ಶ್ರೀನಿವಾಸ ಪ್ರಭು ಅಂಕಣ: ‘ಬೆಣ್ಣೆ ಕೃಷ್ಣ’ನಂತೆ ತೊಟ್ಟಿಲಲ್ಲಿ ಕಂಗೊಳಿಸುತ್ತಿದ್ದ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

99

ಸೂರ್ಯನಾರಾಯಣ ಹಾಗೂ ಭಾಗ್ಯಮ್ಮ ದಂಪತಿಗಳು ಬಸವೇಶ್ವರ ನಗರದ ಅಣ್ಣಯ್ಯನ ಮನೆಯ ಸಮೀಪದಲ್ಲೇ,ಮುಖ್ಯ ರಸ್ತೆಯಲ್ಲೇ ವಾಸವಾಗಿದ್ದವರು.ಅಣ್ಣ ಎಂದರೆ ಅವರಿಗೆ ವಿಶೇಷ ಗೌರವ—ಅಭಿಮಾನ.ಅಣ್ಣ ಬೆಂಗಳೂರಿಗೆ ಬಂದು ಅವರ ಆರೋಗ್ಯ ಸ್ವಲ್ಪ ಸುಧಾರಿಸಿದ ಮೇಲೆ ಅವರಿಗೆ ಒಂದು ವಾಸ್ತವ್ಯವನ್ನು ಒದಗಿಸುವ ಕುರಿತು ಅಕ್ಕ—ಭಾವ ಆಲೋಚಿಸುತ್ತಿದ್ದಂತೆಯೇ ಒಂದು ದಿನ ಸೂರ್ಯನಾರಾಯಣ ಅವರು, “ಗುರುಗಳು ಎಲ್ಲೂ ದೂರ ಹೊರಗೆ ಹೋಗಿ ಇರುವ ಅಗತ್ಯವಿಲ್ಲ..ನಮ್ಮ ಮನೆಗೆ ಹೊಂದಿಕೊಂಡಂತೆಯೇ ಹೊರಭಾಗಕ್ಕೆ ಒಂದು ಕೋಣೆಯಿದೆ..ಗುರುಗಳು ಅಲ್ಲಿಯೇ ಇರಲಿ..ನಾವೂ ಗುರುಸೇವೆಯನ್ನು ಮಾಡಿಕೊಂಡು ಒಂದಿಷ್ಟು ಅವರಿಂದ ವೇದೋಪನಿಷತ್ತುಗಳ ಪಾಠ ಹೇಳಿಸಿಕೊಂಡು ಕೃತಾರ್ಥರಾಗ್ತೇವೆ..ನಮಗೆ ದಯವಿಟ್ಟು ಈ ಅವಕಾಶ ಕಲ್ಪಿಸಿಕೊಡಿ” ಎಂದು ವಿನಂತಿ ಮಾಡಿಕೊಂಡರು.

ಅಣ್ಣನಿಗೂ ಸಹಾ ಅವರೆಂದರೆ ವಿಶೇಷ ವಾತ್ಸಲ್ಯ—ಪ್ರೀತಿ.ಹಾಗಾಗಿ ಮರುಮಾತಿಲ್ಲದೆ ಈ ಒಂದು ಆಹ್ವಾನಕ್ಕೆ ಒಪ್ಪಿಗೆ ಕೊಟ್ಟುಬಿಟ್ಟರು. ನಮ್ಮೆಲ್ಲರ ಮನೆಗಳಿಗೆ ಸಮೀಪದಲ್ಲೇ ಇದ್ದುದರಿಂದ ಆಗಾಗ್ಗೆ ಹೋಗಿ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬರಲು ನಮಗೂ ಅನುಕೂಲವಾಗಿಯೇ ಇತ್ತು. ಸೂರ್ಯನಾರಾಯಣ ಅವರಂತಹ ಸಜ್ಜನರು,ನಿಗರ್ವಿಗಳು,ಸಹೃದಯರು ಕಾಣಸಿಗುವುದು ಅಪರೂಪದಲ್ಲಿ ಅಪರೂಪ! ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಅಪಾರ ಪರಿಶ್ರಮ ಹೊಂದಿದ್ದ ಅವರು ಎಂದೂ ಹಣಕ್ಕಾಗಿ ತಮ್ಮ ವಿದ್ಯೆ—ಜ್ಞಾನವನ್ನು ಬಳಸಿಕೊಂಡವರಲ್ಲ. “ಗುರುಮುಖೇನ ನಾನು ಕಲಿತಿರುವುದರ ಆಧಾರದ ಮೇಲೆ ಕೆಲವು ಸಲಹೆಗಳನ್ನು ನೀಡುವ ಪ್ರಯತ್ನ ಮಾಡುತ್ತೇನಷ್ಟೇ..ಅದು ‘ಇದಮಿತ್ಥಂ’ಎಂದು ಹೇಳುವಷ್ಟು ಉದ್ಧಟತನ ನನಗಿಲ್ಲ..ನನ್ನ ಸಲಹೆ ಸೂಚನೆಗಳಿಂದ ನಿಮಗೆ ಅನುಕೂಲವಾದರೆ ಅಷ್ಟೇ ನನಗೆ ಸಂತೋಷ” ಎಂದು ನಮ್ರಭಾವದಿಂದ ನುಡಿಯುತ್ತಿದ್ದರು ಸೂರ್ಯನಾರಾಯಣ ಅವರು.

ನನ್ನ ಮಗ ಅನಿರುದ್ಧ ಹುಟ್ಟಿದಾಗ ಅವನ ಜಾತಕವನ್ನು ಬರೆದುಕೊಟ್ಟವರೂ ಅವರೇ. ಆ ಜಾತಕದಲ್ಲಿ ಅವರು ಅತ್ಯಂತ ಸ್ಪಷ್ಟವಾಗಿ “ಈ ಜಾತಕರು ತಾಂತ್ರಿಕ ಶಿಕ್ಷಣ ಪಡೆದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುವ ಸಂಭಾವ್ಯತೆ ಇದೆ;ಅಂತೆಯೇ ಕಲೆ—ಲಲಿತಕಲೆಗಳಲ್ಲೂ ಇವರಿಗೆ ಅಪಾರ ಆಸಕ್ತಿ ಇರುವಂತೆ ಭಾಸವಾಗುತ್ತಿದೆ” ಎಂದು ಬರೆದುಕೊಟ್ಟಿದ್ದರು.ವಿಸ್ಮಯದ ಸಂಗತಿ ಎಂದರೆ ನನ್ನ ಮಗ ಅನಿರುದ್ಧ ಪದವಿ ಪಡೆದದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ;ಹಾಗೂ ಅವನು ಅತ್ಯಂತ ಪ್ರೀತಿಯಿಂದ ತೊಡಗಿಕೊಂಡಿರುವುದು ಸಂಗೀತ ಕ್ಷೇತ್ರದಲ್ಲಿ! ಕಾಕತಾಳೀಯವೆನ್ನಲು ಸಾಧ್ಯವಾಗದಷ್ಟು ಬಾರಿ ಸೂರ್ಯನಾರಾಯಣ ಅವರ ಮುನ್ಸೂಚನೆಗಳು ದಿಟವಾಗಿರುವುದರಿಂದ ನಾನು ಹಾಗೆ ಪ್ರಶ್ನಿಸುವ ನನ್ನ ಅಭ್ಯಾಸವನ್ನು ಬದಿಗೊತ್ತಿಬಿಟ್ಟಿದ್ದೇನೆ! ಅವರೇ ಹೇಳುವ ಹಾಗೆ ಇವು ಭವಿಷ್ಯ ವಾಣಿಗಳಲ್ಲ..ಕೇವಲ ಮುನ್ಸೂಚನೆಗಳು ಅಷ್ಟೇ..ಎಚ್ಚರ ವಹಿಸಿ ನಡೆದುಕೊಂಡರೆ ನಮಗೇ ಅನುಕೂಲವಾಗಬಹುದು ಅಷ್ಟೇ! ಇರಲಿ.

ಮನೆಯಲ್ಲಿ ಪುಟ್ಟ ಮಗುವಿನ ಬಾಲಲೀಲೆಗಳನ್ನೂ, ಅದರ ಬೆಳವಣಿಗೆಯ ವಿವಿಧ ಹಂತಗಳನ್ನು ಬೆರಗಿನಿಂದ ನೋಡುತ್ತಾ ಸಂಭ್ರಮಿಸುವುದು ಇದೆಯಲ್ಲಾ,ಬಹುಶಃ ಅದು ಬದುಕಿನ ಅತ್ಯಂತ ದೊಡ್ಡ ಸುಖ! ಮಕ್ಕಳು ಮನಸ್ಸನ್ನು ಮಾಗಿಸುವ ಹಾಗೆ ಇನ್ನಾವ ಶಕ್ತಿಯೂ ಮಾಗಿಸಲಾರದು..ಅದೂ ಪುರುಷನ ಮನಸ್ಸನ್ನು! ಮಕ್ಕಳ ಸಾಮೀಪ್ಯದಲ್ಲಿ ಮನಸ್ಸು ಗಳಿಸಿಕೊಳ್ಳುವ ಮಾರ್ದವತೆ—ಸಹನೆ—ಸಮಾಧಾನಗಳಂತೂ ಶಬ್ದಗಳಿಗೆ ಮೀರಿದ್ದು.ಹಾಗಾಗಿಯೇ ಆಫೀಸಿನ ಕೆಲಸ ಮುಗಿಯುತ್ತಿದ್ದಂತೆ ಮನೆಗೆ ಧಾವಿಸಿಬಿಡುತ್ತಿದ್ದೆ! ತೊಟ್ಟಿಲ ಕಂದನ ವಿವಿಧ ಭಾವ ಭಂಗಿಗಳನ್ನು ಕೂತು ನೋಡುವುದೇ ಒಂದು ಆನಂದ!ಒಮ್ಮೆ ಹುಸಿನಗು..ಒಮ್ಮೆ ಗಿಲಗಚ್ಚಿ ಆಡಿಸಿದಂತಹ ಗಲಗಲ ನಾದದ ಕೇಕೆ..ಮತ್ತೊಮ್ಮೆ ಇದ್ದಕ್ಕಿದ್ದಂತೆ ಹುಬ್ಬುಗಂಟು..ಮಗುದೊಮ್ಮೆ ಅದಾವುದೋ ಕನಸು ಕಾಣುತ್ತಿರುವಂತೆ ಅರೆ ನಿಮೀಲಿತ ನಯನ…ನಿಜಕ್ಕೂ ಮಕ್ಕಳು ಬದುಕಿನಲ್ಲಿ ಗಳಿಸಿಕೊಂಡ ಬತ್ತದ ಪ್ರೀತಿಯ ಸೆಲೆಯ ವರಗಳು!

ನನಗೆ ಇನ್ನೂ ನೆನಪಿದೆ: ಅನಿರುದ್ಧನನ್ನು ಮೊದಲ ಬಾರಿಗೆ ತೊಟ್ಟಿಲಲ್ಲಿ ತಂದು ಮಲಗಿಸಿದಾಗ ನಾನು ಕೂಸಿನ ಕಣ್ಣುಗಳನ್ನೇ ಗಮನಿಸಿದ್ದೆ:ಪಚ್ಚೆ ಕಣ್ಣುಗಳು! ನನ್ನ ಕಣ್ಣಿನ ಬಣ್ಣವೇ ಮಗನ ಕಣ್ಣುಗಳಿಗೂ ಬಂದಿದೆಯೆಂದು ಸಂಭ್ರಮಿಸಿದ್ದೆ! ಅದೇನೋ..ನನ್ನ ತಿಳಿ ಕಣ್ಣಿನ ದೃಷ್ಟಿಯೇ ತಾಗಿತೋ ಏನೋ..ದಿನಗಳುರುಳಿದಂತೆ ಪಚ್ಚೆ ರಂಜನಿಯ ಕಣ್ಣ ಬಣ್ಣಕ್ಕೆ— ಕಂದು ಬಣ್ಣಕ್ಕೆ ತಿರುಗಿಬಿಟ್ಟಿತು! ಮತ್ತೊಂದು ಸ್ವಾರಸ್ಯದ ಸಂಗತಿ ಎಂದರೆ ಅನಿರುದ್ಧ ಹುಟ್ಟಿದಾಗ ಅವನ ತಲೆಯಲ್ಲಿ ಕೂದಲೇ ಇರಲಿಲ್ಲ! ಅದೇ ರಾಧಿಕಾಳಿಗೋ ಕಪ್ಪು ಕೂದಲು ದಟ್ಟವಾಗಿತ್ತು ಅವಳು ಹುಟ್ಟಿದಾಗ! ದಿನಕಳೆದಂತೆ ಅದಾವ ಮಾಯದಲ್ಲಿ ಅನಿರುದ್ಧನ ತಲೆ ಸಮೃದ್ಧವಾಗಿ ತುಂಬತೊಡಗಿತೋ ಗೊತ್ತಾಗಲೇ ಇಲ್ಲ!ನಾನು ಪ್ರಾರಂಭದ ಒಂದಷ್ಟು ವರ್ಷಗಳು ಅವನ ಕೂದಲು ಬೆಳೆಯಲು ಅನುವೇ ನೀಡದಂತೆ ಕತ್ತರಿ ಹಾಕಿಸಿಬಿಡುತ್ತಿದ್ದೆ.ಕಾಲೇಜ್ ಹಂತಕ್ಕೆ ಬಂದಮೇಲೆ ಅವನು ಅದಕ್ಕೆ ಅವಕಾಶ ಕೊಡಲಿಲ್ಲ.ದಟ್ಟ ಕಪ್ಪುಕೂದಲು ಬೆಳೆಯುತ್ತಾ ಹೋಗಿ ಕೊನೆಗೆ ಗುಂಗುರು ಗುಂಗುರು ಕೂದಲ ಚಪ್ಪರವೇ ನಿರ್ಮಾಣವಾಗಿ ಹೋಯಿತು ಅವನ ತಲೆಯ ಮೇಲೆ! ‘ಬಾಬಾನ ಅವತಾರ’ ಎಂದು ಪ್ರೀತಿಯಿಂದ ಛೇಡಿಸುವಷ್ಟರ ಮಟ್ಟಿಗೆ…ರಸ್ತೆಯಲ್ಲಿ ಓಡಾಡುವಾಗ ಜನ ತಿರುತಿರುಗಿ ನೋಡಿ ಅವನ ಕೇಶ ಮಂಟಪವನ್ನೇ ಗಮನಿಸುವ ಹಾಗೆ!!ಅವನಮ್ಮನಿಗೆ ಅವನು ಈಗಲೂ ಮುದ್ದಿನ ‘ಗುಂಗುರ’!!
ಮಕ್ಕಳು ಹೇಗೆ ನಮ್ಮ ವ್ಯಕ್ತಿತ್ವವನ್ನೇ ಧನಾತ್ಮಕವಾಗಿ ಬದಲಿಸಿಬಿಡುತ್ತಾರೆಂಬುದರ ಬಗ್ಗೆ ಈಗಾಗಲೇ ಹೇಳಿದ್ದೇನೆ.ಒಂದು ಚಿಕ್ಕ ಪ್ರಸಂಗ ನೆನಪಾಗುತ್ತಿದೆ.

ನಮ್ಮ ಭಾವಕೋಶದ ಮಿಡಿತದ ಲಯವನ್ನೇ ಕರುಳ ಕುಡಿಗಳು ಹೇಗೆ ಮಧುರವಾಗಿ ಬದಲಿಸಿಬಿಡುತ್ತಾರೆಂಬುದು ಪ್ರತ್ಯಕ್ಷ ಅನುಭವಕ್ಕೆ ಬಂದ ಪ್ರಸಂಗವಿದು.ಮಕ್ಕಳ ಸೆಳೆತಕ್ಕೆ ಸಿಕ್ಕ ಎಲ್ಲ ಸಂವೇದನಾ ಶೀಲ ಮನಸ್ಸುಗಳೂ ಇಂಥದೊಂದು ಅನುಭವಕ್ಕೆ ಒಂದಲ್ಲ ಒಂದು ಬಾರಿಯಾದರೂ ಪಕ್ಕಾಗಿರಲಿಕ್ಕೆ ಸಾಕು.ಅದು ಆದದ್ದು ಹೀಗೆ:

ಆಗ ಮುದ್ದು ಮಗಳು ರಾಧಿಕಾ ಓದುತ್ತಿದ್ದುದು ಮಲ್ಲೇಶ್ವರದ ಕೇಂದ್ರೀಯ ವಿದ್ಯಾಲಯದಲ್ಲಿ.ಪ್ರತಿನಿತ್ಯ ಮೂರ್ತಿ ಅನ್ನುವವರು ತಮ್ಮ ವ್ಯಾನ್ ನಲ್ಲಿ ನಮ್ಮ ಭಾಗದಲ್ಲಿರುವ ಹತ್ತಾರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಮತ್ತೆ ಶಾಲೆ ಮುಗಿದ ಮೇಲೆ ಮರಳಿ ಕರೆತರುತ್ತಿದ್ದರು.ಒಂದು ದಿನ ನಾನು ಆಫೀಸಿನಲ್ಲಿದ್ದೇನೆ..ಮಧ್ಯಾಹ್ನ 3.30 ರ ಸಮಯ..ರಾಧಿಕಾ ಶಾಲೆ ಮುಗಿಸಿಕೊಂಡು ಮನೆಗೆ ಹೊರಡಲು ವ್ಯಾನ್ ಹತ್ತುವ ಹೊತ್ತು. ಇದ್ದಕ್ಕಿದ್ದ ಹಾಗೆ ನನಗೆ ಅದೇನೋ ತಳಮಳ — ಸಂಕಟ ಶುರುವಾಗಿಹೋಯಿತು..ಏನೋ ಅವ್ಯಕ್ತ ಭೀತಿ..ಏನೋ ಸರಿಯಿಲ್ಲವೆಂಬ ಚಡಪಡಿಕೆ..ಮಗಳಿಗೆ ಏನೋ ತೊಂದರೆಯಾಗಿದೆ ಎನ್ನುವ ಭಾವ ತೀವ್ರವಾಗಿ ಕಾಡುತ್ತಿದೆ.

ಯಾಕೋ ಕೆಲಸದಲ್ಲಿ ಮನಸ್ಸು ತೊಡಗುವುದು ಸಾಧ್ಯವೇ ಆಗದೇ ಬೈಕ್ ಹತ್ತಿಕೊಂಡು ಸೀದಾ ಮಲ್ಲೇಶ್ವರದ ಶಾಲೆಗೆ ಹೊರಟೇಬಿಟ್ಟೆ. ಅಲ್ಲಿ ಹೋಗಿ ನೋಡಿದರೆ ಹೆಚ್ಚುಕಡಿಮೆ ಶಾಲೆಯ ಆವರಣ ಖಾಲಿಯಾಗಿಹೋಗಿದೆ! ಯಾವ ಆಟೋ—ವ್ಯಾನ್ ಗಳೂ ಕಾಣುತ್ತಿಲ್ಲ..ಲಗುಬಗೆಯಿಂದ ಒಳಹೋಗಿ ನೋಡಿದರೆ ಒಂದು ಮೂಲೆಯಲ್ಲಿ ಬೆಂಚೊಂದರ ಮೇಲೆ ಕುಳಿತು ನನ್ನ ಪುಟ್ಟ ಮಗಳು ಸಣ್ಣಗೆ ಬಿಕ್ಕುತ್ತಿದ್ದಾಳೆ! ಓಡಿ ಹೋಗಿ ಅವಳನ್ನು ಎತ್ತಿಕೊಂಡು,”ಯಾಕೋ ಕಂದಾ..ಮೂರ್ತಿ ಅಂಕಲ್ ಜೊತೆ ಹೋಗಲಿಲ್ವಾ?” ಎಂದೆ.”ಇಲ್ಲ..ಮಿಸ್ ಏನೋ ಕೇಳ್ತಿದ್ರು..ಅವರ ಜೊತೆ ಮಾತಾಡಿಕೊಂಡು ಆಚೆ ಬರೋ ಅಷ್ಟರಲ್ಲಿ ವ್ಯಾನ್ ಹೊರಟುಹೋಗಿತ್ತು” ಎಂದು ಪುಟ್ಟ ಮಗಳು ಬಿಕ್ಕಿದಾಗ ಹೃದಯವೇ ಬಾಯಿಗೆ ಬಂದಂತಾಗಿಬಿಡಬೇಕೇ!! ಅವಳಿಗೆ ಸಮಾಧಾನ ಮಾಡಿ ಬೈಕ್ ನಲ್ಲೇ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಮತ್ತೆ ಸಮಾಧಾನ ಚಿತ್ತನಾಗಿ ಆಫೀಸಿಗೆ ಮರಳಿದೆ.ಈ ಭಾವಲಹರಿಗಳನ್ನು..ಹೃದಯ ಸಂವಾದ—ಮಿಡಿತಗಳನ್ನು—ಮನೋವ್ಯಾಪಾರಗಳನ್ನು ಕರೆಯುವುದಾದರೂ ಏನೆಂದು? ನನಗಂತೂ ಇದು ಎಂದೆಂದೂ ಬಗೆಹರಿಯದ ಸೋಜಿಗ! ಇದೆಲ್ಲಕ್ಕೂ ಇರುವುದೊಂದೇ ಕವಿವಾಣಿಯ ಉತ್ತರ:

“ಕಣ್ಣರಿಯದಿದ್ದೊಡೇಂ ಕರುಳರಿಯದೇ!”.

ಇತ್ತ ಆಫೀಸಿನಲ್ಲಿ ಶಿವರಾಮ ಕಾರಂತರ ವ್ಯಕ್ತಿ ಚಿತ್ರ ರೂಪಕವನ್ನು ಸಿದ್ಧ ಪಡಿಸಿ ನಾಲ್ಕೈದು ಕಂತುಗಳಲ್ಲಿ ಪ್ರಸಾರ ಮಾಡಿದೆವು. ಮುಂದಿನ ಸಾಹಿತಿ ಯಾರು ಎಂಬುದರ ಕುರಿತಾಗಿ ಚಿಂತನ ಮಂಥನಗಳು ಸಾಗುತ್ತಿದ್ದ ಹೊತ್ತಿನಲ್ಲೇ ಒಂದು ದಿನ ನಿರ್ದೇಶಕ N. G. ಶ್ರೀನಿವಾಸ್ ಅವರು ನನ್ನನ್ನು ಛೇಂಬರ್ ಗೆ ಕರೆಸಿಕೊಂಡರು.”ಪ್ರಭೂ, ಒಂದು ಬದಲಾವಣೆ ಬಗ್ಗೆ ತುಂಬಾ ಗಂಭೀರವಾಗಿ ಆಲೋಚನೆ ಮಾಡ್ತಿದೇನೆ..” ಎಂದವರೇ ನನ್ನನ್ನೇ ದಿಟ್ಟಿಸಿ ನೋಡಿದರು.ಮತ್ತೆ ಬದಲಾವಣೆಯೇ!! ನಾಟಕ ವಿಭಾಗಕ್ಕಾದರೆ ಅಡ್ಡಿಯಿಲ್ಲ..ಮತ್ತೆ ವಾರ್ತಾವಿಭಾಗವೋ ಮತ್ತೊಂದೋ ಆಗಿಬಿಟ್ಟರೆ…? ಎಂದೆಲ್ಲಾ ಚಿಂತಿಸುತ್ತಿದ್ದಂತೆಯೇ N G S ಅವರು ಮಾತಾಡತೊಡಗಿದರು: “ನೀವು ಧಾರಾವಾಹಿ ವಿಭಾಗ ಹಾಗೂ ಕಮರ್ಷಿಯಲ್ಸ್ ವಿಭಾಗಗಳನ್ನು ವಹಿಸಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆ…ತಯಾರಿದ್ದೀರಾ?” ಎಂದರು ನಿರ್ದೇಶಕರು.

ಒಂದು ಕ್ಷಣ ನನಗೆ ಮಾತೇ ಹೊರಡಲಿಲ್ಲ.ದೊಡ್ಡ ದೊಡ್ಡ ಇಲಾಖೆಗಳಲ್ಲಿ—ಮಂತ್ರಿಮಂಡಲಗಳಲ್ಲಿ ಅತಿ ಹೆಚ್ಚು ಪ್ರಭಾವಿ ಖಾತೆಗಳಿಗೆ ಹಂಬಲಿಸುವಂತೆ ನಮ್ಮ ಕೇಂದ್ರಗಳಲ್ಲಿ ‘ಪ್ರಭಾವಿ’ ಎನ್ನಿಸಿಕೊಂಡಂತಹ ಹಾಗೂ ಹಲವರು ಪಡೆಯಲು ಹಂಬಲಿಸುವಂತಹ ಖಾತೆಗಳಿವು!ಆ ಖಾತೆಗಳನ್ನು ಯಾವ ಬೇಡಿಕೆಯೂ ಇಲ್ಲದೇ ನನ್ನ ಸುಪರ್ದಿಗೆ ನೀಡಲು ಮುಂದಾಗಿದ್ದಾರೆ ನಮ್ಮ ನಿರ್ದೇಶಕರು! ಆ ಖಾತೆಗಳು ಪ್ರಭಾವಿ ಅಷ್ಟೇ ಅಲ್ಲ,ಅನೇಕ ಕಾರಣಗಳಿಗೆ ಭಾರೀ ಸದ್ದು ಮಾಡಿದ್ದ ಬಹು ಚರ್ಚಿತ ಖಾತೆಗಳೂ ಆಗಿದ್ದವು.ಆ ಖಾತೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಮೂರು ನಾಲ್ಕು ಅಧಿಕಾರಿಗಳು ಲಂಚ ಸ್ವೀಕರಿಸಿದ ಆಪಾದನೆಯ ಮೇರೆಗೆ ಸಸ್ಪೆಂಡ್ ಆಗಿದ್ದರು ಕೂಡಾ.ಅಂತಹ ‘ಕುಖ್ಯಾತ’ ವಿಭಾಗದ ಹೊಣೆ ಈಗ ನನ್ನ ಹೆಗಲೇರುವ ಶಿಲುಬೆಯಾಗಲಿದೆ! ‘ಏನಾದರಾಗಲಿ..ಇದೂ ಒಂದು ಅನುಭವವೂ ಆಗಿಬಿಡಲಿ’ ಎಂದು ಒಪ್ಪಿಕೊಂಡು ಶಿಲುಬೆ ಹೊರಲು ಸನ್ನದ್ಧನಾದೆ.

ಆ ವಿಭಾಗಗಳ ಚುಕ್ಕಾಣಿ ಹಿಡಿಯುತ್ತಿದ್ದಂತೆ ಏಕಾಏಕಿ ನಾನು ಬಹಳ ‘ದೊಡ್ಡ ಮನುಷ್ಯ’ನಾಗಿಬಿಟ್ಟೆ! ನೋಡಲು ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿತು! ಮರೆತು ಹೋದಂತಾಗಿದ್ದ ಸ್ನೇಹ ಸಂಬಂಧಗಳೆಲ್ಲಾ ಮತ್ತೆ ಚಿಗುರೊಡೆದವು! ನನ್ನ ಮೆಚ್ಚುಗೆಗೆ ಪಾತ್ರವಾಗಲೆಂದೇ ಅನೇಕರು ಅನೇಕ ಬಗೆಯ ಕಸರತ್ತುಗಳನ್ನು ಆರಂಭಿಸಿಬಿಟ್ಟರು! ಅಬ್ಬಾ! ಇಂಥದೊಂದು ಪುಟ್ಟ ವಿಭಾಗದಲ್ಲೇ ದೌಲತ್ತು ನಡೆಸುವ ವಿಪುಲ ಅವಕಾಶಗಳು ದೊರೆಯುವಾಗ ಇನ್ನು ದೊಡ್ಡ ದೊಡ್ಡ ಇಲಾಖೆಗಳ ‘ಅತಿ ಸಮರ್ಥ’ ಶಾಖೆಗಳ ಖದರ್ ಏನಿದ್ದಿರಬಹುದೆಂದು ಯೋಚಿಸಿಯೇ ನಾನು ಅಚ್ಚರಿಗೊಂಡೆ.ನನ್ನ ರಂಗಭೂಮಿ ‘ನನ್ನ ತಲೆಯನ್ನು ಭುಜದ ಮೇಲೇ ಇರಿಸಿಕೊಳ್ಳುವ’ ಅತ್ಯಮೂಲ್ಯ ಪಾಠವನ್ನು ಕಲಿಸದೇ ಹೋಗಿದ್ದರೆ ಈ ತೋರಾಣಿಕೆಯ ಮೆಚ್ಚುಗೆ—ಹೊಗಳಿಕೆ—ಓಲೈಕೆಗಳ ಹುಚ್ಚುಹೊಳೆಯಲ್ಲಿ ಕೊಚ್ಚಿಯೇ ಹೋಗಿ ಬಿಡುತ್ತಿದ್ದೆನೇನೋ!! ವಾಸ್ತವವಾಗಿ ನೋಡಿದರೆ ಆ ವಿಭಾಗಗಳಲ್ಲಿ ನಾನೇ ತೀರ್ಮಾನಿಸಿ ಕಾರ್ಯಗತಗೊಳಿಸಬೇಕಾದಂತಹ ಯಾವ ಮಹಾಕಾರ್ಯಗಳೂ ಉಳಿದೇ ಇರಲಿಲ್ಲ! ಹಕ್ ಸಾಹೇಬರು ನಿರ್ಗಮಿಸುವ ಮುನ್ನ ನಾಲ್ಕು ಐದು ವರ್ಷಗಳ ಪ್ರಸಾರಕ್ಕೆ ಸಾಕಾಗುವಷ್ಟು ಧಾರಾವಾಹಿಗಳಿಗೆ ಮಂಜೂರಾತಿ ನೀಡಿಯಾಗಿತ್ತು. ಅವುಗಳನ್ನು ಸಮಯೋಚಿತವಾಗಿ ಪ್ರಸಾರಕ್ಕೆ ಅಣಿಗೊಳಿಸುವ ಕಾರಕೂನ ಕೆಲಸವಷ್ಟೇ ನನ್ನ ಪಾಲಿಗೆ ಅಲ್ಲಿ ಉಳಿದದ್ದು! ಅಂಥದರಲ್ಲೂ ಈ ಪಾಟಿ ನೂಕುನುಗ್ಗಲು..ಓಲೈಕೆಗೆ ಸ್ಪರ್ಧೆ!’ಜನಮರುಳೋ ಜಾತ್ರೆ ಮರುಳೋ’ ಎಂದು ಮನಸ್ಸಿನಲ್ಲೇ ಎಷ್ಟೋ ಸಲ ನಕ್ಕಿದ್ದುಂಟು. ಇರಲಿ.

ಇತ್ತ ಮನೆಯಲ್ಲಿ ಮಗನ ನಾಮಕರಣ ಶಾಸ್ತ್ರವನ್ನು ಮಾಡಲು ಚಿಂತನೆ ಆರಂಭವಾಯಿತು.ಅದೇ ವೇಳೆಗೆ ರಾಧಿಕಾಳ ಎಂಟನೆಯ ಹುಟ್ಟುಹಬ್ಬದ ಸಂದರ್ಭವೂ ಕೂಡಿಬಂದದ್ದರಿಂದ ಎರಡೂ ಶುಭಕಾರ್ಯಗಳನ್ನು ಒಟ್ಟಿಗೇ ಏಕೆ ಹಮ್ಮಿಕೊಳ್ಳಬಾರದು ಎಂದು ರಂಜನಿ ಸೂಚಿಸಿದಳು.ಆಗ ನಮ್ಮ ನೆರವಿಗೆ ಒದಗಿದವನು ರಂಗಭೂಮಿಯ ಗೆಳೆಯ,ನಿರ್ದೇಶಕ ಟಿ.ಎನ್.ನರಸಿಂಹನ್ ಅಲಿಯಾಸ್ ನಚ್ಚಿ.ಶೇಷಾದ್ರಿಪುರದ ಪಾರ್ಕ್ ಎದುರು ಭಾಗದ ಸರ್ವಿಸ್ ರಸ್ತೆಯಲ್ಲಿ ನಚ್ಚಿಯ ಕಛೇರಿ ಇತ್ತು—”ಸಂಭ್ರಮ”.ಅದಕ್ಕೆ ಹೊಂದಿಕೊಂಡಂತೆಯೇ ಒಂದು ದೊಡ್ಡ ಹಾಲ್..ನಾಟಕದ ರಿಹರ್ಸಲ್ ,ಶಿಬಿರ ಇತ್ಯಾದಿಗಳನ್ನು ಅಲ್ಲಿ ನಡೆಸಲು ಅನುಕೂಲವಾಗಲಿ ಎಂಬುದು ನಚ್ಚಿಯ ಆಲೋಚನೆಯಾಗಿತ್ತು.”ನಾಮಕರಣದ ಹೋಮ ಹವನಾದಿ ಶಾಸ್ತ್ರಗಳನ್ನು ಮನೆಯಲ್ಲೇ ಮುಗಿಸಿಕೊಂಡು ಸಂಜೆ ‘ಸಂಭ್ರಮ’ದಲ್ಲಿ ಸಂತೋಷಕೂಟವನ್ನು ಇಟ್ಟುಕೋ..ತುಂಬಾ ಬೇಕಾದ 75—80 ಜನರನ್ನು ಆಹ್ವಾನಿಸು.ಒಳ್ಳೆಯ ಅಡುಗೆ ಮಾಡಿಸಿ ಮಗನ ನಾಮಕರಣ—ಮಗಳ ಹುಟ್ಟುಹಬ್ಬ ಎರಡನ್ನೂ ಸ್ನೇಹಿತರು—ನೆಂಟರಿಷ್ಟರ ಜತೆ ಸಂಭ್ರಮದಿಂದ ಆಚರಿಸೋಣ” ಎಂದು ನಚ್ಚಿಯೇ ಸಲಹೆ ಕೊಟ್ಟ.

ಅದರಂತೆಯೇ ಒಂದು ಒಳ್ಳೆಯ ದಿನ ನೋಡಿ ಬಸವೇಶ್ವರ ನಗರ ಬಿ ಇ ಎಂ ಎಲ್ ಲೇ ಔಟ್ ನ ನಮ್ಮ ಮನೆಯಲ್ಲಿ ಬೆಳಿಗ್ಗೆ ನಾಮಕರಣ ಶಾಸ್ತ್ರವನ್ನು ಮನೆ ಮಂದಿಯ ಮಟ್ಟಿಗೆ ಆಚರಿಸಿದೆವು.ಈ ಶುಭಕಾರ್ಯಗಳನ್ನು ನಡೆಸಿಕೊಟ್ಟವರು ಸಮೀಪದ ದೇವಾಲಯ ಸಮುಚ್ಚಯದಲ್ಲಿ ಅರ್ಚಕರಾಗಿರುವ ರಾಮಶರ್ಮರು.ಆಗಾಗ್ಗೆ ತಮ್ಮ ಅಮೂಲ್ಯ ಸಲಹೆಗಳಿಂದ ನಮಗೆ ಈಗಲೂ ಮಾರ್ಗದರ್ಶನ ಮಾಡುತ್ತಿರುವ ರಾಮಶರ್ಮರು ನಮಗೆ ಗುರುಸ್ಥಾನದಲ್ಲಿ ಇರುವಂಥವರು.(ಅಂದು ಅನಿರುದ್ಧನ ನಾಮಕರಣ ಶಾಸ್ತ್ರವನ್ನು ನೆರವೇರಿಸಿಕೊಟ್ಟ ರಾಮಶರ್ಮರೇ ಕಳೆದ ವರ್ಷ ಅವನ ಮದುವೆಯ ಮಂಗಲಕಾರ್ಯಗಳನ್ನೂ ಸಾಂಗವಾಗಿ ನಡೆಸಿಕೊಟ್ಟರು!)

ಅಂದು ಸಂಜೆ ನಚ್ಚಿಯ ‘ಸಂಭ್ರಮ’ ಕಛೇರಿಯಲ್ಲಿ ಆಪ್ತೇಷ್ಟರ ಸಮಕ್ಷಮದಲ್ಲಿ ಮಗಳ ಹುಟ್ಟುಹಬ್ಬದ ಆಚರಣೆ! ವಿಶೇಷ ಆಕರ್ಷಣೆಯಾಗಿ ಗೆಳೆಯ ನಾಗೇಂದ್ರ ಪ್ರಸಾದ್ ಹಾಗೂ ತಂಡದವರು ಸೊಗಸಾದ ಮ್ಯಾಜಿಕೋ ಷೋ ನಡೆಸಿಕೊಟ್ಟರು.ರಾಧಿಕಾಳಂತೂ ಪ್ರೀತಿಯ ಗೆಳತಿಯರೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದಳು. ಅಂದಷ್ಟೇ ‘ವಿಜಯಕೃಷ್ಣ ಶ್ರೀನಿವಾಸ ಅನಿರುದ್ಧ’ನೆಂದು ಸುದೀರ್ಘ ನಾಮಾಂಕಿತಗೊಂಡ ಆರು ತಿಂಗಳ ಮಗರಾಯ ‘ಬೆಣ್ಣೆ ಕೃಷ್ಣ’ನಂತೆ ತೊಟ್ಟಿಲಲ್ಲಿ ಕಂಗೊಳಿಸುತ್ತಿದ್ದ! ನಚ್ಚಿಯೇ ಗುರುತಿನ ಅಡುಗೆಯವರನ್ನು ಕರೆಸಿ ಸೊಗಸಾದ ಭೋಜನದ ವ್ಯವಸ್ಥೆ ಮಾಡಿಕೊಟ್ಟಿದ್ದ.ಆಪ್ತೇಷ್ಟರ ಹರಕೆ ಹಾರೈಕೆಗಳು ಮಕ್ಕಳಿಗೆ ಯಥೇಚ್ಛವಾಗಿ ದೊರೆತು ನನ್ನ ಹಾಗೂ ರಂಜನಿಯ ಸಂತಸಕ್ಕೆ ಪಾರವೇ ಇಲ್ಲದಂತಾಯಿತು.

‍ಲೇಖಕರು avadhi

June 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shiva

    ಗಗುಲ್ಬರ್ಗಾದಲ್ಲಿ ಇದ್ದಾಗ ರಂಜನಿ ಮೇಡಂಹಸ್ತವನ್ನು ನೋಡಿ ಮುಂದೆ ondu ಗಂಡು ಮಗು ಹುಟ್ಟಲಿದೆ ಎಂದು ಭವಿಷ್ಯ ನುಡಿದ್ದಿದೆ , ಆಗ ಅವರಿಗೆ ನಂಬಿಕೆ ಬರಲ್ಲಿ ಮತ್ತೋಮ್ಮ್ ನನ್ನ ಭಭೇಟಿಯಾದಾಗ ಅದು ಜ್ಞಾಪಕಕ್ಕೆ ಬಂತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: