ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ –ಬಂಗಾಳದ ಅಂಗಳದಲ್ಲಿ ಭಾಗ: 2 ದೋಣಿಯೊಳಗೆ ಲೀಲಾ

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

18.2

ಜಲಪೈಗುರಿಯ ಜಿಲ್ಲೆಯ ಸಿಲಿಗುರಿಯಿಂದ ಸುಮಾರು ನಲವತ್ತು ಕಿ.ಮೀ ದೂರದಲ್ಲಿ ತೀಸ್ತಾ ನದಿಗೆ ಕೃಷಿ ಉದ್ದೇಶದಿಂದ ಕಟ್ಟಿದ ಬ್ಯಾರೇಜ್ ಇರುವ ಊರು ಗಾಜಲಡೋಬ. ಬ್ಯಾರೇಜ್ ಕಟ್ಟಿದ್ದರಿಂದ ಅಲ್ಲಿ ಉಂಟಾದ ಜೌಗುಪ್ರದೇಶಕ್ಕೆ ಚಳಿಗಾಲದಲ್ಲಿ ವಲಸೆ ಹಕ್ಕಿಗಳು ಆಗಮಿಸುವುದರಿಂದ ಪಕ್ಷಿಪ್ರೇಮಿಗಳನ್ನು ಸೆಳೆಯುವ ತಾಣವಾಗಿದೆ. ನಾಡ ದೋಣಿಯಲ್ಲಿ ಕುಳಿತು ಇತ್ತ ಜೌಗಿನಲ್ಲಿ ಅತ್ತ ನದಿಯಲ್ಲಿ ಹಕ್ಕಿ ಛಾಯಾಗ್ರಹಣ ಮಾಡಬಹುದು.

ಗಾಜಲಡೋಬಕ್ಕೆ ನಾವು ತಲುಪಿದಾಗ ರಾತ್ರಿ ಆಗಿತ್ತು. ಸಣ್ಣ ಹಳ್ಳಿಯಾದರೂ ಎರಡು ಮೂರು ಮೈಲಿಗಳ ವ್ಯಾಪ್ತಿಯಲ್ಲಿ ವಸತಿಗೆ ಕೆಲವು ಉತ್ತಮ ಸೌಲಭ್ಯಗಳೀವೆ. ಆದರೆ ಸಂದೀಪ ನಮಗಲ್ಲಿ ಉಳಿದುಕೊಳ್ಳಲು ಮಾಡಿದ್ದ ವ್ಯವಸ್ಥೆ ಕನಿಷ್ಠ ಮಟ್ಟದಲ್ಲಿತ್ತು. ಅದರ ಅವಸ್ಥೆ ನೋಡಿಯೇ ರಾಹುಲ್‌ಗೆ ಕೋಪ ಕುದಿಯುತ್ತಿತ್ತು. ಅದನ್ನು ಶಮನಗೊಳಿಸಲು ಬಿಡಾರದಲ್ಲಿ ಊಟವೂ ಇರಲಿಲ್ಲ. ನಂತರ ಸಂದೀಪ್ ಬೇರೆ ಕಡೆಯಿಂದ ಊಟ ಕಟ್ಟಿಸಿ ತಂದುಕೊಟ್ಟ.  ಎಲ್ಲರೂ ಗೊಣಗಿಕೊಂಡೆ ಅರ್ಧಂಬರ್ಧ ತಿಂದು ಬಿಟ್ಟು ಒಂದೇ ಸಮನೆ ಪಯಣಿಸಿ ಆಯಾಸವಾದ್ದರಿಂದ ಉರುಳಿಕೊಂಡರು.

ಬೆಳಿಗ್ಗೆ ವಸತಿಯ ಆಚೀಚೆ ಹಕ್ಕಿ ಇದ್ದೀತೆಂದು ಹೊರಬಂದೆ. ಪೊದೆಯಲ್ಲಿದ್ದ ಪೈಡ್ ಮೈನಾ ಹೊರಗೆ ಬರುವ ಲಕ್ಷಣ ಕಾಣದೆ ಒಳಬಂದೆ. ಏಳು-ಏಳೂವರೆಯ ಹೊತ್ತಿಗೆ ಬೋಟಿಂಗ್ ಶುರುವಾಗುವುದರಿಂದ ಅಲ್ಲಿಗೆ ಕರೆದೊಯ್ಯಲು ಇ-ಆಟೋಗಳು ಬಂದು ನಿಂತಿದ್ದವು. ಬ್ಯಾರೇಜಿನ ಬಳಿಯ ದಾರಿಬದಿಯ ಸಣ್ಣ ಹೊಟೇಲಿನಲ್ಲಿ ತಿಂಡಿ ಮುಗಿಸಿ ಬಂದು ನಾಡದೋಣಿಗಳಿಗಾಗಿ ಕಾಯುತ್ತಿದ್ದೆವು. ಒಂದು ದೋಣಿಯಲ್ಲಿ ಇಬ್ಬಿಬ್ಬರು ಹೋಗಬೇಕಿತ್ತು. ಯಾರ‍್ಯಾರು ಯಾರ ಜೊತೆ ದೋಣಿಯಲ್ಲಿ  ಹೋಗುವುದನ್ನು ಹಿಂದಿನ ದಿನವೆ ಸೂಚಿಸಿದ್ದ ಖುಷ್ಬೂ,  `ಅಮ್ಮಾ ನೀವು ಸಂದೀಪ್ ಜೊತೆ’ ಅಂದರು. `ಓ.ಕೆ ಆದರೆ ಹೊಗೆ ಕಡಿಮೆ ಬಿಡಲು ಹೇಳಪ್ಪ’ ಎಂದಿದ್ದೆ. ಈ ಟೂರ್ ಆರಂಭದಿಂದಲೂ ಸಂದೀಪ್ ಆಗಾಗ್ಗೆ ಇಂಜಿನ್ ಬಿಟ್ಟು ಬರುತ್ತಿದ್ದುದನ್ನು ಗಮನಿಸಿದ್ದೆ. ಇನ್ನು ಇಡೀ ದಿನ ವಾಸನೆಯಲ್ಲಿ ಕೂರಬೇಕಲ್ಲ ಎಂಬುದಷ್ಟೆ ಸಮಸ್ಯೆ ಆಗಿತ್ತು.

ಬೆಂಗಳೂರಿನ ಗೌತಮ್ ಮಹಾಪಾತ್ರ ನಮ್ಮ ಜೊತೆಗೆ ಸೇರಿಕೊಂಡರು. ನಾನು ಗಣೇಶಗುಡಿಗೆ ಹೋದ ತಂಡದಲ್ಲಿದ್ದುದ್ದರಿಂದ ಮೊದಲೇ ಪರಿಚಿತರಾಗಿದ್ದರು. ಒಮ್ಮೆ ನಮ್ಮೊಟ್ಟಿಗೆ ಚೋಪ್ತಾ ಹಕ್ಕಿ ಪ್ರವಾಸಕ್ಕೂ ಬಂದಿದ್ದರು. ಬ್ಯಾರೇಜ್ ಆವರಣದಲ್ಲಿದ್ದ ಕಟ್ಟಡದ ಬಾಗಿಲುವಾಡದದ ಮೇಲೆ ಗೂಬೆ ಜೂಗಡಿಸುತ್ತಾ ಕುಳಿತಿತ್ತು. ನೋಡಿದರೆ Indian Scops Owl, ಅದೂ ಲೈಫರ್. ನೆಲದ ಮೇಲೆ ಕಣ್ಣಾಡಿಸಿದಾಗ ಹೆಣ್ಣು ಬ್ಲೂರಾಕ್ ಥ್ರಶ್ ಲೈಫರ್ ಆಯಿತು. ಕಪ್ಪು ರೆಡ್ ಸ್ಟಾರ್ಟ್ ಕೂಡಾ ಅಡ್ಡಾಡುತ್ತಿತ್ತು.

ಅಷ್ಟರಲ್ಲಿ ದೋಣಿಗಳು ರೆಡಿ, ಹೊರಡಿ ಹೊರಡಿ ಎಂದದ್ದೇ ತಡ ಎಲ್ಲರೂ ಮೆಟ್ಟಿಲಿಳಿದು ಹೋಗಿ ನಮಗೆ ನಿಗದಿ ಪಡಿಸಿದ ದೋಣಿ ಏರಿ ಯಾನ ಆರಂಭಿಸಿದೆವು. ಬೆಳಿಗ್ಗೆಯಿಂದ ಸಂಜೆತನಕ ಬೋಟಿನಲ್ಲಿದ್ದೇ ಹಕ್ಕಿ ಫೋಟೋಗ್ರಫಿ ಮಾಡುವುದೆಂದು ನಿರ್ಧರಿಸಿ ಪ್ರತಿ ದೋಣಿಗೂ ಸಂದೀಪ್ ಒಂದಿಷ್ಟು ಬಿಸ್ಕತ್ತು, ಕೇಕ್ ನೀರಿನ ಬಾಟಲಿಗಳನ್ನು ಕೊಟ್ಟಿದ್ದ. ಆ ತಿನಿಸನ್ನು ಬೆಳಗಿನ ಸವಾರಿ ಹಾದಿಯಲ್ಲಿ ತಿಂದು ಮುಗಿಸಿದ ದೋಣಿ ಸವಾರರು ಮಧ್ಯಾಹ್ನ ಆಗುತ್ತಿದ್ದಂತೆ ಫೋನಾಯಿಸಿದರು, ನಮಗೆ ಊಟ ಎಲ್ಲಿ, ಎಷ್ಟು ಹೊತ್ತಿಗೆ ಎಂದು. ಸಂದೀಪ್ `ಬೆಳಿಗ್ಗೆಯೆ ಹೇಳಿದ್ದೆ’ ಎಂದು ಗೊಣಗುತ್ತಾ ಲಾಬಾ ಪೌಲ್ ರಿಗೆ ಫೋನಿಸಿ ಅವರ ಊಟದ ವ್ಯವಸ್ಥೆ ಮಾಡಿದ. ನಾವು ದೋಣಿ ಬಿಟ್ಟು ಇಳಿಯಲಿಲ್ಲ. ಎಲ್ಲೆಲ್ಲಿ ಹಕ್ಕಿ ಕಾಣಿಸುತ್ತದೆಯೋ ಅತ್ತ ಕಡೆಗೆ ದೋಣಿ ನಡೆಸಿಸುತ್ತಾ ಚಿತ್ರ ತೆಗೆಯತೊಡಗಿದೆವು. ಹಕ್ಕಿಗಳು ಹತ್ತಿರದಲ್ಲಿ ಇದ್ದರೆ 5d mark iii, ದೂರದಲ್ಲಿ ಇದ್ದರೆ 7d mark ii ಹೀಗೆ ಕ್ಯಾಮೆರಾ ಬದಲಾಯಿಸಿಕೊಳ್ಳುತ್ತಾ ನೀರ ಹಕ್ಕಿಗಳನ್ನು ಕ್ಲಿಕ್ಕಿಸುತ್ತಿದ್ದೆ. ಟ್ರೈಪಾಡನ್ನು ಕೆಳಮಟ್ಟಕ್ಕಿಳಿಸಿ ಹಕ್ಕಿಗೆ ಫೋಕಸ್ ಮಾಡುತ್ತಿದ್ದೆ. ಕೆಲವು ಆಕ್ಷನ್ ಚಿತ್ರಗಳೂ ಸಿಕ್ಕವು. ಕೆಲವ ಹಕ್ಕಿಗಳ ಟೇಕಾಫ್ ಮತ್ತು ಲ್ಯಾಂಡಿಂಗ್ಗಳನ್ನು ಕ್ಲಿಕ್ಕಿಸಿದೆ. ಗೈಡ್ ಸಂದೀಪ್‌ ದೋಣಿಯಾನದ ಉದ್ದಕ್ಕೂ ನಿಜವಾದ ಅರ್ಥದಲ್ಲಿ ಗೈಡ್ ಮಾಡಿ ಸಹಕರಿಸಿದ, ಒಮ್ಮೆಯೂ ಹೊಗೆ ಕೂಡಾ ಬಿಡಲಿಲ್ಲ.

ಫೋಟೋ ತೆಗೆಯುತ್ತಾ ತೆಗೆಯುತ್ತಾ ಒಂದು ಕಡೆ ದೋಣಿ ಕುಲುಕಾಟದಿಂದ ಟ್ರೈಪಾಡ್ ಅಲುಗಾಡಿ ನನ್ ಕ್ಯಾಮೆರಾ ದೋಣಿಯಿಂದ ಮಗುಚಿತು. ಆದರೆ ನಾನು ಅಲುಗಾಡಲಿಲ್ಲ. ನಾನು ಜೋರಾಗಿ ಅಲುಗಾಡಿದರೆ ದೋಣಿಯೂ ಮಗುಚುತ್ತಿತ್ತಲ್ಲ. ಒಂದು ವರ್ಷ ಯೋಚಿಸಿ ಕೊಂಡುಕೊಂಡಿದ್ದ 600mm ಲೆನ್ಸ್ ನೀರಿನಲ್ಲಿ. ಏಳೂವರೆ ಲಕ್ಷದ ಲೆನ್ಸ್ ಅನ್ನೋದಕ್ಕಿಂತ ನಂತರದಲ್ಲಿ ಫೋಟೊಗ್ರಫಿ ಮಾಡೋದು ಹೇಗೆ ಅನ್ನೋದು ಯೋಚನೆಯ ಕಾಡುತ್ತಿತ್ತು. ಕ್ಯಾಮೆರಾ ಪೂರ್ತಿ ನೀರಿನಲ್ಲಿ ಮುಳುಗುವ ಮುನ್ನ ಒಳಗೆಳೆದುಕೊಂಡೆ. ಇದ್ದ ಬಟ್ಟೆಯಿಂದ ಒರೆಸಿ ಮೊದಲು ಚೆಕ್ ಮಾಡಿದಾಗ `ಹೆದರಬೇಡ ಲೀಲಾ ನಾನು ಚೆನ್ನಾಗಿದೀನಿ’ ಎಂದು ಅದೇ ಸಮಾಧಾನ ಮಾಡಿದ ಮೇಲೆ ನನ್ನ ಮುಖದ ಮೇಲೆ ಸಮಾಧಾನದ ನಗು.

ಮಧ್ಯಾಹ್ನ ದಾಟತೊಡಗಿತು, ಊಟಕ್ಕೆ ಹೋದವರಿನ್ನೂ ಮರಳಿರಲಿಲ್ಲ. ಗಾಳಿ ತೀವ್ರ ಗತಿಯಲ್ಲಿ ಬೀಸುತ್ತಿತ್ತು. ನೀರಿನ ಮಟ್ಟ ನಿಧಾನವಾಗಿ ಏರುತ್ತಿತ್ತು. ಅಂಬಿಗ ಹೊಡೆದಾಡುತ್ತಿದ್ದ. ದೂರಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ ಬದಲಿಗೆ ನಮ್ಮ ನೆತ್ತಿಯ ಮೇಲೆ ಕಪ್ಪನೆಯ ಮೋಡಗಳ ಕಡಲು. ದೋಣಿಯಾಟ ಆಡಿರಿ ಬದಲು ದೋಣಿ ನೀರಲಿ ಮುಳುಗದಿರಲೆಂಬ ಆರ್ತನಾದ ಹೊಮ್ಮತೊಡಗಿತು.

ಸಂದೀಪ್ `ಅಮ್ಮಾ ದೋಣಿಯನ್ನು ಗಟ್ಟಿಯಾಗಿ ಹಿಡಿದು ಮಧ್ಯದಲ್ಲಿ ಕುಳಿತುಕೊಳ್ಳಿ, ಹೆದರಬೇಡಿ’ ಎಂದ. ನಾನೆಂದೆ: `ನನಗೇನಾದರೂ ಪರವಾಗಿಲ್ಲ ಹೋಗೋ ಜೀವ ದೇಹ. ನಿಮ್ಮ ಸೇಫ್ಟಿ ನೋಡಿಕೊಳ್ಳಿ. ನೀವಿನ್ನು ಚಿಕ್ಕವರು, ಬದುಕಿ ಬಾಳಬೇಕಾದವರು’. ಹನಿ ಬೀಳತೊಡಗಿತು. ಕಾಲಕೆಳಗಿದ್ದ ಗೋಣಿಚೀಲ ತೆಗೆದು ಕ್ಯಾಮೆರಾಗೆ ಮುಚ್ಚಿದೆವು. ದೋಣಿ ಏರಲು ಬಂದಿದ್ದ ನಮ್ಮವರು ಕ್ಯಾಮೆರಾ ಸಮೇತ ಬಹುತೇಕ ಓಡಿದರು, ನೀರಿನಲ್ಲಿದ್ದ ನಮ್ಮ ಬಗ್ಗೆ ಚಿಂತೆಯ ಎಳೆಯೂ ಇಲ್ಲದಂತೆ. ನಮ್ಮ ಕತೆ… ಅದು ನಮ್ಮ ಪಾಲಿಗೆ.

`ತೂರು ಗಾಳಿಗೆ ಕಡಲು ಕುದಿಯಿತು… ಹೆಪ್ಪುಮೋಡದ ಹುಬ್ಬುಗಂಟಿಗೆ ಕಪ್ಪಗಾದವು ಮುಖಗಳು. ಕೆರಳಿ ಕೆರಳಿ ಗಾಳಿ ಚಚ್ಚಿತು; ಇರುಳ ಕತ್ತಲೆ ಕವಿದು ಮುಚ್ಚಿತು, ಅಲೆಗಳಬ್ಬರದಲ್ಲಿ ಮೀಟಿ
ಮುಳುಗುತಿಹರು, ಏಳುತಿಹರು’ ಎನ್ನುವಂತಿದ್ದ ಪರಿಸ್ಥಿತಿ. ಓದಿದ್ದ, ಪಾಠ ಮಾಡಿದ್ದ ಬಿ.ಎಂ.ಶ್ರೀಯವರ `ಕಾರಿಹೆಗಡೆಯ ಮಗಳು’ ಕವಿತೆ ನೆನಪಾಯಿತು. ಕರುಣಾಳು ಬಾ ಬೆಳಕೆ… ಗುನುಗಿದೆ. ಇದೇ ಹಂದರದಲ್ಲಿ ಬಿ.ಎಂ.ಶ್ರೀಕಂಠಯ್ಯನವರ ಇಂಗ್ಲೀಷ್ ಗೀತೆಗಳನ್ನು ಕವಿತೆಗಳನ್ನು ಆಧರಿಸಿ ಮುಖ್ಯವಾಗಿ ಕಾರಿಹೆಗಡೆಯ ಮಗಳಿಗೆ ಇನ್ನಷ್ಟು ಕವಿತೆಗಳನ್ನು ಸೇರಿಸಿ ಮೈಸೂರಿನಲ್ಲಿ ನಡೆದ ಯುವದಸರಾಗೆ ಮದ್ದೂರು ಕಾಲೇಜಿನ ಹುಡುಗಿಯರಿಂದ ಕರುಣಾಳು ಬಾ ಬೆಳಕೆ ನೃತ್ಯರೂಪಕ ಮಾಡಿಸಿದ್ದೆ ಅತ್ಯಾಪ್ತೆ ಹೆಚ್.ಆರ್.ಸುಜಾತಾ ನಿರ್ದೇಶನದ ಸಹಕಾರದಲ್ಲಿ. ಆದರೀಗ ನಮ್ಮ ಮೊರೆ ಸತತವಾಗಿ ಸಾಗಿತ್ತು.

ಅರ್ಧ ಮುಕ್ಕಾಲು ಗಂಟೆ ಪರಿಸ್ಥಿತಿ ಹಾಗೇ ಇತ್ತು. ದೇವರಿಗೆ ನನ್ನ ಮೇಲೆ ಇನ್ನೂ ಕರುಣೆ ಇತ್ತೆಂದು ತೋರುತ್ತದೆ, ಲಡಾಖಿನಿಂದ ವಾಪಸ್ ಜೀವಸಮೇತ ಮರಳುವಂತೆ ಮಾಡಿದ್ದನಲ್ಲ. ನಮ್ಮ ದೋಣಿ ಬಹುತೇಕ ನಿಂತಲ್ಲೇ ಇತ್ತು. ನೀರಿನಲೆ ಒಂದೆರಡು ಇಂಚು ಆಚೀಚೆ ಆದರೂ ಒಳಗೆ ನೀರು ಬರುತ್ತಿತ್ತು. ಒಳಬರುತ್ತಿದ್ದ ನೀರನ್ನು ಅಂಬಿಗ ಆಚೆ ಹಾಕುತ್ತಿದ್ದ. ಬಿರುಸಾಗಿದ್ದ ಗಾಳಿ ಬಿರುಸು ನಿಧಾನವಾಗಿ ಇಳಿಮುಖ ಆಯಿತು. ದಡಕ್ಕೆ ಮರಳುವ ಪಯಣ ಆರಂಭ. ನಾವು ಲೀಲಾ ಮಾತ್ರ ಜೀವರು ನಮ್ಮ ಜೀವನಲೀಲೆಗೆ ಅಲ್ಲವೆ. ಲೀಲಾ ಜೀವಂತವಾಗಿ ನೀರಿನಿಂದ ಹೊರಬಂದಳು. ಈಗ ಮತ್ತೆ ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ ಅಷ್ಟೆ ಅಲ್ಲವೆ ಬದುಕು. ಇರುವಾಗ ಇರೋದು, ಕರೆದಾಗ ಎದ್ದು ಹೋಗೋದು.

ಅಂದು ರಾಹುಲ್ ಖುಷ್ಬೂ ಗರಂ ಆಗಿದ್ದರು. ಅದರಲ್ಲೂ ರಾಹುಲನಿಗೆ ಒಂದು ತೂಕ ಕೋಪ ಹೆಚ್ಚಿತ್ತು. ಮರುದಿನ ಬೆಳಿಗ್ಗೆಯ ಸೆಷನ್ನಿಗೆ ದೋಣಿ ಏರಲು ಕಾಯುತ್ತಿದ್ದೆವು. ದೋಣಿ ಬಂದಹಾಗೆ ಇಬ್ಬರಿಬ್ಬರು ಏರಿ ಹೋಗುತ್ತಿದ್ದರು. ಸಂದೀಪ ಬರುವತನಕ ನಾನು ಕಾಯಲೇಬೇಕಿತ್ತು. ರಾಹುಲ್ ಏರಬೇಕಿದ್ದ ದೋಣಿಯವ ಮನೆಯಲ್ಲೇ ಕೀ ಮರೆತುಬಂದು ಕಲ್ಲಿನಿಂದ ಬೀಗ ಒಡೆಯುತ್ತಿದ್ದ. ಅಷ್ಟರಲ್ಲಿ ರಾಹುಲ್ `ನಾನು ಈಗ ಬರುವ ದೋಣಿಗೆ ಹೋಗುತ್ತೇನೆ. ಗೌತಮ್ ಬೇಗ ಮರಳಬೇಕಿದೆ’ ಎಂದ. ನಾನು ರೇಗಿಸಲೆಂದು ಈ ದೋಣಿ ನಮ್ಮದು ಎಂದೆ. ಆತ ಸಿಟ್ಟಿನಿಂದ ಕಣ್ಣರಳಿಸಿ ನೋಡಿ ಬಂದ ದೋಣಿ ಏರಲು ಹೋದ. ಬಂದ ದೋಣಿ ಬೇರೆ ಇನ್ನಿಬ್ಬರದ್ದು. ಇದು ನಮ್ಮದು ಸಾರ್ ಎಂದವರು ದೋಣಿಯೇರಿದರು. ನಂತರ ಬಂದ ದೋಣಿಯಲ್ಲಿ ರಾಹುಲ್, ಗೌತಮ್ ಹೊರಟರು. ನಾನೂ ಸಂದೀಪ್ ನಿಧಾನವಾಗಿ ಬೇರೆ ದೋಣಿಯಲ್ಲಿ ಹೊರಟೆವು. ಆ ದಿನ ಬೆಳಗಿನ ಸೆಷನ್ ಮಾತ್ರ ಇತ್ತು. ಒಂದೂವರೆ ದಿನದ ಗಜಲಡೋಬ ಪ್ರವಾಸದಲ್ಲಿ Northern Lapwing, River Lapwing, Common Shellduck, Common Teal, Merganser, Red crested Pochard, Common Pochard, Ferruginous pochard, Gadwall, Blue rock thrush Female, Indian Scops Owl ಹನ್ನೊಂದು ಲೈಫರ್‌ ಸಿಕ್ಕಿದ್ದವು.

ಯಾನ ಮುಗಿಸಿ ಕೊಠಡಿಗೆ ಮರಳಿದ ಬಳಿಕ ಬೇಗ ದೋಣಿ ಹತ್ತಿ ಹೋದಿರಲ್ಲಾ ಏನೇನು ಸಿಕ್ಕಿತೆಂದು ಹಿಂದಿ, ಇಂಗ್ಲೀಷ್ ಕಂಗ್ಲೀಷ್ ಎಲ್ಲ ಬೆರೆಸಿ ಕೇಳಿದೆ. ನಾನಾಡಿದ ಯಾವುದನ್ನೂ ಸರಿಯಾಗಿ ಕೇಳಿಸಿಕೊಳ್ಳದ ರಾಹುಲ್ ಏನೋ ಹೇಳಿದ ಹೆಂಡತಿಯ ಜೊತೆ. ರಾಹುಲ್ ಮನಃಸ್ಥಿತಿ ನನಗೆ ಗೊತ್ತಿತ್ತು. ಅವನ ಸಮಸ್ಯೆ ಇದ್ದದ್ದು ನನ್ನ ಜೊತೆಯೂ ಆಗಿರಲಿಲ್ಲ ಅನ್ನುವುದೂ ಗೊತ್ತಿತ್ತು. ಯಾರಾದರೂ ಗರಂ ಆಗಿದ್ದರೆ ತತ್ಕಾಲಕ್ಕೆ ಮೌನ ವಹಿಸುತ್ತೇನೆ, ಅಸಹಾಯಕತೆಯಿಂದಲ್ಲ, ಇರುವ ಸಂಬಂಧ ಹಾಳಾಗದಿರಲಿ ಎಂದು. ಸ್ವಲ್ಪ ಕೂಲ್ ಆದಮೇಲೆ ಮಾತಾಡುತ್ತೇನೆ.

ಆದರೆ ಇಲ್ಲಿ ಸಮಯ ಇರಲಿಲ್ಲ. ಬಾಗ್ಡೋಗ್ರಾ ಏರ್ಪೋರ್ಟ್ ತಲುಪಬೇಕಿತ್ತು. ಕಾರೇರಿ ಒಂದೂ ಮಾತಿಲ್ಲದೆ ಹೊರಟೆವು. ರಾಹುಲ್ ಏ.ಸಿ.ಹಾಕು ಎಂದ. ಏ.ಸಿ. ಇದ್ದರೂ ಡ್ರೈವರ್ ನನಗೆ ಕಾರ್ ಬುಕ್ ಮಾಡಿದವರು ಏ.ಸಿ. ಹಾಕಲು ಹೇಳಿಲ್ಲ ಎಂದು ನಿರಾಕರಿಸಿದ. ತಣ್ಣಗಾಗುವ ಛಾನ್ಸ್ ಕೂಡಾ ಮಿಸ್ ಆಗಿ ಏರ್ಪೋರ್ಟ್ ಸೇರಿದೆವು. ವಿಮಾನ ಬರಲು ಸಮಯವಿತ್ತು, ಅಷ್ಟು ಹೊತ್ತಿಗೆ ರಾಹುಲ್ ಕೂಲಾಗಿ ಮಾಮೂಲಾಗಿದ್ದ. ನಾನು ಮಾತಾಡುವ ಮೂಡಿನಲ್ಲಿರದೆ ಮೌನವೇ ಆಭರಣ ಎಂದು ಒಂದೆಡೆ ನನ್ನ ಫ್ಲೈಟಿಗೆ ಕಾಯುತ್ತಾ ಒಂದೆಡೆ ಕುಳಿತೆ. ಸಣ್ಣ ಬಿರುಕೂ ಒಂದು ಸಂಬಂಧವನ್ನು ಹಾಳು ಮಾಡಬಾರದಲ್ಲ. ಹೇಗೂ ಮುಂದಿನ ಹತ್ತೆಂಟು ದಿನಗಳಲ್ಲಿ ಭೂತಾನ್ ಪ್ರವಾಸಕ್ಕೆ ಮತ್ತೆ ಒಟ್ಟಾಗುತ್ತೇವೆ, ಅಲ್ಲಿ ಇದನ್ನು ರಿಪೇರಿಸಿಸಿಕೊಳ್ಳಬಹುದೆಂದು ಆಶಿಸುತ್ತಾ ಬಂಗಾಳ ಬಿಟ್ಟೆ

ಬಂಗಾಳ ಬಿಟ್ಟು ಮನೆಸೇರಿ ಭೂತಾನಿನ ಪ್ರವಾಸಕ್ಕೆ ಅಣಿಯಾದೆ. ಬಂಗಾಳದ ಮೂಲಕವೆ, ಅಂದರೆ ಕೊಲ್ಕತ್ತಾ ತಲುಪಿ ಅಲ್ಲಿಂದ ಪಾರೊಗೆ ಹೋಗಬೇಕಿತ್ತು. ಮತ್ತೆ ಬಂಗಾಳಕ್ಕೆ ಹೋಗಿದ್ದೇನೆ, ಗಾಜಲಡೋಬ ಹಾಯ್ದು ಬಂದಿದ್ದೇನೆ, ಇಳಿದು ಅಲ್ಲಿ ಒಳ್ಳೆಯ ಹೋಟೆಲಿನಲ್ಲಿ ಊಟ ಮಾಡಿದ್ದೇನೆ. ಹಕ್ಕಿಗೆಂದು ನೀರಿಗೆ ಇಳಿಯದಿದ್ದರೂ ಆ ದಿನದ ನೆನಪು ಅಚ್ಚಳಿಯದೆ ಉಳಿದಿವೆ, ದೋಣಿಯಾನದ್ದು, ರಾಹುಲನ ಮುನಿಸಿನದ್ದು. ರಾಹುಲನ ಸಿಟ್ಟು ಗಾಜಲಡೋಬದಲ್ಲಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿರಲಿಲ್ಲ ಎನ್ನುವ ಬಗ್ಗೆ ಇತ್ತೆಂದು ಅರ್ಥವಾಯಿತು. ಆದರೆ ಅತ್ತೆಯ ಕೋಪ ಕೊತ್ತಿಯ ಮೇಲೆ ತೀರಿಸಿಕೊಳ್ಳಬಾರದಲ್ಲವೆ. ವ್ಯವಸ್ಥೆ ಸರಿಯಿಲ್ಲದಿದ್ದರೆ ಏರ್ಪಡಿಸಿದವರ ಬಳಿ ವ್ಯವಹರಿಸಿ ಬಗೆಹರಿಸಿಕೊಳ್ಳುವುದು ಸಾಧುವಲ್ಲವೆ. ಆದರೆ ಸಂದರ್ಭಗಳಲ್ಲಿ ಸೂಕ್ತವಾಗಿಯೆ ವರ್ತಿಸುವಷ್ಟು ಸಹನೆ, ಪ್ರಜ್ಞೆ ಎಲ್ಲರಿಗೂ ಎಲ್ಲಿ ತಾನೆ ಇರುತ್ತದೆ. ಎಷ್ಟಾದರೂ ನಾವು ಹುಲುಮಾನವರು.

‍ಲೇಖಕರು avadhi

June 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: