ಜಿ ಎನ್ ನಾಗರಾಜ್ ಅಂಕಣ – ಶರಣರ ಜಾತಿ ನಿಷೇಧಕ್ಕೆ ವೈಜ್ಞಾನಿಕ ತತ್ವಜ್ಞಾನದ ಆಧಾರ

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

43

ಇತ್ತೀಚೆಗೆ ಒಂದು ಅಂತರ್ ಜಾತೀಯ, ಅಂತರ್ ಧರ್ಮೀಯ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಲೇ ನನ್ನ ತಲೆಯಲ್ಲಿ ಹಲವು ಹೊಸ ವಿಚಾರಗಳು ಸುಳಿದಾಡತೊಡಗಿದವು. ಕಾರ್ಯಕ್ರಮ ಮುಗಿದ ನಂತರವೂ ತಲೆಯಲ್ಲಿ ಗುಂಯ್ಯೆಂದು ಸುತ್ತತೊಡಗಿದವು.

ದಲಿತ ಗಂಡು- ಬ್ರಾಹ್ಮಣ ಹೆಣ್ಣಿನ ವಿಲೋಮ ವಿವಾಹವೆಂಬ ವರ್ಣ ಸಂಕರಕ್ಕೆ ಸಂಬಂಧಿಸಿದ ಆ ಮಹಾ ಸಂಘರ್ಷದಲ್ಲಿ ವಚನಕಾರರು ಜಯ ಗಳಿಸಿದ್ದರೆ ಕರ್ನಾಟಕ ಮತ್ತು ಭಾರತದ ಸಮಾಜ ಹೇಗಿರುತ್ತಿತ್ತು ? ಜಾತಿ ವ್ಯವಸ್ಥೆ ಕರ್ನಾಟಕದಲ್ಲಿ ಪೂರ್ತಿ ನಾಶವಾಗುವ ಸಾಧ್ಯತೆ ಇತ್ತೆ ? ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತೆ ಅಥವಾ ಇಡೀ ಭಾರತವನ್ನೇ ವ್ಯಾಪಿಸಿರುತ್ತಿತ್ತೇ ? ಸ್ವತಃ ದೇವರಿಂದಲೇ ಸೃಷ್ಟಿಯಾಗಿ ಇಡೀ ಭಾರತವನ್ನೇ ವ್ಯಾಪಿಸಿದ್ದ ಪ್ರಬಲವಾದ ವರ್ಣ-ಜಾತಿ ವ್ಯವಸ್ಥೆಯ ಕರಾಳತೆ, ವರ್ಣಾಶ್ರಮ ಧರ್ಮ ಸಂರಕ್ಷಕರುಗಳೆಂದು ಘೋಷಿಸಿಕೊಂಡ ರಾಜರುಗಳ ರಕ್ಷಣೆ ಇರುವ ಜಾತಿ ವ್ಯವಸ್ಥೆಯ ವಿರುದ್ಧ ದನಿ ಎತ್ತಿದವರು ಭಾರತದಲ್ಲಿ ಕೆಲವು ಸಂತರು, ಸಾಹಿತಿಗಳಾದರೂ ಇದ್ದಾರೆ. ಆದರೆ ಜಾತಿ ವ್ಯವಸ್ಥೆಯ ನಿರ್ಮೂಲನಕ್ಕಾಗಿ ನೇರ ಕ್ರಿಯಾರಂಗಕ್ಕೆ ಧುಮುಕಿ ಪ್ರಭುತ್ವವನ್ನು ಈ ಪರಿ ಎದುರು ಹಾಕಿಕೊಂಡ, ತಮ್ಮ ಪ್ರಾಣವನ್ನು ಒತ್ತೆ ಇಟ್ಟ ಈ ಸಂಘರ್ಷಕ್ಕೆ ಮುಂದಾಗುವ ಗಟ್ಟಿತನ,ದಿಟ್ಟತನ ಶರಣ ಸಮೂಹಕ್ಕೆ ಬಂದುದಾದರೂ ಎಲ್ಲಿಂದ‌? ಎಲ್ಲಿಂದ ? ವರ್ಣ- ಜಾತಿ ವ್ಯವಸ್ಥೆಯ ಅತಿ ದೊಡ್ಡ ಬಲವೇ ವೇದಗಳು. ಉಪನಿಷತ್ತುಗಳು ಜನರು‌ ತಾವಾಗಿಯೇ ಅದನ್ನು ಒಪ್ಪಿಕೊಳ್ಳುವಂತಹ ತತ್ವಶಾಸ್ತ್ರೀಯ ಭದ್ರ ಬುನಾದಿಯನ್ನು ನಿರ್ಮಿಸಿದವು.

ವಚನಕಾರರಿಂದ ವೇದಗಳ, ವೇದಾಂತದ ನಿರಾಕರಣೆಯ ಮೂಲ ಇದೇ. ಅದು ಹಲವು ಶರಣರ ವಚನಗಳಲ್ಲಿ ಪ್ರಖರವಾಗಿ ಕಂಡು ಬರುತ್ತದೆ. ಆದರೆ ಸಾವಿರಾರು ವರ್ಷಗಳಿಂದ ಪಸರಿಸಲ್ಪಟ್ಟಿರುವ ಮತ್ತು ಮನುಸ್ಮೃತಿ, ಪುರಾಣಗಳು ,ದೇವಾಲಯಗಳಿಂದ ಪುಷ್ಟಿಗೊಂಡು ಜನಮನದಲ್ಲಿ ಆಳವಾಗಿ ಬೇರು ಬಿಟ್ಟಿರುವ ವ್ಯವಸ್ಥೆ ಕೇವಲ ನಿರಾಕರಣೆಯಿಂದ ಜನಮನದಿಂದ ದೂರವಾಗುವುದೇ ? ಅಷ್ಟೇ ಬಲವಾದ ತತ್ವಶಾಸ್ತ್ರೀಯ ಆಧಾರ, ಪರ್ಯಾಯ ಧಾರ್ಮಿಕ ತಳಹದಿ, ಜನರೊಪ್ಪವಂತೆ ಅದರ ವಿವರಣೆ, ವ್ಯಾಪಕವಾಗಿಸುವ ಪ್ರಸರಣ ವಿಧಾನಗಳು ಮುಂತಾದ ಪರಿಕರಗಳು, ಸಾಧನಗಳಿಲ್ಲದೆ ? ವಚನಗಳನ್ನು ವಿವರವಾಗಿ ಅಧ್ಯಯನ ಮತ್ತು ಆಳವಾದ ವಿಶ್ಲೇಷಣೆಗೆ ಒಳಪಡಿಸಿದರೆ ಇಂತಹುದೊಂದು ತತ್ವಜ್ಞಾನದ ಪ್ರಸ್ತುತಿಯನ್ನು ಅವುಗಳಲ್ಲಿ ಕಾಣಬಹುದು.

ವಚನಗಳ ಜನ ಭಾಷೆ, ಅವುಗಳ ಸರಳ ರಚನೆ, ಮಂಡನೆಯ ವಿಧಾನ, ಜಾತಿ ವಿರೋಧ, ಮಹಿಳಾ ಸಮಾನತೆ, ದೇವಾಲಯ ನಿರಾಕರಣೆ, ವೇದಾಗಮಗಳ ನಿರಾಕರಣೆ, ಮೂಢನಂಬಿಕೆ,ಕಂದಾಚಾರಗಳ ಖಂಡನೆ, ಉಪಮೆ, ರೂಪಕಗಳ ಸೌಂದರ್ಯಕ್ಕೆ ಆಕರ್ಷಿತರಾದ ಕನ್ನಡ ಸಾಹಿತ್ಯ ವಲಯದಲ್ಲಿ ವಚನಗಳ ಬಗ್ಗೆ ಸಾವಿರಾರು ಪ್ರಬಂಧ, ಉನ್ನತ ಪ್ರಬಂಧ, ಲೇಖನ, ವಿಮರ್ಶೆ, ಉಪನ್ಯಾಸಗಳನ್ನು ಕಾಣುತ್ತೇವೆ. ಆದರೆ ವಚನಕಾರರು ಜಾತಿ ವ್ಯವಸ್ಥೆಯನ್ನು ನಿರಾಕರಿಸಲು ವಚನಗಳಲ್ಲಿರುವ ಆಧಾರವೇನು ? ಅಂತಹ ದಿಟ್ಟತನ ಅವರಲ್ಲಿ ಮೂಡಿದ ಬಗೆ, ಅವುಗಳಲ್ಲಿರುವ ತತ್ವಶಾಸ್ತ್ರೀಯ ವಿವರಗಳೇನು, ತಮ್ಮದೇ ಧಾರ್ಮಿಕ ಆಚರಣೆಗಳ ಮೂಲಕ ಈ ವಿಚಾರಗಳನ್ನು ನೆಲೆಗೊಳಿಸಿದ್ದು ಹೇಗೆ ಎಂಬ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಆದರೆ ವಚನ ಸಾಗರದಲ್ಲಿ ಸಾಮಾಜಿಕ ವಿಚಾರಗಳ ಪ್ರತಿಪಾದನೆಯ ವಚನಗಳಿಗಿಂತ ತತ್ವಶಾಸ್ತ್ರೀಯ , ಧಾರ್ಮಿಕ ವಿಚಾರಗಳನ್ನೊಳಗೊಂಡ ವಚನಗಳೇ ಬಹುವಾಗಿ ವ್ಯಾಪಿಸಿವೆ‌. ಒಂದು ತಂಡ ವಚನಕಾರರು ಜಾತಿ ವ್ಯವಸ್ಥೆಗೆ ವಿರೋಧ ಮಾಡಿದವರೇನಲ್ಲ. ಅವರ ವಚನಗಳಲ್ಲಿ ಜಾತಿ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿದವು ಕೇವಲ ಎಪ್ಪತ್ತರಷ್ಟು ಅಷ್ಟೇ. ಉಳಿದುವೆಲ್ಲ ಅವರ ಧಾರ್ಮಿಕ ವಿಚಾರವಾದ ಷಟ್ಸ್ಥಲದ ಬಗ್ಗೆ ವಿವರಗಳಷ್ಟೇ. ಈ ಧಾರ್ಮಿಕ ಸಿದ್ಧಾಂತಗಳಲ್ಲಿ ಜಾತಿ ವಿರೋಧದ ವಿಚಾರವೇನೂ ಇಲ್ಲ. ಇಪ್ಪತ್ತೊಂದು ಸಾವಿರಕ್ಕೂ ಮಿಕ್ಕಿದ ವಚನಗಳಲ್ಲಿ ಇಷ್ಟು ಅಲ್ಪ ಸಂಖ್ಯೆಯ ವಚನಗಳನ್ನು ಮಾತ್ರ ಉದಾಹರಿಸುತ್ತಾ ವಚನಕಾರರು ಜಾತಿ ನಿರ್ಮೂಲನ ಮಾಡ ಹೊರಟಿದ್ದರೆಂದು ಪ್ರಚಲಿತಗೊಳಿಸಿರುವ ವಿಚಾರವೇ ಹಾಸ್ಯಾಸ್ಪದ ಎಂಬೆಲ್ಲ ವಾದಗಳನ್ನು‌ ಮಂಡಿಸಿತ್ತು. ಈ ವಾದಕ್ಕೆ ಪ್ರಸಿದ್ಧ ಸಾಹಿತಿಗಳಿಂದಲೇ ಬಹಳ ಬಲವಾದ ಖಂಡನೆ ವ್ಯಕ್ತವಾಗಿತ್ತು. ಆದರೆ ಈ ಖಂಡನೆಗಳಲ್ಲಿ ಅವರ ವಾದಗಳಿಗೆ ನಿರ್ದಿಷ್ಟ ಉತ್ತರ ಇರಲಿಲ್ಲ. ಆಗ ವಚನಗಳನ್ನು‌ ತಡಕಾಡಿ ಜಾತಿ ನಿರಾಕರಣೆಯ ಬಗ್ಗೆ ವಚನಗಳ ತತ್ವಶಾಸ್ತ್ರೀಯ ವಿಚಾರಗಳನ್ನು ಅಧ್ಯಯನ ಮಾಡಿ ವಚನಗಳ ಸರ್ವಾಂಗವೂ ಜಾತಿ ವಿರೋಧವೇ ಎಂಬ ಬಗ್ಗೆ ನನ್ನ ಲೇಖನಗಳನ್ನು ಅವಧಿ ಜಾಲತಾಣ ಪತ್ರಿಕೆ ಪ್ರಕಟಿಸಿತ್ತು. ಅಂದಿನಿಂದ ಈ ಅಧ್ಯಯನವನ್ನು ಮುಂದುವರೆಸಿಕೊಂಡು ಬಂದಿದ್ದೇನೆ.

ವಚನಗಳ ತತ್ವಶಾಸ್ತ್ರ ಮತ್ತು ಉಪನಿಷತ್ತುಗಳ ತತ್ವಶಾಸ್ತ್ರ :

ಕಾಯಕವೇ ಕೈಲಾಸ ಎಂಬುದು ವಚನಕಾರರ ವಿಚಾರಗಳ ತಿರುಳಿನ ಮುಖ್ಯ ಅಂಶ ಎಂಬುದು ಎಲ್ಲರಿಗೂ ತಿಳಿದ ವಿಷಯ. ವಚನ ಚಳುವಳಿ ಕಾಯಕ ಜೀವಿಗಳ ಚಳುವಳಿ ಎಂದೂ ಕರೆಯುತ್ತಾರೆ. ಕಾಯಕಕ್ಕೆ ಕಾಯವೇ ಸಾಧನ. ದೃಢ ಕಾಯವಿಲ್ಲದಿದ್ದರೆ ಕಾಯಕವೂ ಇಲ್ಲ. ವೈದಿಕ ಆಚರಣೆಗಳ ಉಪವಾಸ ವ್ರತ ಇತ್ಯಾದಿಗಳಿಂದ ಶರೀರವನ್ನು ದಂಡಿಸಿ ಸೊರಗಿಸುವ ಬದಲಾಗಿ ಬದಲಾಗಿ ಕಾಯವನ್ನು ಗಟ್ಟಿಯಾಗಿರಿಸಿಕೊಳ್ಳುವ ಸಲುವಾಗಿ ಊಟವನ್ನು ಪ್ರಸಾದ ಎಂದು ಅವಶ್ಯವಿರುವಷ್ಟು ತಾವೂ ತಿನ್ನುವುದು , ದಾಸೋಹ ಎಂದು ಅವಶ್ಯವಿರುವವರಿಗೆ ಊಟ ನೀಡುವುದು, ಅದರಿಂದ ಸಂತಸ ಪಡುವುದು ಇವರು ರೂಪಿಸಿಕೊಂಡ ಒಂದು ಮುಖ್ಯ ಆಚರಣೆ. ಸತ್ಯ ಶುದ್ಧ ಕಾಯಕ ಮಾಡಿಯೇ ಊಟವನ್ನು ಗಳಿಸಬೇಕು, ಪರರಿಗೆ ದಾಸೋಹವನ್ನೂ ಅದರಿಂದಲೇ ನೀಡಬೇಕು ಎನ್ನುವುದು, ಇದರಿಂದ ದೇಹವನ್ನು ದಂಡಿಸದೆ ಅದನ್ನು ಪ್ರಸಾದ ಕಾಯವನ್ನಾಗಿ ರೂಪಿಸಿಕೊಳ್ಳುವುದು , ದೇವಾಲಯ ದರ್ಶನ ಪೂಜೆ, ತೀರ್ಥಯಾತ್ರೆಗಳ ಮೂಲಕ ದೇವರನ್ನು ಒಲಿಸಿಕೊಳ್ಳುವ ಬದಲಾಗಿ ತಾವು ಕೈಗೊಂಡ ಕಾಯಕವೇ ಪೂಜೆ -ಸಾಕ್ಷಾತ್ ಶಿವನೇ ಎದುರಿಗೆ ದರ್ಶನ ನೀಡಿದರೂ ಮಾಡುತ್ತಿದ್ದ ಕಾಯಕವನ್ನು ಬಿಟ್ಟು ಏಳುವುದಿಲ್ಲ ಎಂಬ ಕಡು ಕಾಯಕ ನಿಷ್ಟೆಯಿಂದ ದುಡಿಯುವುದು. ಹೀಗೆ ಹಲವು ಹೊಸ ತತ್ವಗಳು ,ಆಚರಣೆಗಳನ್ನು ರೂಪಿಸಿಕೊಂಡರು.

ಈ ದೇಹ ಮೈಲಿಗೆ ಎಂಬ ವೈದಿಕ ಭಾವನೆಗೆ ಬದಲಾಗಿ ದೇಹವೇ ದೇಗುಲ ಎಂದು ಭಾವಿಸಿದರು. ಅಂಗದ ಮೇಲೆಯೇ ಲಿಂಗ‌ ಧರಿಸಿ ಅದನ್ನೇ ಪೂಜಿಸಿದರು. ಅವರ ವಚನಗಳಲ್ಲಂತೂ ದೇಹದ ವಿವಿಧ ಭಾಗಗಳ ಪ್ರಸ್ತಾಪ ತುಂಬಿ ತುಳುಕುತ್ತಿದೆ. ಎಲ್ಲರಿಗೂ ಗೊತ್ತಿರುವ ಕಣ್ಣು , ಕಿವಿ, ನಾಲಿಗೆ ,ಮೂಗು , ಚರ್ಮಗಳೆಂಬ ಪಂಚೇಂದ್ರಿಯಗಳು ಅಥವಾ ಜ್ಞಾನೇಂದ್ರಿಯಗಳು ಮಾತ್ರವಲ್ಲದೆ ಸಾಮಾನ್ಯವಾಗಿ ಇಂದ್ರಿಯಗಳೆಂದು ಪರಿಗಣಿತವಾಗದ ವಾಕ್, ಪಾಣಿ, ಪಾದ,ಪಾಯು,ಗುಹ್ಯ ( ಮಾತು,ಕೈ, ಹೆಜ್ಜೆ , ಗುದ , ಗುಪ್ತಾಂಗ ) ಎಂಬ ಕರ್ಮೇಂದ್ರಿಯಗಳ ಪ್ರಸ್ತಾಪ ಪದೇ ಪದೇ ಬರುತ್ತದೆ. ಕಾಯಕ ಕೈಗೊಳ್ಳಲು ಕೈ , ಪಾದಗಳು ಎಷ್ಟು ಮುಖ್ಯ ಎಂದು ವಿವರಿಸುವ ಅವಶ್ಯಕತೆಯಿಲ್ಲ. ಆದರೆ ಮಾತ‌ನ್ನು ಕೂಡಾ ಬದುಕಿನ ಮುಖ್ಯ ಅಂಗ , ಅದೂ ಕೂಡಾ ಕೆಲಸ ಮಾಡುವುದಕ್ಕೆ ಬಹಳ ಮುಖ್ಯ ಎಂದು ಭಾವಿಸಿರುವುದು ವಿಶೇಷ. ಇದು ಕೂಡಿ ಕೆಲಸ ಮಾಡುವ ಸಂದರ್ಭ ಮತ್ತು ಅದಕ್ಕಾಗಿ ಸಂವಹನದ ಅಗತ್ಯವನ್ನು ಹೇಳುತ್ತದೆ. ಅಷ್ಟೇ ಅಲ್ಲದೆ ವೈದಿಕ ಚಿಂತನೆಯಲ್ಲಿ ಕೀಳು ಸ್ಥಾನ ನೀಡಿ ಹೆಸರಿಸಲೂ‌ ಅಸಹ್ಯ ಪಟ್ಟುಕೊಳ್ಳುವ ಗುದ, ಗುಪ್ತಾಂಗಗಳನ್ನೂ ಕರ್ಮೇಂದ್ರಿಯಗಳು ಎಂದು ಭಾವಿಸಿರುವುದು ವಿಶೇಷಗಳಲ್ಲಿ ವಿಶೇಷ. ದೇಹದ ಆರೋಗ್ಯಕ್ಕೆ ವಿಸರ್ಜನೆಯ ಅಂಗಗಳ ಅಗತ್ಯವನ್ನು ಮನಗಂಡಿದ್ದರೆಂಬ ಭಾವನೆ ಮೂಡುತ್ತದೆ.

ಜ್ಞಾನೇಂದ್ರಿಯಗಳಿಂದ ಮಾನವರೆಲ್ಲ ಪಡೆಯುವ ವಿಷಯಗಳು – ರೂಪ ರಸ ಗಂಧ ಸ್ಪರ್ಶ, ಶಬ್ದಗಳು ಐದು ತನ್ಮಾತ್ರೆಗಳು ಎಂಬ ಹೆಸರಿನಲ್ಲಿ ಮತ್ತೆ ಮತ್ತೆ ಕಾಣುತ್ತವೆ. ವೈದಿಕ ಸಿದ್ಧಾಂತದಲ್ಲಿ ವಿಷಯಗಳು ಮಾನವರನ್ನು ದಿಕ್ಕು ತಪ್ಪಿಸುತ್ತವೆ ಎಂದು ಹೇಯವಾಗಿ ಕಾಣಲಾಗಿದೆ. ವೇದಾಂತದ ಬಗ್ಗೆ ಬರೆದವರೆಲ್ಲ ವಿಷಯಗಳನ್ನು ಕೀಳ್ಗಳೆಯದಿರಲಾರರು.

ಇವುಗಳ ಜೊತೆಗೆ ರೂಪ,ರಸ ಗಂಧಾದಿಗಳ ಮೂಲವಾದ ಪೃಥ್ವಿ, ಅಪ್ಪು (ನೀರು ), ಅಗ್ನಿ, ವಾಯು, ಆಕಾಶಗಳೆಂಬ ಪಂಚ ಭೂತಗಳು ಕೂಡ ತತ್ವಗಳಾಗಿವೆ. ಪಂಚ ಭೂತಗಳ ಪ್ರಸ್ತಾಪ ಮಾನವ ದೇಹ, ಎಲ್ಲ ಜೀವಿಗಳೂ ಪಂಚಭೂತಗಳಿಂದಲೇ ರೂಪುಗೊಂಡಿವೆ ಎಂಬ ಚಿಂತನೆ ಭಾರತದ ಎಲ್ಲ ಧಾರ್ಮಿಕ ಸಾಹಿತ್ಯದಲ್ಲೂ ಇದೆ. ವಚನಕಾರರಲ್ಲಿ ಪಂಚಭೂತಗಳಲ್ಲಿ ಯಾವುದು ಯಾವ ವಿಷಯಗಳು ಅಥವಾ ತನ್ಮಾತ್ರೆಗಳಿ ಕಾರಣ ಎಂಬ ವಿಶದವಾದ ವಿಶ್ಲೇಷಣೆ ಇದೆ. ಉದಾಹರಣೆಗೆ ವಾಯುವಿನಿಂದ ಗಂಧ , ಸ್ಪರ್ಶ ಎಂಬ ಕೇವಲ ಎರಡರ ಜ್ಞಾನ ಮಾತ್ರ ದೊರಕಿದರೆ ಭೂಮಿಯಿಂದ ರೂಪ ರಸ ಗಂಧ, ಸ್ಪರ್ಶ, ಶಬ್ದ ಎಂಬ ಐದೂ ವಿಷಯಗಳ ಜ್ಞಾನದ ಮೂಲಕ ತನ್ನ ಅಸ್ತಿತ್ವವನ್ನು ಸಾರುತ್ತದೆ ಎಂಬ ವಿಶ್ಲೇಷಣೆ ವೈಜ್ಞಾನಿಕ ಅನ್ವೇಷಣೆಯ ಚಿಂತನೆಯ ಹಾದಿಯ ಲಕ್ಷಣವಾಗಿ ಕಾಣುತ್ತದೆ. ಇನ್ನು ಅಂತಃಕರಣ ಚತುಷ್ಟಯಗಳೆಂದು ವಚನಗಳು ಹೆಸರಿಸಿದ ಚಿತ್ತ ,ಬುದ್ಧಿ, ಮನಸ್ಸು , ಅಹಂಕಾರಗಳು ಕೂಡಾ ಮತ್ತೆ ಮತ್ತೆ ಪ್ರಸ್ತಾಪವಾಗಿವೆ. ಚಿಂತನೆಯ ಸಾಧನವನ್ನು ನಾಲ್ಕು ಅಂಗಗಳಾಗಿ ವಿಂಗಡಿಸಿರುವುದು ಮತ್ತೂ ಒಂದು ವಿಶೇಷ. ದೇಹದ ಈ ಎಲ್ಲ ಅಂಗ ಭಾಗಗಳನ್ನೂ ಧಾರ್ಮಿಕ ತತ್ವಗಳ ಎತ್ತರಕ್ಕೆ ಏರಿಸಲಾಗಿದೆ.‌ದೇಹದ ಭಾಗಗಳ ಜೊತೆಗೆ ಪಂಚಭೂತಗಳನ್ನೂ ಸೇರಿಸಿ ಮೇಲಿನ 24 ತತ್ವಗಳನ್ನೆಲ್ಲ ಒಟ್ಟಾಗಿ ಅಂಗ ತತ್ವಗಳು ಎಂದು ಕರೆಯಲಾಗಿದೆ.

ಹೀಗೆ ತಮ್ಮ ಕಾಯಕದ ಸಾಧನಗಳಾದ ದೇಹದ ಅಂಗ ಭಾಗಗಳನ್ನೆಲ್ಲ ಧಾರ್ಮಿಕ ತತ್ವಗಳನ್ನಾಗಿ ಪರಿಗಣಿಸಿದುದು ಮೇಲೆ ವಿವರಿಸಿದಂತೆ ದೇಹವೇ ದೇಗುಲ ಎಂದು ಪರಿಗಣಿಸಲು ಅಂಗದ ಮೇಲೆಯೇ ಲಿಂಗ ಧರಿಸಲು ಕಾರಣವಾಯಿತು. ಇದು ದೇಶಾದ್ಯಂತ ಕಾಣುವ ಅಂದಿನ ಬಹು ದೊಡ್ಡ ಕಟ್ಟಡಗಳಾದ ದೇವಾಲಯಗಳು, ಅಲ್ಲಿಯ ಪೂಜೆಗಳು,ಮಹಾ ಮಂಗಳಾರತಿ, ದಕ್ಷಿಣೆಗಳು, ದೇವಾಲಯಗಳನ್ನು ಕಟ್ಟುವುದಕ್ಕೆ ಅಪಾರ ಸಂಖ್ಯೆಯ ಕುಶಲಕರ್ಮಿಗಳ ದುಡಿಮೆ, ಬೃಹತ್ ವೆಚ್ಚ, ಪೂಜೆ ಇತ್ಯಾದಿಗಳಿಗೆ ದೇವಸ್ವಗಳೆಂಬ ಹೆಸರಿನಲ್ಲಿ ಹಲವು ಹಳ್ಳಿಗಳ ಭೂಮಿ ಇತ್ಯಾದಿ ಎಲ್ಲವುಗಳನ್ನು ಒಂದೇ ಬಾರಿಗೆ ನಿವಾರಿಸಿಕೊಳ್ಳಲು ಬುನಾದಿಯಾಯಿತು. ಇದೇ ಒಂದು ಮಹತ್ತರ ಬದಲಾವಣೆಗೆ ವಚನಕಾರರ ಕೊಡುಗೆ.
ಆದರೆ ಅದರ ಜೊತೆಗೆ ಈ ತತ್ವಗಳು ಸಾಮಾಜಿಕವಾಗಿ ತಂದ ಬದಲಾವಣೆ ಇದನ್ನೂ ಮೀರಿದ ಸಾಧನೆ.

ಮೇಲೆ ವಿವರಿಸಲಾದ ಅಂಗ ಭಾಗಗಳು ಇಲ್ಲದ ಮಾನವರುಂಟೇ ? ಕೆಲ ಅಂಗವಿಕಲರ ಹೊರತಾಗಿ. ಇವು ಎಲ್ಲ ಮಾನವರ ಮೂಲಭೂತ ಲಕ್ಷಣಗಳು. ಇವು ಧಾರ್ಮಿಕ ತತ್ವಗಳೆಂದು ಸ್ವೀಕರಿಸಿದ ಮೇಲೆ ಈ ಅಂಗ ಭಾಗಗಳನ್ನುಳ್ಳವರನ್ನು ಕೀಳು ಎಂದು ಪರಿಗಣಿಸಲು , ದೂರ ಸರಿ ಮುಟ್ಟಿಸಿಕೊಳ್ಳಬೇಡ ಎಂದು ಅಸ್ಪೃಶ್ಯತೆ ಆಚರಿಸಲು ಹೇಗೆ ಸಾಧ್ಯ ? ಮತ್ತು ಕಾಯಕವೇ ಕೈಲಾಸವೆಂದು ಪರಿಗಣಿಸಿದ ಮೇಲೆ ಕಾಯಕವನ್ನು ಕೈಗೊಳ್ಳುವ ಕುಶಲ ಕರ್ಮಿಗಳು ಮತ್ತು ಇತರನೇಕ ಕಾಯಕದವರನ್ನು ಕೀಳು ಜಾತಿಗಳೆಂದು ವೈದಿಕರು ಪರಿಗಣಿಸಿದ್ದನ್ನು ಮಾನ್ಯ ಮಾಡಲು ಸಾಧ್ಯವೇ ? ಹೀಗೆ ವಚನಕಾರರು ಜಾತಿ ವ್ಯವಸ್ಥೆಯನ್ನೇ ನಿರಾಕರಿಸಲು 24 ಅಂಗ ತತ್ವಗಳ ಪರಿಕಲ್ಪನೆ ಬಹು ದೊಡ್ಡ ತತ್ವಶಾಸ್ತ್ರೀಯ ಆಧಾರವನ್ನು ಒದಗಿಸಿತು.

ಅಂಗದ ಮೇಲೆ ಲಿಂಗವಿದ್ದವರೆಲ್ಲ ಒಂದೇ ಜಾತಿ, ಒಂದೇ ಕುಲ ಎಂದು ಪರಿಗಣಿಸಿದರು. ಉಂಬುವುದು , ಉಡುವುದರಲ್ಲಿ ಮಾತ್ರವಲ್ಲ ಹೆಣ್ಣು ಕೊಂಬುವುದು ಕೊಡುವುದರಲ್ಲಿಯೂ ಈ ಸಮಾನತೆಯನ್ನು ಸಾಧಿಸಬೇಕು. ಇಲ್ಲದಿದ್ದರೆ…. ಎಂದು ಈ ವಿಚಾರಗಳನ್ನು ಅಳವಡಿಸಿಕೊಳ್ಳಲು ಒಪ್ಪದವರನ್ನು ಹೀಗಳೆಯಲಾಯಿತು.

ಅದೇ ರೀತಿ ಸ್ತ್ರೀಯರಿಗೂ ಈ ಎಲ್ಲ ಅಂಗತತ್ವಗಳೂ ಸಮಾನ‌. ಕೆಲವೇ ವ್ಯತ್ಯಾಸ ಹೊರತುಪಡಿಸಿದರೆ . ಆದ್ದರಿಂದ ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥ ಎಂದು ಸ್ತ್ರೀ ಪುರುಷ ಸಮಾನತೆಯನ್ನು ಪ್ರತಿಪಾದಿಸಿದರು.

ಈ ದಿಸೆಯಲ್ಲಿ ಮುಂದೆ ಸಾಗಿ ಮುಟ್ಟು ತಟ್ಟು ತಾಗು ನಿರೋಧಗಳನ್ನು ಜಾರಿಗೆ ತಂದರು. ಯಾರನ್ನೇ ಆಗಲಿ ಮುಟ್ಟುವುದು ತಟ್ಟುವುದು ಬಾರದು ಎಂಬ ಮಾತೇ ಬಾರದು ಎಂದು ಪ್ರತಿಪಾದಿಸಿದರು. ಪಂಚ ಸೂತಕಗಳೆಂದು ಬಹುವಾಗಿ ಆಚರಿಸಲ್ಪಡುತ್ತಿದ್ದ ಜನನ ಸೂತಕ, ಮರಣ ಸೂತಕ, ಕುಲ ಸೂತಕಗಳನ್ನು ನಿಷೇಧಿಸಿದರು. ಇವುಗಳ ಭಾಗವಾಗಿ ಅಸ್ಪೃಶ್ಯತೆಯ ನಿವಾರಣೆ, ಶೂದ್ರರೂ ಕೂಡಾ ಕೆಲವೆಡೆಗಳಲ್ಲಿ ಪ್ರವೇಶಿಸಬಾರದು ಎಂಬ ಬೇಧ ತೊಲಗಿಸಲು ಪ್ರಯತ್ನಿಸಲಾಯಿತು. ಅದನ್ನು ಕಾರ್ಯಾಚರಣೆಗಿಳಿಸುವ ಸಲುವಾಗಿಯೇ ಮಧುವರಸನ ಮಗಳು ಕಕ್ಕಯ್ಯನ ಮಗನ ವಿವಾಹ ಏರ್ಪಡಿಸಿದ್ದು. ಇದು ಭಾರತದಲ್ಲಿ ಇಂದೂ ಕೂಡಾ ಅಪರೂಪವಾಗಿ ಕಾಣುವ ಪ್ರಸಂಗ ಮತ್ತು ಇಂದೂ ಕೂಡಾ ತಂದೆ,ತಾಯಿ ಸೋದರರು ಮನೆಯ ಮಗಳನ್ನೇ ಕೊಲ್ಲುವ ಕ್ರೌರ್ಯಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದನ್ನು ನೆನಪಿಸಿಕೊಂಡರೆ ಅಂದು ಈ ಯೋಚನೆ ಮತ್ತು ಕ್ರಿಯೆ ಎಂತಹ ಕ್ರಾಂತಿಕಾರಿ ದಿಟ್ಟತನದ್ದು ಎಂಬ ವಿಷಯ ಮನದಟ್ಟಾಗುತ್ತದೆ.

ಅಷ್ಟೇ ಅಲ್ಲ ಮಹಿಳೆಯರ ಮುಟ್ಟು ಎಂದು , ಆ ಕ್ಷಣದಿಂದಲೇ ಆರಂಭಿಸಿ ಮೂರೂ ದಿನಗಳಲ್ಲಿ ಅವರು ಮೈಲಿಗೆ ಎಂದು ಪರಿಗಣಿಸುವ ಅದ್ವಾನವನ್ನೂ ಈ ತತ್ವಗಳ ಬಲದಿಂದ ದೂರ ಇಟ್ಟರು. ಅದರ ಫಲವಾಗಿ ಸ್ತ್ರೀಯರೂ ಕೂಡಾ ಅಂಗದ ಮೇಲೆ ಲಿಂಗ ಧರಿಸಿ ಧಾರ್ಮಿಕ ಆಚರಣೆಗಳಲ್ಲಿ ಸಮಾನ ಹಕ್ಕನ್ನು ಪಡೆದುದು ಕೂಡಾ ಐತಿಹಾಸಿಕವೇ.

ದೇಹವನ್ನೇ ಮೈಲಿಗೆ ಎಂದು ಪರಿಗಣಿಸಿದ ವೈದಿಕ ಸಿದ್ಧಾಂತ ದೇಹದ ಭಾಗಗಳನ್ನೇ ಧಾರ್ಮಿಕ ತತ್ವಗಳನ್ನಾಗಿ ಪರಿಗಣಿಸಲು ಸಾಧ್ಯವೇ ಇರಲಿಲ್ಲ. ಅಲ್ಲಿಯವರೆಗಿನ ಅಪಾರ ವೈದಿಕ ಸಾಹಿತ್ಯದಲ್ಲಿ ಕಾಣುವುದಿಲ್ಲ. ಹಾಗೆಂದ ಮೇಲೆ ಈ ಅಂಗ ತತ್ವಗಳ ಪರಿಕಲ್ಪನೆ ವಚನಕಾರರಿಗೆ ಬಂದುದು ಹೇಗೆ ?

ಇಷ್ಟೊಂದು ತೀವ್ರತರವಾಗಿ ಅಲ್ಲದಿದ್ದರೂ ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಕಾಣುವ ಜಾತಿ ವಿರೋಧದ ಚಿಂತನೆಗಳಿಗೂ ವಚನಕಾರರ ಪರಿಕಲ್ಪನೆಗಳಿಗೂ ಸಂಬಂಧವಿದೆಯೇ ? ಕಾಶ್ಮೀರ ಶೈವ , ತಮಿಳುನಾಡಿನ ಶೈವ ಸಿದ್ಧಾಂತಗಳಲ್ಲಿಯೂ ಇವುಗಳ ಪ್ರಸ್ತಾಪವನ್ನು ಕಾಣುತ್ತೇವೆ.

ಅಂಗ ಭಾಗಗಳನ್ನು ತತ್ವಗಳಾಗಿ ತತ್ವಶಾಸ್ತ್ರೀಯ ಮುನ್ನೆಲೆಗೆ ತಂದುದರ ಮೂಲವೇನು ?
ಚರಕಸಂಹಿತೆಯಲ್ಲಿಯೂ ಈ ಅಂಗ ತತ್ವಗಳು, ಪಂಚವಿಂಶತಿ ತತ್ವಗಳ ವಿವರಣೆ ಇದೆಯಂತೆ. ಅದಕ್ಕೂ ವಚನಕಾರರ ಪರಿಕಲ್ಪನೆಗಳಿಗೂ ಇರುವ ಸಂಬಂಧವೇನು ? ಈ ಎರಡೂ ಒಂದೇ ಮೂಲದಿಂದ ಸ್ವೀಕರಿಸಲ್ಪಟ್ಟವೇ ? ಇವುಗಳ ನಡುವೆ ವ್ಯತ್ಯಾಸಗಳಿವೆಯೇ ?

ಈ ಎಲ್ಲ ವಿಚಾರಗಳು ಈ ಲೇಖನ ಮಾಲೆಯ ಮುಂದಿನ ಲೇಖನಗಳಲ್ಲಿ.

‍ಲೇಖಕರು avadhi

February 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: