ಮಮತಾ ರಾವ್ ನೋಡಿದ ʻಕೋಳಿ ಎಸ್ರುʼ

                     

ಮಮತಾ ರಾವ್

ವೈದೇಹಿಯವರ ಕಥೆಗಳನ್ನಾಧರಿಸಿ ʻಅಮ್ಮಚ್ಚಿಯೆಂಬ ನೆನಪುʼ ಎಂಬ ಚೊಚ್ಚಲ ಸಿನೆಮಾದ ಮೂಲಕ ಅಂತರಾಷ್ಟ್ರೀಯ ಖ್ಯಾತಿ ಪಡೆದು ಭರವಸೆಯ ನಿರ್ದೇಶಕಿಯಾಗಿ ಗುರುತಿಸಿಕೊಂಡವರು ಬಹುಮುಖ ಪ್ರತಿಭೆಯ ಚಂಪಾ ಶೆಟ್ಟಿ. ಇದೀಗ ಅವರ ನಿರ್ದೇಶನದ ಎರಡನೆಯ ಮಹತ್ವಾಕಾಂಕ್ಷಿ ಚಲನಚಿತ್ರ ಜಗತ್ತಿನಾದ್ಯಂತ ತನ್ನ ಘಮವನ್ನು ಪಸರಿಸಿ ಸಧ್ಯದಲ್ಲೇ ಸಿನಿರಸಿಕರನ್ನು ರಂಜಿಸಲು ಬಿಡುಗಡೆಗೆ ಸಜ್ಜಾಗಿದೆ.

ಕಳೆದ ವರ್ಷ ಚಿತ್ರೀಕರಣ ಮುಗಿಸಿದ್ದೇ ತಡ ʻನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ʼನಲ್ಲಿ ಪ್ರದರ್ಶಿತಗೊಳ್ಳಲು ಆಹ್ವಾನಿತರಾದ ಚಂಪಾ ಅವರ ಆತ್ಮೀಯ ಕರೆಯೋಲೆಯಂತೆ ಬೆಂಗಳೂರಿನ ಚಾಮುಂಡೇಶ್ವರಿ ಸ್ಟೂಡಿಯೋಸ್‌ಗೆ ಹೋದೆ. ಚಿತ್ರತಂಡ, ತಾಂತ್ರಿಕ ವರ್ಗದವರು, ಕಥೆಗಾರ ಕಾ.ತ. ಚಿಕ್ಕಣ್ಣ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಿ. ಸುರೇಶ್, ದು. ಸರಸ್ವತಿ ಇತ್ಯಾದಿ ಕೆಲವೇ ಕೆಲವು ಆತ್ಮೀಯರ ಉಪಸ್ಥಿತಿಯಲ್ಲಿ ಪ್ರಥಮವಾಗಿ ಪ್ರದರ್ಶಿತಗೊಂಡ ಚಿತ್ರವನ್ನು ವೀಕ್ಷಿಸಿ ಆನಂದಿಸುವ ಸೌಭಾಗ್ಯ ನನ್ನದಾಗಿತ್ತು.

ಒಲೆಮೇಲೆ ಕೊತಕೊತ ಕುದಿಯುತ್ತಿದ್ದ ಕೋಳಿ ಎಸರಿನ ಮೊದಲ ರುಚಿ ಸವಿಯುವ ಅವಕಾಶ ಅದಾಗಿತ್ತು. ಕಥಾವಸ್ತು, ಅಭಿನಯ, ಬೆಳಕು, ಜಾನಪದೀಯ ಸಂಗೀತ ಪ್ರತಿಯೊಂದರಲ್ಲೂ ಕಲಾತ್ಮಕತೆ! ಒಳ್ಳೆಯ ಚಲನಚಿತ್ರ ನೋಡ ಬಯಸಿದಾಗಲೆಲ್ಲಾ ಮಲೆಯಾಳಿ ಚಿತ್ರಗಳತ್ತ ಸದಾ ಓಡುವ ಮನಸ್ಸು, ʻಆಹಾ… ಕನ್ನಡದಲ್ಲೂ ಒಳ್ಳೆಯ ಚಿತ್ರಗಳನ್ನು ಮಾಡುವವರಿದ್ದಾರೆʼ ಎನ್ನುವ ಸಮಾಧಾನ ಸಿಕ್ಕಿ ಮುದಗೊಂಡಿತು. ಪ್ರಾದೇಶಿಕತೆಯ ಸೊಗಡಿನಿಂದ ಕೂಡಿದ ಸಂಭಾಷಣೆಯನ್ನು ಗ್ರಹಿಸಲು ತುಸು ತೊಡುಕೆನಿಸಿದರೂ ಸಬ್‌ಟೈಟಲ್ ಇದ್ದ ಕಾರಣ ಸುಲಭವಾಯಿತು. ಚಂಪಾ ಹಾಗೂ ಅವರ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ ಬಂದು ಇದೀಗ ಒಂದು ವರ್ಷವಾಯಿತು.

ಕಳೆದೊಂದು ವರ್ಷದಲ್ಲಿ ಯಾವ ಕನ್ನಡ ಚಲನಚಿತ್ರವೂ ಸಾಧಿಸದ ದಾಖಲೆಗಳನ್ನು ʻಕೋಳಿ ಎಸ್ರುʼ ಮಾಡಿದೆ ಎನ್ನುವುದು ಹೆಮ್ಮೆಯ ವಿಷಯ. ಚಂಪಾ ಶೆಟ್ಟಿ ಹಾಗೂ ಅವರ ತಂಡದವರ ಶ್ರಮ ಸಾರ್ಥಕವಾಯಿತೆಂದೇ ಹೇಳಬಹುದು. ʻನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ʼನಲ್ಲಿ ಚೊಚ್ಚಲ ಪ್ರದರ್ಶನ ಕಂಡ ಪ್ರಸ್ತುತ ಕನ್ನಡ ಚಿತ್ರಕ್ಕೆ ಮೆಚ್ಚುಗೆಯ ಪ್ರತಿಕ್ರಿಯೆ ದೊರಕಿತು. ತರುವಾಯ ಜನವರಿ ೨೦೨೩ರಲ್ಲಿ ಜರುಗಿದ ʻಅಜಂತಾ-ಎಲ್ಲೋರಾ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ʼನಲ್ಲಿ ಈ ಚಿತ್ರಕ್ಕೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರೆನ್ನುವುದು ಕನ್ನಡಿಗರು ಅಭಿಮಾನ ಪಡಬೇಕಾದ ಸಂಗತಿ. ಅತ್ಯುತ್ತಮ ನಟಿಯಾಗಿ ಅಕ್ಷತಾ ಪಾಂಡವಪುರ ಹಾಗೂ ಬಾಲನಟಿ ಅಪೇಕ್ಷಾ ಚೋರನಹಳ್ಳಿಯವರಿಗೆ ಸ್ಪೆಷಲ್ ಜ್ಯೂರಿ ಪ್ರಶಸ್ತಿ ಹೀಗೆ ಎರಡು ಪ್ರಶಸ್ತಿಗಳನ್ನೂ ʻಕೋಳಿಎಸ್ರುʼ ಬಾಚಿಕೊಂಡಿತು.

ಈ ಬಾರಿಯ ೧೪ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡ ಭಾರತೀಯ ಚಿತ್ರಗಳಲ್ಲಿ ʻಕೋಳಿ ಎಸ್ರುʼ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು, ೧೪ ವರ್ಷಗಳಲ್ಲಿ ಪ್ರಶಸ್ತಿ ಪಡೆದ ಕನ್ನಡದ ಪ್ರಥಮ ಚಿತ್ರ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿತು. ತರುವಾಯ ತ್ರಿಶೂರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಮೇ ತಿಂಗಳಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಪ್ರತಿಷ್ಠಿತ ʻಇಂಡೋ ಜರ್ಮನ್ ಫಿಲ್ಮ್ ವೀಕ್ʼನಲ್ಲಿ, ಮತ್ತೀಗ ಕೆನಾಡಾದ ʻಒಟ್ಟಾವಾ ಇಂಡಿಯನ್ ಫಿಲ್ಮ್ ಫೆಸ್ಟಿವಲ್ʼನಲ್ಲಿ ಭಾಗವಹಿಸುತ್ತಾ ಒಟ್ಟು ಒಂಬತ್ತು ಗರಿಗಳನ್ನು ತನ್ನ ಕಿರೀಟದಲ್ಲೆತ್ತಿ ಮೆರೆದಾಡುತ್ತಿದೆ.

ನಾಲ್ಕು ವರ್ಷಗಳ ಹಿಂದೆ ಬಿಡುಗಡೆಗೊಂಡ ʻಅಮ್ಮಚ್ಚಿಯೆಂಬ ನೆನಪುʼ ಚಿತ್ರದ ನಂತರ ಚಂಪಾ ಅವರು ತಮ್ಮ ತಂಡ ʻಏಪ್ರನ್ ಪ್ರೊಡಕ್ಸನ್ʼ ಬ್ಯಾನರ್‌ನಡಿಯಲ್ಲಿ ಕಾ.ತ. ಚಿಕ್ಕಣ್ಣನವರ ʻಹುಚ್ಚೇರಿ ಎಸರಿನ ಪ್ರಸಂಗʼ ಎಂಬ ಸಣ್ಣ ಕಥೆಯನ್ನಾಧರಿಸಿ ಮೈಸೂರಿನ ಟಿ. ನರಸೀಪುರದ ಪರಿಸರದಲ್ಲಿ ಚಿತ್ರೀಕರಣಕ್ಕೆ ತೊಡಗಿದ್ದು ಒಂದು ಕಥೆಯೇ. ಅವರೇ ಹೇಳುವಂತೆ ಸುಮಾರು ೩೦ ವರ್ಷಗಳ ಹಿಂದೆಯೇ ಈ ಕಥೆಯನ್ನಾಧರಿಸಿದ ನಾಟಕದಲ್ಲಿ ಹುಚ್ಚೇರಿಯಾಗಿ ಅಭಿನಯಿಸಿ ಬಹುಮಾನ ಪಡೆದಿದ್ದ ಅವರನ್ನು ಹುಚ್ಚೇರಿ ಬಿಟ್ಟು ಹೋಗಲೇ ಇಲ್ಲವಂತೆ. ಗ್ರಾಮೀಣ ಬದುಕಿನಲ್ಲಿ ಹಸಿವು-ಬಡತನವೇ ಪ್ರಧಾನವಾಗಿದ್ದ ಮೂಲಕಥೆಯನ್ನು ಹೆಣ್ಣೊಬ್ಬಳ ದಿಟ್ಟತನದ ಪ್ರತಿಭಟನೆಯ ಪರಿಣಾಮಕಾರಿ ಕಥಾನಕವನ್ನಾಗಿಸಿ ಅಂತರಾಷ್ಟ್ರೀಯ ಗಮನಸೆಳೆವ ಚಲನಚಿತ್ರವನ್ನಾಗಿಸಿ ಸೈಯೆನಿಸಿಕೊಂಡ ಚಂಪಾ ಶೆಟ್ಟಿ ಅವರದ್ದು ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಬಹುಮುಖಿ ಪ್ರತಿಭೆ.

ಹುಚ್ಚೇರಿಯ ಸಂಸಾರವೆಂದರೆ ಸೊಂಬೇರಿ ಕುಡುಕ ಗಂಡ, ಹಾಸಿಗೆ ಹಿಡಿದ ರೋಗಿಷ್ಟ ಅತ್ತೆ, ಶಾಲೆ ಕಲಿಯುತ್ತಿರುವ ಮಗಳು. ಇವರ ಹೊಟ್ಟೆ ತುಂಬಿಸಲು ಸಿಕ್ಕ ಸಿಕ್ಕ ಕಡೆಗಳಲ್ಲಿ ಬಿಟ್ಟಿ ಕೆಲಸ ಮಾಡಿ ಎದುರಾಗುವ ಅವಮಾನಗಳನ್ನು, ಊರ ಜನರ ಹಸಿದ ಕಣ್ಣುಗಳ ಇರಿತವನ್ನೂ ಲೆಕ್ಕಿಸದೆ ಅಷ್ಟೋ ಇಷ್ಟೋ ಸಂಪಾದಿಸಿ ತಂದರೆ, ಅದನ್ನೂ ಕಿತ್ತುಕೊಳ್ಳುವ ಗಂಡನ ಒದೆತವನ್ನೂ ಮೌನವಾಗಿ ತಿನ್ನುತ್ತಾಳೆ. ಮಗಳ ಬದುಕು ತನ್ನಂತಾಗ ಬಾರದೆಂದು ಅವಳನ್ನು ಶಾಲೆಗೆ ಕಳುಹಿಸುತ್ತಿದ್ದಾಳೆ. ಮಗಳಿಗೆ ಕೋಳಿ ಎಸ್ರು ಎಂದರೆ ಪ್ರಾಣ. ಮಗಳ ಕೋಳಿಸಾರು ತಿನ್ನುವ ಆಸೆಯನ್ನೀಡೇರಿಸಲು ಅವಳು ಪಡುವ ಪಾಡು, ಎದುರಿಸಬೇಕಾದ ಅವಮಾನ-ಸಂಕಷ್ಟ, ಅದನ್ನು ಮೀರಲು ಮಾಡುವ ಅವಳ ಸಾಹಸ ಪ್ರೇಕ್ಷಕರನ್ನು ಸೀಟಿನಂಚಿಗೆ ಎಳೆಯುತ್ತದೆ. ಇಷ್ಟೆಲ್ಲ ಮಾಡಿದರೂ ಆಕೆಯ ಚಾರಿತ್ರ್ಯವನ್ನೇ ಶಂಕಿಸುವ ಗಂಡ ಅವಳ ತಾಳ್ಮೆಯ ಕಟ್ಟೆಯನ್ನೇ ಒಡೆಯುತ್ತಾನೆ. ಮಗಳ ಪಾಟಿಚೀಲದೊಂದಿಗೆ ಮನೆಯಿಂದ ಹೊರಗೆ ದಿಟ್ಟತನದಿಂದ ಕಾಲಿಡುವ ಹುಚ್ಚೇರಿ ಸ್ವಾಭಿಮಾನದ ಹೆಣ್ಣಾಗಿ ಮನದಲ್ಲಿ ನೆಲೆ ಊರುತ್ತಾಳೆ. ಹುಚ್ಚೇರಿಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ ಅಕ್ಷತಾ ಪಾಂಡವಪುರ, ಮಗಳಾಗಿ ಮೊತ್ತ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ ಅಪೇಕ್ಷಾ ಚೋರನಹಳ್ಳಿ, ಕುಡುಕ ಗಂಡನಾಗಿ ಪ್ರಕಾಶ್ ಶೆಟ್ಟಿಯವರ ಅಭಿನಯ ಪ್ರಶಂಸನೀಯ.

ಚಾಮರಾಜನಗರದ ಕನ್ನಡ ಭಾಷೆ ಪ್ರಾದೇಶಿಕತೆಯ ಮೆರಗಿನೊಂದಿಗೆ ಟಿ. ನರಸೀಪುರದ ಸಮೀಪದ ಗ್ರಾಮೀಣ ಭಾಗದ ಕೌಟುಂಬಿಕ, ಆರ್ಥಿಕ, ಸಾಮಾಜಿಕ ಸಮಸ್ಯೆಗಳು ಆ ಗ್ರಾಮಕ್ಕಷ್ಟೇ ಸೀಮಿತವಾಗದೆ ಸಾರ್ವತಿಕವಾಗುವಂತೆ ಅನಾವರಣಗೊಳಿಸುತ್ತಾ, ಸಾರ್ವಕಾಲಿಕವಾದ ಹೆಣ್ಣಿನ ಶೋಷಣೆ, ಅದನ್ನು ಮೀರುವ ಅವಳ ದಿಟ್ಟತನ, ಪ್ರತಿಭಟನೆಯ ಪ್ರಸ್ತುತ ಚಲನಚಿತ್ರ ಕನ್ನಡ ಸಿನೇಮಾ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು.

ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿರುವ ʻಕೋಳಿ ಎಸ್ರುʼ ಚಿತ್ರವನ್ನು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಸದಭಿರುಚಿಯ ಕನ್ನಡಚಿತ್ರಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಪ್ರಮುಖ ಸ್ಟಾರ್‌ಗಳು, ಐಟಂ ಸಾಂಗ್, ಅತಿಯಾದ ಕ್ರೌರ್ಯ-ಅಮಾನುಷತೆಗಳು, ಅನಗತ್ಯ ಹಾಡುಗಳಿಲ್ಲದೆಯೂ ಕನ್ನಡ ಚಲನಚಿತ್ರ ರಸಿಕರನ್ನು ತಟ್ಟಬಹುದೆನ್ನುವುದನ್ನು ತೋರಿಸಿಕೊಟ್ಟ ಮಹಿಳಾ ನಿರ್ದೇಶಕಿ ಚಂಪಾ ಶೆಟ್ಟಿಯವರಿಗೆ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು. ಶುಭ ಹಾರೈಕೆಗಳು.

‍ಲೇಖಕರು avadhi

June 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: