಂದು ಅರಿತು ಮನಸ್ಸಿಲ್ಲದ ಮನಸ್ಸಿನಿಂದ ಗಾಂಧೀಜಿಯ ಬೇಡಿಕೆಗೆ ಒಪ್ಪಿಗೆ ನೀಡಿ‌ ಪೂನಾ ಒಪ್ಪಂದಕ್ಕೆ ಸಹಿಹಾಕುತ್ತಾರೆ. ವಾಸ್ತವವಾಗಿ ಇಲ್ಲಿ ಗಾಂಧೀಜಿಗೆ ಮರುಜೀವ ನೀಡಿದವರು ಅಂಬೇಡ್ಕರ್ ಅವರು.

“ಉಪವಾಸ ಮಾಡುವುದು ನಮ್ಮ ಮೇಲೆ ನಾವು ವಿಧಿಸಿಕೊಂಡ ಒಂದು ಹಿಂಸೆ. ಆದರೆ ಈ ಹಿಂಸೆಯನ್ನು ನಮ್ಮ ಮೇಲೆಯೇ ಅನ್ನುವುದಕ್ಕಿಂತ ನಮ್ಮ ಸುತ್ತಲವರ ಮೇಲೆ ಹೊರಿಸಲಾದ ಹಿಂಸೆ ಎಂದೇ ಹೇಳಬೇಕು”(ಪು.ಸಂ.೦೫) ಎನ್ನುವಲ್ಲಿ ಅಹಿಂಸಾವಾದಿಯಾದ ಗಾಂಧಿ ತಮ್ಮ‌ ಕಠಿಣ ನಿಯಮಗಳಿಂದಾಗಿ ಹೇಗೆ ತಮ್ಮ ಹಾಗೂ ತನ್ನ ಸುತ್ತಲಿನವರ ಮೇಲಿನ ಹಿಂಸೆಗೆ ಕಾರಣವಾಗಿದ್ದರು ಎಂಬುದನ್ನು ಯೋಚಿಸಲೇಬೇಕು. ‘ಇಡೀ ದೇಶದಲ್ಲಿ ತಾವೋಬ್ಬರೇ ದಲಿತ ನಾಯಕ ಎಂದು ಘೋಷಿಸಿಕೊಂಡಿದ್ದ ಬಾಪೂಜಿ‌’ (ಪು.ಸಂ.೩೫) ಎನ್ನುವ ಲೇಖಕರು (ಜಿಕೆಜಿ) ಅದು ಎಲ್ಲಿ? ಎಂಬುದನ್ನು ಮಾತ್ರ ತಿಳಿಸಿಲ್ಲ. ಪ್ರಜಾಪ್ರಭುತ್ವ ಮತ್ತು ಹಿಂಸೆ ಎಂದಿಗೂ ಒಟ್ಟಿಗೆ ಹೋಗಲಾರವು ಎಂದು ಗಾಂಧಿ ಹೇಳುತ್ತಿದ್ದರು.

ಅಂಬೇಡ್ಕರ್ ಈ ಸಾಮಾಜಿಕ ಚಳುವಳಿಯಲ್ಲಿ ಭಾಗವಹಿಸುವ ಬಹಳ ವರ್ಷಗಳ ಹಿಂದೆಯೇ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಗಾಂಧಿ, ಅಂಬೇಡ್ಕರ್ ಅವರ ಈ ದಮನಿತರಿಗೆ ಪ್ರತ್ಯೇಕ ಮೀಸಲಾತಿ ವಿಷಯದಲ್ಲಿ ಮಾತ್ರ ಯಾಕೆ ವಿರೋಧಿಸಿದರು? ಎಂಬುದು ನಮಗೆ ಒಗಟಾಗಿಯೇ ಉಳಿಯಿತು. ಯಾವ ಹಿಂದೂ ಧರ್ಮ ಅಸ್ಪೃಶ್ಯತೆಯನ್ನು ಆಚಾರಿಸುತ್ತಿತ್ತೊ ಅಂತಹ ಧರ್ಮದ, ದೇವಾಲಯದ ಹೊರಗೆ ಇರಲು ಪ್ರಯತ್ನಿಸಿದ ಗಾಂಧಿ ಈ ಉಪವಾಸ‌ ಕೈಗೊಳ್ಳಲು ಕಾರಣವೇನು? ಮುಂದಿನ ಜನ್ಮದಲ್ಲಿ ಒಬ್ಬ ಜಲಗಾರನಾಗಿ‌ ನಾನು ಹುಟ್ಟುತ್ತೆನೆ ಎನ್ನುತ್ತಿದ್ದ ಗಾಂಧಿ ಬದುಕಿದ್ದಾಗಲೇ ಶೌಚಾಲಯ ತೊಳೆದರು, ಕಸಗುಡಿಸಿದರು. ಸಮಾಜದಲ್ಲಿ ಎಲ್ಲರೂ ಸಮಾನರು ಹಾಗೂ ವರ್ಣಾಶ್ರಮದ ಈ ವ್ಯವಸ್ಥೆಯಲ್ಲಿ ಜಾತಿಯನ್ನು ಕಸುಬಾಗಿ, ಕಲೆಯಾಗಿ, ಕಾಯಕವಾಗಿ ನಂಬಿದ್ದ ಗಾಂಧಿ ಈ‌ ಸತ್ಯಾಗ್ರಹ ಮಾಡಲು ಕಾರಣವೇನು? ಎಂಬುದು ಈಗಲೂ ನಮಗೆ ಉತ್ತರ ದೊರೆತಿಲ್ಲ.

ಸ್ವದೇಶಿ, ಚರಕ, ಅಹಿಂಸೆ, ಸತ್ಯಾಗ್ರಹ, ಹಿಂದೂ-ಮುಸ್ಲಿಂ ಐಕ್ಯತೆ, ಅಸ್ಪೃಶ್ಯತಾ ನಿವಾರಣೆ ಇವೇ ಗಾಂಧೀಜಿಯ ಮುಖ್ಯ ಅಜೆಂಡಾಗಳಾಗಿದ್ದವು. ಇಷ್ಟೇಲ್ಲಾ ತನ್ನ ಕನಸಿನ ಭಾರತದ ಬಗ್ಗೆ ಯೋಚಿಸಿದ್ದ ಗಾಂಧೀ ಯಾಕೆ ಅಂಬೇಡ್ಕರ್ ದಮನಿತರಿಗೆ ಏಳಿಗೆಗಾಗಿ ಸೂಚಿಸಿದ ಈ ಮೀಸಲಾತಿ ಕುರಿತು ವಿರೋಧ ವ್ಯಕ್ತಪಡಿಸಿದರು?! ಈ ಒಂದು ಘಟನೆ ಗಾಂಧೀಜಿಯವರ ಜೀವನದ ಕಪ್ಪುಚುಕ್ಕೆಯಾಗಿ ಇತಿಹಾಸದ ಪುಟದಲ್ಲಿ ಚಿತ್ರತವಾಗಿದೆ. ಆದರೆ ಆ ನಿರ್ಧರವನ್ನು ಗಾಂಧಿ ಕೈಗೊಂಡಿದ್ದರ ದೂರದೃಷ್ಟಿ ಏನು ಎಂಬುದನ್ನು ಯಾರು ಚಿಂತಿಸಲಿಲ್ಲವೇ ಎನಿಸುತ್ತದೆ.

ಆಗಿದ್ದರೆ ಗಾಂಧೀ ಕಂಡ ಹಿಂದೂಧರ್ಮ ಯಾವುದು?
ಸಮುದ್ರದಲ್ಲಿನ ಹಿಡಿಉಪ್ಪನ್ನು ಎತ್ತಿಹಿಡಿದು ಹೋರಾಡಿದ ಗಾಂಧಿ ಬ್ರಿಟೀಷರಿಗೆ ಸಿಂಹಸ್ವಪ್ನವಾದರೆ, ಮಹಡ್ ಕೆರೆಯಲ್ಲಿನ ಬೊಗಸೆಯ ನೀರು ತೆಗೆದ ಅಂಬೇಡ್ಕರ್ ಹೋರಾಟ ಹಿಂದೂ ಧರ್ಮಕ್ಕೆ ದೊಡ್ಡ ಸವಾಲಾಗಿದ್ದನ್ನು ಇದೇ ಜಿ.ಕೆ.ಜಿ.ಯವರು ಬೇರೊಂದ ಕಡೆ ಹೇಳಿದ ನೆನಪು. ಅಂಬೇಡ್ಕರ್ ಪ್ರಕಾರ “ಜಾತಿ ಪದ್ದತಿ ಎನ್ನುವುದು ಶ್ರಮದ ವಿಭಜನೆಯಲ್ಲ; ಶ್ರಮಿಕರ ವಿಭಜನೆ; ಜಾತಿ ಪ್ರಜ್ಞೆಯನ್ನು ತೊಡೆಯದಿದ್ದರೆ ಬಡ ಶ್ರಮಿಕರು ಒಗ್ಗೂಡಿ ಹೋರಾಟ ಮಾಡಲಾರರು” ಎಂಬುದಾಗಿತ್ತು. ಅದಕ್ಕಾಗಿ‌ ಸಾಮಾಜಿಕ, ಆರ್ಥಿಕ,ಶೈಕ್ಷಣಿಕ ಹಾಗೂ ರಾಜಕೀಯ ಸಮಾನತೆಗಾಗಿ ದಮನಿತರಿಗೆ ಮೀಸಲಾತಿ ಅವಶ್ಯ ಎಂದಿದ್ದರು.‌ ಆದರೆ ಇಂದು ಸಂವಿಧಾನ ರಚನೆಗೊಂಡು ಇಷ್ಟು ವರ್ಷಗಳಾದ ನಂತರ ಯಾವ ಮೇಲ್ವರ್ಗದ, ಮೇಲ್ಜಾತಿಯ ಜನರಿಂದ ಇಲ್ಲಿನ ದಲಿತರು ಶೋಷಣೆಗೆ ಒಳಗಾದರೋ ಅದೇ ಮೇಲ್ವರ್ಗದ ಜನರು‌‌ ಮೀಸಲಾತಿಯ ಅಧಿಕ ಲಾಭ ಪಡೆಯುತ್ತಿರುವುದು ದುರಂತ!

ತನ್ನ ಗುರು ಲಿಯೋ ಟಾಲ್ಸ್ಟಾಯ್ “ಎಲ್ಲಿ ಪ್ರೀತಿ ಇದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ” ಎಂದರೆ, ಅವರ ಶಿಷ್ಯ ಗಾಂಧೀಜಿಯವರು “ಎಲ್ಲಿ ಸತ್ಯವಿದೆಯೋ ಅಲ್ಲಿ ದೇವರು ನೆಲೆಸಿದ್ದಾನೆ” ಎಂದರು. ಈ ಸತ್ಯ ಹಾಗೂ ಪ್ರೀತಿ ಎರಡನ್ನೂ ತಮ್ಮ ಆದರ್ಶಗಳಲ್ಲಿ ತೊಡಗಿಸಿಕೊಂಡಿದ್ದ ಗಾಂಧಿ ಪೂನಾ ಒಪ್ಪಂದದ ಹಿನ್ನೆಲೆಯ ಐತಿಹಾಸಿಕ ಘಟನೆಗೆ‌ ಕಾರಣರಾಗಿದ್ದು ಏಕೆ? ಈ ಪ್ರಶ್ನೆಗೆ ಉತ್ತರವನ್ನು ನಾವು ಆ ಇಬ್ಬರು ಮಹಾತ್ಮರನ್ನು ಆಳವಾಗಿ ಅಧ್ಯಯನ ನಡೆಸಿದರೆ ಮಾತ್ರ ಅರಿಯಬಹುದು ಎಂಬುದು ನನ್ನ‌ ಅನಿಸಿಕೆಯಾಗಿದೆ. ಈ ಕೃತಿಯ ಕೊನೆಯಲ್ಲಿ ಜಿ.ಕೆ.ಗೋವಿಂದ ರಾವ್ಅವರು ಭಾರತದ ಡೈನಮಿಕ್ ನಾಯಕರ‌ ಪಟ್ಟಿಯಲ್ಲಿ ಠಾಗೋರ್, ಗಾಂಧಿ, ಅಂಬೇಡ್ಕರ್ ಮತ್ತು ಲೋಹಿಯಾ ಅವರನ್ನು ಒಳಗೊಂಡ ಇಷ್ಟು ಜನ ಚಿಂತಕರನ್ನು ಇಂದಿನ ಯುವತಲೆಮಾರು ಗಂಭೀರವಾಗಿ ಅಧ್ಯಯನ ಮಾಡಿ ದೇಶದ ಭವಿಷ್ಯವನ್ನು ಕಾಪಾಡಬೇಕು ಎಂಬ ಎಚ್ಚರಿಕೆ ಹಾಗೂ ಆಶಯವನ್ನು ನೀಡುತ್ತಾರೆ.

ಇಡೀ ಕೃತಿ ಗಾಂಧೀಜಿಯವರು ದಮನಿತರ ಮೀಸಲಾತಿ ವಿಚಾರವಾಗಿ ಕೈಗೊಂಡ ಈ‌ ದೀರ್ಘ ಉಪವಾಸದ ಕುರಿತದ್ದಾಗಿದೆ. ಲೇಖಕರು ಅಲ್ಲಲ್ಲಿ ಗಾಂಧೀಜಿಯವರನ್ನು ಕುರಿತು ಎತ್ತಿದ ಹಲವು ಪ್ರಶ್ನೆಗಳಿಗೆ ನಾವೆಲ್ಲಾ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಏಕೆಂದರೆ ಗಾಂಧಿಯಾಗಲಿ‌ ಈ ಕೃತಿಯನ್ನು ಬರೆದ ಪ್ರೊ.ಜಿ.ಕೆ.ಜಿ.ಯವರಾಗಲಿ ಇಬ್ಬರೂ ನಮ್ಮ ನಡುವೆ ಈಗ ಇಲ್ಲ‌. ಇದಕ್ಕೆ ಉತ್ತರ ಕಂಡುಕೊಳ್ಳಬೇಕಾದರೆ ಈಗಾಗಲೇ ಲೇಖಕರೇ ಸೂಚಿಸಿದ ಮೇಲಿನ ಅಷ್ಟುಜನ ಡೈನಮಿಕ್ ನಾಯಕರನ್ನು ನಾವು ಗಂಭೀರವಾಗಿ ಅಧ್ಯಯನ ಮಾಡಬೇಕು. ಕೊನೆಯಲ್ಲಿ ದೇವನೂರು ಮಹಾದೇವರು ಹೇಳಿದ ಎರಡು ಮಾತುಗಳನ್ನು ಹೇಳಿ ಮುಗಿಸುತ್ತೇನೆ.

“ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವವನಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಒಳಗಿದ್ದ ಗಾಂಧಿಗೂ ಬಿದ್ದು ರಕ್ತ ಚೆಲ್ಲಿರಬಹುದು. ಇದನ್ನು ಕಂಡು ಹೊರಲೋಕವು ಗಾಂಧಿಗೂ, ಅಂಬೇಡ್ಕರ್ ಗೂ ಮಾರಾಮಾರಿ ಹೊಡೆದಾಟ ಎನ್ನಬಹುದು. ಆದರೆ ಇಬ್ಬರೂ ಮಾಡುತ್ತಿದ್ದದ್ದು ಹೆಚ್ಚೂಕಮ್ಮಿ ಒಂದೇ ಕೆಲಸವನ್ನಲ್ಲವೆ” ಎಂದ ಮಾತು ಈ ಇಬ್ಬರ ನಡುವಿನ ಸಂಘರ್ಷದ್ದೆ ಕುರಿತು ಎನಿಸುತ್ತದೆ. ಮುಂದುವರೆದು ದೇವನೂರರಿಗೆ ಈ ಇಬ್ಬರು ಮಹಾತ್ಮರು ಮಕ್ಕಳ ಹಿತಕ್ಕಾಗಿ ಎಂದು ಜಗಳವಾಡುತ್ತಿದ್ದ ಅಪ್ಪ-ಅಮ್ಮನಂತೆ ಕಾಣುತ್ತಾರೆ.

‍ಲೇಖಕರು avadhi

February 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: