ಸದಾಶಿವ್ ಸೊರಟೂರು ಕಥಾ ಅಂಕಣ- ರಾತ್ರಿಯ ಹುಡುಗಿ, ಹಗಲಿನ ಹುಡುಗ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

46

‘ತಮಸೋಮ ಜ್ಯೋತಿರ್ಗಮಯ…

ಇದೊಂದು ಅರ್ಧ ಸತ್ಯದ ಮಾತು

ಬೆಳಕಿನಿಂದ ಕತ್ತಲೆಗೂ ನಡೆಯಬೇಕು

ಆಗಲೇ ಸತ್ಯವು ಪೂರ್ಣವಾಗುವುದು; 

ಬದುಕೂ ಪೂರ್ಣವಾಗುವುದು…! 

*** 

‘ನಿನಗೂ ಹೀಗೆ ಆಗ್ತಾದಾ…?’ ಕಳವಳದಿಂದ ನಿಶೆ ತನ್ನ ಗೆಳತಿಯನ್ನು ಕೇಳಿದಳು. ಹೋಟೆಲ್‌ನಲ್ಲಿನ ಸದ್ದಿನ ನಡುವೆಯೂ ಇವಳ ಮಾತು ಸ್ಪಷ್ಟವಿತ್ತು. ಆ ಮಾತಿನಲ್ಲಿ ʻಹೀಗೆ ಆಗುತ್ತಿದ್ದರ…ʼ ಬಗ್ಗೆ ಕಳವಳವಿತ್ತು.  ಹೆದರಿಕೊಂಡಿದ್ದಳು ಹುಡುಗಿ. 

ʻಹೀಗೆ… ಅಂದರೆ ಹೇಗೆ?ʼ 

ನಿಶೆ ಕಾಫಿಯ ಶಾಪಿನಲ್ಲಿ ಗೆಳತಿಯನ್ನು ಎದುರಿಗೆ ಕೂರಿಸಿಕೊಂಡು ಹೇಳಿದ್ದಿಷ್ಟು, ʻನನಗೆ ಹಗಲು ತೀರಾ ಮುಜುಗರ ಅನಿಸುತ್ತೆ ಕಣೇ. ಹಾಕಿದ ಬಟ್ಟೆ ಮೈ ಮೇಲೆ ಇಲ್ಲವೇನೊ ಅನ್ನುವಂತೆ ಫೀಲ್. ನಾನು ಪೂರ್ಣ ಬೆತ್ತಲೆ ಆಗಿದೀನೇನೊ ಅನಿಸುತ್ತೆ. ಎಲ್ಲರೂ ನನ್ನ ದೇಹವನ್ನು ನೋಡ್ತಾ ಇದಾರೆ. ಅವರ ಮುಂದೆ ನಾನು ಬಟ್ಟೆ ತೊಡದೆ ಹೀಗೆ ಅಲೆಯುತ್ತಿದ್ದೇನೆ ಅನಿಸುತ್ತೆ. ಈ ಜನರು ಸುಮ್ಮನೆ ನನ್ನ ಮುಖ ನೋಡುತ್ತಾ ನನ್ನ ಇಡೀ ದೇಹದ ತುಂಬಾ ಕಣ್ಣು ಹಾಯಿಸುತ್ತಾರೆ. ಕಣ್ಣಲ್ಲೇ  ಭೋಗಿಸುವಂತೆ ನೋಡ್ತಾರೆ. ಜನ ಸರಿ ಇಲ್ಲವೋ…? ಅಥವಾ ಈ ಹಗಲು ಅನ್ನೋದು ಸರಿ ಇಲ್ಲವೋ? ಗೊತ್ತಿಲ್ಲ.‌ ಮನೆಯಿಂದ ನನಗೆ ಆಚೆ ಹೋಗಲಿಕ್ಕೆ ಮುಜುಗರ. ಹಗಲು ನನ್ನ ಪಾಲಿಗೆ ಇಷ್ಟೊಂದು ನಿಕೃಷ್ಟವಾಗಿ ಬಿಡ್ತಾ…? ದೇಹ ಬೆತ್ತಲೆಯಷ್ಟೆ ಅಲ್ಲ ಮನಸು ಬೆತ್ತಲಾಗುತ್ತದೆ‌ ಅನಿಸುತ್ತೆ. ನನ್ನೊಳಗಿನದ್ದೆಲ್ಲಾ ಇವರಿಗೆ ಕಾಣಿಸುತ್ತಿದೆ ಎನ್ನುವ ಭಾವ…‌

ಆದರೆ ರಾತ್ರಿಯಾಗುತ್ತಲೇ… ಈ ಜನ ಎಷ್ಟೊಂದು ಒಳ್ಳೆಯವರೆನಿಸಿ ಬಿಡುತ್ತಾರೆ. ಆ ಒಳ್ಳೆಯತನ ರಾತ್ರಿಯದೋ?, ಜನರದ್ದೋ? ನನಗೆ ಅರ್ಥವೇ ಆಗಿಲ್ಲ. ಎಲ್ಲರೂ ಸಭ್ಯರಂತೆ ಕಾಣುತ್ತಾರೆ. ನಾನು ಅರೆಬರೆ ಬಟ್ಟೆ ತೊಟ್ಟು ಆಚೆ ನಡೆದು ಹೋದರೂ ಜನ ನನ್ನ ನೋಡುವುದಿಲ್ಲ. ಜನರ ಕಣ್ಣಿಗೆ ನಾನು ಕಾಣಿಸುವುದೇ ಇಲ್ಲವಾ? ಅನಿಸುಬಿಡುತ್ತೆ. ಒಮ್ಮೊಮ್ಮೆ ನಾನೇ ಹೋಗಿ ಜನರನ್ನು ಮಾತಾಡ್ಸತ್ತೀನಿ. ಎಷ್ಟೊಂದು ಚೆನ್ನಾಗಿ ಮಾತಾಡುತ್ತಾರೆ. ಅವರ ಕಣ್ಣಲ್ಲಿ ನಿಷ್ಕಲ್ಮಷ ಕಾಳಜಿ ಕಾಣಿಸುತ್ತೆ. ಅಕ್ಕರೆ ಕಾಣಿಸುತ್ತೆ…ʼ. 

ʻನೋಡೇ ಬಿಡುವ ಅಂತ ಒಂದು ದಿನ ನಾನು ಪೂರ್ತಿ ಬಟ್ಟೆ ಕಳಚಿ ಬೆತ್ತಲೆಯಾಗಿಯೇ ಆಚೆ ಬಂದು ಬಿಟ್ಟೆ.‌ ಈ ಕತ್ತಲು ತನ್ನ ಸೆರಗಿನಲ್ಲಿ ನನ್ನ ಮೈ ಮುಚ್ಚಿದೆಯೇನೊ ಅನಿಸುತ್ತಿತ್ತು. ನಾನು ಬೆತ್ತಲೆಯಾಗಿ ಆಚೆ ಓಡಾಡುತ್ತಿದ್ದರೂ ಜನ ನನ್ನ ಕಡೆ ವಿಚಿತ್ರವಾಗಿ ನೋಡಲಿಲ್ಲ. ಎಂದಿನಂತೆ ಮಾತಾಡಿದರು. ಅವರ ದೃಷ್ಟಿ ನನ್ನ ಮೈಮೇಲೆ ಹರಿಯುತ್ತಿರಲಿಲ್ಲ. ಅಥವಾ ಅಂಥಹ ದೃಷ್ಟಿಯಿರುವವರನ್ನು ಈ ಕತ್ತಲು ನನ್ನಿಂದ ದೂರವಿಟ್ಟಿತಾ? ನನ್ನ ಮೇಲಿನ ಕಾಳಜಿಗಾಗಿ ಹಾಗೆ ಮಾಡಿತಾ? ಕತ್ತಲು ನನ್ನ ಹಿಂದೆಯೇ ನನ್ನ ಕಾವಲಿಗೆ ಬಂದಿದೆ ಅನಿಸುತ್ತಿತ್ತು. ಈ ಕಪ್ಪು ಕತ್ತಲೆಗೆ ಏನಾಗಿದೆ? ಆ ಪ್ರಖರ ಹಗಲಿಗೆ ಏನಾಗಿದೆ?ʼ 

ʻನನಗೆ ತುಂಬಾ ಭಯ ಅನಿಸ್ತಿದೆ ಕಣೇ. ಎಲ್ಲರಿಗೂ ಹೀಗೆ ಆಗ್ತದಾ? ನನಗೆ ಮಾತ್ರವಾ? ನಿನಗೂ ಆಗ್ತಿದೀಯಾ? ಏನ್ ಮಾಡ್ಲಿ ನಾನು? ಇದೇ ತೊಳಲಾಟದಲ್ಲಿ ನಾನು ಹೆದರಿ ಸತ್ತೇ ಹೋಗಿಬಿಡ್ತೀನಾ?ʼ ಅಂತ ತುಂಬಾ ಸಂಕಟದಲ್ಲಿ ಹೇಳುತ್ತಾ ತನ್ನ ಗೆಳತಿಯ ಮುಖ ನೋಡಿದಳು. 

ಅವಳ ಗೆಳತಿಗೆ  ನಿಶೆಯ ಈ ಮಾತು ಯಾವುದೋ ಹುಚ್ಚತನದ ಪರಮಾವಧಿ ಅನಿಸತೊಡಗಿತು. ಯಾವುದೋ ವೆಬ್ಸಿರೀಸ್‍ನ ಕಥೆ ಹೇಳ್ತಿರಬಹುದು ಅನಿಸಿತು… 

ಆದರೂ ಅವಳು ಏನಾದ್ರೂ ಹೇಳಲೇಬೇಕಿತ್ತು ನಿಶೆಗೆ. 

ʻನೋಡೇ ಇದೆಲ್ಲಾ ನಿಂಗೆ ಭ್ರಮೆ. ನೀನು ಹೇಳಿದ ಹಾಗೆ ಆಗೋಕೆ ಸಾಧ್ಯನಾ? ಯಾವುದೋ ಕಥೆ ಓದಿ, ಸಿನಿಮಾ ನೋಡಿ ನೀನು ಹೀಗೆ ಆಡ್ತಿದೀಯ… ಒಂದು ಕೆಲ್ಸ ಮಾಡು. ಒಂದೆರಡು ಬಾರಿ ಡಾಕ್ಟರ್ ಹತ್ತಿರ ಕೌನ್ಸಿಲಿಂಗ್‌ಗೆ ಹೋಗಿ ಬಾ‌… ಅಮೇಲೆ ಎಲ್ಲಾ ಸರಿ ಹೋಗುತ್ತೆ…ʼ ಅಂತ ಅರ್ಧ ಗಂಭೀರತೆಯಲ್ಲಿ, ಅರ್ಧ ಉಡಾಫೆಯಲ್ಲಿ ಹೇಳಿದಳು.‌ 

ಇವಳಿಗೆ ಇನ್ನೂ ಹೇಳಿಯೂ ಪ್ರಯೋಜನ ಇಲ್ಲ ಎಂಬುದು ಗೊತ್ತಾಗಿ ನಿಶೆ ಸುಮ್ಮನಾದಳು… 

ಇಬ್ಬರೂ ಕಾಫಿಗೆ ಆರ್ಡರ್ ಮಾಡಲು ಹೋಟೆಲ್ ಮಾಣಿಯನ್ನು ಕರೆದರು. ಬಂದ ಹುಡುಗ ನಿಶೆಯನ್ನೇ ನೋಡತೊಡಗಿದ. ಇಡೀ ದೇಹವನ್ನು ನುಂಗುವಂತೆ ನೋಡುತ್ತಿದ್ದ. ತನ್ನ ಬೆತ್ತಲೆಯನ್ನು ಮನಸಿನಲ್ಲೇ ಸವಿಯುತ್ತಿರುವವನಂತೆ ಭಾಸವಾಯಿತು ಅವಳಿಗೆ. ಅವನ ಕಣ್ಣಲ್ಲಿ ಆಸೆ ಸೋರುತ್ತಿತ್ತು… 

ʻನೋಡು ನೋಡು ಅವನು ಹೇಗೆ ನೋಡ್ತಾ ಇದಾನೆ. ಬಹುಶಃ ನನ್ನ ಬೆತ್ತಲೆ ದೇಹ ಅವನಿಗೆ ಕಾಣಿಸುತ್ತಿದೆ. ಅದಕ್ಕೆ ಹಾಗೆ ಮಾಡ್ತಾ ಇದಾನೆ…ʼ ಅನ್ನಬೇಕು ಅನಿಸಿತು ನಿಶೆಗೆ. ಇವಳು ನಂಬಲ್ಲ… ಇವಳಲ್ಲ ಯಾವ ಜನರೂ ತನ್ನ ಮಾತು ನಂಬಲ್ಲ ಅನ್ನೋದು ಅವಳಿಗೆ ಈಗಾಗಲೇ ಗೊತ್ತಾಗಿತ್ತು.  

ಕಾಫಿಡೇಯಿಂದ ಹೊರಟವಳಿಗೆ ಮನೆ ಸೇರುವುದರೊಳಗೆ ಸಾಕಾಗಿ ಹೋಯ್ತು.‌ ಈ ಬೆಳಕು ಒಂದು ಶಕ್ತಿ ಅಂತಾರೆ. ಆದರೆ ಇಲ್ಲಿ ಈ ಬೆಳಕೇ ಎಲ್ಲವನ್ನೂ ಬಿಚ್ಚಿ ತೋರಿಸಿ, ಬೆತ್ತಲೆ ಮಾಡಿ ಅವಮಾನಿಸುತ್ತದೆ. ಬೆಳಕೇ ಇರದಂಥಹ, ಬರೀ ಕತ್ತಲೆ ಇರುವ ಲೋಕವಿದ್ದರೆ ಅಲ್ಲಿಗೆ ಹೋಗಿಬಿಡಬೇಕು ಅನ್ನುವ ಯೋಚನೆ ಬಂತು ಅವಳಿಗೆ…  

ಇಬ್ಬರೂ ಎದ್ದು ತಮ್ಮ ತಮ್ಮ ಹಾದಿ ಹಿಡಿದು ಕದಲಿದರು.‌ ಮನೆ ಕಡೆ ಹೊರಟ ನಿಶೆ ಒಮ್ಮೆ ಕತ್ತು ಎತ್ತಿ ಜನರನ್ನು ನೋಡಿದಳು. ರಸ್ತೆಯಲ್ಲಿರುವ ಅಷ್ಟೂ ಜನ ಅವಳನ್ನು ನುಂಗುವಂತೆ, ತಿನ್ನುವಂತೆ, ಭೋಗಿಸುವಂತೆ, ಆಸೆ ಕಣ್ಣುಗಳಿಂದ ನೋಡುತ್ತಿರುವುದು ಅವಳಿಗೆ ಕಾಣಿಸುತ್ತಿತ್ತು… 

*** 

ಹೋಗಿ ಬೇಸರದಲ್ಲಿ ಮಲಗಿದವಳಿಗೆ ಎಚ್ಚರವಾದಾಗ ರಾತ್ರಿ ಹತ್ತು ಗಂಟೆ ಮೀರಿತ್ತು. ದಡಬಡ ಎದ್ದು ಕೂತಳು. ಅಡುಗೆಮನೆಯಲ್ಲಿ ಏನೊ ಒಂದಷ್ಟು ಹಾಕಿಕೊಂಡು ತಿಂದಳು. ಮೈ ಮನಸು ತುಂಬಾ ಹಗುರು ಅನಿಸುತ್ತಿತ್ತು. ತುಂಬಾ ಹಿತವಾದ ವಾತಾವರಣ. ಬಯಸಿದ ಇನಿಯ ಬಂದು ತಬ್ಬಿದಂತಹ ಭಾವ.‌ ಯಾವಾಗಿನಿಂದ ಹಗಲು ಅವಳನ್ನು ಬೆತ್ತಲೆಗೊಳಿಸಿ ಅವಮಾನಿಸತೊಡಗಿತೋ ಅಂದಿನಿಂದಲೇ  ಕತ್ತಲೆ ಹೀಗೆ ಅವಳಿಗೆ ಮುದ ಕೊಡತೊಡಗಿತ್ತು. ಇದು ಹಗಲು ರಾತ್ರಿಗಳು ತನ್ನ ಮೇಲೆ ಹೂಡುತ್ತಿರುವ ಪ್ರಯೋಗಗಳಾ? ಸಾಧಿಸುತ್ತಿರುವ ಜಿದ್ದಾ? ಹಗಲು ರಾತ್ರಿಗಳು ತಮ್ಮ ತಮ್ಮ ನಡುವೆ ಮಾಡಿಕೊಂಡ ಜಗಳದ ಪರಿಣಾಮವಾ? ಅವಳಿಗೆ ಏನೊಂದು ಅರ್ಥವಾಗುತ್ತಿರಲಿಲ್ಲ… 

ಊಟ ಮುಗಿಸಿ ಹೊರಗೆ ಬಂದಳು. ಹಗಲು ತಾಯಿಯಂತೆ ಹಿತವಾಗಿತ್ತು. ಕತ್ತಲೆಯ ಕೈಗಳು ಅವಳನ್ನು ಹಿಡಿದು ‘ಬಾ…’ ಎಂದು ಕರೆದಂತಾಯ್ತು.‌ ನೀನು ನೋಡದ ಕತ್ತಲು ಇನ್ನೂ ತುಂಬಾ ಇದೆ ಅಂದಂತಾಯ್ತು. ಕತ್ತಲು ಕರೆದಂತೆ ಅದರ ಹಿಂದೆ ಹೊರಟು ಬಿಟ್ಟಳು. ಕತ್ತಲೆಯನ್ನು ಸವಿಯಲು ಹೊರಟ ಯಕ್ಷಿಣಿಯಂತೆ ಕಾಣಿಸುತ್ತಿದ್ದಳು. 

ಯಾರೋ ಅಳುತ್ತಿದ್ದರು. ಆದರೆ ಕತ್ತಲೆ ಆ ಅಳುವಿನ ಗುರುತನ್ನು ಕೆನ್ನೆಯ ಮೇಲೆ ಒರೆಸಿ ಹಾಕಿತ್ತು. ರಸ್ತೆಯ ಬದಿಯಲ್ಲಿ ಯಾರದೋ ಮನೆಯಿಂದ ಹೊರಬಂದ ಎರಡು ಪುಟ್ಟ ಹಣತೆಗಳು ರಾತ್ರಿಯ ಕರುಣೆಯನ್ನು ಹಾಡಿ ಹೊಗಳುತ್ತಿದ್ದವು. ಮನೆಮನೆಗಳಿಂದ ಉನ್ಮಾದದ ಆರ್ತನಾದ ಕೇಳಿಸುತ್ತಿತ್ತು. ನೊಂದ, ಗಾಯಗೊಂಡ ಜನರಿಗೆ ಈ ರಾತ್ರಿಯು ಮದ್ದು ಅರೆದು ಹಚ್ಚುತ್ತಿತ್ತು.‌ ಮತ್ತೊಂದು ಹಗಲಿಗೆ, ಮತ್ತೊಂದು ಗಾಯಕೆ ಅವರನ್ನು ತಯಾರಿಗೊಳಿಸುತ್ತಿತ್ತು. ಹಸಿವಿಲ್ಲದ ಬೀದಿಯಲ್ಲಿ ಮಲಗಿದವರಿಗೂ ನಿದ್ದೆಯನ್ನು ಕೊಟ್ಟು ಸಲಹುತ್ತಿತ್ತು. ಮನೆ ಬಿಟ್ಟು ಬಂದವರನ್ನು ಕೈಹಿಡಿದು ಒಂದು ತೀರ ಸೇರಿಸುತ್ತಿತ್ತು. ಹಗಲು ಮಾಡಿದ ಕಲೆಗಳನ್ನು ತನ್ನ ಬೆಳದಿಂಗಳಲ್ಲಿ ತೊಳೆದು ತೊಳೆದು ಹಾಕಿ ಒಣಗಿಸುತ್ತಿತ್ತು, ಅಳುವ ಮಗುವಿಗೆ ಗಿಲಕಿ, ಆಸೆಪಟ್ಟವನಿಗೆ ಒಂದು ಕನಸು, ದೂರದಿಂದ ಬರುವ ದಿಕ್ಕುತಪ್ಪಿದವರಿಗೆ ನರ ತುಂಬುವ ಸುಖಕ್ಕೊಂದು ಮಾಧ್ಯಮವಾಗಿ  ಅಲೆಯುತ್ತಿತ್ತು.. 

ಇದೆಲ್ಲವನ್ನೂ ನೋಡಿದ ನಿಶೆಯ ಹೃದಯ ತುಂಬಿಬಂತು. ʻಕತ್ತಲಿಂದ ಹೊರಟು ಬೆಳಕು ಸೇರುʼ ಎನ್ನುವ ನೀತಿ ಹೇಳುವವರು ಎಂಥ ಹುಚ್ಚರು. ಕತ್ತಲು ಈ ಪರಿ ಪೊರೆಯುವಾಗ ಆ ಸೋಗಲಾಡಿ ಬೆಳಕೇಕೆ? ಅದು ಪೊರೆದದ್ದಕ್ಕಿಂತ ಇರಿದದ್ದೇ ಹೆಚ್ಚು. ಮುಚ್ಚಿದ್ದಕ್ಕಿಂತ ತೆರೆದಿಟ್ಟದ್ದೇ ಹೆಚ್ಚು, ಕೆಟ್ಟದ್ದೆಲ್ಲವನ್ನು ತೋರಿಸಿ ಒಳ್ಳೆಯವರು ಕೆಟ್ಟವರಾಗಲು ಕುಮ್ಮಕ್ಕು ನೀಡಿದ್ದು ಹೆಚ್ಚು. ಹಗಲಿಗೆ ಧಿಮಾಕು, ಕತ್ತಲೆಯ ಬಗ್ಗೆ ಅಸಡ್ಡೆ. ತಾನು ಹುಟ್ಟಿದ್ದು ಕತ್ತಲೆಯ ಗರ್ಭದಲ್ಲಿ, ತನ್ನ ತಾಯಿ ಕತ್ತಲೆ ಎಂಬುದರ ಅರಿವಾದರೂ ಇರಬೇಕಿತ್ತು ಅದಕ್ಕೆ, ಕತ್ತಲೆಯೆಂದರೆ ಮತ್ತೇನು ಅಲ್ಲ, ಎಳೆ ಬೆಳಕನ್ನು ಹೊಟ್ಟೆಯಲ್ಲಿಟ್ಟುಕೊಂಡ ತುಂಬು ಗರ್ಭಿಣಿ… ಎಂದುಕೊಂಡಳು.‌..‌

ಹಗಲಿನಿಂದ ಪಾರಾಗುವುದು ಹೇಗೆ? ಸದಾ ರಾತ್ರಿಯ ತೊಡೆಯ ಮೇಲೆ ಮಲಗಿಯೇ ಇರುವುದ್ಹೇಗೆ? ಅಂತ ಯೋಚಿಸತೊಡಗಿದಳು..‌.

ದೂರದಲ್ಲಿ ಏನೋ ಸದ್ದು ಕೇಳಿಸಿತು…

ಓಹ್ ಅದೊಂದು ನರಳುವ ಸದ್ದು… 

ನಿಶೆ ಅತ್ತ ಕಡೆ ನಡೆದಳು… ಒಬ್ಬ ತನ್ನದೇ ವಯಸ್ಸಿನ ತರುಣ ಸೋತವನಂತೆ ಬಿದ್ದುಕೊಂಡಿದ್ದ. ಸಣ್ಣ ನರಳಿಕೆ ಇತ್ತು… 

ಅವನ ಬಳಿ ಹೋಗಿ ನಿಂತಳು. ಕರೆದಳು… ಏನಾಯ್ತು ಎಂದಳು. ಯಾಕೆ ನರಳಿಕೆ ಎಂದಳು. ಓಡಿ ಹೋಗಿ ನೀರು ತಂದು ಕುಡಿಸಿದಳು…‌

ಅವನು ಸಾವರಿಸಿಕೊಂಡು ಕೂತ ಮೇಲೆ ಕೇಳಿದಳು. ʻಏನಾಯ್ತು ನಿಂಗೆ… ತಾಯಿಯಂತೆ ಪೊರೆಯುವ ಕತ್ತಲು ಇರುವಾಗ ಹೀಗೆ ನರಳುವಂತದ್ದು ಏನಾಗಿದೆ?ʼ ಎಂದು  ಕೇಳಿದಳು… 

ತನ್ನೆಲ್ಲಾ ಕಸುವನ್ನು ಒಟ್ಟಿಗೂಡಿಸಿಕೊಂಡು ಹೇಳಿದ, ʻಹೌದು ತಾಯಿಯಂತೆ ಇರಬಹುದು. ತಂದೆಯಂತೆ ದುಡಿಯುವ ಹಗಲೇ ಹೊರಟು ಹೋಗಿರುವಾಗ ತಿನ್ನಲು ಏನು ಸಿಕ್ಕೀತು? ಬರೀ ಕಾಳಜಿಯಿಂದ ಹೊಟ್ಟೆ ತುಂಬುವುದಿಲ್ಲ, ಅನ್ನ ಬೇಕು… ಮತ್ತು ಈ ರಾತ್ರಿಯನ್ನೇ ಹೊದ್ದುಕೊಂಡು ಮಲಗಲು ಕೂಡ ಒಂದು ಮನೆಬೇಕು… ಅನ್ನ ಮತ್ತು ಮನೆ ಇರುವವರಿಗೆ ರಾತ್ರಿ ತುಂಬಾ ಹಿತಯೆನಿಸುತ್ತೆ… ಸುಖ ಎನಿಸುತ್ತೆ… ರುಚಿ ಕೂಡ ಅನಿಸುತ್ತೆ… 

ಹಗಲಿನಲ್ಲಿ ಜನರ ಮಧ್ಯೆ ನಡೆದಾಡುವಾಗ ನನಗೊಂದು ಗೂಡು ಇಲ್ಲ ಅನ್ನುವ ನೆನಪೇ ಇರುವುದಿಲ್ಲ… ಅಲ್ಲಿ ದುಡಿದು ಅಲ್ಲೇ ಉಣ್ಣುವಾಗ ತಾನೊಬ್ಬ ನಿರ್ಗತಿಕ ಅನಿಸುವುದಿಲ್ಲ. ಹಗಲೊಂದು ತನ್ನ ಸಂತೆ ಮಗಿಸಿ ಹೊರಟು ಹೋದಾಗ… ನಾನು ಒಂಟಿಯಾಗಿ ಬಿಡ್ತೀನಿ.‌ ಅನ್ನವೂ ಇಲ್ಲ, ಮನೆಯೂ ಇಲ್ಲ… 

ರಾತ್ರಿಯೆಂಬುದು ಇಷ್ಟೊಂದು ನಿಕೃಷ್ಟವಾಗಬಾರದು.‌ ಕರುಣಾಹೀನವಾಗಬಾರದು. ಹಗಲಿನ‌ ಗಾಯಗಳನ್ನು ಮತ್ತಷ್ಟು ಕೆದುಕಬಾರದು. ರಸ್ತೆಯಲ್ಲಿ ನಡೆಯುವಾಗ ಯಾರದೋ ಮನೆಯಿಂದ ಬರುವ ರತಿಕ್ರೀಡೆಯ ಸದ್ದು ಒಂಟಿಗರಿಗೆ ಹೇಗೆ ಚುಚ್ಚುತ್ತಾ ಗೊತ್ತಾ…? ನನ್ನನ್ನು ನೋಡಿ ಈ ಕತ್ತಲು ಗಹಗಹಿಸಿ ನಗುತ್ತೆ. ನಿನ್ನ ಯೋಗ್ಯತೆಗೆ ಒಂದು ಸುಖ ಸಿಗಲಿಲ್ಲ ನೋಡು ಅಂತ ಅಣಕಿಸುತ್ತೆ’ ಎಂದು ಬಿಟ್ಟ. 

ಇವಳಿಗೆ ತಲೆ ತಿರುಗಿದಂತಾಯ್ತು. 

ಹಗಲು ಎಂಬುದು ಯಾವುದೋ ಜನ್ಮದ ವೈರಿ ಎಂಬಂತೆ ತನ್ನನ್ನು ಕಾಡುವಾಗ, ಈ ರಾತ್ರಿ ಇಷ್ಟೊಂದು ಆಪ್ತವಾಗಿ ಪೊರೆಯುವಾಗ… ಇವನಿಗೇಕೆ ಹೀಗೆ? 

ಹಗಲು ತನಗೆ ಕೊಟ್ಟ ಕಾಟಗಳನ್ನೆಲ್ಲಾ ಹೇಳಿಬಿಟ್ಟಳು. ರಾತ್ರಿಯೆಂಬುದು ಎಷ್ಟು ಆಪ್ತವಾಗಿದೆ ಎಂತಲೂ ಹೇಳಿದಳು. ಅವನು ತೀರಾ ಸುಸ್ತಿನಲ್ಲಿದ್ದ.‌ ಕೇಳಿಸಿಕೊಳ್ಳಲು ಕಷ್ಟವಾಗುತ್ತಿದ್ದರೂ ಅವಳ ಬೆರಗಿನ‌ ಮಾತಿಗೆ ಕಿವಿಯಾದ… 

ಅವಳ ಮಾತುಗಳಿಂದ ಅವನಿಗೆ ಆಶ್ಚರ್ಯವಾಯಿತು… 

ʻಇಲ್ಲೆ ಹತ್ತಿರ ಮನೆ ಇದೆ… ಬನ್ನಿ. ಊಟ ಮಾಡಿ. ಹಸಿದಿದ್ದೀರಿ. ಮಲಗಲು ಜಾಗವಿದೆ; ನೀವು ಮಲಗಬಹುದುʼ ಎಂದು ಕರೆದಳು…‌

ಅವನಿಗೆ ಮತ್ತಷ್ಟು ಆಶ್ಚರ್ಯವಾಯಿತು. 

ಈ ಕತ್ತಲೆ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುತ್ತಿರುವಾಗ ಕತ್ತಲೆಯ ಮಗಳಂತೆ ಬಂದಿರುವ, ಕತ್ತಲೆಯೆಂದರೆ ಪ್ರಾಣವಾಗಿರುವ ಇವಳು ಹೇಗೆ ಇಷ್ಟೊಂದು ಒಳ್ಳೆಯವಳಾಗಲು ಸಾಧ್ಯ? 

ಊಟ ಬೇಡವೆನ್ನಲಾಗಲಿಲ್ಲ… ಬೇಡವೆಂದರೆ ಆ ಹಸಿವನ್ನು ಅವನು ತಡೆದುಕೊಳ್ಳುವುದಾದರೂ ಹೇಗೆ ಸಾಧ್ಯವಿತ್ತು…?

ಎದ್ದು ಅವಳ ಹಿಂದೆ ಹೊರಟ. ಇವಳು ಅವನನ್ನು ಮನೆಗೆ ಕರೆದುಕೊಂಡು ಬಂದು ಆದರಿಸಿದಳು… ಊಟ ಬಡಿಸಿ, ಅವನ ಪಕ್ಕವೇ ಕೂತು ಮಾತಾದಳು. ಅವನು ಅದೆಷ್ಟೋ ದಿನದ ಹಸಿವು ಎಂಬಂತೆ ಊಟ ಮಾಡಿದ.‌ ಊಟ ಮುಗಿದ ಮೇಲೆ ಸಮಾಧಾನದ ಉಸಿರು ಬಿಟ್ಟ…‌

ಮತ್ತೆ ಅವಳು ಹೇಳಿದಳು, ʻಇಲ್ಲೇ ಮಲಗಿಬಿಡಿ… ನಿಮಗೆ ಮಲಗಲು ಜಾಗವಾದರೂ ಎಲ್ಲಿದೆ? ಇದನ್ನು ನಿಮ್ಮ ಮನೆ ಅಂತಾನೆ ಅನ್ಕೊಳ್ಳಿ…ʼ ಅವಳ ದನಿಯಲ್ಲಿ ಕಾಳಜಿಯಿತ್ತು.‌

ಅವನು ಸುಮ್ಮನೆ ಮೌನದಿಂದ ಅವಳನ್ನು ನೋಡಿದ. ಅವಳು ಅವನಿಗೆ ಮಲಗಲು ಹಾಸಿಗೆ ಹಾಸಿಕೊಟ್ಟಳು. ಇವನ ಕಣ್ಣುಗಳು ತುಂಬಿದವು. ರಾತ್ರಿಯೂ ಹೀಗೆ ಇರುತ್ತದಾ? ಎಂದು ನಂಬಲಾಗಲಿಲ್ಲ… 

ಹಾಸಿಗೆ ಮೇಲೆ ಮಲಗಿದ../ ಆದರೆ ಎಷ್ಟೋ ಹೊತ್ತಿನವರೆಗೂ ನಿದ್ದೆ ಬರಲಿಲ್ಲ… ಅವಳೂ ಅಲ್ಲೇ ದೂರದಲ್ಲಿ ಮಲಗಿದ್ದಳು. ಮಲಗಿದ್ದಕ್ಕೆ ಏನೋ ಅವಳ ಮೈಮೇಲಿನ ಬಟ್ಟೆ ಆಚೆ ಈಚೆ ಜಾರಿ ಅರೆನಗ್ನಳಾಗಿ ಕಾಣುತ್ತಿದ್ದಳು. ಇವನ ಕಣ್ಣಿಗೆ ಅದು ಪದೇಪದೆ ಬೀಳುತ್ತಿತ್ತು. ಎದ್ದು ಒಂದೆರಡು ಸಾರಿ ನೋಡಿದ. ಮತ್ತೆ ಮಲಗಿದ. ಮತ್ತೆ ಎದ್ದು ನೋಡಿದ. ಇನ್ನಷ್ಟು ಅರೆಬೆತ್ತಲು ಕಾಣಸಿತು. 

ಮಲಗಿದವನು ಎದ್ದು ಕೂತ. ಆ ಕಡೆ ಈ ಕಡೆ ನೋಡಿದ. ಯೋಚಿಸಿದ. ತಾನು ಹೊದ್ದುಕೊಂಡಿದ್ದ ಕಂಬಳಿ ಎತ್ತಿಕೊಂಡು ಎದ್ದು ಅವಳ ಬಳಿ ಹೋಗಿ… ಅವಳಿಗೆ ಆ ಕಂಬಳಿಯನ್ನು ಮೈ ತುಂಬಾ ಹೊದಿಸಿ ಬಂದು ಮಲಗಿದ. 

ಯಾವುದೋ ಜಾವದಲ್ಲಿ ಅವಳಿಗೆ ದಿಢೀರನೆ ಎಚ್ಚರವಾಯಿತು.‌ ಮೈಮೇಲೆ ಅವನ ಕಂಬಳಿ ಇದೆ. ಆಶ್ಚರ್ಯದ ಮೇಲೆ ಆಶ್ಚರ್ಯ. ಇದೇಕೆಂದು ಅವಳಿಗೆ ಅರ್ಥವಾಗುವುದಿಲ್ಲ.‌ ಅವನ ಕಂಬಳಿ ತನ್ನ ಮೈಮೇಲೆ ಹೇಗೆ ಬಂದಿದೆ? ಅವನು ನನ್ನ ಪಕ್ಕ ಬಂದು ಹೋಗಿದ್ದನೇ? ಹಗಲು ಪ್ರೀತಿಸುವವನು ತನ್ನ ಹಗಲಿನ ಬುದ್ದಿ ತೋರಿಸಿಬಿಟ್ಟನಾ? ಹತ್ತೆಂಟು ಪ್ರಶ್ನೆಗಳು ಹುಟ್ಟಿಬಂದವು.‌

ಅಷ್ಟರಲ್ಲಿ ಅವಳಿಗೆ ಇನ್ನೊಂದು ಯೋಚನೆಯೂ ನುಗ್ಗಿ ಬಂತು. ಒಂಟಿ ಹುಡುಗಿ… ‌ಒಂದೇ ಮನೆ… ನಡುರಾತ್ರಿ… ಏನು ಬೇಕಾದರೂ ಅವನು ಮಾಡಬಹುದಿತ್ತು… ಏನೂ ಮಾಡದೆ ಕಂಬಳಿ ಹೊದಿಸಿ ಹೋದನೆಂದರೆ… ‌ಇವನು ನಿಜಕ್ಕೂ ಹಗಲಿನೊಳಗಿಂದ ಬಂದವನಾ? ಹಗಲು ಇಷ್ಟೊಂದು ಒಳ್ಳೆಯದಾ?

‘ಸಾರಿ…’ ಅಂದವನೇ ಅವಳ ಯೋಚನೆಗೆ ತಡೆಯೊಡ್ಡಿದ. ʻರಾತ್ರಿ ಅನಿವಾರ್ಯವಾಗಿ ನಾನು ನನ್ನ ಕಂಬಳಿಯನ್ನು ನಿಮಗೆ ಹೊದಿಸಬೇಕಾಯ್ತು.‌ ಅದೇಕೆ ಅಂತ ಹಗಲಿನಿಂದ ಬಂದ ನಾನು ಹೇಳಿದರೆ ನೀವು ನಂಬಲಿಕ್ಕಿಲ್ಲ… ಇರಲಿʼ ಅಂದ. 

ಅವನ ಮೇಲೆ ಅವಳಿಗೆ ಅಕ್ಕರೆಯಾಯಿತು…‌

ಜೊತೆಗೆ ಮೂಡಣದಲ್ಲಿ ಬೆಳಗೂ ಆಯ್ತು…

ʻನಾನು ಹೊರಡ್ತೀನಿ… ಇದು ನನ್ನ ಇಷ್ಟದ ಹಗಲುʼ  ಅಂದ…‌ ಅವಳು ನಕ್ಕು ಸಮ್ಮತಿಸಿದಳು… ಅಲ್ಲದೆ, ʻರಾತ್ರಿ ನಿನಗೆ ತೀರಾ ಕಷ್ಟವೆನಿಸಿದರೆ… ನೋವು ಎನಿಸಿದರೆ ಬಂದು ಬಿಡು… ಕತ್ತಲೆಯ ಪರವಾಗಿ ನಿನ್ನ ಖುಷಿಗೆ ನಾನಿರ್ತೀನಿʼ ಅಂದಳು… 

ಅವನಿಗೇನೊ ಸಮಾಧಾನವಾದಂತಾಯ್ತು… 

ʻಹಗಲಿನ ಬಗ್ಗೆ ನಿಮಗೆ ಅಸಹನೆ ಬೇಡ. ತಪ್ಪುಕಲ್ಪನೆ ಬಿಟ್ಟು ಬಿಡಿ. ಬನ್ನಿ ನಿಮ್ಮ ಹಿಂದೆ, ಮುಂದೆ ಮತ್ತು ಜೊತೆಗೆ ನಾನಿರುವೆ…ʼ ಅನ್ನಬೇಕು ಅನಿಸಿತು… ಅವಳು ರಾತ್ರಿಯಲ್ಲಿ ನೀವು ಅನಾಥ ಎನಿಸಿದರೆ ಬಂದು ಬಿಡಿ‌ ಅಂದ ತಕ್ಷಣ ಈಗ ನಾನು ಕರೆದರೆ ಅದು ಸರಿಯೆನಿಸುವುದಿಲ್ಲ ಎಂದು ಯೋಚಿಸಿ ಸುಮ್ಮನಾದ. 

ಅವಳ ಕಡೆ ತಿರುಗಿ ನೋಡಿ ಹೊರಟು ಹೋದ. 

*** 

ಅವನು ರಾತ್ರಿ ತನ್ನ ಪಾಲಿಗೆ ನರಕ ಅನಿಸಿದಾಗ ಅವಳ ಬಳಿ ಹೋಗುತ್ತಾನೆ… ಅವಳು ಒಳ್ಳೆಯ ರಾತ್ರಿಯನ್ನು ಅವನಿಗೆ ತೋರಿಸಿ  ಸಮಾಧಾನ ನೀಡುತ್ತಾಳೆ…

ಅವಳು ಹಗಲಿಗೆ ಕನಲಿ ಕೂತಾಗ… ಅವನು ಅವಳ ಕೈ ಹಿಡಿದು ಕರೆದೊಯ್ಯುತ್ತಾನೆ. ಹಗಲಿನೊಳಗಿರುವ ಅಪ್ಪನನ್ನು ಪರಿಚಯಿಸುತ್ತಾನೆ…‌ ಇವನಿಂದ ನಮ್ಮಿಬ್ಬರಿಗೂ ಆಶೀರ್ವಾದವಿದೆ ಅನ್ನುತ್ತಾನೆ. ಅವಳು  ಹಗಲಿಗೆ ಗೆಳೆಯನಾಗುವ ಹವಣಿಕೆಯಲ್ಲಿದ್ದಾಳೆ…‌

ಈ ಇಬ್ಬರನ್ನೂ ಮುಂದಿಟ್ಟುಕೊಂಡು ಹಗಲು ರಾತ್ರಿಗಳು ನಿತ್ಯ ಮುಸ್ಸಂಜೆ ಮತ್ತು ಮುಂಜಾವುಗಳಲ್ಲಿ ಸರಸ ಶುರುವಿಟ್ಟುಕೊಂಡಿವೆ. ಸರಸದಿಂದ ಸುರಿದ ಬೆವರು ಇಬ್ಬನಿಯಾಗಿ ಹರಿದಿದೆ… 

ಇವರೂ ಸಂಸಾರ ಶುರುವಿಟ್ಟುಕೊಳ್ಳುವ ತಯಾರಿಯಲ್ಲಿದ್ದಾರೆ…

ಇವರ ಬದುಕು ಅರಳಿಸಲು ಒಂದು ಸಂಜೆ, ಬಂದು ಕಾದು ನಿಂತಿದೆ… 

‍ಲೇಖಕರು avadhi

June 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: