ಈ VERGANGENHEITSAUFARBEITUNG ನಮ್ಮಲ್ಲಿ ಆಗಬೇಕು…

ಮ ಶ್ರೀ ಮುರಳಿ ಕೃಷ್ಣ

ನಮ್ಮ ಸಂಸದರ ಪೈಕಿ ಕೇರಳದ ತಿರುವನಂತಪುರದಿಂದ ಮೂರು ಬಾರಿ ಚುನಾಯಿತರಾಗಿರುವ ಶಶಿ ತರೂರ್‌ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಅಮರಿಕದ ಟಫ್ಟ್ಸ್‌ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ ಪಡೆದಿರುವ ಅವರು ವಿಶ್ವ ಸಂಸ್ಥೆಯ ಅಂಡರ್‌ ಸೆಕ್ರಟರಿ ಜನ್ರಲ್‌ ಕೂಡ ಆಗಿದ್ದರು.

ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಿಜೇತರಾಗಿರುವ ಅವರು ಸುಮಾರು ನಾಲ್ಕು ದಶಕಗಳಿಂದ ಇತಿಹಾಸ. ಸಂಸ್ಕೃತಿ, ರಾಜಕಾರಣ, ಸಮಾಜ, ಸಿನಿಮಾ, ವಿದೇಶಗಳ ಬಗೆಗಿನ ನಮ್ಮ ನೀತಿಗಳು, ಇತ್ಯಾದಿ ಹತ್ತು ಹಲವು ವಿಷಯಗಳ ಬಗೆಗೆ ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆಯೇ ಸೃಜನಶೀಲ ಸಾಹಿತ್ಯವನ್ನೂ ರಚಿಸಿದ್ದಾರೆ. ಖಂಡಿತ, ಈ ಬರಹ ಶಶಿ ತರೂರರ ವ್ಯಕ್ತಿ ಚಿತ್ರಣವನ್ನು ಹೊಂದಿಲ್ಲ. ಆದರೆ ಮೇಲೆ ಶೀರ್ಷಿಕೆಯಲ್ಲಿರುವ ಉದ್ದದ ಪದ ಶಶಿಯವರು ತಮ್ಮ ಮಾತುಗಳು ಮತ್ತು ಬರಹಗಳಲ್ಲಿ ಬಳಸುವ ಆಂಗ್ಲ ಭಾಷೆಯ ತೀರ ಉದ್ದುದದ ಪದಗಳನ್ನು (ತುಂಬ ವಿರಳವಾಗಿ ಬಳಸಲ್ಪಡುವ)/ ಆಲಿಸಿರುವ)ನೆನಪಿಸುತ್ತದೆ! ಇರಲಿ…

VERGANGENHEITSAUFARBEITUNG ಎನ್ನುವುದು ಜರ್ಮನ್‌ ಭಾಷೆಯ ಒಂದು ಪದ. ಅದರ ಅರ್ಥ: ಗತವನ್ನು ಬದಿಗಿಟ್ಟು ಮುನ್ನಡೆಯುವುದು ಎನ್ನಬಹುದು. ಆಂಗ್ಲ ಭಾಷೆಯಲ್ಲಿ ಈ ಪದಕ್ಕೆ coming to terms with the past ಅಥವಾ working off the past ಎಂಬ ಅರ್ಥಗಳಿವೆ. ಜರ್ಮನ್‌ ದೇಶದ ಇತಿಹಾಸದಲ್ಲಿ ನಾಝಿ ಪರ್ವ ಒಂದು ಕಪ್ಪು ಅಧ್ಯಾಯವೇ ಸರಿ. ನಾಝಿ ಅಟ್ಟಹಾಸದ ಆಡಳಿತವಿದ್ದಾಗ, ʼ ನಾವು-ಅವರು ʼ(ಆಂಗ್ಲ ಭಾಷೆಯಲ್ಲಿ ʼotheringʼ ಎನ್ನುತ್ತಾರೆ) ಪ್ರಕ್ರಿಯೆಯ ಮೂಲಕ ಸುಮಾರು 60 ಲಕ್ಷ ಯಹೂದಿಗಳನ್ನು (ಒಂದು ಅಂದಾಜಿನ ಅನ್ವಯ) ಮಾರಣಹೋಮ ಮಾಡಲಾಯಿತು. ಪೋಲ್ಯಾಂಡ್‌, ಬೆಲ್ಜಿಯಮ್‌, ಫ್ರಾನ್ಸ್‌, ನೆದರ್‌ಲ್ಯಾಂಡ್ಸ್, ನಾರ್ವೆ, ಡೆನ್‌ ಮಾರ್ಕ್‌, ಲಕ್ಸಮ್ಬರ್ಗ್‌, ಯುಗೊಸ್ಲವೀಯ, ಗ್ರೀಸ್‌ ದೇಶಗಳನ್ನು ಆಕ್ರಮಣ ಮಾಡಿ, ಜರ್ಮನಿ ಅವುಗಳನ್ನು ತನ್ನ ಸುಪರ್ದಿಗೆ ಒಳಪಡಿಸಿತು. ಈ ದೇಶಗಳಲ್ಲಿ ನಾಝಿ ಪಡೆಗಳು ಅನೇಕ ಅಮಾನವೀಯ ಪ್ರಹಾರಗಳನ್ನು ಮಾಡಿದವು.

ಎರಡನೇ ವಿಶ್ವ ಸಮರದಲ್ಲಿ ಜರ್ಮನಿ ಸೋತಿತು. ನಾಝಿ ಆಡಳಿತ ಕೊನೆಗೊಂಡ ತರುವಾಯ ಆ ದೇಶ ನಿಧಾನವಾಗಿ ಎಲ್ಲ ವಿಧಗಳಲ್ಲಿ ಪುನರ್ರಚಿಸಲು ಮುಂದಾಯಿತು. ನಾಝಿ ಕರಾಳ ಅವಧಿಯಲ್ಲಿ ಜರುಗಿದ ಅಕರಾಳ ವಿಕರಾಳ ದುರಂತಗಳಿಗೆ ಕ್ಷಮೆಯನ್ನು ಕೇಳಿತು. ಗಾಯಗಳು ವಾಸಿಯಾದರೂ ಕಲೆಗಳು ಉಳಿಯುತ್ತವೆ. ಅವು ಎಚ್ಚರಿಸುತ್ತಿರುತ್ತವೆ! ಜರ್ಮನಿಯಲ್ಲಿ ಹೀಗೆಯೇ ಆಯಿತು! ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ನವ-ನಾಝಿ, ಬಲಪಂಥೀಯ ಸಂಘಟನೆಗಳು ತಲೆ ಎತ್ತಿವೆ. ಉಗ್ರ ರಾಷ್ಟ್ರವಾದವನ್ನು ಪ್ರತಿಪಾದಿಸುತ್ತಿವೆ. ಪ್ರಭಾವವನ್ನೂ ಬೀರುತ್ತಿವೆ.

ನಿಜ, ನಮ್ಮ ದೇಶದಲ್ಲಿ ಜರ್ಮನಿಯಲ್ಲಿ ಜರುಗಿದ ಹೋಲೋಕಾಸ್ಟ್‌ನಂತಹ ಘಟನೆಗಳು ಜರುಗಿಲ್ಲ. ಆದರೆ ವಸಾಹತುಶಾಹಿ ಬ್ರಿಟೀಶ್‌ ಅಧಿಪತ್ಯದಲ್ಲಿ ಅತಿರೇಕಗಳು ಜರುಗಿದವು. 1947ರಲ್ಲಿ ವಿಭಜನೆಯಾದಾಗ, ದೊಡ್ಡ ಸಂಖ್ಯೆಯಲ್ಲಿ ಮಂದಿ ಕೋಮು ದಂಗೆಗಳಲ್ಲಿ ಹತರಾದರು ; ಅನೇಕ ಕುಟುಂಬಗಳು ಕಣ್ಣೀರ ಕಡಲಿನಲ್ಲಿ ಮುಳುಗಿದವು. ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ಹಲವು ಸ್ಥಳಗಳಲ್ಲಿ ಕೋಮು ವಿಧ್ವಂಸಗಳು ನಡೆದಿವೆ. ಜಾತಿಯ ಆಧಾರದ ಮೇಲೆ ಹಿಂಸೆ, ಕೊಲೆಗಳು ಸಂಭವಿಸಿವೆ.

ಇತ್ತೀಚಿನ ದಶಕಗಳಲ್ಲಿ ʼ ನಾವು – ಅವರು ʼ ಪ್ರತ್ಯೇಸುವಿಕೆ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಅಸಹಿಷ್ಣುತೆ ವೃದ್ಧಿಸುತ್ತಿದೆ. ನಾನಾ ತೆರನಾದ ಕಂದಕಗಳು ಸೃಷ್ಟಿಯಾಗುತ್ತಿವೆ. ಕಾರ್ಪೊರೇಟ್‌ಕರಣ- ರಾಜಕಾರಣ- ಕೋಮುವಾದ ಮೇಳೈಸಿ ಗಹಗಹಿಸುತ್ತಿವೆ. ಸಂವಿಧಾನವನ್ನೇ ಬುಡಮೇಲು ಮಾಡುವ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಯತ್ನಗಳಾಗುತ್ತಿವೆ.

ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ, ಆಂತರಿಕ ನಕಾರಾತ್ಮಕ ಕಾರಣಗಳಿಂದ, ಅಂತರರಾಷ್ಟ್ರೀಯ ವಲಯದಲ್ಲಿ ಭಾರತ ತನ್ನ ಹೆಸರನ್ನು ಕೆಡೆಸಿಕೊಂಡಿದೆ. ಅನೇಕ ಸೂಚ್ಯಾಂಕಗಳಲ್ಲಿ ನಮ್ಮ ದೇಶದ ಸ್ಥಾನ ಕುಸಿದಿದೆ. ಜನರ ಪ್ರಜ್ಞಾವಲಯದ ಮೇಲೆ ದಾಳಿಗಳಾಗುತ್ತಿವೆ. ಪುರೋಗಾಮಿ ಶಕ್ತಿಗಳು ಒಗ್ಗೂಡಿ ಸಶಕ್ತ ಪ್ರತಿರೋಧವನ್ನು ಒಡ್ಡಬೇಕು. ಆಗ ಮಾತ್ರ ನಮ್ಮ ದೇಶ ನೆಮ್ಮದಿಯ ನಾಳೆಗಳನ್ನು ಕಾಣಬಹುದು.

ಆದುದರಿಂದ ನಮ್ಮಲ್ಲಿ VERGANGENHEITSAUFARBEITUNG ಆಗಬೇಕು !!

‍ಲೇಖಕರು avadhi

February 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: